ಗಾಂಧಿ ರಂಗಪಯಣವೆಂಬ ಬಾಳ್ವೆಯ ಬೆಳಕು…

ಕನ್ನಡ ರಂಗಭೂಮಿಯ ವಿಶಿಷ್ಠ ಹೆಸರು ಶ್ರೀಪಾದ್ ಭಟ್. ಕನ್ನಡ ಸಾಹಿತ್ಯಕ್ಕೆ ನೋಟದ ಆಯಾಮ ಕೊಟ್ಟ ಹೆಗ್ಗಳಿಕೆ ಇವರದ್ದು. ಬೆಂಗಳೂರಿನ ‘ರಂಗಶಂಕರ’ದಲ್ಲಿ ಜರುಗಿದ ಶ್ರೀಪಾದ್ ಭಟ್ ನಾಟಕೋತ್ಸವ ಮಿಂಚು ಹರಿಸಿತ್ತು.

ಶ್ರೀಪಾದ್ ಭಟ್ ಅವರ ರಂಗನೋಟವನ್ನು ಒಳಗೊಂಡ ಕೃತಿ ‘ಸಿರಿ ಪಾದ’ ಈ ಸಂದರ್ಭದಲ್ಲಿಯೇ ಪ್ರಕಟವಾಯಿತು. ಇವರ ನಾಟಕದ ಹಾಡುಗಳು ಕೇಳುಗರಿಗೆ ಒಂದು ರೀತಿಯ ಕಾಲಕೋಶ. ಈ ಹಾಡುಗಳ ಸಿ ಡಿ ಯನ್ನು ‘ಲಹರಿ’ ಹಾಗೂ ‘ಅವಧಿ’ ಜಂಟಿಯಾಗಿ ಹೊರತಂದಿದೆ.

ಈಗ ಸಿರಿ ಪಾದ ಹೆಸರಿನಲ್ಲಿ ಶ್ರೀಪಾದ್ ಭಟ್ ತಮ್ಮ ವಿಶೇಷ ರಂಗ ಅನುಭವವನ್ನು ಮುಂದಿಡಲಿದ್ದಾರೆ.

“ನಾನು ಸರಕಾರವು ವಿಧಿಸಿದ ಕಾನೂನನ್ನು ಬಹಿರಂಗವಾಗಿ ಭಂಗ ಮಾಡಿದ್ದೇನೆ. ಈ ದೇಶದ ಪ್ರಜೆಗಳಾದ ನಾವು ಬ್ರಿಟಿಷರ ಆಡಳಿತದಲ್ಲಿರುವ ಗುಲಾಮಗಿರಿಯನ್ನು ಸಹಿಸಲಾರೆವು ಎಂಬುದರ ಸಂಕೇತ ಈ ಉಪ್ಪಿನ ಸತ್ಯಾಗ್ರಹ” 

ಸ್ವಾತಂತ್ರ್ಯ ಸಂಗ್ರಾಮದ ಉಪ್ಪಿನ ಸತ್ಯಾಗ್ರಹದ ಸಂದರ್ಭವನ್ನೊಮ್ಮೆ ಮರೆತು ಸುಮ್ಮನೆ ಈ ಮಾತು ಓದಿ ನೋಡಿ. ಪಕ್ಕಾ ನಾಟಕವೊಂದರ ಡೈಲಾಗ್ ಅಂತಿದೆ ಅಲ್ಲವೆ? ನಿಜ ಅಸಾಧಾರಣ ನಾಟಕೀಯ ಶಕ್ತಿಯುಳ್ಳ ಡೈಲಾಗ್ ಇದು. ಚಿಟಿಕೆ ಉಪ್ಪನ್ನು ಕೈಯಲ್ಲಿ ಹಿಡಿದು ಜಾಗತಿಕ ಶಕ್ತಿಯಾಗಿ ಮೆರೆಯುತ್ತಿರುವ ಇಂಗ್ಲೆಂಡಿಗೆ ಮತ್ತು ಅದರ ವಸಾಹತು ಶಕ್ತಿಗೆ ಈ ಬಗೆಯ ಸವಾಲು ಎಸೆದಿದ್ದು ಪಕ್ಕಾ ಸಾಂಕೇತಿಕ ಪ್ರತಿಮೆಯಂತೆ, ಪ್ರತೀಕದಂತೆ ಅನಿಸುವುದು.

ಗಾಂಧೀಜಿ ಇಂಥ ನಾಟಕೀಯ ಶಕ್ತಿಯ ಗುಣಗಳುಳ್ಳ ಹಲವು ಸಂಗತಿಗಳನ್ನು, ಪರಿಕರಗಳನ್ನು ಸ್ವಾತಂತ್ರ್ಯ ರಂಗದಲ್ಲಿ ತಂದಿದ್ದಾರೆ. ಮ್ಯಾಂಚೆಸ್ಟರ್ ವಿರುದ್ಧದ ಹೋರಾಟದಲ್ಲಿ ಚರಕ, ಭಾರತಕ್ಕೆ ವಿದೇಶದಿಂದ ಮರಳಿ ಬರುವಾಗ ‘ಯೋಗಿಕ್‍ ಪವರ್’ ಕಾಣಿಸುವ ಪಂಚೆ ರುಮಾಲಿನ ಜತೆ ‘ದಂಡ’. ಮತ್ತೆ ಉಪ್ಪಿನ ಸತ್ಯಾಗ್ರಹದ ಸಂದರ್ಭಕ್ಕೆ ಮರಳೋಣ. ಸಬರಮತಿ ಆಶ್ರಮದಿಂದ 240 ಮೈಲಿ ದೂರದ ದಂಡಿ ಎಂಬ ಊರಿಗೆ 24 ದಿನಗಳ ಪಾದಯಾತ್ರೆಯ ಪ್ರದರ್ಶನ. 79 ಮಂದಿ ಸತ್ಯಾಗ್ರಹಿಗಳಿಗೆ ಸಬರಮತಿಯಲ್ಲಿ 21 ದಿನಗಳ ‘ರಂಗತರಬೇತಿ’.

ಅವರು ಹೊರಡುವ, ಉಳಿಯುವ ದಾರಿಯುದ್ದಕ್ಕೂ ಸಿಗುವ ಊರಿನ ಜನರನ್ನು ಅವರ ಊರಿನ ಗಡಿ ದಾಟುವ ತನಕ ಸೇರಿಸಿಕೊಳ್ಳುವ, ಅವರ ಗಡಿ ಮುಗಿದ ಕೂಡಲೇ ಮುಂದಿನ ಊರಿನ ಗಡಿಯ ಜನ ಅಲ್ಲಿ ಕಾದಿದ್ದು ಅವರ ಜತೆ ಸೇರುವ, ಸಂಗೀತ, ವಾದ್ಯಗಳ ನಿರಂತರ ಸಾಥ್ ನಲ್ಲಿ ಸಾಗುವ ದೃಶ್ಯಾತ್ಮಕವಾಗಿಯೂ ಶಕ್ತಿಶಾಲಿ ಘಟನೆ ಇದು. ಗಾಂಧಿ ಚಲನೆಯನ್ನೇ ನೋಡಿ. ಅವರ ನಡಿಗೆ ತುಂಬ ವೇಗದ್ದು, ಮತ್ತು ಅವರು ಆಗಾಗ ಆಚರಿಸುವುದು ಮೌನವನ್ನು! ಎರಡೂ ಅ-ಸಾಧಾರಣವೇ. ಪಕ್ಕಾ ಡ್ರಮಾಟಿಕ್; ಹಿಂದ್ ಸ್ವರಾಜ್ ನಂತಹ ಬರವಣಿಗೆಯನ್ನೂ ಸೇರಿಸಿ.

ಬಹುಕಾಲ ನನ್ನ ತಲೆಮಾರಿನವರು ಗಾಂಧಿ ವಿರುದ್ಧ ಗಾಂಧಿ, ಗಾಂಧಿ ವಿರುದ್ಧ ಅಂಬೇಡ್ಕರ್ ಹೀಗೆ ‘ವಿರುದ್ಧ’ ಅಥವಾ ‘ವರ್ಸಸ್’ ನಾಟಕಗಳನ್ನು ಮಾಡುತ್ತ ಗಾಂಧೀ ನಂತರದ ಭಾರತದ ಹುಡುಕಾಟವನ್ನು ಮಾಡುತ್ತಿರುವಾಗಲೇ ಬಹುತ್ವವನ್ನು ಒಲ್ಲದ ಷಡ್ಯಂತರವೊಂದು ನಮ್ಮ ಮಕ್ಕಳಲ್ಲಿ, ಯುವಕರಲ್ಲಿ ಗಾಂಧಿ ವಿರುದ್ಧದ ದ್ವೇಷವನ್ನು ಬೆಳೆಸುತ್ತಲೇ ಇದ್ದುದು ನಮ್ಮ ಗಮನಕ್ಕೆ ಬಂದಿರಲೇ ಇಲ್ಲ.

ವಾಟ್ಸಪ್ ಯುನಿವರ್ಸಿಟಿಯ ನೋಟ್ಸ್ ಗಳನ್ನು ಕಂಠಪಾಠ ಮಾಡುತ್ತಿದ್ದ ಈ ತಲೆಮಾರು ಗಾಂಧೀಜಿಯ ಕುರಿತು ಅಸಹನೆಯಿಂದ, ಕೋಪದಿಂದ, ಅಸಡ್ಡೆಯಿಂದ ಮಾತನಾಡುತ್ತಿರುವುದನ್ನು ರೂಢಿಮಾಡಿಕೊಂಡು ಬಿಟ್ಟಿತ್ತು. ಗಾಂಧೀಜಿಯವರನ್ನು ಭಾರತದ ಆತ್ಮದಿಂದ ಹೊರತಳ್ಳುವ ಕೆಲಸ ಅನೇಕ ವರ್ಷದಿಂದ ಗುಪ್ತಗಾಮಿನಿಯಾಗಿ ನಡದೇ ಇತ್ತು. ಆ ಹುಡುಗರನ್ನು ನಿಲ್ಲಿಸಿ ಕೇಳಿದರೆ ನಿಜಕ್ಕೂ ಗಾಂಧೀಜಿಯ ಕುರಿತ ಪ್ರಾಥಮಿಕ ತಿಳಿವಳಿಕೆಯೂ ಅವರಿಗಿರಲಿಲ್ಲ.

ಗಾಂಧೀಜಿಯವರ ಕುರಿತು ಅವರಿಗೆ ಏನೂ ತಿಳಿದಿಲ್ಲ ಎಂಬುದಕ್ಕಿಂತ ಅವರು ಗಾಂಧೀಜಿಯ ಕುರಿತು ಹಲವು ತಪ್ಪು ಕಲ್ಪನೆಗಳನ್ನು ತುಂಬಿಕೊಂಡಿಯಾಗಿತ್ತು. ಈ ಕೃತ್ಯದಲ್ಲಿ ಪಾಲಕರ ಪಾತ್ರವೆಷ್ಟು ಇತ್ತೋ ಅದಕ್ಕೂ ಮಿಗಿಲಾಗಿ ಶಿಕ್ಷಕರ ಪಾತ್ರವೂ ಇತ್ತು.

ಗಾಂಧೀಜಿವರು ಹುಟ್ಟಿ 150 ವರ್ಷಗಳಾಗಿರುವ ಸುಸಂದರ್ಭದಲ್ಲಿ ‘ಗಾಂಧೀಜಿಯವರ ಕುರಿತು ನಾಟಕ ಮಾಡ್ತೀರಾ’ ಅಂತ ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ವಿಶುಕುಮಾರ್ ಕೇಳಿದಾಗ “ಮಾಡ್ತೇನೆ ಸರ್, ಆದರೆ ಮುಖ್ಯವಾಗಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳನ್ನೇ ಪ್ರೇಕ್ಷಕರನ್ನಾಗಿ ಕೇಂದ್ರೀಕರಿಸಿ ಮಾಡ್ತೇನೆ” ಎಂದು ನಾನೆಂದುದಕ್ಕೆ ಬಲವಾದ ಕಾರಣಗಳು ಇದಾಗಿತ್ತು. 

ಗಾಂದೀಜಿಯವರ ಕುರಿತಾದ ಪ್ರಾಥಮಿಕ ಸಂಗತಿಗಳನ್ನು ಕಥಾ ರೂಪದಲ್ಲಿ ಮಕ್ಕಳ ಮಧ್ಯ, ಮಕ್ಕಳಿರುವಲ್ಲಿ, ವಿದ್ಯಾರ್ಥಿ ಯುವ ಜನರಿಗಾಗಿ ಅವರಿರುವಲ್ಲಿಯೇ ಹೋಗಿ ಮಾಡಬೇಕು ಎಂದುಕೊಂಡೆ. ನಾಟಕ ಸರಳವಾಗಿರಬೇಕು. ಗಾಂಧಿಯಂತೆ, ಆಡಂಬರ, ಅಲಂಕರಣಗಳ ತೊಡೆದುಕೊಳ್ಳಬೇಕು ಅವರ ಮಾರ್ಗದಂತೆ ಎಂಬುದು ಸ್ಪಷ್ಟವಾದ ನಿಲುವಾಗಿತ್ತು. ಅದಾಗಲೇ ನಮ್ಮ ‘ಕಾವ್ಯರಂಗ’ ರಂಗಪ್ರಯೋಗವನ್ನು ನೋಡಿದ್ದ ವಿಶುಕುಮಾರರು ಈ ಮಾರ್ಗದ ಪ್ರಯೋಗಕ್ಕೆ ಸಂತಸದ ಸಮ್ಮತಿ ಇತ್ತರು.

‘ಯಾರಿಂದ ನಾಟಕ ಬರೆಸುತ್ತೀರಿ’ ಅಂತ ಅವರು ಕೇಳಿದಾಗ ನಾನು ಹುಡುಕುವುದೇನೂ ಇರಲಿಲ್ಲ. ಪಠ್ಯ ನನ್ನ ಮುಂದೆ ಸಿದ್ಧವಾಗಿಯೇ ನಿಂತಿತ್ತು; ಅದು ಸಂವೇದನಾಶೀಲ ಬರಹಗಾರ ಬೊಳುವಾರ ಮಹಮದ್ ಕುಂಞ ಅವರು ಹತ್ತು ವರ್ಷ ಹಿಂದೆ ಬರೆದಿದ್ದ, ಕೇಂದ್ರಸಾಹಿತ್ಯ ಅಕಡೆಮಿ ಪ್ರಶಸ್ತಿ ಪುರಸ್ಕಾರ ಪಡೆದ ‘ಪಾಪು ಗಾಂಧಿ ಗಾಂಧಿ ಬಾಪು ಆದ ಕತೆ’ ಎಂಬ ಕಾದಂಬರಿ ರೂಪದ ಬರಹದಲ್ಲಿ.

ಹತ್ತು ವರ್ಷ ಹಿಂದಿನ ಮಾತು. ಒಮ್ಮೆ ಧಾರವಾಡದಲ್ಲಿ ‘ಆರ್ಯ’ರ ಮನೆಗೆ ಹೋಗಿ ಅವರನ್ನು ಭೇಟಿಯಾಗುವ ಯೋಗ ಒದಗಿತು. ಸಮಾಜ, ಸಂಸ್ಕೃತಿ ಹಾಗೂ ಕಲಾ ಪ್ರಕಾರಗಳ ಕುರಿತು ವಿವಿಧ ಚಿಂತನಾಕ್ರಮದ ಆಳ ತಿಳುವಳಿಕೆಯಿಂದ ಬರೆಯುವ ‘ಆರ್ಯ’ರು ಪ್ರಜಾವಾಣಿಯಲ್ಲಿ ಬರೆಯುತ್ತಿದ್ದ ‘ಸಾಂಗತ್ಯ’ ಎಂಬ ಹೆಸರಿನ ಅಂಕಣ ಬರಹಗಳನ್ನು ಚಿಂತನ ಉತ್ತರ ಕನ್ನಡದ ಪರವಾಗಿ ಪುಸ್ತಕವಾಗಿಸಲು ಆಗಲೇ ಚಿಂತನೆ ನಡೆದಿತ್ತು.

ಆರ್ಯರ ಜತೆ ಈ ಕುರಿತು ಮಾತನಾಡಲು ನಮ್ಮ ಸಲಗೆಗಾರರಾಗಿರುವ, ಖ್ಯಾತ ವಿಮರ್ಶಕ ಡಾ. ಎಂ ಜಿ ಅವರೊಡನೆ ಧಾರವಾಡಕ್ಕೆ ಬಂದಿದ್ದೆ. ಆ ದಿನ ಜತೆಯಲ್ಲಿ ಗಿರಡ್ಡಿಯವರೂ ಇದ್ದರು. ಆರ್ಯರ ಮನೆಯಲ್ಲಿ ಅವರು ಆ ದಿನ ‘ಬುದ್ಧ ಬಾರ್’ ಎಂಬ ಫ್ಯೂಜನ್ ಸಂಗೀತವನ್ನು ಹಚ್ಚಿಕೊಂಡು ನಮಗಾಗಿ ಚಹಾ ತಯಾರಿಸುತ್ತಿದ್ದ ಸಮಯವದು. ಅವರ ಮನೆಯ ಚಿಟ್ಟೆಯ ಮೇಲೆ ಈ ‘ಪಾಪುಗಾಂಧಿ ಬಾಪು ಗಾಂಧಿ ಆದ ಕತೆ’ ಪುಸ್ತಕ ಕಂಡಿತು. ಕುತೂಹಲದಿಂದ ಮೊದಲ ಪುಟ ತೆಗೆದರೆ ಅದರಲ್ಲಿ ಆರ್ಯರು ‘ಈ ಪುಸ್ತಕಕ್ಕಾಗಿ ನಿನಗೆ ನೊಬೆಲ್ ಬರಲಿದೆ’ ಎಂದು ಬರೆದಿದ್ದರು..! ಅಂದು ಅವರ ಮನೆಯಿಂದ ಹೊರಬಂದೊಡನೆ ಧಾರವಾಡದಲ್ಲಿಯೇ ಪುಸ್ತಕ ಖರೀದಿಸಿ ತಂದಿದ್ದೆ.

ಚಿಂತನ ರಂಗಾಧ್ಯಯನ ಕೇಂದ್ರದ ಎಲ್ಲ ಕಲಾವಿದರೂ ಕಾದಂಬರಿಯಿಂದ ತುಂಬ ಖುಷಿಯಾಗಿದ್ದರು. ಆಯ್ದ ಕೆಲವು ಶಾಲೆಗಳಲ್ಲಿ ಅದರ ಪ್ರಯೋಗ ನಡೆಸಲು ಸಿದ್ಧತೆ ನಡೆಯಿತು. ಜತೆಯಲ್ಲಿ ಚಿಂತನದ ಕಿರಣ ಭಟ್ ನಿರ್ದೇಶನ ಸಹಾಯಕ್ಕೆ ಇದ್ದೇ ಇದ್ದರು. ತಯಾರಿಯ ಆ ಒಂದು ದಿನ ಕಾದಂಬರಿಯ ಆಯ್ದ ಪುಟಗಳನ್ನು ಓದಿ ನಂತರ ಕಲಾವಿದರಿಗೆ ‘ಪರ್ಜಾನಿಯಾ’ ಸಿನೆಮಾ ತೋರಿಸಿದ್ದೆವು. ಗಾಂಧಿ ಕಾದಂಬರಿಯ ಕೊನೆಯ ಪುಟದ ಬರಹ ಇನ್ನೂ ನಮ್ಮ ಕಿವಿಗಳಲ್ಲಿ ಅನುರಣಿಸುತ್ತಿದ್ದಂತೆ ಕೋಮು ಗಲಭೆ ಕಥಾನಕದ ಈ ಸಿನೆಮಾದ ದೃಶ್ಯಗಳು ಅದರೊಡನೆ ಮಿಳಿತಗೊಂಡು ಎಲ್ಲ ನಟರೂ ಆ ದಿನವೆಲ್ಲ ಮೌನವಾಗಿದ್ದುದು ಇನ್ನೂ ನೆನಪಿದೆ. 

ಬೊಳುವಾರರು ಬರೆದ ಗಾಂಧಿ ಕತೆಯನ್ನು ಓದಿಯೇ ಅನುಭವಿಸಬೇಕು ಅದರಾನಂದ ಮತ್ತು ಅರಿವನ್ನು. ಅದರಲ್ಲಿಯ ಪದಗಳೆಲ್ಲ ಚಿತ್ರಗಳೇ; ವಾಕ್ಯಗಳೆಲ್ಲ ರಸಾತ್ಮಕವೇ. ಗಾಂಧಿಯನ್ನು ಹಾಗೆಯೇ ಎತ್ತಿ ಓದುಗರ ಹೃದಯದಲ್ಲಿ ಬೆಚ್ಚಗಿಟ್ಟು ಬಿಡುವ ಅಂತಹ ಆಪ್ತತೆ! ಅದೂ ರಾಷ್ಟ್ರ ಪುರುಷರ ಕುರಿತು! ಊಹೂಂ ಮಾದರಿಯೇ ಮತ್ತಿಲ್ಲ. ಸೀಮಿತ ಅವಧಿಯ ಆ ತಿರುಗಾಟದ ಒಳಗೇ ನಾವು ನೂರಾರು ಪುಸ್ತಕಗಳನ್ನು ಶಿಕ್ಷಕರೂ, ಮಕ್ಕಳೂ, ಸಾರ್ವಜನಿಕರು ಖರೀದಿಸುವಂತೆ ಮಾಡಿದ್ದೆವು.

ಆ ಬರಹದಲ್ಲಿ ಗಾಂಧಿ ಕತೆ ಇತ್ತು, ಬೊಳುವಾರರು ತಮಾಷೆ ಮಾಡುವ ಹಾಗೆ ಗಾಂಧಿಗೇ ತಿಳಿಯದ ಆತನ ಕತೆಯೂ ಇತ್ತು, ಭಾರತದ ಆತ್ಮಕತೆಯೂ ಇತ್ತು. ಚರಿತ್ರೆ ಇತ್ತು, ಕಾಲ್ಪನಿಕ ದರ್ಶನವೂ ಇತ್ತು. ಅಲ್ಲಿಯ ದೃಶ್ಯಗಳ ನಾಟಕೀಯ ಶಕ್ತಿ ಎಷ್ಟಿದೆಯೆಂದರೆ ಅದನ್ನು ಕೆಲವೇ ಕೆಲವು ಚಿಕ್ಕ ಪುಟ್ಟ ಸಂಯೋಜನೆ ಮತ್ತು ಸಂಕಲನದಲ್ಲಿಯೇ ರಂಗಪಠ್ಯವನ್ನಾಗಿಸಿದೆವು. ಆದರೆ ಸಂಘಟನೆಯ ಕಾರಣದಿಂದ ಕೆಲವೇ ಕೆಲವು ಪ್ರದರ್ಶನಗಳು ಮಾತ್ರ ನೀಡಲು ಸಾಧ್ಯವಾಗಿತ್ತು.

ಮುಂದೊಮ್ಮೆ ಮಕ್ಕಳಿಗಾಗಿ ಮಣಿಪಾಲದಲ್ಲಿ ನಡೆಸಿದ ರಂಗ ತರಬೇತಿಯಲ್ಲಿಯೂ ‘ಪಾಪು ಬಾಪು’ವಿನ ಕೆಲವು ಪುಟಗಳನ್ನು ಅಭ್ಯಾಸ ಪಠ್ಯವನ್ನಾಗಿಸಿದ್ದೆ. ಆಗ ಅದನ್ನು ಮಕ್ಕಳು ಆನಂದಿಸಿದ್ದನ್ನು ನೋಡಿ ಇದು ಬರಹದ ಶಕ್ತಿಯೋ, ಗಾಂಧಿ ಬದುಕಿನ ಶಕ್ತಿಯೋ ಎಂದು ವಿಸ್ಮಯ ಪಟ್ಟಿದ್ದೆ. ಎರಡೂ ಅವಿನಾಭಾವವಾಗಿ ಮಿಳಿತಗೊಂಡಿತ್ತಲ್ಲಿ. ಶಿಬಿರದ ಪ್ರಯೋಗವನ್ನು ನೋಡಿ ಸಂತಸಗೊಂಡಿದ್ದ ಹಿರಿಯ ಚಿಂತಕ ಜಿ ರಾಜಶೇಖರ ಅವರು ‘ಗಾಂಧಿ ವರ್ಸಸ್ ಗಾಂಧಿʼ ಪ್ರಯೋಗವನ್ನೂ ಮತ್ತು ‘ಪಾಪು ಬಾಪು’ವನ್ನೂ ತುಲನಾತ್ಮಕವಾಗಿಟ್ಟು ತುಂಬ ಉತ್ತಮ ಚರ್ಚೆ ನಡೆಸಿದ್ದರು. ಇವೆಲ್ಲವುಗಳಿಂದಾಗಿ ಈ ಬರಹವನ್ನು ಮಕ್ಕಳಿಗೆ ಮುಟ್ಟಿಸುವ ಬಗೆಯ ಕುರಿತ ಆತ್ಮವಿಶ್ವಾಸ ಹೆಚ್ಚಿತ್ತು.

ಪ್ರಾಥಮಿಕ ಮತ್ತು ಪೌಢಶಾಲಾ ವಿದ್ಯಾರ್ಥಿಗಳ ಜತೆ ಕಾಲೇಜು ವಿದ್ಯಾರ್ಥಿಗಳನ್ನೂ ಗಮನದಲ್ಲಿಟ್ಟು ಕಾದಂಬರಿಯ ಇನ್ನಷ್ಟು ಪುಟಗಳ ಜತೆ ರಂಗಾನುಸಂಧಾನ ನಡೆಸಬಹುದು ಎಂಬ ಆತ್ಮವಿಶ್ವಾಸದಿಂದ ಈ ಪಠ್ಯದ ಕುರಿತು ವಿಶುಕುಮಾರರ ಗಮನಸೆಳೆದೆ. ಅವರು ತುಂಬ ಖುಷಿಯಾದರು. ಮುಂದೆ ಅವರ ಕಚೇರಿಯಲ್ಲಿ ಜಿ ಎನ್ ಮೋಹನ್, ಬೊಳುವಾರರ ಜತೆ ರಂಗಪಯಣದ ಕುರಿತ ನೀಲನಕ್ಷೆ ತಯಾರಾಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಧಾರವಾಡ ರಂಗಾಯಣದ ನೇತೃತ್ವದಲ್ಲಿ ಮೊದಲ ಹಂತದ ಎರಡು ತಂಡಗಳನ್ನು ಸಿದ್ಧಪಡಿಸಿ ಉತ್ತರ ಮತ್ತು ದಕ್ಷಿಣ ಕರ್ನಾಟಕದೆಡೆ ತಿರುಗಾಟ ಆರಂಭಿಸಿದೆವು. ನಂತರ ವಾರ್ತಾ ಇಲಾಖೆಯ ಸಹಯೋಗದಲ್ಲಿ ರಾಜ್ಯದ ನಾಲ್ಕು ವಿಭಾಗಗಳಿಗೆ ನಾಲ್ಕು ತಂಡಗಳನ್ನು ಸಿದ್ಧಪಡಿಸಿ ಕಳಿಸಲಾಯಿತು. ಮೂರನೇ ಹಂತದಲ್ಲಿ ರಾಜ್ಯದ ನಾಲ್ಕು ರಂಗಾಯಣಗಳ ನೇತೃತ್ವದಲ್ಲಿ ಆಯಾ ರಂಗಾಯಣಗಳ ವ್ಯಾಪ್ತಿಯ ಪ್ರದೇಶಗಳಲ್ಲಿ ರಂಗಪಯಣ ಮಾಡಿದೆವು.

ಅಧಿಕೃತವಾಗಿ 1524 ಸ್ಥಳಗಳಲ್ಲಿ ರಂಗಪ್ರಯೋಗ ನಡೆಯಿತು. ಲೆಕ್ಕ ಇಡದ ಇನ್ನೂ ಹಲವು ಪ್ರಯೋಗಗಳೂ ನಡೆದಿವೆ. ನಾಲ್ಕು ತಂಡಕ್ಕೂ ಅಗತ್ಯವಾದ ರಂಗಪರಿಕರಗಳನ್ನು, ಧ್ವನಿವ್ಯವಸ್ಥೆ ಬೆಳಕೂ ಸೇರಿದಂತೆ ಎಲ್ಲ ಬಗೆಯ ಸ್ವಯಂಪೂರ್ಣ ವ್ಯವಸ್ಥೆ ಮಾಡಲಾಗಿತ್ತು. ಎಲ್ಲಿಯೂ ಯಾವ ಸ್ಥಳದಲ್ಲಿಯೂ ಹಗಲೂ ರಾತ್ರಿ ಸೇರಿದಂತೆ ಯಾವ ವೇಳೆಯಲ್ಲಿಯೂ ಪ್ರದರ್ಶನ ನೀಡುವಂತೆ ತಾಂತ್ರಿಕ ಮತ್ತು ತಾತ್ವಿಕ ಸಿದ್ಧತೆ ಮಾಡಿಕೊಂಡೆವು.

ಆಯಾ ಜಿಲ್ಲೆಯಲ್ಲಿ ಇರುವ ರಂಗ ಸಂಘಟಕರನ್ನೂ, ಸಾಮಾಜಿಕ ಸಂಘಟನೆಯ ಆಸಕ್ತರನ್ನೂ, ರಂಗಕರ್ಮಿಗಳನ್ನು ಒಳಗೊಳ್ಳುತ್ತ ತಿರುಗಾಟದ ಸಾಂದ್ರತೆ ಕಡಿಮೆಯಾಗದಂತೆ ತುಂಬ ಮುತುವರ್ಜಿ ವಹಿಸಿ ರಂಗಪಯಣ ನಡೆಸಲಾಯಿತು. ಪಯಣದಲ್ಲಿ ಪ್ರತಿ ತಂಡವೂ ಗಾಂಧೀಜಿಯವರ ಕುರಿತು ಜಗತ್ತಿನಾದ್ಯಂತ ಬಂದ ಅಂಚೆ ಚೀಟಿಗಳ ಪ್ರದರ್ಶನ ಫಲಕಗಳನ್ನೂ, ಗಾಂಧಿ ಕುರಿತ ಕಿರು ಹೊತ್ತಿಗೆಗಳನ್ನೂ ಕೊಂಡೊಯ್ದಿತು. ಇಲಾಖೆ ಪ್ರಕಟಿಸಿದ ಪಾಪು ಬಾಪುವಿನ ಕಿರುಹೊತ್ತಿಗೆಗಳನ್ನು ಪ್ರತಿ ಶಾಲೆಗೂ ತಲುಪಿಸಿತು. ಸುಮಾರು ಹತ್ತು ಲಕ್ಷ ಮಕ್ಕಳಿಗೆ ಗಾಂಧಿಯನ್ನು ಪರಿಚಯಿಸಲಾಯಿತು.

ನಾಟಕ ನಿರ್ಮಾಣಕ್ಕಾಗಿ ಮೊದಲ ಹಂತದ ತಿರುಗಾಟದ ಮೊದಲು 20 ದಿನಗಳ ತರಬೇತಿ, ಎರಡನೇ ಹಂತದಲ್ಲಿ 15ದಿನಗಳು ಮತ್ತು ಮೂರನೇ ಹಂತದಲ್ಲಿ 10 ದಿನಗಳ ತರಬೇತಿ ನಡೆಸಿದೆವು. ಕೊನೆಯ ತಿರುಗಾಟದ ಒಂದು ತರಬೇತಿಯನ್ನು ಮೈಸೂರು ರಂಗಾಯಣದ ಆವರಣದಲ್ಲಿ ನಡೆಸಿದ್ದರ ಹೊರತಾಗಿ ಉಳಿದೆಲ್ಲ ತರಬೇತಿಯನ್ನು ನಾವು ನಡೆಸಿದ್ದು ಶೇಷಗಿರಿ ಎಂಬ ಹಳ್ಳಿಯಲ್ಲಿ. ಅಲ್ಲೊಂದು ರಂಗಮಂದಿರವಿದ್ದುದು, ಅದು ನಗರದಿಂದ ದೂರವೇ ಇರುವ ನಿಜಾರ್ಥದ ಹಳ್ಳಿಯಾಗಿದ್ದುದು, ಗ್ರಾಮ ಬದುಕಿನ ಸಾತ್ವಿಕತೆ ನಟರ ಅನುಭವವಾಗಿಸಲು ಅಗತ್ಯವಾದ ಎಲ್ಲ ಬಗೆಯ ಪರಿಸರವೂ ಅಲ್ಲಿ ಒದಗಲಿದ್ದುದು ಇವೆಲ್ಲ ಕಾರಣಗಳಿಂದಾಗಿ ತರಬೇತಿಯನ್ನು ಅಲ್ಲಿಯೇ ನಡೆಸಲಾಯಿತು.

ರಾಜ್ಯದ ನಾನಾ ಕಡೆಯಿಂದ ಆಗಮಿಸಿದ್ದರು ನಟರು, ಆ ರಂಗಮಂದಿರಕ್ಕೇ ಒಂದು ಹಬ್ಬದ ದಿನಗಳವು. ಸುಮಾರು 40 ಜನರ ಊಟೋಪಚಾರಕ್ಕಾಗಿ ಹಾವೇರಿಯ ರಟ್ಟಿಹಳ್ಳಿ ಎಂಬ ಊರಿನ ಸ್ವಾಮಿ ಎಂಬವರನ್ನು ಕರೆತಂದುಕೊಂಡಿದ್ದೆವು. ಅವರು ಅವರ ತಾಯಿಯೊಂದಿಗೆ ಕುಟುಂಬ ಸಮೇತ ಅಲ್ಲಿ ಉಳಿದುಕೊಂಡರು. ದಿನದಿನವೂ ಅಡಿಗೆ ಕೆಲಸಗಳನ್ನು ಬೇಗಬೇಗನೆ ಮುಗಿಸಿ ತಾಲೀಮು ನೋಡಲು ಬಂದು ಕೂರುವ ಆ ಕುಟುಂಬ ನಟರಿಗೆಲ್ಲ ತುಂಬ ಆತ್ಮೀಯವಾಗಿಬಿಟ್ಟಿತ್ತು. ಪ್ರತಿ ನಟರ ಆರೋಗ್ಯದ ಕಾಳಜಿ ಮಾಡುತ್ತಿದ್ದ ಸ್ವಾಮಿಯವರ ತಾಯಿ, ಊಟ ನೀಡುವಾಗ ಯಾರು ಯಾರು ಕಡಿಮೆ ಊಟ ಮಾಡಿದರು ಎಂಬುದನ್ನು ಗಮನಿಸಿ, ಗದರಿಸಿ ಉಣ್ಣಿಸುತ್ತಿದ್ದಳು. ನಾಟಕ ತಿರುಗಾಟ ಆರಂಭವಾದ ಮೇಲೆ ಸ್ವಾಮಿಯವರು ರಟ್ಟಿಹಳ್ಳಿಯ ಅವರೂರಿನ ಶಾಲೆಯಲ್ಲಿ ಪ್ರದರ್ಶನ ಏರ್ಪಡಿಸಿ ನಟರಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಸಿಹಿ ಊಟನೀಡಿ ಸಂತಸ ಪಟ್ಟಿದ್ದರು.

ನಟರಿಗೆ ನಾಟಕದ ಜತೆ ವಿಶೇಷವಾಗಿ ವಿವಿಧ ರಂಗತಜ್ಞರಿಂದ ಅಭಿನಯದ ತರಬೇತಿ, ಆಮಂತ್ರಿತ ಉಪನ್ಯಾಸಕರಿಂದ ಗಾಂಧಿ ಚಿಂತನೆ, ಗಾಂಧಿ ಚಿಂತನೆಯ ಸಿನೆಮಾ ಪ್ರದರ್ಶನ, ಅಗತ್ಯ ಪುಸ್ತಕಗಳ ಓದು, ಕವನವಾಚನಗಳು ಹೀಗೆ ಅಲ್ಲಿಯ ತರಬೇತಿ ನಟರಲ್ಲಿ ಅವಶ್ಯಕವಾದ ಒಂದು ಮನೋಭಾವದ ರೂಪಣೆಗೆ ನೆರವಾಗುವಂತೆ  ರೂಪಿಸಲ್ಪಟ್ಟಿತ್ತು. ಪ್ರಸನ್ನ, ಡಾ. ಎಂ ಜಿ, ಸವಿತಾ ಮತ್ತು ನಾಗಭೂಷಣ, ಸತೀಶ ಕುಲಕರ್ಣಿ, ಕೆ ವೈ ನಾರಾಯಣ ಸ್ವಾಮಿ, ಎಚ್ ಆರ್ ಸುಜಾತಾ, ನೇತಾಜಿ ಗಾಂಧಿ,  ಮುಂತಾದ ಹಲವು ಚಿಂತಕರು, ಪ್ರಮೋದ್ ಶಿಗ್ಗಾಂವ್, ಲಕ್ಷ್ಮಣ ಕೆ ಪಿ, ಶ್ವೇತಾ ಹಾಸನ, ರಾಜು ಮಣಿಪಾಲ, ಪ್ರಶಾಂತ ಉದ್ಯಾವರ, ಶೋಧನಬಸ್ರೂರ ಮುಂತಾದ ರಂಗತಜ್ಞರು ಈ ತರಬೇತಿಯಲ್ಲಿ ಅಗತ್ಯ ಪಾತ್ರವಹಿಸಿದರು.

ನಾಟಕ ತರಬೇತಿ ಒಮ್ಮೆ ವರಾಂಡದಲ್ಲಿ ನಡೆದರೆ ಇನ್ನೊಮ್ಮೆ ರೂಮಿನಲ್ಲಿ, ಮಗದೊಮ್ಮೆ ಮಂದಿರದಲ್ಲಿ, ಮತ್ತೊಮ್ಮೆ ಬಯಲಿನಲ್ಲಿ ಹೀಗೇ ಪ್ರತಿ ದಿನವೂ ಅವರ ತರಬೇತಿಯ ತಾಣ ಬದಲಾಗುವಂತೆ ನೋಡಿಕೊಂಡೆವು. ಇದರಿಂದ ಮುಂದೆ ನಟರು ಯಾವ ಸ್ಥಳದಲ್ಲಿ ಬೇಕಾದರೂ ಪ್ರಯೋಗ ನಡೆಸಲು ಸಿದ್ಧರಾಗುವಂತಾಯ್ತು. ನಾಟಕದ ಸೆಟ್ ಹಾಕಿಕೊಳ್ಳಲು ಮತ್ತು ಅದನ್ನು ವಾಪಾಸು ಗಾಡಿಯಲ್ಲಿ ತುಂಬಿಕೊಳ್ಳಲು 20 ನಿಮಿಷ ಮಾತ್ರ ತಗಲುವಂತೆ ಸಹ ತರಬೇತಿ ನಡೆಯಿತು. ದಿನಕ್ಕೆ ಕೆಲವೊಮ್ಮೆ 3 ಪ್ರದರ್ಶನಗಳನ್ನೂ ಕೊಡುವ ಅನಿವಾರ್ಯ ಸಂದರ್ಭದಲ್ಲಿ ಈ ಬಗೆಯ ತಯಾರಿ ಅವರಿಗೆ ನೆರವು ನೀಡಿತು.

ಅವರು ವೃತ್ತಿನಿರತ ನಟರಾಗಿ ಮುಂದಿನ ದಿನಗಳ ಅವರ ರಂಗ ಜೀವನ ನಡೆಸಲು ಅನುಕೂಲವಾಗುವಂತೆ ಈ ತರಬೇತಿಯನ್ನು ತುಂಬ ಪ್ರಾಮಾಣಿಕವಾಗಿ ರೂಪಿಸಿದೆವು. ಒಮ್ಮೆ ಆಕಸ್ಮಿಕವಾಗಿ ದೊಡ್ಡಬಳ್ಳಾಪುರದಲ್ಲಿ ಒಂದು ಪ್ರದರ್ಶನ ನೋಡಲು ಬಂದ ರಂಗತಜ್ಞ ಶಶಿಧರ ಅಡಪರು ಆ ದಿನದ ಪ್ರಯೋಗವನ್ನು ಮರವೊಂದರ ಕೆಳಗೆ ಮಕ್ಕಳ ಜತೆ ಕುಳಿತು ನೊಡಿದರು. ಅದರ ಸ್ಥಿತಿಸ್ಥಾಪಕ ಗುಣಕ್ಕೆ ಮಾರುಹೋದ ಅವರು “ ಈ ನಟರು ಕೇವಲ ಕಲಾವಿದರಾಗಿ ಉಳಿಯದೇ ಆ ಹಂತವನ್ನೂ ಮೀರಿದ್ದಾರೆ. ಸರಕಾರ ನಿರ್ವಹಿಸುತ್ತಿರುವ ಕಾರ್ಯಕ್ರಮಗಳಲ್ಲಿ ಇದು ಜಾಗತಿಕ ಮಟ್ಟದ ವಿದ್ಯಮಾನ” ಎಂದು ಹರ್ಷಿಸಿದ್ದರು. ಈ ರಂಗಪಯಣ ಸರ್ಕಾರಿ ಕಾರ್ಯಕ್ರಮ ಎಂಬ ಉಪೇಕ್ಷೆಗೆ ಒಳಗಾಗದಂತೆ ಅದರೆಲ್ಲ ಪಾವಿತ್ರ್ಯದೊಡನೆ ಕಾಪಿಡಲು ನಟರೆಲ್ಲ ತುಂಬ ಶ್ರಮಿಸಿದರು. ಅವರ ಪ್ರಾಮಾಣಿಕತೆ, ಶ್ರಮ ಮತ್ತು  ಪ್ರೀತಿ, ರಂಗವನ್ನೂ, ಗಾಂಧಿಕತೆಯನ್ನೂ ಕಾಯ್ದಿತ್ತು.

ತಿರುಗಾಟದ ಸಂದರ್ಭದ ಅನುಭವಗಳನ್ನು ಲೆಕ್ಕಹಾಕಿ ಮುಗಿಯುವುದಿಲ್ಲ. ಪ್ರತಿ ಕಲಾವಿದನಲ್ಲೂ ನೂರು ಕತೆಗಳಿವೆ. 60 ಕಲಾವಿದರು, ಹತ್ತಾರು ತಂತ್ರಜ್ಞರು, ರಾಜ್ಯಾದ್ಯಂತ ಜತೆಗಿದ್ದ ಸಂಘಟಕರು ಪ್ರತಿಯೊಬ್ಬರಲ್ಲೂ ಕತೆಗಳಿವೆ. ಪುಣ್ಯದ ಭತ್ತವದು ಅಳೆದು ತೀರುವದುಂಟೆ? ನಾಟಕ ನೊಡಿದ ಚಿಕ್ಕ ಹುಡುಗಿಯೊಬ್ಬಳು ವೇದಿಕೆಗೆ ಬಂದು ಮೈಕ್ ಹಿಡಿದು “ನಂಗೆ ಗಾಂಧಿ ತುಂಬ ಇಷ್ಟ ಆದರು. ಆದರೆ ಕೊನೆಯಲ್ಲಿ ಅವರನ್ನು…” ಎಂದು ಮುಂದೆ ಹೇಳಲಾಗದೇ ಬಿಕ್ಕಿ ಬಿಕ್ಕಿ ಅತ್ತ ಘಟನೆ ನೆನೆದಾಗಲೆಲ್ಲ ನಮ್ಮಲ್ಲಿ ಅಳು ಮೂಡಿಸುವುದು. ಎಷ್ಟೋ ಶಿಕ್ಷಕರು ಕಣ್ಣೊರೆಸಿಕೊಳ್ಳುತ್ತ ನಾಟಕ ನೋಡುತ್ತಿದ್ದುದನ್ನು ನೋಡಿ ‘ಅಬ್ಬಾ ಎಷ್ಟೊಂದು ಆದ್ರ ಹೃದಯಿ ಶಿಕ್ಷಕರಿದಾರಲ್ಲಾ! ಎಂದು ಅಲ್ಲಿಯ ಮಕ್ಕಳ ಭವಿಷ್ಯದ ಕುರಿತು ಸಮಾಧಾನ ಪಟ್ಟಿದ್ದಿದೆ.

ಇನ್ನೊಂದೆಡೆ ಹುಡುಗಿಯೊಬ್ಬಳು ಬಾಲಕ ಗಾಂಧಿ ಪಾತ್ರಧಾರಿಯನ್ನು ಒಮ್ಮೆ ಸ್ಪರ್ಷಿಸಿ ಸಂತಸ ಪಟ್ಟಿದ್ದಳು. ಹುಡುಗನೊಬ್ಬ ತನ್ನ ಬೆವೆತ ಅಂಗೈ ಮುಷ್ಟಿಯಲ್ಲಿ ಕೆಲವು ಚಾಕಲೇಟುಗಳನ್ನು ಹಿಡಿದು ತಂದು ಗುಟ್ಟಾಗಿ ಗಾಂಧಿ ತಾತನ ಕೈಯಲ್ಲಿಟ್ಟು ಓಡಿಹೋಗಿದ್ದ. ಭಾಷಣ, ಚರ್ಚಾ ಸ್ಪರ್ಧೆಗಳಲ್ಲಿ ನಿರಂತರವಾಗಿ ಗಾಂಧೀಜಿಯನ್ನು ಅವಹೇಳನ ಮಾಡಿ ಚಪ್ಪಾಳೆಯನ್ನೂ, ಬಹುಮಾನವನ್ನೂ ಗಳಿಸುತ್ತಿದ್ದ ಯುವ ವಿದ್ಯಾರ್ಥಿಯೊಬ್ಬ ವೇದಿಕೆಗೆ ಬಂದು ‘ಇನ್ನು ಮುಂದೆ ನಾನು ಗಾಂಧೀಜಿಯ ಅವಹೇಳನೆ ಮಾಡಲಾರೆ ಮತ್ತು ಇದುವರೆಗಿನ ಅಪರಾಧಕ್ಕೆ ಕ್ಷಮೆ ಬೇಡುವೆ” ಎಂದಿದ್ದಿದೆ. ಕಾಲೇಜು ವಿದ್ಯಾರ್ಥಿನಿಯೊಬ್ಬಳು ‘ನಮಗ್ಯಾಕೆ ತರಗತಿಗಳಲ್ಲಿ ಗಾಂಧೀಜಿಯ ಕುರಿತು ಸುಳ್ಳು ಹೇಳಲಾಗುತ್ತದೆ?” ಎಂದು ಪ್ರಶ್ನಿಸಿದ್ದಿದೆ.

ನಾಟಕ ಪ್ರದರ್ಶನ ರಾಜ್ಯದ ಹಲವು ಜೈಲುಗಳಲ್ಲಿ ನಡೆದಿದೆ. ನಾಟಕ ನೋಡುತ್ತ ನೋಡುತ್ತ ಹನಿಗಣ್ಣಾಗುವ ಆಪಾದಿತರು “ನಾವು ಮೊದಲೇ ಗಾಂಧೀಜಿಯನ್ನು ಭೇಟಿಯಾಗಿದ್ದಿದ್ದರೆ ಅಪರಾಧಗಳಿಗೆ  ಮನಸು ಮಾಡುತ್ತಿರಲಿಲ್ಲ” ಎಂದಿದ್ದಾರೆ. ಒಂದೊಂದು ಹೂವಿಗೂ ಒಂದೊಂದು ಬಣ್ಣ. ಆಡಿದ ಪ್ರತಿ ಪ್ರಯೋಗದಲ್ಲಿ ಭಾಗಿಯಾದ ವಿದ್ಯಾರ್ಥಿಗಳಿಗೆ, ಆಯಾದಿನದ ಪ್ರಯೋಗದಲ್ಲಿ ಸಿಕ್ಕ ವಿಭಿನ್ನ ಕಂಪನಗಳಿಗೆ ತುತ್ತಾದ ನಟರುಗಳಿಗೆ, ಆಯಾ ಪರಿಸರ ಪರಿವಾರಕ್ಕೆ ಪ್ರತಿ ಪ್ರದರ್ಶನವೂ ಹೊಸತೇನನ್ನೋ ನೀಡಿದೆ. ಇದು ಬರಿಯ ನಾಟಕ ಪ್ರದರ್ಶನ ಆಗಿ ಉಳಿಯಲಿಲ್ಲ ಎಂದಷ್ಟೇ ಹೇಳಬಹುದೇನೊ.

ಇಂದಿಗೂ ಕೊರೊನಾ ಸಂದರ್ಭದ ಖಿನ್ನತೆಯ ಕಾಲದಲ್ಲಿ ಕೆಲವು ಕಲಾವಿದರು ಮೌನವಾಗಿ ಶೇಷಗಿರಿ ರಂಗಮಂದಿರದ ತಾಲೀಮಿನ ಜಾಗಕ್ಕೆ ಬಂದು ಸುಮ್ಮನೆ ಉಳಿದು ಹೋಗುತ್ತಾರೆ. ನಟನೊಬ್ಬ ಕಾಫಿ ಮಾರುವ ಅಂಗಡಿಯನ್ನು ನಡೆಸುತ್ತ ‘ಅದನ್ನು ಸರಳವಾಗಿ ಮತ್ತು ಸುಂದರವಾಗಿ ನಡೆಸುವುದು ಹೇಗೆ ಎಂಬುದು ನನ್ನ ಅರಿವಿಗೆ ಬಂದಿದೆ. ನಾವು ಮಾಡುವ ಚಿಕ್ಕ ಚಿಕ್ಕ ಕೆಲಸಗಳಲ್ಲಿಯೂ ಘನತೆಯಿದೆ ಎಂಬುದನ್ನು ತಾತ ಕಲಿಸಿಕೊಟ್ಟಿದ್ದಾನೆ’ ಎನ್ನುತ್ತಾನೆ.

ಕಲಬುರ್ಗಿಯ ಕೆಲ ಗೆಳೆಯರು ‘ಸರ್ಕಾರದ ಹಣ ಬೇಡ ಸರ್, ನಾವೇ ಸಾರ್ವಜನಿಕ ವಂತಿಕೆಯಿಂದ ಬದುಕಲು ಬೇಕಾಗುವಷ್ಟು ಹಣ ಸಂಗ್ರಹಿಸಿ ತಿರುಗಾಟ ಮಾಡುತ್ತೇವೆ. ನಮಗೆ ಅಂಬೇಡ್ಕರರನ್ನೂ ಈ ರೀತಿ ಮಕ್ಕಳ ಮಧ್ಯದಲ್ಲಿ ಪರಿಚಯಿಸಬೇಕಿದೆ. ಸಹಾಯಮಾಡಿ’ ಎಂದಿದ್ದಾರೆ.  ಸಾರ್ಥಕ ಗಳಿಗೆಗಳು ಇವು.

ಕಲಾವಿದರನ್ನು ನಮ್ಮ ‘ಗಾಂಧಿ ಯೋಧರು’ ಎಂದು ಪ್ರೀತಿ ಮತ್ತು ಅಭಿಮಾನದಿಂದ ಕರೆಯುತ್ತ ಅವರ ಕುರಿತ ಚಿಕ್ಕ ಚಿಕ್ಕ ಯಶಸ್ಸಿನ ಕತೆ ಕೇಳಿದಾಗಲೂ ಕಣ್ಣಲ್ಲಿ ಅಭಿಮಾನ ತುಳುಕಿಸುವ ವಿಶುಕುಮಾರರರಲ್ಲಿ, “ನನ್ನ ಪಠ್ಯಕ್ಕೆ ಸಾರ್ಥಕತೆ ತಂದಿರಿ, ಇನ್ನು ಮುಂದೆ ನಾನು ‘ಬೊಳುವಾರ ಭಟ್ಟ’ ಮತ್ತು ನೀವು ‘ಶ್ರೀಪಾದ ಕುಂಞ’ ಎಂದು ಅಪ್ಪಿದ ಬೊಳುವಾರರಲ್ಲಿ, “ಚೆನ್ನಾಗಿ ಉಣ್ಣಬೇಕು ಇಲ್ಲವಾದರೆ ನಾಟಕ ಸೊರಗುತ್ತದೆ” ಎಂದು ಪ್ರೀತಿಯಿಂದ ಗದರಿಸಿ ಊಟನೀಡುತ್ತಿದ್ದ ಆ ಅಡುಗೆ ಅಜ್ಜಿಯಲ್ಲಿ, ಈ ಕಾರ್ಯಕ್ರಮದಿಂದ ನಮ್ಮ ಇಲಾಖೆಗಳ ಮಾನ ಹೆಚ್ಚಿತು ಎಂದು ಸಂಭ್ರಮಿಸಿದ ಸರ್ಕಾರಿ ಇಲಾಖೆಗಳ ಕೆಲವು ಮಾನವಂತ ಮನಸುಗಳಲ್ಲಿ, ಆತಂಕದಿಂದ ಪದೇ ಪದೇ ಒದ್ದಾಡುತ್ತ ಆರೋಗ್ಯದ ಕುಸಿತ ಅನುಭವಿಸಿದಾಗಲೆಲ್ಲ ನನ್ನ ಸಂತೈಸಿದ ವೈದ್ಯರುಗಳಲ್ಲಿ, ಕೊನೆ ತನಕವೂ ಬೆನ್ನಿಗಿದ್ದು ನನ್ನ ದೈಹಿಕ ನೈತಿಕ ಬಲಕ್ಕೆ ನೆರವಾದ ಮಧ್ವರಾಜ, ಹರಿಕೃಷ್ಣ, ಗಣೇಶ, ರಂಜಿತಾ, ಸ್ವರೂಪ ಮೊದಲಾದ ರಂಗತಂಡದ ನಾಯಕರುಗಳ ಸಹವಾಸದಲ್ಲಿ ಮತ್ತೆ ಮತ್ತೆ ಗಾಂಧಿಯನ್ನು ಕಂಡಿರುವೆ. ಸಬರಮತಿ ಕಾವ್ಯ ಕಥನದಲ್ಲಿ ಡಾ. ಎಚ್ ಎಸ್ ಅನುಪಮಾ ಬರೆದಂತೆ-

ಅಲ್ಲಲ್ಲಿ ಎಲ್ಲೆಲ್ಲು ನೆನೆದ ಮನಗಳಲ್ಲಿ ಬಾಪು
ನೂರು ಬಣ್ಣದ ಬಾಪು ನೂರಾರು ಚೌಕಗಳಲ್ಲಿ
ತಮ್ಮ ಕಣ್ಣ ತಕ್ಕಡಿಯಲಿ ನಮ್ಮ ತೂಗುತಿರುವರು.

“ಕಲೆ ಕೇವಲ ಕೆಲವೇ ಕೆಲವು ಭಾಗ್ಯವಂತರ ಸೊತ್ತಲ್ಲ, ಅದು ಸರ್ವ ಭೋಗ್ಯವಾದ ಹಾದಿ ಹಿಡಿಯಬೇಕು. ಜನರ ಬೇಡಿಕೆಯಿಂದ ಪುಷ್ಠಿಗೊಳ್ಳದೇ ಕಲೆ ಉದ್ದಾರವಾಗದು, ಸಿರಿವಂತರಾಟದ ಗೊಂಬೆಯಲ್ಲ. ಜೀವನಾಧಾರವಾದ ಪೃಥ್ವಿ ರಸವನ್ನು ಬೇರಿಗೆರೆಯದೇ ಕಲೆಯ ಸಸಿಯನ್ನು ಉಳಿಸಲಾಗದು, ಜನಸ್ತೋಮಕ್ಕೆ ಪ್ರಯೋಜನವಿಲ್ಲದ ಯಾವ ಬಗೆಯ ಕಲಾ ವಿಶೇಷಜ್ಞತೆಯೂ ನನಗೆ ಅರ್ಥವಾಗದು. ಕಲೆ ನಿಸರ್ಗದ ಭಾಷೆಯಂತೆ ಸರಳವಾಗಿರಬೇಕು. ಕಲೆಯೆಂದರೆ ಸರಳತೆಯಲ್ಲಿಯ ಚೆಲುವು. ಆಕಾಶದಲ್ಲಿ ಕಾಮನಬಿಲ್ಲು ಮಾತ್ರವಲ್ಲ ಆಕಾಶವೂ ಸುಂದರವಾದುದೇ, ಸರಿಯಾಗಿ ನೋಡಲು ಕಲಿಯಬೇಕು. ಕಲೆಗಾಗಿ ಕಲೆಯಲ್ಲ. ಅದು ಗುರಿ ಸಾಧಿಸುವ ದಾರಿ. ದಾರಿಯೇ ಗುರಿಯಾಗಿ ಬಿಟ್ಟರೆ ಅದು ದಾಸ್ಯದತ್ತ ತಳ್ಳುತ್ತದೆ. ಹಸಿದ ಜನಕೋಟಿಗೆ ಯಾವುದು ಉಪಯುಕ್ತವೋ ಅದೇ ನನ್ನ ಪಾಲಿಗೆ ಸುಂದರವಾದುದು ಹೀಗಾಗಿ ಜನಕೋಟಿಗೆ ಮಾತನಾಡುವ ಕಲೆ, ಸಾಹಿತ್ಯ ಬೇಕು.”

ಕಲೆಯ ಕುರಿತು ಬಾಪು ಆಡಿದ ನುಡಿಗಳಿವು. ಅವರಾಡಿದ ಅಲ್ಲಲ್ಲಿಯ ಇಂಥ ಮಾತುಗಳನ್ನು ಹೆಕ್ಕಿ ಪೋಣಿಸಿಕೊಂಡು ಕಲೆಯ ನಿರೂಪವನ್ನು ಜನರ ಮುಂದೆ ಒಯ್ದಿದ್ದೇವೆ. ಕಲಾಕ್ಷೇತ್ರದಂತಹ ಕಡೆ ಪ್ರಯೋಗವಾದಾಗ ಸೊರಗಿದಂತೆ ಕಾಣುತ್ತಿದ್ದ ನಾಟಕ, ಮಕ್ಕಳ, ಯುವಕರ ಸಮೀಪದಲ್ಲಿ ನಿಂತು ಆಪ್ತರಂಗದಲ್ಲಿ ಆಡಿದಾಗ ಝಗ್ಗನೆ ಉದ್ದೀಪ್ತವಾಗುವ ಪರಿಯೇನೆಂಬ, ಯಾಕೆಂಬ ಪ್ರಶ್ನೆಗಳಿಗೆ ಉತ್ತರ ಇಲ್ಲಿಯೇ ಇದೆ. ನಿಜ. ಕಲಾವಿದರು ಈ ಮಾತುಗಳ ಜತೆ ಜೀವಮಾನವಿಡೀ ಬದುಕಬಹುದು.

ಸಾಹಿತಿಗಳನ್ನು ಕುರಿತು “ನೀವು ಬಿಳಿಯ ಸುಳ್ಳುಗಳನ್ನು ಹೇಳುತ್ತೀರಿ” ಎಂದು ಛೇಡಿಸುತ್ತಿದ್ದ ಗಾಂಧೀಜಿ ನಾಟಕವನ್ನು ಕುರಿತು “ರಂಗದ ಮೇಲಿನ ವ್ಯಕ್ತಿಗಳು ಇತಿಹಾಸದ ವ್ಯಕ್ತಿಗಳೇ ಆಗಿರಲಿಕ್ಕಿಲ್ಲ ಆದರೆ ಅವರು ಜೀವಂತ ವ್ಯಕ್ತಿಗಳು; ಸ್ಫೂರ್ತಿ ತುಂಬುವ ಆದರ್ಶಗಳು” ಎಂದಿದ್ದಾರೆ. ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಒಂದಷ್ಟು ಕೆಲಸ ಮಾಡಲು ಅವಕಾಶ ಒದಗಿದ್ದು ನಮ್ಮ ರಂಗಬದುಕಿನ ಭಾಗ್ಯ. ಕುವೆಂಪು ಹೇಳಿದಂತೆ “ನಾನು ನಿಮ್ಮವ ಎಂಬ ಹೆಮ್ಮೆಯ ಋಣವು ಮಾತ್ರವೇ ನನ್ನದು” ಎನ್ನಬಹುದೇನೊ.

ನಾಟಕ ಹೇಗಿತ್ತು, ಏನಿತ್ತು ಅನ್ನುವದರ ಕುರಿತು ಹಿರಿಯ ರಂಗ ನಿರ್ದೇಶಕರಾದ ಪ್ರಸನ್ನ ನುಡಿದ ಮಾತುಗಳಿವೆ ಇಲ್ಲಿ. ಈ ಮಾತುಗಳು ನನ್ನಂತವನಿಗೆ ಪಾರಿತೋಷಕಕ್ಕಿಂತ ಮಿಗಿಲಾದುದು ಎಂದುಬೇರೆ ಹೇಳಬೇಕಿಲ್ಲ.

“ಕರ್ನಾಟಕದಲ್ಲಿ ಕಳೆದ ವರ್ಷದಿಂದ ಗಾಂಧೀಜಿಯವರ 150 ವರ್ಷದ ಆಚರಣೆಯ ಸಂದರ್ಭದಲ್ಲಿ ಗಾಂಧೀಜಿಯವರ ಬಗ್ಗೆ ಆಡಿದ ಈ ನಾಟಕದ ಹಲವು ಪ್ರದರ್ಶನಗಳನ್ನು ನಾನು ನೋಡಿದ್ದೇನೆ. ಆ ನಾಟಕ ತಯಾರಿ ಆಗುತ್ತಿದ್ದಾಗ ಅದರ ನಟರ ಜತೆಯಲ್ಲಿಯೂ ಸಮಯ ಕಳೆದಿದ್ದೇನೆ. ನಿರ್ದೇಶಕರಾದ ಶ್ರೀಪಾದ ಭಟ್ಟರಲ್ಲಿ ಇದರ ರೂಪದ ಕುರಿತು ಚರ್ಚಿಸಿದ್ದೇನೆ, ವಿಶುಕುಮಾರರಲ್ಲಿ ಇದರ ನಿರ್ವಹಣೆಯ ಸ್ವರೂಪದ ಕುರಿತು ಮಾತನಾಡಿದ್ದೇನೆ. ನನ್ನಮಟ್ಟಿಗೆ ರಂಗಭೂಮಿಯಲ್ಲಿ ಇದು ಒಂದು ಮಹತ್ವದ ಪ್ರಯೋಗ. ಈ  ನಾಟಕ ಯಾಕೆ ನನಗೆ ಮಹತ್ತರ ಅನಿಸಿತು ಅಂದರೆ

  • ಮೊದಲನೇಯದಾಗಿ ‘ಎಲ್ಲ ನಾಟಕದ ಹಾಗೆ ಇದೂ ಒಂದು ನಾಟಕ’ ಅಂತಾಗಿರಲಿಲ್ಲ. ವಸ್ತು ಹೇಳಿಕೊಡುವ ಸರಳ ಜೀವನ ಮತ್ತು ಶ್ರಮದ ಜೀವನವನ್ನು ಅಂತರ್ಗತಗೊಳಿಸಿಕೊಂಡ ಪ್ರದರ್ಶನವಾಗಿತ್ತು ಅದು. ಹೀಗಾಗಿ ನಾಟಕ ತನ್ನ ಆಶಯದಿಂದ ಮಾತ್ರವಲ್ಲ ಅದನ್ನು ಮಾಡುವವರನ್ನು ನೋಡುವದರಿಂದಾಗಿಯೂ ಹುಡುಗರಲ್ಲಿ ಬದಲಾವಣೆ ಕಾಣಿಸುವಂತಿತ್ತು. ಗಾಂಧೀಜಿಯವರನ್ನು ಕುರಿತು ನಾಟಕ ಮಾಡುವುದಿದ್ದರೂ ನಾವು ಹಲವು ಸಾರಿ ಭರ್ಜರಿ ಸೆಟ್ ಹಾಕಿ, ಭರ್ಜರಿ ಭಾಷಣ ಮಾಡಿಸಿ ಬಿಡ್ತೇವೆ. ಈ ನಾಟಕದಲ್ಲಿ ಹಾಗೆ ಮಾಡಿರಲಿಲ್ಲ.
  • ಈ ನಾಟಕದಲ್ಲಿ ಮುಖ್ಯ ಅನಿಸಿದ ಇನ್ನೊಂದು ಸಂಗತಿ ಏನೆಂದರೆ, ಸಾಮಾನ್ಯವಾಗಿ ಸಂತರು, ಮಹಾಪುರುಷರು ರೂಪುಗೊಂಡ ನಂತರದಲ್ಲಿ ‘ರೌಂಡೆಡ್ ಪರ್ಸನಾಲಿಟಿ’ ಅಂತೀವಲ್ಲ ಒಂದು ಸ್ಪಷ್ಟ ಆಕಾರವನ್ನು ಪಡೆದಿರುತ್ತಾರೆ. ಆದರೆ ಆ ಸ್ಪಷ್ಟ ಆಕಾರ ಅವರ ಆರಂಭದ ದಿನಗಳಲ್ಲಿ ಇರುವುದಿಲ್ಲ. ಮಹಾವ್ಯಕ್ತಿಗಳ ಬದುಕು ನಮಗೆ ಯಾಕೆ ಮುಖ್ಯವಾಗುತ್ತದೆ ಅಂದರೆ ಅವರು ಹೇಗೆ ಮತ್ತು ಯಾಕೆ ಮಹಾನ್ ಆದರು? ಅವರನ್ನು ಮಹಾನ್ ಆಗಿಸಿದ ಕಾರಣಗಳು ಯಾವುದು? ಅದನ್ನು ನಾವು ತಿಳಿದುಕೊಳ್ಳುವುದು ಮುಖ್ಯ. ಮಹಾನ್ ವ್ಯಕ್ತಿಗಳಿರಲಿ ಸಾಧಾರಣ ವ್ಯಕ್ತಿಗಳಿರಲಿ ಇವರಿಬ್ಬರನ್ನೂ ರೂಪಿಸಿದ ಕಾರಣಗಳು ಒಂದೇ ಇರುತ್ತವೆ. ಆ ಕಾರಣಗಳನ್ನು ಹೇಗೆ ಅಸಾಧಾರಣ ವ್ಯಕ್ತಿಗಳು ದುಡಿಸಿಕೊಂಡು ಮಹತ್ ಆಗುತ್ತಾರೆ ಅನ್ನುವುದು ಮುಖ್ಯ. ಅದು ಈ ನಾಟಕದಲ್ಲಿ ಕಾಣಸಿಕ್ಕಿತು.
  • ಮೂರನೇಯ ಬಹು ಮುಖ್ಯವಾದ ಸಂಗತಿ ನನಗೆ ಇಷ್ಟವಾದುದು ಈ ನಾಟಕದಲ್ಲಿ ಏನೆಂದರೆ ಇದರಲ್ಲಿದ್ದ ಹಾಸ್ಯ. ಈ ಮಹತ್ತು ಅನ್ನುವದೇನಿದೆ ಅದು ಒಮ್ಮೊಮ್ಮೆ ವಿಪರೀತ ಗಾಂಭೀರ್ಯದ ಸಂಗತಿಯನ್ನಾಗಿಸಿಬಿಡುತ್ತದೆ. ಹಾಸ್ಯ ಅಂತ ಏನಿದೆ ಅದು ಈ ಹುಸಿ ಗಾಂಭೀರ್ಯವನ್ನು ಒಡೆಯುತ್ತದೆ, ಒಡೆಯಬೇಕು. ಈ ನಾಟಕದಲ್ಲಿ ಬಳಕೆಯಾದ ಹಾಸ್ಯ ಈ ಬಗೆಯದು.
  • ಗಾಂಧೀಜಿ ಅಂದ ತಕ್ಷಣ ದೇವಸ್ಥಾನದಲ್ಲಿಟ್ಟು ಪೂಜೆ ಮಾಡಿ ಆಚೆ ಹೋಗುವುದಲ್ಲ. ಅವರನ್ನು ನಾವು ಪ್ರೀತಿಯಿಂದ ಆತ್ಮೀಯತೆಯಿಂದ ಕಾಣಲು ಸಾಧ್ಯವಾಗುವಂತೆ ಮಾಡಬೇಕು; ಈ ನಾಟಕ ಹಾಗೆ ಮಾಡಿದೆ. ಇದರಲ್ಲಿಯ ತುಂಬ ದೃಶ್ಯಗಳು ನಮಗೆ ನಗು ತರಿಸ್ತಾವೆ, ಕಚಗುಳಿ ಇಡ್ತಾವೆ, ಮತ್ತೆ ಅಷ್ಟೇ ಶಕ್ತವಾಗಿ ಇದರ ಅನೇಕ ದೃಶ್ಯಗಳು ನಮ್ಮಲ್ಲಿ ಕಣ್ಣಿರನ್ನು ಮಿಡಿಸುತ್ತಾವೆ. ಹೀಗೆ ಒಬ್ಬ ಮಹಾನ್ ವ್ಯಕ್ತಿ ರೂಪುಗೊಳ್ಳುವ ಪ್ರಕ್ರಿಯೆ, ಕಣ್ಣೀರುಕ್ಕಿಸುವ ಪ್ರಕ್ರಿಯೆಯೂ ಹೌದು ನಗಿಸುವ ಪ್ರಕ್ರಿಯೆಯೂ ಹೌದು, ಕಚಗುಳಿ ಇಡುವ ಪ್ರಕ್ರಿಯೆಯೂ ಹೌದು.
  • ಈ ಎಲ್ಲ ಪ್ರಕ್ರಿಯೆಯ ಕಡೆಯಲ್ಲಿ ಒಬ್ಬ ಮಹಾತ್ಮ ರೂಪುಗೊಂಡ ಅನ್ನುವುದು, ಮಕ್ಕಳಿಗೆ ನಾವೂ ಹೀಗಾಗಬಹುದು ಎಂಬ ಆಶಯ ಹುಟ್ಟಿಸುವಲ್ಲಿ ನೆರವಾಗುತ್ತದೆ. ಅಂಥ ಸಾಧ್ಯತೆಯನ್ನು ಈ ನಾಟಕ ನೀಡಿದೆ. ಮತ್ತು ರಾಜ್ಯದ ಬೇರೆ ಬೇರೆ ಊರುಗಳಿಂದ ಬಂದ ಇದರಲ್ಲಿಯ ನಟರು ಕಷ್ಟ ಬಲ್ಲವರು, ಅದನ್ನು ಸಂತೋಷವಾಗಿ ಎದುರಿಸಬಲ್ಲವರು ಅವರ ಪ್ರೀತಿ ಕೊಡುಗೆಯೂ ಇದರಲ್ಲಿದೆ. ಈ ನಾಟಕದ ಯಶಸ್ಸಿಗೆ ಇವೆಲ್ಲವೂ ಕಾರಣವಾಗಿದೆ ಅಂತ ನನಗನಿಸುತ್ತದೆ.”          

ಮೌನ, ಅಸಹಕಾರ, ಹಠ ಮುಂತಾದ ಮಹಿಳೆಯರ ಹೋರಾಟದ ಹಾದಿಯನ್ನು ಗಟ್ಟಿಯಾಗಿ ಆತುಕೊಂಡ, ದೇಶವನ್ನು ಹೆಣ್ಣು ಎಂದೇ ಪರಿಭಾವಿಸಿದ ಗಾಂಧಿಯ ತಾಯ್ತನದ ಜತೆ ಒಡನಾಡಿದ ರಂಗ ಗಳಿಗೆಗಳ ನೆನಪಿಗಿದು. ಯಾಕೆ ಈ ತಾಯ್ತನದ ನೆನಪು ಎಂದರೆ ಅದು ನಮ್ಮನ್ನು ಹೊಸ ಹುಟ್ಟಿನತ್ತಲೇ ಕರೆದೊಯ್ಯುತ್ತದೆ. ‘ನರನು ಕೆರಳುವ ಹುಂಬನಾದಾಗಲೆಲ್ಲ ಬಾಳು ಯೂಪಸ್ತಂಭವಾಗುತ್ತದೆ. ಆದರೆ ತಿಳಿವು ತುಂಬಿದ ಕಣ್ಣು, ಒಲವು ತುಂಬಿದ ಎದೆಯು, ಛಲವನರಿಯದ ಬದುಕು ಇಷ್ಟು ಸಾಕು’ ಎನಿಸುವ ಬಾಳ್ವೆಯನ್ನು ಬಾಪು ನೀ ನಮಗೆ ಕರುಣಿಸಿದ್ದೀಯಾ. ಕಲೆಯ ಕೆಲಸವೂ ಇದೇ ತಾನೆ; ಬಾಳ್ವೆಯ ಬೆಳಕನ್ನು ಕಂಡರಿಸುವುದು.

‍ಲೇಖಕರು ಶ್ರೀಪಾದ್ ಭಟ್

November 21, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. ವಿಶುಕುಮಾರ್ ಎನ್ ಆರ್

    ಯಾರಿಗೆ ಕೃತಜ್ಞತೆ ಹೇಳಲಿ ? ಶ್ರೀಪಾದ ಭಟ್ಟರನ್ನು ನನಗೆ ಪರಿಚಯಿಸಿದ ಗೆಳೆಯ ಮೋನಿಗೆ ? ಗಾಂಧಿಯನ್ನು ನಾಡಿನ ಶಾಲಾ ಮಕ್ಕಳಿಗೆ ರಂಗರೂಪದ ಮೂಲಕ ಪರಿಚಯಿಸಿದ ಶ್ರೀಪಾದ ಭಟ್ಟರಿಗೆ ? ಪಾಪು – ಬಾಪು ಕೃತಿ ರಚಿಸಿದ ಬೊಳುವಾರರಿಗೆ ? ಪಾಪು- ಬಾಪು ನಾಟಕದ ಕಲಾವಿದರಿಗೆ ? ನನ್ನೆಲ್ಲ ಪರಿಕಲ್ಪನೆಗಳಿಗೆ ಒತ್ತಾಸೆಯಾಗಿ ನಿಂತ ಕರ್ನಾಟಕ ಸರ್ಕಾರಕ್ಕೆ? ನಾಟಕವನ್ನು ಅನುಷ್ಠಾನಗೊಳಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ವಾರ್ತಾ ಇಲಾಖೆ ಹಾಗೂ ರಂಗಾಯಣದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ? ಬಾಪುವನ್ನು ಎದೆಗೆ ತುಂಬಿಸಿಕೊಂಡ ನಾಡಿನ ಶಾಲಾ ಮಕ್ಕಳಿಗೆ ? ಉತ್ತೇಜನ ತುಂಬಿದ ಗಾಂಧಿವಾದಿ ಪ್ರಸನ್ನ ಸರ್ ಅವರಿಗೆ , ಗಾಂಧಿ ಬಳಗದ ನನ್ನೆಲ್ಲ ಹಿರಿ ಕಿರಿಯರಿಗೆ,ರಂಗಕರ್ಮಿಗಳಿಗೆ ? ಪಟ್ಟಿ ಮುಂದುವರಿಯುತ್ತಲೇ ಇದೆ…

    ಪ್ರತಿಕ್ರಿಯೆ
  2. SUDHA SHIVARAMA HEGDE

    ಏನೇ ಹೇಳುವುದು? ರಘುಪತಿ ರಾಘವ್…… ಎಂದು ನಾಟಕದ ಕೊನೆಯಲ್ಲಿ ಕೇಳಿಬರುವ ಭಜನ್ ಆಜಾನ್ ಗಳ ಮಿಶ್ರ ಗಾನದೊಂದಿಗೆ ಆವರಿಸುವ ಮೌನ ಈ ಲೇಖನ ಓದಿದಾಗಲೂ ಮೂಡಿದೆ. ಮತ್ತು ಅದೇ ಮಾತಾಗಿದೆ….

    ಪ್ರತಿಕ್ರಿಯೆ
  3. Kiran Bhat

    ಕೂಜಳ್ಳಿಯ ಹಸಿರು ಗುಡ್ಡದ ನಡುವೆ ಹುಟ್ಟಿದ ‘ ಚಿಂತನ’ ದ ಪಾಪು ಗಾಂಧಿ ಮುಂದೆ ಬೃಹದಾಕಾರ ತಾಳಿ ಬೆಳೆಯುತ್ತ ನಾಡಲೆಲ್ಲ ಓಡಾಡಿದ್ದು ಸಣ್ಣ ವಿದ್ಯಮಾನವಲ್ಲ. ಅಡಪ ಹೇಳಿದಂತೆ ಜಾಗತಿಕ ವಿದ್ಯಮಾನವೇ.

    ಪ್ರತಿಕ್ರಿಯೆ
  4. Kavya Kadame

    ಈ ಬರಹದಲ್ಲಿ ಉದ್ಧರಿಸಿದ “ಜೀವನಾಧಾರವಾದ ಪೃಥ್ವಿ ರಸವನ್ನು ಬೇರಿಗೆರೆಯದೆ ಕಲೆಯ ಸಸಿಯನ್ನು ಉಳಿಸಲಾಗದು” ಎಂಬ ಗಾಂಧಿ ಉಕ್ತಿ ಎಲ್ಲ ಕಾಲದಲ್ಲೂ ನಮ್ಮೆಲ್ಲರಲ್ಲಿ ಅನುರಣಿಸುತ್ತಿರಬೇಕಾದ ದಿವ್ಯಘೋಷವಾಗಿದೆ. ಪಾಪು ಗಾಂಧಿ ಬಾಪು ಗಾಂಧಿ ನಾಟಕವನ್ನು ಯೂಟ್ಯೂಬಿನಲ್ಲಿ ನೋಡಿದ್ದೆ. ಈಗ ರಂಗದ ಹಿಂದಣ ಕತೆಯನ್ನು ಕೇಳಿದ ಹಾಗಾಯಿತು. ಈ ನಾಟಕ ಊರು ಊರುಗಳಲ್ಲಿ ಎಬ್ಬಿಸಿದ ಕಂಪನಗಳ ಕುರಿತು ಕೇಳಿದ್ದೆ. ಈಗ ಮುಚ್ಚಿದ ಅಂಗೈಯಲ್ಲಿ ಚಾಕಲೇಟು ತಂದು ಗಾಂಧಿ ಪಾತ್ರಧಾರಿಯ ಕೈಯ್ಯಲ್ಲಿ ಹಿಡಿಸಿಹೋದ ಬಾಲಕನ ಸಂಭ್ರಮ ನನ್ನದೂ ಆಯಿತು.    

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: