ಗೀತಾ ಕುಂದಾಪುರ‌ ಓದಿದ- ಮನಸೇ ನೀನೇಕೆ ಹೀಗೆ…

ಗೀತಾ ಕುಂದಾಪುರ

ಲೇಖಕಿ ಗೀತಾ ಅವರು ತಮ್ಮ ಕೃತಿಯಲ್ಲಿ ಮನುಷ್ಯನ ಗುಣಗಳನ್ನು, ಸ್ವಭಾವಗಳನ್ನು, ಭಾವನೆಗಳನ್ನು ವಿಶ್ಲೇಷಿಸಿದ್ದಾರೆ, ಪುಸ್ತಕದಲ್ಲಿ 32 ಲೇಖನಗಳಿದ್ದು ಎಲ್ಲವೂ ಪ್ರಸಿದ್ಧ ಪತ್ರಿಕೆಗಳಲ್ಲಿ ಡಿಜಿಟಲ್ ಮಾಧ್ಯಮಗಳಲ್ಲಿ ಪ್ರಕಟವಾದವುಗಳು. ಮನುಷ್ಯನ ಮನಸ್ಸು, ಸ್ವಭಾವ, ಭಾವನೆಗಳನ್ನೇ ವಿಷಯವಾಗಿಟ್ಟುಕೊಂಡು ಎಷ್ಟೊಂದು ಲೇಖನಗಳನ್ನು ಬರೆಯಬಹುದೆಂದು ತೋರಿಸಿದ್ದಾರೆ. ನಮ್ಮ ಮುಖ ನೋಡಲು ಕನ್ನಡಿಯಿದೆ, ಅಲ್ಲಿನ ಅಂಕು, ಡೊಂಕುಗಳನ್ನು ಸ್ವಲ್ಪ ಮಟ್ಟಿಗೆ ತಿದ್ದಿಕೊಳ್ಳಬಹುದು. ಅದೇ ನಮ್ಮದೇ ಸ್ವಭಾವ ಮತ್ತದರ ಮೂಲ ಅರಿಯುವುದು ಸುಲಭವಲ್ಲ, ಮತ್ತದಕ್ಕೆ ಯಾವ ಕನ್ನಡಿಯೂ ಇಲ್ಲ, ಆದರೆ ನೆಮ್ಮದಿಯ ಬದುಕಿಗೆ ಇದರ ಅಗತ್ಯವಿದೆ.

ಮನುಷ್ಯನ ಗುಣ, ಸ್ವಭಾವವನ್ನು ನಿರ್ಧರಿಸುವುದು ಅವನ ‘ಮನಸ್ಸು’. ಪುಸ್ತಕ ಓದುತ್ತಿದ್ದಂತೆ ಹೌದಲ್ಲವೇ, ನಾವೂ ಹೀಗೆ ವರ್ತಿಸುತ್ತಿದ್ದೇವಲ್ಲವೇ? ನಮ್ಮ ಮನಸ್ಸೂ ಹೀಗೆ ಅಲ್ಲವೇ? ನಮ್ಮ ಸುತ್ತಲೂ ಇಂತಹ ಗುಣದ ಜನರಿದ್ದಾರೆ ಎನ್ನುತ್ತದೆ ನಮ್ಮ ಮನಸ್ಸು. ಆದರೂ ಅರ್ಥ ಮಾಡಿಕೊಂಡಷ್ಟೂ ಮತ್ತಷ್ಟೂ ನಿಗೂಢವಾಗಿ ಉಳಿಯುತ್ತದೆ ಮನಸ್ಸು. 

ಲೇಖನಗಳಲ್ಲಿ ಅಚ್ಚರಿ ಮೂಡಿಸುವ, ಬೆರುಗು ಹುಟ್ಟಿಸುವ, ಅಲ್ಲಗಳೆಯಬಹುದಾದ ಯಾವ ವಿಷಯವೂ ಇಲ್ಲ, ಎಲ್ಲವೂ ಇದ್ದದ್ದೇ ಆದರೆ ನಮ್ಮ ಜೀವನದ ಓಟದಲ್ಲಿ ಗಮನಿಸದೆ ನಡೆದಿರುವುದೇ ಹೆಚ್ಚು. ನಮ್ಮನ್ನು ನಾವು ಅರಿಯುತ್ತಿದ್ದಂತೆ, ಇತರರ ನಡುವಳಿಕೆಯನ್ನು ಅರ್ಥ ಮಾಡಿಕೊಳ್ಳುತ್ತಿದ್ದಂತೆ ಪ್ರಶಾಂತತೆ ಮೂಡುವುದು ಸಹಜ, ಇದರ ಅಗತ್ಯವೂ ಇದೆ. ಅಧ್ಯಾತ್ಮದತ್ತ ಸ್ವಲ್ಪ ವಾಲಿಕೊಂಡಿರುವ ಲೇಖನಗಳು ಓದುತ್ತಿದ್ದಂತೆ ಮನಸ್ಸಿನಲ್ಲಿ ನಿರಾಳ ಭಾವ ಮೂಡುವುದು ಸಹಜ. 

ಜೀವನದ ಹಾದಿಯಲ್ಲಿ ಸೋಲು, ಗೆಲುವು ಸಹಜ, ಆದರದನ್ನು ಸುಲಭದಲ್ಲಿ ಅರಗಿಸಿಕೊಳ್ಳಲಾಗದು. ಸೋಲುಂಟಾದಾಗ ಎದುರಾಗುವ ಒಂಟಿತನ, ಅದರೊಂದಿಗೆ ಸೇರಿಕೊಳ್ಳುವ ಖಿನ್ನತೆ ಕಿತ್ತೊಗೆಯುವುದು ಸುಲಭ ಸಾಧ್ಯವೇ? ಇನ್ನು ಜೀವನದಲ್ಲಿ ಸಿಗುವ ಅನಿರೀಕ್ಷಿತ ಗೆಲುವು, ಗೆಲುವನ್ನು ಸರಳ ರೀತಿಯಲ್ಲಿ ಸ್ವೀಕರಿಸುವುದೂ ಎಲ್ಲರ ಕೈಲಾಗದು, ಗೆದ್ದಾಗ ಹಿಗ್ಗಿ ಹೀರೆಕಾಯಿಯಾಗಿ ತಪ್ಪು ಮಾಡುವುದೇ ಹೆಚ್ಚು. ಕೌನ ಬನೇಗ ಕ್ರೋರ್ ಪತಿಯಲ್ಲಿ 5 ಕೋಟಿ ಗೆದ್ದವ ಒಂದೇ ವರ್ಷದಲ್ಲಿ ಕುಡಿತಕ್ಕೆ ಸಿಲುಕಿದ, ಎಲ್ಲಾ ಹಣವನ್ನೂ ಕಳೆದುಕೊಂಡ, ಗೆಲುವನ್ನು ಸಹಜವಾಗಿ ಸ್ವೀಕರಿಸದ ಪರಿಣಾಮವಿದು. 

ಕೆಲವು ಲೇಖನಗಳು ಇದು ನನ್ನದೇ ಎನಿಸಿತು, ಇನ್ನು ಕೆಲವು ವಿಷಯಗಳನ್ನು, ಮನಸ್ಸನ್ನು ಹೆಚ್ಚು ಅರಿಯಲು ಸಹಾಯ ಮಾಡಿತು. ಪ್ರತೀ ಲೇಖನದ ಆರಂಭದಲ್ಲಿರುವ ನಾಲ್ಕು ಸಾಲುಗಳ ಕವಿತೆ ಲೇಖನಕ್ಕೆ ಕಳಶವಿಟ್ಟಂತಿದೆ. 

ಪುಸ್ತಕದಲ್ಲಿರುವ ಹೆಚ್ಚಿನ ಲೇಖನಗಳು ಮತ್ತೆ, ಮತ್ತೆ ಓದಿಸುವಂತಿದ್ದರೂ ನಾನು ಹೆಚ್ಚು ಇಷ್ಟ ಪಟ್ಟ ಕೆಲವೊಂದು ಲೇಖನಗಳ ಬಗ್ಗೆ ಬರೆಯದಿದ್ದರೆ ಹೇಗೆ?

ಪುಸ್ತಕದ ಶೀರ್ಷಿಕೆ ಹೊತ್ತ ಲೇಖನ – ‘ಮನಸೇ ನೀನೇಕೆ ಹೀಗೆ’ –ಎಂದೋ ನಡೆದ ಕಹಿ ಘಟನೆಯನ್ನೋ, ಮಾತನ್ನೋ ಮತ್ಯಾವತ್ತೋ ನೆನಪಿಸಿ ಕೊರಗುವಂತೆ ಮಾಡುವ ಮನಸ್ಸಿನ ಸ್ವಭಾವದ ಮೇಲೆ ಬೆಳಕು ಚೆಲ್ಲುತ್ತದೆ ಲೇಖನ. ಹೌದಲ್ಲವೇ ಪೆಟ್ಟು ಸಿಕ್ಕಿದಾಗ ಆಗುವ ನೋವಿಗಿಂತ ಅದರ ನೆನಪೇ ಹೆಚ್ಚು ನೋವನ್ನು ಕೊಡುತ್ತದೆ, ಸೋಲಿಗಿಂತ ಸೋಲಿನ ನೆನಪೇ ಹೆಚ್ಚು ನೋವು ತಂದರೆ ಆಶ್ಚರ್ಯವಿಲ್ಲ.

ಮನಸ್ಸು ಹೆಚ್ಚು ಹೆಚ್ಚಾಗಿ ಕೆಟ್ಟ ಗಳಿಗೆಯನ್ನೇ ಮತ್ತೆ ಮತ್ತೆ ನೆನಪಿಸಿ ಸಂತೋಷ ಪಡುತ್ತದೇನೋ ಅಥವಾ ಮನಸ್ಸು ನೋವನ್ನೇ ಹೆಚ್ಚು ಪ್ರೀತಿಸತ್ತದೋ ಏನೋ. ಲೇಖನದ ಕೊನೆಯಲ್ಲಿ ‘ಸ್ವರ್ಗದ ಬೇರು ನಿನ್ನಲ್ಲೇ ಇದೆ, ತಂಗಾಳಿಯಾಗಿ ಸವಿ ಸವಿಯಾದ ನೆನಪುಗಳನ್ನಷ್ಟೇ ನೀ ಉಳಿಸಿಕೊಂಡು ದೇಹವನ್ನು ಆವರಿಸಿಕೊ’ ಎನ್ನುತ್ತಾ ಲೇಖಕಿ ಇಂತಹ ನೋವನ್ನು ದೂರ ಮಾಡಬಹುದಾದರ ಬಗ್ಗೆ ಬರೆಯುತ್ತಾರೆ.

ಲೇಖನ ‘ಮನುಷ್ಯನ ಅಂತರಂಗ – ಬಹಿರಂಗ’, ಯಾವುದು ಸತ್ಯ, ಯಾವುದು ಮಿಥ್ಯ, ಸತ್ಯವನ್ನು ಧೈರ್ಯವಾಗಿ ಸ್ವೀಕರಿಸಲಾಗದ ಪರಿಸ್ಥಿತಿ, ಮಿಥ್ಯವನ್ನೇ ಸರಿ ಎಂದದ್ದೂ ಇದೆ, ಇದೇ ಜೀವನದ ಸಂಘರ್ಷ.  ಅತೀ ಹತ್ತಿರದವರ ಬಣ್ಣ ಗೊತ್ತಿದ್ದರೂ, ಆಡಲಾಗದ, ಅನುಭವಿಸಲಾಗದ ಪರಿಸ್ಥಿತಿ, ನೋವು ನುಂಗಿಕೊಂಡು ನಗುವಿನ ಮುಖವಾಡ ಧರಿಸಬೇಕಾದ ಸ್ಥಿತಿ. 

ಎದುರಿಗಿರುವವರು ಆಡುತ್ತಿರುವುದು ಸುಳ್ಳು, ಬೊಗಳೆ ಎಂದು ಗೊತ್ತಿದ್ದರೂ ಎಷ್ಟೊಂದು ಸಲ ಅರಿಯದ ಹಾಗೆ ನಟಿಸುವ ಪರಿಸ್ಥಿತಿ ಬಂದಿಲ್ಲ!!! ಇಲ್ಲಿ ನಾನೊಂದು ವಾಕ್ಯವನ್ನು ಸೇರಿಸಲು ಇಚ್ಚಿಸುತ್ತೇನೆ, ಹೆಚ್ಚು, ಹೆಚ್ಚು ಮುಖವಾಡ ಧರಿಸಿದವರೇ ಸತ್ಯ ಸಂದರು, ಒಳ್ಳೆಯವರು, ಸಾಧಕರೆಂದು ಗುರುತಿಸಲ್ಪಟ್ಟು ಎಲ್ಲರ ಗೌರವಕ್ಕೆ ಪಾತ್ರರಾಗುತ್ತಿದ್ದಾರೆ, ಸಾದಾ, ಸೀದಾ ನಡುವಳಿಕೆಯುಳ್ಳವರೇ ಬಲಿ ಪಶುಗಳು. ಆಗೆಲ್ಲಾ ಸತ್ಯಕ್ಕಿಂತ ಸುಳ್ಳಿಗೇ ಹೆಚ್ಚು ಗೌರವ ಎನಿಸದಿರದು. 

ಲೇಖನ ‘ನಾನು – ನನ್ನದು’ – ‘ಇದು ಸರಿಯಲ್ಲ, ನಿನ್ನಲ್ಲೊಂದು ದೋಷವಿದೆ’ ಎಂದಾಗ ಸರಿ ಪಡಿಸಿಕೊಳ್ಳುವುದಿರಲಿ, ಕೇಳಿಸಿಕೊಳ್ಳುವ, ಅರಗಿಸಿಕೊಳ್ಳುವ ತಾಳ್ಮೆ, ಒಳ್ಳೆಯ ಮನಸ್ಸು ಎಷ್ಟು ಜನರಿಗಿದೆ? ನಾನೇ ಸರಿ, ನಾನು ತಪ್ಪು ಮಾಡುವ ಪ್ರಶ್ನೆಯೇ ಇಲ್ಲ ಎನ್ನುವವರು ಜೀವನದಲ್ಲಿ ಎದುರಾಗುವುದೇ ಜಾಸ್ತಿ. ಅಲ್ಲದೆ ಲೇಖನದಲ್ಲಿ ಬರೆದ ಹಾಗೆ ಅತೀ ಬುದ್ಧಿವಂತರಿಗಿಂತ ನಿಷ್ಕಲ್ಮಶ ವ್ಯಕ್ತಿತ್ವದವರೇ ಆಪ್ತರಾಗುತ್ತಾರೆ. ಇಲ್ಲಿ ಪ್ರಚಲಿತ ಪುಟ್ಟ ಕತೆಯೊಂದು ನೆನಪಿಗೆ ಬರುತ್ತದೆ, ಉದ್ಯೋಗಾರ್ಥಿಯಾಗಿ ಬಂದ ಇಬ್ಬರಲ್ಲಿ ಒಬ್ಬ ಅತೀ ಬುದ್ಧಿವಂತ, ತುಂಬಾ ಓದಿಕೊಂಡವ, ಮತ್ತೊಬ್ಬ ಸಾಮಾನ್ಯ ಜ್ಞಾನಿ ಆದರೆ ಪ್ರಮಾಣಿಕ, ಇಬ್ಬರಲ್ಲಿ ಸಾಮಾನ್ಯ ಜ್ನಾನಿಯೇ ಆಯ್ಕೆಯಾಗುತ್ತಾನೆ. 

ನಮ್ಮ ಶತ್ರು ನಮ್ಮ ಅಹಂಕಾರವೇ ಎಂದರೆ ತಪ್ಪಾಗಲಾರದು, ನಾನು, ನನ್ನದು ಎಂಬ ಅತೀ ವ್ಯಾಮೋಹ ಮನುಷ್ಯ, ಮನುಷ್ಯರನ್ನು ದೂರ ಮಾಡುತ್ತದೆ. 

ಲೇಖನ ‘ಗೆಳೆತನ – ಸಂಬಂಧ’ – ಲೇಖನದಲ್ಲಿ ಬರೆದ ಹಾಗೆ ಮನುಷ್ಯ ಸಂಘ ಜೀವಿ, ಸದಾ ಸ್ನೇಹ ಬಯಸುತ್ತಿರುತ್ತದೆ, ಆದರೆ ಇವನು ನನ್ನ ಗೆಳೆಯ ಅಥವಾ ಗೆಳತಿ ಎನ್ನುತ್ತಾ ನಮ್ಮ ದುಃಖ ದುಮ್ಮಾನಗಳನ್ನೆಲ್ಲಾ ಹೇಳಿಕೊಂಡು ನಮ್ಮತನಕ್ಕೆ ಕೊಳ್ಳಿ ಇಡುತ್ತಾ ಬಂದಿರುತ್ತೇವೆ, ಇದು ಅರಿವಾಗುವುದು ಸ್ವಲ್ಪ ತಡವಾಗಿ. ಗೆಳೆತನವೆನ್ನುವುದು ಕೊಡು-ಕೊಳ್ಳುವ ಸಂಬಂಧವಲ್ಲ, ಅಲ್ಲದೆ ಇಲ್ಲಿ ಅಹಂ, ಸ್ವಾರ್ಥ ಮಾರು ದೂರ ಸರಿಯಬೇಕು, ಆಗಲೇ ಗೆಳೆತನ ಗಟ್ಟಿಯಾಗುವುದು. ಎಷ್ಟೇ ಆತ್ಮೀಯ ಗೆಳೆಯರಿರಲಿ ಅತ್ಯಂತ ವೈಯಕ್ತಿಕ ವಿಷಯಗಳನ್ನು ಹಂಚಿಕೊಳ್ಳದಿರುವುದೇ ಒಳ್ಳೆಯದು, ಹಾಗೆ ಹಂಚಿಕೊಂಡವರ ಕತೆ ಮತ್ತು ವ್ಯಥೆ ಆಗಾಗ ಕೇಳಿ ಬರುತ್ತದೆ. 

ಗೊತ್ತಿದೆ ಮನುಷ್ಯನ ಸ್ವಭಾವ ಹೀಗೆಯೇ ಎಂದು, ಆದರೂ ಅರಿಯುವ, ಅಳೆಯುವ, ಒಪ್ಪಿಕೊಳ್ಳಲು ಏಕೋ ಹಿಂದೇಟು, ಲೇಖನಗಳು ಅದರತ್ತ ಬೆಟ್ಟು ಮಾಡಿ ಇದು ಸಹಜ ಎನ್ನುತ್ತಾ ಸಮಾಧಾನ ಪಡಿಸುವಂತಿದೆ.

‍ಲೇಖಕರು Admin

December 3, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಗೀತಾ ಜಿ ಹೆಗಡೆ ಕಲ್ಮನೆ

    ವಾವ್! ಗೀತಾ ಹೃದಯ ತುಂಬಿ ಬಂತು. ನನ್ನ ಪುಸ್ತಕ ಓದಿ ವಿಮರ್ಶಾತ್ಮಕ ಲೇಖನ ಬರೆದು ಪರಿಚಯಿಸಿರುವುದಕ್ಕೆ ಆತ್ಮೀಯ ಧನ್ಯವಾದಗಳು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: