ಸರೋಜಿನಿ ಪಡಸಲಗಿ ಅಂಕಣ- ಮುಂದಿನ ಗಳಿಗಿ ಎಂತೋ ಎತ್ತೋ…

ಅವಧಿ’ ಓದುಗರಿಗೆ ಸರೋಜಿನಿ ಪಡಸಲಗಿ ಅವರು ಈಗಾಗಲೇ ಸುಪರಿಚಿತ. ಅವರ ಸರಣಿ ಬರಹ ‘ಒಬ್ಬ ವೈದ್ಯನ ಪತ್ನಿ ಅನುಭವಗಳ ಗಂಟು ಬಿಚ್ಚಿದಾಗ..’ ಜನಪ್ರಿಯವಾಗಿತ್ತು.

ಈಗ ಈ ಸರಣಿ ‘ಡಾಕ್ಟರ್ ಹೆಂಡತಿ’ ಹೆಸರಿನಲ್ಲಿ ಬಹುರೂಪಿಯಿಂದ ಪ್ರಕಟವಾಗಿದೆ.

ಈ ಕೃತಿಯನ್ನು ಕೊಳ್ಳಲು –https://bit.ly/3sGTcvg ಈ ಲಿಂಕ್ ಕ್ಲಿಕ್ ಮಾಡಿ

ಅಥವಾ 70191 82729ಗೆ ಸಂಪರ್ಕಿಸಿ

ಸರೋಜಿನಿ ಪಡಸಲಗಿ, ಮೂಲತಃ ಬೆಳಗಾವಿ ಜಿಲ್ಲೆಯ ಹುಕ್ಕೇರಿಯವರು. ಮದುವೆಯಾದ ಮೇಲೆ ಧಾರವಾಡದವರಾದರೂ ಈಗ ಬೆಂಗಳೂರು ವಾಸಿ. ಪದವೀಧರೆ, ಗೃಹಿಣಿ. ಮೊದಲಿನಿಂದಲೂ ಸಂಗೀತದ ಹುಚ್ಚು ವಿಪರೀತ. ಯಾವುದೇ ಪದ ಸಿಕ್ಕರೂ ಅದನ್ನು ಸಂಯೋಜಿಸಿ ಹಾಡುವ ಅತೀವ ಆಸಕ್ತಿ. ಕ್ರಮೇಣ ಅದು ಭಾವಗೀತೆಗಳನ್ನು ಸ್ವಂತವಾಗಿ ಬರೆದು ಸಂಯೋಜಿಸಿ ಹಾಡುವತ್ತ ಕರೆದೊಯ್ದಿತು.

ಎರಡು ಕವನ ಸಂಕಲನಗಳು ಪ್ರಕಟವಾಗಿವೆ- ‘ಮೌನ ಮಾತಾದಾಗ’ ಮತ್ತು ‘ದೂರ ತೀರದ ಕರೆ’. ಇನ್ನೊಂದು ಸಂಕಲನ ‘ಹಳವಂಡ’ ಹಾಗೂ ಅವರೇ ರಚಿಸಿದ ಸಂಪ್ರದಾಯದ ಹಾಡುಗಳ ಸಂಕಲನ ‘ತಾಯಿ – ಮಗು’ ಅಚ್ಚಿನಲ್ಲಿವೆ. ಈ ಸಂಪ್ರದಾಯದ ಹಾಡುಗಳು 18 ಕಂತುಗಳಲ್ಲಿ ‘ರೇಡಿಯೋ ಗಿರ್ಮಿಟ್’ನಲ್ಲಿ ಪ್ರಸಾರ ಆಗಿವೆ. ಆಕಾಶವಾಣಿ ಬೆಂಗಳೂರು ಹಾಗೂ ಧಾರವಾಡದಿಂದಲೂ ಸಂದರ್ಶನದೊಂದಿಗೆ ಪ್ರಸಾರ ಆಗಿವೆ.

ಅವರ ಇನ್ನೊಂದು ಮನ ಕಲಕುವ ಅಂಕಣ – ತಣ್ಣೆಳಲ ಹಾದಿಯಲ್ಲಿ…

22

ನಮ್ಮ ಅವ್ವಾ, ಅಣ್ಣಾ ಅಗದೀ ಅನಿವಾರ್ಯ  ಪರಿಸ್ಥಿತಿಯೊಳಗ  ಬೆಂಗಳೂರ ಕಡೆ  ಹೊಂಡಬೇಕಾತು. ಬೇಕೋ, ಬ್ಯಾಡೋ  ಈ ವಿಚಾರಕ್ಕ  ಜಾಗಾನs  ಇದ್ದಿದ್ದಿಲ್ಲ, ವ್ಯಾಳ್ಯಾನೂ  ಇದ್ದಿದ್ದಿಲ್ಲ. ಅವರು ಗೋಕಾಕದಿಂದ ಘಟಪ್ರಭಾ ಸ್ಟೇಷನ್ ಗೆ  ಬಂದು  ಆಗಿನ  ಕಿತ್ತೂರ ಎಕ್ಸಪ್ರೆಸ್, ಈಗಿನ  ರಾಣಿ ಚೆನ್ನಮ್ಮ ಎಕ್ಸಪ್ರೆಸ್  ರೇಲ್ವೆ  ಹಿಡದು ಬೆಂಗಳೂರಿಗೆ  ಹೊಂಟಿದ್ರು, ನಮ್ಮ ಪ್ರಮೋದನ ಜೋಡಿ. ನಾನು ಮತ್ತ ಸುರೇಶ ಗರಗದಿಂದ ಬಂದು ಧಾರವಾಡ ಸ್ಟೇಷನ್ ದಾಗ  ಟ್ಯಾಕ್ಸಿ  ಇಳದು  ಡ್ರೈವರ್ ಗ  ಹುಬ್ಬಳ್ಳಿ ಸ್ಟೇಷನ್ ಗೆ ಬಾ ಅಂತ ಹೇಳಿ  ನಾವಿಬ್ರೂ  ಧಾರವಾಡ ಸ್ಟೇಷನ್ ದಾಗ  ಅವ್ವಾ, ಅಣ್ಣಾ ಮತ್ತ ಪ್ರಮೋದ ಇದ್ದ ಬೋಗಿಯೊಳಗನ  ಹತ್ತಿ ಅವರ  ಜೋಡೀನ ಹುಬ್ಬಳ್ಳಿ ತನಕಾ  ಹೋದ್ವಿ.  ನಾವು ಮೊದಲs ಇದನ್ನ ಹಿಂಗ ಹಿಂಗ ಅಂತ ವಿಚಾರ  ಮಾಡಿ ಠರಾಸಿದ್ವಿ. ಅವ್ವಾನ  ಜೋಡಿ  ಒಂದ ನಾಕ  ದಿನಾ  ಇದ್ದ  ಬಂದು  ಸುಮಾರು  ಎರಡೂವರಿ  ತಿಂಗಳ ಆಗಿತ್ತು; ಅದs ದಸರಾಕ್ಕ  ಹುಕ್ಕೇರಿಗೆ  ಹೋದಾಗ. ಇಷ್ಟ್ರಾಗ  ಈ  ಎರಡ ಎರಡೂವರಿ  ತಿಂಗಳದಾಗ  ಅವ್ವಾ  ಭಾಳ ಸೋತಿದ್ಲು.

ಹುಬ್ಬಳ್ಳಿ  ಮ್ಯಾಲ  ಆ ಟ್ರೇನು  ಆಗ ಸರಿ ಸುಮಾರು  ಅರ್ಧಾ ತಾಸನs  ನಿಲ್ಲತಿತ್ತು. ಅಣ್ಣಾ, ಸುರೇಶ ಮತ್ತ  ಪ್ರಮೋದ  ಕೆಳಗ  ಇಳದ ಹೋದ್ರು. ನಮ್ಮ ಅವ್ವಾ,”  ಅಕ್ಕವ್ವಾ  ನಾ  ಒಂಚೂರ  ಟಾಯ್ಲೆಟ್ಟಿಗೆ  ಹೋಗಬೇಕು; ಕೈಕಾಲ ತೊಳಕೋಬೇಕು ( ಮೂತ್ರ ವಿಸರ್ಜನೆ)” ಅಂದ್ಲು. ಹವುರಗ  ಎಬಿಸಿ  ಬಗಲಾಗ ಕೈ  ಹಾಕಿ  ಕರಕೊಂಡ  ಹೋದೆ. ಗುಬ್ಬಿಗತೆ ಆಗಿದ್ಲು ನಮ್ಮ ಅವ್ವ. ನಾ ಎಬಿಸಿದ ಕೂಡಲೇ ಆಕಿ ಸೊಂಟದಾಗ ಭಯಾನಕ  ನೋವು  ಕಾಣಿಸ್ತು. ಬ್ಯಾರೆ  ಹಾದಿನ ಇರಲಿಲ್ಲ. ಆಗ ಇನ್ನೂ ಈ  ಡೈಪರ್ ದು ಸೋಯಿ ಇದ್ದಿದ್ದಿಲ್ಲ. ಹಂಗs  ಕೂಸಿನಗತೆ  ಆಕಿನ್ನ ಜ್ವಾಕೀಲೆ  ಸಂಭಾಳಿಸಿಕೊಂಡು ಕರಕೊಂಡ ಬಂದು  ಆಕಿ ಬರ್ಥ್ ಮ್ಯಾಲ  ಹಾಕಿದ್ದ  ಹಾಸಿಗಿ ಮ್ಯಾಲ ಮಲಗಿಸಿ, ” ಅವ್ವಾ ಬೆಂಗಳೂರ ತನಕಾ  ಹೆಂಗ ಹೋಗ್ತಿ ಅವ್ವಾ” ಅಂದೆ. ” ಈಗ ಕಡಿಮಿ ಆಗ್ತದ. ಇನ್ನ ಬೆಂಗಳೂರ ಬರೂ ತನಕಾ ಏಳೂದೇ ಇಲ್ಲ” ಅಂತ  ಸೋತ ಧನಿಲೆ  ಅಂದ್ಲು. ನನಗ ಏನೂ ಹೊಳೀದೆ ಖಿಡಕಿ  ಹೊರಗ ನೋಡ್ದೆ. ಅಲ್ಲೆ ಅಣ್ಣಾ, ಸುರೇಶ ಮತ್ತ ಪ್ರಮೋದ  ಏನೋ ಗಂಭೀರ ಮಾತು ಕತಿ  ನಡಸಿದ್ರು. ನಾ ಅವರನ್ನೆ ನೋಡಕೋತ ಕೂತಾಗ  ಅಣ್ಣಾ ಕರ್ಚೀಫ್ ಲೆ ಕಣ್ಣ ಒರಸಿಕೊಂಢಾಂಗ  ಅನಿಸ್ತು; ನನ್ನ ಜೀವಾ ಘಾಬರಾಸ್ತು. ಮತ್ತ ನಾನs ಸಮಾಧಾನ ಮಾಡ್ಕೊಂಡೆ, ಮಾರಿ ಒರೆಸಿಕೊಂಡಿರ ಬೇಕು  ಅವರು  ಅಂತ.

 ಅಣ್ಣಾ ಮತ್ತ  ಸುರೇಶ  ಮ್ಯಾಲ ಬಂದ್ರು. ಅಲ್ಲೆ  ಕೆಳಗs  ನಿಂತಿದ್ದ  ಪ್ರಮೋದ  ಸನ್ನಿ  ಮಾಡಿ ನನ್ನ  ಕರದಾ. ‘ ಅವ್ವಾ  ಒಂದ  ನಿಮಿಷ  ಹಾಂ’ ಅಂತ  ಹೇಳಿ  ನಾ ಕೆಳಗ  ಇಳದ ಹೋದೆ. ಪ್ರಮೋದ,  ” ಏನ ಕಾಳಜಿ  ಮಾಡಬ್ಯಾಡ  ಅಕ್ಕಣ್ಣಿ. ಏನೇನ  ಬರ್ತದ ಅದನ್ನ  ಹಂಗs   ತಗೋತ  ಹೋಗೂದ ನೋಡು. ಮಾಮಾನ (ಸುರೇಶ) ಮುಂದ  ಎಲ್ಲಾ  ಮಜಕೂರ ಹೇಳೀನಿ. ಅವರು  ನಿಂಗ ಹೇಳ್ತಾರ. ನೀ  ಯಾವಾಗ  ಬರ್ತಿ ಬೆಂಗಳೂರಿಗೆ ‘ ಅಂತ ಕೇಳಿದಾ . ನನಗ ಯಾಕೋ ಭಾಳ  ಗೂಢ ಅನಿಸ್ತು ಪರಿಸ್ಥಿತಿ. ಹುಚ್ಚರಗತೆ  ಅವನ  ಮಾರಿ ನೋಡಕೋತ,” ಬರತೀನಿ, ಹೇಳ್ತಿನ ಯಾವಾಗ  ಅಂತ”   ಅನಕೋತ  ಏನೋ  ಯಬಡಾ  ತಬಡಾ  ಮಾತಾಡ್ದೆ  ನಾ. ಇಬ್ರೂ ಮತ್ತ ಅವ್ವಾನ  ಹತ್ರ  ಹೋಗಿ ಕೂತ್ರೂ  ಎಲ್ಲಿದ್ದೀನೋ ಗೊತ್ತಾಗಧಂಥಾ ಸ್ಥಿತಿಯೊಳಗನs  ಮಾತ ಕತಿ  ನಡೀತು.   ಆ  ಮಾತಿನ್ಯಾಗ   ಏನೂ  ಹಾಸಲ  ಇದ್ದದ್ದಿಲ್ಲಾ. ಆ ಹೊತ್ತ  ನಾ  ಒಂದ ಗ್ರೇ  ಕಲರ್  ಸ್ವೇಟರ್  ಹಾಕೊಂಡಿದ್ದೆ. ನಮ್ಮ ಅವ್ವಾ ,” ಅಕ್ಕವ್ವಾ  ಸ್ವೇಟರ  ಛಂದ  ಅದ  ನೋಡ” ಅಂದ್ಲು. ” ಹೌದ  ಅವ್ವಾ ಹೋದ  ತಿಂಗಳು   ತಗೊಂಡೆ”. ಅಂತ  ಹೇಳ್ದೆ. ತಲಿ  ಒಂಥರಾ ಮಬ್ಬ ಹಿಡಧಾಂಗ  ಆಗಿತ್ತು. ಏನೂ ಸುತಾಸಧಂಗ ಆಗಿತ್ತು. ಆ ಸ್ವೇಟರ್  ನಾ ಹಾಕೊಂಡದ್ದು, ಅವ್ವಾಗ  ಅಷ್ಟ  ಸೇರಿತ್ತು  ಆ  ಸ್ವೇಟರ್; ಅದನ್ನು ಹಾಕೊಂಡದ್ದನ್ನ  ತಗದು ನಮ್ಮ ಅವ್ವಗ  ಹಾಕಬೇಕು ಅಂಬೂದು  ನನ್ನ  ತಲ್ಯಾಗ ಬರಲಿಲ್ಲ. ಅಜೀಬಾತ  ಹೊಳೀಲಿಲ್ಲ. ಈಗ  ನೆನಪಾದಾಗ  ಕೆರಿ ಕೋಡಿ ಬಿದ್ಧಂಗ  ಕಣ್ಣು ತುಂಬಿ ಹರೀತಾವ. ಈಗ ಆ  ಸ್ವೇಟರ್  ಹಳೇದಾಗಿದ್ರೂ   ಹಂಗs  ಹ್ಯಾಂಗರಿಗೆ  ಹಾಕಿಟ್ಟೀನಿ.  ಅವ್ವಾನ  ನೆನಪಾದಾಗ  ಅದನ್ನ ನೋಡಿ ಅತ್ತು  ಹಗರಾಗ್ತೀನಿ. 

ಟ್ರೇನ್  ಹುಬ್ಬಳ್ಳಿ  ಬಿಟ್ತು. ನಾವೂ ಗರಗಕ್ಕ ಹೊಂಟ್ವಿ. ತಡಾನೇ  ಆಗಿತ್ತು. ಹುಡಗೂರ  ಜೋಡಿ ನಾನಿ ( ನಮ್ಮ ಮನಿ ಕೆಲಸಾ ಮಾಡ್ತಿದ್ದ ಅಜ್ಜಿ) ಇದ್ಲು. ಬಾಜೂ  ಮನಿಯೊಳಗ  ಇದ್ದ ಸಿಸ್ಟರ್ ಗೂ ಹೇಳಿ  ಬಂದಿದ್ದೆ. ಯಾಕೋ  ಮನಸು, ತಲಿ   ಭಾಳ ಒಜ್ಜಾ  ಆಗಿದ್ದು. ಸುರೇಶ  ಅವರಿಗೆ ಕೇಳ್ದೆ – ”  ಅವ್ವಾಗ  ಆಗೇದರೆ  ಏನು? ಹಿಂಗ್ಯಾಕ ಎಲ್ಲಾರೂ  ಮೋಘಮ್ಮಾಗಿ  ಮಾತಾಡ್ಲಿಕ್ಹತ್ತೀರಿ ” ಅಂದೆ. ಒಂದ ಗಳಿಗೆ  ಗಪ್ಪ ಕೂತ ಸುರೇಶ  ಹೇಳಿದ್ರು” ಅವರಿಗೆ ಕ್ಯಾನ್ಸರ್  ಆಗೇದ”.  ಕೈಕಾಲಾಗಿನ  ತ್ರಾಣನ  ಉಡಗಿ  ಹೋಧಂಗಾತು. ನಮ್ಮ ಮುತ್ತ್ಯಾ  ತೀರಕೊಂಡು  ಆ  ಹೊತ್ತಿಗೆ  ಹದಿನಾರ  ದಿನಾ  ಆಗಿತ್ತು. ನಾವೂ ಐನಾಪೂರಕ್ಕ  ಹೋಗಿದ್ವಿ; ಐದನೇ ದಿನಾನೋ ಆರನೇ ದಿನಾನೋ  ಅನಸ್ತದ. ಆಗ  ಅವ್ವಾನ್ನ  ನೋಡಿ  ಖರೇನs  ನಾ ಥಕ್ ಆಗಿ ಬಿಟ್ಟೆ. ಮುತ್ತ್ಯಾ ತೀರಕೊಂಡದ್ದ  ಬಾಜೂಕ  ಉಳೀತು;  ಅವ್ವಾನ  ಸೊಂಟ ನೋವು, ಆ  ನಳ್ಳಾಟಾ  ನೋಡಿ  ವಿಚಿತ್ರ ಸಂಕಟ, ಕಸಿವಿಸಿ  ಹೊಟ್ಟ್ಯಾಗ  ಕಲಿಸಿಧಂಗಾತು.  ” ಅವ್ವಾ  ನಮ್ಮ ಜೋಡಿ  ಬಂದ ಬಿಡ್ತಿ ಏನು”  ಅಂತ  ಸಾವಕಾಶ  ಕೇಳ್ದೆ. ಗೋಣ  ಹಾಕಿದ್ಲು  ಒಲ್ಲೆ ಅಂತ.  ಆ ಮ್ಯಾಲ  ನಾ ಬೆಂಗಳೂರಿಗೆ  ಹೋದಾಗ  ಹೇಳಿದ್ಲು -” ನನಗ  ಆಗ  ಮೈಮ್ಯಾಲ ಖಬರs  ಇದ್ದದ್ದಿಲ್ಲಾ. ನೀನು, ವಿದ್ಯಾ  ಬಂದದ್ದು  ನನಗ  ಅಪುಟಾ  ನೆನಪ  ಇಲ್ಲ ನೋಡು” ಅಂತ. ಆ ಮ್ಯಾಲ  ಮುತ್ತ್ಯಾನ  ದಿನ – ಕರ್ಮ ಎಲ್ಲಾ  ಮುಗಿಸಿ  ಅವ್ವಾನ್ನ ನಮ್ಮ  ತಂಗಿ  ವಿದ್ಯಾನ  ಕಡೆ ಗೋಕಾಕಕ್ಕ  ಕರಕೊಂಡ  ಬಂದ್ರು. ಅಲ್ಲಿ  ಆರ್ಥೋಪೆಡಿಕ್ ಡಾಕ್ಟರ್  ನೋಡಿ  ಸೊಂಟದ  ಎಲವು  ಫ್ರಾಕ್ಚರ್  ಆಗೇದ  ಅಂತ ಹೇಳಿ  ಬೋನ್ ಮ್ಯಾರೋ  ಅದು ಚೆಕ್ಕ್  ಮಾಡಿ  ಕ್ಯಾನ್ಸರ್  ಇದು ಅಂತ  ಹೇಳಿದ್ರಂತ. ಭಯಾನಕ ಜಡ್ಡು – ಬೋನ್  ಕ್ಯಾನ್ಸರ್. ಪ್ರಮೋದ ತಾಬಡತೋಬ ಬಂದು  ಬೆಂಗಳೂರಿಗೆ  ಕರಕೊಂಡ  ಹೋಗೋ ಸಲುವಾಗಿ ನನ್ನ ತಂಗಿ ಗಂಡ  ಅವರ ಜೋಡಿ ಮಾತಾಡಿ  ತಯಾರಿ ಮಾಡ್ಕೊಂಡ್ರು. ನನ್ನ ತಂಗಿ ಗಂಡನೂ  ಡಾಕ್ಟ್ರೇ. ಅವರು  Optholmologist, ಕಣ್ಣಿನ ಡಾಕ್ಟರ್ ಅವರು.

ಒಂದೊಂದs  ವಿಚಾರ  ಮಾಡ್ಕೋತ  ಹೋಧಂಗ  ಏನೂ  ತಿಳೀಧಂಗಾಗಿ  ಗೂಢ  ಆಕೋತ  ಹೋಗ್ತದ. ಅವ್ವಾ ಈಗ  ಸಾಧಾರಣ ಒಂದ – ಒಂದೂವರಿ  ವರ್ಷದಿಂದ  ಯಾಕೋ  ನವೀಲಿಕ್ಹತ್ತಂಗ  ಅನಸ್ತಿತ್ತು, ನಾ  ಹಳೆ ಫೋಟೋ ಎಲ್ಲಾ  ತಕ್ಕೊಂಡ  ಕೂತ  ನೋಡ್ತಿದ್ಧಂಗ. ನಮ್ಮ ಸಣ್ಣ ತಮ್ಮ  ಪ್ರದೀಪನ  ಮಗಾ  ಹದಿನಾಲ್ಕು ದಿನದ  ಕೂಸ  ಇತ್ತು , ನಮ್ಮ ಏಕಾ ತೀರಕೊಂಡಾಗ. ಆ  ಒಬ್ಬ ಮರಿಮಗನ್ನ  ನಮ್ಮ ಏಕಾ  ನೋಡಲಿಲ್ಲ. ಅವನ  ಜಾವಳಾನ  ಹುಕ್ಕೇರಿ ಮನಿಯೊಳಗ  ಇಟ್ಟಕೊಂಡಿತ್ತು. ಆವಾಗಿನ  ಫೋಟೋದಾಗಂತೂ ಅವ್ವಾನ  ಪ್ರಕೃರ್ತಿ  ಖರಾಬ ಆಗಿದ್ದು  ಅಗದೀ ಎದ್ದ ಕಾಣ್ತಿತ್ತು. ಒಂದ  ಹಿಡಿಯಷ್ಟ  ಆಗಿದ್ಲು ನಮ್ಮ  ಅವ್ವಾ. ಆದರ ಮನಿ ತುಂಬ ಮಕ್ಕಳು, ಸೊಸೆಯಂದಿರು, ಅಳಿಯಂದ್ರು ಮೊಮ್ಮಕ್ಕಳು, ಎಲ್ಲಾ ಏಕತ್ರ  ಸೇರಿ ಮನಿ ತುಂಬ ಗಲಾಗಲಾ   ಅಂತಿತ್ತು. ಆ  ಹುರಪಿನೊಳಗ  ಆಕಿ  ಬ್ಯಾನಿ ಅಡಕೊಂಡ  ಕೂತಿತ್ತೋ ಏನೋ. ನಮ್ಮ ಏಕಾ ಹೋದ ಮ್ಯಾಲ  ಮನ್ಯಾಗ  ನಡದ  ಮೊದಲ ಕಾರ್ಯ ಇದು; ಪುಟ್ಟ ಪೂರಾ  ಅವ್ವಾನ  ದೇಖರೇಖಿ ಒಳಗ. ಆ ಜವಾಬ್ದಾರಿನೂ  ಒಂಥರಾ ಮುಸುಕು  ಆ ಜಡ್ಡಿನ  ಮ್ಯಾಲ ಹಾಕಿತ್ತೋ ಏನೋ!  ಒಂದ ಬಾ  ಅಂದ್ರ  ಹತ್ತ  ವಿಚಾರ; ನೂರಾ ಎಂಟ ಲೆಕ್ಕಾಚಾರ  ತಲಿ ತುಂಬ. ಖರೆ ಇಷ್ಟ ಮಾತ್ರ  ನಕ್ಕಿ ಅಂದಾಜ  ಸಿಕ್ತು; ಯಾರ ಕಣ್ಣಿಗೂ  ಬೀಳಧಂಗ, ಕಲ್ಪನಾಕ್ಕ ಸಿಗಧಂಗ  ನಮ್ಮ ಅವ್ವಾನ  ತಬ್ಬೇತ  ಬಿಗಡಾಸಿಗೋತ ನಡದಿತ್ತು.

ಮುಂದ ಜುಲೈ ದಾಗ  ನಮ್ಮ ಭಾವನ ಮಗಳ ಮದವಿಗೆ  ಬೆಳಗಾವಿಗೆ  ಬಂದಾಗ; ಅದಾದ ಬಳಿಕ ನಾಕs  ದಿನಕ್ಕ ಬೆಂಗಳೂರುರಾಗ  ಇಟಕೊಂಡಿದ್ದ ನಮ್ಮ  ಅಣ್ಣ ಪ್ರಕಾಶನ  ಮನಿ ವಾಸ್ತು ಶಾಂತಿ ಮುಂದ  ಇದ್ದದ್ರಾಗ  ಒಂಚೂರ  ಬೇಶ  ಅನಸ್ತಿದ್ಲು. ಮತ್ತ  ಹಾಂಗ ಆಕಿ  ತಬ್ಬೇತ  ಇಳಿಥರಕ್ಕ ಬೀಳ್ಲೀಕ್ಹತ್ಥಂಗ ಆತು. ನಾವು ದಸರಾಕ್ಕ ಹೋದಾಗಿನಕಿಂತಾನೂ  ದೀಪಾವಳಿ  ಹೊತ್ತಿಗೆ  ಎಲ್ಲಾರೂ  ಕೂಡಿದಾಗ  ಭಾಳ  ಮೆತ್ತಗಾಗಿದ್ಲು  ಅಂತ  ವಿದ್ಯಾ ಹೇಳಿದ್ಲು. ” ಶಾಂತಾಗ ( ಅವ್ವಾನ  ಕೈಯಾಗ ಕೈಯಾಗ ಕೆಲಸಾ ಮಾಡ್ಲಿಕ್ಕೆ ಬರ್ತಿದ್ಲು ಆಕಿ) ಹಗರ ಹಗರ ಕೆಲಸಾ ಹಚ್ಚಿ, ಕುಟ್ಟೂದು, ರುಬ್ಬುದು ನೀ ಮಾಡ್ತಿಯಲಾ ಅಂತ  ಅವ್ವಾಗ ಜೋರಲೇನ  ಹೇಳ್ದೆ ಅಕ್ಕಣ್ಣಿ” ಅಂದ್ಲು ವಿದ್ಯಾ.

ದೀಪಾವಳಿ  ಮುಗಿಸಿ  ಎಲ್ಲಾರೂ ವಾಪಸ್ ಬೆಂಗಳೂರಿಗೆ, ವಿದ್ಯಾ  ಗೋಕಾಕಕ್ಕ ಹೋದ್ರು. ಈ ಕಡೆ  ಅವ್ವಾನ  ಆರೋಗ್ಯ  ಬಿಗಡಾಸಕೋತನs  ಹೋತು. ಅಕಿಗೆ  ಏನನಿಸಿತ್ತೋ ಏನೋ; ಅಂಥಾ ಸ್ಥಿತಿಯೊಳಗ  ಅಣ್ಣಾಗ ವತಾವತಿ  ಹಚ್ಚಿ ಬ್ಯಾಡ ಅಂದ್ರೂ  ಸುಗ್ಗಿಗೆ  ಅಣ್ಣಾನ ಜೋಡಿ  ಬೆಳವಿಗೆ  ಹೋಗಿ , ಇಬ್ರೂ  ಅಲ್ಲೇ  ತ್ವಾಟದ  ಮನ್ಯಾಗ  ಇದ್ರು. ಸುಗ್ಗಿ  ನಡದಿತ್ತು. ಅಲ್ಲಿದ್ದಾಗನs  ನಮ್ಮ ಮುತ್ತ್ಯಾ ತೀರಕೊಂಡದ್ದ ಸುದ್ದಿ ಬಂತು. ನಮ್ಮ  ದೊಡ್ಡ  ಮಾಮಿ  ತೌರಮನೀನೂ  ಹುಕ್ಕೇರಿನೇ. ಹಿಂಗಾಗಿ  ಸುದ್ದಿ ತಿಳೀತಿದ್ಧಂಗ  ಮಾಮಿ  ತಮ್ಮ ಒಂದ  ಟ್ಯಾಕ್ಸಿ ತಗೊಂಡು  ಬೆಳವಿಗೆ  ಹೋಗಿ ಅವ್ವಾ – ಅಣ್ಣಾಗ  ಎಲ್ಲಾ  ಸುದ್ದಿ ಹೇಳಿ  ಅವರ  ಇಬ್ಬರನೂ  ಹುಕ್ಕೇರಿಗೆ  ಕರಕೊಂಡ  ಬಂದಾ. ಈಗ  ಇನ್ನ ಮುಂದಿನ  ಸುದ್ದಿ ನೆನಸಿಕೊಂಡ್ರ  ನನಗ  ಕಸಿವಿಸಿ  ಆಗ್ತದ. ಅದs  ಮನಿಯೊಳಗ ತನ್ನ ಜನ್ಮಾ  ತಗದಿದ್ಲು ನಮ್ಮ ಅವ್ವಾ. ಎಲ್ಲಾ ಕಷ್ಟ – ಸುಖಾ,  ನಗು , ನಲಿವು ಒಲವು  ಕಂಡದ್ದು, ಉಂಡದ್ದು  ಅಲ್ಲೇ. ಆದರ  ಆ ಹೊತ್ತ ತನ್ನ  ಆ ‌‌‌‌‌‌‌‌‌‌‌‌‌‌‌‌‌ಮನಿ  ಬಾಗಲಾ  ತಗದು  ಒಳಗ ಹೋಗು ಸ್ವಾಧೀನ  ಇರಲಿಲ್ಲ ಆಕೀಗೆ. ಮತ್ತೊಮ್ಮೆ ಅಲ್ಲಿ ತಿರಗಾಡಿ  ಬರೂದು  ಆಕಿ  ನಸೀಬದಾಗ  ಇರಲಿಲ್ಲ. ಅಲ್ಲೇ  ಮನಿ ಕಟ್ಟಿಮ್ಯಾಲ  ಅಣ್ಣಾ,  ಅವ್ವಾ ಇಬ್ರೂ  ಕೂತು ನಮ್ಮ ಮಾಮಿ  ತಮ್ಮ ತಂದ ಕೊಟ್ಟ  ಚಹಾ ಕುಡದ, ಮತ್ತ ಅದೇ ಟ್ಯಾಕ್ಸಿ–ಯೊಳಗ  ಐನಾಪೂರಕ್ಕ  ಹೋದ್ರು. ಆ ಮ್ಯಾಲ ಇನ್ನೂ ಖರಾಬ  ಪರಿಸ್ಥಿತಿಯೊಳಗ  ಜೀಪಿನ್ಯಾಗ  ಗೋಕಾಕಕ್ಕ  ನಮ್ಮ ತಂಗಿ  ಕಡೆ  ಬಂದ್ರು; ಅಲ್ಲಿಂದ  ಗುಡ್ಡದಂಥಾ  ಕಾಳಜಿ, ನೋವು  ಎಲ್ಲಾ ಹೊತಗೊಂಡ  ಥೇಟ  ಬೆಂಗಳೂರಿಗೆ  ಹೋದ್ರು. ನಮ್ಮ ಅವ್ವಾ  ತಿರಗಿ  ತನ್ನದು  ಆಂಬೂ ಆ ಮನ್ಯಾಗ  ಕಾಲs  ಇಡಲಿಲ್ಲ. ಇದೆಂಥಾ  ನಸೀಬದ ಆಟ ಇದ್ದೀತು  ಅಂತೀನ  ನಾ. ಅಸರಂತ  ಅಗದಿ ಏನ  ಕಾಯಂ  ಇಲ್ಲೇ ಇರಾವ್ರ ಹಂಗ  ಎಲ್ಲಾ  ನಂದು, ನನ್ನ  ಮಕ್ಕಳು – ಮರಿ,  ನನ್ನ  ಮನಿ- ಹೊಲಾ ಅಂತ ಬಡದಾಡೋ  ಮನಶ್ಯಾಗ   ಮುಂದಿನ ಗಳಿಗಿ  ಎಂತೋ ಎತ್ತೋ ಗೊತ್ತಿರೂ ಹಂಗಿಲ್ಲ. ಈ  ಜೀವನದ ದೊಡ್ಡ  ವಿಡಂಬನಾ ಇದು.  ನಮ್ಮ ಅವ್ವಾಂದು  ಮಕ್ಕಳ ಸಲುವಾಗಿ  ಬಿಟ್ಟೂ ಬಿಡದ  ಬಡದಾಟ; ಪ್ರತೀ ಬಾಬ್ತಿಯೊಳಗ, ಅವರ  ಅಭ್ಯಾಸದ  ಸಲುವಾಗಿ  ಕಾಳಜಿ, ಆಕಿ ಶಿಸ್ತು, ಒಪ್ಪ- ಓರಣಾ, ಮತ್ತೊಬ್ಬರ  ಉಸಾಬರಿ ಇಲ್ಲದ  ತಾ ಏನೋ , ತನ್ನ ಕೆಲಸ ಏನೋ ಅಂತ ಇರೋ  ಆಕಿ  ಧರತಿ; ಎಲ್ಲಾ   ಒಂದೊಂದೇ  ಕಣ್ಣ ಮುಂದ  ಸಾಲ ಸಾಲ  ಬರಲಿಕ್ಹತ್ತು.

 ನಮ್ಮ ಅವ್ವಾ   ಭಾಳ  ಶಿಸ್ತಿನ  ಹೆಣ್ಣಮಗಳು. ಅಕಿಗೆ  ಸಣ್ಣ ಕಣ್ಣಿರುವ  ಚೌಕಡಿದು, ಅದಕ ಎರಡ ಬಟ್ಟು  ಜರೀ  ಅಂಚಿರೋ ನಗರೀ   ಸೀರಿ  ಭಾಳ ಪ್ರೀತಿ. ಅಂಥಾ ಮರ್ಸರಾಯಿಸ್ಡ  ಕಾಟನ್  ಸೀರೀನs  ಆಕಿ  ಉಡ್ತಿದ್ಲು;  ದಿನ – ಬಳಕಿಗೆ. ಆಕೀಗೆ  ಅಂಥಾ ಒಣಾ  ನೂರಾಎಂಟ  ಅದು ಬೇಕು, ಇದು ಬೇಕು  ಅನ್ನೋ  ಹಂಬಲಾನ  ಇರಲಿಲ್ಲ. ಇದ್ದದ್ರಾಗ  ತೃಪ್ತ  ಇರೂ  ಸಾದಾ  ಜೀವನದಾಕಿ  ನಮ್ಮ ಅವ್ವಾ.  ನವ್ವಾರಿ  ಸೀರಿ  ಕಚ್ಚಿ  ಹಾಕಿ ಉಟ್ಟು  ಇಷ್ಟುದ್ದ ಇದ್ದ  ಕೂದಲಾ  ಸಾಪಾಗಿ  ಹಿಕ್ಕಿ  ಹೆರಳ  ಹಾಕೊಂಡ  ಅಗದೀ  ಶಿಸ್ತ  ಇರಾಕಿ  ಆಕಿ. ದಿನಾ ಮೂರು ಸಂಜಿ  ಆಗೂದ್ರಾಗ  ಸಂಜಿ  ಕಸಾ ಮುಗಿಸಿ  ಹೆರಳು ಮಾರಿ  ಮಾಡ್ಕೊಂಡು  ಸೀರಿ ಮತ್ತೊಮ್ಮೆ ತಿದ್ದಿ ತೀಡಿ  ಕಚ್ಚಿ  ಹಾಕಿ  ಉಡೋ ರೂಢಿ ಆಕೀದು. ಒಂದೇ ಒಂದ  ದಿನಾನೂ  ಸಂಜಿ  ಹೆರಳು ಮಾರಿ  ತಪ್ಪಸೂ  ಪ್ರಶ್ನೀನs  ಇಲ್ಲ; ಬೇಕಾದಷ್ಟ ತಡಾ ಆಗವಲ್ಲತ್ಯಾಕ  ಅದು  ಆಗೂದೇ. ನಮ್ಮ ಅವ್ವಾನ್ನುನೂ  ಕೂದಲಾ ಇಷ್ಟುದ್ದ, ಜಾಡ  ಇದ್ದು. ಆಕಿ  ಒಂದಿನಾ  ಏನ  ಅಂಬಾಡಾ , ತುರುಬು ಹಾಕ್ತಿದ್ದಿಲ್ಲ. ಉದ್ದ , ದಪ್ಪ ಹೆರಳs  ಆಕಿದು ಸದಾ. 

ಇದು  ತನ್ನ ತಾ  ಶಿಸ್ತಲೆ  ಆವರಾಸಿಕೊಂಡ  ಇರೂದಾದ್ರ,  ಮನಿ ಸ್ವಚ್ಛತಾ  ಶಿಸ್ತು  ಇನ್ನೂ ಒಂದ ಕೈ ಮ್ಯಾಲ. ಅಷ್ಟ ದೊಡ್ಡದು  ಅಲ್ಲಿಂದಿಲ್ಲಿಗೆ  ಇತ್ತು ಮನಿ; ತಾನೇ  ಕಸಾ ಉಡಗತಿದ್ಲು ; ಅದೂ ಎರಡೂ ಹೊತ್ತು. ದೇವರ ಮ್ಯಾಲಿನ  ತುಳಸಿ  ತಪ್ಪೀತು; ಆದ್ರ ಅವ್ವಾಂದು  ಎರಡ ಹೊತ್ತಿನ    ಕಸಾ  ತಪ್ಪತಿದ್ದಿಲ್ಲಾ. ” ಸಂಜೀಕ  ಉಡಗೂದು  ಬಿಟ್ಟ ಬಿಡು. ಮನ್ಯಾಗ  ಇಡೀ ದಿನಾ  ಇರ್ತಾರ ಯಾರು. ಎಲ್ಲಾ ಸಾಲಿ ಪಾಲಿ  ಅಂತ  ಹೋಗೇ‌ ಬಿಟ್ಟಿರತಾರ. ಏನ ರಂದಿ  ಇರೂದಿಲ್ಲ. ಯಾಕ  ದಣಕೋತಿ  ಅಂತ  ಅಣ್ಣಾ, ಏಕಾ  ಅಂದ್ರನೂ ಆಕಿ  ಏನ ಕೇಳ್ತಿದ್ದಿಲ್ಲ.  ಆಗ  ನಮ್ಮ ಮನಿವೆಲ್ಲಾ  ಸೆಗಣಿ  ನೆಲಾ. ಹದಿನೈದ  ದಿನಕ್ಕೊಮ್ಮೆ  ಪಾರ್ವತಿ ಅಂತ  ಒಬ್ಬಾಕಿ  ಬಾಯಿ  ಬಂದು  ಎಲ್ಲಾ  ಖೋಲಿವು  ನೆಲಾ  ಸಾರಿಸಿ ಕೊಟ್ಟ ಹೋಗ್ತಿದ್ಲು. ಕಸಾನೂ ಆಕೀಗೇ  ಹೇಳು  ಅಂದ್ರ  ಆ ಮಾತು ಕೇಳಸsತಿದ್ದಿಲ್ಲ ಆಕಿಗೆ.

ಅತ್ತಿ – ಸೊಶಿ  ಇಬ್ರೂ  ಮಹಾ ‌‌‌‌ ಹೌಸು, ಹುರಪಿನಾವ್ರು,. ಅನಂತನ  ಹಬ್ಬದ  ಅಷ್ಟ ಅಡಿಗಿ ಆಗೂವಷ್ಟ  ದೊಡ್ಡು – ಸಣ್ಣು  ಪಾತೇಲಿ, ಬುಟ್ಟಿ, ಕೊಳಗಾ……ಯಚ್ಛಾವತ್  ಭಾಂಡಿ  ಹಿತ್ತಾಳಿವು ತಗೊಂಡ  ಕಲೆ  ಮಾಡಿಸಿ ‌‌, ಇಟ್ಟಿದ್ರು. ಸ್ಟೀಲ್ ಭಾಂಡಿಯೊಳಗ  ಹಾಕಿಟ್ರ  ನೈವೇದ್ಯಕ್ಕ  ನಡೀತಿದ್ದಿಲ್ಲ  ಅಂತಿದ್ರು. ಹಂಗs  ಅತೋನಾತ  ಹಿತ್ತಾಳೆ ಡಬ್ಬಿಗಳು; ಸಣ್ಣು ಹಿಡ್ಕೊಂಡು  ಒಂದ  ಹತ್ತು – ಹನ್ನೆರಡ ಕಿಲೋ  ಕಾಳ  ಹಿಡಿಯುವಷ್ಟು  ದೊಡ್ಡ ಡಬ್ಬಿ  ಮಾಡಿದ್ರು. ಅವನೂ ಎಲ್ಲಾ ಹದಿನೈದು – ಇಪ್ಪತ್ತು ದಿನಕ್ಕೊಮ್ಮೆ  ಸ್ವಚ್ಛ ತಿಕ್ಕೀ ತೊಳೆದ  ಇಡು ಕೆಲಸ  ಪಾರ್ವತಿದೇ. ಒಟ್ಟು ಎಲ್ಲಾ ಥಳಾ ಥಳಾ, ಫಳಾಫಳಾ  ಇರಬೇಕು  ನಮ್ಮ ಅವ್ವಾಗ.

ಮನಿ ಕೆಲಸಾ ಬೊಗಸಿ  ಈ ಥರಾ ; ಅಷ್ಟs ‌‌‌‌‌‌‌‌‌‌‌‌‌‌‌‌‌‌‌‌‌‌ಕಾಳಜಿಲೆ  ಹುಡಗೂರ  ಅಭ್ಯಾಸದ  ಕಡೆ ಆಕಿ  ಲಕ್ಷ್ಯ  ಇರ್ತಿತ್ತು. ನಮ್ಮ ಅವ್ವಾಂದು  ಮೆಟ್ರಿಕ್ ಆಗಿತ್ತು. ಆಗ  ಬೆಳಗಾವಿಗೆ  ಹೋಗಬೇಕಿತ್ತು ಪರೀಕ್ಷಾಕ್ಕ. ನಮ್ಮ ಅಣ್ಣಾ  ಬೆಳಗಾವಿಗೆ  ಹೋಗಿ ನಮ್ಮ  ಅವ್ವಾಗ  ಪೆನ್ನು  ಕೊಟ್ಟ ಬಂದಿದ್ರಂತ.  ಎಲ್ಲಾರೂ  ಕಾಡಸಾವ್ರು  ಅವ್ವಾನ್ನ. ನಕ್ಕಬಿಡ್ತಿದ್ಲು  ಆಕಿ. ತಾನೂ ಸಂಜೀ ತನಕಾ  ಒಂದ  ನಿಮಿಷ  ಖಾಲಿ  ವ್ಯಾಳ್ಯಾ  ತಗೀತಿದ್ದಿಲ್ಲ.ಹಂಗs  ತನ್ನ ಮಕ್ಕಳಿಗೂ  ಖಾಲಿ ಫುಕಟ  ಅಲ್ಲಿ ಇಲ್ಲಿ ತಿರಗ್ಯಾಡಲಿಕ್ಕೆ, ಸುಮ್ಮ ಸುಮ್ಮನ  ವ್ಯಾಳ್ಯಾ  ತಗೀಲಿಕ್ಕ  ಬಿಡ್ತಿದ್ದಿಲ್ಲಾ. ಗುಂಗೀ ಹುಳದಗತೆ ಗುಂಯ್ಯ  ಅಂತ   ಅಸರಂತ  ನಮ್ಮ ಅಭ್ಯಾಸದ ಸಲವಾಗಿ  ಬೆನ್ನ  ಹತ್ತತಿದ್ಲು. ಬಹುಶಃ  ಆಕೀದ  ಈ ರೀತಿ  ಪೂರಾ  ನಮ್ಮ ಜೀವ – ಪ್ರಾಣದಾಗ  ಏಕ  ಆಗಿ ಬಿಟ್ಟದ  ಅನಸ್ತದ. ನನಗ  ಇಂದಿಗೂ  ಎಂದರೇ  ಒಂದ ದಿನಾ  ಏನೂ  ಓದದೇ, ಬರೀದೇ ತಗದ್ರ  ಏನೋ ಕಳಕೊಂಡ ಹಂಗ, ತಪ್ಪ ಮಾಡಿದಂಗ , ಒಂಥರಾ ಬೇಚೈನ, ಖಾಲಿ ಖಾಲಿ  ಅನಸ್ತದ. ಅಗದೀ ಚೊಕ್ಕ  ನಮ್ಮ ಹುಕ್ಕೇರಿ ಭಾಷಾದಾಗ  ಹೇಳಬೇಕಂದ್ರ  ಹುಚ್ಚ ಹಿಡಧಂಗ ಆಗ್ತದ. ಮುಂಜಾನೆ  ಅಗದೀ  ನಶೀಕ್ಲೆ ನಾಕ ಗಂಟೆಕ್ಕ , ಮೂರ ಗಂಟೆಕ್ಕ  ಏಳೂದಾದ್ರ  ಎಬಸೂ ಕೆಲಸಾ  ಏಕಾಂದೆ. ಇನ್ನ ರಾತ್ರಿ  ಏನರೆ  ಭಾಳ ಹೊತ್ತ  ಅಭ್ಯಾಸ  ಮಾಡಕೋತ  ಕೂತು ತಡಾ ಆಗಿ  ಮಲಗಿದ್ರ ಏಕಾಗ  ಎಬಸಬ್ಯಾಡ  ಅಂತ ಹೇಳಿ  ಮಲಗೂದ ರೂಢಿ. ಆಗ ನಮ್ಮ ಅವ್ವಾ ಆರ ಹೊಡೀತಂದ್ರ  ಎಬಸಾಕಿ.” ಏಳ್ರಿ ಲಗೂ ಲಗೂ. ಯೋಳ ಹೊಡೀತು” ಅಂತಿದ್ಲು. ಆಗ ಗಡಿಯಾರದಾಗ  ಆರು, ಸವ್ವಾ ಆರು ಆಗಿರೂದು. ರಾತ್ರಿ  ಏನರೆ  ತಪ್ಪಿ ಲಗೂ ಮಲಗಿದ್ರ, ” ಈಗಿನ್ನೂ ಹತ್ತ ಸುದ್ಧಾ  ಹೊಡದಿಲ್ಲ. ಇಷ್ಟ ಲಗೂನ  ಮಲಗೂದs”  ಅಂತಿದ್ಲು. ಆಗ ಗಡಿಯಾರದಾಗ ಹನ್ನೊಂದು ಗಂಟೆ  ಹೊಡದಿರತಿತ್ತು. ಎಲ್ಲಾ ಮಕ್ಕಳು  ಶಾಣ್ಯಾ ಆಗಲಿಕ್ಕೆ, ಪ್ರತಿ ನಿಮಿಷ  ಒಂದಿಲ್ಲೊಂದು ಕೆಲಸದಾಗ  ತೊಡಗಿರಲಿಕ್ಕೆ  ಅವ್ವಾನ  ಈ ಥರದ  ಬೆನ್ನ ಬಿಡದ  ಕಾಳಜಿ, ಹಂಗ ಒಂದs  ಸವನ  ಬೆನ್ನ ಹತ್ತೂದೇ ಕಾರಣ ಅಂತಾನ  ನಮ್ಮಣ್ಣ ಪ್ರಕಾಶ. ಮತ್ತ ಅದರಾಗ ಏನೂ ಸಂಶಯನs ಇಲ್ಲ.

ನಾವು ಸಂಜಿನ್ಯಾಗ  ಸಾಲಿ  ಬಿಟ್ಟ ಬರೂ ವ್ಯಾಳ್ಯಾಕ್ಕ  ಅಗದೀ ಬರೋಬ್ಬರಿ ಚುನಮುರಿ, ಅವಲಕ್ಕಿ  ಹಚ್ಚಿದ್ದು ನಮಗ ಬಟ್ಲಾಗ  ಹಾಕಿಟ್ಟು  ಸಕ್ರಿ  ಹಾಕಿ  ಹಾಲ ಮಳ್ಳಿಸಿ ತಯಾರ ಇಟ್ಟಿರತಿದ್ಲು. ನಮ್ಮದೆಲ್ಲಾರದು  ಒಂದೊಂಥರಾ ಬ್ಯಾರೇನ  ಪಸಂತಿ  ಇರತಿದ್ದು. ನಮ್ಮಣ್ಣ ಪ್ರಕಾಶ ಹಚ್ಚಿದ ಅವಲಕ್ಕಿ, ಚುನಮುರಿ ತಿಂತಿದ್ದಿಲ್ಲ. ಅಂವಗ ಚುನಮುರಿಗೆ  ಒಂಚೂರು ಮೆಂಥ್ಯಹಿಟ್ಟು, ಉಪ್ಪು, ಹಾಲು ಹಾಕಿ ಕೊಡಬೇಕು. ಇಲ್ಲಾ ಮೊಸರವಲಕ್ಕಿ.  ನಮ್ಮನಿ ಹತ್ರನ  ಬೇಕರಿ  ಇತ್ತು. ಅಂದ್ರ ಅಲ್ಲೇ  ಬ್ರೆಡ್, ಬನ್ನು, ಪಾವ ಎಲ್ಲಾ ಮಾಡ್ತಿದ್ರು. ಏಕದಂ ತಾಜಾ ಬಿಸಿ ಬ್ರೆಡ್, ಪಾವ ಇಂಥಾದ  ಇದ್ರೆ ಯಾರದೇನ  ತಕರಾರ ಇರತಿದ್ದಿಲ್ಲ. ಇನ್ನೊಂದ ವಿಶೇಷ  ಅಂದ್ರ ನಾವು ಯಾರೂ ಕಾಸಿ ಕೆನಿಗಟ್ಟಿರತದಲಾ ಆ ಕೆನಿ  ಬುಡಕಿನ ಹಾಲ , ಒಂಚೂರ  ಬಣ್ಣ ಬದಲ ಆಗಿರತದಲಾ ಆ ಹಾಲ ಅಜೀಬಾತ ಮುಟ್ಟತನs ಇದ್ದಿದ್ದಿಲ್ಲ.ತಾಜಾ ಹಸಿ  ಹಾಲಿಗೆ ಸಕ್ರಿ ಹಾಕಿ ಮಳ್ಳಸಿದ್ದೂನ ಬೇಕು. ಮುಂಜಾನೆನೂ ಅಷ್ಟs ; ಸಂಜೀಕೂ  ಅಷ್ಟs. ನನಗಿಂದಿಗೂ  ಅಗಾಧ ಅನಸೂದ  ಅಂದ್ರ  ಅವ್ವಾ  ಆ  ಹಸಿ ಹಾಲ ಹೆಂಗ ಕಾಯ್ದಿಟ್ಟಿರತಿದ್ಲು ಅಂತ. ಆವಾಗೇನ ಫ್ರಿಜ್ ಇದ್ದಿದ್ದಿಲ್ಲ. ನಮ್ಮ ಎಮ್ಮಿ  ಮೂರ ಹೊತ್ತು ಹಿಂಡತಿತ್ತು. ಮುಂಜಾನೆ  ಮತ್ತ ರಾತ್ರಿ ಅಣ್ಣಾನೇ ಎಮ್ಮಿ ಹಾಲ ಹಿಂಡತಿದ್ರು. ಆಮ್ಯಾಲ  ಹನ್ನೊಂದ ಗಂಟೆಕ್ಕ ಎಮ್ಮಿ ಮೇಯಿಸಲಿಕ್ಕೆ ತಗೊಂಡ ಹೋಗೂ  ಹುಡುಗ ಎಮ್ಮಿ ಹಾಲ ಹಿಂಡಿ ಕೊಟ್ಟ ಎಮ್ಮಿ ತಗೊಂಡ  ಹೋಗ್ತಿದ್ದ. ಆಗ ಒಂದ ತಂಬಿಗಿ ಅಷ್ಟs  ಅಂದ್ರ ಸುಮಾರು ಒಂದು ಲೀಟರ್, ಅದಕಿಂತಾ ಸ್ವಲ್ಪ ಹೆಚ್ಚು  ಹಿಂಡ್ತಿತ್ತು. ನಮ್ಮ ಅವ್ವಾ ಆ ತಂಬಿಗಿ ಹಂಗೇ  ಎತ್ತಿಟ್ಟು ನಾವು ಸಾಲಿಂದ  ಬಂದ ಮ್ಯಾಲ ಕೊಡ್ತಿದ್ಲು.  ಅವು  ಕೆಡದ ಹೆಂಗ ಛಲೋ ಇರತಿದ್ದು ಅನೂದು  ಒಂದು  ಒಗಟ  ನನಗ  ಇಂದಿಗೂ. ಅವ್ವಾನ್ನ ಕೇಳಬೇಕಿತ್ತು  ಅನಸ್ತದ ಈಗ. ಆಕಿ  ಈ ಶಿಸ್ತಿನ್ಯಾಗಿಂದು  ಒಂದ  ಪಾವಲಿಯಷ್ಟರೇ ನನಗ ಬಂದದೋ ಇಲ್ಲೋ ಗೊತ್ತಿಲ್ಲ. ಖರೇ ನಮ್ಮ ವಿದ್ಯಾ  ಮಾತ್ರ ಕೆಲಸದ  ಬಾಬ್ತಿಯೊಳಗ ಥೇಟ್ ನಮ್ಮ  ಅವ್ವಾನಗತೇನs.  

ನಮ್ಮನ್ಯಾಗ  ಅಣ್ಣಾ ಒಬ್ರೇ ಚಹಾ ಕುಡೀತಿದ್ರು. ನಾವೆಲ್ಲಾ ಹಾಲೇ ಕುಡಿತಿದ್ವಿ. ನನ್ನ ಅಣ್ಣ- ತಮ್ಮಂದಿರೆಲ್ಲಾ ಕಾಲೇಜ ಸಲವಾಗಿ ಹೊರಗ ಹೋದ ಮ್ಯಾಲನ  ಚಹಾ ಕಾಫಿ ರೂಢಿ ಮಾಡ್ಕೊಂಡ್ರು. ನಾ ಈಗೀಗ ಕಾಫಿ ಸುರು ಮಾಡೀನಿ. ಚಹಾ ಇನ್ನೂ ಒಂದ ಹನೀನೂ ಟೇಸ್ಟ್ ಮಾಡಿಲ್ಲ. ನಮ್ಮ ಆನಂದ  ಹಗಲೆಲ್ಲಾ ಅಂತಾನ -” ಚಹಾ ಕುಡೀಲಿಲ್ಲ ಅಂದ್ರ ನಿನ್ನ ಜನ್ಮ ವ್ಯರ್ಥ ನೋಡ” ಅಂತ. ಈಗ ಅವರೆಲ್ಲಾ ಚಹಾದ ಭಕ್ತರು. ವಿದ್ಯಾ  ಅಂತೂ ಥೇಟ್  ಅಣ್ಣಾನ ಹಂಗೇ. ಚಹಾ ಭಾಳ ಪ್ರೀತಿ. ನಮ್ಮ ಅಣ್ಣಾ ಈಗೀಗ  ಅವ್ವಾಗೂ ಚಹಾದ  ರುಚಿ ಹಚ್ಚಿದ್ರು; ಹಿಂಗಾಗಿ ಆಕೀನೂ ಸಣ್ಣ ಹಂಗೆ  ಸುರು  ಮಾಡಿದ್ಲು ಚಹಾ. ಆಕಿ ಭಾಳ  ಸಾಧು  ಸ್ವಭಾವದಾಕಿ. ಬಹುಶಃ ಅದಕ  ಚಹಾದ ರೂಢಿ  ಮಾಡ್ಕೊಂಡಿದ್ಲೋ ಏನೋ ಅಣ್ಣಾನ ಸಲವಾಗಿ.  ಅಣ್ಣಾನ  ಅಖಂಡ ಪ್ರೀತಿ  ಪ್ರೇಮಳ  ನಡವಳಿಕಿ  ಆಕಿನ್ನ  ಸಂತೃಪ್ತ  ಇಟ್ಟ ಬಿಟ್ಟಿದ್ದು.  ಎಂದೂ  ಇಂಥಾದು ಬೇಕು  ಅಂದಾಕಿ  ಅಲ್ಲ  ನಮ್ಮ ಅವ್ವಾ. ಒಣಾ ಉಸಾಬರಿ, ಖಾಲಿ ಫುಕಟ ಮಾತು,  ಗೊಳ್ಳ  ಹರಟಿ ಆಕೀಗೆ  ಭಾಳ  ದೂರ. ತಾ  ಏನೋ, ತನ್ನ  ಕೆಲಸ ಏನೋ, ತನ್ನ ಮಕ್ಕಳು, ಗಂಡಾ  ಇಷ್ಟs  ಆಕಿ  ಪ್ರಪಂಚ. ತನ್ನ ಕೆಲಸಾ  ಮುಗಿಸಿ  ವ್ಯಾಳ್ಯಾ  ಸಿಕ್ಕಾಗ  ಹೊಲಿಗಿ, ಹೆಣಿಕಿ, ಓದೂದು  ಇವು  ಆಕಿ  ಹವ್ಯಾಸ.  ಓದಂತೂ ಹುಚ್ಚು ಅಕಿಗೆ. ಒಬ್ಬರಿಗೆ  ಒಂದ  ಬಿರುಸು  ಮಾತ ಆಡಿದಾಕಿ  ಅಲ್ಲಾ. ಯಾರ ಏನರೆ  ಅಂದ್ರ  ಅನಿಸಿ ಕೊಂಡ  ಬರಾಕಿ; ಖರೆ  ಎಂದೂ  ಮಾತಿಗೆ ಮಾತು ಜೋಡಿಸಿಗೋತ  ನಿಲ್ಲಾಕ್ಯಲ್ಲ. 

ಒಮ್ಮೆ  ಐನಾಪೂರದಾಗ, ಆಕೀ  ತೌರು ಮನಿ ಒಳಗನs  ಆಕಿಗೆ  ಅಪಮಾನ  ಅನಿಸಿ ನೋಯಿಸೋ  ಪ್ರಸಂಗ  ನಡೀತು. ಬೇಕೂಂತ ಆದದ್ದಲ್ಲ,  ತಿಳೀದೆ  ಆದದ್ದು. ಆದರೂ ಒಂಥರಾ  ಅನಿಸಿ  ಯಾಕೋ  ಅವ್ವಾಗ  ಭಾಳ ಮನಸಿಗೆ  ಹತ್ತು ಅದು. ತಮ್ಮ ಅವ್ವನ  ಅಂದ್ರ ಅಂಬಕ್ಕಜ್ಜಿ  ಮುಂದ  ಹೇಳಿದಾಗ ಆಕಿ  ಅವ್ವಾನ್ನ  ಸಮಾಧಾನ  ಮಾಡಿದ್ಲು. ಆದರ ಬ್ಯಾರೆ ಒಬ್ಬರು ಆ ವಿಷಯ ಕ್ಕ   ಏನೇನೂ ಸಂಬಂಧ  ಇಲ್ಲದೇ    ಇದ್ದವರು   ಅವ್ವಾಗ  ಮನಸಿಗೆ  ಚುಚ್ಚು ಹಂಗ  ಮಾತಾಡೀದ್ರು. ಅವರೂ ನೆಂಟರೇ. ಹಿಂಗಾಗಿ  ಅವ್ವಾಗ  ಮನಸಿಗೆ  ಭಾಳ  ತ್ರಾಸ ಅನಿಸಿದ್ರೂ  ಸುಮ್ಮನ  ಇದ್ಲು  ನಮ್ಮ ಅವ್ವಾ. ಆದರೂ ಅವ್ವಾನ ಮನಸಿಗೆ  ಗಾಯ ಆಗಿದ್ದೆನ ಸುಳ್ಳಲ್ಲ. ಆಗ ನಾ ಎರಡನೇ ಮಗಳ  ಬಾಣಂತಿ  ಇದ್ದೆ. ಆಕಿ ಹಗಲೆಲ್ಲಾ  ಹೇಳಾಕಿ ; ” ಅಕ್ಕವ್ವಾ  ನೀ ಮುಂದ   ತವರ ಮನಿ ಕಡೀದ  ಯಾವ ಆಶಾನೂ ಮಾಡ ಬ್ಯಾಡ ಹಾಂ. ನಾವಿರೂ ತನಕಾ ನಡೀತದ. ಆ ಮ್ಯಾಲ ಅಜೀಬಾತ  ಬ್ಯಾಡ. ಹೆಣ್ಮಕ್ಕಳಿಗೆ  ಬ್ಯಾರೆ  ಎಲ್ಲೆ ಅಪಮಾನ  ಆದರೂ  ಸಹನ ಆಗ್ತದ. ಆದರ  ತವರ ಮನ್ಯಾಗ  ಮಾತ್ರ ಅಪಮಾನ  ಆಗಬಾರದ  ನೋಡ  ಅಕ್ಕವ್ವಾ.ಅಂಥಾ ನೋವು ಮತ್ತ ಯಾವದಿಲ್ಲ ನೋಡು ” ಅಂತಿದ್ಲು. ಅಕಿಗೆ ಆದಂಥಾ  ನೋವು  ನಮಗ ಆಗದಿರಲಿ  ಅಂತ ಹರಸಿದ್ಲೋ ಏನೋ ನಮ್ಮ ಅವ್ವ; ನಮ್ಮ ಅಣ್ಣ- ತಮ್ಮಂದಿರು, ಅವರ  ಹೆಂಡಂದಿರ  ಮ್ಯಾಲ ನಮ್ಮ  ಸತ್ತಾ, ಸಲಿಗಿ   ಹುಕ್ಕೇರಿ ಮನಿ   ಎಂದೆಂದೂ ನಮ್ಮ ಜೋಡೀನ  ಇದ್ಧಂಗ ಅನಸೂ ಹಂಗದ; ಅದs ತಣ್ಣೆಳಲ  ಹಾದಿಯ ಹಾಯಿ ಅಲ್ಯದ.

ಇಂಥಾಕಿ  ನಮ್ಮ ಅವ್ವಾ ಅಗದಿ ಮೆತ್ತಗ, ಸರಳ  ಮನಸಿನಾಕಿ  ನಮ್ಮ ಅವ್ವಾ; ಅಂಥಾಕಿಗೆ ಇಂಥಾ  ಬ್ಯಾನಿ! ಅದ್ಯಾವ ಪರಿ  ತ್ರಾಸ  ಆ  ಜೀವಕ್ಕ! ದೇವರ  ಮನಿಯೊಳಗ  ಇದs  ನ್ಯಾಯನೋ ಏನೋ ಅಂತ  ಕಣ್ಣ ಒರೆಸಿ ಕೊಂಡ ಮಗ್ಗಲಾದೆ. ಯಾವಾಗೋ  ಬೆಳಗ ಹರಿಯೂ ಹೊತ್ತಿಗೆ   ನಿದ್ದಿ ಹತ್ತಿರಬೇಕು. ನಮ್ಮ ಅವ್ವಾ  ” ಅಕ್ಕವ್ವಾ” ಅಂತ ನೋವಲೇ ಚೀರಿಧಂಗಾತು. ಸಟ್ಟನ  ಎದ್ದ ಕೂತೆ. ಒಮ್ಮೆಲೆ  ಲಕ್ಷ್ಯಕ್ಕ ಬಂತು – ನಮ್ಮ ಅವ್ವಾ  ಈಗ ತನ್ನ ಗಂಡಸ ಮಕ್ಕಳು, ಸೊಸೆಂದ್ರ  ಉಡ್ಯಾಗ  ಬಿದ್ದಾಳ  ಅಂತ. ಚೂರ ಸಮಾಧಾನ  ಆತು. ಅವ್ರು  ಹೂವಿನ ಹಾಂಗ ನೋಡ್ಕೋತಾರ  ಆಕಿನ್ನ. ದೊಡ್ಡ ಊರು; ದೊಡ್ಡ ದೊಡ್ಡ ಹಾಸ್ಪಿಟಲ್ ಗಳು ; ಬೇಕಾದ ಟ್ರೀಟ್ ಮೆಂಟ್  ಕೊಡಸ್ತಾರ  ಅಂತ ಅನ್ಕೊಂಡೆ. ಸ್ವಲ್ಪ ಹಗರ ಅನಿಸ್ತು , ಆದರ  ಹೊಟ್ಟ್ಯಾಗ  ನೋವ ಎತ್ತು. ನಮ್ಮವ್ವ  ತನ್ನ ಮಕ್ಕಳ  ಸುಖ ಸೌಕರ್ಯ ತುಂಬಿದ  ಮನಿಯೊಳಗ  ಸುಖಬಡಲಿಕ್ಕ  ಬಂದಿಲ್ಲ ;  ಅವರ ಐಷಾರಾಮಿ ಕಾರ್ ನೊಳಗ  ಆರಾಮ  ತಿರಗ್ಯಾಡಲಿಕ್ಕ ಹೋಗಿಲ್ಲ. ದವಾಖಾನಿಗಳಿಗೆ  ತಿರಗಾಡೂದಕ್ಕ ಹೋಗ್ಯಾಳ. ಇಂಥಾ ಮಕ್ಕಳನ ಕೊಟ್ಟು ಅವರ ವೈಭವದ  ಜೀವನದ ಸುಖಾ ಉಣೂದನ  ಬರೀಲಿಕ್ಕೆ  ಮರತನೋ ಏನೋ ಅಂವಾ ಆ  ಹಣೆಬರಹ ಬರೀಯೂಂವವ! ಆ ನಸೀಬದ  ಮುಂದ  ನಿಂದ್ರಾವರ ಯಾರು!

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

October 11, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. Shrivatsa Desai

    ‘ಅವ್ವಾ ಅಂದರೆ ನನಗಿಷ್ಟ ‘ ಅನ್ನುವಂತೆ ತಮ್ಮ ತಮ್ಮ ತಾಯಿಯ ಕತೆಯನ್ನು ಹೃದಯಂಗಮವಾಗಿ ಚಿತ್ರಿಸಿದ್ದಾರೆ ಸರೋಜಿನಿಯವರು. ಯಾರು ತಾನೆ ತಾಯಿಯಬಗ್ಗೆ ಒಳ್ಳೆಯದನ್ನಲ್ಲದೆ ಮತ್ತೇನು ಬರೆದಾರು? “ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ” ಎನ್ನುವ ಸುಭಾಷಿತವಿದ್ದರೂ. ಈ ಸರಳ ನಿರೂಪಣೆಯಲ್ಲಿ ಒಬ್ಬ ತಾಯಿಯ ದೇವತ್ವವಲ್ಲದೆ ಬೇರೇನೂ ಕಾಣುತ್ತಿಲ್ಲ. ಆ ಹಿನ್ನೆಲೆಯಲ್ಲಿ ದೊಡ್ಡ ಅವಿಭಕ್ತ ಮಾಧ್ಯಮ ವರ್ಗದ ಕುಟುಂಬದ. ಪ್ರೀತಿ ವಾತ್ಸಲ್ಯ ಸಹಯೋಗದ ಚಿತ್ರಣವೂ ಇದೆ. ಈಗಿನ ಕಾಲದ ಯುವ ಪೀಳಿಗೆ ಏಕಸಂತಾನದ ಕುಟುಂಬದೊಡನೆಯಷ್ಟೇ ನಂಟು ಬೆಳೆಸಲು ತಯಾರಿರುವಾಗ ಇಂಥ ಕಥಾನಕಗಳ ಕೋಣೆಯನ್ನೇ ಕಾಣುತ್ತಿರುವೆವೋ ಅಂತ ಉದ್ಘಾರ ಹೊರಟರೆ ಆಶ್ಚರ್ಯವಿಲ್ಲ!

    ಪ್ರತಿಕ್ರಿಯೆ
  2. Shrivatsa Desai

    ಅವ್ವಾ ಅಂದರೆ ನನಗಿಷ್ಟ ‘ ಅನ್ನುವಂತೆ ತಮ್ಮ ತಮ್ಮ ತಾಯಿಯ ಕತೆಯನ್ನು ಹೃದಯಂಗಮವಾಗಿ ಚಿತ್ರಿಸಿದ್ದಾರೆ ಸರೋಜಿನಿಯವರು. ಯಾರು ತಾನೆ ತಾಯಿಯಬಗ್ಗೆ ಒಳ್ಳೆಯದನ್ನಲ್ಲದೆ ಮತ್ತೇನು ಬರೆದಾರು? “ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ” ಎನ್ನುವ ಸುಭಾಷಿತವಿದ್ದರೂ. ಈ ಸರಳ ನಿರೂಪಣೆಯಲ್ಲಿ ಒಬ್ಬ ತಾಯಿಯ ದೈವತ್ವವಲ್ಲದೆ ಬೇರೇನೂ ಕಾಣುತ್ತಿಲ್ಲ. ಆ ಹಿನ್ನೆಲೆಯಲ್ಲಿ ದೊಡ್ಡ ಅವಿಭಕ್ತ ಮಾಧ್ಯಮ ವರ್ಗದ ಕುಟುಂಬದ. ಪ್ರೀತಿ ವಾತ್ಸಲ್ಯ ಸಹಯೋಗದ ಚಿತ್ರಣವೂ ಇದೆ. ಈಗಿನ ಕಾಲದ ಯುವ ಪೀಳಿಗೆ ಏಕಸಂತಾನದ ಕುಟುಂಬದೊಡನೆಯಷ್ಟೇ ನಂಟು ಬೆಳೆಸಲು ತಯಾರಿರುವಾಗ ಇಂಥ ಕಥಾನಕಗಳ ಕೊನೆಯನ್ನೇ ಕಾಣುತ್ತಿರುವೆವೋ ಅಂತ ಉದ್ಘಾರ ಹೊರಟರೆ ಆಶ್ಚರ್ಯವಿಲ್ಲ!

    ಪ್ರತಿಕ್ರಿಯೆ
    • Sarojini Padasalgi

      ಧನ್ಯವಾದಗಳು ಶ್ರೀವತ್ಸ ದೇಸಾಯಿಯವರೇ, ನನ್ನ ಮನಸಿನ ಮಾತೇ ನಿಮ್ಮ ರೆಸ್ಪಾನ್ಸ್ ದಾಗ ಕಂಡದ್ದಕ್ಕ. ಹೌದು ಮನಿಯೊಳಗಿನ ಸಂಬಂಧಗಳ ಂಈಗ ತಮ್ಮ ವ್ಯಾಖ್ಯೆ ಬದಲಿಸಿ ಬಿಟ್ಟಾವ ಏನೋ ಅನಸ್ತದ. ನಮ್ಮ ಅವ್ವಾನ್ನ ನಾ ದೂರ ಅಂದ್ರ ನಮ್ಮ ಸಂಬಂಧದ ಪರಿಧಿ ಹೊರಗ ನಿಂತು ನೋಡಿದ್ರೂ ಯಾವ ಕಸರೂ ಕಾಣಸೂದಿಲ್ಲ; ಎಲ್ಲಾ ಅಗದೀ ಹಂಗೇ – ರೋಕಠೋಕ.
      ಇನ್ನೊಮ್ಮೆ ಧನ್ಯವಾದಗಳು ಸರ್.

      ಪ್ರತಿಕ್ರಿಯೆ
  3. ಶೀಲಾ ಪಾಟೀಲ

    ಏಕಾ, ಅಣ್ಣಾ ಮತ್ತು ಅವ್ವಾ ಮೂವರ ವ್ಯಕ್ತಿತ್ವ ಸುಂದರ ರೀತಿಯಲ್ಲಿ ಮೂಡಿಬಂದಿವೆ. ಏಕಾ ನಂತರ ಅಣ್ಣಾ ಅವರು ಶಿಕ್ಷಣದ ಜೊತೆ ಹೊಲ,ಮನೆ ಸಂಭಾಳಿಸಿದ್ದು, ಶಿಕ್ಷಕ ವೃತ್ತಿಯ ಶಿಸ್ತು ಮತ್ತು ಶಾಲೆಯ ಹೊಸಕಟ್ಟಡಕ್ಕೆ ಮಾಡಿದ ಪ್ರಯತ್ನ, ಅದೇ ಶಾಲೆ ಕಾಲೇಜ ಆಗಿ ಅಲ್ಲಿಗೆ ಎಂಎ ಮುಗಿಸಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ರೀತಿ ಅನನ್ಯ. ಮುಂದಿನ ಗಳಿಗೆ ಎತ್ತೋ ಎಂತೋ ಎಂದು ತಿಳಿದ ದೇವರು ಅಣ್ಣಾ ಅವರಿಗೆ ಕೋರ್ಟಿನಲ್ಲಿ ಜಯ ಸಿಗದಂತೆ ಮಾಡಿದನೆನಿಸುತ್ತದೆ. ಅವ್ವಾ ಅವರ ಅನಾರೋಗ್ಯದ ವೇಳೆಯಲ್ಲಿ ಅವರೊಂದಿಗೆ ಇರುವಂತಾಯಿತು. ಅವ್ವ ಅವರ ಬಿಡುವಿಲ್ಲದ ದೈನಂದಿನ ಕೆಲಸಗಳು ಸೋಮಾರಿತನ ಓಡಿಸುವಂತಿವೆ. ಅವರ ಹಿತವಚನದ ಪ್ರಸಂಗ ಅವರು ಅನುಭವಿಸಿದ ನೋವು ತಿಳಿಸುವುದು. ಒಟ್ಟಿನಲ್ಲಿ ಏಕಾ,ಅಣ್ಣಾ,ಅವ್ವಾ ಮೂವರೂ ವಿಶೇಷ ಎನಿಸುವ ವ್ಯಕ್ತಿತ್ವ ಹೊಂದಿದವರು

    ಪ್ರತಿಕ್ರಿಯೆ
    • Sarojini Padasalgi

      ಖರೇನ ಅನಸ್ತದ ಶೀಲಾ; ಅಂವಾ ಭಾಳ ಶಾಣ್ಯಾ. ಮುಂದ ಬರೂ ದೊಡ್ಡ ದೊಡ್ಡ ದೊಡ್ಡ ಘಟನೆಗಳಿಗೆ ಎದಿಗೊಟ್ಟ ನಡಿಲಿಕ್ಕ ಕಲಸೂದರ ಮೊದಲ ಪಾಠನೋ ಏನೋ ಇದು! ಒಂದೊಂದ ವಿಶೇಷತೆ ಒಂದೊಂದು ವ್ಯಕ್ತಿತ್ವದಾಗ. ಅನೇಕ ಧನ್ಯವಾದಗಳು ಶೀಲಾ ನಿಮ್ಮ ಅಭಿಪ್ರಾಯ ಕ್ಕ.

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: