ಗಿರಿಜಾ ಶಾಸ್ತ್ರಿ ಕಂಡಂತೆ ‘ಗೊಂದಲಿಗ್ಯಾ’

ಕಣ್ಣು ತೆರೆಸಿದ ಕೃತಿ ‘ಗೊಂದಲಿಗ್ಯಾ’

ಗಿರಿಜಾ ಶಾಸ್ತ್ರಿ

ಎ.ಎಂ. ಮದರಿ ಅವರ ಆತ್ಮ ಚರಿತ್ರೆ “ಗೊಂದಲಿಗ್ಯಾ” ಓದಿ ಪುಸ್ತಕ ಮುಚ್ಚಿದ ತಕ್ಷಣ ನನ್ನ ಕಣ್ಣಾಲಿಗಳು ತುಂಬಿ ಬಂದವು. ಪುಸ್ತಕದ ರಕ್ಷಾಪುಟವನ್ನೇ ಬಹಳ ಹೊತ್ತು ನೇವರಿಸುತ್ತಾ ಎದೆಗಪ್ಪಿಕೊಂಡಿದ್ದೆ. ಹಾಗೇ ಎಷ್ಟು ಹೊತ್ತು ಕುಳಿತಿದ್ದೆನೋ ಗೊತ್ತಿಲ್ಲ. ಅದು ನನ್ನೊಳಗೆ ಮೂಡಿಸಿದ ಆರ್ದ್ರತೆ ಅಂತಹದ್ದು.

ಕಣ್ಣಾಲಿಗಳು ತುಂಬಿ ಬಂದಿದ್ದು ಎರಡು ಕಾರಣಗಳಿಗಾಗಿ. ಸುಮಾರು ಏಳು ವರ್ಷಗಳ ಹಿಂದೆ ಮುಂಬಯಿಯ ಯಾವುದೋ ಸಾಹಿತ್ಯಕ ಕಾರ್ಯಕ್ರಮದಲ್ಲಿ ಈ ಪುಸ್ತಕವನ್ನು ಸ್ವತಃ ಮದರಿಯವರೇ ನನ್ನ ಹೆಸರು ಬರೆದು ನನಗೆ ಕೊಟ್ಟಿದ್ದರು. ಅದನ್ನು ಕಪಾಟಿನಲ್ಲಿಟ್ಟು ಜೋಪಾನ ಮಾಡಿ ಮರೆತುಬಿಟ್ಟಿದ್ದೆ. ನಿನ್ನೆ ಕಪಾಟಿನಲ್ಲಿ ಯಾವುದೋ ಪುಸ್ತಕ ಹುಡುಕುತ್ತಿದ್ದಾಗ. ಈ ಪುಸ್ತಕ ಕೈಗೆ ಹತ್ತಿತು. ಅದನ್ನು ಹಿಡಿದುಕೊಂಡವಳು ಕೆಳಗೆ ಇಟ್ಟಿದ್ದು ಓದಿ ಮುಗಿಸಿದ ನಂತರವೇ.

ಈ ಪುಸ್ತಕ ಕೊಟ್ಟಾಗ ನನಗೆ ಮದರಿಯವರ ಪರಿಚಯವಿರಲಿಲ್ಲ. ಅತಿ ಪರಿಚಯಾತ್ ಅವಜ್ಞಾ ಎನ್ನುವ ಮಾತೊಂದಿದೆ. ಅದು ಸುಳ್ಳೇನೋ. ಅಪರಿಚಿತಾತ್ ಅವಜ್ಞಾ ಎನ್ನುವುದೇ ನಿಜವೇನೋ. ನಮಗೆ ಪರಿಚಯ ವಿಲ್ಲದಿರುವವರ ಬಗ್ಗೆ ‘ಇವರೇನು ಮಹಾ’ ಎನ್ನುವ ತಾತ್ಸಾರ ಭಾವನೆ ಇರುತ್ತದೆ. ‘ಗೊಂದಲಿಗ್ಯಾ’ ಓದಿದನಂತರ ಮದರಿಯವರು ನನಗೆ ಯಾವ ಜನ್ಮದ ಸ್ನೇಹಿತರೋ ಎಂಬಷ್ಟು ಹತ್ತಿರವಾಗಿಬಿಟ್ಟಿದ್ದಾರೆ.

ಅವರ ಪುಸ್ತಕ ವನ್ನು ಇಷ್ಟು ದಿನ ಕಪಾಟಿನಲ್ಲಿಟ್ಟು ಧೂಳು ಹಿಡಿಸಿದ್ದಕ್ಕೆ ಪಾಪ ಪ್ರಜ್ಞೆ ಕಾಡುತ್ತಿದೆ. ಹೊಸಬರನ್ನು under estimate ಮಾಡುವ ನನ್ನ ಸ್ವಭಾವಕ್ಕೆ ನನಗೇ ನಾಚಿಕೆಯಾಗುತ್ತಿದೆ.

ದೈನ್ಯತೆಯ ರುದ್ರ ರೂಪವನ್ನು, ನಮ್ಮ ಸಾಮಾಜಿಕ ಶ್ರೇಣೀಕರಣದ ವಿಕಟಾಟ್ಟಹಾಸದ ವಿರಾಟ್ ಸ್ವರೂಪವನ್ನು ಕಾಣಬೇಕೆಂದರೆ ‘ಗೊಂದಲಿಗ್ಯಾ’ ಓದಬೇಕು.

ಬದುಕಿನ ಸಣ್ಣ ಪುಟ್ಟ ಸೋಲುಗಳೇ ನನಗೆ ದೊಡ್ಡ ಅವಮಾನಗಳಾಗಿ ದುರ್ಬಲ ಕ್ಷಣಗಳಲ್ಲಿ ಎದ್ದು ಬಂದು ಕತ್ತಿ ಮಸೆಯುತ್ತಿದ್ದವು. ಆದರೆ ನಿಜವಾದ ಅಪಮಾನವೆಂದರೆ ಏನು? ಅಪಮಾನದ ದಳ್ಳುರಿಯಲ್ಲಿ. ಸುಟ್ಟು ಆ ಬೂದಿಯಿಂದಲೇ ಫೀನಿಕ್ಸ್ ನ ಹಾಗೆ ಎದ್ದು ಬರುವುದು ಏನೆಂಬುದನ್ನು ಈ ಪುಸ್ತಕ ಬಯಲಾಗಿಸಿತು.
ಪುಸ್ತಕವೊಂದು ಅಕಸ್ಮಾತ್ ಕೈ ಹತ್ತುವುದೂ ಒಂದು ಯೋಗವೇನೋ? ಕಣ್ಣು ತೆರೆಸುವುದಕ್ಕೆ ಕಾಲ ಕೂಡಿ ಬರಬೇಕಲ್ಲ? ಪುರಂದರ ದಾಸರಿಗೆ ತಂಬೂರಿಯೊಂದು ಎತ್ತಿಕೋ ಎತ್ತಿಕೋ ಎನ್ನುತ್ತಿತ್ತಂತೆ (ಸು.ರಂ. ಎಕ್ಕುಂಡಿಯವರ ಕವಿತೆ) ಹಾಗೆ ಕಾಲಕೂಡಿ ಬಂದರೆ ಪುಸ್ತಕವೂ ನನ್ನೆತ್ತಿಕೋ ಎತ್ತಿಕೋ ಎನ್ನುತ್ತದೆಯೇನೋ.

ಅಪಮಾನವನ್ನೇ ಗುರಾಣಿ ಮಾಡಿಕೊಂಡು ಸಮಾಜದ ಮುಖಕ್ಕೆ ಹಿಡಿಯುತ್ತಾ ಸಂತರಾಗುವುದು ಒಂದು ರೀತಿಯಾದರೆ, ಅದೇ ಅಪಮಾನವನ್ನು ಮೆಟ್ಟಿಲಾಗಿಸಿಕೊಂಡು ಮೇಲೇರಿ ಬಂದು ಜಾತೀಯತೆಗೆ ಸೆಡ್ಡು ಹೊಡೆಯುವುದು ಇನ್ನೊಂದು ರೀತಿ. ಸಮಾಜ ರಾಜಕಾರಣಕ್ಕೆ ಬುದ್ಧಿ ಕಲಿಸುವ ಎರಡು ದಾರಿಗಳೂ ಸ್ವಾಗತಾರ್ಹವೇ. ಹೈದರಾಬಾದ್ ಕರ್ನಾಟಕ ದೌರ್ಜನ್ಯಕ್ಕೆ ಸಿಕ್ಕಿ ಹೆಚ್ಚು ನರಳಿದ ಪ್ರದೇಶ. ಆದುದರಿಂದಲೋ ಏನೋ ಅಲ್ಲಿ ಹೆಚ್ಚು ತತ್ವ ಪದಕಾರರನ್ನು ಕಾಣುತ್ತೇವೆ. ಸಾಹಿತ್ಯದ ನೆಲೆಯಲ್ಲಂತೂ ವಚನ ಯುಗದಿಂದಲೇ ಅದು ಪ್ರಸಿದ್ಧ.

ಮದರಿಯವರು ಅಪಮಾನವನ್ನು ಮೆಟ್ಟಿಲಾಗಿ ಮಾಡಿಕೊಂಡು ಮೇಲೇರಿ ಬಂದ ಗೊಂದಲಿಗರ ಜಾತಿಯಲ್ಲೇ ಕೆಲವೇ ಪ್ರಮುಖರಲ್ಲಿ ಒಬ್ಬರು. ಇದು ಅವರ ಸಾರ್ಥಕ್ಯದ ಕತೆ. ಅಪಮಾನಗೊಂಡಲ್ಲಿ ರೋಷ ಕೋಪಗಳು ಸಹಜ. ಆದರೆ ಮದರಿಯವರ ಬರವಣಿಗೆ ಯಾವುದೇ ಆವೇಶಕ್ಕೆ ಒಳಗಾಗದೆ ಸಮತೋಲವನ್ನು ಸಾಧಿಸಿದೆ.
ಗೊಂದಲಿಗರ ಹಲವು ಸಾಂಸ್ಕೃತಿಕ ಆಯಾಮಗಳು ಈ ಕೃತಿಯಲ್ಲಿ ಅನಾವರಣಗೊಂಡಿವೆ. ಹಣ ಅಥವಾ ಜಾತಿಯ ವರ್ಚಸ್ಸು ಇಲ್ಲದಿದ್ದರೆ ಎಂತಹ ಅದ್ಭುತ ಕಲೆ/ ಕಲಾವಿದನೂ/ಳೂ ಮಣ್ಣು ಪಾಲಾಗುವ ದುರಂತ ವಾಸ್ತವವನ್ನು ‘ಗೊಂದಲಿಗ್ಯಾ’ ಕಟ್ಟಿಕೊಡುತ್ತದೆ.

ಮರಾಠಿಯಲ್ಲಿ ಆತ್ಮ ಚರಿತ್ರೆಗಳ ಹುಲುಸಾದ ಬೆಳೆ ಇದೆ, ಮತ್ತು ಅಷ್ಟೇ ಅನನ್ಯವಾದವು ಕೂಡ.
ಮದರಿಯವರು ಬೆಳೆದ ಪರಿಸರ ಸಾಂಸ್ಕೃತಿಕ ವಾಗಿ ಕರ್ನಾಟಕ ಕ್ಕಿಂತ ಮಹಾರಾಷ್ಟ್ರಕ್ಕೇ ಹೆಚ್ಚು ಹತ್ತಿರ. ಅದರ ಘಮಲನ್ನೂ ಸಹ ಇಲ್ಲಿ ಕಾಣಬಹುದಾಗಿದೆ.

ಈ ಆತ್ಮ ಚರಿತ್ರೆ ಸುತ್ತುವರಿದಿರುವ ಭಾವವೆಂದರೆ ನಾಚಿಕೆ, ಅಪಮಾನ, ಹೇವರಿಕೆ, ಕೀಳರಿಮೆ, ದಾರಿದ್ರ್ಯ, ಹಿಂಸೆ, ಅನಾರೋಗ್ಯ, ಅವಿದ್ಯೆ, ಮೂಢನಂಬಿಕೆ, ಹೆಣ್ಣು ಮಕ್ಕಳ ಕತ್ತೆ ದುಡಿಮೆ, ಅವರ ಆತ್ಮ ವಿಶ್ವಾಸ, ಜೊತೆಗೆ ಹಕ್ಕಿ ಶಕುನ ನುಡಿಯುವ, ಗೊಂದಲ ಹಾಡುವ, ಗೀಗೀ ಪದಗಳ, ಬುಡಬುಡಿಕೆಯ ನೈಪುಣ್ಯ ಗಳ ಗ್ರಾಮೀಣ ಸೊಗಡಿನ ಸೃಜನ ಶೀಲ ಪ್ರಪಂಚ. ಹೊಟ್ಟೆಪಾಡಿಗಾಗಿ ಇವುಗಳ ಆತ್ಮಸಾತ್ ಮಾಡಿಕೊಂಡಿರುವ (ಭವಿಷ್ಯ ಹೇಳುವ, ಬುಡುಬುಡಿಕೆ) ಚಾಲಾಕಿತನ ಎಲ್ಲವೂ ಸೇರಿ ಗೊಂದಲಿಗರ ಸಾಂಸ್ಕೃತಿಕ ಆಯಾಮವನ್ನು ಈ ಕೃತಿ ಪರಿಚಯ ಮಾಡಿಕೊಡುತ್ತದೆ. ಹೊಸ ಲೋಕವೊಂದನ್ನು ಅನಾವರಣಗೊಳಿಸಿದ ಎ.ಎಂ. ಮದರಿ ಅವರಿಗೆ ಅಭಿನಂದನೆಗಳು ಹಾಗೂ ಶುಭಾಶಯಗಳು.

‍ಲೇಖಕರು avadhi

April 23, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: