ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗುಂಡುರಾವ್ ದೇಸಾಯಿ ಅವರ ದೈನಿಕ ಧಾರಾವಾಹಿ – ಮಿ.ಕೈಟ್‌ನ ಉತ್ತರ ಕಮರುವಂತೆ ಮಾಡಿತು..

ಲಲಿತ ಪ್ರಬಂಧ, ಹಾಸ್ಯ ಸಾಹಿತ್ಯ, ವೈಚಾರಿಕ ಬರಹ, ಮಕ್ಕಳ ಸಾಹಿತ್ಯ ದಲ್ಲಿ ಪ್ರಮುಖವಾಗಿ ತೊಡಗಿಸಿಕೊಂಡಿರುವ ಗುಂಡುರಾವ್ ದೇಸಾಯಿಯವರು ರಾಯಚೂರು ಜಿಲ್ಲೆ ಮಸ್ಕಿಯವರು.

ಸರಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ‘ನಮ್ಮೂರ ಹಳ್ಳ’ ಲಲಿತ ಪ್ರಬಂಧ ರಾಯಚೂರು ವಿಶ್ವವಿದ್ಯಾಲಯದ ಬಿಎಸ್ಸಿ ಹಾಗೂ ಬಿ.ಸಿ.ಎ ವಿದ್ಯಾರ್ಥಿಗಳಿಗೆ ಪಠ್ಯವಾಗಿದೆ. ಇವರ ಹಲವು ಕತೆ,ಕವಿತೆಗಳನ್ನು ಬೆಂಗಳೂರಿನ ಶೈಕ್ಷಣಿಕ ಸಂಪನ್ಮೂಲ ಕೇಂದ್ರ ಪೂರಕ ಪಠ್ಯಗಳಾಗಿ ಬಳಸಿಕೊಂಡಿದೆ.

ಇದೆ ಅವಧಿಯಲ್ಲಿ ಪ್ರಸಾರವಾದ ‘ಸೊಳ್ಳೆ ಫ್ತೆಂಡು ಒಳ್ಳೆ ಫ್ರೆಂಡು’ ಕೃತಿಗೆ ಜಿ.ಬಿ ಹೊಂಬಳ ಮಕ್ಕಳ ಸಾಹಿತ್ಯ ರಾಜ್ಯ ಪ್ರಶಸ್ತಿ, ಕಲಬುರಗಿ ಯ ಕನ್ನಡ ನಾಡು ಓದುಗರ ಹಾಗೂ ಲೇಖಕರ ಸರಕಾರಿ ಸಂಘದ‌’ ಉತ್ತಮ‌ಕಾದಂಬರಿ ಪ್ರಶಸ್ತಿ ದೊರಕಿದೆ.

ಪೆಣ್ಣತ್ತ ಖುಷಿಗೆ ಕಸಾಪದ ಕುಂಭಾಸ ಹಾಸ್ಯ ಸಾಹಿತ್ಯ ದತ್ತಿ ಗೌರವ, ಚಾರ್ಲಿ ಚಾರ್ಲಿ ವೇರ್ ಆರ್ ಯೂ ಕೃತಿಗೆ ಜನಸಿರಿ ಸಾಹಿತ್ಯ ಪ್ರಶಸ್ತಿ ದೊರಕಿದೆ. ಹಲವು ಪತ್ರಿಕೆಗಳಲ್ಲಿ ಇವರ ಕತೆ, ಕವಿತೆ, ನಾಟಕ, ಪ್ರಬಂಧ, ಹಾಸ್ಯ ಬರೆಹಗಳು ಪ್ರಕಟವಾಗಿವೆ.

ಭಾಗ – ೪

ಗಾಳಿಪಟದ ಸ್ಪರ್ಧೆ ದೊಡ್ಡ ಬಯಲಲ್ಲಿ ಆಯೋಜನೆ ಗೊಂಡಿತ್ತು. ದೂರದೂರದಿಂದ ಜನ ಸ್ಪರ್ಧೆಗಾಗಿ, ನೋಡುವುದಕ್ಕಾಗಿ ಬಂದು ಸೇರಿದ್ದರು. ಸ್ಪರ್ಧೆ ಎಲ್ಲರಿಗೂ ಮುಕ್ತವಾಗಿತ್ತು. ಯಾರು ಬೇಕಾದರೂ ಭಾಗವಹಿಸಬಹುದಾಗಿತ್ತು. ಹಲವು ಬಣ್ಣಬಣ್ಣದ, ಚಿಕ್ಕ, ಮಧ್ಯಮ, ದೊಡ್ಡ ಗಾತ್ರದ, ಹಲವು ತಂತ್ರಗಳಿ೦ದ ಮಾಡಿದ ಗಾಳಿಪಟ ಮೇಲೆರಿಸಲು ಸಿದ್ಧರಾಗಿದ್ದರು. ನಾನು ಹೊಸ ಹುರುಪಿನೊಂದಿಗೆ ಸ್ಪರ್ಧೆಗೆ ಸಿದ್ಧನಾಗಿ ಹೋದೆ. ಗಾಳಿಪಟದ, ಅದಕ್ಕಿದ್ದ ಸಣ್ಣ ದಾರಕ್ಕೆ ನನ್ನಲ್ಲಿ ದೊಡ್ಡದಾದ ದಾರದ ಉಂಡೆಯ ದಾರಕ್ಕೆ ಜೋಡಿಸಿದೆ. ವರ್ಷದಿಂದ ವರ್ಷಕ್ಕೆ ಗಾಳಿಪಟವನ್ನು ಎಲ್ಲರೂ ಬದಲಾಯಿಸುತ್ತಿದ್ದರು ನನ್ನದು ವಿಶೇಷವಾಗಿರದೆ ಬಣ್ಣ ಮಾತ್ರ ಬದಲಾಗಿತ್ತು. ಹಾಗಾಗಿ ನನ್ನನ್ನು ಯಾರೂ ಲೆಕ್ಕಕ್ಕೆ ಹಿಡಿಲಿಲ್ಲ, ಮಾತನಾಡಿಸಲೂ ಇಲ್ಲ.

ಅಂಪೈರ್ ಅವರು ಧ್ವನಿವರ್ಧಕದ ಮೂಲಕ ನಿಯಮಗಳನ್ನು ಹೇಳಿ ಅವರು ಸೂಚಿಸಿದ ಸ್ಥಳದಲ್ಲಿ ನಿಲ್ಲಲು ಹೇಳಿದರು. ಎಲ್ಲರೂ ಹೋಗಿ ಜಾಗದಲ್ಲಿ ನಿಂತರು. ನಂತರ ರೆಡಿ . . . ಒನ್ . . . ಟೂ . . . ತ್ರಿ . . . ಹಾಯಿಸ್ಟ್ . . . ಅಂತ ಆರ್ಡ್ರ್ ಕೊಟ್ರು…

ಆರ್ಡರ್ ಕೊಟ್ಟ ಕೂಡಲೇ ಸಿದ್ಧರಾಗಿದ್ದ ಎಲ್ಲರೂ ಪಟವನ್ನು ತೂರಿ ಜಗ್ಗುತ್ತಾ ಹಾರಿಸತೊಡಗಿದರು.
ಎಲ್ಲರ ಪಟಗಳು ಮೇಲೇರ ತೊಡಗಿದವು. ನನ್ನ ಗಾಳಿಪಟ ಹಾರುತ್ತಿಲ್ಲ. ನಾನು ತೂರಿದೆ, ಅಲ್ಲಾಡಿಸಿದೆ ಮತ್ತೆ ತೂರಿದೆ. ‘ಹಾರು ಮಿ. ರೆಡ್ ಕೈಟ್ ಹಾರು’ ಎಂದು ಎಂದು ತೂರ ಹತ್ತಿದೆ.

ಆದರೆ ಮೇಲೆ ಹಾರಲಿಲ್ಲ.

“ಏನೋ ಇದು ಪ್ರತಿ ಸಾರಿ ಮೇಲೆ ಹಾರುತ್ತಿರುವಾಗ ಆಗದವರು ಗದ್ದಲದಲ್ಲಿ ಕಟ್ ಮಾಡುತ್ತಿದ್ದರು, ಎಲ್ಲರೂ ಅನುಕಂಪ ತೋರುತ್ತಿದ್ದರು ಈಗ ನೋಡಿದರೆ ಹಾರದೆ ಎಲ್ಲರೂ ನಗುವ ಹಾಗೆ ಮಾಡುತ್ತಿರುವಿಯಲ್ಲ. ಪ್ಲೀಜ್ ಮಿ.ರೆಡ್ ಕೈಟ್ ಹಾರು ಎಲ್ಲರೂ ನನ್ನನ್ನೆ ನೋಡುತ್ತಿದ್ದಾರೆ” ಎಂದೆ.

ಅಷ್ಟರೊಳಗೆ ನನ್ನ ಒದ್ದಾಟ ನೋಡಿ ಎಲ್ಲರೂ ನಗ ಹತ್ತಿದರು. ಮೊದಲೆ ಯಾರೂ ಮಾತಾಡಿಸಿರಲಿಲ್ಲ, ಈಗ ಇದೊಂದು ಚೇಷ್ಟೆ ಎನಿಸತೊಡಗಿತು. “ಏನು? ಓಲ್ಡ್ ಸ್ಟಾಕ್ ಪಟಾಕಿ ತರಹ ಇದೆ ಪಟ. ಠುಸ್ಸು ಮದ್ದಾಗಿದೆ, ಏರುತಾನೆ ಇಲ್ಲ” ಎಂದು ಕೆಲ ಗೆಳೆಯರು ಗೇಲಿ ಮಾಡಹತ್ತಿದರು.

“ತಡಿಯೋ ನಿಧಾನವಾಗಿ ಬೆಂಕಿ ಹತ್ತಿಕೊಂಡು ‘ಡಮ್’ ಎನ್ನುವಂತೆ ಈ ಪಟವು ಪಟಾಕಿ ತರಹ ಸೌಂಡ್ ಮಾಡುತ್ತದೆ ನೋಡ್ರೋ” ಎಂದು ಮತ್ತೊಬ್ಬ ವ್ಯಂಗ್ಯ ಮಾಡಿದ.

“ಅಯ್ಯೋ, ದೋಸ್ತ ನನ್ನ ಮರ್ಯಾದಿನ ಮೂರು ಕಾಸಿಗೆ ಹರಾಜು ಹಾಕಿಬಿಟ್ಟೆ, ಸ್ಪರ್ಧೆಗೆ ಬರೋದಕ್ಕಿಂತ ಬಿಟ್ಟಿದ್ರೆ ಚೆನ್ನಾಗಿರುತ್ತಿತ್ತು. ಪ್ಲೀಜ್ ಗೆಲ್ಲೋದು ಬೇಡ ಸ್ವಲ್ಪಾದ್ರೂ ಮೇಲೆರಿ ಮರ್ಯಾದೆ ಉಳಿಸು ಮಿ.ರೆಡ್ ಕೈಟ್” ಎಂದು ವಿನಂತಿಸಿಕೊ೦ಡೆ.

“ತಡಿಯಪ್ಪ ನಾನು ಇಷ್ಟು ದಿನ ಸ್ವತಂತ್ರವಾಗಿ ಹಾರುತ್ತಿದ್ದೆ. ಈಗ ನೀನು ದಾರ ಬೇರೆ ಕಟ್ಟಿದ್ದೀಯಾ? ದನದ ಕೊರಳಿಗೆ ಹಗ್ಗ ಕಟ್ಟಿ, ಗೂಟಕ್ಕೆ ಕಟ್ಟಿದ ಹಾಗೆ” ಎಂದು ತಮಾಷೆ ಮಾಡಿತು.

“ಸಿರಿಯಸ್‌ನೆಸ್ ಅಂಬೋದೆ ಇಲ್ಲ ನೋಡು. ಎಲ್ಲಾದರಲ್ಲೂ ತಮಾಷೆ ಮಾಡುತೀಯಾ. ಅವರೆಲ್ಲ ನೋಡಿದ್ರೆ ನನಗ ತಮಾಷೆ ಮಾಡುತ್ತಿದ್ದಾರೆ. ದಾರವಿಲ್ಲದೆ ಹಾರಿಸಿದರೆ ಅನುಮಾನ ಬರಲ್ಲೇನು ಅದಕ್ಕೆ ಕಟ್ಟಿದ್ದು” ಎಂದೆ.
“ಗೊತ್ತಾಯ್ತು ಗೊತ್ತಾಯ್ತು. ಸ್ವಲ್ಪ ಟೈಮ್ ಕೊಡು ಹಾರುತೀನಿ. ಸ್ಟಾರ್ಟಿಂಗ್ ಟ್ರಬಲ್ ಅಷ್ಟೆ”
“ನೋಡು,ನೋಡು ಅಲ್ಲಿ, ಎಲ್ಲರೂ ನನ್ನನ್ನು ನೋಡಿ ನಗುತ್ತಿದ್ದಾರೆ, ಪ್ಲೀಜ್ . . . ಪ್ಲೀಜ್. . . ಮಿ.ಕೈಟ್” ಎಂದು ವಿನಂತಿಸಿದೆ.
“ಆಯ್ತು ಅರ್ಥ ಆಗುತ್ತೆ . ಸ್ಟಾರ್ಟಿಂಗ್ ಟ್ರಬಲ್, ಜೋರಾಗಿ ತೂರು” ಎಂದು ಹೇಳಿತು. ನಾನು ಹಾಗೆ ತೂರಿದೆ. “ಹಾಂ.. ಈಗ ನಿಧಾನವಾಗಿ ದಾರಬಿಡು ಏರುತೀನಿ ನೋಡು” ಎಂದಿತು. ನಿಧಾನವಾಗಿ ಏರ ಹತ್ತಿತು.

ಎಲ್ಲರೂ ನನ್ನ ಪಟ ಹಾಗೂ ನಾನು ಹಾರಿಸುತ್ತಿದ್ದ ಸ್ಥಿತಿ ನೋಡಿ ನಗುತ್ತಿದ್ದವರು ಪಟ ನಿಧಾನವಾಗಿ ಒಂದೇ ನೇರದಲ್ಲಿ ಮೇಲೆರುವುದನ್ನು ನೋಡಿ ಬಾಯಿ ಮುಚ್ಚಿದರು. ‘ಠುಸ್ ಪಟ ಅಲ್ಲ ‘ಢಂ ಢಂ’ ಪಟಾಕಿ ಪಟ. ಮ್ಯಾರಾಥನ್ ನಲ್ಲಿ ಸ್ಲೋ ಆಗಿ ಓಡಿದವರು ಕೊನೆಗೆ ಗುರಿ ಮುಟ್ಟುವ ಹಾಗೆ, ಇದು ಹಾಗೆ ಆಗತಿದೆ ನೋಡು ಮೊದಲು ಹಾರಲೇ ಇಲ್ಲ ಹೀಗೆ ಹೇಗೆ ಹಾರುತಿದೆ’ ಎಂದು ಕೆಲವರು ಮಾತನಾಡ ತೊಡಗಿದರು. ಜೊತೆಗೆ ನನ್ನ ಪಟಕ್ಕೆ ಬೆಂಬಲಿಸತೊಡಗಿದರು. ಕೆಲವರ ತಂತ್ರಗಳಿ೦ದಾಗಿ ಕೆಲವರ ಪಟಗಳ ದಾರಗಳು ಕಟ್ಟಾಗಿ ಲಾಗ ಹೊಡೆಯುತ್ತಿದ್ದವು. ಮೇಲೆ ಹೋದಂತೆಲ್ಲ ದಾರದೊಳಗಿಂದ ಪೇಪರ್ ಅಥವಾ ಕಾರ್ಡ ತೂರಿಸಿ ಹಾಳೆಗಳನ್ನು ಕಳಿಸಬೇಕೆನ್ನುವ ನಿಯಮವಿತ್ತು, ಪತ್ರಗಳನ್ನು ಕಳಿಸುವುದು ಎನ್ನುತ್ತಿದ್ದರು. ದಾರ ಬಿಟ್ಟಂತೆಲ್ಲಾ ಅದರ ಫೋರ್ಸಿಗೆ ಅದು ಕೂಡಾ ಮೇಲೆರುತ್ತಿತ್ತು. ಬಣ್ಣದ ಪತ್ರಗಳನ್ನು ಕಳಿಸುವುದು ಮಜವೇ. ನನ್ನ ಪತ್ರ ಮುಟ್ಟಿತು ನಿನ್ನ ಪತ್ರ ಮುಟ್ಟಿತು ಎನ್ನುವ ಕೂಗು ಮುಗಿಲೇರುತ್ತಿತ್ತು. ಪತ್ರ ಬಿಡುವುದು ಅತಿ ಎತ್ತರಕ್ಕೆ ಏರಿಸುವುದು ಎರಡು ಆಗಬೇಕು. ಪಟ ಎಲ್ಲವನ್ನು ಮೀರಿಸಿ ಮೇಲೆರಿತು ಪೂರಾ ಮೇಲೆರಿತು. ಕೆಳಗಿನಿಂದ ಕಳಿಸುತ್ತಿದ್ದ ಪತ್ರಗಳು ‘ಸೊಂಯ್’ ಅಂತ ಮೇಲೇರುತ್ತಿದ್ದವು.

ಪ್ರತಿ ವರ್ಷ ಗೆಲ್ಲುತ್ತಿದ್ದವರಿಗೆ ಭಯ ಶುರುವಾಯಿತು. ತಾವು ಮಾಡುತ್ತಿದ್ದ ಮೋಸದ ಆಟ ಮುಂದುವರೆಸಿದರು. ಮೇಲೇರುತ್ತಿದ್ದ ಪಟಗಳ ಹುಡುಗರನ್ನು ಅಡ್ಡ ಹೋಗಿ ಗೊತ್ತಾಗದಂತೆ ಬ್ಲೇಡನಿಂದ ಕಟ್ ಮಾಡಿದ್ದರು. ಅದಕ್ಕಾಗಿಯೆ ಡಮ್ಮಿಯಾಗಿ ಕೆಲವರು ಗಾಳಿಪಟ ಹಾರಿಸಲು ಬರುತ್ತಿದ್ದರು. ಅವರ ಉದ್ದೇಶ ಪೂರ್ವಯೋಜನೆಯಂತೆ ಗೆಲುವವರಿಗೆ ಬೆನ್ನುಗಾವಲಾಗಿ ಗೆಲ್ಲಲು ಅಡ್ಡವಾಗುತ್ತಿರುವ ಗಾಳಿಪಟವನ್ನು ತಮ್ಮ ಗಾಳಿಪಟವನ್ನು ಹಾರಿಸುತ್ತಾ ಬಂದು ಡಿಕ್ಕಿ ಹೊಡೆದು ಬೀಳಿಸುವುದೋ, ಬ್ಲೇಡಿನಿಂದ ದಾರ ಕಟ್ ಮಾಡುವುದೋ ಆಗಿರುತ್ತಿತ್ತು. ಆ ಮೊಸದ ಆಟ ಯಾರಿಗೂ ಗೊತ್ತಾಗುತ್ತಿರಲಿಲ್ಲ. ನೋಡುವವರು ಆಕಸ್ಮಿಕವಾಗಿ ಆಗಿದ್ದು ಎಂದೆ ಭಾವಿಸುತ್ತಿದ್ದರು. ಅದು ಹಲವು ವರ್ಷಗಳಿಂದ ನಡೆದುಕೊಂಡು ಬಂದಿತ್ತು. ರಾಕೇಟ್ ನಂತೆ ಏರುತ್ತಿದ್ದ ನನ್ನ ಗಾಳಿಪಟ ನೋಡಿ ಅಸೂಯೆ ಹುಟ್ಟಿತು. ಒಬ್ಬ ಹುಡುಗ ಅವರೆಲ್ಲರ ಸೂಚನೆ ಮೇರೆಗೆ ಗಾಳಿಪಟದೊಂದಿಗೆ ಡಿಕ್ಕಿ ಹೊಡೆಯಲು ಹತ್ತಿರ ಬಂದ. ನಾನು ತಪ್ಪಿಸಿಕೊಳ್ಳಲು ಯತ್ನಿಸಿದೆ. ಮತ್ತೊಬ್ಬನೂ ಬ್ಲೇಡ್ ಹಿಡಿದೆ ಬಂದಿದ್ದ. ಅವನಿಂದ ತಪ್ಪಿಸಿಕೊಳ್ಳುತ್ತಿದ್ದಂತೆ ಮತ್ತೊಬ್ಬ ನೋಡನೋಡುತ್ತಿದ್ದಂತೆ ಕಟ್ ಮಾಡಿ ಹೋದ. ತಪ್ಪಿಸಬೇಕೆಂದರೂ ಆಗಲಿಲ್ಲ. ಕಟ್ ಆಗಿದ್ದು ಗೊತ್ತಾಗಿ ಈ ವರ್ಷ ಸೋಲಾಯಿತು ಎಂದು ಕುಸಿದು ಬಿದ್ದೆ. ಆದರೆ ಆಶ್ಚರ್ಯ! ಕಟ್ ಮಾಡಿದ ದಾರ ಮತ್ತೆ ಕೂಡಿತು. ಆಯಸ್ಕಾಂತದ ಹಾಗೆ, ನನ್ನನ್ನು ಜಗ್ಗಿತು. ಪಟ ಮತ್ತೆ ಮೇಲೇರಿತು . . . “ಹೋ ಇದೆಲ್ಲ ಮಿ.ರೆಡ್ ಕೈಟ್ ನ ಕಿತಾಪತಿ” ಎಂದು ನಕ್ಕೆ. ಕಟ್ ಮಾಡಿ ಹೋದವ ಆಶ್ಚರ್ಯಪಟ್ಟು ಮತ್ತೆ ಕಟ್ ಮಾಡಲು ಬಂದಾಗ ದಾರವೆ ಅವನ ಕೈಯನ್ನು ಕೊರೆದು ರಕ್ತ ಬರುವ ಹಾಗೆ ಮಾಡಿತು. ಅವ “ಅಯ್ಯೊ ರಕ್ತ” ಎಂದು ಚೀರುತ್ತಾ ಓಡಿ ಹೋದ. ಮತ್ತೊಬ್ಬ ಹಾಳು ಮಾಡಲು ಬರುವಷ್ಟರಲ್ಲಿ ಪಂದ್ಯ ಮುಗಿದಾಗಿತ್ತು. ನಾನು ಗೆದ್ದಿದ್ದೆ. ನನಗಾದ ಸಂಭ್ರಮ ಅಷ್ಟಿಷ್ಟಲ್ಲ.
ಎಲ್ಲರಿಗೂ ಆಶ್ಚರ್ಯ! ಇವನ ಪಟ ಹೇಗೆ ಮೊದಲ ಸ್ಥಾನ ಬಂದಿತು? ಕಟ್ ಮಾಡಿದ್ದವನಿಗೂ ಆಶ್ಚರ್ಯ. ಹಲವು ಬಾರಿ ಗೆದ್ದವನ ರೆಕಾರ್ಡ ಹಾಗೂ ಸೊಕ್ಕು ಎರಡು ಮುರಿದು ನಾನೇ ಹಿರೋ ಆಗಿದ್ದೆ. ಅಂದು ಎಲ್ಲರ ಬಾಯಿಯ ಹುಡಗನಾಗಿದ್ದೆ. ನೋಡಲು ಬಂದಿದ್ದ ಅಪ್ಪ ಅಮ್ಮನಿಗಾದ ಖುಷಿಯೂ ಅಷ್ಟಿಷ್ಟಲ್ಲ. ಸುಮಾರು ದುಡ್ಡು ಸ್ಪರ್ಧೆಯಲ್ಲಿ ಬಂತು.

“ನಿರ೦ತರ ಪ್ರಯತ್ನದಿಂದ ಎಲ್ಲವೂ ಸಾಧ್ಯ ಎನ್ನುವುದಕ್ಕೆ ನಮ್ಮ ದಿನಕರನೇ ಉದಾಹರಣೆ. ಗೆದ್ದಾಗ ಹಿಗ್ಗದೆ ಸೋತಾಗ ಮರುಗದೆ ಪ್ರಯತ್ನ ನಡೆಸುತ್ತಾ ಇರಬೇಕು” ಎಂದು ಹೇಳಿ ಬೆನ್ನು ತಟ್ಟಿ ಬಹುಮಾನ ನೀಡಿದರು.

ಗೆಳೆಯರೆಲ್ಲ ಓಡೋಡಿ ಬಂದು ಕೈಕುಲುಕಿದರು. ನನ್ನೊಂದಿಗೆ ಫೊಟೊ ಸೆಲ್ಫಿ ತೆಗೆಸಿಕೊಂಡರು. ಒಳ್ಳೆ ಸೆಲೆಬ್ರಿಟಿ ತರಹ ಅಂದು ಆಗಿದ್ದೆ. “ಮಗನೇ ನಮ್ಮೊಂದಿಗೆ ಸೆಲ್ಫಿ ತೆಗೆಸಿಕೊಳ್ಳಪ್ಪಾ” ಎಂದು ಅಪ್ಪ ಅಮ್ಮ ಕೂಡಾ ಬಂದರು. ನಾನು “ಏನಪ್ಪ ನೀವು ಹಾಗೆ ಹೇಳೊದಾ?” ಎಂದು ಮುಖ ಸೊಟ್ಟಗೆ ಮಾಡಿಕೊಂಡೆ. “ಮೊದಲು ನಗು ಆಮೇಲೆ ಸೊಟ್ಟಗೆ ಮಾಡಿಕೊಳ್ಳುವಂತೆ. ಫೋಟೊದಲ್ಲಿ ಸೊಟ್ಟಗೆ ಮಾಡಿದ ಮುಖ ಬರುತ್ತೆ ನೋಡು” ಎಂದು ಅಪ್ಪ ನಕ್ಕ. “ಅಮ್ಮಾ . . .” ಎಂದೆ. ಖುಷಿಗೆ ಹೇಳಿದ್ದು ಎಂದು ಸಮಾಧಾನಿಸಿದರು.

ನಾನು ಪಾರಿತೋಷಕ ಬಹುಮಾನ ಹಿಡಿದುಕೊಂಡು ಬರುವಾಗ ನನಗಾದ ಖುಷಿ ಅಷ್ಟಿಷ್ಟಲ್ಲ. ಆ ಖುಷಿಯಲ್ಲಿ ಮಿ.ಕೈಟ್ ಗೆ ಮುತ್ತುಕೊಟ್ಟು “ತ್ಯಾಂಕ್ಯೂ” ಎಂದೆ.

ಅದು “ಛೀ ಛೀ ಗಂಡಸರಿಗೆ ಹಾಗೆಲ್ಲ ಮುತ್ತು ಕೊಡತಾರೇನು? ಎಂದು ನಕ್ಕಿತು. “ನೀನೂ ಮೇಲ್ ಕೈಟಾ . . .” ಎಂದು ಆಶ್ಚರ್ಯ ಪಟ್ಟೆ. “ನಡಿ ನಡಿ ಮನೆಗೆ ಹೋಗೋಣ ಮಳೆ ಬರುವುದಿದೆ. ನಾನು ತೊಯ್ದರೆ ಮುಗಿತು ನನ್ನ ಬದುಕು” ಎಂದಿತು. ‘ಹೌದೌದು’ ಎಂದು ಮನೆಯ ಕಡೆ ಜೋರಾದ ಹೆಜ್ಜೆ ಹಾಕಿದೆ.
ಮನೆಗೆ ಹೋದೊಡನೆ ಅಮ್ಮ ಸಿಹಿ ಮಾಡಿ ತಿನಿಸುತ್ತಾ “ಇವತ್ತು ಆ ಗೌಡರ ಮಕ್ಕಳನ್ನು ಸೋಲಿಸಿ ಒಳ್ಳೆಯ ಕೆಲಸ ಮಾಡಿದ್ದೀಯಾ. ಅವರಮ್ಮನಿಗೆ ಎಷ್ಟು ಸೊಕ್ಕಿತ್ತು. ಮರಿದು ಬಿಟ್ಟ ಮಗನೇ ಶಹಬಾಷ” ಎಂದು ಅಮ್ಮ ಜಾಮೂನು ತಿನ್ನಿಸಿದಳು.

“ಲೇ . . .? ಏನೇ ಇದು. ಮಕ್ಕಳಲ್ಲಿ ಅಂತಹ ಕೆಟ್ಟ ಭಾವನೆ ಯಾಕ ಮೂಡಿಸುತ್ತಿಯಾ? ನಿಮಗೆ ಆಕೆಗೆ ಸರಿಗಿಲ್ಲದಿದ್ದರೆ ಹೀಗೆ ತೀರಿಸಿಕೊಳ್ಳೊದಾ. ಸೋಲು ಗೆಲವು ಸಾಮಾನ್ಯ. ಅದಕ್ಕೆ ಈ ತರಹದ ದ್ವೇಷದ ಮಾತುಗಳನ್ನಾಡಬಾರದು” ಎಂದರು ಅಪ್ಪ.

“ಯೆಸ್ ಕರೆಕ್ಟ್” ಎಂದು ಬಾಯಿ ಬಿಟ್ಟಿತು ಕೈಟ್
“ಯಾರು ಹಾಗೆ ಎಂದಿದ್ದು” ಎಂದ್ರು ಅಪ್ಪ
ಕೈಟ್ ಆತಂಕದಲ್ಲಿತ್ತು “ನಾನೇ ಅಂದಿದ್ದು ಅಪ್ಪ, ಯಾರನ್ನುತಾರೆ ಅಮ್ಮ ಅಂದಳೇನು ಅಂದುಕೊ೦ಡಿದ್ದೇನು?” ಎಂದು ಮಾತು ತಿರುಚಿದೆ.

। ನಾಳೆಗೆ ।

‍ಲೇಖಕರು Admin

19 December, 2025

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading