ಗುಡಕಾಗಾಲದ ಬಾಗ್ಲುವಿನ ಬೈನೆಬೆಲ್ಲ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ

ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ.

ಇಂಥ ಸಮುದ್ರದಂಚಿನ ಊರಲ್ಲಿರುವ ರೇಣುಕಾ ರಮಾನಂದ ಇಷ್ಟು ದಿನ ನಮಗೆ ‘ಮೀನುಪೇಟೆಯ ತಿರುವಿನಲ್ಲಿ’ ಸಿಗುತ್ತಿದ್ದರು. ಇನ್ನು ಮುಂದೆ ಪ್ರತಿ ಶುಕ್ರವಾರ ‘ಅವಧಿ’ಯ ‘ನನ್ನ ಶಾಲ್ಮಲೆ’ ಅಂಕಣದಲ್ಲಿ ಸಿಗಲಿದ್ದಾರೆ.

ಕುಮಟಾ ಬಾಡ ಗುಡಕಾಗಾಲದ ‘ಬಾಗಿಲು’ ವರ್ಷಕ್ಕೊಮ್ಮೆ ಅಂಕೋಲೆಯ ಆ ಮನೆಗೆ ಬರುತ್ತಾನಾದರೆ ಕಣ್ಣುಕಪ್ಪಿಗೇ ಎರಡುಮೂರು ಕಿಮೀ ಬೆಟ್ಟದಲ್ಲಿ ನಡೆದು, ನಂತರ ಕತ್ರಿಯಿಂದ ಮತ್ಯಾವುದೋ ಟೆಂಪೋವನ್ನೋ ಗೂಡ್ಸ್ ರಿಕ್ಷಾವನ್ನೋ ಹಿಡಿದು, ಅವನ ಮಕ್ಕಳು ಮರಿ ಕಟ್ಟಿದ ಮುತ್ತುಗದ ಊಟದೆದಲೆ, ಸಿಗಿದು ಒಣಗಿಸಿದ ಉಪ್ಪಾಗೆ, ಅರ್ಧಚೀಲ ಗೇರುಬೀಜ, ಬಾಳೆಗೊನೆ ಮುಂತಾದವುಗಳನ್ನು ಕುಮಟಾ ಪೇಟೆಯ ಶೇಣ್ವಿಯವರಿದ್ದಲ್ಲಿ ಮಾರಿ ಬರಬೇಕು..

ಅವನ ಜೊತೆಗಿದ್ದ ಹದಿಹರೆಯದ ಗಂಡುಮಕ್ಕಳಿಬ್ಬರು ಮಧ್ಯಾಹ್ನದೊತ್ತಿಗೆ ದನಕರಗಳಿಗೆ ದಾನಿ, ಹುರುಳಿ ಹಿಟ್ಟು, ಮನೆಗೆ ಬೇಕಾದ ಸಾಮಾನು ಕೊಂಡು ವಾಪಸ್ಸು ಹೊರಟ ಮೇಲೆ.. ತಂದ ಬುತ್ತಿಯನ್ನು ಪಾಡಾದ ಎಲ್ಲಾದರೂ ಕುಳಿತು ಉಂಡು ‘ಬಾಗಿಲು’ ಬೇರೆಯೇ ಕಟ್ಟಿ ತಂದಮೂರ್ನಾಲ್ಕು ಕೊಳಗ ವಾಟೆಹುಳಿ, ಉದ್ದಿನಕಾಳು, ಮುರುಗಲ ಹುಳಿಯೊಂದಿಗೆ ಅಂಕೋಲೆಯ ಟೆಂಪೋ ಹತ್ತುತ್ತಾನೆ.

ಮನೆಯಲ್ಲಿದ್ದರೆ ಕಚ್ಚೆ, ಎಲ್ಲಾದರು ಹೊರಟರೆ ಅಡ್ಡ ಚೌಕಳಿ ಮುಂಡು, ತಲೆಗೊಂದು ಎಣ್ಣೆಗಣಕು ಪಂಚೆಯ ಪಾವಡಾ ಸುತ್ತುವ  ಬಾಗಿಲು ಬದುಕಿನಲ್ಲಿ ಎಂದೂ ಬೇಕಾರ ಮೇಸ್ತನಾಗಿ ತಿರುಗಿದ್ದಿಲ್ಲ.. ಅವನಿಗೆ ಇಪ್ಪತ್ತು ಮುಗಿದು ಇಪ್ಪತ್ತೊಂದನೆಯ ವಯಸ್ಸು ಬಿದ್ದಾಗ ಸದಾ ಕರಕರೆ ಇರುವ ‘ಬಾಡ’ದ ಮನೆ ಸಾಕಾಗಿ ಹೋಗಿ ಅಪ್ಪ ಅವ್ವಿ ಇಲ್ಲದ ಅಣ್ಣತಮ್ಮಂದಿರೇ ಸದಾ ಕಚ್ಚಾಡುವ ಅಲ್ಲಿಂದ ಕಳಚಿಕೊಂಡು ಕಾಗಾಲದಿಂದ ಸುಮಾರು ಒಳಗೆ ದೊಡ್ಡ ಬೆಟ್ಟದ ಹಳ್ಳದಂಚಿಗೆ ಹೋಗಿ ಎಂಟು ದಿನ ಜಿದ್ದಿಗೆ ಬಿದ್ದವನಂತೆ ಕಾಚು ಮಣ್ಣು ಕಲಸಿ  ಗೋಡೆಯೆಬ್ಬಿಸಿ, ಬೆಟ್ಟದ ತುಂಬ ಬೇಕಾಬಿಟ್ಟಿ ಇದ್ದ ಒಣಗಳಗಳನ್ನೂ..

ಬೈನೆ ಎಲೆಯನ್ನೂ ಹೊದಿಸಿ ಐದು ಮಾರು ಉದ್ದಗಲದ ಕೋಣೆಯ ಒಂದು ಮನೆ ಮಾಡಿಕೊಂಡು ಯಾರ ರಗಳೆಯೂ ಬೇಡ ಅಂತ ಇದ್ದುಬಿಟ್ಟಿದ್ದ.. ಬರುವಾಗ ಅವನ ಜೊತೆಗೆ ಬಂದವು ನಾಲ್ಕು ಬೆಂಕಿಪಟ್ನ, ಎರಡು ಅಲ್ಯೂಮಿನಿಯಂ ಬೋಗುಣಿ ಮತ್ತು ಒಂದು ನಿಪ್ಪೋ ಬ್ಯಾಟರಿ. ಒಂದು ತಾಮ್ರದ ಕೊಡ.. ಅಷ್ಟೇ.. ಇದು ಮೂವತ್ತು ವರ್ಷದ ಹಿಂದೆ ಅವನು ಹೇಳಿದ ಮತ್ತೂ ಮೂವತ್ತು ವರ್ಷದ ಹಿಂದಿನ ಕಥೆ..

ಅದೇ ವರ್ಷ ನಲವತ್ತು ವರ್ಷಕ್ಕೊಮ್ಮೆ ಹೂಬಿಡುವ ಬಿದಿರು ಹೂ ಬಿಟ್ಟು ಇಡೀ ಬೆಟ್ಟದ ತುಂಬ ಬಿದಿರಕ್ಕಿ ಹಾಸಿಹೊದೆದು ಬಿದ್ದಿತ್ತು ಹಂದಿ, ಇಲಿ, ಹೆಗ್ಗಣ ಕೆಂದಳಿಲು, ನಾನಾ ಜಾತಿಯ ಪಕ್ಷಿಗಳು ಹೀಗೆ ಎಲ್ಲ ತಿಂದೂ ಬಾಕಿ ಉಳಿದ ರಾಶಿ ರಾಶಿ ಅಕ್ಕಿಯನ್ನು ಹಸನು ಮಾಡಿದ್ದೇ ಮಾಡಿದ್ದು ಆತ, ಹೊರುವಷ್ಟು ಹೊತ್ತು ದಿನವೂ ಕುಮಟೆ ಪೇಟೆಗೆ ತಂದು ಮಾರಿಯೂ ಐದಾರು ವರ್ಷ ಕುಳಿತು ತಿಂಬುವಷ್ಟು ಬಿದಿರಕ್ಕಿ ಮಾಡಿಕೊಂಡಿದ್ದ.. ಕುಮಟೆಯ ಜನ ತಾವೂ ಕಾಲ್ದಾರಿ ಸವೆಸಿ ಬಿದಿರಕ್ಕಿಗೆ ಬೆಟ್ಟಕ್ಕೆ ಬಂದು ಹೋಗುತ್ತಿದ್ದರೂ ಇವನಿರುವಷ್ಟು ದೂರ ಜೀಡು ಬೆಟ್ಟಕ್ಕೆ ಬರುತ್ತಿರಲಿಲ್ಲ ಯಾರೂ..

ಮೊದಮೊದಲು ರಾತ್ರಿ ಆನೆ, ಚಿರತೆ, ಹುಲಿ, ಹಂದಿ ಮನೆಯ ಹತ್ತಿರ ಸುಳಿವ ವಾಸನೆಗೆ, ಉಸಿರುಬಿಟ್ಟು ಮೂಸುವ ಅವಾಜಿಗೆ ಒಳಗೊಳಗೆ ನಡುಕ ಬರುತ್ತಿದ್ದರೂ ಅವೆಂದೂ ಬಾಗ್ಲುವಿಗೆ ಅಂತಹ ತೊಂದರೆಯನ್ನೇನೂ ಕೊಟ್ಟವುಗಳಲ್ಲ.. ಬೆಂಕಿಯೊಂದು ಸದಾ ಜೊತೆಗೇ ಇತ್ತಲ್ಲ..

ಅರಣ್ಯ ಇಲಾಖೆಯ ಪಾರೆಸ್ಟರ್ರು, ಗಾರ್ಡು ಅಂದಿನ ಕಾಲಕ್ಕೆ ಇವನಿದ್ದಷ್ಟು ದೂರ ಬರುತ್ತಿರಲಿಲ್ಲವಾದರೂ ಬಂದರೂ ಏನೂ ಅಂದದ್ದು ಕಡಿಮೆ.. ಬಾಗ್ಲೂ ಮತ್ತೇನೋ.. ಹೆಂಗೀವೆ? ಎಂದೆಲ್ಲ ಕೇಳಿ ಅವನು ಕೊಡುವ ನೆಲ್ಲಿಕಾಯಿ , ಜೇನುತುಪ್ಪ, ಬೈನೆಬೆಲ್ಲ, ವಾಟೆಹುಳಿ ಮುಂತಾದವನ್ನೆಲ್ಲ ತಕ್ಕೊಂಡು ಹೋಗುತ್ತಿದ್ದರು..

‘ಕಾಲ ಮುಂದೆ ಹೆಂಗೋ ಏನೋ’ ಎಂಬುದೂ ಒಂದು ಕಾರಣವಾಗಿ ಮತ್ತು ಇವನು ಅರಣ್ಯ ಕಿರುಉತ್ಪನ್ನ ಮಾರಲು ಹೋಗುತ್ತಿದ್ದ ಶೇಣ್ವಿಯವರ ಅಂಗಡಿಯ ಬದಿಗೇ ಇರುವ ಕುಮಟೆಯ ಪೋಷ್ಟಮಾಸ್ತರರ ಮನೆಯಲ್ಲಿ ಒಂದು ಮದುವೆ ನಿಮಿತ್ತವಾಗಿ ಸಹಾಯಕ್ಕೆ ಬಂದು ಪೋಷ್ಟಮಾಸ್ತರರ ಹೆಂಡತಿಗೆ ಅರ್ಧಾಂಗವಾಯುವಿದ್ದ ಕಾರಣ ಎರಡು ವರ್ಷದಿಂದ ಇಲ್ಲೇ ಉಳಿದು ಆರೈಕೆ ಮಾಡುತ್ತಿದ್ದ ಅಂಕೋಲೆಯ ಹುಡುಗಿ ಮಂಕಾಳಿ ಆಗೀಗ ಕಣ್ಣಿಗೆ ಬಿದ್ದು ಅವಳೂ ಒಂದೆರಡು ಬಾರಿ ಇವನನ್ನು ನೋಡಿ ನಾಚಿದ ಮೇಲೆ ಬಾಗ್ಲುವಿಗೆ ಮದುವೆಯಾಗಬೇಕು ತಾನು ಅನ್ನಿಸಿಬಿಟ್ಟಿದ್ದೂ ಎರಡನೆಯ ಕಾರಣವಾಗಿ ಇಷ್ಟು ದಿನ ತಾನೊಬ್ಬ..

ಇನ್ನು ಮುಂದೆ ಹುಡುಗಿಯೊಬ್ಬಳು ತನ್ನೊಟ್ಟಿಗೆ ಈ ಅಡವಿಗೆ ಬರುತ್ತಾಳಾದರೆ ಈ ಮನೆ ಸರಿಯಾಗದು.. ಮುರಿದು ಹೊಸದು ಕಟ್ಟೂದೇಯಾ ಎಂಬ ಹುಕಿ ತಲೆಯಲ್ಲಿ ಬಂದು ಮರುದಿನದಿಂದ ಕಾರ್ಯೋನ್ಮುಖವೂ ಆಗಿತ್ತು.

ಇದುವರೆಗೆ ಬೆಟ್ಟದ ಅಳಲೆ, ಸೀಗೆಕಾಯಿ, ಅಂಟುವಾಳಕಾಯಿ, ದಾಲ್ಚಿನ್ನಿ ಎಲೆ ಮತ್ತು ಮೊಗ್ಗು, ಮುರುಗಲು , ಉಪ್ಪಾಗೆ, ಜುಮ್ಮನಕಾಯಿ, ಜೇನು, ವಾಟೆಹುಳಿ, ಎಲ್ಲ ಮಾರಿದ ದುಡ್ಡೂ ಒಂದಿಷ್ಟಿದ್ದ ಕಾರಣ ಒಂದ್ನಾಲ್ಕು ಲೋಡು ಮುರಕಲ್ಲು ತರಿಸಿ, ಅದನ್ನು ಸುಮಾರು ದೂರ ಕಾಲು ಹಾದಿಯಲ್ಲಿ ಹೊತ್ತು ಕಲ್ಲು ಕಂಬದ ಎರಡುಪಕ್ಕೆಯ ಮನೆ ಕಟ್ಟಿ, ಎಡ ಬಲ ಮುಂದೆ ಹಿಂದೆ ಅಂತ ಪಡವಿ ಎಬ್ಬಿಸಿಒಳ್ಳೆ ಕಟ್ಟಿಗೆ ಹಾಕಿ ಹೆಂಚಿನ ಮಾಡನ್ನೂ ಮಾಡಿಕೊಂಡು ಮನೆ ಸುತ್ತ ಒಂದೆಕರೆ ಜಾಗ ಒಳಗು ಮಾಡಿ ಸುತ್ತ ಬೇಲಿನೂ ಹಾಕ್ಕೊಂಡ ಬಾಗ್ಲು..

ಇದಿಷ್ಟಾಗುವವರೆಗೆ ಒಂದೆರಡು ವರ್ಷದಲ್ಲಿ ಇವನಂಥವರೇ ನಾಕು ಜನ ಬಾಗ್ಲು ಮನೆಗೆ ಓ ಅಷ್ಟು ದೂರದಲ್ಲಿ ತಾವೂ ಇವನಂತೇ ಬಂದು ಉಳಿಯಲು ಶುರು ಮಾಡಿದ್ದರು.. ಪೋಷ್ಟಮಾಸ್ತರರು ಮಂಕಾಳಿಯ ಅಪ್ಪ ಅವ್ವಿಯನ್ನು ಕರೆದು ಮಾತುಕಥೆಯಾಡಿ ‘ಶಾಂತಿಕಾ ಪರಮೇಶ್ವರಿ’ಯಲ್ಲಿ ತಾವೇ ಖುದ್ದು ನಿಂತು ಬಂಗಾರ ಎಲ್ಲ ಹಾಕಿ ಬಾಗ್ಲು-ಮಂಕಾಳಿಯ ಮದುವೆ ಮಾಡಿಕೊಟ್ಟರು.

ಭಲೇ ಕೆಲಸಗಾರ್ತಿಯೂ ಆಗಿದ್ದ ಮಂಕಾಳಿ ಮನೆಗೆ ಬಂದ ಮೇಲೆ ಬಾಗ್ಲುವಿಗೆ ಹೊಸ ಹುರುಪು ಬಂದಿತ್ತು.. ದೂರ ದೂರ ಹತ್ತಾರು ಮನೆಗಳೂ ಆಗಿ ಬೆಂಕಿ ಹೊಡ್ತಲವೂ ರಾತ್ರಿ ದಿನಾ ಉರಿದು ; ಕಾಡುಪ್ರಾಣಿಗಳೂ ಈಗ ದೂರಾಗಿದ್ದವು.. ಮನೆಗೆರಡು ನಾಯಿಗಳಾಗಿ ಬೆನ್ನಿಗೆ ಬಿದ್ದ ಬಂಟರಂತೆ ಇದ್ದು ಭಯವೂ ಕಡಿಮೆಯಾಗಿತ್ತು.

ಎರಡೆತ್ತು ಸಾಕಿಹರಿವ ಬೆಟ್ಟದ ಹಳ್ಳದಾಚೆ ಮೂರೆಕರೆ ಬಯಲು ಒಳಗು ಮಾಡಿ ಒಂದು ವರ್ಷ ಜಾಗ ಹಣಿದು, ಕಲ್ಲು ತೆಗೆದು ಮೆದು ಮಾಡಿ ಎರಡೆಕರೆಯಲ್ಲಿ ಭತ್ತ, ಶೇಂಗಾ, ರಾಗಿ ಬೆಳೆದರು, ಮತ್ತೊಂದೆಕರೆಯಲ್ಲಿ ತೆಂಗು ಅಡಿಕೆ.. ಎರಡು ವರ್ಷ ಅಷ್ಟಕ್ಕಷ್ಟೇ ಆಗಿದ್ದ ಗದ್ದೆ ಮೂರನೇ ವರ್ಷ ಮಣಿದಿತ್ತು. ಮಾಳ ಹಾಕಿ, ಬೆಂಕಿ ಒಟ್ಟಿ , ಕಣ್ಣಿಗೆ ಎಣ್ಣೆಬಿಟ್ಟುಕೊಂಡು ಕಾದ ಕಾರಣವೂ ಸೇರಿ ಉತ್ತಮ ಬೆಳೆಯೇ ಬಂದಿತ್ತು. ಬೆಟ್ಟದಲ್ಲಿ ಬೇಕಷ್ಟು ಆಹಾರವಿದ್ದ ಕಾರಣಕ್ಕೋ ಏನೋ ಆಗ ಕಾಡುಪ್ರಾಣಿಗಳೂ ಅಷ್ಟೇನು ಉಡಿಬಿದ್ದು ಬೆಳೆಗಳಿಗೆ ಕಾಟಕೊಡುತ್ತಿರಲಿಲ್ಲ..

ಉಳಿದ ಸಮಯದಲ್ಲಿ ಗಂಡ ಹೆಂಡತಿ ಕಾಡುತುಂಬ ರಾಶಿರಾಶಿಯಾಗಿದ್ದ ಬೈನೆ ಮರದ ಉಪಯೋಗವನ್ನು ಸಮಾ ತಕ್ಕೊಳ್ಳುತ್ತಿದ್ದರು. ಅದರ ಎಲೆಯ ನಾರಿನಿಂದ ಹಗ್ಗ ಹೊಸೆಯುತ್ತಿದ್ದರು.. ಹೂತೆನೆ ಮೂಡಿ ಅರಳುವ ಸಮಯಕ್ಕೆ ಅದನ್ನು ಅಷ್ಟಷ್ಟು ದೂರದಲ್ಲಿ ಅಡ್ಡಕೊಯ್ದು ಪ್ರತಿದಿನ ನೀರಾ ಇಳಿಸುತ್ತಿದ್ದ ಬಾಗ್ಲು . ಕಳಿತರೆ ಹೆಂಡ ಅದು.. ಮನೆಯ ಉಪಯೋಗಕ್ಕೆ ಅಥವಾ ಅರಣ್ಯ ಇಲಾಖೆಯವರು ಬಂದರೆ ಎಂದು ಬೈನೆ ಶೇಂದಿ ಒಂದೆರಡು ಲೀಟರ್ ಇಟ್ಟುಕೊಳ್ಳುತ್ತಿದ್ದರು ಬಿಟ್ರೆ ಉಳಿದ ಎಲ್ಲವನ್ನೂ ಕುದಿಸಿ ಬಲು ರುಚಿಯಾದ ಗಟ್ಟಿ ಬೆಲ್ಲ ಮಾಡುತ್ತಿದ್ದಳು ಮಂಕಾಳಿ.. ವಾರಕ್ಕೊಮ್ಮೆ ಕುಮಟೆಗೆ ಹೋಗಿ ಈ ಬೆಲ್ಲ ಮಾರುವುದರ ಜೊತೆ ಮರದ ಕಾಂಡದೊಳಗಿನ ಹಿಟ್ಟನ್ನೂ ಮಾರಲು ಒಯ್ಯುತ್ತಿದ್ದರು..

ಹೂವು ಆದ ಮೇಲೆ ಬಗಿನೆ ಮರದ ಆಯಸ್ಸು ಮುಗಿದ ಹಾಗೆ…. ಆಗ ಅದನ್ನು ಅಡ್ಡ ಸೀಳಿದರೆ ಒಳಗೆ ಮೈದಾದಂತಹ ಹಿಟ್ಟು ಸಿಗುತ್ತದೆ. ಇದು ಮರ ಕಾದಿಟ್ಟುಕೊಂಡ ಪಿಷ್ಟ.. ಇದನ್ನೆಲ್ಲ ಬರಗಿ ತೆಗೆದು ಸಂಗ್ರಹಿಸಿ ಅಂಗಡಿಗೆ ಕೊಟ್ಟರೆ ಅದು ನಂತರ ಸಂಸ್ಕರಿಸಲ್ಪಟ್ಟು ಶಿಶು ಆಹಾರಕ್ಕೋ , ಐಸ್ಕ್ರೀಮಿಗೋ ಬಳಕೆಯಾಗಲು ಮುಂಬೈ ಊರಿಗೆ ಹೋಗಿ ಅಲ್ಲಿಂದ ಹೊರದೇಶಕ್ಕೆ ರಪ್ತಾಗಿತ್ತಿತ್ತಂತೆ.. ಇಲ್ಲೂ ಕಾಡುವಾಸಿಗಳೆಲ್ಲ ಇದರ ‘ಮಣ್ಣಿ’ ಮಾಡುವ ಪದ್ಧತಿ ಇತ್ತೀಚಿನವರೆಗೂ ಇತ್ತು..

ಹಿಟ್ಟು ತೋಡಿದ ಮೇಲೆ ಉಳಿದ ದೋಣಿಯಂತಹ ಕಾಂಡವನ್ನು ಗಂಡಹೆಂಡ್ತಿ ಗದ್ದೆ ತೋಟಕ್ಕೆ ನೀರು ಹಾಯಿಸಲು ಕಾಲುವೆಯಾಗಿ ಬಳಸುತ್ತಿದ್ದರು. ಮೊಳದುದ್ದದ ಗೋಲ ಕಾಂಡ ಕತ್ತರಿಸಿ ತಿರುಳು ತೆಗೆದು ಅಲ್ಲಲ್ಲಿ ಹಲಗೆ ಮುಚ್ಚಿ ಇಟ್ಟು ಜೇನು ಸಾಕಣೆ ಕೂಡ ಮಾಡುತ್ತಿದ್ದರು..

ಬಾಗ್ಲುವಿಗೆ ಮೂರು ಮಕ್ಕಳು.. ಎರಡು ಗಂಡು ಒಂದು ಹೆಣ್ಣು.. ಮಗಳನ್ನು ಹದಿನೆಂಟನೇ ವಯಸ್ಸಿಗೆ ಧಾರೇಶ್ವರಕ್ಕೆ ಮದುವೆ ಮಾಡಿಕೊಟ್ಟಿದ್ದ.. ಆರಂಭದಲ್ಲಿ ಹೇಳಿದ್ದೆನಲ್ಲ ಬಾಗ್ಲು ಅಂಕೋಲೆಯ “ಆ ಮನೆಗೆ” ಬರುತ್ತಾನೆ ಅಂತ ಅದು ನಮ್ಮದೇ ಮನೆ.. ನನಗಾಗ ಹತ್ತುಹನ್ನೆರಡು ವರ್ಷ ವಯಸ್ಸು..

ಆಗಲೇ ಅಪ್ಪ ಅರಣ್ಯ ಅತಿಕ್ರಮಣದಾರರ “ಕೇವಲ ಮೂರು ಎಕರೆಯೊಳಗಿನ ಜಾಗ ಸಕ್ರಮ ಮಾಡುವ” ಇಲಾಖೆಯ ಸುತ್ತೋಲೆಗೆ ತಕ್ಕಂತೆ ಬಡವರಿಗೆ ಅತಿ ಕಡಿಮೆ ದರದಲ್ಲಿ ಫಾರೆಸ್ಟ್ ಇಲಾಖೆಗೆ ಅರ್ಜಿ ಅದೂ ಇದೂ ಬರೆದುಕೊಡುವುದರಲ್ಲಿ ಹೆಸರಾಗಿದ್ದರು.. ಬಾಗ್ಲುವೂ ಒಮ್ಮೆ ಈ ಕಾರಣಕ್ಕಾಗಿ ಮನೆ ಕರ ತುಂಬಿದ ಪಾವ್ತಿಯೆಲ್ಲ ಹಿಡಿದುಕೊಂಡು ಹುಡುಕಿಕೊಂಡು ನಮ್ಮನೆಗೆ ಬಂದವನು ಕಪಟವಿಲ್ಲದ ಮಾತು ವ್ಯಕ್ತಿತ್ವದ ಕಾರಣಕ್ಕೆ ಹತ್ತಿರವಾಗಿದ್ದ..

ಬರುವಾಗ ಒಂದು ಕೋಳಿಹೇಂಟೆಯನ್ನೋ.. ಹತ್ತು ಮೊಟ್ಟೆಯನ್ನೋ ಅಥವಾ ಒಂದು ಬಾಳೆಗೊನೆಯನ್ನೋ ಹಿಡಿದು ಬರುತ್ತಿದ್ದ ಬಾಗ್ಲು ಈ ಕಾರಣಕ್ಕಾಗಿ ಅವ್ವನ ಮೆಚ್ಚುಗೆಯನ್ನೂ ಗಳಿಸಿದ್ದ.. 

ತದನಂತರದ ವರ್ಷಗಳಲ್ಲಿ ಹುಳಿ, ಉದ್ದಿನಕಾಳು ಇಂತಿಷ್ಟು ಕೊಳಗ ತರುವುದು.. ಇದ್ದರೆ ಜೇನುತುಪ್ಪ ,ಬೈನೆಬೆಲ್ಲವನ್ನೂ ಸ್ವಲ್ಪ ತಾ… ಎಂದು ಅಪ್ಪ “ಬಾಗ್ಲು ಪಟಗಾರ “(ತಂದೆಯ ಹೆಸರು ಮರೆತಿದೆ) ಎಂಬ ಹೆಸರಿನಲ್ಲಿ ಪೋಷ್ಟ್ ಕಾರ್ಡು ಬರೆದು ಹಾಕುತ್ತಿದ್ದ.. ಅದಾದ ವಾರದಲ್ಲಿ ತಲೆಗೆ ಪೊಟ್ಲೆ ಹೊತ್ತು ಅವನು ಹಾಜರ್…

ಬೆಟ್ಟದ ಕಷ್ಟ ಸುಖದ ಕಥೆ ಹೇಳುತ್ತ ಅವನು ಮತ್ತೆ ಅಪ್ಪ ಗೇಣು ಅಂತರದಲ್ಲಿ ಕಂಬಳಿ ಹಾಸಿ ತಡರಾತ್ರಿಯವರೆಗೂ ಕಾಡಕಥೆ ಹಾಡುತ್ತ ಮಲಗುತ್ತಿದ್ದರು ನಾನು ಬಾಯಿತೆರೆದು ಬಾಗ್ಲುವಿನ ಮಾತು ಕೇಳುವುದು ಬಿಟ್ಟು ಇನ್ನೇನೂ ಮಾಡುತ್ತಿರಲಿಲ್ಲ ಅವನು ಇರುವಷ್ಟು ಹೊತ್ತು.. ಆದಿನ “ಓದು”” ಬರೆ ” ಎಂದು ಹೇಳಿಸಿಕೊಳ್ಳುವುದರಿಂದಲೂ ನನಗೆ ವಿನಾಯಿತಿ ಸಿಗುತ್ತಿತ್ತು..

ಅವನು ಬಂದ ದಿನ ಅವ್ವ ಗೂಡಿನ ಕೋಳಿ ಕೊಯ್ಯುತ್ತಿದ್ದಳು, ಹೊಸಪಂಚೆ ಟ್ರಂಕಿನಿಂದ ತೆಗೆದು ಅಕ್ಕಿಹಿಟ್ಟು ತೆಂಗಿನಕಾಯಿ ಸುಳಿ ಕಲಿಸಿ ಹಂಚಿನರೊಟ್ಟಿ ಮಾಡುತ್ತಿದ್ದಳು. ಅಪ್ಪ ಒತ್ತಾಯಿಸಿ ಅವನು ತಂದ ಸಾಮಗ್ರಿಗಳಿಗೆ ಹತ್ತು ರೂಪಾಯಿ ಹೆಚ್ಚಿಗೆಯೇ ಕೊಡುತ್ತಿದ್ದ. ಬಾಗ್ಲುವಿನ ಸಹಜ ರಸವತ್ತಿನ ಬಾಯಲ್ಲಿ ನನ್ನ ಕನಸಿನ ಕಾಡುಬೆಳೆಯುತ್ತಿತ್ತು..

ಬೈನೆ ಮರ ಆಕಾಶದೆತ್ತರಕ್ಕೆ ಬೆಳೆದು ಗರಿ ಆಡಿಸುತ್ತಿತ್ತು, ಕಾಡುಕೋಳಿ, ಹಂದಿ, ಚಿರತೆ ಆನೆಗಳೆಲ್ಲ ಅಲ್ಲಿ ಸರಸರ ಓಡಾಡುತ್ತಿದ್ದವು.. ಹಂದಿ ಷಿಕಾರಿಯ ಈಡು ಢಂ ಅಂದಂಗಾಗ್ತಿತ್ತು.. ಈ ಅಚ್ಚೊತ್ತುವ ರೂಪದಲ್ಲಿ ಪರಿಸರ ಸಂಬಂಧಿ ಪುಟ್ಟ ಕಥೆಯೋ ಕವಿತೆಯೋ ನನ್ನೊಳಗೆ ಮೊಳೆಯುತ್ತ, ಬೆಳೆಯುತ್ತ, ಮರಿಹಾಕುತ್ತ ಹೋಗಲು ಬಾಗ್ಲುವಿನ ಕಾಡಹಾಡಿಯ ನೈಜ ಸುದ್ದಿಗಳು ಅಂದೇ ಒಂದಿಷ್ಟು ನೀರು ಗೊಬ್ಬರ ಹಾಕಿ ನನ್ನನ್ನು ಜತನ ಮಾಡುತ್ತಿದ್ದವು.

ಅಂಥಾ ತೊಂದರೆಯ ಹೊರತು ಗಂಡ ಹೆಂಡ್ತಿ ಇಬ್ಬರು ಹಸಿ ಮರವನ್ನು ಎಂದೂ ಹಿಂಸಿಸಿದವರಲ್ಲ.. ನಂತರದ ಕೆಲವರ್ಷಗಳಲ್ಲಿ ಅರಣ್ಯ ಇಲಾಖೆಯ ಕೆಲ ಸಿಬ್ಬಂದಿಗಳು ಎಷ್ಟು ಕೊಟ್ರೂ ಸಾಕಾಗದ ಅತ್ಯಾಶೆಯ ಕಾರಣಕ್ಕೆ ಪೀಡಿಸುವುದನ್ನೂ, ಊರುಕೇರಿಯ ಈಗಿನ ತಲೆಮಾರಿನ ಹುಡುಗರೆಲ್ಲ ಬೆಟ್ಟಕ್ಕೆ ದಾಳಿ ಮಾಡಿ ನೆಲ್ಲಿ, ಅಂಟುವಾಳ, ದಾಲ್ಚಿನ್ನಿ, ಮಾವಿನ ಮರದ ಟೊಂಗೆಗಳನ್ನೇ ಕಡಿದು ನೆಲಕ್ಕೆ ಬೀಳಿಸಿ ಅವೈಜ್ಞಾನಿಕವಾಗಿ ಉತ್ಪನ್ನ ಕೊಯ್ಯುವ ಬಗ್ಗೆ ಬಾಗ್ಲು ಬಲು ಖೇದದಿಂದ ಹೇಳುತ್ತಿದ್ದ, ಮುಂದಿನ ಪೀಳಿಗೆಗೆ ಅಥವಾ ಮುಂದಿನ ವರ್ಷಕ್ಕೆ ಪೊರೆವ ಮರವುಳಿಯಲಿ ಎಂಬ ಯಾವ ಕಾಳಜಿಯೂ ಅವರಿಗಿರಲಿಲ್ಲ.

ಹೀಗೆ ಕಡಿದ ಕಾರಣಕ್ಕೆ ಗುತ್ತಿಗೆದಾರರಿಗೆ ಮತ್ತು ಅರಣ್ಯವಾಸಿಗಳಿಗೆ ಕಡೆಕಡೆಗೆ ಸರ್ಕಾರ ಗಿಡಮರಗಳ ಕಾಳಜಿ, ಬೆಳವಣಿಗೆ, ಪುನರುತ್ಪತ್ತಿಯ ಕಾರಣಕ್ಕಾಗಿ ಕಿರು ಅರಣ್ಯ ಉತ್ಪನ್ನಗಳ ಸಂಗ್ರಹದ ಪರವಾನಿಗೆಯನ್ನು ಇತ್ತೀಚೆಗೆ ನಿಲ್ಲಿಸಿತು.. ನಿರಂತರ ಹಿಂಸಾ ಕೊಯ್ಲು ನಡೆದ ಕಾರಣಕ್ಕೆ ಹಣ್ಣುಹಂಪಲು ಮರಗಳೆಲ್ಲ ಪಶ್ಚಿಮ ಘಟ್ಟದ ಅರಣ್ಯದಲ್ಲಿ ನಾಶವೇ ಆಗಿಹೋಗಿ ಬೆಟ್ಟದ ಜೀವಿಗಳೆಲ್ಲ ಊರ ಕಡೆ ದಾಳಿಮಾಡುವುದು ನಂತರದ ದಿನಗಳಲ್ಲಿ ಮಾಮೂಲಾಯ್ತು.

ದುಡ್ಡಿನ ಲೋಭಕ್ಕೆ ಬಿದ್ದ ಸರ್ಕಾರ ಬಹುರಾಷ್ಟ್ರೀಯ ಕಂಪನಿಗಳ ಆಲ್ಕೋಹಾಲ್ ಮದ್ಯಕ್ಕೆ ಮಾರುಕಟ್ಟೆ ಒದಗಿಸಲು ಹೋಗಿ ಶೇಂದಿ ತೆಗೆಯೋದು ಕಾನೂನುಬಾಹಿರವೆಂದು ಘೋಷಿಸಿದ ಮೇಲೆ, ಬೈನೆ ಮರಕ್ಕೆ ಕಟ್ಟಿದ ಮಡಿಕೆ ಮತ್ಮತ್ತೆ ಒಡೆದು ಹಾಕಿದ ಮೇಲೆ ಜನ ಹಿಂದೆ ಸರಿಯ ತೊಡಗಿದರು.. ಯಾರಿಗೆ ಬೇಕು ಇಲ್ಲದ ರಗಳೆ ಎಂದು ಕಷ್ಟವಿಲ್ಲದ ಸಲೀಸು ದುಡಿಮೆಯ ಕಡೆ ಮನುಜ ಒಲಿದುಕೊಂಡ ಮೇಲೆ ತಾಜಾ ನೀರಾವೂ ಇಲ್ಲ ಈಗ, ಬೈನೆ ಬೆಲ್ಲವೂ ಇಲ್ಲ..

ಇದಾಗಿ ಮೂವತ್ತು ವರ್ಷ, ಏಳೆಂಟು ವರ್ಷ ನಿಯಮಿತವಾಗಿದ್ದ ಬಾಗ್ಲು ಕಡೆ ಕಡೆಗೆ ಕಾರ್ಡು ಹಾಕಿದರೂ ಬರಲಿಲ್ಲ. ಆರೋಗ್ಯ ವಿಚಾರಿಸಿ ಮತ್ತೆ ನಾಲ್ಕು ಕಾರ್ಡು ಮೇಲಿಂದ ಮೇಲೆ ಬರೆದು ಹಾಕಿದರೂ ಉತ್ತರ ಬರಲಿಲ್ಲ.. ಫೋನ್ ಎಂಬುದು ಆಗ ಇರಲೇ ಇಲ್ಲ.. ವಿದ್ಯುತ್ ಸೌಲಭ್ಯವೂ ಇರದ ಕಾಡಹಾಡಿಯ ಮನೆಯ ಕಥೆ ತದನಂತರದಲ್ಲಿ ನಮಗೆ ತಿಳಿಯಲಿಲ್ಲ.. ನೀವು ಕಂಡಿರಾ ನೀವು ಕಂಡಿರಾ ಎಂದು ಕೇಳಿದರೂ ಬಾಗ್ಲು ನಮಗೆ ಒದಗಲಿಲ್ಲ.. ಅಪ್ಪ ಇಲ್ಲ ಈಗ.. ಬಹುಶಃ ಬಾಗ್ಲುವೂ ಇದ್ದುದು ಸುಳ್ಳು..

ಆದರೆ ಅವನು ಕಟ್ಟಿಕೊಟ್ಟ ಚಿತ್ರಣ ಒಳಗೆ ಬೆಳೆಯುತ್ತಿದೆ. ಹರಡಿ ಸುವಿಶಾಲ ಆಲದ ಹಾಗೆ ವಿಸ್ತರಿಸುತ್ತಿದೆ… ಪೈಪಿನ ಹಾಗಿನ ಹೊಸ ಎಲೆಯನ್ನು ಆಕಾಶಕ್ಕೆ ಚಾಚಿ ‘ಇನ್ನೇನು ಅರಳುವೆ’ ಎಂಬ ಬೈನೆ ಮರಗಳು ಕುಮಟೆಗೆ ಹೋಗುವ ಹಾದಿಯಲ್ಲಿ ಕಂಡರೆ ಅವನ ನೆನಪಾಗುತ್ತದೆ.. ವರ್ಷಕ್ಕೊಮ್ಮೆ ಶೇಣ್ವಿಯವರಲ್ಲಿ ಹೋಗಿ ವರ್ಷದ ಮೀನುಸಾರಿಗಾಗಿ ನಾಲ್ಕೈದು ಕೇಜಿ ವಾಟೆಹುಳಿ ತರುವಾಗ ಬಾಗ್ಲು ಅಲ್ಲೆಲ್ಲೋ ಮೂಲೆಗೆ ಕುಳಿತು ನನ್ನನ್ನು ‘ತಂಗೀ… ಪಾಪೂ…’ ಎಂದು ಕರೆದಂತಾಗ್ತದೆ..

ಒಳಗೆ ಸುಳಿವಾತ್ಮರು ಮತ್ಯಾರು.‌..? ಹೀಗೆ ಕಥೆ ಕವಿತೆ ಕಾರಂಜಿಗಳನ್ನು ಒಳಗೆ ನೆಟ್ಟು ಬೆಳೆಸಿದ  ಬಾಡ ಗುಡಕಾಗಾಲದ ‘ಬಾಗಿಲು’ ಮುಂತಾದ ಮತ್ತಿತರರು….

October 30, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

12 ಪ್ರತಿಕ್ರಿಯೆಗಳು

  1. ಗೀತಾ ಎನ್ ಸ್ವಾಮಿ

    Strong vocabulary ರೇಣುಕಾ ಮೇಡಂ. ತುಂಬಾ ಒಳ್ಳೆಯ ಲೇಖನ. ಪ್ರತಿ ಸಲ ನಿಮ್ಮ ಅಂಕಣ ಓದಿದಾಗಲೂ ಅಂಕೋಲಾ ಗೆ ಬಂದು ಅಲ್ಲಿನ ವಾಸ್ತವಗಳಿಗೆ ನೇರವಾಗಿ ಮುಖಾಮುಖಿ ಆಗ್ಬೇಕು ಅನ್ನೋ ಸೋಜಿಗ ಮೂಡಿಸುವ ಭಾಷೆ ನಿಮ್ಮದು. ಮತ್ತೆ ಅಭಿನಂದನೆಗಳು ಮೇಡಂ” ಬಾಳು ಪಯಣ” ಕ್ಕೆ ರಜತ ಗಳಿಸಿದ್ದಕ್ಕೆ.

    ಪ್ರತಿಕ್ರಿಯೆ
    • Renuka Ramanand

      ಖುಷಿ..ಉತ್ತಮವಾಗಿ ಬರೆಯುವ ನೀವು ನನ್ನನ್ನು ಓದುತ್ತಿರುವುದೇ ನನಗೆ ಹೆಮ್ಮೆ..ಅಂಕೋಲಾಕ್ಕೆ ಎಂದು ಬರುವಿರಿ ನೀವು ಹೇಳಿ

      ಪ್ರತಿಕ್ರಿಯೆ
  2. ಕಿರಣ ಭಟ್

    ಬಾಲ್ಯದಲ್ಲೇ ನಮ್ಮ ಒಳ ಹೊಕ್ಕು ಅರಿವಿನ ಬಾಗಿಲು ತೆಗೆದ ಇಂಥ ಬಾಗ್ಲು ಗಳಿಗೆ ನಮನ.
    ಚೆಂದ ಬರೀತಿದೀಯ ತಂಗ್ಯವ್ವ.

    ಪ್ರತಿಕ್ರಿಯೆ
  3. ಕಲಾ ಭಾಗ್ವತ್

    ‘ಹಿಂಸಾ ಕೊಯ್ಲು’ ಪದ ಬಳಕೆ ಇಷ್ಟ ಆಯ್ತು.ಬಾಗ್ಲು ನ ಚೆಂದವಾಗಿ ತೆರೆದಿಟ್ಟ ಬಾಗ್ಲೊಳಗೆ ಹೊಕ್ಕು ಹೊರಬಂದೆ. ಏನೇನೆಲ್ಲಾ ತಿಂದೆ!ಶಾಲ್ಮಲೆ..

    ಪ್ರತಿಕ್ರಿಯೆ
  4. ವಾಸುದೇವ ಶರ್ಮಾ

    ನಮ್ಮನ್ನೆಲ್ಲಾ ಕಾಡ ಬದುಕಿನೊಳಗೆ ಎಳೆದುಕೊಂಡಿತು ಲೇಖನ. ಮೂರು ದಶಕಗಳ ಹಿಂದೆ ಸಹಪಾಠಿಗಳಾಗಿದ್ದ ನಿರಂಜನ ವಾನಳ್ಳಿ, ಶ್ರೀಧರ ದೀಕ್ಷಿತ, ಕಮಲಾಕರ ಭಟ್ಟ, ಇವರ ಆಹ್ವಾನದ ಮೇರೆಗೆ ಅವರ ಮನೆಗಳಲ್ಲಿ ಮಳೆಗಾಲ, ಚಳಿಗಾಲ, ಬೇಸಿಗೆ ಕಾಲದ ಅನುಭವ, ಕಾಡು ಬೆಟ್ಟದ ಸುತ್ತಾಟ, ಅಲ್ಲಿನ ಜನರ ಸಹವಾಸ ಅನುಭವಿಸಿದ್ದೆ. ಈ ಬರಹ ಕೈ ಹಿಡಿದು ಮತ್ತೆ ಅಲ್ಲೆಲ್ಲಾ ಸುತ್ತಾಡಿಸಿತು. ಮತ್ತೆ ಓಡಬೇಕು ಅಲ್ಲೆಲ್ಲಾ ಅನಿಸಿತು.

    ಪ್ರತಿಕ್ರಿಯೆ
  5. Shwetha nayak

    Your writing is becoming better and better or you are rekindling my love for native!!! Thank you so much..
    For few moments I will be roaming around with you in these stories…

    ಪ್ರತಿಕ್ರಿಯೆ
  6. Renuka Ramanand

    ಕಿರಣಣ್ಣ..ನಾಟಕದ ಜಾನಪದ ಸೊಗಡಿರುವ ನಿಮ್ಮಿಂದ ನನ್ನ ಲೇಖನ ಓದಿಸಿಕೊಂಡಿತು ಎಂಬುದು ಖುಷಿ

    ಪ್ರತಿಕ್ರಿಯೆ
  7. Renuka Ramanand

    ಕಲಾ… ಪ್ರೀತಿ ನಿಮಗೆ..ನಿಮ್ಮೆಲ್ಲರ ಓದು ನನಗೆ ಶಕ್ತಿ

    ಪ್ರತಿಕ್ರಿಯೆ
  8. Renuka Ramanand

    ಸರ್..ಮತ್ತೊಮ್ಮೆ ಬನ್ನಿ ಅಂಕೋಲೆಗೆ.. ಈಗಲೂ ಓಡಾಡಬಹುದು..ನಿಮ್ಮ ಓದಿಗೆ ಖುಷಿಯಾಯ್ತು ಸರ್

    ಪ್ರತಿಕ್ರಿಯೆ
  9. Renuka Ramanand

    ಥ್ಯಾಂಕ್ಯೂ ಶ್ವೇತಾ…ಪ್ರೀತಿ ನಿಮಗೆ

    ಪ್ರತಿಕ್ರಿಯೆ
  10. Gopal trasi

    ಕಾದಂಬರಿಯೊಂದರ ಮೊದಲೆರಡು ಅಧ್ಯಾಯ ಓದಿದಂತಾಯಿತು…. ಅಭಿನಂದನೆಗಳು.

    ಪ್ರತಿಕ್ರಿಯೆ
  11. vivek Betkuli

    ಕರಾವಳಿಯ ಆಗಿನ ಕಾಲದ ನೈಜ ಚಿತ್ರಣವನ್ನು ನಿಮ್ಮ ಬರಹದಲ್ಲಿ ಸಂದರವಾಗಿ ಅದೇ ಭಾಷೆಯಲ್ಮಲಿ ಮನ ಮುಟ್ಟುವಂತೆ ತಿಳಿಸಿರುವಿರಿ. ಧನ್ಯವಾದಗಳು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: