ಡಾ ಎಚ್ಎಸ್ ಅನುಪಮಾ ಕನ್ನಡಕ್ಕೆ ಅನುವಾದಿಸಿದ ‘ಗೀತಾಂಜಲಿ ಕವಿತೆಗಳು’
‘ಲಡಾಯಿ’ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ.
ಈ ಕೃತಿಯ ಕುರಿತ ಸುಧಾ ಹಡಿನಬಾಳ ಅವರ ಒಂದು ಬರಹ ಇಲ್ಲಿದೆ.
–ಸುಧಾ ಹಡಿನಬಾಳ
ನಮ್ಮ ನಡುವಿನ ಬೆರಗು, ಬೆಳಕು ಡಾಕ್ಟರ್ ಅನುಪಮಾ ಮೇಡಂ ಆಸ್ಪತ್ರೆಗೆ ಹೋದಾಗಲೆಲ್ಲ ಹೊಸದಾಗಿ ಪ್ರಕಟಿತವಾದ ತಮ್ಮ ಪುಸ್ತಕಗಳನ್ನು ಕೈಗಿತ್ತು ಕಳುಹಿಸುತ್ತಾರೆ . ಅವರೇ ಸಂಘಟಿಸುವ ಮಹಿಳಾ ದಿನಾಚರಣೆಯಂತ ಕಾರ್ಯಕ್ರಮಗಳಲ್ಲಿ ಪುಸ್ತಕ ಕಾಣಿಕೆ ನೀಡುವುದರೊಂದಿಗೆ ಅಕ್ಷರ ಪ್ರೀತಿಯನ್ನು ಸುತ್ತೆಲ್ಲ ಪಸರಿಸುತ್ತಿದ್ದಾರೆ. ಹಾಗೆ ಅವರಿಂದ ಕೈಸೇರಿದ ಒಂದು ಪುಸ್ತಕ ಎಲ್ಲೋ ಮರೆವಿನಿಂದಾಗಿ ಕಪಾಟಿನ ಮೂಲೆಯನ್ನು ಸೇರಿ ಕುಳಿತಿತ್ತು. ಸದ್ಯ ಉಪ್ಪರಿಗೆಯ ಗ್ರಂಥಾಲಯವನ್ನು ಸೇರಿರಲಿಲ್ಲ! ಓದಿದ ನಂತರವೇ ಗ್ರಂಥಾಲಯ ಸೇರುವುದು ವಾಡಿಕೆ.
ಈ ವಾರದಲ್ಲಿ ನನ್ನ ಅಕ್ಕನಿಗೆ ಒಂದು ಶಸ್ತ್ರಚಿಕಿತ್ಸೆ ಇದ್ದುದರಿಂದ ಇಡೀ ದಿನ ಆಸ್ಪತ್ರೆಯಲ್ಲಿ ಇರಬೇಕಾದ ಅನಿವಾರ್ಯತೆ ಇತ್ತು. ಆಸ್ಪತ್ರೆಯ ವಾಸ ; ಸಮಯ ಕಳೆಯಲೆಂದು ಮುಂಜಾನೆ ಹೋಗುವಾಗಲೆ ಅವಸರದಲ್ಲಿ ಕಪಾಟಿನಲ್ಲೆಲ್ಲಾ ತಡಕಾಡಿ ಇಷ್ಟವಾದ ಎರಡು ಪುಸ್ತಕಗಳನ್ನು ಬ್ಯಾಗಿನಲ್ಲಿ ಇರಿಸಿಕೊಂಡು ಹೋಗಿದ್ದೆ .
ಮುಂಜಾನೆ ಎಲ್ಲಾ ಆಪರೇಷನ್ ನಡೆಸುವ ತಯಾರಿ , ಬಿಳಿ ಕೋಟು ತೊಟ್ಟ ದಾದಿಯರ ಓಡಾಟ, ಮನೆ ಮಂದಿಯ ಮಾತುಕತೆ , ಆತಂಕ , ಆಪರೇಷನ್ ಕೊಠಡಿಯ ಮುಂಭಾಗದಲ್ಲಿ ಕಾಯುವಿಕೆ, ಆಪರೇಷನ್ ಮುಗಿಯುತ್ತಿದ್ದಂತೆ ಬಾಗಿಲ ಬಳಿ ಬಂದು ಯಶಸ್ವಿ ಶಸ್ತ್ರಚಿಕಿತ್ಸೆಯ ಸೂಚನೆ ನೀಡುತ್ತಲೆ ದೇಹದಿಂದ ಹೊರ ತೆಗೆದ ಮುಷ್ಠಿ ಗಾತ್ರದ ರಕ್ತ ವರ್ಣದ ಮಾಂಸದ ಮುದ್ದೆಯಂತಿರುವ ಗರ್ಭಕೋಶ, ಸ್ವಲ್ಪ ಸಮಯದಲ್ಲಿ ಹೊರತಂದ ಬಿಳಿಚಿಕೊಂಡ ಅಕ್ಕನ ಮುಖ ಇವೆಲ್ಲವುಗಳಿಂದ ಮನಸ್ಸು ಒಂದು ರೀತಿಯಲ್ಲಿ ಕದಡಿತ್ತು.
.ಆಪರೇಷನ್ ಯಶಸ್ವಿಯಾಗಿ ಮುಗಿದಿದೆ ಎನ್ನುವವರೆಗೆ ಒಂದು ರೀತಿಯ ಆತಂಕ, ನಂತರ ಎಲ್ಲವೂ ಸುಗಮವಾಗಿ ನಡೆದಿದೆ ಎಂಬ ಸಮಾಧಾನದೊಂದಿಗೆ ಬಂದವರೆಲ್ಲ ಚದುರಿದರು.
ಒಂಟಿಯಾಗಿ ಅಕ್ಕನ ಪಕ್ಕದಲ್ಲಿ ರಾತ್ರಿಯವರೆಗೆ ಇರಬೇಕಾದ ಸಂದರ್ಭ. ಶಸ್ತ್ರಚಿಕಿತ್ಸೆಯ ನೋವು ಅನಸ್ತೇಷಿಯ ಪ್ರಭಾವದಿಂದಾಗಿ ಅರೆಗಣ್ಣು ಮುಚ್ಚಿ ಆಗಾಗ ಕಣ್ಣು ತೆರೆದು ನೋಡುವ ಅಕ್ಕ , ಗ್ಲುಕೋಸ್ ಅಳವಡಿಸಿದ್ದ ತೂಗು ಬಿಟ್ಟ ಬಾಟಲು, ಕ್ಷಣ ಕ್ಷಣಕ್ಕೂ ಟಿಕ್ ಟಿಕ್ ಶಬ್ದ ಮಾಡುತ್ತಾ ಬಿಪಿ ಏರಿಳಿತವನ್ನು ತೋರಿಸುತ್ತಿದ್ದ ಮಷೀನ್, ಆಗಾಗ ಬಂದು ಅದನ್ನು ದಾಖಲಿಸಿಕೊಂಡು ಹೋಗುತ್ತಿದ್ದ ದಾದಿಯರು, ಇವುಗಳ ನಡುವೆ ರೂಮ್ನಲ್ಲಿ ಒಂಟಿಯಾಗಿ ಕುಳಿತಾಗ ಹೊತ್ತು ಹೋಗದೆ ಮನಸ್ಸು ತುಂಬಾ ಕಹಿಯಾಗಿತ್ತು ಈ ಮನುಷ್ಯ ದೇಹವೆಂಬುದು ಎಷ್ಟೊಂದು ನಶ್ವರ, ಎಷ್ಟೆಲ್ಲಾ ಬಗೆಯ ರೋಗಗಳು , ಗರ್ಭಿಣಿಯರ ನೋವು, ಆತಂಕ ಒಟ್ಟಾರೆ ಆಸ್ಪತ್ರೆಯ ವಾತಾವರಣವೇ ಆತಂಕಕಾರಿ. ಇಂಥ ಪರಿಸರದಲ್ಲಿ ಮಧ್ಯಾಹ್ನದ ಊಟದ ನಂತರ ಕೈಗೆತ್ತಿಕೊಂಡಿದ್ದು ಅನುಪಮಾ ಮೇಮ್ ಇವರಿಂದ ಇಂಗ್ಲೀಷ್ ನಿಂದ ಕನ್ನಡಕ್ಕೆ ಅನುವಾದಗೊಂಡ ‘ ಗೀತಾಂಜಲಿ ಕವಿತೆಗಳು’ ಪುಸ್ತಕ. ಬಹುಶಃ ಈ ಪುಸ್ತಕವನ್ನು ಓದದೆ ಹೋಗಿದ್ದರೆ ನನಗೆ ತುಂಬಾ ನಷ್ಟವಾಗುತ್ತಿತ್ತು.
ಕೃತಿಯ ಆರಂಭದಲ್ಲಿ ಮೇಡಂ ದಾಖಲಿಸಿದ ಗೀತಾಂಜಲಿ ಎಂಬ ಮುದ್ದಾದ ಎಳೆ ಬಾಲೆಯ ಕರುಣಾಜನಕ ಅಂತ್ಯವೇ ಹೃದಯವನ್ನು ಆರ್ದ್ರಗೊಳಿಸಿತು.
ನಾನಿರುವ ಅಂದಿನ ಪರಿಸರದಲ್ಲಿ ಆ ಪುಟ್ಟ ಬಾಲೆ ಗೀತಾಂಜಲಿ ಬರೆದ ಕವನಗಳು ನನ್ನ ಮನಸ್ಸನ್ನು ಪೂರ್ಣವಾಗಿ ಆವರಿಸಿಕೊಂಡವು ಅದೇ ಗುಂಗಿನಲ್ಲಿ ಸಮ್ಮಿಶ್ರ ಭಾವದೊಂದಿಗೆ ಕಣ್ಣಾಲೆಗಳು ತೇವಗೊಂಡವು. ಅವಳಿಗಾಗಿ ಮನಸ್ಸು ಮರುಗಿತು.
೧೯೬೧ ರಲ್ಲಿ ಮೀರತ್ ನಗರದಲ್ಲಿ ಹುಟ್ಟಿದ ಪುಟ್ಟ ಬಾಲೆಗೆ ಆಕೆಯ ಹೆತ್ತವರು ರಸಋಷಿ ರವೀಂದ್ರನಾಥ ಠಾಕೂರ್ ಅವರ ಮೇಲಿನ ಅಭಿಮಾನ ಗೌರವದಿಂದ ತಮ್ಮ ಮಗಳಿಗೆ ಗೀತಾಂಜಲಿ ಎಂದು ಹೆಸರಿಟ್ಟರು. ಗೀತಾಂಜಲಿ ಕೂಡ ತನ್ನ ಬಾಲ್ಯದಲ್ಲಿ ತುಂಬಾ ಚುರುಕು ಬುದ್ಧಿಯ ಹುಡುಗಿಯಾಗಿ ಆಟ, ಓಟ, ಚಿತ್ರ ಬಿಡಿಸುವುದು ಶಿಕ್ಷಣ ಹೀಗೆ ಅತ್ಯಂತ ಲವಲವಿಕೆಯಿಂದ ಸಂತೋಷವಾಗಿ ತನ್ನ ಹೆತ್ತವರೊಂದಿಗೆ ಬಾಲ್ಯವನ್ನು ಕಳೆಯುತ್ತಿದ್ದಳು. ಅದಾವ ಕಾಕ ದೃಷ್ಟಿಯೋ ಎಂಬಂತೆ ೧೪ ರ ಪೋರಿಗೆ ಇದ್ದಕ್ಕಿದ್ದಂತೆ ಅನಾರೋಗ್ಯ ಕಾಡುತ್ತಾ ಮುಂದೆ ಆಕೆಯಲ್ಲಿ ಕ್ಯಾನ್ಸರ್ ನಂತಹ ಭಯಾನಕ ಮಾರಿ ಇರುವುದು ಪತ್ತೆಯಾಯಿತು! ಆ ಪುಟ್ಟ ಬಾಲೆಗೆ ದೇಹದಲ್ಲಿನ ಯಾತನೆ , ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಟ ಹೆತ್ತವರ ಪ್ರೀತಿಯ ನಡುವೆಯೂ ಒಂಟಿತನ ಕಾಡಲಾರಂಭಿಸಿತು. ತಾನು ದಿನದಿಂದ ದಿನಕ್ಕೆ ಸಾವಿಗೆ ಹತ್ತಿರವಾಗುತ್ತಿದ್ದೇನೆ ಎಂಬ ಅರಿವು ಕಾಡುತ್ತಲೇ ಆಕೆ ಓರ್ವ ಕವಿಯಾಗುತ್ತಾಳೆ! ತನ್ನನ್ನು ಪ್ರೀತಿಸಿದ ಗಿಡ, ಮರ ಪ್ರಾಣಿ-ಪಕ್ಷಿ ಎಲ್ಲರನ್ನೂ ಸ್ಮರಿಸುತ್ತ ತನ್ನ ಸಾವಿನ ಬಗೆಗೆ ಒಮ್ಮೊಮ್ಮೆ ನಿರಾಶಳಾಗಿ ಇನ್ನೊಮ್ಮೆ ಜೀವನೋತ್ಸಾಹದ ಚಿಲುಮೆಯಾಗಿ, ಮಗುದೊಮ್ಮೆ ವೇದಾಂತಿಯಾಗಿ ತನ್ನವರಿಗೆ ಸಾಂತ್ವನ ಹೇಳುವ ರೀತಿಯ ಕವಿತೆಯ ಸಾಲುಗಳು ಮನಸ್ಸನ್ನು ಘಾಸಿಗೊಳಿಸುತ್ತವೆ; ಚಕಿತಗೊಳಿಸುತ್ತವೆ . ಗೀತಾಂಜಲಿ ನಮ್ಮ ಮನೆಯ ಬಾಲೆ ಎಂಬಷ್ಟು ಮನಸ್ಸು ಮರುಗುತ್ತದೆ.
ಆಕೆಯೇ ಹೇಳುವಂತೆ
ನನಗಿಟ್ಟರು
ಟ್ಯಾಗೋರ ಕವಿಯ
ಪ್ರಖ್ಯಾತ ಹೊತ್ತಗೆಯ ಹೆಸರು ಗೀತಾಂಜಲಿ!
ನನ್ನ ಹಂಬಲ, ಪ್ರಾರ್ಥನೆ
ಇಷ್ಟೇ ಓ ದೇವರೇ !
ನೆರವಾಗು ನನಗೆ
ಬದುಕಲು.
ಆ ಹೆಸರಿಗೆ ತಕ್ಕ ಹಾಗೆ
ವಿದಾಯ
ವಿದಾಯ ನನ್ನ ಬಳಗಕ್ಕೆ
ನಗುತ್ತಾ ವಿದಾಯ ಹೇಳುತಿರುವೆ ಬೇಡ ಸುರಿಸಬೇಡಿ ಕಣ್ಣೀರು
ಬೇಡ ನನಗವು
ಬೇಕಿರುವುದಿಷ್ಟೆ ನಿಮ್ಮ ಮುಗುಳ್ನಗು
ದುಃಖವಾದರೆ
ನನ್ನ ಬಗೆಗೆ ಯೋಚಿಸಿ
ಅದೇ ಇಷ್ಟ ನನಗೆ
ನಮ್ಮ ಪ್ರೀತಿ ಪಾತ್ರರ ಹೃದಯಗಳಲಿರುವಾಗ
ನೆನಪಿಡಿ
ಎಂದಿಗೂ ಸಾವಿಲ್ಲ ನಮಗೆ…
ಹೀಗೆ ಆಶ್ಚರ್ಯಗೊಳಿಸುವ ಪುಟ್ಟ ಬಾಲೆಯ ಮನದಾಳದ ವೇದನೆ , ಆಶಾ ಭಾವನೆ, ಜೀವನ ಪ್ರೀತಿ ಹೊಸ ಬೆಳಕು, ಹೊಸ ಉತ್ಸಾಹವನ್ನು ಚಿಮ್ಮಿಸುತ್ತವೆ .
ತಾನು ಬದುಕಿರುವಾಗ ಬರೆದ ಒಂದು ಕವಿತೆಯನ್ನು ತೋರಿಸದೆ ಬಚ್ಚಿಟ್ಟು ಹದಿನಾರನೇ ವಯಸ್ಸಿನಲ್ಲಿ ಉಸಿರು ನಿಲ್ಲಿಸಿದ ಮಗಳ ಕವನಗಳನ್ನು ನೋಡಿದ ತಾಯಿ ಹೃದಯ ಮೂಕವಾಗಿ ರೋದಿಸುವುದಲ್ಲದೆ ಮಗಳನ್ನು ಈ ಮೂಲಕವಾದರೂ ಜೀವಂತವಾಗಿಡಲು ಪ್ರಯತ್ನಿಸಿ ಮುಂಬೈನ ಪತ್ರಿಕೆಗಳಲ್ಲಿ ಆಕೆಯ ಎಲ್ಲಾ ಕವನಗಳನ್ನು ಪ್ರಕಟಿಸುತ್ತಾರೆ.. ಮುಂದೆ ಈ ಕವನಗಳು ಲಂಡನ್ನಿನ ಕಾವ್ಯ ಪ್ರಿಯ ದಂಪತಿಗಳಿಂದ ಇಂಗ್ಲಿಷ್ ಭಾಷೆಯಲ್ಲಿ ‘ ಪೋಯೆಮ್ಸ್ ಅಪ್ ಗೀತಾಂಜಲಿ’ ಕವನ ಸಂಕಲನ ಪ್ರಕಟವಾಗುತ್ತದೆ.. ಅವಳ ಹೆಸರನ್ನು ಜೀವಂತವಾಗಿಡಲು ಮುಂಬೈ ಮಹಾನಗರಪಾಲಿಕೆ ಒಂದು ರಸ್ತೆಗೆ ಗೀತಾಂಜಲಿ ಹೆಸರಿಟ್ಟಿದೆ. ಆ ಸಂದರ್ಭದಲ್ಲಿ ಪ್ರಧಾನಿ ಇಂದಿರಾ ಗಾಂಧಿ ಅವರು ಕೂಡ ಆಗಮಿಸಿದ್ದರು. ಅವಳ ಸಾವಿನ ಮೂರು ದಶಕಗಳ ನಂತರದಲ್ಲಿ ಅವಳ ಹೆಸರಿನಲ್ಲಿ ಫೇಸ್ಬುಕ್ ಪೇಜ್ ತೆರೆಯಲಾಗಿದ್ದು ಅವಳ ಡೈರಿ, ಟಿಪ್ಪಣಿ, ಫೋಟೋಗಳು ಕೂಡ ಲಭ್ಯವಿದೆ. ಗೀತಾಂಜಲಿಯ ಇಂತಹ ಎಲ್ಲಾ ಇರುವಿಕೆಯನ್ನು ಜಾಲಾಡಿ, ಅವಳ ತಾಯಿ ಖುಷಿ ಬದ್ರುದ್ದೀನ್ ಇವರನ್ನು ಸಂಪರ್ಕೀಸಿ ಅವರಿಂದ ಅನುಮತಿಯ ಜೊತೆಗೆ ಸಂದೇಶವನ್ನೂ ಪಡೆದು ನಮ್ಮೆಲ್ಲರ ಪ್ರೀತಿಯ ಜೀವಸೆಲೆ ಅನುಪಮಾ ಮೇಮ್ ಇಂಗ್ಲಿಷ್ ನಿಂದ ಕನ್ನಡಕ್ಕೆ ಅನುವಾದಗೊಳಿಸಿದ್ದಾರೆ.ನಮ್ಮನ್ನು ಪೂರ್ತಿಯಾಗಿ ಆವರಿಸಿಕೊಳ್ಳುವ ಕವಿತೆಗಳು ಇಲ್ಲಿವೆ. ನಮ್ಮನ್ನು ಒಂದು ಹೊಸ ಭಾವ ಲೋಕಕ್ಕೆ ಸೆಳೆಯುವ ಗೀತಾಂಜಲಿ ಕವಿತೆಗಳು ನಿಜಕ್ಕೂ ಕನ್ನಡ ಸಾಹಿತ್ಯದಲ್ಲಿ ಮೌಲಿಕ…
ಮತ್ತಷ್ಟು ಗೀತಾಂಜಲಿ ಸಾಲುಗಳು
ಈ ಸೂರ್ಯ ಹೇಗೋ ಹಾಗೆ
ನಾನು ಮುಳುಗಲಿರುವೆ ಸಧ್ಯವೇ.. ಕಣ್ಣಲ್ಲಿ ತಾರೆಗಳ ಹೊತ್ತು
ನಿಮ್ಮ ಕಂಗಳಲ್ಲಿ ಮಿಂಚುವಂತೆ ಪ್ರೇಮದ ಬೆಳಕ ಹಿಂದೆ ಬಿಟ್ಟು…
ಮಬ್ಬು ಕಣ್ಣುಗಳು
ಮತ್ತಷ್ಟು ಮಸುಕಾಗುತ್ತಿವೆ
ಆದರೂ ಹೊಸ ಭರವಸೆ ದೂರದಲ್ಲಿಲ್ಲೋ ಮಿನುಗುತ್ತಿದೆ
ಅಂತ್ಯ ಸನಿಹದಲ್ಲೇ ಇದೆ
ಖಚಿತವಾಗಿ ಗೊತ್ತು ನನಗೆ
ಆದರೆ ಮತ್ತೆ ಬದುಕುವ ಹಂಬಲ ಸಾಯಲು ಒಪ್ಪದೆ ಉಕ್ಕುತ್ತದೆ…






0 Comments