ಆ ನಟಿಗಾಗಿ ಹುಡುಕಾಟ

ಮಂಸೋರೆ ಈಗ ಕನ್ನಡ ಚಿತ್ರ ರಂಗದ ಮಹತ್ವದ ಹೆಸರು. ತಮ್ಮ ಚೊಚ್ಚಲ ಚಿತ್ರ ‘ಹರಿವು’ ಮೂಲಕ ರಾಷ್ಟ್ರದ ಗಮನ ಸೆಳೆದ ಇವರು ‘ನಾತಿಚರಾಮಿ’ ಮೂಲಕ ತಮ್ಮನ್ನು ಯಶಸ್ವಿಯಾಗಿ ಸ್ಥಾಪಿಸಿಕೊಂಡರು.

ಮೂರನೆಯ ಸಿನೆಮಾವನ್ನು ನಿರ್ದೇಶಿಸಿ ಕೊರೊನ ಕಾರಣದಿಂದಾಗಿ ಸಿಕ್ಕ ಬಿಡುವಿನಲ್ಲಿ ‘ಅವಧಿ’ಆಹ್ವಾನದ ಮೇರೆಗೆ ನಾತಿಚರಾಮಿಯ ನೆನಪನ್ನು ಮೆಲುಕು ಹಾಕಿದ್ದಾರೆ.

ಇವರ ಮೊದಲ ಚಿತ್ರ ‘ಹರಿವು’ ನಿರ್ಮಾಣಗೊಂಡ ಕಥನವೂ ‘ಅವಧಿ’ಯಲ್ಲಿಯೇ ಪ್ರಕಟವಾಗಿತ್ತು.

। ಕಳೆದ ವಾರದಿಂದ ।

ಮೊದಲ ಭೇಟಿಯಲ್ಲೇ ನಿರ್ಮಾಪಕರು ‘ಓಕೆ’ ಆಗಿದ್ದು, ಸಿಕ್ಕಾಪಟ್ಟೆ ಎನರ್ಜಿ ಬಂದಿತ್ತು, ಮಾರನೆಯ ದಿನದಿಂದಲೇ ಮುಖ್ಯಪಾತ್ರಕ್ಕೆ ಬೇಕಾದ ನಟಿಯರ ಹುಡುಕಾಟ ಶುರುವಾಯಿತು.

ನಟಿ ಎಂದರೆ ಮೇಕಪ್ ಮಾಡ್ಸಿರೋ ಫೋಟೋ ತೆಗೆಸಿ, ಫೋಟೋಶಾಪಲ್ಲಿ ಇನ್ನೂ ಸ್ವಲ್ಪ ಬೆಳ್ಳಗೆ, ಚರ್ಮವನ್ನು ನುಣ್ಣಗೆ ಪಾಲಿಶ್ ಮಾಡ್ಸಿರೋ ರೀತಿಯಲ್ಲಿ ಕಾಣಿಸೋ ಹೆಣ್ಣಿನ ‘body’` ಇರುವ ‘ಹೀರೋಯಿನ್’ ಅಲ್ಲಾ ಈ ಸಿನೆಮಾಗೆ ಬೇಕಾಗಿದ್ದಿದು.

ನಮ್ಮ ಸಿನೆಮಾ ಕಥೆಯ ಗೌರಿಯ ಬಗ್ಗೆ ನನಗಿದ್ದ ಕಲ್ಪನೆಗೆ ಸೂಕ್ತವಾಗಿ ಹೊಂದುವಂತಹ ಮುಖ, ಕಣ್ಣು, ಜೊತೆಗೆ ನಟನೆಯಲ್ಲಿ ಪ್ರಬುದ್ದತೆಯನ್ನು ಹೊಂದಿರುವಂತಹ ನಟಿ. ಅರ್ಬನೈಸಡ್ ಕನ್ನಡ ಮಾತನಾಡಲು ಬರಬೇಕಿತ್ತು. ನಟಿ ಬೇಕಾಗಿದ್ದಾರೆ ಎಂದು ಫೇಸ್ ಬುಕ್ಕಲ್ಲಿ ಒಂದು ಪೋಸ್ಟ್ ಹಾಕಿದರೆ ನೂರಾರು ಹುಡುಗಿಯರ ಪೊರ್ಫೈಲ್ ಬರುತ್ತದೆ. ಆದರೆ ಆ ರೀತಿಯಲ್ಲಿ ಮುಖ್ಯ ಪಾತ್ರಕ್ಕೆ ಆಯ್ಕೆ ಮಾಡುವುದು ನನಗೆ ಕಷ್ಟದ ಕೆಲಸ. ಹಾಗೂ ಆಯ್ಕೆಯಾಗದವರಿಗೆ ಉತ್ತರಿಸಲು ನನಗೆ ಸಂಕೋಚ.

ಅಪಾರವಾದ ಕನಸುಗಳೊಂದಿಗೆ ತಮ್ಮ ಅದೃಷ್ಠ ಪರೀಕ್ಷೆ ಮಾಡಲು ಅಪಾರವಾದ ಕನಸನ್ನು ಕಣ್ಣುಗಳಲ್ಲಿ ತುಂಬಿಕೊಂಡು ಆಡಿಷನ್ಗೆ ಬರುವ ನಟಿ-ನಟರನ್ನು ಕಂಡರೆ ಪಾಪ ಅಂತ ಅನಿಸುತ್ತದೆ. ಆದರೆ ಹಾಗಂತ ಪಾತ್ರಕ್ಕೆ ಸೂಕ್ತವಾಗದವರನ್ನೆಲ್ಲಾ ಆಯ್ಕೆ ಮಾಡಲು ಸಾಧ್ಯವಾಗುವುದಿಲ್ಲವಲ್ಲಾ. ಹಾಗಾಗಿ ಈ ಆಡಿಷನ್ ಪ್ರಕ್ರಿಯೆಗಳಿಂದ ನಾನು ದೂರ.

ತೀರಾ ಅನಿವಾರ್ಯತೆ ಎದುರಾದರೆ, ಸಹಾಯಕರಿಗೆ ಹೇಳಿ ಅವರೇ ಒಂದು ಫೈನಲ್ ಲಿಸ್ಟ್ ಮಾಡೋವರೆಗೂ ನಾನು ಅದರಲ್ಲಿ ತಲೆ ಹಾಕುವುದಿಲ್ಲ. ಈಗ ನಟಿ ಹುಡುಕಾಟದ ವಿಷಯವಾಗಿ ಸಂಧ್ಯಾ ಮೇಡಂ ಹಾಗೂ ಸಂಪತ್ ಅವರ ಜೊತೆ ಎರೆಡು ದಿನದಲ್ಲೇ ಸಾಕಷ್ಟು ಚರ್ಚೆ ಮಾಡಿ, ಅದಕ್ಕೆ ರೆಫೆರೆನ್ಸ್ ಫೋಟೋಸ್ ಎಲ್ಲಾ ಹುಡುಕಿದ ನಂತರ ಕನ್ನಡದ ಧಾರಾವಾಹಿಯಲ್ಲಿ ನಟಿಸುವ ಖ್ಯಾತ ನಟಿಯಬ್ಬರ ಬಗ್ಗೆ ಮಾಹಿತಿ ದೊರಕಿತು. ಅವರು ನನಗೆ ಪರಿಚಿತ ನಿರ್ದೇಶಕರಿಗೂ ಆತ್ಮೀಯರಾಗಿದ್ದರು. ನನಗೆ ಪರಿಚಿತ ನಿರ್ದೇಶಕರೇ ಆ ನಟಿಯ ಮೊಬೈಲ್ ಸಂಖ್ಯೆಯನ್ನು ನೀಡಿದರು.

ಹೇಗಿದ್ದರೂ ನಿರ್ಮಾಪಕರು ‘ಓಕೆ’ ಆಗಿದ್ದಾರೆ. ಈಗಿನ್ನೂ ಸೆಪ್ಟೆಂಬರ್ ತಿಂಗಳು, ಪಾತ್ರವರ್ಗ ಬೇಗ ಆಯ್ಕೆ ಆದರೆ, ಅಕ್ಟೋಬರ್ ಅಲ್ಲಿ ಚಿತ್ರೀಕರಣ ಪ್ರಾರಂಭಿಸಿ, ಡಿಸೆಂಬರ್ ಒಳಗೆ ಸಿನೆಮಾ ತಯಾರು ಮಾಡಬಹುದು ಎಂಬ ಲೆಕ್ಕಾಚಾರದಲ್ಲಿ, ಆ ಧಾರಾವಾಹಿ ನಟಿಯವರಿಗೆ ಒಂದು ವಾಟ್ಸಪ್ ಮೆಸೇಜ್ ಕಳಿಸಿದೆ.

ನಮಸ್ತೆ. ನನ್ ಹೆಸರು ಮಂಸೋರೆ. ಸಿನೆಮಾ ನಿರ್ದೇಶಕ. ನಮ್ಮ ಹೊಸ ಸಿನೆಮಾಗೆ ನಟಿಯ ಹುಡುಕಾಟದಲ್ಲಿದ್ದೇವೆ. ಇದು ನನಗೆ ಎರಡನೇ ಸಿನೆಮಾ. ಇದು ನಾಯಕಿ ಪ್ರಧಾನ ಸಿನೆಮಾ. ಈ ಸಿನೆಮಾದ ಕತೆ ಪ್ರಮುಖ ಪಾತ್ರದ ಸುತ್ತ ಹೆಣೆಯಲಾಗಿದೆ. ಈ ಪಾತ್ರದ ಹುಡುಕಾಟದಲ್ಲಿದ್ದಾಗ ಸ್ನೇಹಿತರೊಬ್ಬರು ನಿಮ್ಮ ಹೆಸರನ್ನು ಸೂಚಿಸಿದರು. ಈ ಸಲುವಾಗಿ ನಿಮ್ಮನ್ನು ಶನಿವಾರ ಅಥವಾ ಸೋಮವಾರ ಭೇಟಿಯಾಗಬಹುದಾ? ನಮ್ಮ ಸಿನೆಮಾ ಅಕ್ಟೋಬರ್ 23ರಿಂದ ಚಿತ್ರೀಕರಣ ಪ್ರಾರಂಭ ಮಾಡುವ ಯೋಜನೆ ಇದೆ.

ನಿಮ್ಮನ್ನು ಭೇಟಿ ಮಾಡುವ ಮೊದಲು ಕೆಲವೊಂದು ವಿಷಯಗಳನ್ನು ನನ್ನ ಕಡೆಯಿಂದ ಸ್ಪಷ್ಟಪಡಿಸುವುದು ಒಳಿತು ಎಂಬುದು ನನ್ನ ಅನಿಸಿಕೆ. ಅದರಿಂದ ನನ್ನ ಹಾಗೂ ನಿಮ್ಮ ಸಮಯ ಉಳಿಯುತ್ತದೆ. ಮೊದಲನೆಯದಾಗಿ ನಮ್ಮದು ಅತಿ ಕಡಿಮೆ ಬಡ್ಜೆಟ್ ನ ಸಿನೆಮಾ. ಇದರಲ್ಲಿ ತಾಂತ್ರಿಕ ಸಹಾಯಕರು , ಉಪಕರಣಗಳಿಗೆ ಹೊರತುಪಡಿಸಿ ಉಳಿದವರಿಗೆಲ್ಲ ಗೌರವಧನವಷ್ಟೇ ನೀಡಲು ಸಾಧ್ಯ.  

ನಮ್ಮ ಸಿನೆಮಾದ ಚಿತ್ರೀಕರಣದಲ್ಲಿ ನಾಯಕಿ ಅಥವಾ ಪೋಷಕ ಪಾತ್ರ ಯಾರಿಗೇ ಆಗಲಿ ವಿಶೇಷ ಸವಲತ್ತುಗಳನ್ನು ನೀಡಲು ಸಾದ್ಯವಾಗುವುದಿಲ್ಲ. ನಮ್ಮ ಬಡ್ಜೆಟ್ ನ ಬಹುತೇಕ ಭಾಗ ತಾಂತ್ರಿಕತೆ ವಿನಿಯೋಗಿಸಲಾಗುತ್ತಿದೆ. ಉತ್ತಮ ಸಿನೆಮಾ ಆಗಬೇಕೆಂದರೆ ಸಿನೆಮಾದಲ್ಲಿ ಕಥೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕೆಂಬುದು ನನ್ನ ಸಿದ್ದಾಂತ. ಹಾಗಾಗಿ ಚಿತ್ರೀಕರಣಕ್ಕೆ ತೊಡಕಾಗದಿರಲು ವಿಶೇಷ ಸವಲತ್ತುಗಳಿಗೆ ಅವಕಾಶವಿಲ್ಲ. ಆದರೆ ಮೂಲ ಅವಶ್ಯಕತೆಗಳಿಗೆ ತೊಂದರೆಯಾಗುವುದಿಲ್ಲ.

ಈ ಸಿನೆಮಾದ ಕತೆ ಚಿಕ್ಕ ಕ್ಯಾನ್ವಾಸ್ ಆದರು ಅಪಾರವಾದ ಶ್ರಮದ ಅವಶ್ಯಕತೆ ಇದೆ ಹಾಗೂಅದನ್ನು ನೆರವೇರಿಸಲು ಇಡೀ ತಂಡ ಒಗ್ಗಟ್ಟಾಗಿ ಪರಸ್ಪರ ಸಹಕಾರದಿಂದ ಪೂರ್ಣಗೊಳಿಸಬೇಕು. ಹಾಗಾಗಿ ನಮ್ಮ ಸಿನೆಮಾಗೆ ಆಯ್ಕೆಯಾಗುವ ನಟಿ, ಬರೀ ನಾಯಕಿಯಾಗಿ ಬರದೇ ನಮ್ಮ ತಂಡದ ಒಬ್ಬ ಸದಸ್ಯೆಯಾಗಿ ಚಿತ್ರೀಕರಣದ ಪೂರ್ಣ ಅವಧಿಗೆ ನಮ್ಮೊಂದಿಗಿರಬೇಕು. ಚಿತ್ರದಲ್ಲಿ ನಾಯಕಿ ಪಾತ್ರವೇ ಪ್ರಮುಖವಾದ್ದರಿಂದ ಅವರ ಸಹಕಾರ ಹೆಚ್ಚೇ ಬೇಕಿರುತ್ತದೆ.

ತುಂಬಾ ಟೈಟ್ ಶೆಡ್ಯೂಲಲ್ಲಿ ಕೆಲಸ ಮಾಡಬೇಕಿರುವುದರಿಂದ ಚಿತ್ರಕರಣಕ್ಕೂ ಮೊದಲು ಸಂಭಾಷಣೆ, ದೇಹಭಾಷೆಯ ವಿಷಯದಲ್ಲಿ ಪಾತ್ರದ ಪೂರ್ವ ತಯಾರಿಗೆ ಒಂದು ವಾರದ ಕಾಲ ಬರಬೇಕಿರುತ್ತದೆ. ಇಷ್ಟೆಲ್ಲಾ ಬೇಡಿಕೆ ಹಾಗು ಸಮಯ ಮೀಸಲಿಡಲು ನಾವು ಸಂಭಾವನೆ ನೀಡಲಾಗುತ್ತಿಲ್ಲ, ಗೌರವಧನ ಯಾವುದಕ್ಕೂ ಸಾಲುವುದಿಲ್ಲ ಎಂಬ ಅರಿವು ಖಂಡಿತವಾಗಿಯೂ ನಮಗಿದೆ. ಆದರೆ ನಮಗೆ ಬೇರೆ ವಿದಿಯಿಲ್ಲ. ಅನಿವಾರ್ಯ ಕೂಡ.

ನಿಮಗೆ ಹಣ, ಹೆಸರು ಸಿಗುವ ಸಾಕಷ್ಟು ಅವಕಾಶಗಳು ಮುಂದೆ ಸಿಗಬಹುದು. ಆದರೆ ಒಬ್ಬ ನಟಿಯಾಗಿ ಪಾತ್ರದ ಮೂಲಕ ಪರಿಪೂರ್ಣತೆಯ ಸಮಾಧಾನದ ಜೊತೆಗೆ ಸವಾಲೆನಿಸುವ ಪಾತ್ರವಿರುವ ಅತಿ ವಿರಳ ಕತೆಗಳಲ್ಲಿ ನಮ್ಮದೂ ಒಂದು ಎಂಬ ಖಾತ್ರಿ ಮಾತ್ರ ನಾನು ನೀಡಬಲ್ಲೆ. ನಮ್ಮ ಸಿನೆಮಾ ಕತೆ ಇಂದಿನ ನಗರದಲ್ಲಿ ಉನ್ನತ ಹುದ್ದೆಯಲ್ಲಿರುವ ಹರೆಯದ ವಿಧವೆ ಎದುರಿಸುವ ವಯಕ್ತಿಕ ಸಮಸ್ಯೆಯ ಸುತ್ತ ನಡೆಯುತ್ತದೆ.

ನಮ್ಮ  limitationsನ ಕಾರಣದಿಂದಾಗಿ ನೀವು ಒಪ್ಪುವುದಿಲ್ಲವೇನೊ ಎಂಬ ಅಳುಕಿನಿಂದ ಹಾಗೂ ಸುಖಾಸುಮ್ಮನೆ ನಿಮ್ಮ ಅಮೂಲ್ಯವಾದ ಸಮಯ ಹಾಳು ಮಾಡುವ ಬದಲು ಈ ವಿಷಯಗಳನ್ನು ಸ್ಪಷ್ಟಪಡಿಸುವುದು ಒಳಿತು ಎಂದು ಭಾವಿಸಿ ಈ ದೀರ್ಘ ಸಂದೇಶ ಕಳಿಸುತ್ತಿರುವೆ. ಇದೆಲ್ಲವಕ್ಕು ನಿಮಗೆ ಒಪ್ಪಿಗೆಯಾಗಿ ನಮ್ಮೊಂದಿಗೆ ಈ ಕನಸಿನ ಯೋಜನೆಗೆ ಒಪ್ಪಿಗೆ ಸಲ್ಲಿಸುವುದಾದರೆ ನಿಮ್ಮನ್ನು ಭೇಟಿಯಾಗಿ ಪೂರ್ಣ ಕತೆಯನ್ನು ನಿಮಗೆ ಹೇಳುತ್ತೇನೆ.

ನಾವು ಸಿನೆಮಾನ ಮುಂದಿನ ತಿಂಗಳು ಅಂದರೆ ಅಕ್ಟೋಬರ್ 23 ರಿಂದ ಪ್ರಾರಂಬಿಸಲು ಯೋಜಿಸಿದ್ದೇವೆ. ಈ ಸಿನೆಮಾವನ್ನು ಇದೇ ವರ್ಷ ಡಿಸೆಂಬರ್ 31ರ ಒಳಗೆ ಸೆನ್ಸಾರ್ ಮಾಡಿಸಿ, ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಗೆ ಹಾಗೂ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಿಗೆ ಕಳಿಸುವ ಯೋಜನೆ ನಮ್ಮದು 20 ದಿನಗಳ ಕಾಲ ಚಿತ್ರೀಕರಣವಿದ್ದು ಒಂದೇ ಹಂತದಲ್ಲಿ ಮುಗಿಸುವ ಯೋಜನೆ ಇದೆ. ಇಷ್ಟು ದೀರ್ಘ ಸಂದೇಶಕ್ಕೆ ನೀವು ಆಗುತ್ತದೆ ಇಲ್ಲಾ ಆಗಲ್ಲ ಎಂದು ಒಂದೇ ಪದದಲ್ಲಿ ಹೇಳಿದರೆ ಸಾಕು. ವಿವರಣೆ ಏನೂ ಬೇಡ.

ನಿಮ್ಮ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿ

ಧನ್ಯವಾದಗಳೊಂದಿಗೆ.

ಮಂಸೋರೆ.

ಇದು ಅಂದು ಕಳಿಸಿದ ಯಥಾವತ್ತು ಸಂದೇಶ. ಕಳಿಸುವುದಕ್ಕೇನೊ ಕಳಿಸಿಬಿಟ್ಟೆ, ಆದರೆ ಆ ನಂತರ ನಾನು ಕಳಿಸಿದ ಮೆಸೇಜನ್ನು ನಾನೇ ಓದಿದಾಗ ತುಂಬಾ harsh ಆಯಿತೇನೋ ಅಂತ ಅನಿಸಿತು. ರಿಪ್ಲೇ ಬರುತ್ತೋ ಇಲ್ಲವೋ ಎಂಬ ಸಂದೇಹವೂ ಬಂತು, ಆದರೆ ಮರುದಿನವೇ ರಿಪ್ಲೇ ಮಾಡಿದ ನಟಿ, ಇಷ್ಟು ಧೀರ್ಘವಾದ ಮೆಸೇಜಿಗೆ ಒಂದೇ ಪದದಲ್ಲಿ ಉತ್ತರ ನೀಡಲು ಸಾಧ್ಯವಿಲ್ಲಾ, ನೀವು ಬಿಡುವಿದ್ದಾಗ ಹೇಳಿ ಕಾಲ್ ಮಾಡಿ ಮಾತಾಡ್ತೀನಿ ಅಂತ ಹೇಳಿದರು.

ಬಹುಶಃ ಪೇಮೆಂಟ್ ಬಗ್ಗೆ ಮಾತಾಡಿ ಆಮೇಲೆ ಒಪ್ಪಿಗೆ ಕೊಡಬಹುದೇನೋ ಅಂತ ನಾನು ಅಂದುಕೊಂಡೆ.

। ಮುಂದಿನ ವಾರಕ್ಕೆ ।

‍ಲೇಖಕರು ಮಂಸೋರೆ

October 30, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: