ಗಿರಿಜಾ ಶಾಸ್ತ್ರಿ ಓದಿದ ‘ಈ ಚಿಟ್ಟೆ ಕಾಡಿದ ಹಾಗೆ’

ಗಿರಿಜಾ ಶಾಸ್ತ್ರಿ

‘ಈ ಚಿಟ್ಟೆ ಕಾಡಿದ ಹಾಗೆ ‘ ಇದು ಸುಚಿತ್ರಾ ಹೆಗಡೆಯವರ ಕವನ ಸಂಕಲನ. ಮೊದಲಿಗೆ ಅವರಿಗೆ ಅಭಿನಂದನೆಗಳು. ಇದನ್ನು ಅವರು ಕಳುಹಿಸಿ ಬಹಳ ದಿನಗಳಾದವು. ಅವರ ಪ್ರೀತಿಗೆ ಧನ್ಯವಾದಗಳನ್ನು ಹೇಳುತ್ತಾ ಈ ಕವಿತೆಗಳನ್ನು ಓದುವುದರ ಮೂಲಕ ನನಗೆ ಹೊಳೆದ ಕೆಲವು ಸಾಲುಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಸೃಜನಶೀಲ ಅನುಸಂಧಾನಕ್ಕೆ ಚಿಟ್ಟೆ ಬಹಳ ಒಳ್ಳೆಯ ಪ್ರತಿಮೆ.‌ ಕಂಬಳಿ ಹುಳುವೊಂದು ರೂಪಾಂತರಗೊಂಡು ಚಿಟ್ಟೆಯಾಗುತ್ತದೆ.

ಲೌಕಿಕ ವ್ಯಾಪಾರಗಳು ಕವಿಯ ಸಮಾಹಿತ‌ ಮನಸ್ಸಿನ ಮೂಲಕ ರೂಪಾಂತರ ಗೊಂಡು ಕವಿತೆಯಾಗುತ್ತದೆ. ಇಲ್ಲಿರುವ ಅನೇಕ ಕವಿತೆಗಳು ಹೀಗೆ ರೂಪಾಂತರಗೊಂಡ ಚಿಟ್ಟೆಗಳಾದರೆ ಕೆಲವು ಕವಿತೆಗಳು ರೂಪಾಂತರಗೊಳ್ಳುವ ಹಂತದಲ್ಲಿರುವ ಕಂಬಳಿಹುಳುಗಳು. ಇದೇ ಹೆಸರಿನ ಕವಿತೆಯಲ್ಲಿ ಈ ಚಿಟ್ಟೆ ಊಸರವಳ್ಳಿಗೆ ಮುಖಾಮುಖಿಯಾಗುತ್ತದೆ. ಚಿಟ್ಟೆಯದು ರೂಪಾಂತರವಾದರೆ ಊಸರವಳ್ಳಿಯದು ವರ್ಣಾಂತರ. ಎರಡೂ ಪ್ರಕ್ರಿಯೆಗಳೂ ಅವುಗಳ ಅಸ್ತಿತ್ವದ ಹೋರಾಟವೇ ಆಗಿದೆ. ಹೀಗಿರುವಾಗ ಊಸರವಳ್ಳಿಗೇಕೆ ಉಪೇಕ್ಷೆ, ಚಿಟ್ಟೆಗೇಕೆ ಉತ್ಪ್ರೇಕ್ಷೆ ಎನ್ನುವ ಸವಾಲು ಕವಿಯದು.

ಇದು ಒಂದು ಸಾಮಾಜಿಕ ನ್ಯಾಯಕ್ಕಾಗಿ, ನೈಸರ್ಗಿಕ ಸ್ವಾಮ್ಯಕ್ಕಾಗಿ ( equity) ಇಡುವ ಬೇಡಿಕೆ. ನಿರ್ಲಿಂಗ ಪಾರಮ್ಯ ಎನ್ನುವ ಕವಿತೆಯಲ್ಲೂ ಇದರ ಛಾಯೆ ಇದೆ. ಇಡೀ ಸಾಹಿತ್ಯದ ಪರಿಕಲ್ಪನೆಯೇ ‘ಮನುಷ್ಯಜಾತಿ ತಾನೊಂದೆ ವಲಂ ‘ ಎನ್ನುವ ನೈಸರ್ಗಿಕ ಸ್ವಾಮ್ಯದ ಹಕ್ಕೊತ್ತಾಯ ಕುರಿತಾದದ್ದು. ಇಂದು ಈ ನೈಸರ್ಗಿಕ ಸ್ವಾಮ್ಯ ಎನ್ನುವುದು ಮನುಷ್ಯನಿಗೆ ಮಾತ್ರ‌ಮೀಸಲಾಗಿಲ್ಲ. ವಿಶ್ವದ ಇಡೀ ಜೀವಜಾಲಕ್ಕೆ ವಿಸ್ತೃತಗೊಂಡಿದೆ.

ಕಾವ್ಯ ಮಾಡಬೇಕಾದುದೂ ಅದನ್ನೇ ಎಲ್ಲವನ್ನೂ ತಬ್ಬಿಕೊಳ್ಳುವುದು (inclusiveness). ಬಾಹ್ಯ ಜಗತ್ತನ್ನು ಧ್ಯಾನಸ್ಥನೆಲೆಯಲ್ಲಿ ಸುಮ್ಮನೇ ನೋಡುವುದು ಕೂಡ ಅಖಂಡತೆಯನ್ನು ( one ness) ತಬ್ಬಿಕೊಳ್ಳುವ ಒಂದು ಕೈಂಕರ್ಯವೇ. ‘ಥಳ ಥಳ….ತಳ ತಳ’, ‘ತಿಳಿಗಪ್ಪು ಬಳಿದ ಗಾಜಿನ ಕಿಟಕಿ’ ಕವಿತೆಗಳು ಹೀಗೆ ಸುಮ್ಮನೇ ನೋಡುವ ಕೆಲಸವನ್ನು ಸಮರ್ಥವಾಗಿ ಮಾಡುತ್ತವೆ.

ಇಲ್ಲಿ ತನ್ನನ್ನೇ ತಾನು ಹುಡುಕುವ ಆತ್ಮಾನುಸಂಧಾನದ ಕವಿತೆಗಳಿವೆ (ಎರಡು ಧ್ರುವಗಳು ಸೇರಿದಾಗ, ಮುಸುಕಿದೀ ಮಬ್ಬಿನಲಿ, ಅಡಗುತಾಣವೊಂದು ಬೇಕಾಗಿದೆ), ಲಿಂಗಸಮಾನತೆಗೆ ಹಾತೊರೆಯುವ, ಹೆಣ್ಣು ಗಂಡುಗಳ ನಡುವೆ ಅಬೇಧವನ್ನು ಸಾಧಿಸಬೇಕೆನ್ನುವ ಪ್ರೇಮ ಕವಿತೆಗಳಿವೆ (ನಾನು ನಾನಾಗಿರಲು ಬಿಡು, ಹೋಳು ಹೃದಯ, ನಾವು ನಾನಾದಾಗ, ತಲೆಯೆತ್ತಿ ನೋಡು ನನ್ನ, ಉಳಿದು ಹೋದ ಕ್ಷಣ) ಸಾಮಾಜಿಕ ಪ್ರಜ್ಞೆ ಮತ್ತು ಆತ್ಮ ಪರಿವೀಕ್ಷಣೆಯ ಹಂಬಲದಿಂದ ಹೊರಟ ಅನೇಕ ಕವಿತೆಗಳು ಬಹಳ ಸಶಕ್ತ ಸಾಲುಗಳನ್ನು ಹೊಂದಿವೆ.

ಆದರೆ ಇಂತಹ ಸಶಕ್ತ ಸಾಲುಗಳನ್ನು ಹೊಂದಿರುವ ಕವಿತೆಗಳು ಕೆಲವು ಕಡೆ ವಾಚ್ಯಗೊಂಡು ಕವಿತೆಗೆ ಸಂಕೋಲೆಯನ್ನು ತೊಡಿಸುತ್ತವೆ. (ಚಲನ ಶೀಲತೆಯೇ ಅಲೆಯ ಪಾಡು….ಇರವಾರದೇಕೆ ಲಿಂಗ ತಾಟಸ್ಥ್ಯ… ನಿನ್ನ ಮರ್ಜಿಯ ಟೋಪಿ ತೆಗೆದು / ದೂರದಲಿ ನಿಂತು ತಲೆಯೆತ್ತಿ ನೋಡು) ಕವಿಗೆ ಸಹೃದಯರ ಗ್ರಹಿಕೆಯ ಸಾಮರ್ಥ್ಯ ದ ಬಗ್ಗೆ ಶಂಕೆ ಮೂಡಿದಾಗ ಹೀಗೆ ಆಗುವುದು ಸಹಜ. ಹಾಗೆ ಶಂಕೆ ಮೂಡಿದಾಕ್ಷಣ ಕವಿತೆ ತನ್ನ ಸಾಂದ್ರತೆಯನ್ನು ಕಳೆದುಕೊಂಡು ಬಿಡುತ್ತದೆ.ಇದು ಸುಚಿತ್ರಾ ಅವರ ಮೊದಲ ಸಂಕಲನವಾದುದರಿಂದ ಈ‌ ಮಿತಿಗಳೆಲ್ಲ ಗೌಣ. ಅವರು ಮಹತ್ವಾಕಾಂಕ್ಷೆಯ ಕವಿ. ಅದು ಮುಂಬರುವ ಅವರ ಕವಿತೆಗಳಲ್ಲಿ ಸಿದ್ಧಿಸಲಿ ಎಂದು ಹಾರೈಸುವೆ.

‍ಲೇಖಕರು Admin

March 24, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: