ಗೋಪಾಲ ತ್ರಾಸಿಯವರ ‘ಈ ಪರಿಯ ಕಥೆಯ….’

 

ಪಾರ್ವತಿ ಜಿ.ಐತಾಳ್

ತಮ್ಮ ಮೂರು ಕವನ ಸಂಕಲನಗಳ ಮೂಲಕ ಕನ್ನಡ ಕಾವ್ಯ ಕ್ಷೇತ್ರದಲ್ಲಿ ಈಗಾಗಲೇ ಗಟ್ಟಿ ಹೆಜ್ಜೆಗಳನ್ನೂರಿರುವ ಮುಂಬಯಿ ವಾಸಿ ಗೋಪಾಲ ತ್ರಾಸಿಯವರು ಮೂಲತಃ ಕವಿಯಾದರೂ ಗದ್ಯ ಬರಹಗಳು ಅವರಿಗೆ ಹೊಸತೇನಲ್ಲ. ಎರಡು ದಶಕಗಳಿಂದ ನಿರಂತರವಾಗಿ ಮುಂಬಯಿ ಹಾಗೂ ಕರ್ನಾಟಕದ ವಿವಿಧ ಪತ್ರಿಕೆಗಳಿಗೆ ಅಂಕಣಗಳನ್ನು ಬರೆಯುತ್ತ ಬಂದಿರುವ ಅವರು ಪತ್ರಿಕೋದ್ಯಮ ಕ್ಷೇತ್ರಕ್ಕೂ ಸಾಕಷ್ಟು ಕೊಡುಗೆಗಳನ್ನು ಕೊಟ್ಟಿದ್ದಾರೆ.

ಅಮೆರಿಕದ ಪ್ರತಿಷ್ಠಿತ ಅಕ್ಕ ಸಮ್ಮೇಳನದ ಕವಿಗೋಷ್ಠಿಯಲ್ಲಿ ಸ್ವರಚಿತ ಕವನ ವಾಚಿಸಿದ್ದಾರೆ. ಈಗ ಸದಾನಂದ ಸುವರ್ಣ ಪ್ರತಿಷ್ಠಾನದವರು ಗೋಪಾಲ ಅವರ ಇದುವರೆಗಿನ ಅಂಕಣಗಳನ್ನು ಕಲೆಹಾಕಿ  ‘ಈ ಪರಿಯ ಕಥೆಯ….’ ಎಂಬ ಒಂದು ಸಂಕಲನವನ್ನು ತಂದಿದ್ದಾರೆ.

ಅಂಕಣ ಲೇಖನಗಳಿಗೆ ಅವುಗಳದ್ದೇ ಆದ ಇತಿಮಿತಿಗಳಿವೆ. ಜತೆಗೆ ಕೆಲವು ವೈಶಿಷ್ಟ್ಯಗಳೂ ಇವೆ.  ದಿನ ನಿತ್ಯ ಮುದ್ರಣಗೊಳ್ಳುವ ಪತ್ರಿಕೆಗಳಲ್ಲಿ ಅಂಕಣಗಳಿಗಾಗಿ ನಿರ್ದಿಷ್ಟ ಪ್ರಮಾಣದ ಸ್ಪೇಸ್‌ನ್ನು ಕಾದಿರಿಸುತ್ತಾರೆ. ನಾವು ನಮ್ಮ ಲೇಖನಗಳಿಗಾಗಿ ಆಯ್ದುಕೊಳ್ಳುವ ವಸ್ತು ಆ ಸಮಯಕ್ಕೆ ಎಷ್ಟು ಪ್ರಸ್ತುತವಾದದ್ದು, ಬರವಣಿಗೆಯ ಶೈಲಿ ಎಷ್ಟು ಆಕರ್ಷಕವಾದದ್ದು, ಅವುಗಳಲ್ಲಿ ವ್ಯಕ್ತವಾದ ಸಾಮಾಜಿಕ ಕಾಳಜಿಯೇನು ಮತ್ತು ಕೊಡಲಾದ ಜಾಗಕ್ಕೆ ಎಷ್ಟು ಹೊಂದಿಕೊಳ್ಳುವಂಥದ್ದು ಮೊದಲಾದ ಮಾನದಂಡಗಳನ್ನು ಗಮನದಲ್ಲಿಟ್ಟುಕೊಂಡು ಲೇಖನಗಳು ಆಯ್ಕೆಯಾಗುತ್ತವೆ.

ಆ ಲೇಖನಗಳು ಓದುಗರ ಗಮನ ಸೆಳೆದು ಅವರು ಅದನ್ನು ಆಯಾ ಕಾಲದ ಘಟನೆಗಳ ದಾಖಲೆಯಾಗಿ ತೆಗೆದಿಟ್ಟುಕೊಳ್ಳುವಂಥದ್ದಾಗಿರಬೇಕೆಂದು ಪತ್ರಿಕೆಯವರು ಬಯಸುತ್ತಾರೆ. ವರ್ತಮಾನದಲ್ಲಿ ಮಾತ್ರವಲ್ಲದೆ ಮುಂದೊಂದು ದಿನ ಓದುವವರಿಗೂ  ಅದು ಭೂತ ಕಾಲದ ಅಧಿಕೃತ ದಾಖಲೆಯಾಗಬೇಕು. ಸಂಕ್ಷಿಪ್ತವಾಗಿ ಹೇಳುವುದಾರೆ ಅಂಕಣ ಬರಹಗಳು ಕಾಲವನ್ನು ಅಕ್ಷರಗಳಿಂದ ಬಂಧಿಸುತ್ತವೆ.

ಗೋಪಾಲ ತ್ರಾಸಿಯವರ ಅಂಕಣ ಲೇಖನಗಳಲ್ಲಿ ಈ ಎಲ್ಲ ಗುಣಗಳೂ ಸ್ಪಷ್ಟವಾಗಿ ಎದ್ದು ಕಾಣುತ್ತವೆ. ಅವುಗಳ ವಿಷಯ-ವಸ್ತುಗಳ ಆಧಾರದ ಮೇಲೆ ಗೋಪಾಲ್ ತಮ್ಮ ಕೃತಿಯನ್ನು ‘ಚರಿತ್ರೆಯ ಬೆನ್ನೂ ವರ್ತಮಾನವೂ’ ಮತ್ತು ‘ಕನಿಕರಿಸಲು ಭೂಕಂಪದ ನೆಪ’ ಎಂಬ ಎರಡು ವಿಭಾಗಗಳಾಗಿ ವಿಂಗಡಿಸಿದ್ದಾರೆ. ಎರಡೂ ವಿಭಾಗಗಳು ಸೇರಿ ಇಲ್ಲಿ ಒಟ್ಟು ೭೨ ಲೇಖನಗಳಿವೆ. 

ಮೊದಲ ಭಾಗದಲ್ಲಿ ಆ ಕಾಲದ ವರ್ತಮಾನಕ್ಕೆ ಸಂಬಂಧಿಸಿದ ಘಟನೆಗಳ ವಿವರಗಳಿದ್ದರೆ ಎರಡನೆಯ ಭಾಗದಲ್ಲಿ ಸಾರ್ವಕಾಲಿಕ ಮಹತ್ವವನ್ನು ಪಡೆಯುವ ಕಲೆಗಳು, ಕಲಾವಿದರು, ಮತ್ತು ಸಾಧಕ ವ್ಯಕ್ತಿಗಳ ಕುರಿತಾದ ಲೇಖನಗಳಿವೆ. ಎಲ್ಲ ಲೇಖನಗಳಲ್ಲಿ ಎದ್ದು ಕಾಣುವ ಅವರ ಸಾಂಸ್ಕೃತಿಕ ಮತ್ತು ಸಾಮಾಜಿಕ ಮೌಲ್ಯಗಳ ಕುರಿತಾದ ಕಾಳಜಿ ಲೇಖನಗಳ ಮಹತ್ವವನ್ನು ಹೆಚ್ಚಿಸಿವೆ.

ಆರಂಭದ ಲೇಖನದಲ್ಲೇ ಮುಂಬಯಿ ನಗರದ ಚರಿತ್ರೆ ಹಾಗೂ ಬೆಳವಣಿಗೆಯ ಕುರಿತಾದ ವಿವರಗಳು ಮತ್ತು ಅದು ಹೇಗೆ ದೇಶದಾದ್ಯಂತದ ಜನರಿಗೆ ಪ್ರೀತಿಯಿಂದ ಆಶ್ರಯ ಕೊಡುತ್ತ ಮಹಾನಗರವಾಯಿತು ಎಂಬ ವಿವರಗಳಿವೆ.  ಮುಂದೆ ಕಾಲಕಾಲಕ್ಕೆ ಬದಲಾಗುತ್ತ ಹೊದ ಮುಂಬಯಿಯ ರಾಜಕೀಯ ಬದುಕು, ಪಕ್ಷಗಳುಂಟಾದ ಬಗೆ , ಚುನಾವಣೆಗಳು ಮೊದಲಾದ ವಿಷಯಗಳ ಕುರಿತು ಎರಡು ಲೇಖನಗಳಿವೆ.

ಮಹಾರಾಷ್ಟ್ರದ  ರಾಜಕೀಯದಲ್ಲಿ ಬಾಳಾ ಠಾಕ್ರೆಯ ಪಾತ್ರದ ಕುರಿತಾದ  ‘ಮಹತ್ವಾಕಾಂಕ್ಷಿಯ ಮರುಘರ್ಜನೆ’ ಎಂಬ ಲೇಖನವಂತೂ ಬಹಳ ದೀರ್ಘವಾಗಿದ್ದು  ಶಿವಸೇನೆ ಪಕ್ಷದ ಬಗ್ಗೆ ಅನೇಕ ಮಾಹಿತಿಗಳನ್ನು ಕೊಡುತ್ತದೆ. ‘ಭಯೋತ್ಪಾದನೆ ಮತ್ತು ಸಾಮಾಜಿಕ ಅರಿವು’ ಬಹಳ ಮಹತ್ವದ ಲೇಖನ.  ದೇಶದಾದ್ಯಂತ ನಡೆದ ಭಯೋತ್ಪಾದನೆಯ ವಿವರಣೆ ಇಲ್ಲಿದೆ.

‘ದಿನಾ ಸಾಯುವವರಿಗೆ ಅಳುವವರಾರು?’ ಎಂಬ ಲೇಖನದಲ್ಲೂ ಮುಂಬಯಿನಲ್ಲಿ ನಡೆದ ಸರಣಿ ಬಾಂಬ್ ಸ್ಪೋಟದ ಬಗೆಗೆ  ವಿವರಗಳಿವೆ. ಆಧುನಿಕ ಭಾರತದಲ್ಲಿ ಹೆಚ್ಚುತ್ತಿರುವ ದೇವಮಾನವರು, ಪವಾಡ ಪುರುಷರು, ಪವಾಡಗಳು, ಮೂಢನಂಬಿಕೆಗಳ ಸನ್ನಿಯು ದೇಶದ ಹಳ್ಳಿ-ದಿಲ್ಲಿಗಳೆನ್ನದೆ ಎಲ್ಲೆಡೆಗಳಲ್ಲೂ ಹಬ್ಬಿಕೊಳ್ಳುತ್ತಿರುವ ಪರಿ ‘ಸಮೂಹ ಸನ್ನಿಗಿಲ್ಲ ಹಳ್ಳಿ-ದಿಲ್ಲಿ’ಎಂಬ ಲೇಖನದಲ್ಲಿ ಗೋಪಾಲ್ ಮನೋಜ್ಞವಾಗಿ ಕಟ್ಟಿ ಕೊಡುತ್ತಾರೆ.

೨೦೦೩ರಲ್ಲಿ ನಡೆದ ಭಾರತ್ ಬಂದ್‌ನ ಬಗ್ಗೆ ಲೇಖಕರು ತಮ್ಮ ದುಃಖವನ್ನು ವ್ಯಕ್ತ ಪಡಿಸುತ್ತಾರೆ.  ಯಾಕೆಂದರೆ ಬಂದ್ ಮೂಲಕ ಶ್ರೀಸಾಮಾನ್ಯನ ಬದುಕು ನಲುಗುವುದು ಬಿಟ್ಟರೆ ಅದರ ಉದ್ದೇಶ  ಯಾವುದೇ ರೀತಿಯಲ್ಲಿ ಪೂರೈಕೆಯಾಗುವುದಿಲ್ಲ. ಅಣ್ಣಾಹಜಾರೆಯ ಕುರಿತಾದ ಲೇಖನದಲ್ಲಿ ಭ್ರಷ್ಟಾಚಾರ ನಿರ್ಮೂಲನಕ್ಕಾಗಿ ಅವರು ಮಾಡಿದ ಪ್ರಯತ್ನಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸುತ್ತ ಸ್ವಾಮಿ ವಿವೇಕಾನಂದರಿಂದ ಪ್ರೇರಿತರಾದ ಅವರ ಯಶಸ್ಸು ಬಹಳ ದೊಡ್ಡದು ಎನ್ನುತ್ತಾರೆ.  ಸುನಾಮಿಯಂತಹ ಪ್ರಕೃತಿ ವಿಕೋಪದ ಬಗ್ಗೆಯೂ ಒಂದು ಲೇಖನವಿದೆ.

ಮುಂಬಯಿಯಲ್ಲಿ ಓಡಾಡುವ ಲೋಕಲ್ ಟ್ರೈನ್, ಬಾಲಿವುಡ್ ಬದುಕಿನಲ್ಲಿ ನಡೆಯುವ ಕ್ರೈಂಗಳು, ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹ ಸಿಗಬೇಕೆನ್ನುವ ಒತ್ತಾಯ, ವಾಹನ ದಟ್ಟಣೆಯ ಕುರಿತಾದ ಕಾಳಜಿ, ಹದಿಹರೆಯದ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುವುದು ಯಾಕೆ ಎಂಬ ಚಿಂತನೆ, ಮುಂಬಯಿಯಲ್ಲಿ ಕನ್ನಡ ಉಳಿಸಿ ಬೆಳೆಸುವಲ್ಲಿ  ಕನ್ನಡ ಶಾಲೆಗಳ ಪಾತ್ರ, ಮಹಾರಾಷ್ಟ್ರ ಸರಕಾರದ ಶಿಕ್ಷಣ ನೀತಿ, ಮುಂಬಯಿಯಲ್ಲಿ ಹೋಟೆಲು ಉದ್ಯಮ ಎತ್ತರಕ್ಕೆ ಬೆಳೆಯುವಲ್ಲಿ ಕರಾವಳಿಯಿಂದ ವಲಸೆ ಹೋದವರ ಪಾತ್ರ -ಹೀಗೆ ಹಲವಾರು ಕುತೂಹಲ ಹುಟ್ಟಿಸುವ ವಸ್ತುಗಳ ಮೇಲೆ ಮೊದಲ ಭಾಗದ ಲೇಖನಗಳಿವೆ.

ಎರಡನೆಯ ಭಾಗದಲ್ಲಿ ರಂಗಭೂಮಿ, ಸಾಹಿತ್ಯ, ಸಮ್ಮೇಳನಗಳು, ಕವಿಗೋಷ್ಠಿಗಳ ಸಮೀಕ್ಷೆಗಳೂ, ಲೇಖಕರ ಮೇಲೆ ತಮ್ಮ ವ್ಯಕ್ತಿತ್ವದಿಂದ ಪ್ರಭಾವ ಬೀರಿದ ವ್ಯಕ್ತಿ ಚಿತ್ರಣಗಳೂ ಇರುವ ೩೯ ಲೇಖನಗಳಿವೆ. ಎಲ್ಲಾ ಲೇಖನಗಳಲ್ಲಿ ಕಾಣುವ ವೈಶಿಷ್ಟ್ಯವೆಂದರೆ ಗೋಪಾಲ್ ಅವರ ಕಾವ್ಯಾತ್ಮಕ ಶೈಲಿ. ಅವರು ಗದ್ಯ ಬರೆದರೇನೇ ಪದ್ಯದಂತಿರುತ್ತದೆ. ಮಾತ್ರವಲ್ಲದೆ  ಅಲ್ಲಲ್ಲಿ ಸಾಂದರ್ಭಿಕವಾಗಿ ಅವರೇ ಬರೆದ ಕವಿತೆಗಳನ್ನೂ ಸೇರಿಸುತ್ತಾರೆ.

ಒಟ್ಟಿನಲ್ಲಿ ಗೋಪಾಲ್ ಅವರ ಲೇಖನಗಳು ಓದುಗರಲ್ಲಿ ವೈಚಾರಿಕತೆ ಬೆಳೆಸುವುದರ ಜತೆಗೆ ಅವರನ್ನು ಭಾವನಾತ್ಮಕವಾಗಿಯೂ ವಿಷಯದ ಬಗ್ಗೆ ಚಿಂತನೆಯಲ್ಲಿ ತೊಡಗಿಕೊಳ್ಳುವಂತೆ ಮಾಡುತ್ತವೆ.

‍ಲೇಖಕರು Avadhi

October 9, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. Smitha Amrithraj.

    ಗೋಪಾಲ್ ತ್ರಾಸಿಯವರ ಈ ಅಂಕಣ ಬರಹ ನಾನೂ ಓದಿರುವೆ. ಒಳ್ಳೆಯ ಪುಸ್ತಕ. ಪಾರ್ವತಿ ಮೇಡಂ,ಚೆಂದದ ವಿಶ್ಲೇಷಣೆ.ಇಬ್ಬರಿಗೂ ಅಭಿನಂದನೆಗಳು.

    ಪ್ರತಿಕ್ರಿಯೆ
  2. Shyamala Madhav

    ನಮ್ಮ ಮುಂಬೈ ಕವಿ, ಲೇಖಕನ ಕೃತಿಯ ಬಗ್ಗೆ ಉತ್ತಮ ವಿಶ್ಲೇಷಣೆ!. ಖುಶಿಯಾಯ್ತು ಪಾರ್ವತೀ.

    ಪ್ರತಿಕ್ರಿಯೆ
  3. Gopal trasi

    ಸ್ಮಿತಾ , ಶ್ಯಾಮಲಾ ಅವರೇ, ಧನ್ಯವಾದ ಓದಿ ಪ್ರತಿಕ್ರಿಯಿಸಿರುವುದಕೆ. ಎಲ್ಲೋ ಒಂದು ಕಡೆ , ಏನೋ ಓದು ಬರಹದಲಿ ಅಜ್ಞಾತದಲ್ಲೇ ಇರಬಯಸುವ ಮನಸ್ಸಿಗೆ ಈ ತರಹದ ಪ್ರೋತ್ಸಾಹ ಖಂಡಿತ ಖುಷಿ ಕೊಡುತ್ತದೆ. ಅಕ್ಷರಲೋಕದ ಒಲುಮೆಯದು. ಅದಕ್ಕೆ ಕಾರಣರಾದ ಆದರಣೀಯ ಡಾ. ಪಾರ್ವತಿ ಐತಾಳ್ ಮೇಡಮ್.. ಮತ್ತು ‘ಅವಧಿ’ ಬಳಗಕ್ಕೆ ಧನ್ಯವಾದಗಳು.

    ಪ್ರತಿಕ್ರಿಯೆ
  4. D.M.Nazdaf

    “ಈ ಪರಿಯ ಕಥೆಯ” ಅಂಕಣ ಬರಹ ಸಂಗ್ರಹದ ಸೋದಾಹರಣ ಪರಿಚಯ ಮಾಡಿರುವ ಪಾರ್ವತಿ g. ಐತಾಳ ಅವರು ಕೃತಿಯ ವಿಶಿಷ್ಟತೆಯನ್ನು ವಿವರಿಸಿದ್ದಾರೆ.
    ಮುಂಬೈ ನಗರವನ್ನು ನೋಡುವ ಮೊದಲು ಈ ಕೃತಿಯನ್ನು ಒಮ್ಮೆ ಓದಿಕೊಂಡು ಹೋಗಬೇಕೆಂದು ಅನಿಸಿತು.
    ಡಿ. ಎಂ.ನದಾಫ,
    ಅಫಜಲಪುರ.

    ಪ್ರತಿಕ್ರಿಯೆ
  5. ಕಲಾ ಭಾಗ್ವತ್

    ‘ಈ ಪರಿಯ ಕಥೆಯ’ ಪುಸ್ತಕವನ್ನು ಓದಿದ ಖುಷಿ ನನ್ನದು. ಚೆಂದದ ವಿಶ್ಲೇಷಣೆ. ಅಭಿನಂದನೆಗಳು ಇಬ್ಬರಿಗೂ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: