ಗುಂಡುರಾವ್ ದೇಸಾಯಿ ಅಂಕಣ ‘ಸೊಳ್ಳೆ ಫ್ರೆಂಡು ಒಳ್ಳೆ ಫ್ರೆಂಡು’ ಆರಂಭ…

ಕವಿ ಗುಂಡುರಾವ್ ದೇಸಾಯಿ ಮೂಲತಃ ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದವರು. ಎಂ.ಎ, ಬಿ.ಇಡಿ ಪದವೀಧರರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರು.

ವೃತ್ತಿಯಲ್ಲಿ ಪ್ರೌಢ ಶಾಲೆಯ ಕನ್ನಡ ಭಾಷಾ ಶಿಕ್ಷಕ. ನಾನೆ ಸತ್ತಾಗ, ಸರ್ಜರಿಯ ಆ ಸುಖ, ಸಿಟಿಯೊಳಗೊಂದು ಮನೆಯ ಮಾಡಿ ಪ್ರಕಟಿತ ಲಲಿತ ಪ್ರಬಂಧಗಳು, ಡಯಟಿಂಗ ಪುರಾಣ ಹಾಸ್ಯ ಲೇಖನ ಸಂಕಲನ… ಮಕ್ಕಳಿಗಾಗಿ ಅಜ್ಜನ ಹಲ್ಲುಸೆಟ್ಟು (ಮಕ್ಕಳ‌ ಕವಿತೆಗಳ ಸಂಕಲನ) ಮಾಸಂಗಿ (ಮಕ್ಕಳು ಬರೆದ ಕತೆಗಳ ಸಂಪಾದನೆ) ಮಕ್ಕಳೇನು ಸಣ್ಣವರಲ್ಲ (ಮಕ್ಕಳ ಕತಾ ಸಂಕಲನ) ಕೃತಿಗಳು…

ಬಹತೇಕ ನಾಡಿನ ಎಲ್ಲಾ ಪತ್ರಿಕೆಗಳಲ್ಲೂ ಲಲಿತ ಪ್ರಬಂಧ, ಹಾಸ್ಯ ಲೇಖನ, ಮಕ್ಕಳ‌ ಕತೆ, ಕವಿತೆ, ನಾಟಕಗಳು ಪ್ರಕಟವಾಗಿವೆ. ಅಕ್ಷರ ಸಾಹಿತ್ಯ ವೇದಿಕೆ ಸಂಚಾಲಕರಾಗಿ ಹಲವಾರು ಮಕ್ಕಳ‌ ಕಮ್ಮಟ, ರಂಗಶಿಬಿರ, ಸಾಹಿತ್ಯಿಕ‌ ಚಟುವಟಿಕೆಗಳನ್ನು ಸಂಘಟಿಸಿದ್ದಾರೆ….

1

ಬೇಸಿಗೆ ಸೆಖೆ, ಕರೆಂಟ್ ಇಲ್ಲದ ರಾತ್ರಿ ಜೊತೆಗೆ ಸೊಳ್ಳೆ ಕಾಟ! ಮರುದಿನ ಪರೀಕ್ಷೆ ಬೇರೆ…? ಹೇಗೆ ಮಾಡೋದು ಹೇಳಿ? ಈ ಹೋಳಿ ಹುಣ್ಣಿಮೆನೂ ಪರೀಕ್ಷೆ ಇದ್ದ ಟೈಮಿಗೆ ಬರೋದು! ಹೋಳಿ ಹುಣ್ಣಿಮೆ, ಕಾಮ ದಹನ ಅಂದ್ರ ಗೊತ್ತಿರಬೇಕಲ್ಲ? ಕೆಲವು ಕಡೆ ಹೋಳಿ ಹಬ್ಬ ಅಂದ್ರೆ ಬಣ್ಣ ಆಡಬಹುದು, ನಮ್ಮಲ್ಲಿ ಬಣ್ಣ ಆಡೋದು ಯುಗಾದಿ ಹಬ್ಬದ ಮರುದಿನ. ಹೊಸ ವರ್ಷದ ಆರಂಭಕ್ಕಾಗಿ ಬಣ್ಣಹಾಕಿ ಸಂಭ್ರಮಸ್ತೀವಿ. ನಮ್ಮ ಓಣಿಯಲ್ಲಿ ಹೋಳಿ ಹಬ್ಬನ್ನ ವಿಶೇಷವಾಗಿ ಆಚರಿಸುತ್ತಿದ್ರು. ಆದರೆ ಈ ಟೈಮಿನಲ್ಲಿ ನಾವು ಕಾಮನನ್ನ ಕೂಡಸತಿವಿ. ಅತ್ತ ಸಿಟಿಯೂ ಅಲ್ಲ ಇತ್ತ ಹಳ್ಳಿಯೂ ಅಲ್ಲದ ಊರು ನಮ್ದು. ನಮ್ಮ ಓಣಿ ಹೆಚ್ಚು ಕಮ್ಮಿ ಹಳ್ಳಿಯ ವಾತಾವರಣ. ಕುರಿ, ಎಮ್ಮೆ, ಕೋಳಿ ಸಾಕುವ ಜನ ಬಹುತೇಕ ಅಲ್ಲಿ. ಎತ್ತು ಬಂಡಿ ಎಲ್ಲ ಇದ್ದುವು.

“ವರ್ಷಪೂರ್ತಿ ಇರೋ ಎಲ್ಲ ಹಬ್ಬ ಹೆಣ್ಣುಮಕ್ಕಳವು. ಗಂಡಸರಿಗೆ ಇರೋದು ಇದೊಂದ ಹಬ್ಬ. ಅದ್ದೂರಿಯಾಗಿ ಆಚರಿಸಬೇಕು, ಸುಡುವ ದಿನ ತುಂಡು ಹೋರುವ ಟೈಮಿಗೆ ನೀವೆಲ್ಲ ನಮಗ ಸಪೋರ್ಟ ಮಾಡಬೇಕು, ಪರೀಕ್ಷೆ ಬಿಟ್ರೂ ಚಿಂತಿ ಇಲ್ಲ, ಫೇಲಾದ್ರೂ ರ‍್ವಾಗಿಲ್ಲ ಈ ಹಬ್ಬನ್ನ ಆಚರಿಸಲೇಬೇಕು” ಅಂತ ನಮ್ಮ ಓಣಿಯ ಸೀನಿಯರ್ ಹುಡುಗರು ಹೇಳುತಿದ್ರು. ಅವರ ಮಾತಿನಿಂದ ಸ್ಪೂರ್ತಿಗೊಂಡು ಅದಕ್ಕಾಗಿ ವಾರದ ಮುಂಚೆನ ಗೋಣಿಚೀಲದ ತಟ್ಟು ಹಿಡುಕೊಂಡು ‘ಕಾಮಣ್ಣ ಮಕ್ಕಳು, ಕತ್ತೆ ಸೂ…ಮಕ್ಕಳು. ಭೀಮಣ್ಣ ಮಕ್ಕಳು ಬಿಟ್ಟಿ ಸೂ… ಮಕ್ಕಳು..ಕಾಮ ಭೀಮ ಕೂಡ್ಯಾರೋ ಕಟ್ಟಿಗೆ ಕುಳ್ಳು ಕದ್ದಾರೋ….ಕಾಮ ಸತ್ತ ಭೀಮ ಹುಟ್ಟೆನಪ್ಪೊ’ ಎಂದು ‘ಲಬ ಲಬ’ ಹೊಯ್ಕೊಕೊಳ್ಳುತ್ತಾ ಕಟ್ಟಿಗೆ ಕುಳ್ಳು ಬೇಡಾಕ ಮನೆ ಮನೆಗಿ ಹೋಗತಿದ್ವಿ; ಹಬ್ಬದ ವಾತಾವರಣ ಮೂಡಸ್ತಿದ್ವಿ.

ಗೋಣಿ ಚೀಲದಲ್ಲಿ ಒಬ್ಬ ಗೆಳೆಯನನ್ನು ಹೆಣವಾಗಿಸಿ ಸತ್ತಾಗ ಅಳುವಂಗ ವರ್ಣನೆ ಮಾಡತಾ ಹೊಯ್ಯಕೋತ ಬಾಯಿ ಬಡಕೋತ ಮನೆಮನೆ ಮುಂದೆ ಮಲಗಿಸಿ ಅತ್ತು ಕರೆದು ಅವರು ಕೊಡುವ ಕುಳ್ಳು ಕಟ್ಟಿಗೆಗಳನ್ನ ಅಥವಾ ಕೊಟ್ಟ ದುಡ್ಡನ್ನ ಪಡೆದುಕೊಂಡು ಬರತಿದ್ವಿ, ಒಂದು ವೇಳೆ ಕೊಡಲ್ಲ ಅಂದ್ರ ‘ಜಿಬ್ಬುತನ ಮಾಡೋ ಇವರ ಮನೆಗೆಲ್ಲ ತಗಣಿ ಆಗಲಿ’ ಅಂತ ಶಾಪ ಹಾಕಿ ಬರತಿದ್ವಿ. ‘ನಿಜಕ್ಕೂ ಕೊಡದಿದ್ರೆ ತಿಗಣಿ ಆಗತಾವೆ..ನಮ್ಮಮ್ಮ ಕೊಡದೆ ಇದ್ದುದ್ದಕ್ಕಾಗಿ ನಾವು ಸಣ್ಣೋರಿರೊ ಕಾಲಕ್ಕೆ ಅನುಭವಿಸಿವಿ…ಮಲಗಿದಾಗ ಹಾಸಿಗೆಯೊಳಕ್ಕೆ ಬಂದು ರಕ್ತ ಹೀರುವಂತವು.. ಹಾಸಿಗೆ ತೆಗೆದು ನೋಡಿದರೆ ಗುಬುಗುಬು ಓಡಾಡುತಿರೋವು. ಕಟ್ಟಿಗೆ ಸಂಧಿ ಗೋಡೆಯ ತೆಗ್ಗುಗಳಲ್ಲಿ ಕುಳಿತು..ವಂಶನ ಬೆಳಸೋವು.. ಒರೆದರೆ(ಕೊಂದರೆ) ಕೆಟ್ಟ ವಾಸನೆ…ಅವುನ್ನೆಲ್ಲ ಕೊಲ್ಲೊಕ್ಕೆ ಏನೆಲ್ಲಾ ಎಣ್ಣಿ ತಂದು ಹೊಡಿತಿದ್ವಿ’ ಎಂದು ಅಮ್ಮ ಹೇಳುತ್ತಿದ್ದಳು

ಹೋಳಿ ಹುಣ್ಣಿಮೆ ಸಂಜೆಯಿಂದ ನಮಗೆಲ್ಲ ನಮ್ಮನ್ನ ನಾವಾ ಮರೆಯೊ ದಿನ. ಮನೆಯವರೆಲ್ಲ..ಎಷ್ಟಾದ್ರೂ ಇವತ್ತೊಂದಿನ ಹೊಯ್ಕೊಳ್ಳಿ ಅಂತ ಸ್ವತಂತ್ರ ಬಿಟ್ಟಿರೋರು. ಬೆಂಕಿ ಚೆನ್ನಾಗಿ ಉರಿಲಿಕ್ಕೆ ಎಲ್ಲೆಲ್ಲೋ ಕಟ್ಟಿಗೆ ಕೊರಡು ತಂದು ಬೆಂಕಿಯಲ್ಲಿ ಒಗಿತಿದ್ರು. ಮಲಕೊಳ್ಳೊ ಹೊರಸು, ಬಿದ್ದ ಮನೆಯ ತುಂಡುಗಳು, ಹೊರಗಿರಿಸಿದ್ದ ಕಪಾಟು ಯಾವವು ಉಳಿತಿರಲಿಲ್ಲ. ಬೆಲೆಬಾಳುವ ಕಟ್ಟಿಗೆಗಳನ್ನು ತಂದು ಸುಡುವ ಬೆಂಕಿಯಲ್ಲಿ ಹಾಕಿದರೂ, ಕಳಕೊಂಡವರು ಬೈದು ಸಮ್ಮನಾಗುತ್ತಿದ್ದರೆ ಹೊರತು ಏನೂ ಜಗಳ ತೆಗಿತಿರಲಿಲ್ಲ. ಬೆಂಕ್ಯಾಗ ಬಿದ್ದ ವಸ್ತುನ ವಾಪಸ್ಸು ಒಯ್ಯಬಾರದ ಅನ್ನೊ ನಂಬಿಕೆ ಅದಕ್ಕ ಕಾರಣ ಆಗಿತ್ತು. ನಾವು ಅವರ ಹಿಂದೆ ಕಾವಲಾಗಿ ಸೂಚನೆ ಕೊಡತಿದ್ವಿ. ಅವತ್ತಿನ ದಿನ ಸಂಭ್ರಮದಿಂದ ಎಲ್ಲವನ್ನು ಮರೆತು ಕಾಮನನ್ನು ಸುಟ್ಟು ಕೇಕೆ ಹಾಕೋದು, ಕೂಗೋದು, ಹೊಯ್ಯಕೊಳ್ಳೊದು, ನಕ್ಕು ಸಂಭ್ರಮಿಸೋದು… ಏನೇನೊ ಹೇಳಲಾಗದಂತಹ ಮಜಾ ಇರತಿತ್ತು. ಮರುದಿನ ಉರಿಯುತ್ತಿದ್ದ ಕೆಂಡದಲ್ಲಿ ಉಳ್ಳಾಗಡ್ಡಿ, ಬೊಳ್ಳೊಳ್ಳಿ, ಗೆಣಸು ಕಡ್ಲಿ ಸುಟ್ಟುಕೊಂಡು ತಿನ್ನೋದು ಮತ್ತೊಂದು ಮಜಾ. ‘ಹೊಯ್ಕೊಂಡ ಬಾಯಿಗೆ ಹೋಳಿಗೆ ತುಪ್ಪ’ ಅಂತ ಮರುದಿನ ನಮಗೆಲ್ಲ ಮನೆಯಲ್ಲಿ ಹೋಳಿಗೆ ತುಪ್ಪ ತಿನ್ನಿಸುತ್ತಿದ್ರು.

ನನಗೂ ಆ ಓಣಿಯ ಮಕ್ಕಳ ಜೊತೆ ಆಡಬೇಕೆನ್ನುವ ಆಸೆ. ಮೊದಲೆಲ್ಲ ಅಪ್ಪ ಅವರೊಂದಿಗೆ ಬಿಡುತ್ತಿದ್ದ ಆದರ… ಇತೀಚಿಗೆ ಯಾರದೊ ಮಾತು ಕೇಳಿ ಆ ಹುಡುಗರ ಜೊತೆ ಸೇರಿದ್ರ ಓದು ಮರಿತಾನಂತ ಬಿಡತಿರಲಿಲ್ಲ. ಅದರಲ್ಲೂ ಪರೀಕ್ಷಾ ಇದ್ರಂತೂ ಮುಗಿತು. ಇವತ್ತು ಹಾಂಗ ಆಗಿತ್ತು. ಎಷ್ಟೊ ಸಾರಿ ತಪ್ಪಿಸಿಕೊಂಡು ಹೋಗಿ ಅವರೊಂದಿಗೆ ಮನಬಿಚ್ಚಿ ‘ಲಬ ಲಬ ಲಬ’ ಎಂದು ಹೊಂಯ್ಕೊಂಡಿದ್ದೆ. ನೋಡಿದ ಅಪ್ಪನಿಂದ ಮನೆಗೆ ಬಂದ ಮೇಲೆ ಹೊಡೆಸಿಕೊಂಡದ್ದೆ. ಎಷ್ಟು ಚಂದಿರುತ್ತದ ಅಂದ್ರಿ ಆ ಟೈಮಿನ್ಯಾಗ ಹೊಯ್ಕೊಳ್ಳೊದು..ಅಳೋದು. ನಮ್ಮ ಮನಸ್ಸಿನ ಖುಷಿ ದೊಡ್ಡೊರಿಗೆ ಹ್ಯಾಂಗ ತಿಳಿಬೇಕು?

ಅಂದು ನನಗಂತೂ ಜೈಲಿನ್ಯಾಗ ಹಾಕಿದ ಹಾಗಾಗಿತ್ತು. ಅಲ್ಲಿ ಗೆಳೆಯರು ಕೇಕೇ ಹಾಕೋದು ಕೇಳುತಿತ್ತು. ಇತ್ತ ನನ್ನದು ಓದನ್ನು ಬಿಡಲಾಗದೆ ಒದ್ದಾಟ ನಡದಿತ್ತು. ಕರೆಂಟ್ ಇಲ್ಲ, ಇಂಗ್ಲೀಷ್ ಪರೀಕ್ಷೆ ಬೇರೆ. ಇಂಗ್ಲೀಷ ಸ…..ರೋ.. ಕನಸಲ್ಲಿ ಬಿಡದೆ ಬಂದು ಕಾಡೋರು. ಕಡಿಮೆ ಮಾರ್ಕ್ಸ ತೆಗೆದುಕೊಂಡರೆ ಎಲ್ಲಾ ಬೆತ್ತದ ಪ್ರಯೋಗಗಳಿಗೆ ಬಲಿಪಶು ಆಗಬೇಕು. “ಛಡಿ ಚಂಚಂ ವಿದ್ಯಾ ಘಂಘಂ’ ಅಂತ ಬೆತ್ತದಿಂದ ಪೂಜಾ ಮಾಡೋರು. ‘ಇಂಗ್ಲೀಷ್ ಯಾಕಪ್ಪ ಹುಟ್ಟಿದೆ, ನಮ್ನನ್ನ ಜೀವ ತಿನ್ನೋಕೆ’ ಅಂತ ಬೈಯ್ದು ಕೊಳ್ಳುತಿದ್ದೆ. ನನ್ನ ಗೆಳೆಯರೂ ಕೂಡಾ. ಅವರ ಬಡಿತಕ್ಕೆ ಅಂಜಿ ರಾಮು, ಮಲ್ಲ, ಗಿರಿ ಬಿಟ್ಟು ಆರು ತಿಂಗಳಾಯಿತು. ಹಲವಾರು ಪಾಲಕರು ಬಂದು ‘ಹಾಗೆಲ್ಲ ಶಿಕ್ಷೆ ಕೊಡಬೇಡಿ’ ಅಂದ್ರೆ ಮೇಷ್ಟ್ರು ‘ಆಯ್ತು, ಇಂಗ್ಲೀಷ್ ನನ್ನ ಮಗನಿಗೆ ಬರಲ್ಲ ಅಂತ ಕಂಪ್ಲೇಂಟ್ ಕೊಡಕ ಬನ್ನಿ ಆಮೇಲೆ ಮಾತಾಡ್ತೀನಿ’ ಅಂತಿದ್ರು. ಇನ್ನೂ ಕೆಲವು ಪಾಲಕರು “ಛಲೋ ಮಾಡಿರಿ ಸರ್. ಈ ನನ್ನ ಮಕ್ಕಳಿಗೆ ಕೈಕಾಲು ಮುರಿದು ಹಾಕಿದ್ರು ಚಿಂತೆ ಇಲ್ಲ ನಾವೇನು ಅನ್ನೋಲ್ಲ. ಮನೆಯಲ್ಲಿಯೂ ಹೊಲಕ್ಕ ದನಕ್ಕ ಹೋಗಲ್ಲ, ನಾವು ಹೇಳೊ ಮಾತೆ ಕೇಳಲ್ಲ! ನಿಮ್ಮ ಹೊಡತದಿಂದಾದರೂ ಬುದ್ಧಿ ಬರಲಿ” ಅಂತಿದ್ದುದು ಯಾಕೇನೊ? ಒಂದು ಅರ್ಥ ಆಗತಿರಲಿಲ್ಲ. ಒಳ್ಳೆದಕ್ಕೋ ಅಥವಾ ಹೊಡೆಸಿಕೊಂಡು ಶಾಲೆ ಬಿಟ್ರ ತಮಗ ಅನುಕೂಲ ಆಗತ್ತದೇನೊ ಅನ್ನುವಾಂಗ.

ಇಂಗ್ಲೀಷ ಸರ್ ಅಂದ್ರ ನಮ್ಮ ಪಾಲಿಗೆ ಯಮಧರ್ಮನಂಗ. ನೆನೆಸಿಕೊಂಡ್ರೆ ಚಡ್ಡಿ ತೋಯ್ತಿತ್ತು. ಅಷ್ಟು ಭಯ. ಭಯ ಯಾಕಂದ್ರ ನೂರಕ್ಕ ನೂರು ತೊಗೊಬೇಕು, ಶಾಲೆಯಲ್ಲಿ ನನ್ನ ವಿಷಯವನ್ನ ಓದಬೇಕು, ಎಲ್ಲಾ ಮೇಷ್ಟ್ರು ಅಷ್ಟು ವರ್ಕ ಕೊಡಬ್ಯಾಡ್ರಿ ನಮ್ಮ ವರ್ಕ್ ಮಾಡಲ್ಲ ಅಂದ್ರೂ…. ಜಗಳಾಡಿದ್ರೂ….ಇವರು ಕೇಳತಿರಲಿಲ್ಲ. ನಾನು ಕಳೆದ ಪರೀಕ್ಷೆಯಲ್ಲಿ ೯೬ ಅಂಕ ತೆಗೆದುಕೊಂಡಿದ್ದರೂ ನಾಲ್ಕು ಮಾರ್ಕ್ಸ ಕಡಿಮೆ ತೊಂಗೊಂಡಿದಿ? ಬುದ್ಧಿ ಎಲ್ಲಿ ಇಟ್ಟಿ? ಅಂತ ಸಿಕ್ಕ ಹಾಗೆ ಬೈದು ಒಂದು ಮಾರ್ಕ್ಸಗೆ ಐದು ಏಟಿನಂತೆ ಇಪ್ಪತ್ತು ಛಡಿ ಏಟು ಕೊಟ್ಟಿದ್ದರು. ನನ್ನದೆ ಹೀಗಾದ್ರೆ ಉಳಿದವರ ಗತಿ! ಹಾಗಾಗಿನೆ ಹೋದವರ್ಷ ಅರವತ್ತು ಮಕ್ಕಳಿದ್ದ ನಮ್ಮ ತರಗತಿಯಲ್ಲಿ ಉಳಕೊಂಡಿದ್ದು ಕೇವಲ ಮೂವತ್ತೊಂದು ಮಂದಿ. ಅದರಲ್ಲಿ ಹಲವಾರು ಗೆಳೆಯರು ಬೇರೆ ಶಾಲೆ ಹುಡುಕಿಕೊಂಡು ಹೋದ್ರು. ಉಳಿದ ದೋಸ್ತರೆಲ್ಲ ಶಾಲಿ ಬಿಟ್ಟು ಹೊಲದ ಕೆಲಸ, ಅಂಗಡಿ ಕೆಲಸ, ಕುರಿ ಕಾಯಲಿಕ್ಕೆ, ದನ ಮೇಯಿಸಲಿಕ್ಕೆ ಹೊರಟು ಬಿಟ್ರು. ನನಗೂ ಅವರ ಹಾಗೆ ಶಾಲೆ ಬಿಟ್ಟು ಆರಾಮ ಇರಬೇಕನಸ್ತಿತ್ತು. ಒಂದು ಸಾರಿ ನನ್ನ ಮನದಾಗಿಂದು ಅಪ್ಪಗ ಹೇಳಿಬಿಟ್ಟಿದ್ದೆ “ಏನಪ್ಪಾ ಈ ಸಾಲಿ ಓದೋದು ಯಾರ ಮಾಡಿದ್ದಾರ ಈ ಸಾಲಿ, ಓದಿದೋರು ಅಷ್ಟ ಉದ್ಧಾರ ಆಗ್ತಾರಾ? ಪ್ರಾಣಿಗಳು ಎಷ್ಟು ಆರಾಮ ನೋಡು…..? ಚಿಂತಿ ಇಲ್ಲದ ಎಷ್ಟು ಸುಖವಾಗಿ ಇವೆ. ನಮಗೇಕಪ್ಪ ಇವೆಲ್ಲ” ಎಂದು ಕೇಳಿದ್ದೆ.

ಅಪ್ಪ ಸಿಟ್ಟು ಮಾಡಿಕೊಳ್ಳದೆ ಅವು ಪ್ರಾಣಿಗಳಪ, ನಮಗ ಬುದ್ಧಿ ಇದ್ದುದಕ್ಕಾಗಿ ಇಷ್ಟೆಲ್ಲ ಆಗ್ಯಾದ. ಜಗತ್ತು ಸುಂದರವಾಗಿ ಕಾಣತದ. ಇಷ್ಟೆಲ್ಲ ಯಾಕ ಹೇಳು..ಹೊಟ್ಟೆಗಾಗಿ. ಕನಕದಾಸರು ಹೇಳಿಲ್ಲೇನು? ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ತುತ್ತು ಹಿಟ್ಟಿಗಾಗಿ’ ಅಂತ.
“ನಮಗೂ ಬುದ್ಧಿ ಇರಬಾರದಾಗಿತ್ತು..ಇಲ್ಲ ಪತ್ರಹರಿತ್ತು ಇರಬೇಕಾಗಿತ್ತು”
“ಅಂದ್ರೆ…”
“ಇಷ್ಟೆಲ್ಲ ಜಂಜಾಟ ಇರತಿರಲಿಲ್ಲ. ಸಸ್ಯಗಳಲ್ಲಿಯ ಪತ್ರ ಹರಿತ್ತು ಇದ್ದಂಗ ಇದ್ದಿದ್ರೆ… ನಮ್ಮ ಆಹಾರ ನಾವೇ ತಯಾರಿಸಿಕೊಳ್ಳುತ್ತಿದ್ವಿ. ಆಗ ಓದೋದು ಬರಿಯೋದು ಏನೂ ಬೇಕಾಗಿರಲಿಲ್ಲ ನೋಡು” ಎಂದೆ.
ಅಪ್ಪ “ಎಷ್ಟು ಚಂದ ಯೋಚನ ಮಾಡ್ತಿ ನೀನು. ವಿಜ್ಞಾನಿಗಳ ತಲಿಗೆ ಇದು ಬಂದ್ರೆ ಅವರು ಮನುಷ್ಯರಲ್ಲಿ ಪತ್ರಹರಿತ್ತನ್ನು ಪ್ಲಾಂಟ್ ಮಾಡೋಕೆ ಪ್ರಯತ್ನಿಸಬಹುದೇನೊ?”
“ಅವರು ಸೇರಿಸಲಿ ಬಿಡಲಿ, ನಾನು ಮಾತ್ರ ಮುಂದೆ ಓದಿ ಆ ಕೆಲಸ ಮಾಡತಿನಪ. ಮುಂದಿನ ಮಕ್ಕಳಿಗೆ ಈ ಓದೊ ತೊಂದ್ರೆಯಿಂದ ತಪ್ಪಸ್ತಿನಿ, ಬಡವರಿಗೆ ಹೊಟ್ಟೆಗಿಲ್ಲದೆ ಒದ್ದಾಡುವುದರಿಂದ ಪಾರು ಮಾಡ್ತಿನಿ” ಎಂದಾಗ.
“ನೀನು ಹೇಳೊದೇನು ಸರಿ. ಒಳ್ಳೆಯದೆ. ಹಾಗೆ ಆದ್ರೆ ಬದುಕಲ್ಲಿ ಏನೂ ಸ್ವಾರಸ್ಯ ಇರಲ್ಲ. ಎಲ್ಲವೂ ಯಾಂತ್ರಿಕ ಅನಿಸಿಬಿಡುತ್ತದೆ. ಆದರೆ ನೀನು ಕಂಡು ಹಿಡಿ, ಖುಷಿ. ಇವತ್ತೆಲ್ಲ ದುರಾಸೆಗೆ ಪ್ರಕೃತಿನ ಎಲ್ಲಾ ಹಾಳ ಮಾಡತಿದ್ದಿವಿ. ಮುಂದೊಂದಿನ ಊಟಕ್ಕೂ ಪರದಾಡೊ ಪ್ರಸಂಗ ಬರಬಹುದು ಆ ಟೈಮಿನಲ್ಲಿ ನಿನ್ನ ಸಂಶೋಧನೆ ಉಪಯೋಗ ಆಗಬಹುದು

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು avadhi

February 6, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಗುರುರಾಜ ಮುತಾಲಿಕ್

    ಬಹಳ ಸುಂದರವಾಗಿ ಮೂಡಿ ಬಂದಿದೆ ಸರ್

    ಪ್ರತಿಕ್ರಿಯೆ
  2. ತಮ್ಮಣ್ಣ ಬೀಗಾರ

    ಒಳ್ಳೆಯ ಪ್ರಾರಂಭ.ಕುತೂಹಲವಿದೆ.ಅಭಿನಂದನೆಗಳು ಸರ್

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: