ಸುಧಾ ಆಡುಕಳ
ಗೀತ -೧
ನಿನ್ನ ಕರುಣೆಗೆಣೆಯಿಲ್ಲ ಪ್ರಭುವೆ
ನೀನೆನ್ನ ಅನಂತವಾಗಿಸಿರುವೆ
ದೇಹವೆಂಬ ಒಡೆವ ಮಡಿಕೆಯನು
ಮತ್ತೆ, ಮತ್ತೆ ನಿರ್ವಾತಗೊಳಿಸಿ
ಹೊಸ ಜೀವವ ತುಂಬಿರುವೆ
ಬರಿದೆ ಬಿದ್ದ ಕೊಳಲು ನಾನು
ಗಿರಿ ಗಹ್ವರಕೆ ಕೊಂಡೊಯ್ವೆ ನೀನು
ಹೊಸಗಾಳಿಯ ಉಸಿರ ತುಂಬಿ
ಜೀವರಾಗವ ನೀ ನುಡಿಸುತಿರುವೆ

ನಿನ್ನ ಅಮರ ಕರವು ಸೋಕಿ
ನನ್ನೆದೆಯ ಹರ್ಷ ಎಲ್ಲೆ ಮೀರಿ
ಭಾಷೆಗೆಟುಕದಂತ ಭಾವವ
ಎದೆಯಾಳದಿ ಮೊಳೆಯಿಸಿರುವೆ
ನನ್ನ ಪುಟ್ಟ ಕರದ ತುಂಬ
ನಿನ್ನ ಪ್ರೀತಿ ಕೊಡುಗೆ ಬಿಂಬ
ಕಾಲವೆಷ್ಟು ಉರುಳಿದೂ
ಖಾಲಿಯುಳಿದಿದೆ ಮತ್ತೆ ಜಾಗ
ಗೀತ -೨
ಸೃಷ್ಟಿಯ ಆರಂಭದ ದಿನ
ಎಲ್ಲ ತಾರೆಗಳೂ ಒಮ್ಮೆಲೆ ಝಗ್ಗೆಂದು ಮಿನುಗಿದವು !
ಆಗಸದ ತಾರೆಗಳ ಸಭೆ ಕರೆದು
ಜಗನ್ನಿಯಾಮಕ ಹಾಡು ಹಾಡಿದೆ
‘ಓ.. ನನ್ನ ಜಗತ್ತೀಗ ಪರಿಪೂರ್ಣವಾಗಿದೆ
ಪರಿಶುದ್ಧ ಆನಂದ ಇಡೀ ಜಗವ ತುಂಬಿದೆ’
ಇದ್ದಕ್ಕಿದ್ದಂತೆ ಕೇಳಿಬಂತು ಒಂದು ಕೂಗು!
‘ಅಗೋ, ಬೆಳಕಿನ ರೇಖೆ ತುಂಡಾಗಿದೆ
ಎಲ್ಲೋ ಒಂದು ತಾರೆಯ ಅವಸಾನವಾಗಿದೆ’

ಕಾಲದ ವೀಣೆಯ ಚಿನ್ನದ ತಂತಿ ತುಂಡಾಯಿತು
ಮಂಜುಳ ಗಾನವು ಮೌನಕ್ಕೆ ಜಾರಿತು
ಎಲ್ಲರೂ ನಿರಾಸೆಯಿಂದ ಹಾಡಿದರು
‘ಹೌದು, ಘನ ಮಕ್ಷತ್ರದ ಸಾವಾಗಿದೆ
ಸ್ವರ್ಗದ ಘನತೆಗೆ ಕುಂದಾಗಿದೆ’
ಅಂದಿನಿಂದಲೂ ಹುಡುಕುತ್ತಲೇ ಇದ್ದಾರೆ
ಕುಂದಿಲ್ಲದ ಜಗದ ಮಹದಾನಂದವನ್ನು
ಹುಡುಕಾಟ ತಲೆಮಾರುಗಳ ದಾಟುತ್ತಲೇ ಬಂದಿದೆ
ಇಡಿಯ ಲೋಕದ ತುಂಬೆಲ್ಲಾ ಚಾಚಿಕೊಂಡಿದೆ
ಜಗತ್ತು ನೆಮ್ಮದಿಯನ್ನು ಕಳೆದುಕೊಂಡಿದೆ
ಕಡುಗತ್ತಲೆಯ ನಿಶ್ಶಬ್ದ ಇರುಳಿನಲ್ಲಿ
ತಾರೆಗಳು ತಮ್ಮಲ್ಲಿಯೇ ಪಿಸುಗುಡುತ್ತವೆ
ತಾವೇ ಕಣ್ಣು ಮಿಟುಕಿಸಿ ನಗುತ್ತವೆ
‘ಬಿರುಕಿಲ್ಲದ ಪೂರ್ಣತೆಯ ಹುಡುಕಾಟ
ಆಹಾ! ಅದೆಷ್ಟು ವ್ಯರ್ಥ!’






0 Comments