ಗುಂಡುರಾವ್ ದೇಸಾಯಿ ಮಕ್ಕಳ ಕಾದಂಬರಿ – ಆಟ ಆಡೋಣ ಬಾರೊ?

ಕವಿ ಗುಂಡುರಾವ್ ದೇಸಾಯಿ ಮೂಲತಃ ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದವರು. ಎಂ.ಎ, ಬಿ.ಇಡಿ ಪದವೀಧರರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರು.

ವೃತ್ತಿಯಲ್ಲಿ ಪ್ರೌಢ ಶಾಲೆಯ ಕನ್ನಡ ಭಾಷಾ ಶಿಕ್ಷಕನಾನೆ ಸತ್ತಾಗ, ಸರ್ಜರಿಯ ಆ ಸುಖ, ಸಿಟಿಯೊಳಗೊಂದು ಮನೆಯ ಮಾಡಿ ಪ್ರಕಟಿತ ಲಲಿತ ಪ್ರಬಂಧಗಳು, ಡಯಟಿಂಗ ಪುರಾಣ ಹಾಸ್ಯ ಲೇಖನ ಸಂಕಲನ… ಮಕ್ಕಳಿಗಾಗಿ ಅಜ್ಜನ ಹಲ್ಲುಸೆಟ್ಟು (ಮಕ್ಕಳ‌ ಕವಿತೆಗಳ ಸಂಕಲನ) ಮಾಸಂಗಿ (ಮಕ್ಕಳು ಬರೆದ ಕತೆಗಳ ಸಂಪಾದನೆ) ಮಕ್ಕಳೇನು ಸಣ್ಣವರಲ್ಲ (ಮಕ್ಕಳ ಕತಾ ಸಂಕಲನ) ಕೃತಿಗಳು…

ಬಹತೇಕ ನಾಡಿನ ಎಲ್ಲಾ ಪತ್ರಿಕೆಗಳಲ್ಲೂ ಲಲಿತ ಪ್ರಬಂಧ, ಹಾಸ್ಯ ಲೇಖನ, ಮಕ್ಕಳ‌ ಕತೆ, ಕವಿತೆ, ನಾಟಕಗಳು ಪ್ರಕಟವಾಗಿವೆ. ಅಕ್ಷರ ಸಾಹಿತ್ಯ ವೇದಿಕೆ ಸಂಚಾಲಕರಾಗಿ ಹಲವಾರು ಮಕ್ಕಳ‌ ಕಮ್ಮಟ, ರಂಗಶಿಬಿರ, ಸಾಹಿತ್ಯಿಕ‌ ಚಟುವಟಿಕೆಗಳನ್ನು ಸಂಘಟಿಸಿದ್ದಾರೆ…

8

ಮನೆಯೊಳಗೆ ಹೋಗಿ ನಿತ್ಯವೂ ಪಾಟಿ ಚೀಲವನ್ನು ಒಗೆಯುವ ಅಭ್ಯಾಸ. ನಾನು ನಿಧಾನವಾಗಿ ಬಂದು ಸೋಫಾದ ಮೇಲೆ ಇಟ್ಟಿದ್ದನ್ನು ನೋಡಿದ ಅಮ್ಮ “ಏನೊ? ಬೆಳಿಗಿನಿಂದ ಏನಾಗಿದೆ. ಅಷ್ಟ್ಯಾಕೆ ಮೆಲ್ಲಗೆ ಬರತಿದ್ದೀಯಾ? ಅಲ್ಲದ ಇವತ್ತು ಚೀಲ ಒಗೆಯದೆ ಮೆಲ್ಲಕೆ ಇಡತಿದ್ದೀಯಾ? ಏನಪ ಸಮಾಚಾರ? ಬಾರಿ ಸೂಕ್ಷ್ಮ ಆಗಿ ಬಿಟ್ಟಿ ಗುಡ ಗುಡ್” ಅಂದಳು.

“ಹಾಗೇನೂ ಇಲ್ಲಮ್ಮ” ಎಂದು ಮುಖ ತೊಳೆಯಲು ನಡೆದೆ. ಫ್ರೆಶ್ ಆಗಿ ಬಂದು ಬೂಸ್ಟ ಕುಡಿಯಲು ಕುಳಿತೆ ನನ್ನ ಸ್ಟಡಿ ಟೇಬಲ್ ಮುಂದೆ. ಅಮ್ಮನ ಮಾತಿನ ಮಧ್ಯ ಸೊಳ್ಳೆನ್ನ ಮರೆತೆ ಬಿಟ್ಟಿದ್ದೆ..ಎಲ್ಲಿ ಅಂತ ಹುಡಕಾಡತೊಡಗಿದೆ…
“ಇಲ್ಲೆ ಇದ್ದೀನಪಾ ನಿನ್ನ ಟೇಬಲ್ ಮೇಲೆ” ಎಂದು ಕೈಮಾಡಿ ಕರಿತಿತ್ತು.

“ಆರ್ ಯು ಸೇಫ್”
“ಏನು ಸೇಫೊ ಏನೋ…ಏನು ಹೊಡಿತಾರೊ ನಿಮ್ಮಪ್ಪಾ”
“ಹೇ….ನಮ್ಮಪ್ಪ ಅಂತವರಲ್ಲ..ಒಮ್ಮೆಯೂ ನನ್ನ ಮೇಲೆ ಕೈಮಾಡಿಲ್ಲ.”
“ಬಡಿಯುವುದಲ್ಲ ಗಾಡಿ ಹೊಡೆಯುವುದು..ನನ್ನ ಜೀವದಾಗ ಜೀವ ಇರಲಿಲ್ಲ”
“ಹೌದಾ?”
“ಇನ್ನೂ ಸ್ವಲ್ಪ ಹೊತ್ತು ಹಾಗೆ ಓಡಿಸಿದ್ರೆ ನನ್ನ ಕತೆ ಮುಗಿದೆ ಹೋಗಿರೋದು”
“ನಮಗೆ ಜೋಕಾಲಿಯಲ್ಲಿ ಕುಳಿತಾಗ ಆಗುತ್ತಲ್ಲ ನಿನಗೂ ಹಾಗೆ ಆಯ್ತಾ?”
“ಎಕ್ಸಾಕ್ಟಲಿ”
“ಎಷ್ಟು ಚಂದಿರುತ್ತದ?”
“ ಹೌದೌದು.. ಎಷ್ಟು ತಿರುಗಿಸದ್ರೂ ಬೀಳಲ್ಲ ಅಂತ ನಿಮಗ ಗ್ಯಾರೆಂಟಿ ಇರುತ್ತದೆ; ಆದರೆ ಇಲ್ಲಿ?” ಎಂದು ನಕ್ಕಿತು
“ಹೌದು ಸ್ವಾರಿಪಾ?”
“ಇರಲಿ..ನಾವು ನೀರಿನಲ್ಲಿ ಕುಳಿತಾಗ ಗಾಳಿ ಬೀಸಿದೊಡನೆ ನೀರಿನ ಮೇಲೆ ಜೋಕಾಲಿ ಜೀಕಿದ ತರಹ ಅತ್ತಿಂದಿತ್ತ ತೇಲತಾ ಇರತೀವಿ”
“ಹೌದು ನಾನು ನೋಡಿನಿ..ಹಾಗೆ ತೇಲಾಡೋದನ್ನ..ಆದರ ನಾವು ಕಲ್ಲು ಒಗದು ಬಂದು ಬಿಡತಿದ್ವಿ”
“ಎಷ್ಟು ಹೊಟ್ಟೆಕಿಚ್ಚಲ್ಲ..!ಅಲ್ಲಿ ಒಂದೊ೦ದು ಸೊಳ್ಳೆ ಒಂದು ಸಾರಿಗೆ ಐದುನೂರು ತತ್ತಿ ಇಟ್ಟಿರತಾವ..ನೀವು ಹಾಂಗ ಮಾಡಿದ್ರ ಎಲ್ಲಾ ಸತ್ತುಹೋಗಿಬಿಡತಾವ…” ಅಂತ ಮಾತು ಅರ್ಧಕ್ಕ ನಿಲ್ಲಿಸಿತು.


“ಅಯ್ಯೊ ಹೌದಾ..!” ಎಂದು ಅಂತಿರಬೇಕಾದ್ರೆ…
“ಸತ್ತು ಹೋಗಿರತಾವ ಅನಕೊಂಡ್ರಾ…ಹು೦..ಹೂ೦..ಮತ್ತೆ ಒಂದು ಸೊಳ್ಳೆ ಮರಿ ಹಾಕಿದ್ರ…ಮತ್ತೆ ನಮ್ಮ ವಂಶ ಮುಂದುವರಿತಾ ಇರತಾದ”
“ಹೌದಾ..!”
“ಅದೆ ನಮ್ಮ ಪವರ್” ಎಂದು ನಕ್ಕಿತು.
“ಅದು ಬಿಡು ಆವಾಗ ಏನೋ ಹೇಳುತಿದ್ದಿ…ಹಾಂ ಹೇಳು..ಈಗ ಮುಂದುವರೆಸು”
“ಇದೆ ಹೇಳುತ್ತಿದ್ದುದು..ಒಳಗೆ ನಡಿ ಹೇಳತಿನಿ..ನೀನು ನಿನ್ನಷ್ಟಕ್ಕ ನೀನು ಮಾತಾಡತಾ ಕುಳಿತರ ಏನು ಅಂದುಕೊ೦ಡಾರು?”
“ಅ೦ದ್ರ ನೀನು… ನನಗ ಅಷ್ಟ ಕಾಣಸ್ತಿಯಾ ?”
“ಅಂತದ್ದೇನು ಇಲ್ಲಪ್ಪ ನಾನು ಮ್ಯಾಜಿಕ್ ಏನೂ ಮಾಡಲ್ಲ ಎಲ್ಲರಿಗೂ ಕಾಣ್ತಿನಿ….ನೀನು ಅಷ್ಟ ನನ್ನ ಮಾತು ಕೇಳಿಸಿಕೊಳ್ಳಾವ..”
“ಹೌದಾ?’’
ನೋಡ್ತಿಯಾ ಎಂದು ಅಮ್ಮನ ಮುಗಿನ ಮೇಲೆ ಹಾರಿ ಹೋಗಿ ಕುಳಿತಿತ್ತು ಏನೇನೊ ಮಾತಾಡ ಹತ್ತಿತ್ತು
“ಅಮ್ಮ ಚಟಕ್” ಅಂತ ಮೂಗಿಗೆ ಬಡಿದು ಕೊಂಡಳು
“ಏನು ಹಾಳದ್ದು ಸೊಳ್ಳೆಗಳು ಏನೂ ಮಾಡಿದ್ರೂ ಸಾಯ್ತಿಲ್ಲ…”
“ಅಯ್ಯೊ! ಅಮ್ಮ ಕಚ್ಚಿದೆಯಲ್ಲ”
“ನಿಮಗೆ ಕಚ್ಚಿದರೆ ಏನೂ ಆಗಲ್ಲ, ಅಂತಹ ಬ್ಲಡ್ ಇರೊ ಮಂದಿ ನೀವು, ಎಲ್ಲಾ ಕತೆ ಒಳಗೆ ನಡಿ ಹೇಳತಿನಿ”
ಒಳಗೆ ಹೋಗಬೇಕೆನ್ನುವಷ್ಟರಲ್ಲಿ ರಾಘು ಮಾಮಾ ಎಂಟ್ರಿ ಕೊಟ್ಟರು. ಅವರ ಹಿಂದೆ ವಿಧು, ಪ್ರಿಯಾನೂ ಬಂದರು.

ನಮ್ಮ ಫ್ಯಾಮಿಲಿಗೂ ಅವರ ಫ್ಯಾಮಿಲಿಗೂ ಬಹಳ ನಂಟು. ಅವರು ನಮ್ಮನಿಗೆ ಬರೋದು ನಾವು ಅವರ ಮನಿಗೆ ಹೋಗೋದು ಏನೊ ಖುಷಿ. ನಾವೆಲ್ಲ ಕೂಡಿ ಮನೆ ಮುಂದೆ ಅಂಗಳದಲ್ಲಿ ಕುಂಟೆಪಿಲ್ಲೆ ಆಡತೀವಿ, ಗೋಲಿ ಆಡತಿವಿ, ಕಣ್ಣಾಮುಚ್ಚಾಲೆ ಆಡತೀವಿ.. ಒಂದ ಎರಡ..ನನಗ ಗೊತ್ತಿರೊ ಆಟವೆಲ್ಲ ಅವರಿಗೆ ಹೇಳಿಕೊಡ್ತೀನಿ. ಅವರಿಗೆ ಗಾಳಿಪಟ ಟಿ.ವಿಯಲ್ಲಿ ಮಾತ್ರ ನೋಡಿ ಗೊತ್ತಿತ್ತು. ಅಂದು ನಾನು ಮಾಡಿದ ಗಾಳಿಪಟ, ಹಾರಸೋದನ್ನ ನೋಡಿ, ನಮಗೂ ಕೊಡೊ ಎಂದು ಹೇಳಿ ತಾವು ಹಾರಿಸಿ ಖುಷಿ ಪಟ್ರು…ಅದಕೆ ಅವರಿಗೆ ನಮ್ಮ ಮನಿಗೆ ಬರಬೇಕು ಅಂದ್ರ ಬಹಳ ಇಷ್ಟ. ಮೊನ್ನೆ ಅವರಿಗೆಲ್ಲ ಸೈಕಲ್ ಹೊಡಿಯೋದು ಕಲಿಸಿದೆ. ನನ್ನ ಗೆಳೆಯರನ್ನೆಲ್ಲ ಪರಿಚಯಿಸಿದೆ. ಅವರು ಬಂದ್ರೆ ಖುಷಿ ಯಾಕಂದ್ರ ಏನಾದರೂ ಹೊರಗಿನಿಂದ ತಂದಿರತಾರ. ಅಮ್ಮನೂ ಅವರಿಗಾಗಿ ರುಚಿಯಾದ ತಿಂಡಿ ತಯಾರಸ್ತಾಳ…ಹಾಗಾಗಿ ನಾವೆಲ್ಲ ಮಕ್ಕಳು ಮಾತಾಡಿಕೊಳ್ಳೊದು ಹಾಗೆ ತಿನ್ನುಕೋತ ಸಮಯ ಹೋಗಿದ್ದ ಗೋತ್ತಾಗೊಲ್ಲ.

“ಅಯ್ಯೊ ಅವರು ಬಂದ್ರಲ್ಲ…ನಮ್ಮ ಮಾತು ಕತೆ ನೈಟು ಇಟ್ಟುಕೊಳ್ಳೊಣ್ವಾ?”
“ ಆಯ್ತು ನಾನು ರೆಸ್ಟ ಮಾಡತಿರತೀನಿ ನೀನು ಮಾತಾಡಿಸಿ ಕೊಂಡು ಬಾ”
“ಬೇಜಾರಾಯ್ತಾ?”
“ಏನೂ ಇಲ್ಲ ನಾವೇನೂ ನಾಲ್ಕು ದಿನ ಇರುವವ..ಅವರೆ ನಿಮಗೆ ಪರ್ಮೆಂಟು”
“ಹಾಗೆನ್ನಬೇಡೊ…ನೀನು ಅವರಿಗಿಂತಲೂ ಇಷ್ಟ..ಮನಿಗೆ ಬಂದಿದ್ದಾರೆ ಆಡಿ ಬರತೀನಿ”
“ಹೋಗತೀಯಾ? ಒಕೆ ಬಾಯ್” ಅಂತು

ಯಾಕೊ ಅವರು ಇಂದು ಬಂದಿದ್ದು ಇರಿಟೇಟು ಅನಿಸ್ತು. ಹಾಗೆ ಹೇಳಲು ಆಗುತ್ತದೇನು..? ಇಲ್ಲಲ…. ಅಮ್ಮ ‘ಮಾಮಾ ಮಾಮಿ’ ಬಂದಿದ್ದಾರೆAದು ಅಮ್ಮ ಹೊರಬಂದ್ಲು. ಅಪ್ಪನೂ “ನೀವು ಬಂದಿದ್ದು ಚಲೋ ಆತು ಅವಾಗಿನಿಂದ ಚಹಾಮಾಡ ಅಂತಿದ್ರೆ, ಇಕೆ ಮಾಡತಿರಲಿಲ್ಲ ಬೇಗ ಮಾಡೆ” ಎಂದ ಅಪ್ಪ.

“ಇಲ್ಲ ನಾವು ಚಹಾ ಕುಡಿಯಲ್ಲ, ಈಗತಾನೆ ಕುಡದು ಬಂದಿವ್ರಿ” ಎಂದ ಮಾಮಾ.
“ಅಯ್ಯೊ! ಹಾಗೆಂದು ನಮ್ಮ ಹೊಟ್ಟಿ ಮೇಲೆ ಕಲ್ಲು ಹಾಕಬೇಕು ಅಂತ ಮಾಡಿರೇನು? ‘ಎಸ್’ ಅಂತ ಹೇಳಿ ನಿಮ್ಮಿಂದ ನಮಗ ಒಂದು ಕಪ್ ಚಹಾ ಸಿಗುತ್ತದ..ಹಾಗೆ ಸ್ವಲ್ಪ ಹೊತ್ತು ಕೂತ್ರ ನಿಮ್ಮ ದೆಸೆಯಿಂದ ಗರಂಗರ೦ ಭಜಿ ಆದ್ರೂ ಬರತಾವ..ಹಾಗೆನ್ನಬೇಡಿ” ಎಂದು ಅಪ್ಪ ಹೇಳುತ್ತಿದ್ದ…
‘ನಡಿ ಸಮು ನಾವು ಮುಡಸಾಟ ಆಡೋಣ ಎಂದು ನಡಿ’ ಎಂದು ಇಬ್ಬರು ಕರೆದರು.. “ತಡಿರಿ ತಡಿರಿ, ಈ ಚಾಕಲೇಟು ತೆಗೆದುಕೊಳ್ಳಿ” ಎಂದು ಮಾಮಿ ಕೊಟ್ಟರು. ಎಲ್ಲರೂ ಒಂದೊ೦ದು ಹಿಡಿದುಕೊಂಡು ಓಡಿದೆವು. ‘ಹೊಸ ಆಟ ಇವತ್ತು ಹೇಳಿ ಕೊಡೊ’ ಎಂದಾಗ ಮನಸ್ಸಿರದಿದ್ದರೂ ಮೊದಲು ಅವರಿಗೆ ಆಟ ಹೇಳಿಕೊಟ್ಟು ಸೊಳ್ಳೆ ಬಗ್ಗೆ ಮಾತಾಡೊಣ ಅನ್ನಿಸಿ, ದುಂಡಗೆ ಕೂಡಲು ಹೇಳಿ..ಎಲ್ಲರನ್ನೂ ಕೈಗಳೆರಡನ್ನು ಡಬ್ಬ ಹಾಕಲು ಹೇಳಿ ಆಟದ ನಿಯಮ ತಿಳಿಸಿ. ಯಾವ ಕೈಗೆ ಹಾಡು ಕೊನೆಯಾಗುತ್ತೊ ಅವರು ಮೊದಲು ಗೆದ್ದಂಗೆ ಎಂದು ತಿಳಿಸಿ “ಹತ್ತಿಕಟ್ಟಿಗಿ ಬಿತ್ತಿ ಕಟ್ಟಿಗೆ ಭಾನನೂರು ಬಸನೂರು ಕೈ ಕೈ ಧೂಳಗೈ ಪಂಚಮ್ ಪಗಡೆಮ್ ನೆಲಕಡಿ ಹನುಮ ದಾತರ ಧರ್ಮ ತಿಪ್ಪಿ ಮೇಲೆ ಕೋಳಿ ರಗುತ ಬೋಳಿ ರಕ್ತ ಕೋಳಿ ಸುಂಟೆ ಸಕ್ಕರೆ” ಎಂದು ಆಟ ಮುಗಿದಾಗ ಅದು ಬೆರಳು ವಿಧುನ ಕೈ ಮೇಲಿತ್ತು.

‘ಸಕ್ಕರಿ’ ಎಂದ್ಲು ವಿಧು. “ಹೇಹೇ….. ಹೇಹೇ….. ನಾನು ಮೊದಲು ಗೆದ್ದೆ” ಎಂದು ಚಪ್ಪಾಳೆ ಹೊಡೆದಾಗ “ಇನ್ನೂ ಗೆದ್ದಿಲ್ಲ ಅದ ಆಟ” ಎಂದು ಹೇಳಿ ಆಟ ಮುಂದುವರೆಸಿ ನಾಲ್ಕೈದು ಸಾರಿ ‘ಹತ್ತಿಕಟ್ಟಿಗಿ ಬಿತ್ತಿಕಟ್ಟಿಗಿ’ ಅಂದಾಗ ಎಲ್ಲರ ಕೈಗಳು ಹಿಂದೆ ಹೋದವು. ನಾನು ಕೇಳುವ ಪ್ರಶ್ನೆಗಳಿಗೆ ತಿಳಿದ ಹಾಗೆ ಉತ್ತರ ಕೊಡಬೇಕೆಂದು ಹೇಳಿ ಪ್ರಶ್ನೆ ಮಾಡತಾ ಹೋದೆ.

ಕೈ ಕೈ ಎಲ್ಲಗೋದವು ?
ಬಾಗಲ ಸಂದ್ಯಾಗ ಹೋದವು
ಸಂಧಿ ಏನು ಕೊಡ್ತು?
ಕಟ್ಟಿಗೆ ಕೊಡ್ತು
ಕಟ್ಟಿಗೆ ಏನು ಮಾಡಿದೆ?
ಒಲ್ಯಾಗ ಇಟ್ಟೆ
ಒಲಿ ಏನು ಕೊಟ್ಟಿತು?
ಬೂದಿ ಕೊಟ್ಟಿತು
ಬೂದಿ ಏನು ಮಾಡಿದಿ?
ತಿಪ್ಪಿಗೆ ಹಾಕಿದೆ
ತಿಪ್ಪಿ ಏನು ಕೊಟ್ಟಿತು?
ಗೊಬ್ಬರ ಕೊಡ್ತಿ
ಗೊಬ್ಬರ ಏನು ಮಾಡಿದೆ?
ಹೊಲಕ್ಕ ಹಾಕಿದೆ
ಹೊಲ ಏನು ಕೊಡ್ತು
ಜೋಳ ಕೊಟ್ತು?
ಜೋಳ ಏನು ಮಾಡದಿ
ಚಲೊ ಜೋಳ ನಾ ತಿಂದೆ ಕೆಟ್ಟ ಜೋಳ ಕುಂಬಾರಗೆ ಕೊಟ್ಟೆ?
ಕುಂಬಾರೇನು ಕೊಟ್ಟ?
ಗಡಿಗಿ ಕೊಟ್ಟ
ಗಡಿಗೆ ಏನ್ ಮಾಡ್ದಿ?
ಭಾವ್ಯಾಗ ಬಿಟ್ಟೆ
ಭಾವಿ ಏನು ಕೊಡ್ತು?
ನೀರು ಕೊಡ್ತು
ನೀರ ಏನು ಮಾಡಿದಿ?
ಗಿಡಕ್ಕ ಹಾಕಿದ
ಗಿಡ ಏನು ಕೊಡ್ತು?
ಹೂವು ಕೊಡತು
ಹೂವು ಏನ್ ಮಾಡ್ದೆ?
ದೇವ್ರಿಗೆ ಏರಿಸಿದೆ
ದೇವರೆನು ಕೊಟ್ಟ?
ಒಳ್ಳೆ ವಿದ್ಯಾಬುದ್ಧಿ ಕೊಟ್ಟ
“ಹಾಂ…ಎಷ್ಟು ಚೆಂದಾಗಿ ಉತ್ತರ ಕೊಟ್ರಿ..ಚಂದಿತ್ತಾ ಆಟ” ಎಂದೆ.
“ಅಯ್ಯಿ ಅಯ್ಯಿ..ಹೌದು ಹೌದು ಎಷ್ಟು ಚಂದ ಆಟ….ಎಷ್ಟು ಚಂದದ ಆಟ” ಎಂದು ಇಬ್ಬರು ಕುಣದ್ರು….
“ಇನ್ನೊಂದು ಆಟ ಹೇಳಿಕೊಡೊ” ಎಂದ್ಲು ಪ್ರಿಯ
“ಇಲ್ಲ ಯಾಕೊ ಬ್ಯಾಸರ ಬಂದಿದೆ”
ಅದೆ “ರತ್ತೊ ರತ್ತೊ ರಾಯನ ಮಗಳೆ ಬಿತ್ತೊ ಬಿತ್ತೊ ಭೀಮನ ಮಗಳೆ ಹದಿನಾರೆಮ್ಮ ಕಾಯಲಾರೆ ಬೈಟ ಗುಬ್ಬಿ ಬಾಳೆ ಕಂಬ ಕುಕ್ಕರ ಬಸವಿ ಕರ‍್ರ ಬಸವಿ’ ಆಟ ಆಡೋಣ ಬಾರೊ”
“ಬೇಡ್ರೆ…..”
“ಕಣ್ಣೆ ಮುಚ್ಚೆ ಕಾಡೆ ಗೂಡೆ ಉದ್ದಿನ ಮೂಟೆ ಉರುಳೆ ಹೋಯ್ತು ನಮ್ಮಯ ಹಕ್ಕಿ ಬಿಟ್ಟೆ ಬಿಟ್ಟೆ ನಿಮ್ಮಯ ಹಕ್ಕಿ ಹಿಡಿದುಕೊಳ್ಳಿ” ಅಂತ ಕಲಿಸಿದ್ದೆಲ್ಲ ಕಣ್ಣು ಮುಚ್ಚಾಟ ‘ಅವರ ಬಿಟ್ಟು ಇರ‍್ಯಾರು? ಆಟನಾದ್ರೂ ಆಡೋಣ ಬಾರೊ ಸಮು”
“ಬ್ಯಾಡ್ರೆ ಇವತ್ತು ಮೂಡೆ ಇಲ್ಲ..” ಎಂದು ನಾನು ವಿಧಾತ್ರಿಗೆ “ನಿನಗೆ ಪ್ರಾಣಿ ಪಕ್ಷಿ ಮಾತಾಡೋದು ಕೇಳಿದ್ದಿಯಾ?” ಎಂದೆ
“ಹೋ ಕೇಳಿನಿ” ಎಂದ್ಲು
ನನಗೆ ಆಶ್ಚರ್ಯ… ನಾನೇ ಹಿಂದಿರುವೆ! ಇವರೆಲ್ಲ ಅವುಗಳೊಂದಿಗೆ ಮಾತಾಡಿದ್ದಾರೆ, ಎಂದು ನಾನು ಕುತೂಹಲ ಕಳದುಕೊಂಡೆ . ನಾನೇ ಫಸ್ಟ ಅಂತ ತಿಳಿದಿದ್ದೆ…ಮುಂದುವರೆದು
“ಎಲ್ಲಿ ?” ಎಂದೆ.
“ಅದೆ, ಚಿಂಟು ಟಿವಿಲಿ” ಎಂದ್ಲು.
“ಅಲ್ಲೆ, ನಿಜವಾಗಲೂ ಅವುಗಳೊಂದಿಗೆ ಮಾತಾಡಿದ್ರಾ “
“ಹಾಂ! ನಾನು ಮಾತಾಡಿನಿ” ಎಂದ್ಲು ಪ್ರಿಯಾ.
“ನೀಟಿu ಯಾವಾಗ ಮಾತಾಡಿದ್ದೀಯಾ ನನಗೆ ಗೊತ್ತಿಲ್ಲದೆ?”
“ಬೆಕ್ಕಿನ ಜೊತೆಮ್ಯಾಂವ್ ಮ್ಯಾವಂ…ನಾಯಿಯ ಜೊತೆ ‘ಬೌ ಬೌ ವೌ’, ಕಾಗೆ ಜೊತೆ ‘ಕಾ..ಕಾ…ಕಾ ‘ಎಂದು ಮಾತಾಡಲ್ವೇನೊ?”
“ಅಯ್ಯೊ ಅದನ್ನ ಮಾತಾಡೋದು ಅಂತಾರ ಏನೂ?”
“ಮತ್ತೆ! ನಾನು ಹಾಗೆ ಮಾತಾಡೋದು. ನನ್ನ ಗೊಂಬಿ ಜತಿನೂ ಮಾತಾಡತೀನಿ, ಅದಕ್ಕೆ ಹೆರಳುಹಾಕತೀನಿ, ಹಲ್ಲು ತಿಕ್ಕಸ್ತೀನಿ, ಸ್ನಾನ ಮಾಡಸ್ತಿನಿ. ಬಟ್ಟೆ ತೊಡಸ್ತಿನಿ, ಊಟಮಾಡಸ್ತಿನಿ, ಚೌ ಚೌ ಬಡಿದು ಮಲಗಸ್ತೀನಿ” ಎಂದ್ಲು ಪ್ರಿಯಾ.
“ಅಯ್ಯೊ ಅದಲ್ಲರೆ…ಬೇರೆ ಇದೆ…ನಿಮಗೊಂದು ಮಜಾ ಹೇಳಲಾ? ಯಾರಿಗೂ ಹೇಳಬಾರದು?”
“ಏನೂ…?” ಎಂದ್ಲು ಪ್ರಿಯಾ
“ನನ್ನ ಪ್ರೆಂಡು ಒಬ್ಬನಿದ್ದಾನಾ?”
“ನಮಗೂ ಜಗ್ಗಿ ಜನ ಇದ್ದಾರ” ಎಂದ್ಲು ವಿಧು
“ಅವರಲ್ಲ…”
“ಮಾತಾಡೋ ಪುಟ್ಟ ಗೆಳೆಯ”
“ಯಾರು…?
“ಸೊಳ್ಳೆ”
“ಸೊಳ್ಳೇ! ಸೊಳ್ಳೆ! ಸೊಳ್ಳೆ!”
“ಹಾಂ ಹಾಂ ಹಾಂ…”
“ಸೊಳ್ಳೆ ಎಲ್ಲಾದರೂ ಮಾತಾಡತಾವಾ ಸೊಳ್ಳೆ ಎಲ್ಲಾದರೂ ಮಾತಾಡತಾವಾ..ಹಿಹಿಹಿ..ಹಿ ಹಿಹಿ” ಎಂದ್ಲು ವಿಧು.
“ಹೌದು ಹೌದು ಹೌದು” ಎಂದೆ.
“ಇಲ್ಲ ಇಲ್ಲ ಇಲ್ಲ..ಸಾಧ್ಯನ ಇಲ್ಲ ನಮ್ಮ ಶಾಲೆಯಲ್ಲಿ ಹೇಳಿಯೇ ಇಲ್ಲ” ಎಂದ್ಲು ಪ್ರಿಯಾ
“ಕಾಗೆ ನರಿ ಕತೆ, ಮೊಸುಳೆ ಕತೆ, ಬೆಕ್ಕು ಇಲಿ ಕತೆ ಶಾಲೆಯಲ್ಲಿ ಕೇಳಿಲ್ವಾ?”
“ಹೌದು ಕೇಳಿನಿ..ಮತ್ತೆ ಸರ್ ಹಿಂಗ೦ದಿದ್ರು ಅಲ್ಲ..ತಡಿ ಕೇಳಿ ಬರತೀನಿ” ಎಂದು “ಅಮ್ಮ ಅಪ್ಪಾ ಸೊಳ್ಳೆ ಮಾತಾಡತಾವಾ” ಎಂದು ಕೇಳೊಕೆ ಹೋದ್ಲು ವಿಧು.
ಗುಟ್ಟು ರಟ್ಟಾಗುತೆಂದು ಭಯ ಆಯ್ತು..
“ಹೇ…ಹೇ… ಸಮು ಜೋಕು ಮಾಡುತ್ತಿದ್ದಾನೆ. ಅವುಗಳಿಗೆಲ್ಲ ಮಾತಾಡೋಕೆ ಬರುತ್ತೆ?” ಎಂದ ಮಾಮಾ.
ನನಗ ಧೈರ್ಯ ಬಂತು.
“ಜೋಕು ಮಾಡಿದ್ಯಾ?” ಎಂದಳು ವಿಧು.
“ಹಾಂ.. ಸೊಳ್ಳೆ ಎಲ್ಲಾದ್ರೂ ಮಾತಾಡತಾವೇನು?” ಎಂದು.
“ಆಟ ಆಡೋಣ” ಎಂದಳು ಪ್ರಿಯಾ.
ಯಾಕೊ ಆಡಲು ಮನಸ್ಸಾಗಲಿಲ್ಲ. ಎಲ್ಲಾ ಸೊಳ್ಳೆ ಕಡೆ ಇತ್ತು ಧ್ಯಾನ.
“ಯಾಕ ಸಮು ಇವತ್ತು ಆಡೊ ಇಂಟರೆಸ್ಟ್ ತೋರಿಸುತ್ತಿಲ್ಲವಲ್ಲ”
“ಹೌದು ಆಗಿಂದ ನೋಡತಾ ಇದ್ದಿನಿ”
“ಹೌದು ಇವತ್ತು ಯಾಕೋ ಮೂಡೆ ಇಲ್ರೆ…”
“ಹಾಗಾದರೆ ಚೆಸ್, ಕೆರಮ್ ಬೋರ್ಡ ಆಡೋಣ”
“ಇಲ್ಲ ಸ್ಟಡಿ ರೂಮಿಗೆ ಹೋಗೋಣ ಬನ್ನಿ” ಎಂದು ಕರೆದುಕೊಂಡು ಹೋದೆ
“ಅಲ್ಯಾಕೆ ಹೋಗೋದು. ಅಪ್ಪ ಅಮ್ಮ ಬರೀ ಓದು ಬರೀ ಬರೆ, ಬರಿ ಓದು ಬರಿ ಬರೆ ಅಂತ ಯಾವಾಗಲೂ ಗಂಟು ಬೀಳ್ತಾರೆ. ಈಗ ನೀನು ಓದೋಣ ಅಂತಿಯ ಅಲ್ಲ” ಎಂದ್ಲು ಪ್ರಿಯ.
“ಬೇರೆ ಹೇಳತಿನಿ ರ‍್ರಿ ಬೇಗ” ಎಂದು ಒಳ ಹೋದೆ. ಅವರಿಬ್ಬರೂ ಹಿಂದೆ ಬಂದರು.
“ಯಾರಿಗೂ ಹೇಳಬಾರದು ನಿಮಗೊಂದು ಮಜಾ ತೋರಸ್ತೀನಿ”
“ಏನು… ತಿನ್ನೊದಾ? ನನಗೆ ಡಬಲ್ ಬೇಕು?” ಎಂದಳು ವಿಧು.
“ಬರಿ ತಿನ್ನೊದ್ರ ಬಗ್ಗೆನ ಚಿಂತೆಯಲ್ಲ ನಿನಗೆ” ಎಂದಳು ಪ್ರಿಯ.
“ಇರಲಿ ಬನ್ನಿ ಅಲ್ಲ.. ಅದೆ ಮಾತಾಡುವ ಸೊಳ್ಳೆ ಬಗ್ಗೆ”
“ಹೌದಾ!ತೋರಿಸು”
“ಸೊಳ್ಳೆ ….ಸೊಳ್ಳೆ…. ಸೊಳ್ಳೆ ಫ್ರೆಂಡು ಎಲ್ಲಿದ್ದೀಯಾ?”
“…….”
“ಮಾತಾಡು ಸೊಳ್ಳೆ ಮಾತಾಡು ಸೊಳ್ಳೆ”
ಸೊಳ್ಳೆ ಮಾತಾಡಲಿಲ್ಲ
“ಅಯ್ಯೊ ನನ್ನ ಫ್ರೆಂಡ್ಸ್ ಬಂದಿದ್ದಾರೆ ಅವರಿಗೂ ನಿನ್ನ ಭೇಟಿ ಮಾಡಿಸೋಣ ಅಂದ್ರೆ… ಎಲ್ಲಿದ್ದೀಯಾ ಬಾರೊ? ಬೇಗ ಬಾರೊ?”
“ಎಲ್ಲಿ ಸಮು ಕಾಣ್ತಾ ಇಲ್ಲವಲ್ಲ! ಮಾತಾಡತಾನೂ ಇಲ್ವಲ್ಲ” ಎಂದ್ಲು ಪ್ರಿಯಾ.

“ಸಮು, ಮತ್ತೆ ತಮಾಷೆ ಮಾಡ್ತಿದ್ದಿಯಾ…? ಯಾಕೆ ನಿನಗೆ ಏನಾಗಿದೆ ಇವತ್ತು,.ಎಂದಿನ ಹಾಗೆ ಇಲ್ಲಲ್ಲ” ಎಂದಳು ವಿಧು.
ಕರೆದು ಕರೆದು, ಹುಡುಕಿ ಹುಡುಕಿ ಸಾಕಾಗಿ “ಏನಿಲ್ಲ… ಏನೊ ತೋರಿಸಬೇಕೆಂದಿದ್ದ ಸಿಗುತ್ತಿಲ್ಲ ಇನ್ನೊಮ್ಮೆ ಬಂದಾಗ ತೋರಸ್ತೀನಿ” ಎಂದೆ.
“ಏ…ಎಷ್ಟೆ ಆಡೋದು, ರ‍್ರೆ….ಬೇಗ ಬೇಗ ಗಾಡಿ ಹತ್ತಿ. ಇಲ್ಲಂದ್ರ ಬಿಟ್ಟು ಹೋಗ್ತೀವಿ ನೋಡು” ಎಂದ್ಲು ಮಾಮಿ
“ಹಾಂ..ಬಿಟ್ಟು ಹೋಗ್ರಿ ..ಇಲ್ಲೆ ಇರತಿವಿ ಸಮು ಜೊತೆ ಆಟ ಆಡೊಕೋತ” ಎಂದಳು ವಿದು.
“ಹೊಂ ವರ್ಕ ಪೂರ್ತಿ ಮಾಡದೆ ಬಂದಿದ್ದೀರಿ…ನಾಳೆ ಬಡಿಸಕೊ ಬೇಕಾಗುತ್ತೆ ನೋಡು” ಎಂದು ಮಾಮಿ ಕೂಗಿದಾಗ
“ನಡೆ ವಿಧು…ನಡಿ….ಹೋಂ ವರ್ಕ ಮಾಡದಿದ್ದರೆ ಹೊರಗೆ ಬಿಸಿಲಲಿ ನಿಲ್ಲಸ್ತಾರೆ” ಎಂದು ಓಡಿ ಹೋದ್ರು.
ಶಾಲೆ ಅಂದ್ರ ಖುಷಿನಾ ಭಯನಾ ಅನ್ನುವ ಆಲೋಚನೆನೂ ಕ್ಷಣಕಾಲ ಬಂದು ಹೋಯ್ತು.
ಅವರಿಗೆಲ್ಲ ನನ್ನ ಫ್ರೆಂಡ್ಸ್ನ ತೋರಿಸೊಕೆ ಆಗಲಿಲ್ಲ ಎಂಬ ನಿರಾಶೆಯಿಂದ ಕುಳಿತಾಗ ಟೇಬಲ್ ಸಂದಿಯೊಳಗಿ೦ದ “ಸ್ವಾರಿ ಸಮು… ಗಾಡಿಯಲ್ಲಿ ಬಂದ ದಣಿವಿಗೆ ನಿದ್ದೆ ಬಂದಿತ್ತು ಮಲಗಿದ್ದೆ…ಈಗ ಬಂದಿಯಾ …ಹೇಳು” ಎಂದಿತು.

“ಏನೂ ಹೇಳೊದು? ಎಷ್ಟು ಕರೆದೆ, ಮಾತಾಡಿಸಿದೆ… ನೀನು ಬರಲೆ ಇಲ್ಲ..ನಮ್ಮ ಗೆಳೆಯರು ಬೇಜಾರು ಮಾಡಿಕೊಂಡ್ರು”
“ಈಗ ಎಲ್ಲಿದ್ದಾರೆ ?”
“ಅವರಾ… ಹೋದ್ರು ಆಗಲೆ”
“ಒಳ್ಳೆದಾಯ್ತು ಬಿಡು… ಅವರ ಅಪ್ಪ ಅಮ್ಮನೂ ಸೈನ್ಸ್ ಟೀಚರ್ ಅಲ್ವಾ ?”
“ಹೌದು”
“ಅವರಮ್ಮ ಬಂದಾಗ ನಾಳೆ ಶಾಲೆಯಲ್ಲಿ ಯಾವುದು ಡಿಸೆಕ್ಷನ್ ಮಕ್ಕಳಿಗೆ ಮಾಡಿ ತೋರಿಸಲಿ ಅಂದುಕೊಳ್ಳುತ್ತಿದ್ದಳು…”
“ಹೌದಾ…?”
“ಬೇಜಾರು ಮಾಡಿಕೊಬೇಡ.. ಆ ಮಕ್ಕಳ ಬಗ್ಗೆ ಗೊತ್ತು ಎಲ್ಲಾ ಕಡೆ ಪುಕಾರ ಮಾಡ್ತರಾ ಅದಕ್ಕೆ ನಾನು ಬರಲಿಲ್ಲ”
“ಸರಿ ಬಿಡು..ಏನೇನೊ ಹೇಳಾಕತಿದ್ದಿ ಅರ್ಧಕ್ಕೆ ನಿಂತಿತ್ತು ಈಗ ಹೇಳು”
“ ಹೌದು ನೀನು ಏನೋ ಹೇಳೊಕೆ ಹೊರಟಿದ್ದಿ”
“ಮೊದಲು ನೀನು ಹೇಳು”
“ಇಲ್ಲ ಮೊದಲು ನೀನು ಕೇಳು”
“ಮೊದಲು ನೀನು”
“ಇಲ್ಲ ಪ್ರೆಂಡು ನೀನು”
“ಇಲ್ಲ ನೀನು”
ಏನೊ ತಮಾಷೆ ಅನಸಕತಿತು ಅದರೊಂದಿಗಿನ ಮಾತುಕತೆ.
ಅಷ್ಟರೊಳಗೆ “ಏನು ಸಮು ಊಟಕ್ಕ ಬರತಿ ಇಲ್ಲೋ.. ಯಾಕೊ ಇತ್ತೀಚಿಗೆ ಒಬ್ಬೊಬ್ಬನೆ ಮಾತಾಡಿಕೊಳ್ಳತಾ ಇದ್ದೀಯಾ?” ಎಂದು ಅಮ್ಮಾ ಅಂದೋಡನೆ
“ಆಮೇಲೆ ಮಾತಾಡೋಣ” ಎಂದೆ.
“ಆಯ್ತು, ಹೇಗಿದ್ದರೂ ಹೊತ್ತಾಗಿದೆ, ಊಟ ಮಾಡಿ ಮಲಗು ಬೆಳಿಗ್ಗೆ ಮಾತಾಡೋಣ” ಎಂದಿತು
“ಒಕೆ ಬಾಯ್ ಗುಡ್ ನೈಟ್” ಎಂದು ಹೇಳಿ ಹೋದೆ.

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು avadhi

March 27, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: