ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗೀತಾ ಏನ್ ಸ್ವಾಮಿ ಕವಿತೆ- ಕಾಯ್ದಿರಿಸಲಾಗಿದೆ…

ಗೀತಾ ಎನ್ ಸ್ವಾಮಿ

ಹಕ್ಕಿ ಆಗಸ ಬುವಿ ಮಳೆ
ಒಂದು ಕಾಣ್ಲಿಲ್ಲ ಇವತ್ತು
ತೆಳು ಬಿಸಿಲು; ಸಧ್ಯ ಕಾಣದ ಮಳೆ
ಅರ್ಕ ಕಂಡು ಭುವಿ ನಕ್ಕಿತಲ್ಲ
ಅಪ್ಪ ಬಿಸಿಲು ಬಂತು ಬಟ್ಟೆ ಒಣಗಿದವು
ಒಂದಿಷ್ಟು ಬಿಳಿ ಗವುಚಿಕೊಂಡು
ಅಲ್ಲಲ್ಲಿ ನೀಲಿಮುಗಿಲ ಮೌನ
ರೈಲು ಎರಡು ಗಂಟೆ ತಡ
ಈಗೀಗ ಹೆಚ್ಚು ಕಾಲ ಮುಖ್ಯವಾಗ್ತಿದೆ

ಹನ್ನೊಂದು ಹತ್ತರ ಕಾಯ್ದಿರಿಸಿದ್ದ
ರೈಲು ನೋಡನೋಡುತ್ತಲೇ
ಶರವೇಗದಲ್ಲಿ ಕಣ್ಮರೆಯಾಯಿತು
ಒಂದು ನೂರಾ ಎಪ್ಪತ್ತೆರಡು
ಅದ್ವಾನ ಆಗೋಯ್ತು ಹಣ
ಒಂಥರಾ ಕಳವಳ, ಅಯ್ಯೋ ರೈಲೆ
ನನ್ನನ್ನು ಬಿಟ್ಟು ಹೋದೆಯಲ್ಲ
ಬಿಟ್ಟು, ಕಡಿದು, ಸುಟ್ಟು, ಕೊಂದು
ಎಲ್ಲವೂ ಮನುಷ್ಯರಿಗೆ ಅಚ್ಚು ಮೆಚ್ಚು

ವಿಶ್ವ ಮಾನವ ರೈಲು ಎರಡು ಗಂಟೆ ತಡ
ಸೊಡರು ಬೆಳಗಲೋ? ತಮ್ಮನ್ನೇ ತಾವು
ಸುಟ್ಟುಕೊಳ್ಳಲೋ ಅಥವಾ ಬದುಕನ್ನು
ಮುದವಾಗಿ ಹದವಾಗಿ ಅಪ್ಪಿಕೊಳ್ಳಲೋ?
ಏನೊಂದು ತಿಳೀತಿಲ್ಲ.
ರೈಲ್ವೆ ನಿಲ್ದಾಣದ ತುಂಬಾ ಜನಜಾತ್ರೆ
ಅಲ್ಲೊಂದು ಇಲ್ಲೊಂದು ಮಾತು ಕೇಳ್ತಿವೆ
ಪರ್ವಕ್ಕೆ ಹೊರಟ್ವಿ ನಮ್ಮನೆರ ಅಕ್ಕುನ್ಮನೆಗೆ
ಅಜ್ಜಿಯೊಬ್ಬರು ಪಾಪ ಬಾರೇ ಇದೊಂದು ಬ್ಯಾಗು
ಇಡ್ಕ ತೂಕ ನಮ್ಮ ಕಲ್ಕೆರೆ ಚಂದ್ರಣಯ್ನ ಮಗಳು

ಕಣ್ಣಿಗೆ ಕಂಡು ಮಾಯ್ವಾದ್ಲು ಇಲ್ಲೆ
ನೀನೆ ಅತತ ಇಟ್ಕೊಡೆ ತಾಯಿ
ನನಗೆ ಅವರಿಬ್ಬರ ಜೊತೆಗೆ ಅಜ್ಜಿಯೂ ಗೊತ್ತಿಲ್ಲ
ಪ್ರೀತಿಯ ಮಾತುಗಳಿಗೆ ಸಹಕರಿಸುವುದು
ಒಂಥರಾ ಚೆಂದ. ಬ್ಯಾಗು ಇಟ್ಕೊಟ್ಟೆ
ಬ್ಲಾಕ್ ಟೀ ಕುಡಿಯಲು ಹೋದರೆ ಸಿಗಲಿಲ್ಲ
ತಡವಾದ ರೈಲು ಕಾಯುವುದು ಕಾಲ ಕಲಿಸಿದೆ
ಇಷ್ಟರ ನಡುವೆ ಜಗಳ ನನ್ನ ಜೊತೆ ನಾನೇ
ಬುತ್ತಿ, ಶತಾಬ್ದಿ, ವಿಶ್ವಮಾನವ, ರಭಸ ಮಳೆ

ಕಾಯ್ದಿರಿಸಿದ್ದ ರೈಲು ಬಿಟ್ಟುಹೋದ ಕುರಿತು
ಚಿಂತೆ ಇಲ್ಲ. ನನ್ನ ಜೊತೆಗೆ ನಾನೇ ಕಲಹ
ಮಾಡುತ್ತಿರುವ ಕುರಿತು ಸೋಜಿಗ,ಕ್ರೋಧ
ಈ ನಡುವೆ ಮನುಷ್ಯರ ಭೂತಕಾಲದ
ಸಮರ್ಥನೆಗಳು ವರ್ತಮಾನಕ್ಕೆ ಗಂಟು ಬೀಳ್ತವೆ
ಥೋ! ಏನಿದು ಕಥೆ? ಎನ್ನುವಷ್ಟರಲ್ಲಿ
ಚಿಕ್ಕಬಾಣಾವರ ಸ್ಟೇಷನ್….
ತುಂಬಾ ಹೊತ್ತಾಯಿತು ನಿಲ್ಲಿಸಿ. ಕಾಲ ಎಲ್ಲರದೂ!
ಸುಮ್ಮನೆ ಕಾಯಬೇಕು…. ಪ್ರಶ್ನೆ ಇಲ್ಲದೆ.‌…

ವೇಳೆ ಹರಿಯುವಾಗ ಕಾಯ್ದಿರಿಸಿದ ಯಾವುದು
ಸಿಗುವುದಿಲ್ಲ.. ಮದ್ಯಾಹ್ನ ಮಲ್ಲಿಗೆ
ರಾಶಿ ರಾಶಿ ಕಂಡವು ಕಿಟಕಿಯಲ್ಲಿ
ಯಾರಿಗೂ ಕಾಯುತ್ತಿಲ್ಲ ಅವು
ಮೋಡ ಕೂಡ್ತಿದೆ, ಮಳೆ ಹಿಡಿಯಬಹುದು
ನಾವು ಕಾಯ್ದಿರಸಲೇ ಬೇಕಿಲ್ಲ
ತನ್ನಷ್ಟಕ್ಕೆ ಸುರಿಯುತ್ತದೆ ಯಾವಾಗ ಬೇಕಾದ್ರು
ಸಮೀರಕ್ಕೆ ಕಾಲ ಹೇಳಿಕೊಟ್ಟಿದೆ ತಣ್ಣಗಿರುವುದನ್ನು
ಯಾವುದನ್ನು, ಯಾರನ್ನು ಕಾಯ್ದಿರುಸುವುದು ಬೇಡ!!!!

‍ಲೇಖಕರು Admin

23 October, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading