ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗುಂಡುರಾವ್ ದೇಸಾಯಿ ಅವರ ದೈನಿಕ ಧಾರಾವಾಹಿ – ಗಾಳಿಪಟದಲ್ಲಿ ಕಿಸದಂಗಲ್ಲ..

ಲಲಿತ ಪ್ರಬಂಧ, ಹಾಸ್ಯ ಸಾಹಿತ್ಯ, ವೈಚಾರಿಕ ಬರಹ, ಮಕ್ಕಳ ಸಾಹಿತ್ಯ ದಲ್ಲಿ ಪ್ರಮುಖವಾಗಿ ತೊಡಗಿಸಿಕೊಂಡಿರುವ ಗುಂಡುರಾವ್ ದೇಸಾಯಿಯವರು ರಾಯಚೂರು ಜಿಲ್ಲೆ ಮಸ್ಕಿಯವರು.

ಸರಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ‘ನಮ್ಮೂರ ಹಳ್ಳ’ ಲಲಿತ ಪ್ರಬಂಧ ರಾಯಚೂರು ವಿಶ್ವವಿದ್ಯಾಲಯದ ಬಿಎಸ್ಸಿ ಹಾಗೂ ಬಿ.ಸಿ.ಎ ವಿದ್ಯಾರ್ಥಿಗಳಿಗೆ ಪಠ್ಯವಾಗಿದೆ. ಇವರ ಹಲವು ಕತೆ,ಕವಿತೆಗಳನ್ನು ಬೆಂಗಳೂರಿನ ಶೈಕ್ಷಣಿಕ ಸಂಪನ್ಮೂಲ ಕೇಂದ್ರ ಪೂರಕ ಪಠ್ಯಗಳಾಗಿ ಬಳಸಿಕೊಂಡಿದೆ.

ಇದೆ ಅವಧಿಯಲ್ಲಿ ಪ್ರಸಾರವಾದ ‘ಸೊಳ್ಳೆ ಫ್ತೆಂಡು ಒಳ್ಳೆ ಫ್ರೆಂಡು’ ಕೃತಿಗೆ ಜಿ.ಬಿ ಹೊಂಬಳ ಮಕ್ಕಳ ಸಾಹಿತ್ಯ ರಾಜ್ಯ ಪ್ರಶಸ್ತಿ, ಕಲಬುರಗಿ ಯ ಕನ್ನಡ ನಾಡು ಓದುಗರ ಹಾಗೂ ಲೇಖಕರ ಸರಕಾರಿ ಸಂಘದ‌’ ಉತ್ತಮ‌ಕಾದಂಬರಿ ಪ್ರಶಸ್ತಿ ದೊರಕಿದೆ.

ಪೆಣ್ಣತ್ತ ಖುಷಿಗೆ ಕಸಾಪದ ಕುಂಭಾಸ ಹಾಸ್ಯ ಸಾಹಿತ್ಯ ದತ್ತಿ ಗೌರವ, ಚಾರ್ಲಿ ಚಾರ್ಲಿ ವೇರ್ ಆರ್ ಯೂ ಕೃತಿಗೆ ಜನಸಿರಿ ಸಾಹಿತ್ಯ ಪ್ರಶಸ್ತಿ ದೊರಕಿದೆ. ಹಲವು ಪತ್ರಿಕೆಗಳಲ್ಲಿ ಇವರ ಕತೆ, ಕವಿತೆ, ನಾಟಕ, ಪ್ರಬಂಧ, ಹಾಸ್ಯ ಬರೆಹಗಳು ಪ್ರಕಟವಾಗಿವೆ.

ಭಾಗ – ೫

ಮರುದಿನ ಬೆಳಿಗ್ಗೆ ಎದ್ದು ಬ್ರೆಶ್ ಮಾಡಿ, ಸ್ನಾನಮಾಡಿ ತಿಂಡಿ ತಿಂದು ಕೋಣೆಗೆ ಬಂದೆ. ಶಾಲೆಗೆ ಹೊರಡಲು ಸಿದ್ಧನಾದೆ. ಶಾಲೆಗೆ ಹೋಗುವಾಗ “ಬಾರೋ ಮಿ.ರೆಡ್ ಕೈಟ್, ಶಾಲೆಗೆ ಹೋಗೋಣ” ಎಂದೆ.

“ಸ್ವಾರಿಪಾ” ಎಂದಿತು.
“ನಿನ್ನನ್ನು ಕರೆದುಕೊಂಡು ಹೋಗೊ ಆಸೆ ಕಣೋ” ಎಂದೆ.
“ನೀನು ಬರಬೇಕಂದರೂ ನನಗೆ ಆಗಬೇಕಲ್ಲ. ನಾನು ಹಾರಿಹಾರಿ ಸುಸ್ತಾಗಿನಿ. ಐ ವಾಂಟ್ ಟೇಕ್ ರೆಸ್ಟ್ ಎಂದಿತು”
“ಹೋ . . . ಹೌದಲ್ಲ! ಸ್ವಾರಿ, ಇಟ್ಸ್ ಓ.ಕೆ, ವಿಶ್ರಾಂತಿ ತೊಗೊ” ಎಂದು ಬಾಯ್ ಅಂತ ಹೇಳಿ ಶಾಲೆಗೆ ಹೋದೆ.

ಶಾಲೆಗೆ ಹೋದರೂ ನಿಲ್ಲಲಾಗುತ್ತಿಲ್ಲ ಕೂಡ್ರಲಾಗುತ್ತಿಲ್ಲ.. ನಿನ್ನೆ ಗೆಲವಿನ ಸಂಭ್ರಮ ಜೊತೆಗೆ ಗಾಳಿಪಟ ಬಿಟ್ಟಿರಲಾರದ ಮನಸ್ಸು. ಮತ್ತೆ ಅದರೊಂದಿಗೆ ಮಾತಾಡುವ ತವಕ. ಮೇಷ್ಟ್ರು “ಏಕೋ ಸರಿಯಾಗಿ ಪಾಠ ಕೇಳಿಸಿಕೊಳ್ಳುತ್ತಿಲ್ಲ. ಗಾಳಿಪಟ ಸ್ಪರ್ಧೆಯಲ್ಲಿ ಗೆದ್ದೆನೆಂಬ ಕೊಂಬು ಬಂದವಾ? ನಿಮ್ಮಪ್ಪನಿಗೆ ಹೇಳಲೇನು?” ಎಂದು ವಾರ್ನ್ ಮಾಡಿದಾಗ ವಾಸ್ತವಕ್ಕೇ ಬಂದೆ. “ಸ್ವಾರಿ ಸರ್, ಹಾಗೇನಿಲ್ಲ” ಎಂದೆ.

ಮಧ್ಯಾಹ್ನದ ಅವಧಿಯಲ್ಲಿ ಪಿ.ಟಿ ಸರ್ ನಾಳೆ ಇರುವ ಅಂತರ್ ಶಾಲಾಮಟ್ಟದ ಕ್ರಿಕೆಟ್ ಪಂದ್ಯಕ್ಕೆ ಇಬ್ಬರನ್ನು ಆಯ್ಕೆ ಮಾಡಬೇಕಿದೆ. ಬನ್ನಿ ಎಂದು ಕರೆದುಕೊಂಡು ಹೋದರು. ನನಗೆ ನಿನ್ನೆ ದಿನದ ಗಾಳಿಪಟ ಸ್ಪರ್ಧೆಯ ಗೆಲವಿನ ಹುಮ್ಮಸ್ಸಿನಲ್ಲಿಯೆ, ಆ ಗಾಳಿಪಟದ ಚಿಂತೆಯಲ್ಲಿಯೆ ಇದ್ದೆ. ಹಾಗಾಗಿ ನಾನು ತರಗತಿಯಲ್ಲಿಯೆ ಕುಳಿತೆ. ನನ್ನನ್ನು ಗಮನಿಸಿದ ಪಿ.ಟಿ ಸರ್ “ನೀನು ನಡಿಯೊ, ನಿನ್ನನ್ನು ನೋಡುತೀನಿ” ಎಂದು ಕರೆದರು. ನಾನು ಇಷ್ಟವಿಲ್ಲದೆ ಹೊರಟೆ. ಆ ಸಮಯದಲ್ಲಿ ಮನಸ್ಸಿರದಿದ್ದರೂ ಕ್ರಿಕೆಟ್ ಬಗ್ಗೆ ಇಷ್ಟ ಇರಲಿಲ್ಲ ಎಂದಲ್ಲ. ನನಗೆ ಕ್ರಿಕೆಟ್ ಎಂದರೆ ಪಂಚಪ್ರಾಣ. ಆದರೆ ನನಗಿಂತಲೂ ಚೆನ್ನಾಗಿ ಬೌಲಿಂಗ್, ಬ್ಯಾಟಿಂಗ್ ಮಾಡುವವರು ಇದ್ದರು. ನಾನು ಒಳ್ಳೆಯ ಆಲ್‌ರೌಂಡರ್ ಆಗಿದ್ದರೂ ಆಯ್ಕೆಯಾಗುವ ಭರವಸೆ ಇರಲಿಲ್ಲ. ಆದರೂ ಅವಕಾಶ ಸಿಕ್ಕರೆ ಬಿಡಬಾರದು ಎನ್ನುವ ಆಸೆ ಮನದ ಮೂಲೆಯಲ್ಲಿ ಇತ್ತು. ಆದರೆ ಆಯ್ಕೆಯಾಗಬೇಕಲ್ಲ! ಮಿಸ್ಟರ್ ರೆಡ್ ಕೈಟ್ ಬಂದಿದ್ದರೆ ಸಹಾಯ ಮಾಡುತ್ತಿದ್ದ ಆದರೆ ಅವನಿಗೂ ದಣಿವೂ. ಇರಲಿ ಸರ್ ಕರೆದರಷ್ಟೆ ಹೋಗುವುದು ಎಂದು ಒಂದು ಕಡೆ ನೋಡುತ್ತಾ ಕುಳಿತೆ. ಎಲ್ಲರೂ ಬೌಲಿಂಗ್ ಮಾಡಿದ್ರೂ ಯಾರ ಬೌಲಿಂಗ್ ಪಿ.ಟಿ. ಸರ್ ಗೆ ಖುಷಿ ನೀಡಿರಲಿಲ್ಲ. “ಏನೋ… ದೂರದಲ್ಲಿ ಕುಳಿತು ತಮಾಷೆ ನೋಡುತ್ತಿದ್ದಿಯಾ? ಬಾರೋ ಬೌಲಿಂಗ್ ಹಾಕು. ನಿನ್ನೆ ಗಾಳಿಪಟದಲ್ಲಿ ಕಿಸದಂಗಲ್ಲ” ಎಂದು ವ್ಯಂಗ್ಯ ಮಾಡಿ ಕರೆದರು. ಎಲ್ಲರೂ ಜೋರಾಗಿ ನಗಲಾರಂಭಿಸಿದರು.

ಪಿ.ಟಿ ಸರ್ ಒಗೆದ ಬಾಲ್ ಹಿಡಿದು ‘ರೆಡ್ ಕೈಟ್ ಪ್ಲೀಜ್ ಹೆಲ್ಪ್ ಮಿ’ ಎಂದುಕೊ೦ಡು ಬೌಲಿಂಗ್ ಮಾಡಿದೆ. ನನ್ನ ಬಾಲನ್ನು ಎದುರಿಸುತ್ತಿದ್ದವನು ಹಲವಾರು ರೆಕಾರ್ಡಗಳನ್ನು ಮಾಡಿದ ಬ್ಯಾಟರ್. ನಾನು ಹಾಕಿದ ಬಾಲ್ ನೇರವಾಗಿ ಮಿಡಲ್ ಸ್ಟಂಪ್‌ಗೆ ಬಡಿದಾಗ ನನಗೆ ಆಶ್ಚರ್ಯ. ಎಲ್ಲರೂ ನಿಬ್ಬೆರಗಾದರು. ಪಿ.ಟಿ ಸರ್ ‘ವ್ಹಾವ್’ ಎಂದು ಉದ್ಗಾರ ತೆಗೆದರು. ಮುಂದಿನ ಐದು ಬಾಲ್ ಗಳಲ್ಲಿ ಇನ್ನು ಎರಡು ವಿಕೆಟ್ ತೆಗೆದೆ. ನನಗೆ ಆಶ್ಚರ್ಯ! ಪ್ರಬಲ ಮೂವರು ಬ್ಯಾಟ್ಸ್ಮನ್‌ಗಳ ವಿಕೆಟ್ ನ್ನು ಒಂದೆ ಓವರ್ ನಲ್ಲಿ ಔಟ್ ಆಗಿದ್ದರು. ಅದುವರೆಗೂ ಎರಡು ವಿಕೆಟ್ ಹೈಯೆಸ್ಟ್ ಆಗಿತ್ತು. ಬ್ಯಾಂಟಿ೦ಗ್ ಟೆಸ್ಟ್ ನಲ್ಲೂ ದೂರದಲ್ಲಿ ಕುಳಿತಿದ್ದ ನನ್ನನ್ನು ಈ ಸಾರಿ ಪ್ರೀತಿಯಿಂದ ಕರೆದು ‘ನೀನು ಬ್ಯಾಟಿಂಗ್ ಮಾಡು ನಡೆ’ ಎಂದು ಕರೆದರು. ಸಿಕ್ಕ ಚಾನ್ಸ್ ಬಿಡಬಾರದು ಎಂದು ರೆಡ್ ಕೈಟ್‌ನ್ನು ಸ್ಮರಿಸಿ ಹದಿನೈದು ರನ್‌ಗಳನ್ನು ಹೊಡೆದು ಎಲ್ಲರನ್ನು ಬೆರಗು ಮೂಡಿಸಿದೆ. ನಾನೇ ಸ್ವತಃ ಬೆರಗಾಗಿದ್ದೆ. ಆಯ್ಕೆಗಾಗಿ ಬಹಳ ಕಸರತ್ತು ಎಲ್ಲರೂ ಮಾಡಿದ್ದರು. ವಿಕೆಟ್ ಪಡೆದಿದ್ದರೂ ರನ್ ಚೆನ್ನಾಗಿ ಹೊಡೆದವರು ಬಹಳ ಜನ ಇದ್ದರು. ಅದಕ್ಕಾಗಿ ಶಿಕ್ಷಕರ, ಹೊರಗಿನವರ ರೆಕಮೆಂಡೆಶನ್‌ಗಳು ನಡೆದಿದ್ದರಿಂದ ಆಯ್ಕೆಯಾಗುವ ಖಾತ್ರಿ ಇರಲಿಲ್ಲ. ಅಂದು ಸಂಜೆ ನೋಟಿಸ್ ಬೋರ್ಡಗೆ ಅಂಟಿಸಿದ ಲಿಸ್ಟ್ ನಲ್ಲಿ ನನ್ನದು ಹೆಸರಿದೆ ಎಂದು ಗೆಳೆಯರು ಬಂದು ತಿಳಿಸಿದಾಗ ಓಡೋಡಿ ಹೋಗಿ ಮತ್ತೆ ಮತ್ತೆ ನೋಡಿದೆ. ಇದು ‘ಕನಸಾ ನನಸಾ’ ಎಂದು ಚಿವಿಟಿಕೊಂಡು ಖಾತ್ರಿ ಪಡೆಸಿಕೊಂಡೆ. ನನಗಾದ ಖುಷಿಗೆ ಪಾರವೇ ಇರಲಿಲ್ಲ. ಬೆಲ್ ಆದೊಡನೇ ಮನೆಗೆ ಹೋಗಿ ಈ ವಿಷಯವನ್ನು ಮೊದಲು ಗಾಳಿಪಟಕ್ಕೆ ಹೇಳಬೇಕೆಂದು ಓಡಿದೆ. ‘ಬಾರೋ ಸ್ನ್ಯಾಕ್ಸ್ ತಿನ್ನುವಿಯಂತೆ’ ಎಂದು ಕೂಗಿದ ಅಮ್ಮನ ಮಾತನ್ನೂ ಆಲಿಸದೆ, ಕೈಕಾಲು ತೊಳೆದು ಒಳಬಂದು “ಮಿ.ಕೈಟ್ ಇವತ್ತು ಏನಾಯ್ತು ಗೊತ್ತಾ?” ಎಂದಾಗ “ಇವತ್ತು ನೀನು ಕ್ರಿಕೆಟ್ ಟೀಮ್‌ಗೆ ಸೆಲೆಕ್ಟ್ ಆಗಿರುವೆ” ಎಂದಿತು.

ಎಷ್ಟು ಖುಷಿಯಿಂದ ಹೇಳಬೇಕೆಂದು ಬಂದಿದ್ದೆನೊ ಮಿ.ಕೈಟ್‌ನ ಉತ್ತರ ನನ್ನಲ್ಲಿ ಕಮರುವಂತೆ ಮಾಡಿತು. “ಸ್ವಾರಿಪ, ನೀನು ಹೇಳುವಂತಹ ಉತ್ಸಾದಲ್ಲಿದ್ದೆ ನಾನು ಹೀಗಾಗಿರಬೇಕು ಎಂದು ಅಂದಾಜಿನಲ್ಲಿ ಹೇಳಿದೆ. ನೋವಾಗಿದ್ದರೆ ಕ್ಷಮಿಸು” ಎಂದಿತು.

“ಅಂದ್ರೆ ಇದು ನಿನ್ನ ಕೆಲಸನಾ, ಇಂದಿನ ಗೆಲವಿನಲ್ಲಿ ನನ್ನ ಪಾತ್ರ, ಶ್ರಮ ಏನೂ ಇಲ್ಲವಾ?” ಎಂದು ಮುಖ ಸೊಟ್ಟಗೆ ಮಾಡಿಕೊಂಡೆ.
“ಇಲ್ಲ ಇಲ್ಲ, ನಾನೇನು ಮಾಡಿಲ್ಲ. ಇವತ್ತು ನಿನ್ನ ಬಲದಿಂದಲೇ ಗೆದ್ದಿರುವೆ. ಸೋಲುವ ಸಮಯದಲ್ಲಿ ನಾನು ಒಂದಿಷ್ಟು ಸಹಾಯ ಮಾಡಬೇಕೆಂದಿದ್ದೆ ಆದರೆ ನಿನ್ನಲ್ಲಿ ಆ ಶಕ್ತಿ ಇತ್ತು ಸುಮ್ಮನಾದೆ “ಎಂದಿತು.

“ಹಾಗಾದರೆ ಇದೆಲ್ಲಾ ಹೇಗೆ ಗೊತ್ತಾಯಿತು…”
“ಅದೆಲ್ಲಾ ಹೇಳೊಕಾಗಲ್ಲ. ನನಗೆ ಗೊತ್ತಾಗುತ್ತೆ ಅಷ್ಟೆ. ಹೆಚ್ಚಿಗೆ ಕೆದಕಿ ಕೇಳಬಾರದು. ನಾಳಿನ ಪಂದ್ಯದಲ್ಲಿ. ನೀನು ಆಡಿ ಬಾ ಅಷ್ಟೆ ನಾನು ಹೇಳೊದು”
“ಆದರೂ . . .”
“ಆದರೂ ಇಲ್ಲ ಗಿದರೂ ಇಲ್ಲ . . . ರೆಸ್ಟ್ ಮಾಡು ಹೋಗು” ಎಂದು ಒತ್ತಾಯಿಸಿತು.
“ತ್ಯಾಂಕ್ಯೂ . . . “ ಎಂದು ಹೇಳಿ ಒಳ ನಡೆದೆ.

। ನಾಳೆಗೆ ।

‍ಲೇಖಕರು Admin

20 December, 2025

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading