ಗಿರಿಜಾ ಶಾಸ್ತ್ರಿ ಅಂಕಣ: ಇದು ಬರಿ ಉಸಿರಲ್ಲೋ ಅಣ್ಣಾ..

ಒಂದು ಸುಂದರವಾದ ‘ಮುಂಬೆಳಗು’. ಹೀಗೆಯೇ ಯುಟ್ಯೂಬಿನಲ್ಲಿ ಪರ್ವೀನ್ ಸುಲ್ತಾನಳ ಭವಾನಿ ದಯಾನಿ ಬಂಧಿಶ್‌ನ್ನು ಕೇಳುತ್ತಿದ್ದೆ. ಭೈರವಿ ರಾಗ ನನ್ನ ಧೀರ್ಘ ಉಸಿರಿನ ಜೊತೆ ಲಯಬದ್ಧವಾಗಿ ಚಲಿಸುತ್ತಿತ್ತು. ಹಾಡು ಉಸಿರು ಸಂಯೋಗಗೊಂಡ ಒಂದು ಮಧುರವಾದ ಕ್ಷಣ. ಹಾಗೆ ನೋಡಿದರೆ ಹಾಡಿಲ್ಲದೆ ಉಸಿರಿಲ್ಲ ಉಸಿರಿಲ್ಲದೆ ಹಾಡಿಲ್ಲ.

ಯಾಕೆಂದರೆ ಉಸಿರಿನ ಚಲನೆ ಕೂಡ ಹಾಡಿನಂತೆಯೇ ಲಯಬದ್ಧವಾದುದು. ಹೀಗೆ ‘ಭವಾನಿ’ ಉದ್ಭುದ್ದಶುದ್ಧಳಾಗಿ ನನ್ನ ಧಮನಿಗಳಲ್ಲಿ ಹರಿಯುತ್ತಿದ್ದಳು. ಬಾಲ್ಕನಿಯ ಮೂಲಕ ಗಿಡಗಂಟಿಗಳು ನನಗೆ ಉಸಿರನ್ನು ಒದಗಿಸುತ್ತಿದ್ದವು. ಹಾಡಿಗೆ ಅವೂ ತೊನೆಯುತ್ತಿದ್ದವು. ದೀರ್ಘವಾದ ಉಸಿರು ನನ್ನೊಳ ಹೊರಗೆ ನಿರಂತರವಾಗಿ, ನಿರಾತಂಕವಾಗಿ ಚಲಿಸುತ್ತಿತ್ತು.

ಹೀಗೆ ಒಳ ಹೊರಗೆ ಚಲಿಸುತ್ತಿರುವ ಈ ಉಸಿರನ್ನು ವೈಜ್ಞಾನಿಕವಾಗಿ ಕೇವಲ ‘ಶ್ವಾಸೋಚ್ಛಾಸ’ವೆಂದು ಮಾತ್ರ ಯಾಂತ್ರಿಕವಾಗಿ ನಾಮಕರಣ ಮಾಡಿಬಿಟ್ಟರೆ ಸಾಕೆ? ಆಶ್ಚರ್ಯವೆಂದರೆ ನಿರಂತರವಾಗಿ ನಮ್ಮೊಳ ಹೊರಗೆ ಚಲಿಸುತ್ತಿರುವ ಈ ಉಸಿರು/ಗಾಳಿ ಈ ಭೂಮಿಯ ಮೇಲಿನ ಎಲ್ಲ ಜೀವಜಾಲದ ಹೊರಗಿದೆ. ಮೊದಲೇ ಹೇಳಿದಂತೆ ಇದರ ಚಲನೆಯೆನ್ನುವುದು ಒಂದು ಲಯವನ್ನು ಅನುಸರಿಸಿದೆ.

 

ನಮ್ಮದೆಂದು ಭಾಸವಾಗುವ ಈ ಉಸಿರು ನಮ್ಮ ಭಾಗವಲ್ಲ, ಅದು ನಮ್ಮೊಳಗೂ ಇಲ್ಲ. ಬದಲಾಗಿ ನಾವು ಅದರೊಳಗೆ ಇದ್ದೇವೆ. ಮೇಲುನೋಟಕ್ಕೆ ಪರಸ್ಪರ ವಿರುದ್ಧವೆಂದು ಕಾಣಬಹುದಾದ ಈ ಉಚ್ಛಾಸ ನಿಶ್ವಾಸಗಳೆಂಬ ಕ್ರಿಯೆಗಳ ಮೂಲಕವೇ ಜೀವಕಾಮ ಪೂರ್ಣಗೊಳ್ಳುತ್ತದೆ. ಇವು ವಿರುದ್ಧ ಕ್ರಿಯೆಗಳಲ್ಲ. ಒಂದೊಕ್ಕೊಂದು ಪೂರಕವಾಗಿ ವಿರುದ್ಧನೆಲೆಯಿಂದ ಕಾರ್ಯವೆಸಗುತ್ತಲೇ ಒಂದು ಇನ್ನೊಂದರ ಅಸ್ತಿತ್ವಕ್ಕೆ ಕಾರಣವಾಗಿದೆ, ಹಾಗೂ ಒಂದು ಇನ್ನೊಂದನ್ನು ಜೀವಂತವಾಗಿರಿಸಿದೆ.

ಒಂದನ್ನು (ಉಚ್ಛಾಂಸ, ನಿಶ್ವಾಸ ಗಳಲ್ಲಿ) ತಡೆಹಿಡಿದಾಕ್ಷಣ ಮತ್ತೊಂದು ಚಲಿಸುವುದಿಲ್ಲ. ಮೊದಲ ಉಸಿರು ಈ ದೇಹದೊಳಗೆ ಪ್ರವೇಶ ಮಾಡುವುದರ ಮೂಲಕ ಈ ಭೂಮಿಯ ಮೇಲೆ ಜೀವನ ಪ್ರಾರಂಭವಾಗುತ್ತದೆ. ಅದೇ ಉಸಿರು ಕೊನೆಯ ಬಾರಿಗೆ ಈ ದೇಹವನ್ನು ಒದ್ದು ಹೊರ ಹಾರುವುದರೊಂದಿಗೆ ಬದುಕಿನ ಸಮಾಪ್ತಿಯಾಗುತ್ತದೆ.

ಮೊದಲ ಉಚ್ಛಾಂಸ ಮತ್ತು ಕಡೆಯ ನಿಶ್ವಾಸದ ನಡುವೆ ನಮ್ಮ ಬದುಕಿದೆ. ಒಳಗೆ ಬರುವ ಉಸಿರು ಕರ್ಷಣವನ್ನುಉಂಟುಮಾಡುತ್ತದೆ. ದೇಹ ಬಿಗಿಯಾಗುತ್ತದೆ. ನಿಶ್ವಾಸ ಬಿಡುಗಡೆಯನ್ನು ತರುತ್ತದೆ, ದೇಹ ಸಡಿಲಗೊಳ್ಳುತ್ತದೆ. ಬದುಕೆಂದರೆ ಜವಾಬ್ದಾರಿ, ಅನೇಕ ಆಕರ್ಷಣ ವಿಕರ್ಷಣಗಳ ಕರ್ಷಣ. ಸಾವೆಂದರೆ ಈ ಕರ್ಷಣಗಳಿಂದ ಬಿಡುಗಡೆ. ಒಳ ಬರುವ ಉಸಿರು ಆಮ್ಲಜನಕವನ್ನು ಹೊತ್ತು ತರುತ್ತದೆ.

ಕೆಂಪು ರಕ್ತಕಣಗಳೊಂದಿಗೆ ಸೇರಿ ಶಕ್ತಿ ಧಾತುವಾಗುತ್ತದೆ. ಒಳಗಿನ ಅಗ್ಗಿಷ್ಟಿಕೆಯನ್ನು ಹಚ್ಚುತ್ತದೆ. ಈ ಉರಿಯಿಂದೆದ್ದ ಧೂಮ ಇಂಗಾಲಾಮ್ಲವಾಗಿ ಹೊರ ಹೋಗುತ್ತದೆ. ದೇಹ ಹಗುರಗೊಳ್ಳುತ್ತದೆ. ಒಳಗೆ ಧಾವಿಸುವ ಉಸಿರಿಗೆ ಸದಾ ಪತರಗುಟ್ಟುವ ಕ್ರಿಯಾಶೀಲತೆ, ಉದ್ಭುದ್ಧ ಚಟುವಟಿಕೆ. ಹೊರ ಹೋಗುವ ಉಸಿರಿಗೆ ಈ ಎಲ್ಲ ಚಟುವಟಿಕೆಗಳಿಂದ, ಕರ್ಷಣದಿಂದ ಬಿಡುಗಡೆ.

ನಮ್ಮ ದೈನಂದಿನ ಉಸಿರಾಟದ ಈ ಕ್ರಮವೇ ಇಡೀ ನಮ್ಮ ಬದುಕಿನ ಪ್ರಾರಂಭ ಮುಕ್ತಾಯಗಳ ಪ್ರತೀಕವಾಗಿದೆ. ಇದರ ಕೈಯೊಳಗಿರುವ ನಮ್ಮ ಸಾವು ಬದುಕುಗಳೂ ಪರಸ್ಪರ ವಿರುದ್ಧವಲ್ಲ, ಬದಲಾಗಿ ಪರಸ್ಪರ ಪೂರಕ. ಸಾವು ಇಲ್ಲದಿದ್ದರೆ ಹೊಸ ಹುಟ್ಟು ಇಲ್ಲ. ಹುಟ್ಟಿಲ್ಲದಿದ್ದರೆ ಸಾವಿಲ್ಲ. ಈ ಹುಟ್ಟು ಸಾವುಗಳು ಆರಂಭ ಅಂತ್ಯಗಳಂತೆ ಕಂಡರೂ ಅವು ಒಂದು ಇನ್ನೊಂದರ ಆರಂಭವೂ ಹೌದು ಅಂತ್ಯವೂ ಹೌದು.

ಇದರ ಮೂಲ ಮಂತ್ರ ನಿರಂತರ ಬದಲಾವಣೆಗೆ ಪಕ್ಕಾಗುತ್ತಿರುವುದು. ಇಂಗ್ಲಿಷಿನಲ್ಲಿ Nothing is permanent except change ಎನ್ನುವ ಮಾತೊಂದಿದೆ. ಈ ಬದಲಾವಣೆಯೇ ನಿಶ್ಚಿತವಾದುದು ಹಾಗೂ ಶಾಶ್ವತವಾದುದು. ಇದನ್ನು ಚಲಾವಣೆಗೆ ತರುವುದು ನಮ್ಮ ಉಸಿರೇ.

ನಮ್ಮನ್ನು ಈ ಬ್ರಹ್ಮಾಂಡದ ಎಲ್ಲಾ ಜೀವ ಜಾಲದ ಜೊತೆಗೆ ಬೆಸೆಯುವ ಕೊಂಡಿಯೆಂದರೆ ಇದೊಂದೇ. ಮಾತ್ರವಲ್ಲ ‘ಅಣು’ವನ್ನು ‘ಮಹತ್ತಿ’ನೊಂದಿಗೆ, ಪಥವನ್ನು ‘ಇಹ’ದೊಂದಿಗೆ ಕೂಡಿಸುವ ಸಾಧನವೂ ಇದೇ. ಕಣ್ಣಿಗೆ ಅಗೋಚರವಾದ ಇದು ಅನುಭವಕ್ಕೆ ಮಾತ್ರ ದಕ್ಕುವಂತಹುದು.

ನಮ್ಮ ದೈನಂದಿನ ಮಾತುಗಳಲ್ಲಿಯೂ ಇದು ರೂಪಕವಾಗಿ ಬೆರೆತು ಹೋಗಿದೆ. ‘ಇಲ್ಲಿ ನನಗೆ ಉಸಿರು ಕಟ್ಟುತ್ತಿದೆ’ ‘ನಿರಾಳವಾಗಿ ಉಸಿರು ಬಿಟ್ಟೆ’ ಮತ್ತು ‘ಉಸಿರು ಹೊಯ್ದುಕೊ’ ಎಂಬಂತಹ ಮಾತುಗಳು ನಮ್ಮ ಬದುಕಿನ ಬಂಧನ ಮತ್ತು ಸ್ವಾತಂತ್ರ್ಯದ ಸಂದರ್ಭಗಳನ್ನೇ ಉದ್ದೇಶಿಸುತ್ತವೆ. ಹೀಗಾಗಿ ಉಸಿರು ಅನೇಕ ಬೈನರಿಗಳಲ್ಲಿ ಕೆಲಸ ಮಾಡುತ್ತದೆ. ಇವೆಲ್ಲಕ್ಕೂ ಒಂದು ದ್ವಂದ್ವಾತ್ಮಕ ಸಂಬಂಧವಿದೆ. ಬಿಗಿಗೊಳ್ಳುವುದು ಮತ್ತು ಸಡಿಲವಾಗುವುದು, ಪಡೆಯುವುದು ಮತ್ತು ಕೊಡುವುದು, ಸಂಪರ್ಕ ಮತ್ತು ನಿರೋಧ, ಬಿಡುಗಡೆ ಮತ್ತು ಬಂಧನ ಇವು ನಮ್ಮ ಉಸಿರಿನ ಮೂಲತತ್ವಗಳು.

ತೊಗಲಿನ ಸ್ಪರ್ಷವೆಂದರೆ ನೇರವಾದುದು, ಮತ್ತು ನಮ್ಮ ನಿಯಂತ್ರಣಕ್ಕೆ ಒಳಪಟ್ಟದ್ದು. ಒಬ್ಬರನ್ನು ಮುಟ್ಟುವುದು, ಮುಟ್ಟದಿರುವುದು ನಮ್ಮ ಐಚ್ಛಿಕ ಕ್ರಿಯೆ. ಆದರೆ ಗಾಳಿಯ ವಿಷಯಕ್ಕೆ ಮಾತ್ರ ಇಂತಹ ಅಸ್ಪೃಶ್ಯತೆಯನ್ನು ಮನುಷ್ಯ ಆಚರಿಸಲಾರ. ನಮಗೆ ಸಮ್ಮತವಿರಲಿ ಬಿಡಲಿ, ನಾವು ಉಸಿರಾಡುವ ಗಾಳಿ ಮಾತ್ರ ಈ ಜೀವ ಜಗದ ಎಂಜಲು.

ನಮ್ಮ ಶತ್ರು ಬಿಟ್ಟ ಗಾಳಿಯನ್ನೇ ನಾವು ಪಡೆಯಬೇಕಾಗಿರುವುದು ನಮಗೆ ಅನಿವಾರ್ಯ. ಇದರಲ್ಲಿ ನಮ್ಮ ಆಯ್ಕೆಯ ಪ್ರಶ್ನೆಯೇ ಇಲ್ಲ. ಅಸ್ಪೃಶ್ಯತೆಯನ್ನೇ ಆತ್ಮಸಾತ್ ಮಾಡಿಕೊಂಡು ಬದುಕುತ್ತಿರುವ ನಮ್ಮ ತರ್ಕ ಈ ಉಸಿರಿನ ತಲೆಗೆ ಹತ್ತುವುದಿಲ್ಲ. ಅದರ ಹೃದಯಕ್ಕೆ ನಾಟುವುದಿಲ್ಲ. ‘ನಾನು’ ಎಂಬ ಗೋಡೆಯನ್ನು ಒದ್ದು ಬೀಳಿಸಿ ಅದನ್ನೇ ಸೇತುವೆಯನ್ನಾಗಿ ಮಾಡಿಕೊಂಡು ಅದು ‘ನೀನು’ ಎಂಬುದನ್ನು ಮುಟ್ಟುತ್ತದೆ.

ಒಳಹೋಗುತ್ತದೆ. (ಇಂಗ್ಲಿಷಿನ ‘ಐ’ ಕ್ಯಾಪಿಟಲ್ ಅಕ್ಷರ ವನ್ನು ಒಮ್ಮೆ ಕಣ್ಣುಮುಂದೆ ತಂದುಕೊಳ್ಳಿ. ಅದು ಎದ್ದು ನಿಂತರೆ ಗೋಡೆಯಾಗುತ್ತದೆ. ಬಿದ್ದರೆ ಸೇತುವೆಯಾಗುತ್ತದೆ) ಈ ‘ನೀನು’, ಎನ್ನುವವ ಮನುಷ್ಯನೇ ಆಗಬೇಕಿಲ್ಲ. ಸಕಲ ಪ್ರಾಣಿ, ಜಲಜೀವ, ಸಸ್ಯ ಹಾಗು ಅಗೋಚರ ಹುಳು ಹುಪ್ಪಟೆ ಕ್ರಿಮಿಕೀಟಗಳೂ ಇದರೊಳಗೆ ಸೇರುತ್ತವೆ. ಈ ಎಲ್ಲವೂ ಸೇರಿ ಒಂದು ಜಾಲವನ್ನೇ ನಿರ್ಮಾಣ ಮಾಡಿವೆ.

ಹೀಗಾಗಿ ಒಂದನ್ನು ಧಿಕ್ಕರಿಸಿ ಇನ್ನೊಂದು ಬದುಕುವ ಪ್ರಶ್ನೆ ಎಲ್ಲಿ? ಇಲ್ಲಿ ‘ನೀನು ನಾನು ಆನು ತಾನು’ ಎಲ್ಲ ಕಲಸು ಮೇಲೋಗರ. ಮನುಷ್ಯನ ದೇಹವನ್ನು ಆವರಿಸಿರುವ ತೊಗಲಿನ ವಿಸ್ತೀರ್ಣತೆಗಿಂತ ಉಸಿರಿನ ಆಡುಂಬೊಲವಾದ ಶ್ವಾಸಕೋಶದ ಕ್ಷಮತೆ ಹಾಗೂ ಒಳ ವಿಸ್ತೀರ್ಣವೇ ಹೆಚ್ಚು. ಮನುಷ್ಯನ ದೇಹದಲ್ಲೇ ಅತಿ ವಿಶಾಲವಾದ ಸಂಪರ್ಕ ಸಾಧನ ಅಂಗವೆಂದರೆ ಇದೇ.

ಯಾಕೆಂದರೆ ಎಲ್ಲಾ ವಿಭಿನ್ನ ಧ್ರುವಗಳೂ ಸಮಾವೇಶಗೊಳ್ಳುವ ತಾಣವಿದಲ್ಲಾ! ಈ ಉಸಿರು ಸರ್ವವ್ಯಾಪಿ ಎಂಬುದು ಅರಿವೆಗೆ ಬರಬೇಕಾದರೆ, ಮಧ್ಯದ ಉಪಾಧಿಗಳು ಬಿದ್ದಹೋಗಬೇಕು. ‘ಆಲಯ’ಗಳು ಬಿದ್ದು ಹೋದಕ್ಷಣವೇ ‘ಬಯಲಾ’ಗಿಬಿಡುತ್ತವೆ. ಆಲಯ ಸಾಕಾರವಾದರೆ, ಬಯಲು ನಿರಾಕಾರ. ನಮ್ಮ ನಾಡಿನ ಸಂತರ, ಅವಧೂತರ, ಪರಿಭ್ರಮಣವೆಲ್ಲಾ ಈ ಪರಿಕಲ್ಪನೆಯ ಸುತ್ತಲೇ.

ಈ ಉಸಿರಿಗೆ ಇನ್ನೊಂದು ಹೆಸರೆಂದರೆ ಪ್ರೀತಿ. ಅಮೂರ್ತವಾದ ಇದರ ಕಾರ್ಯಸ್ವರೂಪವನ್ನು ‘ಋತ’ ವೆಂತಲೋ, ‘ಭೌತಿಕ ನಿಯಮ’ ವೆಂತಲೋ ವರ್ಗೀಕರಣಮಾಡಿ ಹೆಸರಿಸಿಬಿಡಬಹುದು. ಆದರೆ ಅನುಭವಕ್ಕೆ ಮಾತ್ರ ದಕ್ಕುವ ಈ ಜೀವದಾಯಕ ತತ್ವವನ್ನು ‘ಪ್ರೀತಿ’ಎಂಬ ಹೆಸರಿನಿಂದ ಕರೆಯುವುದೇ ಸೂಕ್ತ. ಯಾಕೆಂದರೆ ಪ್ರೀತಿಗೆ ಮಾತ್ರ ಮನುಷ್ಯರನ್ನು ಜೀವಂತವಾಗಿಡುವ ಶಕ್ತಿಯಿದೆ.

ಪ್ರೀತಿ ಇಲ್ಲವಾದ ಕ್ಷಣ ಈ ಜಗತ್ತೂ ನಾಶವಾಗಿಬಿಡುತ್ತದೆ. ಪ್ರೀತಿಯೆಂದರೆ ಆಕರ್ಷಣೆಯೂ ಹೌದು. ವಿರುದ್ಧ ಧ್ರುವಗಳ ಅಕರ್ಷಣೆ. ಈ ಆಕರ್ಷಣೆಯಿಂದಲೇ ಭೂಮಿ ತಿರುಗುತ್ತದೆ, ಹೂವು ಅರಳುತ್ತದೆ. ಕಾದ ಭೂಮಿಗೆ ತಂಪೆರೆಯುವ ಮಳೆ ನದಿಯಾಗಿ ಹರಿಯುತ್ತದೆ. ಬೆಳಕು ಹರಿಯುತ್ತದೆ. ಆಕಾಶಕಾಯಗಳು ನಮ್ಮ ತಲೆಯಮೇಲೆ ಬೀಳದೇ ನಮ್ಮನ್ನು ಕಾಪಾಡಿವೆ.

ಪ್ರೀತಿಯ ಆಕರ್ಷಣೆಗೆ ಸಿಲುಕಿಯೇ ಇವು ಎಲ್ಲ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ. ಇಂತಹ ಜಡವಾದ ಮೂಲವಸ್ತುಗಳೇ ಜೀವಕೋಶಗಳಾಗಿ ಪಲ್ಲವಿಸುವ ಬಗೆ ಎಂತಹ ವಿಸ್ಮಯಕಾರಿಯಾದುದು. ಅದಕ್ಕೆಂದೇ ಕವಿ ಕುವೆಂಪು ಅವರು ತೆಗೆ ಜಡವೆಂಬುದೆ ಸುಳ್ಳು, ಕಲ್ಲಲಿ ಮಣ್ಣಲಿ ಹೂವಲಿ ಹುಲ್ಲಲಿ ನನ್ನಲಿ ನಿನ್ನಲಿ ಎಲ್ಲೆಲ್ಲಿಯು ಚೈತನ್ಯ ಎಂದು ಹಾಡಿದರು.

ಈ ಉಸಿರನ್ನು ಪ್ರಾಣ, ಆತ್ಮ, ಎಂದೆಲ್ಲಾ ಬೇರೆ ಬೇರೆ ಶಬ್ಧಗಳಲ್ಲಿ ಕರೆಯಲಾಗುತ್ತದೆ. ‘ತು ನ ಜಾನೇ ಆಸ್ ಪಾಸ್ ಹೈ ಖುದಾ’ ಎನ್ನುವ ಹಿಂದಿ ಹಾಡೊಂದಿದೆ. ಅದು ಉಸಿರಲ್ಲದೆ ಮತ್ತೇನು? ಇಡೀ ದೇಹದ ಕಣ ಕಣಗಳಲ್ಲಿ ತುಂಬಿ ಹೊರಹೊಮ್ಮುವ ಇದು ಸರ್ವಾಂತರ್ಯಾಮಿ. ವಿಶ್ರಾಂತವಾಗಿ ನಮ್ಮಿಂದ ಹೊರಬಿದ್ದ ಇದು ಮತ್ತೆ ದುಪ್ಪಟ್ಟು ಶಕ್ತಿಯಾಗಿ ನಮ್ಮೊಳಗೇ ಪ್ರವೇಶಿಸುತ್ತದೆ. ಅದನ್ನು ಅರಿತವರಿಗೆ ಅಲ್ಲಿ ಶಕ್ತಿಯ ಆಸ್ಫೋಟ.

‘ವಿಶ್ವಪ್ರಜ್ಞೆಯ ಉದಯ’. ಆ ಪ್ರಜ್ಞೆಯ ವಿಸ್ತಾರ. ಹೀಗೆ ಹೊರಹೋಗಿ ಒಳಬಂದು, ಮಾಡುವ ಈ ಚಕ್ರೀಭವನ ಕ್ರಿಯೆಯೊಳಗೆ ಪ್ರೀತಿಯ ಸ್ರೋತವೇ ಅಡಗಿದೆ. ಇದನ್ನೇ (ಉಸಿರು ಜೀವಂತವಾಗಿಟ್ಟಿರುವ ಜೀವ ಕೋಶಗಳನ್ನು) ಆಧ್ಯಾತ್ಮ ಗುರುವೊಬ್ಬರು ‘ಭವಾನಿ’ (ದೇವಿ) ಎನ್ನುತ್ತಾರೆ. ಪರ್ವೀನ್ ಸುಲ್ತಾನಳ ‘ಭವಾನಿ ದಯಾನಿ’ ಕೇಳಿದವರಿಗೆ ಈ ಪ್ರೀತಿಯ, ಶಕ್ತಿಯ ಆತ್ಮಸಾತ್ ಆಗುತ್ತದೆ.

ದ್ವೇಷವಾದರೆ ಮನಸಾರೆ ಹಳಿದು, ಬಾಯಿತುಂಬ ಬೈದು ದೇಹ ಮನಸ್ಸುಗಳನ್ನು ಹಗುರಾಗಿಸಿಕೊಳ್ಳಬಹುದು. ಆದರೆ ಅದೇ ದೇಹ ಮನಸ್ಸುಗಳನ್ನು ಇನ್ನಿಲ್ಲದಂತೆ ಆವರಿಸಿ ಅವುಗಳನ್ನು ಕರಗಿಸಿ ಮೇಣದ ಉಂಡೆ ಮಾಡಿಬಿಡುವ ಈ ಪ್ರೀತಿಯ ಭಾರವನ್ನು ಹೇಗೆ ಕಳೆದು ಕೊಳ್ಳಬಹುದು? ಒಂದು ಪಕ್ಷ ಈ ಪ್ರೀತಿಗೆ ಮೂಲಭೂತವಾದವನ್ನು ದಮನಮಾಡುವ ಶಕ್ತಿಯಿದ್ದಿದ್ದರೆ? ಭವಾನಿಯಂತೆ ಜ್ವಾಲಾಮುಖಿಯಾಗಿ ಚಂಡಿಯಾಗಿ ಕೆಟ್ಟದ್ದನ್ನು ಆಪೋಶನ ತೆಗೆದುಕೊಳ್ಳುವ ತಾಕತ್ತಿದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು.

In breathing there are two blessings
Drawing breath, releasing it again,
The one pressurizes us, the other refreshes us,
So wonderfully mixed is life.

(ಪ್ರೇರಣೆ : The Healing Power Of Illness by Thorwald Dethlefsen & Rudiger Dahlke)

‍ಲೇಖಕರು avadhi

November 19, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: