ಗಿರೀಶ್ ಕಾಸರವಳ್ಳಿ ಅವರ ಜೊತೆ ನಡೆಯುತ್ತಾ..

ಲೈಫ್ ಇನ್ ಮೆಟಾಫರ್ಸ್

girija shasthri

ಗಿರಿಜಾಶಾಸ್ತ್ರಿ

‘ಲೈಫ್ ಇನ್ ಮೆಟಾಫರ್ಸ್’ ಇದು ಮೈಸೂರು ಅಸೋಸಿಯೇಷನ್ (ಮುಂಬಯಿ) ಇತ್ತೀಚೆಗೆ ಪ್ರದರ್ಶಸಿದ ಒಂದು ಸಾಕ್ಷ್ಯಚಿತ್ರ. ಗಿರೀಶ್ ಕಾಸರವಳ್ಳಿಯವರ ಚಿತ್ರ ನಿರ್ಮಾಣದ ಪ್ರಯಾಣ ಈ ಸಾಕ್ಷ್ಯಚಿತ್ರದ ವಸ್ತು. ಇದರ ನಿರ್ದೇಶಕರಾದ ಶ್ರೀವಾಸ್ತವ ಅವರಿಗೆ ಕನ್ನಡ ಬರುವುದಿಲ್ಲ. ಅವರು ಬ್ಯಾಂಕ್ ಉದ್ಯಮಿಯಾಗಿ, ಯಶಸ್ವಿ ಹೂಡಿಕೆದಾರರಾಗಿ, ಮಕ್ಕಳು ದೊಡ್ಡವರಾಗಿ ಸಂಸಾರ ಒಂದು ನೆಲೆಗೆ ಬಂದ ಮೇಲೆ ಏನನ್ನಾದರೂ ಮಾಡಬೇಕೆಂದು ಯೋಚಿಸುತ್ತಿರುವಾಗಲೇ ಅವರ ಕಣ್ಣಿಗೆ ಗಿರೀಶ್ ಕಾಸರವಳ್ಳಿಯವರ ‘ದ್ವೀಪ’ ಚಿತ್ರ ಬೀಳುತ್ತದೆ.

ಆ ದೀಪವನ್ನು ಅರಸಿಕೊಂಡು ಗಿರೀಶ್ ಅವರು ಹೋದಲ್ಲೆಲ್ಲಾ ಅವರನ್ನು ಸತತವಾಗಿ ಎರಡು ವರುಷ ಹಿಂಬಾಲಿಸಿ ಅವರ ಬಗೆಗೇ ಒಂದು ಚಿತ್ರ ನಿರ್ಮಾಣ ಮಾಡುವ ಸಾಹಸ ಕೈಗೊಳ್ಳುತ್ತಾರೆ. ತಮ್ಮ ಮೊದಲ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿಯನ್ನು ಗಳಿಸಿದ ಸಾಧಕರಾಗುತ್ತಾರೆ. ಗಿರೀಶ್ ಏಕೆ ಮಾರ್ಕೆಟಿಂಗ್ ಮಾಡುವುದಿಲ್ಲ, ಅವರೇಕೆ ಆಸ್ಕರ್ ಗೆ ಹೋಗುವುದಿಲ್ಲ ಎಂಬುದು ಶ್ರೀವಾಸ್ತವ ಅವರ ಕೊರಗು, ಹೋಗಬೇಕು ಎನ್ನುವುದು ಅವರ ಕನಸು.

girish kasaravalli1‘ಲೈಫ್ ಇನ್ ಮೆಟಾಫರ್ಸ್’ ಸಾಕ್ಷ್ಯಚಿತ್ರ, ಅನೇಕ ರೂಪಕಗಳಲ್ಲಿ ಗಿರೀಶ ಅವರ ಸಿನಿಮಾ ಬದುಕನ್ನು ಕಟ್ಟಿಕೊಡುವಂತಹದು, ಅಥವಾ ಬದುಕೇ ಅನೇಕ ರೂಪಕಗಳ ಒಂದು ಸರಮಾಲೆ ಆಗಿದೆ ಎಂದು ಹೇಳುವಂತಹದ್ದು. ಮೆಟಾಫರ್ ಎಂದರೆ ಗಿರೀಶ್ ಹೇಳುತ್ತಾರೆ, ‘ಇದು ಇದೇ’ ಎಂದು ಹೇಳುವುದಲ್ಲ. ‘ಇದು ಇದೇ ಆಗಿದೆ’ ಎನ್ನುವುದು ನಿಜ ಆದರೆ ಇದರ ಜೊತೆಗೆ ‘ಇನ್ನೂ ಏನೋ ಆಗಿದೆ’ ಎನ್ನುವುದೂ ನಿಜ. ಆದರೆ ನಾವು ಲೋಕವನ್ನು ಗ್ರಹಿಸುವುದು ‘ಇದು ಇದೇ ಆಗಿದೆ’ ಎನ್ನುವ ನಮ್ಮ ನಮ್ಮ ಹಟದಿಂದ. ಇಂತಹ ಇಗೋಟ್ರಿಪ್ಗಳ ಏರುಜಾರುಗಳಲ್ಲಿಯೇ ನಮ್ಮ ಬದುಕು ಕಳೆದು ಹೋಗಿಬಿಡುತ್ತದೆ.

ನನ್ನದು ನನಗೆ ಸರಿ, ಆದರೆ ನಿನ್ನದೂ ಸರಿ ಇರಬಹುದು, ನಾನು ಕಾಣುವ ‘ಇಷ್ಟೇ’ ಅಲ್ಲ, ನಾನು ಕಾಣದ ಇನ್ನೂ ‘ಎಷ್ಟೋ’ ಇರಬಹುದು ಎನ್ನುವ ಅಖಂಡವಾದ ಕಾಣ್ಕೆಗೆ ಪರದೆ ಎಳೆದುಬಿಡುತ್ತವೆ ನಮ್ಮ ಇಗೋಟ್ರಿಪ್ ಗಳು. ನಮ್ಮ ಸಾಮಾಜಿಕ ಪೂರ್ವಗ್ರಹಗಳ ಹಿಂದೆ ಇಂತಹ ಒಂದು ನಿಯಂತ್ರಿತ ದೃಷ್ಟಿಕೋನವೇ ಅಡಗಿದೆ. ‘ಲೈಫ್ ಇನ್ ಮೆಟಾಫರ್ಸ್ಸ್’ , ಇಂತಹ ಎಲ್ಲಾ ಪೂರ್ವಗ್ರಹಗಳನ್ನು ಗಿರೀಶ್ ಕಾಸರವಳ್ಳಿಯವರು ತಮ್ಮ ಚಿತ್ರಗಳ ಮೂಲಕ ಹೇಗೆ ಧೂಳೀಪಟ ಮಾಡಿದ್ದಾರೆ ಎಂಬುದನ್ನು ತೋರಿಸುತ್ತದೆ. ‘ಘಟಶ್ರಾದ್ಧ’ದಿಂದ ಹಿಡಿದು ‘ಕೂರ್ಮಾವತಾರ’ ದವರೆಗೆ, ಗಿರೀಶ್ ಕಾಸರವಳ್ಳಿಯವರು ಸೆರೆಹಿಡಿದಿರುವ ಸಾಮಾಜಿಕ ದೈತ್ಯ ಬಿರುಕುಗಳೆಡೆಗೆ ಈ ಚಿತ್ರದ ಮೂಲಕ ಶ್ರೀವಾಸ್ತವ ನಮ್ಮ ಗಮನಸೆಳೆಯುತ್ತಾರೆ.

ಮಾಸ್ತಿಯವರು ‘ಗಂಡಿಗೆ ಹೆಣ್ಣಿಗೆ, ಹೆಣ್ಣು ಗಂಡು ಬೇಕು ಎನ್ನುವ ಆಸರೆ ನೀರು ಬೇಕು ಎನ್ನುವ ಆಸರಂತೆ ಒಂದು ಆಸರೆ’ ಎನುತ್ತಾರೆ (ಚಟ್ಟೆಕ್ಕಾರ ತಾಯಿ) ಪಿತೃಪ್ರಧಾನ ಸಮಾಜದಲ್ಲಿ ಬದುಕಿಗೆ ಬೇಕಾದ ಇಂತಹ ಮೂಲಭೂತ ಜೀವದ್ರವ್ಯವನ್ನು ಹೆಣ್ಣಿಗೆ ವಂಚಿಸಲಾಗಿದೆ. ಅಂತಹ ಕ್ರೌರ್ಯದ ಗರಿಷ್ಠ ರೂಪವನ್ನು ತಮ್ಮ ‘ಘಟಶ್ರಾದ್ಧ’ದಲ್ಲಿ ಗಿರೀಶ್ ಅವರು, ‘ನನ್ನ ಕತೆಗಿಂತ ಸಿನಿಮಾವೇ ಚೆನ್ನಾಗಿದೆ’ ಎಂದು ಸ್ವತಃ ಅನಂತಮೂರ್ತಿಯವರೇ ಕೊಂಡಾಡುವಷ್ಟು ಸಮರ್ಥವಾಗಿ ಪ್ರದರ್ಶಿಸಿದ್ದಾರೆ.

ಗಿರೀಶ ಅವರ ಹೆಚ್ಚಿನ ಎಲ್ಲಾ ಚಿತ್ರಗಳೂ ನಾಯಕಿ ಪ್ರಧಾನವಾದವುಗಳು. ಬಾಲ್ಯದಲ್ಲಿ ಎಲ್ಲದಕ್ಕೂ ಅಮ್ಮನ ಬಳಿಗೇ ಓಡುತ್ತಿದ್ದ ಅವರಿಗೆ ಅಮ್ಮ ತೋರಿಸಿದ ಲೋಕವೇ ಇದಕ್ಕೆ ಕಾರಣ. ಅನಂತಮೂರ್ತಿಯರು ಕೂಡ ಜಗಲಿಗಿಂತ ಹಿತ್ತಲಿಗೆ ಹೆಚ್ಚು ಕಿವಿಗೊಟ್ಟ ಕಾರಣವೇ ಯಮುನಕ್ಕನಂತಹವಳು ಹುಟ್ಟಿಬಂದದ್ದು ಎಂಬುದನ್ನು ಇಲ್ಲಿ ನೆನೆಪಿಸಿಕೊಳ್ಳಬೇಕು. ಎಂತಹ ಕೆಟ್ಟ ಕತೆಯನ್ನೂ ಒಳ್ಳೆಯ ಸಿನಿಮಾ ಮಾಡಬಹುದೆಂದು ಗಿರೀಶ್ ಹೇಳುತ್ತಾರೆ. ಇದಕ್ಕೆ ಒಳ್ಳೆಯ ನಿದರ್ಶನವೆಂದರೆ ‘ನಾಯಿ ನೆರಳು’ ಸಿನಿಮಾ.

ಕಾದಂಬರಿ ನಂಬಿಸಲಾರದ ಸತ್ಯವನ್ನು ಗಿರೀಶ್ ಅವರ ಚಿತ್ರ ನಂಬಿಸುತ್ತದೆ. ಮರುಹುಟ್ಟು ಪಡೆದು ಬಂದ ಯುವಕ ತನ್ನ ಗತಿಸಿದ ಗಂಡನೇ ಇರಬಹುದು ಎಂಬ ಕುಟುಂಬದವರ ನಂಬಿಕೆಯನ್ನು ತಾನೂ ನಂಬಿದಂತೆ ನಟಿಸಿ ತನ್ನ ಜಾಣ್ಮೆಯಿಂದ ಗೆಲ್ಲುತ್ತಾಳೆ ವಿಧವೆ ವೆಂಕಟಲಕ್ಷ್ಮಿ. ಯಮುನಕ್ಕನಿಗೆ ಅಂತಹ ಜಾಣ್ಮೆ ಇಲ್ಲವೋ ಅಥವ ಅದಕ್ಕೆ ಬ್ರಾಹ್ಮಣ್ಯ ಅವಕಾಶ ಕೊಡುವುದಿಲ್ಲವೋ ಒಟ್ಟಿನಲ್ಲಿ ಯಮುನಕ್ಕ ಪಿತೃಪ್ರಧಾನತೆಯ ಕ್ರೌರ್ಯಕ್ಕೆ ಬಲಿಯಾದರೆ, ನಾಯಿ ನೆರಳ ವೆಂಕಟಲಕ್ಷ್ಮಿ ಗೆಲ್ಲುತ್ತಾಳೆ. ಅವಳ ಗೆಲುವಿನ ಉತ್ತುಂಗ ಸಾಧ್ಯತೆ ನರ್ಮದಾಳಲ್ಲಿ (ತಾಯಿಸಾಹೇಬ) ಅಭಿವ್ಯಕ್ತಗೊಳ್ಳುತ್ತದೆ.

ಹೀಗೆ ರಾಜಕೀಯ ವ್ಯವಸ್ಥೆಯ ಬಿರುಕು (ಕೂರ್ಮಾವತಾರ) ಧಾರ್ಮಿಕ/ ಪಿತೃಪ್ರಧಾನ ವ್ಯವಸ್ಥೆಯ ಹುನ್ನಾರಗಳು, (ಘಟಶ್ರಾದ್ಧ, ನಾಯಿ ನೆರಳು, ಹಸೀನಾ, ಗುಲಾಬಿ ಟಾಕೀಸು, ದ್ವೀಪ, ಕ್ರೌರ್ಯ) ಬ್ಯುರಾಕ್ರಸಿಯ ಗೋಸುಂಬೆತನ (ತಬರನ ಕತೆ) ಸಾಮಾಜಿಕ ವ್ಯವಸ್ಥೆಯ ಪಲ್ಲಟ (ತಾಯಿ ಸಾಹೇಬ) ಎಲ್ಲವನ್ನೂ ತಮ್ಮ ಚಿತ್ರಗಳ ಮೂಲಕ ಗಿರೀಶ್ ಬಯಲಾಗಿಸುತ್ತಾರೆ.

ಬದುಕೆಂದರೆ, ಎರಡು ಕೂಡಿಸು ಎರಡು ನಾಲ್ಕಲ್ಲ. ಅದು ಮೂರಕ್ಕಿಂತ ಹೆಚ್ಚು ಮತ್ತು ಐದಕ್ಕಿಂತ ಕಡಿಮೆ ಎನ್ನುತ್ತಾರೆ ಗಿರೀಶ್ ಕಾಸರವಳ್ಳಿ. ನಮ್ಮ ಬದುಕೆಂಬುದು ಈ ಮೂರು ಮತ್ತು ಐದರ ಮಧ್ಯೆ ಹರಡಿಕೊಂಡಿದೆ. ಈ ನಾಲ್ಕು ಎಂಬುದು ಹದಿನಾರರ ‘ಭಾಗ’ವೂ ಅಗಬಹುದು, ಎರಡರ ಗುಣಿಸುವಿಕೆಯೂ ಆಗಬಹುದು. ಎಂಟರ ವ್ಯವಕಲನವೂ ಆಗಬಹುದು, ಒಂದು ಮತ್ತು ಮೂರರ ಕೂಡುವಿಕೆಯೂ ಆಗಬಹದು. ಇದು ಅನಂತ ಸಾಧ್ಯತೆಗಳ, ಅನಂತ permutation, combination ಗಳ ಒಂದು ಮೊತ್ತ. ಇಂತಹ ಅನೇಕ ಸಾಧ್ಯತೆಗಳನ್ನು ಒಪ್ಪಿಕೊಳ್ಳುವುದೇ ನಮ್ಮ ಲೋಕದೃಷ್ಟಿಯಾಗಬೇಕು.

life in metophors‘ಕೇವಲ ಸ್ಥಳೀಯ ವಿವರಗಳನ್ನು ಜೋಡಿಸಿದ ಮಾತ್ರದಿಂದ ರಿಯಲಿಸಂನ್ನು ಕಟ್ಟಿಕೊಡಲು ಸಾಧ್ಯವಿಲ್ಲ, ಗಿರೀಶ್ ಅವರು ಕಟ್ಟಿಕೊಡುವ ವಿವರಗಳಲ್ಲಿ ಒಂದು ಸಾವಯವ ಸಮಗ್ರತೆ ಇದೆ…ಅವರು ಕಾಂಕ್ರೀಟ್ ಆದದ್ದರ ಮೂಲಕ ತಾತ್ವಿಕತೆಯನ್ನು ಹೊರಹಾಕುವ ದಾರ್ಶನಿಕ ಅಲ್ಲ, ಬದಲಾಗಿ ಬದುಕು ಮಾನವೀಯ ಬಂಧಗಳಲ್ಲಿ ಇರಬೇಕಾದುದರ ಬಗ್ಗೆ ಕನಸು ಕಾಣುವ ಒಬ್ಬ ಕನಸುಗಾರ’ ಎನ್ನುತ್ತಾರೆ ಅನಂತಮೂರ್ತಿಯವರು. ಗಿರೀಶ್ ಅವರು ಕಾಣುವ ಕನಸಿನ ಹಿಂದೆ ಮೇಲಿನ ಲೋಕದೃಷ್ಟಿಯನ್ನು ತೆರಕಾಣಿಸುವ ಉದ್ದೇಶವೇ ಅಡಗಿದೆೆ.

ಗಿರೀಶ್ ಅವರು, ತಮ್ಮ ಬಾಲವನ್ನು ರೂಪಿಸಿದುದು ‘ಮಲೆನಾಡು, ಮಳೆ, ಹಸಿರು, ಯಕ್ಷಗಾನವೆಂಬ ಮನರಂಜನೆ ಮತ್ತು ಓದು’ ಎನ್ನುತ್ತಾರೆ. ನೀರು ಮತ್ತು ಹೆಣ್ಣು ಅವರ ಚಿತ್ರಗಳ ಜೀವಚ್ಛಕ್ತಿಗಳು. ಆದುದರಿಂದಲೇ ಮಳೆ ಅವರ ಎಲ್ಲಾ ಸಿನಿಮಾಗಳಲ್ಲಿ ಒಂದು ಆರ್ಕಿಟೈಪ್ ಆಗಿಬರುತ್ತದೆೆ. ದ್ವೀಪದಲ್ಲಂತೂ ಇಡಿಯ ಸಿನಿಮಾವೇ ಮಳೆಯ ಒಂದು ರೂಪಕವಾಗಿಬಿಟ್ಟಿದೆ. ನೀರು ಜೀವವನ್ನು ರಕ್ಷಿಸುವ ಮತ್ತು ಜೀವ ತೆಗೆಯುವ ಶಕ್ತಿಕೂಡ ಅಗಿದೆ. ಜೀವವಿರೋಧೀ ಕ್ರಿಯೆಗಳಿಗೆ ಅದು ನಮ್ಮನ್ನು ಅವಶ್ಯವಾಗಿ ದಂಡಿಸುತ್ತದೆ. ‘ಇದು ಇಷ್ಟೇ.. ಹೀಗೆ ಎಂದು ಬೇಲಿಹಾಕುವ’ ನಮ್ಮ ಜಜ್ಮೆಂಟಲ್ (judgemental) ಆದ ಮನುಷ್ಯ ಸಂಬಂಧದ ಪರಿಕಲ್ಪನೆ ಹೇಗೆ ಮುಳುಗಡೆಗೆ ಕಾರಣವಾಗಿ ಅದು ಒಂದು ದ್ವೀಪವಾಗಿ ಬಿಡುತ್ತದೆೆ ಎಂಬುದರ ಪ್ರತೀಕವಾಗಿ ಮಳೆ ಬರುತ್ತದೆ.

‘ಬಣ್ಣದ ವೇಷ’ದಲ್ಲಿ ಯಕ್ಷಗಾನ ಕಲೆಯಾಗುವುದರ ಜೊತೆಗೆ, ಕಲಾ ಪ್ರಕಾರಗಳು ಹೇಗೆ ದಮನಗೊಂಡ ವ್ಯಕ್ತಿತ್ವದ ಪ್ರೊಜೆಕ್ಷನ್ ಕೂಡಾ ಆಗಿರುತ್ತದೆ ಎನ್ನುವುದರ ಕಡೆಗೆ ಗಮನಸೆಳೆಯುತ್ತಾರೆ.

ಈ ಚಿತ್ರ ಪ್ರಾರಂಭವಾಗುವುದೇ ಬಸವನಹುಳದಿಂದ. ಬಸವನಹುಳಕೂಡ ಇಲ್ಲಿ ಒಂದು ಜೀವಚ್ಛಕ್ತಿಯ ಪ್ರತೀಕ. ಗಿರೀಶ್ ಅವರು ತಮ್ಮ ಚಿತ್ರಗಳಲ್ಲಿ ದಾಟಿಸುವ ಸಂದೇಶಗಳ ಪ್ರತೀಕವೂ ಆಗಿದೆ. ಬಸವನಹುಳು ಅಪಾಯ ಎದುರಾದಾಗಲೆಲ್ಲಾ ತನ್ನ ರಕ್ಷಣೆಯ ಉಪಾಯಗಳನ್ನು ತಾನೇ ಕಂಡುಕೊಳ್ಳುತ್ತದೆ. ಗಿರೀಶ್ ಅವರ ಚಿತ್ರಗಳ ಎಲ್ಲಾ ಹೆಣ್ಣುಗಳೂ ಇತರ ಪಾತ್ರಗಳೂ ಕೂಡ ಆಪತ್ತಿನ ಸಮಯದಲ್ಲಿ ತಮ್ಮದೇ ಉಪಾಯಗಳನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಾರೆ. ಈ ಪ್ರಯತ್ನದಲ್ಲಿ ಅವರು ಸೋಲಬಹುದು ಇಲ್ಲವೇ ಗೆಲ್ಲಬಹುದು ಆದರೆ ಪ್ರಯತ್ನಮಾತ್ರ ನಿರಂತರ ಜಾರಿಯಲ್ಲಿರುತ್ತದೆ ಎಂಬ ಸಂದೇಶವನ್ನು ಗಿರೀಶ್ ತಮ್ಮ ಚಿತ್ರಗಳಲ್ಲಿ ಬಯಲಾಗಿಸಿರುವುದರ ಕಡೆಗೆ ಶ್ರೀವಾಸ್ತವ್ ನಮ್ಮ ಗಮನ ಸೆಳೆಯುತ್ತಾರೆ.

ಹಾಲಿವುಡ್ ‘ತಾನು ಠಿಜಡಿಜಿಜಛಿಣ ಸಿನಿಮಾಗಳನ್ನು ಮಾಡುತ್ತೇನೆೆ’ ಎಂಬ ಅಹಂಕಾರಕ್ಕೆ ಗಿರೀಶ್ ಅದಕ್ಕೆ ‘ನೀನು ‘ಪರ್ಫೆಕ್ಟ್’ (perfect) ಸಿನಿಮಾ ಮಾಡಿದರೆ ನಾನು ‘ಇಂಪರ್ಫೆೆಕ್ಟ್ (imperfect) ಸಿನಿಮಾ ಮಾಡುತ್ತೇನೆ’ ಎಂದು ಉತ್ತರ ಕೊಡುತ್ತಾರೆ ಹಾಗೆ ನೋಡಿದರೆ ಪರಿಪೂರ್ಣತೆ ಎನ್ನುವುದು ಒಂದು ಮಿಥ್ಯೆ. ಅಪರಿಪೂರ್ಣತೆ ಎನ್ನುವುದೇ ವಾಸ್ತವ. ಇಂತಹ ಅನೇಕ ಅಪರಿಪೂರ್ಣತೆಗಳ ಮೂಲಕವೇ ಪೂರ್ಣತೆಯೆಡೆಗೆ ಬದುಕು ಚಲಿಸುತ್ತದೆ ಎನ್ನುವ ನಂಬಿಕೆ ಇರುವುದಾದರೂ ಪೂರ್ಣತೆ ಎನ್ನುವುದು ಒಂದು ಆದರ್ಶವಷ್ಟೇ. ಇದನ್ನು ಗಿರೀಶ್ ಕಾನರ್ಾಡರು ತಮ್ಮ ‘ಹಯವದನ’ದಲ್ಲಿ ಎಂದೋ ಹೇಳಿದ್ದಾರೆ. ಆದರೂ ನಮಗೆ ಪೂರ್ಣತೆಯ ಭ್ರಮೆ.

life in metaphors stillಬದುಕು ಸರಳ ರೇಖೆಯಲ್ಲಿ ಚಲಿಸುವುದಿಲ್ಲ. ಬೆಳಕಿನ ಅಲೆಗಳು, ಗಾಳಿ ಕೂಡ ವಕ್ರಗತಿಯಲ್ಲಿ ಚಲಿಸುತ್ತವೆ. ಬೆಂಕಿ ಕೂಡ ಸರಳ ನೇರ ಉರಿಯುವುದಿಲ್ಲ. ನದಿ ನೇರವಾಗಿ ಹರಿಯುವುದಿಲ್ಲ. ನಾವು ನಿಂತ ಭೂಮಿ ಚಪ್ಪಟೆಯಾಗಿಲ್ಲ. ಅದನ್ನು ಹೊದ್ದ ಆಕಾಶ ಕೂಡ ಅಂಚಿನಲ್ಲಿ ಬಾಗಿದೆ. ನಮ್ಮನ್ನು ಪೊರೆಯುತ್ತಿರುವ ಪ್ರಕೃತಿಯಂತೂ ಅನಂತ ವೈವಿಧ್ಯಗಳ ಊಟೆ. ಅವು ನಿಂತಿರುವುದೇ ಬಾಗಿ ಬಳುಕಿ. ನಮನಶೀಲವಾದುದು ಮಾತ್ರ ಬಾಗುತ್ತದೆ. ಹೆಣ್ಣು ಬಾಗಿ ಬಳುಕಿ ನಡೆಯುತ್ತಾಳೆ.

ವಿಶ್ವದಲ್ಲಿ ಎಲ್ಲವೂ ಬಾಗಿ ಬಳುಕಿ ಚಲಿಸುತ್ತದೆ. ಎಲ್ಲಕ್ಕೂ ವಕ್ರಗತಿ. ವಕ್ರ ಎಂದರೆ ಸಂಸ್ಕೃತದಲ್ಲಿ ಸುಂದರ ಎನ್ನುವ ಅರ್ಥವೂ ಇದೆ. ಪಿತೃಪ್ರಧಾನ ವ್ಯವಸ್ಥೆ, ಸಮಾಜಿಕ ಸಂಸ್ಥೆಗಳು, ಲೊಳಲೊಟ್ಟೆಯ ಪ್ರಭುತ್ವ, ಅಧಿಕಾರಗಳು ಮಾತ್ರ ಹಟತೊಟ್ಟು ಕಠೋರ ಕಬ್ಬಿಣದ ತುಂಡಿನಂತೆ ಪೆಡಸಾಗಿ ನಿಂತಿವೆೆ. ಪೆಡಸಾಗಿರುವುದರ ವಿರುದ್ಧ ನಮನಶೀಲತೆಯ ಸಂಘರ್ಷ ಎಂದಿನಿಂದ ನಡೆಯುತ್ತಲೇ ಇದೆ. ಇಂತಹ ಸಂಘರ್ಷವನ್ನು ಗಿರೀಶ್ ತಮ್ಮ ಚಿತ್ರಗಳ ಮೂಲಕ ಪರಿಣಾಮಕಾರಿಯಾಗಿ ಬಯಲಾಗಿಸಿರುವುದನ್ನು ಶ್ರೀವಾಸ್ತವ ತಮ್ಮ ‘ಲೈಫ್ ಇನ್ ಮೆಟಾಫರ್ಸ್’ ನಲ್ಲಿ ಬಹಳ ಸಮರ್ಥವಾಗಿ ತೋರಿಸಿದ್ದಾರೆ.

ಆದರೆ ಸುಮಾರು 80 ನಿಮಿಷಗಳ ಕಾಲ ನಡೆಯುವ ಈ ಚಿತ್ರ ಪ್ರೇಕ್ಷಕರ ಸಹನೆಯನ್ನು ಬೇಡುತ್ತದೆ. ಅದನ್ನು ಶ್ರೇಷ್ಠ ಕಲಾವಿದರ, ಸಿನಿಮಾ ನಿರ್ದೇಶಕರುಗಳ ಸಂದರ್ಶನಗಳನ್ನು ಅಧಿಕವಾಗಿ ತೋರಿಸುವುದರ ಬದಲು, ಗಿರೀಶ್ ಅವರ ಚಿತ್ರಗಳ ಕ್ಲಿಪ್ ಗಳನ್ನು ಇನ್ನೂ ಹೆಚ್ಚು ತೋರಿಸುವುದರ ಮೂಲಕ ಅದರ ಏಕತಾನತೆಯನ್ನು ಗೆಲ್ಲಬಹುದಿತ್ತು. ಇಂತಹ ಸುದೀರ್ಘ ಚಿತ್ರದಲ್ಲಿ ವೈದೇಹಿ ಎಲ್ಲಿಯೂ ಕಾಣಿಸಿಕೊಳ್ಳುವುದಿಲ್ಲ. ಅದೊಂದು ಮುಳ್ಳಾಗಿ ಚುಚ್ಚುತ್ತದೆ.

‍ಲೇಖಕರು Admin

June 25, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. ಪ್ರೇಮಲತ ಬಿ.

    ಅದ್ಭುತವಾದ ಬರಹ. ಗಿರೀಶ ಕಾಸರವಳ್ಳಿಯವರ ಅಗಾಧ ಪ್ರತಿಭೆಗೆ ಕಟ್ಟು ಕೊಡುವ ಶ್ರೀವತ್ಸರ ಹ್ರುದಯ ಶ್ರೀಮಂತಿಕೆಗೆ ಮುಕುಟಪ್ರಾಯವಾದ ವಿವರಣೆ.
    ಚಿತ್ರವನ್ನು ಖಂಡಿತಾ ನೋಡುತ್ತೇವೆ.

    ಪ್ರತಿಕ್ರಿಯೆ
  2. Kusuma Patel

    Very we’ll written. I am even impressed with title. I will certainly see the movie. Thank you.

    ಪ್ರತಿಕ್ರಿಯೆ
  3. savitha

    ನನ್ನದು ನನಗೆ ಸರಿ, ಆದರೆ ನಿನ್ನದೂ ಸರಿ ಇರಬಹುದು, ನಾನು ಕಾಣುವ ‘ಇಷ್ಟೇ’ ಅಲ್ಲ, ನಾನು ಕಾಣದ ಇನ್ನೂ ‘ಎಷ್ಟೋ’ ಇರಬಹುದು ಎನ್ನುವ ಅಖಂಡವಾದ ಕಾಣ್ಕೆಗೆ ಪರದೆ ಎಳೆದುಬಿಡುತ್ತವೆ ನಮ್ಮ ಇಗೋಟ್ರಿಪ್ ಗಳು.ಪರಿಪೂರ್ಣತೆ ಮತ್ತು ಅಪರಿಪೂರ್ಣತೆಯ ವ್ಯಾಖ್ಯಾನ ಮನಮುಟ್ಟುವಂತಿದೆ .ನಿಜಕ್ಕೂ ಅದ್ಬುತ ಬರಹ.

    ಪ್ರತಿಕ್ರಿಯೆ
  4. Shyamala Madhav

    ಬಹಳ ಚೆನ್ನಾಗಿ ವಿಶ್ಲೇಷಿಸಿದ್ದೀರಿ , ಗಿರಿಜಾ. ಅಂದು ನೋದಲಾಗದೇ ಹೋದ ಅಭಾಗ್ಯೆ , ನಾನು . .ಇನ್ನೆಂದು ನೋಡ ಸಿಗುವುದೋ , ಏನೋ!

    – Shyamala.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: