ಗಾಯತ್ರಿ ರಾಜ್ ಹೊಸ ಕೃತಿ ‘ಆಮ್ರಪಾಲಿ’

ಗಾಯತ್ರಿ ರಾಜ್

**

ಲೇಖಕಿ ಗಾಯತ್ರಿ ರಾಜ್ ಅವರ ಹೊಸ ಕಾದಂಬರಿ ‘ಆಮ್ರಪಾಲಿ’ ಬಿಡುಗಡೆಯಾಗಿದೆ.

ಸಾಹಿತ್ಯಲೋಕ ಪಬ್ಲಿಕೇಷನ್ಸ್ ‘ ಈ ಕೃತಿಯನ್ನು ಪ್ರಕಟಿಸಿದೆ.

ಈ ಕೃತಿಗೆ ಲೇಖಕಿ ಬರೆದ ಮಾತುಗಳು ಇಲ್ಲಿವೆ.

**

“ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾ” ಎಲ್ಲಿ ನಾರಿಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವರು ವಾಸಿಸುತ್ತಾರೆ. ಮನುವಿನ ಈ ಮಾತು ಅದೆಷ್ಟು ನಿಜ! ಇಂತಹ ಮಹೋನ್ನತ ಅರ್ಥವನ್ನು ನೀಡುವಂತಹ ಮಾತುಗಳನ್ನು ನಾವು ನಮ್ಮ ಭಾರತದಲ್ಲಿ ಮಾತ್ರ ಕಾಣಲು ಸಾಧ್ಯ! ಭಾರತದ ಸಂಸ್ಕೃತಿ ಮತ್ತು ಸಭ್ಯತೆ ಸ್ತ್ರೀಯರಿಗೆ ಉನ್ನತವಾದ ಸ್ಥಾನ ಮಾನವನ್ನು ಕೊಟ್ಟಿದೆ. ಸಮಾಜ ಬದಲಾದಂತೆ ಇವಳು ಕೂಡ ತನ್ನ ಇತಿಮಿತಿಗಳನ್ನು ವಿಸ್ತರಿಸುತ್ತಾ, ಪುರುಷನ ಶಕ್ತಿಯಾಗಿ ಪ್ರಹರಿಸುತ್ತಲೇ ಇದ್ದಾಳೆ. ಇಂದಿನ ಸ್ತ್ರೀಯೆಂತೂ ಎಲ್ಲಾ ರೀತಿಯಲ್ಲೂ ಸ್ವತಂತ್ರಳು. ಈಗವಳು ಹಿಂದಿನಂತಿಲ್ಲ. ಆದರೆ, ಆಮ್ರಪಾಲಿಯ ಕಥೆ ನಡೆದದ್ದು 600-500 ಕ್ರಿ.ಪೂ. ಸಮಯದಲ್ಲಿ. ಆ ಕಾಲದಲ್ಲಿ ಸ್ತ್ರೀ ಈಗಿನಷ್ಟು ಸ್ವತಂತ್ರಳಾಗಿರಲಿಲ್ಲ. ಹಾಗಾಗಿ ನಾವು ಇಲ್ಲಿಂದಲೇ ಅವಳನ್ನು ತಿರುಗಿ ನೋಡಿದರೆ, ನಮಗೆ ಅವಳ ದಿಟ್ಟತನ ತಟ್ಟುವುದೇ ಇಲ್ಲ. ಏಕೆಂದರೆ, ನಮಗ್ಯಾರಿಗೂ ಆ ಸಮಾಜದ ಅಂದಾಜೇ ಇಲ್ಲ.

ಅದರ ದುಷ್ಪರಿಣಾಮದ ಅನುಭವವೇ ಆಗಿಲ್ಲ. ಅವಳನ್ನು ಅರಿಯಬೇಕೆಂದರೆ, ನಾವು ಅವಳ ಕಾಲಕ್ಕೆ ಹೋಗಬೇಕು. ಅವಳಾಳಕ್ಕೆ ಇಳಿಯಬೇಕು. ಅದೊಂದು ಕಾಲವಿತ್ತು. ಅಂದಿನ ಪುರುಷ ಪ್ರಧಾನವಾದ ಸಮಾಜದಲ್ಲಿ, ಸ್ತ್ರೀಯರನ್ನು ಕೇವಲ ಒಂದು ಭೋಗ ವಸ್ತು ಎಂಬಂತೆ ಬಿಂಬಿಸಲಾಗುತ್ತಿತ್ತು. ಎಲ್ಲೆಡೆ ಬಹು ಪತ್ನಿತ್ವದ ಪದ್ಧತಿಗಳು ಸರ್ವೇ ಸಾಮಾನ್ಯವಾಗಿದ್ದೂ ಅದನ್ನು ಪುರುಷ ಪೌರುಷದ ಪ್ರತೀಕ ಎಂಬಂತೆ ಪರಿಗಣಿಸಲಾಗುತ್ತಿತ್ತು ಕೂಡ. ಐಕ್ಯತೆಯ ಹೆಸರಿನಲ್ಲಿ ನಗರ ವಧು, ಜನಪದ ಕಲ್ಯಾಣಿ ಎಂಬಂತಹ ಹೀನ ಆಚರಣೆಗಳು ಚಾಲ್ತಿಯಲ್ಲಿದ್ದವು. ಒಂದು ಹೆಣ್ಣು ತನ್ನಿಚ್ಚೆಯಂತೆ ಬಯಸಿದವನ ಕೈ ಹಿಡಿಯುವ ಅಧಿಕಾರವೇ ಇಲ್ಲದ, ಕೇವಲ ವಂಶೋದ್ಧಾರಕ್ಕಾಗಿ, ಹೆರುವ ಯಂತ್ರದಂತೆ ಉಪಯೋಗಿಸಲ್ಪಡುವ, ಸುಂದರವಾದ ಸ್ತ್ರೀಗೆ ವಿವಾಹದ ಹಕ್ಕಿಲ್ಲ, ಆಕೆ ಎಲ್ಲರ ಸ್ವತ್ತು ಎನ್ನುವಂತಹ ನೀಚ ಮನೋಭಾವನೆ ಇದ್ದಂತಹ ಪುರುಷ ಸಮಾಜದ ಕಾಲಘಟ್ಟದಲ್ಲಿ ಜನಿಸಿದವಳು ಆಮ್ರಪಾಲಿ.

ಆಮ್ರಪಾಲಿ ಈ ಹೆಸರು ನಾನು ಚಿಕ್ಕವಳಿದ್ದಾಗಿನಿಂದಲೂ ಕೇಳಿದ ಮತ್ತು ಮನಸಲ್ಲೇ ಕಲೆತು, ಕುಳಿತುಹೋದ ಹೆಸರು. ಏನಾದರೂ ಕಥೆ ಬರೆಯಬೇಕು ಎಂದು ಯೋಚಿಸುತ್ತಿದ್ದಾಗಲೆಲ್ಲಾ, ಧುತ್ತೆಂದು ಕಣ್ಮುಂದೆ ಕಾಲು ಮಡಚಿ ಕೂತು, `ನನ್ನನ್ನೇ’ ಬರಿ ಎಂದು ಕಾಡಿದ ಹೆಸರು ಆಮ್ರಪಾಲಿ. ಮುಗುಳ್ನಗೆಯಲ್ಲಿ ಮೊನಾಲಿಸ ಮೊದಲಿಗೆ ನೆನಪಿಗೆ ಬಂದರೆ, ಸುಂದರಿಯರ ಹೆಸರಲ್ಲಿ ಆಮ್ರಪಾಲಿ ಮೊದಲು. ಆಶ್ಚರ್ಯವೇನಿಲ್ಲ! ನನ್ನಂತೆಯೇ ಎಲ್ಲರಿಗೂ ನೆನಪಿನಲ್ಲಿರೋದು ಅವಳ ಸೌಂದರ್ಯ. ನಿಜ! ಆದರೆ ಅದಿಷ್ಟೇ ಆಗಿದಿದ್ದರೆ, ಅವಳು ಕೇವಲ ಸುಂದರಿಯಷ್ಟೇ ಎನಿಸಿದ್ದರೆ ನನ್ನನ್ನು ಇಷ್ಟು ಕಾಡುತ್ತಿರಲಿಲ್ಲ ಅಥವಾ ಅವಳು ಕೇವಲ ಒಬ್ಬ ಅದ್ಭುತ ನರ್ತಕಿಯಾಗಿದ್ದರೂ ನಾನು ಇಷ್ಟೊಂದು ಇಷ್ಟ ಪಡುತ್ತಿರಲಿಲ್ಲ. ಹುಟ್ಟಿದಾರಭ್ಯ ಅವಳ ಕೊನೆಯುಸಿರಿನವರೆಗೂ ತನ್ನ ಹಕ್ಕುಗಳಿಗಾಗಿ ಹೊಡೆದಾಡುತ್ತಲೇ, ಪ್ರೀತಿಯ ಮಗಳಾಗಿ, ಪ್ರೇಮಿಯಾಗಿ, ದೇಶಪ್ರೇಮಿಯಾಗಿ, ವೇಶ್ಯೆಯಾಗಿ, ತಾಯಿಯಾಗಿ, ಭಕ್ತೆಯಾಗಿ, ಮುಖ್ಯವಾಗಿ ಒಬ್ಬ ಸಂಪೂರ್ಣ ಸ್ತ್ರೀಯಾಗಿ ಹತ್ತು ಹಲವು ಪಾತ್ರಗಳನ್ನು ನಿಭಾಯಿಸುತ್ತಾ, ಬರೋಬ್ಬರಿ ಒಂದು ಕಾದಂಬರಿಗೆ ಬೇಕಾಗುವಷ್ಟು ಸರಕು ಅವಳ ಜೀವನದಲ್ಲಿತ್ತು, ಅದು ನನ್ನನ್ನು ಅಚ್ಚರಿ ಪಡಿಸಿದ್ದು.

ತನಗೆ ಇಷ್ಟವಿಲ್ಲದ, ಬಲವಂತದ ಬದುಕನ್ನು ಕೂಡ ಒಪ್ಪವಾಗಿ ಎಲ್ಲರೂ ಒಪ್ಪುವಂತೆ ಬದುಕಿದ ಪರಿ ನನ್ನ ಪ್ರೇರೇಪಿಸಿದ್ದು. ತನ್ನ ಅಸ್ಮಿತೆಗಾಗಿ ಬಾಳಿನುದ್ದಕ್ಕೂ ಒಬ್ಬ ಹೋರಾಟಗಾರ್ತಿಯಂತೆ ಹೋರಾಡಿ ಸಾರ್ಥಕತೆ ಮೆರೆದಿದ್ದು. ನನ್ನನ್ನು ಬೆರಗುಗೊಳಿಸಿದ್ದು ಮತ್ತು ಬರೆಯುವಂತೆ ಕಾಡಿಸಿದ್ದು. ಆದರೆ ಕೇವಲ ಜನಪದ ಕಥೆಯಂತೆ ಅವಳ ಕಥೆಯನ್ನು ಕೇಳಿದ, ಓದಿದ ನನಗೆ ಅವಳನ್ನು ಕುರಿತು ಕೃತಿಯೊಂದನ್ನು ರಚಿಸಬೇಕು ಎಂದಾಗ, ಎದುರಾದ ಮೊದಲ ಅಡಚಣೆ ವಿಷಯ ಸಂಗ್ರಹಣೆಯದ್ದು, ಆಧಾರದ್ದು. ಆಮ್ರಪಾಲಿ ಒಂದು ಐತಿಹಾಸಿಕ ಕಥೆಯಾದ್ದರಿಂದ ಅದನ್ನು ಐತಿಹಾಸಿಕ ಆಧಾರದ ಮೇಲೆಯೇ ರಚಿಸಬೇಕು. ಇಲ್ಲಿ ಕೇವಲ ಕಲ್ಪನೆ ಸಾಕಾಗುವುದಿಲ್ಲ. ಕನ್ನಡದಲ್ಲಿ ಅವಳ ಬಗ್ಗೆ ಸಂಪೂರ್ಣ ಮಾಹಿತಿ ಸಿಗುವಂತಹ ಕೃತಿಗಳು ಕಡಿಮೆ ಅಥವಾ ಒಂದೇ ಒಂದು ಅನ್ನಬಹುದೇನೋ. ಅಂತರ್ಜಾಲದಲ್ಲಿ ಗೂಗಲ್ ಮಾಡಿ ನೋಡಿದೆ. ಏನೂ ಸಾಲದೆನಿಸಿತು. ಆಚಾರ್ಯ ಚತುರಸೇನಾ ಬರೆದಿರುವ ಕಾದಂಬರಿ ಓದಿದೆ, ಒಂದಿಷ್ಟು ಆಕಾರ ಮೂಡಿತು.

ಕೊನೆಗೆ ಅವಳ ಬಗ್ಗೆ ತೀರ ನನಗೆ ಬರೆಯಲೇಬೇಕೆನ್ನುವ ಹಂಬಲ ತೀವ್ರವಾದಾಗ, ಸಿಕ್ಕ ಸಿಕ್ಕ ಎಲ್ಲಾ ಪುಸ್ತಕಗಳನ್ನು ಓದಿ, ವೈಶಾಲಿಗೆ ಹಾರುತ್ತಿದ್ದೆ. ನಿಮಗೆಲ್ಲ ಅನ್ನಿಸುತ್ತಿರಬಹುದು ಅಲ್ಲಿಗೆ ಹೋದ ಮೇಲೆ ನನಗೆ ಸಂಪೂರ್ಣ ಮಾಹಿತಿ ಸಿಕ್ಕಿರಬಹುದು ಎಂದು ಅಲ್ಲವೇ? ಊಹೂಂ….ಖಂಡಿತ ನಿಮ್ಮ ಊಹೆ ತಪ್ಪು. ಅಲ್ಲಿಗೆ ಹೋಗಿ ಬಂದ ಮೇಲೆ ಬರೆಯುವ ಆಸೆಯನ್ನೇ ಬಿಟ್ಟು ಬಿಟ್ಟೆ. ಜನಪದ ಕಥೆಯಂತೆ ಒಬ್ಬೊಬ್ಬರ ಬಾಯಲ್ಲಿ ಒಂದೊಂದು ರೀತಿಯ ಆಮ್ರಪಾಲಿಯನ್ನು ಕೇಳಿ ಗೊಂದಲಕ್ಕೆ ಬಿದ್ದೆ ಮತ್ತು ನನ್ನನ್ನು ಉತ್ತೇಜಿಸುವಷ್ಟು ಪುರಾವೆ ಅಥವಾ ಸನ್ನಿವೇಶ ಕಟ್ಟಿಕೊಳ್ಳಲು ಅಥವಾ ಆಗಿನ ಕಾಲದ ವೈಭೋಗವನ್ನು ಕಲ್ಪಿಸುವಂತೆ ಯಾವ ಅರಮನೆಯೂ, ಕೋಟೆಯೂ ನನಗೆ ಅಲ್ಲಿ ಸಿಗದೇ ಹೋಗಿದ್ದು (ಆಮ್ರವನವೊಂದನ್ನು ಬಿಟ್ಟು). ಅತ್ಯಂತ ಉತ್ಸಾಹದಿಂದ ಸೋನಿ ಕ್ಯಾಮೆರಾ ಹೊತ್ತು ಹೋಗಿದ್ದ ನನಗೆ ನಿರಾಸೆ ಮೂಡಿಸಿತ್ತು. ಏಕೆಂದರೆ, ಅಲ್ಲಿ ಅರಮನೆಯ ಅವಶೇಷಗಳನ್ನು ಬಿಟ್ಟರೆ ನಮಗೆ ನೋಡಲು ಏನೂ ಸಿಗಲಿಲ್ಲ. ಆದರೂ ಮನಸಲ್ಲಿ ಆಮ್ರಪಾಲಿಯ ಗೆಜ್ಜೆಯ, “ಥೈ ಥೈ” ನಡೆಯುತ್ತಲೇ ಇತ್ತು. ನನಗೆ ಆ ಖನಿಗೆ ಮನಸೋಲದೇ ಇರಲಾಗಲಿಲ್ಲ. ನನ್ನಿಂದ ಅವಳ ಕಥೆಯನ್ನು ಬರೆಯುವಂತೆ ಮಾಡಿ ಕೊನೆಗೂ ಆಮ್ರಪಾಲಿಯೇ ಗೆದ್ದಿದ್ದಾಳೆ. ನಾಲ್ಕು ಸಾಲಿನ ಕಥೆಯಾಗಿದ್ದ ಅವಳೀಗ ಕಾದಂಬರಿಯ ಉದ್ದ ಅಗಲಕ್ಕೂ ಹರಡಿ ನಿಮ್ಮ ಮುಂದೆ ಕೂತಿದ್ದಾಳೆ.

ಇನ್ನು ಈ ಪರಿಷ್ಕೃತ ಆವೃತ್ತಿಯಲ್ಲಿ, ಓದುಗರ ಅಭಿಲಾಷೆಯಂತೆ ಗೌತಮ ಬುದ್ಧರ ಜೀವಿತಾವಧಿಯಲ್ಲಿ ಎಲ್ಲೆಲ್ಲಿ ತಮ್ಮ ದಿವ್ಯ ಪಾದಸ್ಪರ್ಶ ಮಾಡಿ ನೆಲೆ ನಿಂತರೋ, ಅದನ್ನು ಪುರಾತನ ಭಾರತದ ನಕ್ಷೆಯಲ್ಲಿ ತೋರಿಸಿರುವ ಮಾಹಿತಿಯನ್ನು ಸೇರಿಸಿದ್ದೇನೆ. ಅಲ್ಲಲ್ಲಿ ವಿಷಯಾಧಾರಿತ ಇನ್ನಿತರೆ ಚಿತ್ರಗಳು, ವೈಶಾಲಿ ಮತ್ತು ಮಗಧದ ನಕ್ಷೆಗಳು, ಈಗಿನ ವೈಶಾಲಿಯ ಪಟಗಳು, ಅಡಿ ಟಿಪ್ಪಣಿಗಳು ಹಾಗೂ ಮತ್ತೊಂದಿಷ್ಟು ಮಾಹಿತಿಗಳನ್ನು ಸೇರಿಸುವುದರ ಮೂಲಕ ಕೃತಿಯನ್ನು ನವೀಕರಿಸಿದ್ದೇನೆ. ಸಾಧ್ಯವಾದಷ್ಟೂ ವಿಸ್ತೃತ ವಿವರಣೆಯನ್ನು ಆದರೆ ಓದುಗನಿಗೆ ಎಲ್ಲೂ ತೀರಾ ಗ್ರಾಂಥ್ಯವೆನಿಸದ ರೀತಿಯಲ್ಲಿ ನಮೂದಿಸಿದ್ದೇನೆ. ಆದಾಗ್ಯೂ ಕಲೆ ಹಾಕಿದ ಸಮಗ್ರ ಮಾಹಿತಿಯಲ್ಲಿ ಎಲ್ಲೆಲ್ಲಿ ಐತಿಹಾಸಿಕ ಪ್ರಮಾಣಗಳು ಲಭ್ಯವಿರಲಿಲ್ಲವೋ, ಅಲ್ಲಲ್ಲಿ ನನ್ನ ಕಾಲ್ಪನಿಕ ತರ್ಕಗಳಿಂದ, ಮೂಲ ಕಥೆಗೆ ಭಂಗವಾಗದಂತೆ ನ್ಯಾಯ ಒದಗಿಸುವ ಪ್ರಯತ್ನ ಮಾಡಿದ್ದೇನೆ. ಸಹೃದಯ ಓದುಗರೆ, ಆಗ ಸಿಗದ ಪ್ರೀತಿ, ಪ್ರೇಮ ಇವಳಿಗೆ ನಿಮ್ಮಿಂದಲಾದರೂ ಸಿಗಲಿ. ಈ ಪ್ರೇಮ ದೇವತೆಯನ್ನು ನೀವೆಲ್ಲರೂ ನಿಮ್ಮ ಹೃದಯದಲ್ಲಿ ನೆಲೆಗೊಳ್ಳಲು ಅವಕಾಶ ಕೊಡುತ್ತೀರೆಂದು ನಂಬಿ, ಅವಳನ್ನು ನಿಮ್ಮ ಕೈಗಿಡುತ್ತಿದ್ದೇನೆ . ಒಪ್ಪಿಸಿಕೊಳ್ಳಿ ಇನ್ನು ಆಮ್ರಪಾಲಿ ನಿಮ್ಮವಳು. ಹರಸಿ ಹಾರೈಸಿ.

‍ಲೇಖಕರು Admin MM

February 19, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: