ಇವತ್ತು ಪುರುಷರ ದಿನ ಆಚರಿಸಲಾಗುತ್ತಿದೆ..

ಅಂಜಲಿ ರಾಮಣ್ಣ

ಅಂಜಲಿ ರಾಮಣ್ಣ

ಅಧ್ಯಕ್ಷರು, ಮಕ್ಕಳ ಕಲ್ಯಾಣ ಸಮಿತಿ

ಜಗತ್ತಿನ ೪೫ ರಾಷ್ಟ್ರಗಳು ಇವತ್ತು ಪುರುಷರ ದಿನ ಆಚರಿಸುತ್ತಿವೆ. ಎಲ್ಲಾ ತೆರನಾದ ಅನ್ಯಾಯಗಳು ಮಹಿಳೆಯರಿಗೆ ಮಾತ್ರ ಆಗುವುದು, ಶೋಷಣೆ ಮತ್ತು ದೌರ್ಜನ್ಯಗಳು ಹೆಣ್ಣು  ಮಕ್ಕಳಿಗೆ ಮಾತ್ರ ತಾಗುವುದು ಎನ್ನುವ ಭಾವನೆ ಪ್ರಚಲಿತದಲ್ಲಿದೆ.  ಆದರೆ ಇದು ಭಾವನೆ ಮಾತ್ರ. ವಾಸ್ತವದಲ್ಲಿ ಅಂಕಿ ಅಂಶಗಳ ಪ್ರಕಾರ ಬಾಲಕಿಯರಷ್ಟು ಅಲ್ಲದಿದ್ದರೂ ಗಂಡು ಮಕ್ಕಳು ಕೂಡ ಬಾಲ್ಯವಿವಾಹ, ಕಿಶೋರ ಕಾರ್ಮಿಕತೆ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಗುರಿಯಾಗುತ್ತಿದ್ದಾರೆ.

ಪುರುಷ ದಿನಾಚರಣೆ ಎಂದರೆ ಕೇವಲ ವಯಸ್ಕರಿಗೆ ಸಂಬಂಧಪಟ್ಟ ವಿಷಯ ಅಲ್ಲ. ವಯಸ್ಕ ಮತ್ತು ಅಪ್ರಾಯಸ್ಥ ಗಂಡಸರುಗಳನ್ನು ಒಳಗೊಂಡಿದ್ದಾಗಿದೆ. ಈ ದಿನದ  ಮುಖ್ಯ ಉದ್ದೇಶ ಸಮಾಜಕ್ಕೆ ಧನಾತ್ಮಕ ಪುರುಷ ಮಾದರಿಗಳನ್ನು ನೀಡುವುದು. ೨೦೧೯ರಲ್ಲಿ ಈ ಮೂರು ವಿಷಯಗಳ ಬಗ್ಗೆ ಹೆಚ್ಚಿನ ಗಮನ ನೀಡಲು ನಿರ್ಧರಿಸಲಾಗಿದೆ. ಗಂಡಸರ ಮಾನಸಿಕ ಆರೋಗ್ಯವನ್ನು ಉತ್ತಮ ಪಡಿಸುವುದು, ವಿಷಕಾರಕ ವಸ್ತುಗಳ ಸೇವನೆಯಿಂದ ಪುರುಷತ್ವವನ್ನು ಹೆಚ್ಚಿಸಿಕೊಳ್ಳುವುದರ ಬಾಧಕಗಳ ಬಗ್ಗೆ ಅರಿವು ಮೂಡಿಸುವುದು ಮತ್ತು ಗಂಡಸರಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆಯ ಬಗ್ಗೆ ಗಮನ ನೀಡುವುದು.

ಮಕ್ಕಳ ಹಕ್ಕುಗಳ ಒಡಂಬಡಿಕೆಯ ಪರಿಚ್ಛೇಧ ೩೪ರಲ್ಲಿ ಮಕ್ಕಳನ್ನು ಲೈಂಗಿಕ ಶೋಷಣೆಯಿಂದ ರಕ್ಷಿಸಬೇಕು ಎಂದು ಹೇಳಲಾಗಿದೆ. ಇದಕ್ಕೆ ಪೂರಕವಾಗಿ ನಮ್ಮ ದೇಶದಲ್ಲಿ ೨೦೧೨ರಲ್ಲಿ  ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯಿದೆಯನ್ನು ಜಾರಿಗೆ ತಂದಿದೆ. ಇದರಲ್ಲಿ ೧೮ ವರ್ಷ ಒಳಗಿನ ಗಂಡು ಮತ್ತು ಹೆಣ್ಣು ಇಬ್ಬರಿಗೂ ಲೈಂಗಿಕ ದೌರ್ಜನ್ಯದ ವಿರುದ್ಧ ರಕ್ಷಣೆ ಒದಗಿಸಲಾಗಿದೆ. ಹತ್ತು ವರ್ಷಗಳ ಕಾಲ ಕಠಿಣ ಜೈಲುವಾಸದ ಶಿಕ್ಷೆ ನೀಡಲಾಗುತ್ತದೆ. ಈ ಕಾಯಿದೆಯಡಿಯಲ್ಲಿ ದಾಖಲಾದ ಪ್ರಕರಣಗಳು ಬಹುಪಾಲು ಹೆಣ್ಣು ಮಕ್ಕಳ ಮೇಲೆ ನಡೆದ ದೌರ್ಜನ್ಯವೇ ಆಗಿರುತ್ತದೆ. ೨೦೧೭ರಲ್ಲಿ  ಕರ್ನಾಟಕದಲ್ಲಿ ತೀವ್ರತೆರನಾದ ಲೈಂಗಿಕ ದೌರ್ಜನ್ಯ ವಿಭಾಗದಲ್ಲಿ  ೧೯೫೬ ಪ್ರಕರಣಗಳು ದಾಖಲಾಗಿವೆ. ದೇಶದಾದ್ಯಂತ ದಾಖಲಾಗಿರುವ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಪ್ರಕರಣಗಳಲ್ಲಿ  ಶೇಕಡ ೫೨.೯೪% ಅಷ್ಟು ಗಂಡು ಮಕ್ಕಳ ಮೇಲೆ ನಡೆದಂತಹ ಪ್ರಕರಣಗಳೇ ಆಗಿವೆ.  ಸಲಿಂಗ ಕಾಮಕ್ಕೆ ದುರ್ಬಳಕೆ ಆಗುತ್ತಿರುವ ಮಕ್ಕಳಲ್ಲಿ ಶೇಕಡ ೬೪.೧೩% ಗಂಡು ಮಕ್ಕಳು. ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಮಕ್ಕಳಲ್ಲಿ ಶೇಕಡ ೫೦%ಕ್ಕೂ ಹೆಚ್ಚು ಗಂಡು ಮಕ್ಕಳು.

ಪುರುಷರ ಮತ್ತು ಗಂಡು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರಗಳು ಆಗುತ್ತವೆ ಎನ್ನುವ ಬರ್ಬರ ಜಗತ್ತಿಗೆ ನನ್ನನ್ನು ಪರಿಚಯಿಸಿದವರು ರಾಕೇಶ್ ಮತ್ತು ದಿಲೀಪ. ವಿದ್ಯಾವಂತ ರಾಕೇಶ ಲಕ್ಷಾಂತರ ಸಂಬಳ ಬರುವ ಕೆಲಸದಲ್ಲಿ ಇದ್ದವನು. ಆತನ ಹೆಂಡತಿ ರಾಜಕಾರಣಿಗಳ ಕುಟುಂಬದವಳು. ರಾತ್ರಿಗಳಲ್ಲಿ ತಪ್ಪದೇ ಗಂಡನ ಸಂಪರ್ಕಕ್ಕಾಗಿ ಪಟ್ಟು ಹಿಡಿಯುತ್ತಿದ್ದವಳು. ಒಲ್ಲೆ ಎಂದವನಿಗೆ ಬಲಶಾಲಿ ತವರು ಮನೆಯ ಬೆದರಿಕೆ ಒಡ್ಡುವುದು, ವಿಚಿತ್ರ ಬಗೆಯ ಲೈಂಗಿಕ ದೌರ್ಜನ್ಯವನ್ನೂ ನೀಡುತ್ತಿದ್ದಳು. ಅದೆಷ್ಟೋ ವರ್ಷಗಳು ಸಹಿಸಿಕೊಂಡವನು ಕೊನೆಗೂ ಹೇಳಿಕೊಂಡ ಆದರೆ ಬೇರೆ ಯಾರಿಗೂ ತಿಳಿಯಕೂಡದು ಮತ್ತು ಕೋರ್ಟಿನಲ್ಲಿ ’ಇನ್ ಕ್ಯಾಮೆರ’ ಪ್ರಕ್ರಿಕೆ ನಡೆಸಿಕೊಡಿ  ಎಂದು ಕೇಳಿಕೊಂಡಿದ್ದ.

ಎಲ್ಲವೂ ಸರಿ ಇದ್ದ ೧೬ ವರ್ಷದ ದಿಲೀಪನ ಮೈಮೇಲೆ ಆರು ತಿಂಗಳಿನಿಂದ ದೇವರು  ಬರುತ್ತಿತ್ತು. ಆ ದೇವರು ಯಾರನ್ನೂ ನಿಂದಿಸಿ, ಶಾಪ ಕೊಡುವುದು, ಎಳೆದಾಡುವುದು ಮಾಡುತ್ತಿರಲಿಲ್ಲ. ಕುಣಿದು ಕುಪ್ಪಳಿಸುತ್ತಾ ಎಲ್ಲರೆದುರು ತನ್ನ ಖಾಸಗೀ ಅಂಗಕ್ಕೆ , ಎದೆ ಭಾಗಗಳಿಗೆ ಗಾಯ ಮಾಡಿಕೊಳ್ಳುತ್ತಿತ್ತು. ಝಲ್ಲನೆ ಚಿಮ್ಮುವ ರಕ್ತವನ್ನು ಎಲ್ಲರು ನೋಡುವಂತೆ ಆಗ್ರಹಿಸುತ್ತಿತ್ತು ಆ ದೇವರು. ಕೊನೆಗೆ ತಿಳಿದು ಬಂದದ್ದು ಅವನಿಗೆ ಹತ್ತು ವರ್ಷ ವಯಸ್ಸಿನಿಂದ , ಕೂಡುಕುಟುಂಬದಲ್ಲಿ ಇದ್ದ ಚಿಕ್ಕಪ್ಪನೇ ತನ್ನ ಸಲಿಂಗ ಕಾಮಕ್ಕೆ ದಿಲೀಪನನ್ನು ಬಳಸಿಕೊಳ್ಳತ್ತಿದ್ದ.

ಗಂಡಸು ಅಳಬಾರದು, ಮರ್ದ್ ಕೋ ದರ್ದ್ ನಹೀ ಹೋತ, ಹೆಣ್ಣಿಗ ರಾಮ, ಗಂಡು ಹೇಗಿದ್ದರೂ ನಡೆದೀತು, ಗಂಡಸಿಗೆ ಅಂಕೆಶಿಕ್ಷೆಗಳಿಲ್ಲ, ಕಾಮ ಅವನೊಬ್ಬನದೇ ಸ್ವತ್ತು ಇಂತಹ ಮನೋಭಾವಗಳು ಸೃಷ್ಟಿಯಾಗಿರುವುದು ಕೂಡ ಪಿತೃ ಪ್ರಧಾನ ವ್ಯವಸ್ಥೆಯ ಫಲವೇ. ಅದಕ್ಕೇ ಗಂಡು ಮಕ್ಕಳು ತಾವು ಸಹಜವಾದ ಮನುಷ್ಯರು ಎನ್ನುವುದನ್ನು ಪರಿಭಾವಿಸಿಕೊಳ್ಳದೆಯೇ ತಮ್ಮ ನೋವು, ನಿಜದ ಭಾವಗಳನ್ನು ಹೊರಹಾಕದೆ, ತಮಗೆ ಅರಿವಿಲ್ಲದಂತೆ ಹಲವಾರು ಖಾಯಿಲೆಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ಅವರ ಸ್ಥಿತಿಗೆ ಅವರದ್ದೇ ಅಹಂ ಅನ್ನು ಕಾರಣವಾಗಿಸಿಕೊಂಡಿದ್ದಾರೆ.

ಹುಡುಗನೂ ಹುಡುಗಿಯಷ್ಟೇ ಮನುಷ್ಯ. ಅವನಿಗೂ ಭಾವನಾತ್ಮಕ, ದೈಹಿಕ ರಕ್ಷಣೆ ಬೇಕು. ಹೇಳುವವರು ಮತ್ತು ಕೇಳುವವರು ಇಬ್ಬರ ಅವಶ್ಯಕತೆ ಅವಳಂತೆ ಅವನಿಗೂ ಇದೆ. ಎಲ್ಲಾ ರೀತಿಯಿಂದಲೂ ಸಂರಕ್ಷಣೆ ಪಡೆದುಕೊಳ್ಳುವುದು ಅವನದ್ದೂ ಹಕ್ಕು.  ಈ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ ಪುರುಷರ ದಿನವನ್ನು ಗುರುತಿಸುವಂತಾಗಲಿ. ಬನ್ನಿ, ಗಂಡು ಮಕ್ಕಳ ಮನಸ್ಸಿನ ಕನ್ನಡಿಯಾಗೋಣ, ಅಲ್ಲಿ ಮನುಷ್ಯರಾಗಿ ಪ್ರತಿಫಲಿಸೋಣ.

‍ಲೇಖಕರು avadhi

November 19, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Lalitha siddabasavayya

    ಅತ್ಯುತ್ತಮ ಲೇಖನ. ಗಂಡು ಮಕ್ಕಳನ್ನೂ ಅಷ್ಟೇ ಪ್ರೀತಿಯಿಂದ ಹೊತ್ತಿರುತ್ತೇವೆ, ಸಾಕಿರುತ್ತೇವೆ. ಅವು ಶೋಷಣೆಗೊಳಗಾದಾಗಲೂ ಹೆತ್ತವರಿಗೆ ಸಂಕಟವೇ ಹೌದು. ಪ್ರಪಂಚದ ‌ಮೇಲಿನ ಗಂಡಸರೆಲ್ಲರೂ ಹೆಂಗಸನ್ನು ಶೋಷಿಸಿಯೇ ತೀರುವ ಪ್ರಮಾಣವಚನ ತೆಗೆದುಕೊಂಡೇನು‌ ಹುಟ್ಟಿರುವುದಿಲ್ಲ. ಒಮ್ಮೊಮ್ಮೆ ನಮ್ಮ ಯುವತಿಯರು ಮದುವೆಯಾದ ಹುಡುಗನಿಂದ ಬಿಡುಗಡೆ ಪಡೆಯುವ‌ ಕಾರಣಕ್ಕಾಗಿಯೇ ಅವನ ಮೇಲೆ impotent ಎನ್ನುವ ಅಸ್ತ್ರ ಝಳಪಿಸುತ್ತಾರೆ. ಅದನ್ನು ಒಂದು ಸಲ ಹೊತ್ತ ಯುವಕ ಆಮೇಲೆ ಡಾಕ್ಟರು ಸರ್ಟಿಫಿಕೇಟನ್ನು ಹಣೆಗಂಟಿಸಿಕೊಂಡು ಓಡಾಡಿದರೂ ಜನ ನಂಬುವುದಿಲ್ಲ. ಈ ವಿನೂತನ ಕ್ರೌರ್ಯ ವಿಧಾನ ಕಣ್ಣಾರೆ ಕಂಡ ಮೇಲೆ ಈ ಹುಡುಗರಿಗಾಗಿ ಒಬ್ಬ ಕಾನೂನು ತಜ್ಞ ಹನ್ನೊಂದನೆಯ ಅವತಾರವಾಗಿ ಇಲ್ಲಿಗೆ ಬರಬೇಕು ಅನಿಸಿದೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: