ಗಾಂಧಿ ನಮ್ಮ ಕಾಲದ ನಿಜವಾದ ಮಹಾಪುರುಷ…

ಶ್ರೀನಿವಾಸ  ಜೋಕಟ್ಟೆ

ಅಹಿಂಸಾ ಪರಮೋ ಧರ್ಮ… ಈ ಸಿದ್ಧಾಂತವನ್ನು ಹಿಡಿದು ವಿಭಿನ್ನ ಆಂದೋಲನಗಳ ಮಾರ್ಗದಿಂದ ಭಾರತವನ್ನು ಬ್ರಿಟೀಷರಿಂದ ಮುಕ್ತಗೊಳಿಸಲು ಶ್ರಮಿಸಿದವರು ಗಾಂಧೀಜಿ. ಅನೇಕ ಜನ ಸಮೂಹಗಳ ಆಂದೋಲನಗಳ ಮೂಲಕ ಗಾಂಧೀಯವರು ದೇಶದ ಸ್ವಾತಂತ್ರ್ಯ ಹೋರಾಟವನ್ನು ರೂಪಿಸಿದ್ದರು.  ಮುಂದೆ ಜನಬೆಂಬಲದಿಂದ ಅಹಿಂಸಾ ಚಳುವಳಿಗಳ ಮೂಲಕ ಬ್ರಿಟಿಷರನ್ನು ಹಲವು ರಂಗಗಳಲ್ಲಿ ಬಗ್ಗಿಸಿದವರು. ಗಾಂಧೀಜಿಯವರ ಅನುಸಾರ ಸಾಮಾಜಿಕ ಜಾಗೃತಿಗಾಗಿ ಸಮಾಜದಲ್ಲಿ ಶಿಕ್ಷಣದ ಯೋಗದಾನ ಅವಶ್ಯವೆಂದು ಮನವರಿಕೆ ಮಾಡಿಕೊಟ್ಟಿದ್ದವರು. ಇಂದು ಮಹಾತ್ಮ ಗಾಂಧೀಜಿ ಕುರಿತು ಮಕ್ಕಳಿಗೆ ಮಾಹಿತಿ ನೀಡುವುದು ಅತೀ ಅಗತ್ಯವಿದೆ. ಅವರ ವಿಚಾರಧಾರೆಯಿಂದ ಮಾತ್ರ ಜಗತ್ತಿನಲ್ಲಿ ಶಾಂತಿ ನೆಲೆಸಲು ಸಾಧ್ಯ. ಇದನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಈ ವರ್ಷ ಇತರ ರಾಜ್ಯಗಳಿಗೆ ಮಾದರಿಯಾಗುವ ರೀತಿಯಲ್ಲಿ ಶಿಕ್ಷಣ ಇಲಾಖೆ ಅಳವಡಿಸಿಕೊಂಡಿದೆ. 

ಗಾಂಧೀಜಿಯವರ 153ನೇ ಜನ್ಮದಿನಾಚರಣೆಯ ಅಂಗವಾಗಿ ಜಮ್ಮು ಮತ್ತು ಕಾಶ್ಮೀರ ಶಿಕ್ಷಣ ಇಲಾಖೆಯು ಶಾಲೆಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು , ನಮ್ಮ ದೇಶದಲ್ಲಿ ಮಾತ್ರವಲ್ಲ, ವಿಶ್ವದಲ್ಲೇ ಅತಿದೊಡ್ಡ ಅಹಿಂಸೆಯ ಪಾಠ ಗಾಂಧೀಜಿಯವರನ್ನು  ಮುಂದಿಟ್ಟು ಮಕ್ಕಳಿಗೆ ಅಲ್ಲಿ ತಿಳಿಸಲಾಗುತ್ತಿದೆ. ಗಾಂಧಿಜಯಂತಿ ನಿಮಿತ್ತ ಈಗಾಗಲೇ ಅಲ್ಲಿನ ಎಲ್ಲ ಶಾಲೆಗಳಲ್ಲಿ ಗಾಂಧಿ ಕ್ಲಬ್ ಗಳನ್ನು ರಚಿಸಲಾಗಿದ್ದು, ಅದರಲ್ಲಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಮಹಾತ್ಮ ಗಾಂಧೀಜಿಯವರ ಸ್ವಚ್ಛ ಭಾರತ ಕನಸಿನಿಂದ ಹಿಡಿದು ಅಹಿಂಸಾ ಮಾರ್ಗದವರೆಗೆ ಮಕ್ಕಳಿಗೆ ತಿಳಿಸಲಾಗುತ್ತಿದೆ. ಸೆಪ್ಟೆಂಬರ್ ಆರರಿಂದ ಶಾಲೆಗಳಲ್ಲಿ ಪ್ರಾರಂಭವಾದ ಈ ಅಭಿಯಾನವು ಮಹಾತ್ಮ ಗಾಂಧಿಯವರ ಜನ್ಮದಿನವಾದ ಅಕ್ಟೋಬರ್ 2 ರಂದು ಮುಕ್ತಾಯಗೊಳ್ಳುವುದು. ಜಮ್ಮುವಿನ ಶಿಕ್ಷಣ ನಿರ್ದೇಶನಾಲಯದಿಂದಲೂ ವಿವಿಧಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.  ಶಾಲೆಗಳಲ್ಲಿ ಚರ್ಚಾ ಸ್ಪರ್ಧೆಗಳಲ್ಲದೆ, ಮಹಾತ್ಮ ಗಾಂಧಿಯವರ ಸಂದೇಶವನ್ನು ಜನರಿಗೆ ತಲುಪಿಸುವ ರ‍್ಯಾಲಿಗಳನ್ನು ನಡೆಸಲಾಗುತ್ತಿದೆ.  ಈ ಕಾರ್ಯಕ್ರಮಗಳಲ್ಲಿ ಶಾಲೆಗಳಲ್ಲಿ ಖಾದಿ ಕುರಿತು ಜಾಗೃತಿ ಕಾರ್ಯಕ್ರಮ, ಸ್ವಚ್ಛ ಭಾರತ ಕುರಿತು ಚಿತ್ರಕಲಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಕವನ ವಾಚನ, ಸ್ವಚ್ಛ ಭಾರತದ್ದೇ ವಿಷಯದ ಕುರಿತು ರಸಪ್ರಶ್ನೆ ಸ್ಪರ್ಧೆ, ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ, ಸ್ವಚ್ಛ ಭಾರತ ಜಿಲ್ಲೆ ವಿಷಯ ಕುರಿತು ಜಿಲ್ಲಾ ಮಟ್ಟದ ಸ್ಲೋಗನ್ ಬರವಣಿಗೆ, ಪ್ರಬಂಧ ಬರಹ ಕುರಿತು ರಾಜ್ಯಮಟ್ಟದ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಅಕ್ಟೋಬರ್ 2 ರಂದು ಸನ್ಮಾನಿಸಲಾಗುವುದು. ಜಮ್ಮು ಕಾಶ್ಮೀರದ ಶಿಕ್ಷಣ ಇಲಾಖೆಯ ಇಂತಹ ಕಾರ್ಯ  ನಿಜವಾದ ಗಾಂಧಿ ಜಯಂತಿ. ಎಷ್ಟು ರಾಜ್ಯಗಳಲ್ಲಿ ಇಂತಹ ದೃಶ್ಯವಿದೆ?

ಹೌದು, ಹಿರಿಯರಷ್ಟಕ್ಕೇ ಗಾಂಧಿಯನ್ನು ಹೊಗಳುತ್ತಾ ಬರೆಯುತ್ತಾ ಇದ್ದರೆ ಅದರ ಪರಿಣಾಮ ಎಷ್ಟಿರಬಹುದು? ಆದರೆ ಶಿಕ್ಷಣ ಇಲಾಖೆಯೇ ಈ ಬಗ್ಗೆ ಕಾರ್ಯಕ್ರಮಗಳನ್ನು ಶಾಲೆಗಳಲ್ಲಿ ರೂಪಿಸಲು ಹೊರಟಾಗ ಅದರ ಪರಿಣಾಮಗಳು ಬಹಳಷ್ಟು ಕಾಣಿಸಲಿದೆ.

ಗಾಂಧೀಜಿಯ ಬಾಲ್ಯದ ಶಿಕ್ಷಣ ಫೋರ್ ಬಂದರಿನಲ್ಲಿ, ಹೈಸ್ಕೂಲ್ ಪರೀಕ್ಷೆ ರಾಜ್ ಕೋಟ್ ನಲ್ಲಿ , ಮೆಟ್ರಿಕ್ ಅಹ್ಮದಾಬಾದ್ ನಲ್ಲಿ . ಲಂಡನ್ನಿನಲ್ಲಿ ಲಾ  ಪರೀಕ್ಷೆ ಬರೆದು ಬ್ಯಾರಿಸ್ಟರ್ ಎನ್ನಿಸಿಕೊಂಡವರು. ಫೋರ್ ಬಂದರು ಆ ದಿನಗಳಲ್ಲಿ ಜೈನ ಧರ್ಮದ ಪರಂಪರೆಯ ಕಾರಣ ಗಾಂಧೀಜಿಯ ಜೀವನದಲ್ಲಿಯೂ ಇದರ ಆಳವಾದ ಪ್ರಭಾವ ಬಿದ್ದಿತ್ತು. ಆತ್ಮಶುದ್ಧಿಗಾಗಿ ಅಲ್ಲಿ ಉಪವಾಸ ಮಾಡುವುದನ್ನು ಅವರು ಗಮನಿಸಿದ್ದರು.13 ವರ್ಷ ಪ್ರಾಯದಲ್ಲಿ ಗಾಂಧೀಜಿಯವರು ಕಸ್ತೂರಬಾ ಅವರನ್ನು ವಿವಾಹವಾದರು.  ಬಾಲ್ಯದ ದಿನಗಳಲ್ಲಿ ಗಾಂಧೀಜಿಯವರನ್ನು ಮಂದಬುದ್ಧಿಯ ಹುಡುಗ ಎಂದು ಲೇವಡಿ ಮಾಡುತ್ತಿದ್ದರು. ಆದರೆ ಮುಂದುವರಿದು ಗಾಂಧೀಜಿಯವರು ಶಿಕ್ಷಣ ಕ್ಷೇತ್ರದಲ್ಲಿ ತನ್ನ ಮಹತ್ವಪೂರ್ಣ ಯೋಗದಾನವನ್ನು  ಯಾವ ರೀತಿ ನೀಡಿದರು ಎನ್ನುವುದು ದೇಶಕ್ಕೇ ತಿಳಿದ ಸಂಗತಿ.

ಗಾಂಧೀಜಿ ನೋವನ್ನು ಅನುಭವಿಸಿಯೇ ಬದುಕಿನಲ್ಲಿ ಹೆಜ್ಜೆ ಇಟ್ಟವರು. ದಕ್ಷಿಣ ಆಫ್ರಿಕಾದಲ್ಲಿದ್ದಾಗ ಅಲ್ಲಿ ಭಾರತೀಯರಿಗೆ ಆಗುತ್ತಿದ್ದ  ಶೋಷಣೆಯನ್ನು ಕಂಡು ವಿರೋಧಿಸಿದ್ದರು ಗಾಂಧೀಜಿ. ಒಮ್ಮೆ ಅವಮಾನಗೊಳಿಸಿ  ರೈಲಿನಿಂದ ಕೆಳಗಿಳಿಸಿದ್ದೂ ಇದೆ. ದಕ್ಷಿಣ ಆಫ್ರಿಕಾದಲ್ಲಿ ಭಾರತೀಯ ವ್ಯಕ್ತಿ ಎಂದು ಕೆಲವು  ಹೋಟೆಲುಗಳಲ್ಲಿ ಇವರಿಗೆ ಪ್ರವೇಶವನ್ನೂ ನಿರಾಕರಿಸಲಾಗಿತ್ತು.

1915 ರಲ್ಲಿ ಉದಾರವಾದಿ ಕಾಂಗ್ರೆಸ್ ನೇತಾ ಗೋಪಾಲಕೃಷ್ಣ ಗೋಖಲೆಯವರ ಕರೆಯಂತೆ ಗಾಂಧೀಜಿಯವರು ಭಾರತಕ್ಕೆ ವಾಪಸ್ ಬಂದರು. ಗೋಖಲೆ ಇವರ ರಾಜಕೀಯ ಗುರುಗಳು.

ಮುಂದೆ ಸಾರ್ವಜನಿಕ ಜೀವನದಲ್ಲಿ ತೊಡಗಿಕೊಳ್ಳುವ ಕಲೆಯನ್ನು ಕಲಿತವರು.

ಗಾಂಧಿಯವರು 1915 ರಿಂದ ಭಾರತದ ರಾಷ್ಟ್ರೀಯ ಸ್ವಾತಂತ್ರ್ಯಕ್ಕಾಗಿ ಹೋರಾಟದಲ್ಲಿ ಸಕ್ರಿಯರಾದರು. ಅದಕ್ಕೂ ಮೊದಲು ಅರ್ಧ ಶತಮಾನ ಸ್ವಾತಂತ್ರ್ಯ ಹೋರಾಟ ನಡೆಯುತ್ತಿತ್ತು.  ಆದರೆ ಪ್ರಮುಖ ಅಂಶವೆಂದರೆ ಗಾಂಧೀಜಿ ಭಾರತದ ಸ್ವಾತಂತ್ರ್ಯ ಚಳವಳಿಯನ್ನು ಅನನ್ಯವಾಗಿಸಿದರು. ಅವರಿಂದಾಗಿ ಮೂರು ವಿಶೇಷ ಸಂಗತಿಗಳು ಸೇರಿಕೊಂಡವು.ಅವು ಸತ್ಯ, ಅಹಿಂಸೆ ಮತ್ತು ಸತ್ಯಾಗ್ರಹದ ಮಾರ್ಗ.

ಹೊಸ ಅಹಿಂಸಾ ತತ್ವವನ್ನು ಸಮರ್ಪಕವಾಗಿ ಜಾರಿಗೆ ತಂದವರು ಗಾಂಧೀಜಿ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಮೂಲಭೂತ ಪಾತ್ರ ನಿರ್ವಹಿಸಿದ ಮತ್ತು ಎಲ್ಲರನ್ನೂ ಸತ್ಯ ಮತ್ತು ಅಹಿಂಸೆಯ ಮಾರ್ಗದಲ್ಲಿ ಕೊಂಡೊಯ್ದ  ಗಾಂಧೀಜಿ ಅವರನ್ನು ಪ್ರಥಮಬಾರಿಗೆ ರಾಜವೈದ್ಯ ಜೀವರಾಮ ಕಾಲಿದಾಸ ಅವರು ‘ಬಾಪು’ ಎಂದು ಕರೆದವರು. 

ಸತ್ಯ, ಅಹಿಂಸೆ ಮತ್ತು ಸತ್ಯಾಗ್ರಹದ ಮಾರ್ಗದಲ್ಲಿ ಸಾಗಿದರೆ ಮಾತ್ರ ಸ್ವರಾಜ್ಯ ಸಾಧಿಸಲು ಸಾಧ್ಯ ಎಂದು ಗಾಂಧೀಜಿ ಜನಮಾನಸದಲ್ಲಿ ಬಿತ್ತರಿಸಿದ್ದುದು ಮೊದಲ ವೈಶಿಷ್ಟ್ಯ. ಈ ಸಂದೇಶವನ್ನು ಸಾಧ್ಯವಾದಷ್ಟು ಜನರಿಗೆ ಹರಡಲು ಅವರು ನಿರಂತರವಾಗಿ ಪ್ರಯತ್ನಿಸಿದರು. ಅಷ್ಟೇ ಅಲ್ಲ, ಕಷ್ಟದ ಸಂದರ್ಭಗಳಲ್ಲಿ ಅವರು ಇಂತಹ ಕ್ರಮಗಳನ್ನು ತೆಗೆದುಕೊಂಡರು, ಅದು ಅನೇಕರಿಗೆ ಸರಿ ಎನಿಸದಿರಬಹುದು.  ಆದರೆ ಆ ಜನಪ್ರಿಯವಲ್ಲದ ನಿರ್ಧಾರಗಳ ಹಿಂದಿನ ಕಾರಣವನ್ನು ವಿವರಿಸುವ ಮೂಲಕ ಗಾಂಧೀಜಿಯವರು ಅಹಿಂಸೆ ಮತ್ತು ಸತ್ಯಾಗ್ರಹದ ಸಾರವನ್ನು ಪ್ರತಿ ಹಳ್ಳಿಗೆ ಕೊಂಡೊಯ್ದರು. ಮತ್ತು ಅವುಗಳ ಅರ್ಥವನ್ನು ಸಮಾಜ ಹಿತವನ್ನು ಅರ್ಥಮಾಡಿಸಿಕೊಟ್ಟಾಗ ಸಾಮಾನ್ಯ ಜನರೂ ಸ್ವಾತಂತ್ರ್ಯ ಚಳುವಳಿಯನ್ನು ತಮ್ಮದಾಗಿಸಿಕೊಂಡು ಧುಮುಕಿದರು.

ಇಲ್ಲಿ ಮತ್ತೊಂದು ಮಾತನ್ನು ಗಮನಿಸಬೇಕು. ಒಂದು ವೇಳೆ ಮಹಾತ್ಮಾ ಗಾಂಧಿ ಭಾರತದಲ್ಲಿ ಇಲ್ಲದಿದ್ದರೂ ಬ್ರಿಟಿಷರ ಆಳ್ವಿಕೆ ಇಲ್ಲೇನೂ ಶಾಶ್ವತವಾಗಿ ಉಳಿಯುತ್ತಿರಲಿಲ್ಲ. ವಿಶ್ವದ ಗುಲಾಮಗಿರಿಯ ದೇಶಗಳ ಸ್ವಾತಂತ್ರ್ಯದ ಇತಿಹಾಸದ ಜ್ಞಾನವನ್ನು ಹೊಂದಿರುವ ಯಾವುದೇ ವ್ಯಕ್ತಿಗೆ ಅದನ್ನು ಅರ್ಥಮಾಡಿಕೊಳ್ಳುವುದು ಕಷ್ಟವೇನಲ್ಲ.

ಗಾಂಧೀಜಿ ಬದುಕಿನ ಕೆಲವು ವಿಶೇಷತೆಗಳನ್ನೂ ನಾವು ಗಮನಿಸಬೇಕು. ಒಮ್ಮೆ ಗಾಂಧೀಜಿಯವರು ತಮಿಳುನಾಡಿನ ಮಧುರೈ ನಗರದಿಂದ ಹಿಂತಿರುಗಿದ ನಂತರ ಧೋತಿಯನ್ನು ಧರಿಸಲು ಪ್ರಾರಂಭಿಸಿದರು.  1921ರ ಮೊದಲು ಗಾಂಧೀಜಿಯವರು ಪ್ಯಾಂಟ್-ಶರ್ಟ್ ಧರಿಸುತ್ತಿದ್ದರು, ಆದರೆ ಮಧುರೈನಲ್ಲಿನ ಬಡತನ ಮತ್ತು ಅಲ್ಲಿನ ಬಡವರ ಹರಿದ ಬಟ್ಟೆಗಳನ್ನು ನೋಡಿದ ಅವರು ಮತ್ತೆ ಪೂರ್ಣ ಬಟ್ಟೆಯನ್ನು ಧರಿಸಲಿಲ್ಲ. ನಂತರ ಗಾಂಧೀಜಿ ಯಾವಾಗಲೂ ಧೋತಿಯನ್ನು ಧರಿಸುತ್ತಿದ್ದರು.

ಇತಿಹಾಸದ ಅತ್ಯುತ್ತಮ ಓದುಗ ಎಂದು ಕರೆಸಿಕೊಳ್ಳುವ ಮಹಾತ್ಮ ಗಾಂಧೀಜಿ ನಡೆದಾಡಿದಾಗ ಇಡೀ ದೇಶವೇ ಅವರ ಜೊತೆ ನಡೆಯುತ್ತಿತ್ತು. ಇಂದಿನ ಯುಗದಲ್ಲಿ, ಇಡೀ ದೇಶವು ಯಾರೊಂದಿಗೆ ನಿಲ್ಲುತ್ತದೆ ಮತ್ತು ಅವರ ನೀತಿಗಳು ಗಾಂಧೀಜಿಯವರಂತೆ ಇವೆಯೇ? ತಜ್ಞರು ಹೇಳುವಂತೆ ಅಣ್ಣಾ ಹಜಾರೆಯವರ ಚಿತ್ರಣವು ಸ್ವಲ್ಪಮಟ್ಟಿಗೆ ಗಾಂಧೀಜಿಯನ್ನು ಹೋಲುತ್ತಿತ್ತು. ಆದರೆ ಅವರ ಹೋರಾಟ ತೀರಾ ಸೀಮಿತ. ಅವರು ದೇಶದ ಸಮಸ್ಯೆಗಳಿಗೆ ಸ್ಪಂದಿಸಲು ವಿಫಲರಾಗಿದ್ದಾರೆ.

ಗಾಂಧಿ ಹತ್ಯೆಯಾಗದೆ ಇನ್ನೂ ಕೆಲ ಕಾಲ ಬದುಕಿದ್ದರೆ ದೇಶದಲ್ಲಿ ಯಾವ ದೃಶ್ಯ ಇರಬಹುದಿತ್ತು? ಆವಾಗ ಬಹುಶ: ವಿಭಜನೆಯ ನೋವು ಕಡಿಮೆಯಾಗಬಹುದಿತ್ತೇನೋ.  ಅಧಿಕಾರ ದಲ್ಲಾಳಿಗಳ ನಡುವೆಯೂ ನೈತಿಕತೆ ಉಳಿಯುತ್ತಿತ್ತೇನೋ.. ಮತ್ತು ಭ್ರಷ್ಟ ರಾಜಕಾರಣಿಗಳಿಗೆ ಕಡಿವಾಣ ಬೀಳುತ್ತಿತ್ತೇನೋ ಎಂದಷ್ಟೇ ನಾವು ಊಹಿಸಬಹುದಾಗಿದೆ .

ಗಾಂಧಿ ಇನ್ನೂ ಕೆಲವು ಕಾಲ  ಬದುಕಿದ್ದರೆ ರಾಜಕೀಯ ಶುದ್ಧಿಯಾಗಲೂಬಹುದಿತ್ತು. ಯಾಕೆಂದರೆ  ಗಾಂಧೀಜಿ ಸದಾ ಪ್ರಯೋಗಶೀಲರಾಗಿದ್ದರು. ಮತ್ತು ತನ್ನ ಕೈಲಾದಷ್ಟು ಅದಕ್ಕೆ ಪ್ರಯತ್ನಿಸುತ್ತಿದ್ದರು, ತಪ್ಪುಗಳಿಂದ ಕಲಿಯಿರಿ ಮತ್ತು ಅವುಗಳನ್ನು ಸುಧಾರಿಸಿ ಎನ್ನುವ ಸಂದೇಶ ಅವರು ನೀಡುತ್ತಿದ್ದರು.

*ರಾಷ್ಟ್ರಪಿತ* : ಮಹಾತ್ಮಾ ಗಾಂಧೀಜಿಯನ್ನು ರಾಷ್ಟ್ರಪಿತ ಎಂದು ಸಂಬೋಧಿಸುವುದು ಎಲ್ಲರಿಗೂ ತಿಳಿದೇ ಇದೆ, ಆದರೆ ಅವರಿಗೆ ಈ ಬಿರುದು ಕೊಟ್ಟವರು ಯಾರು ಎಂಬುದು ಎಷ್ಟು ಜನರಿಗೆ ತಿಳಿದಿದೆ?  ಮಹಾತ್ಮ ಗಾಂಧಿ ಅವರನ್ನು ಮೊದಲು ಸುಭಾಷ್ ಚಂದ್ರ ಬೋಸ್ ಅವರು ‘ರಾಷ್ಟ್ರಪಿತ’ ಎಂದು ಸಂಬೋಧಿಸಿದರು.  6 ಜುಲೈ 1944 ರಂದು,  ರೇಡಿಯೊ ರಂಗೂನ್ ನಿಂದ ಸಂದೇಶವನ್ನು ಪ್ರಸಾರ ಮಾಡುವಾಗ ಮಹಾತ್ಮ ಗಾಂಧೀಜಿಯನ್ನು ‘ರಾಷ್ಟ್ರಪಿತ’ ಎಂದು ಕರೆಯಲಾಯಿತು. ಆದರೆ ಅಧಿಕೃತವಾಗಿ ‘ರಾಷ್ಟ್ರಪಿತ’ ಎಂದು ಅವರನ್ನು ಘೋಷಿಸಲಾಗಿಲ್ಲ. ದೇಶದಾದ್ಯಂತ ಜನರು ಮಹಾತ್ಮ ಗಾಂಧಿಯನ್ನು ‘ರಾಷ್ಟ್ರಪಿತ’ ಎಂದು ತಿಳಿದಿದ್ದರೂ, ಭಾರತ ಸರ್ಕಾರವು ಗಾಂಧಿಯನ್ನು ‘ರಾಷ್ಟ್ರಪಿತ’ ಎಂದು ಅಧಿಕೃತವಾಗಿ ಘೋಷಿಸಲು ಸಾಧ್ಯವಾಗಿಲ್ಲ. ಭಾರತ ಸರ್ಕಾರವೂ ಸಂವಿಧಾನದ ಮುಂದೆ ಅಸಹಾಯಕವಾಗಿದೆ. ಅದಕ್ಕಾಗಿಯೇ ಗೃಹ ಸಚಿವಾಲಯವು ಈ ಹಿಂದೆ ಲಕ್ನೋ ಮೂಲದ ಮಕ್ಕಳ ಆರ್‌ಟಿಐ ಕಾರ್ಯಕರ್ತೆ ಐಶ್ವರ್ಯಾ ಪರಾಶರ್ ಅವರಿಗೆ ನೀಡಿದ ಮಾಹಿತಿಯಲ್ಲಿ ಮಹಾತ್ಮ ಗಾಂಧಿಯನ್ನು ‘ರಾಷ್ಟ್ರಪಿತ’ ಎಂದು ಘೋಷಿಸುವ ಬಗ್ಗೆ ಸರ್ಕಾರವು ಯಾವುದೇ ಅಧಿಸೂಚನೆಯನ್ನು ಹೊರಡಿಸಲು ಸಾಧ್ಯವಿಲ್ಲ ಎಂದು ಹೇಳಿತ್ತು. ಹೀಗಿದ್ದರೂ ಗಾಂಧಿಯವರದ್ದೆಲ್ಲವೂ ಸಮರ್ಪಕವಾಗಿತ್ತು ಎಂದೇನೂ ಇಲ್ಲ. ಗಾಂಧೀಜಿ ಹಾಕಿಕೊಂಡ ಹಲವು ಗುರಿಗಳು ಅರೆಮನಸ್ಸಿನಿಂದ ಕೂಡಿದ್ದವು ಎಂಬುದನ್ನೂ ಹೇಳಲಾಗಿದೆ. ಹಿಂದೂ-ಮುಸ್ಲಿಂ ಪ್ರತ್ಯೇಕತಾವಾದದ ಶಕ್ತಿಗಳಂತೆ, ಬ್ರಿಟಿಷ್ ತನ್ನ  ಆಡಳಿತಗಾರರ ಸಹಾಯದಿಂದ ಗಾಂಧಿಯವರ ಕಣ್ಣೆದುರೇ ಭಾರತವನ್ನು ವಿಭಜಿಸಿತು. 

ಏನೇ ಇದ್ದರೂ ಗಾಂಧೀಜಿಯವರು ತಮ್ಮ ಮಾತು ಮತ್ತು ನಡೆಗಳಲ್ಲಿ ಯಾವುದೇ ಅಂತರಕ್ಕೆ ಅವಕಾಶ ನೀಡಲಿಲ್ಲ.  ಅವರು ಖಾಸಗಿ ಮತ್ತು ಸಾರ್ವಜನಿಕ ಜೀವನದ ನಡುವೆ ಯಾವುದೇ ವ್ಯತ್ಯಾಸವನ್ನು ಮಾಡಲಿಲ್ಲ.  ಆಶ್ರಮಗಳಿಂದ ಆರಂಭಿಸಿ ಜನಾಂದೋಲನದವರೆಗೆ ಹಿಂದೂ-ಮುಸ್ಲಿಂ ಅಂತರ ಹಾಗೂ ಅಸ್ಪೃಶ್ಯತೆಯಂತಹ ಅನಿಷ್ಟ ಪದ್ಧತಿಗಳ ವಿರುದ್ಧ ಕೊನೆಯವರೆಗೂ  ಹೋರಾಡಿದರು. 

ಕೆಲವು ಮುಖ್ಯ ಆಂದೋಲನಗಳು:

ಬಿಹಾರದ ಚಂಪಾರಣ್ಯ ಜಿಲ್ಲೆಯಲ್ಲಿ  1917ರಲ್ಲಿ  ಜಮೀನ್ದಾರರ ವಿರುದ್ಧ ರೈತರಿಗೆ ಆಗುತ್ತಿದ್ದ ಶೋಷಣೆಯನ್ನು ಖಂಡಿಸಿ ಸತ್ಯಾಗ್ರಹದ ಮೂಲಕ ಅವರಿಗೆ ಆಗುತ್ತಿದ್ದ ಶೋಷಣೆಯನ್ನು ನಿಲ್ಲಿಸಿದವರು.

ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ನಂತರ ಬ್ರಿಟಿಷ್ ಸರಕಾರದಲ್ಲಿ ನ್ಯಾಯದ ನಿರೀಕ್ಷೆ ಮಾಡುವುದು ವ್ಯರ್ಥ ಎಂದು ಭಾವಿಸಿದ ಗಾಂಧೀಜಿಯವರು 1920 ರ ಸೆಪ್ಟೆಂಬರ್ ನಿಂದ 1922 ರ ಫೆಬ್ರವರಿತನಕ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ನೇತೃತ್ವದಲ್ಲಿ ಅಸಹಕಾರ ಅಂದೋಲನ ನಡೆಸಿದರು.

12 ಮಾರ್ಚ್ 1930ರಲ್ಲಿ ಸಾಬರಮತಿ ಆಶ್ರಮದಲ್ಲಿ ದಾಂಡಿಗಾಂವ್ ಎಂಬಲ್ಲಿ 24 ದಿನಗಳ ಕಾಲ ಕಾಲ್ನಡಿಗೆಯಲ್ಲಿ ಮೋರ್ಚಾ ಬಂದು,  ಉಪ್ಪಿನ ಮೇಲಿನ ಕರಾ ಹೇರಿಕೆಯನ್ನು ಖಂಡಿಸಿ ಆಂದೋಲನ ಮಾಡಿದ್ದರು. ಅದು ಉಪ್ಪಿನ ಸತ್ಯಾಗ್ರಹ ಎಂಬ ಆಂದೋಲನವಾಗಿ  ಬಹು ಪ್ರಸಿದ್ಧಿಯಾಗಿದೆ. 1932 ರಲ್ಲಿ ಅಖಿಲ ಭಾರತ ಅಸ್ಪೃಶ್ಯತಾ ವಿರೋಧಿ ಲೀಗ್ ಸ್ಥಾಪನೆ ಮಾಡಿದರು. ಹಾಗೂ ಅಸ್ಪೃಶ್ಯತೆ ವಿರೋಧಿಸಿ 8 ಮೇ 1933 ರಲ್ಲಿ ದಲಿತ ಆಂದೋಲನವನ್ನು ಕೈಗೊಂಡರು. 

ಗಾಂಧೀಜಿಯವರು ಸಾಬರಮತಿ ತ್ಯಜಿಸಿ ಮಹಾರಾಷ್ಟ್ರಕ್ಕೆ ಬಂದು ವರ್ಧಾ ಜಿಲ್ಲೆಯ ಸೇವಾಗ್ರಾಮದಲ್ಲಿ ಹನ್ನೆರಡು ವರ್ಷಗಳ ಕಾಲ ವಾಸಿಸಿದ್ದರು. ಸೇವಾಗ್ರಾಮ ಆ ದಿನಗಳಲ್ಲಿ ಸ್ವಾತಂತ್ರ್ಯ ಹೋರಾಟದ ಶಕ್ತಿಯ ಸ್ಥಳವಾಗಿತ್ತು. 1948ರಲ್ಲಿ ಗಾಂಧೀಜಿಯವರ ಹತ್ಯೆ ನಡೆಯದೇ ಇರುತ್ತಿದ್ದರೆ ಅವರು ವಾಪಸ್ಸು ಸೇವಾ ಗ್ರಾಮಕ್ಕೇ ಬರುವವರಿದ್ದರು. ಗಾಂಧೀಜಿಯವರು ಆಂದೋಲನವನ್ನು ಜಾಗೃತಗೊಳಿಸಲು ನಿರಂತರವಾಗಿ ಹಳ್ಳಿಹಳ್ಳಿಗಳಿಗೆ ಹೋಗಿಬರುತ್ತಿದ್ದರು.

ಗಾಂಧೀಜಿ ಜನ್ಮದಿಂದ ಸಾಮಾನ್ಯ ವ್ಯಕ್ತಿಯಾಗಿದ್ದರೂ ಕರ್ಮದಿಂದ ಮಹಾತ್ಮರಾದರು. ರವೀಂದ್ರನಾಥ ಟಾಗೋರ್ ಅವರು ಒಂದು ಪತ್ರದಲ್ಲಿ ‘ಮಹಾತ್ಮ ಗಾಂಧಿ’ ಎಂದು ಸಂಬೋಧಿಸಿದ್ದರು. ಅಂದಿನಿಂದ ಮಿಸ್ಟರ್ ಗಾಂಧಿಯ ಸ್ಥಾನದಲ್ಲಿ ‘ಮಹಾತ್ಮಾ’ ಎಂದಾದರು.   

ಗಾಂಧೀಜಿಯವರ  ಮೂಲಭೂತ ಶಿಕ್ಷಣ ಸಿದ್ಧಾಂತ ಬಹಳ ಮಹತ್ವಪೂರ್ಣವಾದುದು. 7ರಿಂದ 14 ವರ್ಷದ ಮಕ್ಕಳಿಗೆ ನಿಶುಲ್ಕ ಮತ್ತು ಅನಿವಾರ್ಯ ಶಿಕ್ಷಣ ಸಿಗಲೇಬೇಕು, ಶಿಕ್ಷಣದ ಮಾಧ್ಯಮ ಮಾತೃಭಾಷೆಯಾಗಿರಬೇಕು ಎಂದವರು. ಶಿಕ್ಷಣವು ಮಕ್ಕಳಲ್ಲಿ ಮಾನವೀಯ ಗುಣಗಳ ವಿಕಾಸ ಮಾಡುವುದು ಎಂದು ನಂಬಿದ್ದರು. ಗಾಂಧೀಜಿಯವರ ಆಶಯ ಶೋಷಣೆ ರಹಿತ ಸಮಾಜದ ಸ್ಥಾಪನೆಯಾಗಿತ್ತು. ಭಾರತದ ಪ್ರತಿ ನಾಗರಿಕ  ಶಿಕ್ಷಣದಿಂದ ವಂಚಿತನಾಗಬಾರದು ಎಂದಿದ್ದರು. ಅವರ ತತ್ವಗಳ ಪ್ರಭಾವ ಸಮಾಜದಲ್ಲಿ ಇಂದಿಗೂ ಗೋಚರವಾಗುತ್ತವೆ.

ಗಾಂಧೀಜಿ ಕುಶಲ ರಾಜಕಾರಣಿ ಮಾತ್ರವಲ್ಲ,  ಉತ್ತಮ ಲೇಖಕರೂ ಆಗಿದ್ದರು. ,ಹರಿಜನ್, ಯಂಗ್ಇಂಡಿಯಾ, ಇಂಡಿಯನ್ ಒಪಿನಿಯನ್…. ಮುಂತಾದ ಪತ್ರಿಕೆಗಳ ಸಂಪಾದಕರಾಗಿದ್ದರು. ಅವರು ಬರೆದ ಪುಸ್ತಕ ‘ಹಿಂದ್ ಸ್ವರಾಜ್(1909)’,  ‘ದಕ್ಷಿಣ ಆಫ್ರಿಕಾದಲ್ಲಿ ಸತ್ಯಾಗ್ರಹ’,  ‘ನನ್ನ ಕನಸಿನ ಭಾರತ’,  ‘ಗ್ರಾಮ ಸ್ವರಾಜ್ಯ’ ಇಂದಿಗೂ ಸಮಾಜದಲ್ಲಿ ಮಾರ್ಗದರ್ಶನ ಕೃತಿಗಳಾಗಿವೆ.

ಟಿಬೇಟಿನ ದಲಾಯಿಲಾಮ, ಅಮೆರಿಕದ ಮಾರ್ಟಿನ್ ಲೂಥರ್ ಕಿಂಗ್, ದ. ಆಫ್ರಿಕಾದ ನೆಲ್ಸನ್ ಮಂಡೇಲಾ, ಬರ್ಮಾದ ಆಂಗ್ ಸಾನ್ ಸೂ…  ಇವರೆಲ್ಲ ಗಾಂಧಿ ವಿಚಾರಗಳಿಂದ ಪ್ರಭಾವಿತರಾಗಿದ್ದನ್ನು  ಕಾಣಬಹುದು. ಕೆಲವರು ಗಾಂಧೀಜಿಯವರ  ವಿಚಾರಗಳನ್ನು ತಮ್ಮ ದೇಶಗಳಲ್ಲಿ ಯಶಸ್ವಿಯಾಗಿ ಅಳವಡಿಸಿಕೊಂಡದ್ದನ್ನೂ ಕಾಣಬಹುದು. ಆಲ್ಬರ್ಟ್ ಐನ್ ಸ್ಟೀನ್ “ನಮ್ಮ ಕಾಲದ ನಿಜವಾದ ಮಹಾಪುರುಷ – ಗಾಂಧೀಜಿ” ಎಂದಿದ್ದರು.

ಅವರು ಭಾಷೆ, ಜಾತಿ, ಧರ್ಮ ಸಂಬಂಧವಾದ ಭೇದವನ್ನು ಸಮಾಪ್ತಿ ಮಾಡಲು ಶ್ರಮಿಸಿದವರು. ಸ್ವದೇಶಿ ವಸ್ತುಗಳನ್ನೇ ಉಪಯೋಗಿಸಿ ಎಂದವರು. ಸತ್ಯ ಅಹಿಂಸೆಯಲ್ಲಿ ಬದುಕುವ ಶಿಕ್ಷಣ ನೀಡಿದವರು. ಸ್ನೇಹ ಸಹೋದರತ್ವವನ್ನು ಬೆಳೆಸಿ ವಿಶ್ವಕ್ಕೆ ಶಾಂತಿಯ ಸಂದೇಶವನ್ನು ನೀಡಿದವರು ಗಾಂಧೀಜಿ. ಶಾಂತಿಯ ನೋಬೆಲ್ ಪುರಸ್ಕಾರಕ್ಕಾಗಿ ಐದು ಸಲ ನಾಮಿನೇಟ್ ಆದರೂ ಗಾಂಧೀಜಿಗೆ ಅದು ಸಿಗಲಿಲ್ಲ . ಹಾಗಿದ್ದೂ ಗಾಂಧೀಜಿಯ ತತ್ವಗಳು ಇಂದಿಗೂ ಸಮಾಜದಲ್ಲಿ ಜೀವಂತವಾಗಿ ಉಳಿದಿವೆ.

ಕೊನೆಯ ಮಾತು: ಕೆಲವು ಪ್ರಶ್ನೆ ಚಿಹ್ನೆಗಳ ಜೊತೆಗೆ ಗಾಂಧೀಜಿ. 1946 ರಲ್ಲಿಯೇ ಗಾಂಧೀಜಿ ಅವರಿಗೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ತಮ್ಮ ಪ್ರಭಾವ ಕ್ಷೀಣಿಸುತ್ತಿದೆ ಎಂಬ ಭಾವನೆ ಬರತೊಡಗಿತ್ತು.  ಅವರ ಹೆಚ್ಚಿನ ಅನುಯಾಯಿಗಳು ಅವರನ್ನು ತ್ಯಜಿಸಲು ಪ್ರಾರಂಭಿಸಿದ್ದರು.  ಅದೇ ವರ್ಷದಲ್ಲಿ, ಅವರು ತಮ್ಮ ಸ್ನೇಹಿತ ಘನಶ್ಯಾಮದಾಸ್ ಬಿರ್ಲಾ ಅವರಿಗೆ ಪತ್ರ ಬರೆದರು- “ಕಾರ್ಯಕಾರಿ ಸಮಿತಿಯಲ್ಲಿ  ನನ್ನ ಮಾತು ಯಾರೂ ಕೇಳುವುದಿಲ್ಲ, ನನಗೆ ದುಃಖವಾಗುತ್ತಿದೆ. ಇಲ್ಲಿ ಏನು ನಡೆಯುತ್ತಿದೆಯೋ ಅದು ನನಗೆ ಇಷ್ಟವಾಗುತ್ತಿಲ್ಲ. ಮತ್ತು ನಾನು ಏನೂ ಮಾತನಾಡಲು ಸಾಧ್ಯವಿಲ್ಲದಂತಾಗಿರುವೆ”

–ಕಾಂಗ್ರೆಸ್ ಅಧಿಕಾರದ ದಾಹದ ರಾಜಕೀಯ ಪಕ್ಷವಾಗದೆ, ಸಾರ್ವಜನಿಕ ಸೇವಕರ ಸಂಘಟನೆಯಾಗಬೇಕು. ಮುಖ್ಯವಾಗಿ ಹಳ್ಳಿಗಳಲ್ಲಿ ಕೆಲಸ ಮಾಡಬೇಕೆಂದು ಅವರು ಬಯಸಿದ್ದರು. 

– “ಗಾಂಧಿ ನೆಹರೂ ಅವರನ್ನು ತಮ್ಮ ಉತ್ತರಾಧಿಕಾರಿ ಎಂದು ಕರೆದಿದ್ದರು. ಆದರೆ ಅವರು ನೆಹರೂ ಬಗ್ಗೆ ಕೊನೆಗೆ ಭ್ರಮನಿರಸನಗೊಂಡರು. 1947 ರ ಡಿಸೆಂಬರ್ ಮಧ್ಯದಲ್ಲಿ ಅವರು ಕಾಂಗ್ರೆಸ್ ಸರ್ಕಾರದ ಮೇಲೆ ಲಘು ವಾಗ್ದಾಳಿ ನಡೆಸಿದ್ದರು.

–‘ಜಿನ್ನಾ ಗಾಂಧಿಯ ಬಗ್ಗೆ ಮೊದಲಿಗಿಂತ ಹೆಚ್ಚು ಮೃದುವಾಗಿರಲು ವೈಯಕ್ತಿಕ ಕಾರಣವಿದೆ. ಏಪ್ರಿಲ್ 1947 ರಲ್ಲಿ, ಭಾರತವನ್ನು ಒಗ್ಗೂಡಿಸುವ ಪ್ರಯತ್ನದಲ್ಲಿ ಜಿನ್ನಾ ಅವರನ್ನು ಸ್ವತಂತ್ರ ಭಾರತದ ಮೊದಲ ಪ್ರಧಾನಿಯನ್ನಾಗಿ ಮಾಡಲು ಗಾಂಧಿ ಪ್ರಸ್ತಾಪಿಸಿದರು. ಆದರೆ ಪಂ.ಜವಾಹರಲಾಲ್ ನೆಹರು, ಸರ್ದಾರ್ ಪಟೇಲ್, ಮೌಲಾನಾ ಅಬುಲ್ ಕಲಾಂ ರಿಂದ ಹಿಡಿದು ಎಲ್ಲರೂ ಗಾಂಧೀಜಿಯ ಪ್ರಸ್ತಾಪ ವಿರೋಧಿಸಿದ್ದರು!’

‍ಲೇಖಕರು Admin

October 2, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: