'ಗೋಡೆಗೊಂದು ಮೊಳೆ ಬಡಿಯುವ ಸದ್ದು…'

ಗೋಡೆ….

– ಡಾ ಶಿವಾನಂದ ಕುಬಸದ

ಮುಧೋಳ

ಎಂಥ ಚೆಂದದ ಗೋಡೆ
ನಾನೇ ಕಟ್ಟಿದ್ದು ….
ಅಲ್ಲೆಲ್ಲ ಬೆಳೆದಿದ್ದ ಬಳ್ಳಿ ಗಿಡ ಮರಗಳನ್ನೆಲ್ಲ
ಕೊಚ್ಚಿ ಕಡಿದು ನೆಲ ಸ್ವಚ್ಚ ಮಾಡಿ
ಅಳಿಲು ಗುಬ್ಬಿ ಇರುವೆ ಕೋಗಿಲೆ
ಕಾಗೆಗಳನ್ನೆಲ್ಲ ಹೊಡೆದು ದೂರಕ್ಕಟ್ಟಿ
ಭದ್ರ ಬುನಾದಿಯ ಮೇಲೆ ಎಬ್ಬಿಸಿ
ನಿಲ್ಲಿಸಿ ನುಣ್ಣಗೆ ಪಾಲಿಶ್ ಮಾಡಿ
ಮಳೆ ಗಾಳಿ ಬಿಸಿಲಿಗೆ ಜಗ್ಗದ ಬಣ್ಣ ಬಳಿದು
ಅದರ ಮೇಲೆ ಕೈಯಾಡಿಸಿ ಸುಖಿಸುತ್ತಿದ್ದೆ…..
 
ಅದರಾಚೆಗಿನ ಜನಕೆ ನಾ ಕಾಣದಿರಲೆಂದು
ನಾನು ಅವರನು ನೋಡದಂತಿರಬೇಕೆಂದು
ಜಪ್ಪಿಸಿ ಕುಳಿತಿದ್ದೆ ಹೊಳೆ ಹೊಳೆವ ಬಣ್ಣದ
ಗೋಡೆ ನನ್ನದೆಂದು ಉಬ್ಬಿ ಸುಖಿಸುತ್ತಿದ್ದೆ
ಗೋಡೆಯ ಮೇಲೆಲ್ಲ ಮೊಳೆಗಳ ಬಡಿದು
ಅಪ್ಪನ ಪಂಚೆಗೊಂದು ಅವ್ವನ ಸೀರೆಗೊಂದು
ಇನ್ನಿಲ್ಲದ ಅಜ್ಜನ ಕೋಲಿಗೂ ಮತ್ತೊಂದು

ಇದು ನೋಡಿ ಅಲ್ಲೇನೋ ಗದ್ದಲ
ಯಾರ ಮನೆಯಲ್ಲೋ ಸಂಭ್ರಮದ ಸದ್ದು
ಮಂಗಳ ವಾದ್ಯಗಳ ದನಿ ಜನರೆಲ್ಲ ಖುಷಿಯಲ್ಲಿ
ಮತ್ತೆ ಅಲ್ಲೆಲ್ಲೋ ಕೋಗಿಲೆ ಕೂಗಿದಂತೆ
ಗುಬ್ಬಿಗಳು ನೀರು ಕುಡಿಯುವ ಸದ್ದು
ಹೂವಿನ ಗಂಧ ಮೂಗಿಗಡರುತ್ತಿದೆ
ಮತ್ತೆ ಅಲ್ಲಿ ಇನ್ನಾರಿಗೋ ಕಷ್ಟವಂತೆ
ಗೋಳಾಡುವ ಧ್ವನಿ ಕೇಳುತ್ತಿದೆ….
 
ಮೊದಲು ಇದ್ದ ಗಿಡಗಳಾಚೆ ಎಲ್ಲ ಕಾಣುತ್ತಿತ್ತು
ನಿಚ್ಚಳವಾಗಿ ನನ್ನ ಸುಖ ದುಃಖಕೆ ಅವರು
ಅವರದಕೆ ನಾನು ಎಂಥ ಚೆಂದದ ಬದುಕು
ಆದರೆ ಗೋಡೆ ಕಟ್ಟಿ ಬಿಟ್ಟೆನಲ್ಲ ಎಲ್ಲವೂ
ಬೇಡವೆಂದು ಹೀಗೆ ಸರಿದು ಇತ್ತ ಕುಳಿತುಬಿಟ್ಟೆ
ಈಗ ಗೋಡೆ ನನ್ನನ್ನೂ ಮೀರಿ ಬೆಳೆದುಬಿಟ್ಟಿದೆ
ಕಿಟಕಿಯೊಂದನು ಇಡಬೇಕಿತ್ತು
ಹಣಿಕಿ ನೋಡಬಹುದಿತ್ತಲ್ಲ ….
 
ಹೀಗೇ ಸರಿದು ಇತ್ತ ನೋಡಿದರೆ ಮಗ
ಗೋಡೆಗೊಂದು ಮೊಳೆ ಬಡಿಯುವ ಸದ್ದು
ಯಾಕೆ ಈ ಮೊಳೆಯಂದರೆ
ನಿನ್ನ ಕೋಟು ಜೋತಾಡಿಸಲು
ಎನ್ನುತ್ತಾನೆ…..!!
 

‍ಲೇಖಕರು G

July 12, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. aprathima71 @gmail.com

    ಮತ್ತೆ ಮತ್ತೆ ಓದಿಕೊಳ್ಳಬೇಕಾದ ಕವಿತೆ.. ತುಂಬಾ ಸರಳವಾಗಿ ಹೇಳಬೇಕಾದ್ದನ್ನು ಹೇಳಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: