ಬೆದೆಗೆ ಬಂದ ಮೀನಿಗೆ ಕಾಯುತ್ತಾ..

ಹತ್ತು ಮೀನು ಸಾರಿಗಾಗಿ ಕಾಯಿಸುತ್ತಿರುವ ಆರಿದ್ರಾ ಮಳೆ

nempe devaraj

ನೆಂಪೆ ದೇವರಾಜ

ಇದೀಗ ಮಳೆ ನಮ್ಮ ಊರಿನ ಪಶ್ಚಿಮದಲ್ಲಿ ಭಯಂಕರವಾಗಿ ಬರಲು ಪರ್ವತಾಕಾರದ ಮೋಡಗಳನ್ನು ಕಳುಹಿಸುತ್ತಿದೆ. ಕಳೆದ ಮೂರು ದಿನಗಳಿಂದ ಎಡ ಬಿಡದೆ ಸುರಿಯುತ್ತಿರುವ ತುಂತುರು ಮಳೆ ಹಳ್ಳ, ಹೊಳೆ, ಕಾಲುವೆ, ಗದ್ದೆ ಬಯಲಲ್ಲಿ ನೀರು ಮಾಡದೆ ಗೊಚ್ಚೆ ಕೆಸರಿನ ಪಿಚಿ ಪಿಚಿ ಸದ್ದಿಗಷ್ಟೆ ಕಾರಣವಾಗುತ್ತಿದೆ. ಇದೆಂತಹ ಮಳೆ? . ಒಮ್ಮೆ ಸರಿದು ಹೋಗಿ ನೀರು ಮಾಡಬಾರದೆ? ಎಂದು ಹೇಳುವವರು ನಮ್ಮ ಕಡೆ ತುಂಬಾ ಜನ. ಒಂದಷ್ಟು ಹೆಂಗಸರಿಗೆ ಜೋರಾಗಿ ಸುರಿದು ಹೋಗುವ fishಮಳೆ ಬೇಕೆಂದೆನಿಸಲು ಕಾರಣವಾಗುತ್ತಿರುವುದೇ ಬಾವಿಗಳು ಬತ್ತಿ ಹೋಗಿದ್ದು. ಆದರೆ ಕೆಲವು ಗಂಡಸರಿಗೆ ಆರಂಭದ ಆರಿದ್ರಾ ಮಳೆ ಸುರಿದರೆ ಹತ್ತು ಮೀನು ತಿನ್ನಬಹುದು ಎಂಬ ಮಹದಾಸೆ.

ಈ ಹತ್ತು ಮೀನಿನ ರುಚಿಯೇ ಅಂತಾದ್ದು. ಬೇರೆ ಸಂದರ್ಭಗಳಲ್ಲಿ ಮರದ ಹೊಟ್ಟು ತಿಂದಂತಾಗುವ ಮೀನುಗಳು ಈ ಸಮಯದಲ್ಲಿ ಬೆದೆಗೆ ಬಂದೋ.. ಗರ್ಭ ಧರಿಸಿಯೋ.. ತಮ್ಮ ರುಚಿಯನ್ನು ನೂರ್ಮಡಿಗೊಳಿಸಿಕೊಂಡಿರುತ್ತವೆ. ರಾತ್ರಿ ಸಿಕ್ಕ ಮೀನುಗಳಿಗೆ ಅಡುಳಿ ಹಾಕಿ ಬೆಳಗಿನ ತಿಂಡಿಗೆ ಸಾರು ಮಾಡಿದರೆ ಕಾಳು ಕಾಳಾಗಿ ಸಿಗುವ ತತ್ತಿಯ ಜೊತೆ ಇಪ್ಪತ್ತೋ ಇಪ್ಪತ್ತೈದೋ ಕಡಬುಗಳನ್ನು ಒಂದೇ ಏಟಿಗೆ ತಿಂದು ಮುಗಿಸುವವರೂ ಇದ್ದಾರೆ.

ಮನೆಯ ಹೊರಗೆ ಮಳೆಯ ಆರ್ಭಟ. ಒಳಗೆ ಅಡುಗೆ ಮನೆಯ ಅಗಾಧ ಪ್ರಮಾಣದ ಬೆಂಕಿಯಲ್ಲಿ ಕೊತ ಕೊತನೆ ಕಲ್ಲು ಗಡುಗೆಯಲ್ಲಿ ಕುದಿಯುವ ಮೀನಿನ ಸಾರು, ಪಕ್ಕದ ಒಲೆಯಲ್ಲಿ ಮೌನವಾಗಿ ಬೇಯಿಸಿಕೊಳ್ಳುವ ಅಕ್ಕಿಯ ಕಡುಬುನ ಸರಗೋಲು, ಬಗಬಗನೆ ನೀಲಿಯ ಜ್ವಾಲೆಗಳನ್ನು ಹೊರ ಹೊಮ್ಮಿಸುತ್ತಾ ಮೇಲ್ಮುಖವಾಗಿ ಹೋಗುವ ಬೆಂಕಿಗೆ ಒಂದೊಂದೇ ಕಟ್ಟಿಗೆಗಳನ್ನು ಹಾಕಿ ಅಂಗೈ ಅಂಗಾಲುಗಳಿಗೆ ಶಾಖ ಕೊಡುತ್ತಾ ಕೂರುವ ಮನೆಯ ಯಜಮಾನ. ಇಡೀ ಮನೆಯನ್ನೆಲ್ಲ ತನ್ನ ಅಪೂರ್ವ ಪರಿಮಳದಿಂದ ತನ್ನತ್ತ ಆಕರ್ಷಿಸುವ ಮೀನಿನ ಹುಳಿಗೆ ಓದುತ್ತಿದ್ದ ಪುಸ್ತಕಗಳು ಬಿದ್ದಲ್ಲೇ ಬಿದ್ದು ಒದ್ದಾಡುವ ಬೆಳಗಿನ ವಾತಾವರಣದ ನೆನಪು ರೋಮಾಂಚನಗೊಳಿಸುವಂತದ್ದು.

ಕ್ವಳಸ, ಹಾರ್ಸಿಡಿ, ಕಲ್ಲುಮೊಗ್ಗು, ಚರ, ಕುಬ್ಬಸ, ಹಾಟಣಗುಬ್ಬಸ, ಗೊಜ್ಜಳೆ, ಚೇಳಿ, ತೊಳ್ಳೆ, ಮುರುಗೋಡು, ಗಿರಲು.. ಹೀಗೆ ನೂರಾರು ಜಾತಿಯ ಮೀನುಗಳ ಮಾರಣ ಹೋಮಕ್ಕೆ ಕಾದು ಕೂತಿರುವ ಹತ್ಮೀನು ಪ್ರಿಯರಿಗೆ ಆರಿದ್ರಾ ಮಳೆ ತನ್ನ ಬಾಣ ಬಿರುಸುಗಳನ್ನು ತೋರಿಸದೆ ಕಳೆದ ನಾಲ್ಕೈದು ದಿನಗಳಿಂದ ಜಿಟಿ ಜಿಟಿಗುಡುರುವುದಕ್ಕೆ ಅತೀವ ನಿರಾಶೆ ವ್ಯಕ್ತ ಪಡಿಸದೆ ಬೇರೆ ಮಾರ್ಗವಿಲ್ಲ. ಹಾಗಂತ ಗದ್ದೆ, ಹಳ್ಳ, ಒಡು- ವಟ್ಟೆಗಳಲ್ಲಿ ನೀರಾಗದಿದ್ದರೂ ಹೊಳೆಯ ಬದಿಯವರು ಈ ಸಣ್ಣ ಮಳೆಗೆ ಬಲೆ ಹಾಕಿ ಅಗಾಧ ಪ್ರಮಾಣದಲ್ಲಿ ಮೀನು ಶಿಕಾರಿ ಮಾಡಿ ಗುಟ್ಟಿನಲ್ಲೇ ಕೈ ಕ್ಲೀನು ಮಾಡಿಕೊಳ್ಳುತ್ತಿದ್ದಾರೆಂಬ ಸುದ್ದಿಗಳೂ ಬರುತ್ತಿವೆ.

ಕೆಲವು ಕೆರೆಗಳು ಮೀನಿನ ರಾಶಿಯನ್ನೇ ಹೊತ್ತು ಮುಗುಮ್ಮಾಗಿ ಮಲಗಿರುತ್ತವೆ. ಅಚ್ಚುಗಟ್ಟುದಾರರು ಮಾತ್ರ ಪ್ರವೇಶಾವಕಾಶ ಪಡೆದಿರುವ ಈ ಕೆರೆಗಳ ಸುತ್ತ fish3ಓಡಾಡುವುದೂ ಗಾಳಹಾಕುವುದೂ, ಬಲೆ ಹಾಕುವುದೂ ಮಹಾ ಅಪರಾಧವಾದರೂ ಹತ್ತು ಮೀನುಗಳನ್ನು ಕಡಿಯಲು ಯಾವುದೇ ತೊಂದರೆ ತಾಪತ್ರಯವಿಲ್ಲ. ಎಷ್ಟೇ ಮೀನುಗಳು ಈ ಕೆರೆಗಳಲ್ಲಿ ಇದ್ದರೂ ಬೇಸಿಗೆಯಲ್ಲಿ ಬಲೆಗೆ ಒಂದೂ ಮೀನು ಬೀಳುವುದಿಲ್ಲ. ಬಿದ್ದರೂ ಅವುಗಳೆಲ್ಲ ರುಚಿಕಳೆದುಕೊಂಡ ಮರದ ದಿಮ್ಮಿಗಳೇ ಸರಿ.

 

ಆದರೆ ಮಳೆಯ ಆರಂಭದಲ್ಲಿ ರಾತ್ರಿ ವೇಳೆ ಹೊಸ ನೀರಿಗೆ ಬಾಯಿಕೊಟ್ಟು ಬದಿಗೆ ಬರುವುದನ್ನೇ ಕಾಯುವ ಅಡಿಕೆ ದಬ್ಬೆಯ ದೊಂದಿ ಅಥವಾ ಟಾರ್ಚ್ ಹಿಡಿದು ಕಾಯುವವರ ಕತ್ತಿಯ ಪೆಟ್ಟು ಗೊಜ್ಜಲೆ- ಹಾರ್ಸಿಡಿಗಳ ತಲೆಯ ಮೇಲೆ ಬೀಳುವುದು ಗ್ಯಾರೆಂಟಿ. ತುಂಗಾ ,ಮಾಲತಿ ಹೊಳೆಗಳಿಂದ ಅಥವಾ ದೊಡ್ಡ ದೊಡ್ಡ ಕೆರೆಗಳಿಂದ ಮುಮ್ಮುಖವಾಗಿ ಲಕ್ಷಾಂತರ ಸಂಖ್ಯೆಯಲ್ಲಿ ಗದ್ದೆಯ ಕೋಡಿಗಳ ಮೇಲೆ ದಾಳಿ ಇಡುವೋಪಾದಿಯಲ್ಲಿ ಈ ಮೀನುಗಳು ಬರುತ್ತವೆ. ಹೊಸ ನೀರಲ್ಲಿ ತತ್ತಿ ಉಲುಬಿ ಮರಿಮಾಡಿ ನಿರಾಳಗೊಳ್ಳಲು ಬರುವ ಮೀನುಗಳ ತುಂಬಿದ ಬಸುರಿತನ ಮನುಷ್ಯರ ಬಾಯಲ್ಲಿ ನೀರೂರಿಸುವ ಅಪೂರ್ವ ಸಂದರ್ಭವಾಗಿರುವುದು ವಿಧಿಯ ಲೀಲೆ ಎನ್ನಬೇಕಿದೆ.

ಇತ್ತೀಚಿನ ದಿನಗಳಲ್ಲಿ ಹತ್ತು ಮೀನುಗಳು ಸ್ವಲ್ಪವೇ ಪ್ರಮಾಣದಲ್ಲಿ ದೊರೆತರೂ ಬೆರಳು ಗಾತ್ರದ ಎರಡೇ ಮೀನುಗಳನ್ನು ಹಾಕಿ ಸಾರು ಮಾಡಿದರೂ ಅವುಗಳು ಹೊಂದಿರುವ ರುಚಿಗೆ ಪಂಚತಾರಾ ಹೋಟೆಲುಗಳ ಪಾಕ ಶಾಸ್ತ್ರ ಪ್ರವೀಣರುಗಳೂ, ಬರ್ಗರ್, ಕೆಂಟುಕಿ ಫ್ರೈಡ್ ಚಿಕನ್ಗಳನ್ನು ಕಂಡುಹಿಡಿದು ಮಾರುಕಟ್ಟೆ ಮಾಡುವ ಬಹುರಾಷ್ಟ್ರೀಯ ಕಂಪೆನಿಗಳೂ ಸರಿಸಮಾನರಾಗಲು ಸಾಧ್ಯವಿಲ್ಲ. ಹತ್ತು ಮೀನು ಸಾರಿಗೆ ಅಡುಳಿ ಹಾಕುವುದನ್ನು ಮರೆಯಬಾರದು. ಟೊಮೆಟೊ, ಹುಣಿಸೇ ಹುಳಿಗೆ ಹತ್ತು ಮೀನುಗಳು ಒಗ್ಗಿಕೊಳ್ಳುವುದೇ ಇಲ್ಲ.

‍ಲೇಖಕರು admin

June 25, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Vihi wadawadagi

    Wow baayi neerurisuvantide adre nano uttara karnataki allade hasiru tinnuvava aadaru tumba chennagide

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: