ಮಂಜುನಾಥ್ ಚಾಂದ್ ಅವರ ಕನ್ನಡ ಅನುವಾದಿತ ಕೃತಿ ‘ಮಹಾತ್ಮನ ಮಗಳು’
‘ವೀರಲೋಕ’ ಈ ಕೃತಿಯನ್ನು ಪ್ರಕಟಿಸಿದೆ.
ಕನ್ನಡಕ್ಕೆ ಅನುವಾದಿಸಿದ ಮಂಜುನಾಥ್ ಚಾಂದ್ ಅವರ ಒಂದು ಮಾತು ಇಲ್ಲಿದೆ.
-ಮಂಜುನಾಥ್ ಚಾಂದ್
ಆಕೆಯ ಅಪ್ಪ ಬ್ರಿಟಿಷ್ ನೌಕಾದಳದ ಅಡ್ಮಿರಲ್. ಅವರ ಹೆಸರು ಎಡ್ಮಂಡ್ ಸ್ಲೇಡ್. ಅವರದ್ದು ಬಹಳ ದೊಡ್ಡ ಮನೆತನ ಮತ್ತು ಸರಿಸುಮಾರು ವೈಭವದ ಜೀವನ. ಅಡ್ಮಿರಲ್ ಆಗಿದ್ದ ಎಡ್ಮಂಡ್ ಅವರಿಗೆ ದಿಢೀರ್ ಭಡ್ತಿ ನೀಡಲಾಗುತ್ತದೆ. ಹಾಗೆ ಅವರನ್ನು ನೇಮಕ ಮಾಡಿದ್ದು ಈಸ್ಟ್ ಇಂಡಿಯಾ ಸ್ಟೇಷನ್‌ನ ಕಮಾಂಡರ್ ಇನ್ ಚೀಫ್ ಆಗಿ. ಅಂದರೆ ಭಾರತಕ್ಕೆ ವರ್ಗಾವಣೆ. ಅದು ಇಡೀ ಕುಟುಂಬಕ್ಕೆ ಅಚ್ಚರಿಯ ಆದೇಶ. ಅದಕ್ಕಾಗಿ ಕುಟುಂಬ ಭರೋಬ್ಬರಿ ಎರಡು ತಿಂಗಳು ಸಿದ್ಧತೆ ಮಾಡಿಕೊಳ್ಳುತ್ತದೆ. ಅವರ ಇಬ್ಬರು ಹೆಣ್ಣುಮಕ್ಕಳಾದ ರೋನಾ ಮತ್ತು ಮೆಡಲಿನ್‌ಗೆ ಭಾರತಕ್ಕೆ ಹೊರಡುವುದೆಂದರೆ ಅದೆಷ್ಟು ಉತ್ಸಾಹ. ಬಣ್ಣ ಬಣ್ಣದ ತರಾವರಿ ಬಟ್ಟೆಗಳು, ವಿಶೇಷ ಬಣ್ಣದ ಕನ್ನಡಕಗಳು, ಬಗೆಬಗೆಯ ಔಷಧಿಗಳು, ಕಾಲರಾ ನಿರೋಧಕ ಬೆಲ್ಟ್ಗಳು, ಫ್ಯಾಶನ್ ಟೋಪಿಗಳು… ಒಂದೇ ಎರಡೇ. ಎಲ್ಲವನ್ನೂ ಜೋಡಿಸಿಕೊಳ್ಳುವುದರಲ್ಲಿ ಅವರು ಮಗ್ನ. ಹೇಳಿಕೇಳಿ ಸೇನಾಧಿಕಾರಿಯ ಮಕ್ಕಳಲ್ಲವೇ ಅವರ ಒಡನಾಟವೇನಿದ್ದರೂ ಉನ್ನತ ವರ್ಗದವರ ಜೊತೆ. ಹಾಗಾಗಿ ಮಧ್ಯಾಹ್ನದ ಪಾರ್ಟಿಗೆ, ರಾತ್ರಿಯ ಪಾರ್ಟಿಗೆ ಬೇಕಾದ ಪ್ರತ್ಯೇಕ ಫ್ರಾಕ್‌ಗಳು, ಟೆನಿಸ್ ಬಟ್ಟೆಗಳನ್ನು ಹೊಸದಾಗಿ ಖರೀದಿಸಿದ್ದರು ಆ ಇಬ್ಬರೂ ಹೆಣ್ಣುಮಕ್ಕಳು. ಅದರಲ್ಲೂ ಚಿಕ್ಕಮಗಳು ಮೆಡಲಿನ್‌ಗೆ ಕುದುರೆ ಸವಾರಿ ಎಂದರೆ ಪ್ರಾಣ. ಭಾರತದಲ್ಲಿ ಕುದುರೆ ಸವಾರಿಗೆ ಅವಕಾಶ ಸಿಕ್ಕೀತು ಎಂಬ ಕಾಂಕ್ಷೆಯೊoದಿಗೆ ಅದಕ್ಕೆ ಬೇಕಾದ ಎಲ್ಲ ಪರಿಕರಗಳನ್ನೂ ಆಕೆ ಎತ್ತಿಟ್ಟುಕೊಳ್ಳುತ್ತಾಳೆ. ದೊಡ್ಡ ದೊಡ್ಡ ಗಾತ್ರದ ಮರದ ಪೆಟ್ಟಿಗೆಗಳ ತುಂಬ ಎಷ್ಟೊಂದು ಸಾಮಗ್ರಿಗಳು. ‘ನಾವು ಮಾಡುತ್ತಿರುವ ಸಿದ್ಧತೆಗಳನ್ನು ನೋಡಿದರೆ ಶಾಶ್ವತವಾಗಿ ಜೀವಮಾನದ ದಂಡಯಾತ್ರೆ ಹೊರಟಿದ್ದೇವೋ ಅನ್ನುವಂತಿತ್ತು’ ಎಂದು ಬರೆಯುತ್ತಾರೆ ಮೆಡಲಿನ್. ಆಗ ಆಕೆಗಿನ್ನೂ ಹದಿನೈದರ ಹರಯ.
ಅದಾಗಿ ಹದಿನಾರು ವರುಷಗಳ ಬಳಿಕ ಅದೇ ಮೆಡಲಿನ್ ಸ್ಲೇಡ್ ಮತ್ತೆ ಇಂಗ್ಲoಡ್‌ನಿoದ ಭಾರತಕ್ಕೆ ಹೊರಡುತ್ತಾರೆೆ. ಆಗ ಆಕೆ ತೊಟ್ಟಿದ್ದು ಒಂದೇ ಒಂದು ಖಾದಿ ಬಟ್ಟೆ ಮತ್ತು ಆಕೆಯ ಬಳಿ ಇದ್ದುದು ಒಂದು ಮರದ ಪೆಟ್ಟಿಗೆ. ಅದರ ತುಂಬ ಪುಸ್ತಕಗಳು. ಅದರಲ್ಲಿ ಮಹಾಭಾರತ, ರಾಮಾಯಣ, ಉಪನಿಷದ್‌ನಂತಹ ಗ್ರಂಥಗಳು. ಆಕೆ ನೇರ ದೃಷ್ಟಿ ನೆಟ್ಟಿದ್ದು ಸಬರಮತಿ ಆಶ್ರಮದ ಕಡೆಗೆ ಮತ್ತು ಜೀವ ತಹತಹಿಸುತ್ತಿದ್ದುದು ಆ ಆತ್ಮಬಂಧುವಿನ, ಮಹಾತ್ಮನ ಸಾಂಗತ್ಯಕ್ಕೆ.
ಬದುಕಿನ ವೈರುದ್ಯವೆಂದರೆ ಇದೇ ಅಲ್ಲವೇ?
ಅಲ್ಲಿಂದ ಮುಂದೆ ಆ ಜೀವಾತ್ಮನ ಸಖ್ಯದಲ್ಲಿ ಮೆಡಲಿನ್ ಎಂಬ ಯುವತಿಯ ಬದುಕಿನ ಚಿತ್ರಣವೇ ಬದಲಾಗಿ ಹೋಗುತ್ತದೆ. ಮೆಡಲಿನ್ ಮೀರಾ ಆಗುತ್ತಾಳೆ. ಮೀರಾ ಮಹಾತ್ಮನ ಮಗಳೇ ಆಗುತ್ತಾಳೆ. ಭಗವಾನ್ ಕೃಷ್ಣನ ಪದತಲದಲ್ಲಿ ಮೀರಾ ಬಾಯಿ ಹೇಗೆ ಸಕಲವನ್ನೂ ಮರೆಯುತ್ತಾಳೋ, ಹಾಗೆ ಈ ಮೀರಾ ಕೂಡ ಮಹಾತ್ಮನ ಸನ್ನಿಧಿಯಲ್ಲಿ ಸರ್ವಸ್ವವನ್ನೂ ಧಾರೆ ಎರೆಯುತ್ತಾರೆ. ಗಾಂಧಿ ಎಂದರೆ ಈಕೆಗೆ ಅದೆಂಥಾ ಕಡುಮೋಹ ಎಂಬುದನ್ನು ಆಕೆಯ ಈ ಜೀವನಕಥನ ದಾಖಲಿಸುತ್ತ ಹೋಗುತ್ತದೆ.
ಆಕೆಯ ಅಷ್ಟೂ ಬದುಕಿನ ಪುಟಗಳಲ್ಲಿ ತಲ್ಲೀನನಾಗಿ ಓದುತ್ತ ಓದುತ್ತ ಹೋದಂತೆ ಒಬ್ಬ ಹೆಣ್ಣು ಮಗಳು ಹೀಗೂ ಬದುಕಲು ಸಾಧ್ಯವೇ? ಎಂಬ ಪ್ರಶ್ನೆ ಪದೇ ಪದೇ ಕಾಡದೇ ಇರದು. ಯಾವ ದೇಶವನ್ನು ತನ್ನ ಕಬ್ಜಾ ಮಾಡಿಕೊಂಡಿರುವ ಸಾಮ್ರಾಜ್ಯದಲ್ಲಿ ಸೇನಾಧಿಕಾರಿಯಾಗಿದ್ದ ಅಪ್ಪ ಅದೇ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಹೊರಟು ನಿಂತ ಮಗಳನ್ನು ಅಷ್ಟು ತಣ್ಣಗೆ ಬೀಳ್ಕೊಡಲು ಸಾಧ್ಯವೇ? ಶತ್ರು ದೇಶದಲ್ಲಿ ನಡೆಯುತ್ತಿರುವ ಸ್ವಾತಂತ್ರ್ಯ ಹೋರಾಟದ ನೇತಾರನ ವ್ಯಕ್ತಿತ್ವಕ್ಕೆ ಮಾರುಹೋದ ಹರಯದ ಮಗಳಿಗೆ ಒಂದೇ ಒಂದು ಪ್ರಶ್ನೆಯನ್ನೂ ಹಾಕದೇ ಕಳುಹಿಸಿಕೊಡಬಹುದೇ? ನಿಜಕ್ಕೂ ಅದು ಅಸಾಮಾನ್ಯ ಸಂಗತಿ. ಭಾರತದಲ್ಲಿ ಅಂತಹ ಮನಸ್ಥಿತಿ ಬರಲು ಇನ್ನು ಕನಿಷ್ಠ ಎರಡು ಶತಮಾನಗಳಾದರೂ ಬೇಕಾದೀತು. ನೀವು ನಂಬಲಾರಿರಿ, ಅಲ್ಲಿಂದ ಮುಖ ತಿರುಗಿಸಿ ಹೊರಟುಬಂದ ಮೀರಾ ತನ್ನ ಇಡೀ ಬದುಕಿನಲ್ಲಿ ಮರಳಿ ಅಪ್ಪ-ಅಮ್ಮನ ಮುಖವನ್ನೇ ನೋಡಲು ಸಾಧ್ಯವಾಗುವುದಿಲ್ಲ. ಅದೆಂಥಾ ವೈರಾಗ್ಯ ಅಂತೀರಿ?
ಭಾರತವನ್ನು ಸೇರಿಕೊಳ್ಳುವ ಮೀರಾ ಬೆಹನ್ ಈ ದೇಶದ ರಕ್ತ-ಮಾಂಸವೇ ಆಗುತ್ತಾರೆ. ಮಹಾತ್ಮಾ ಗಾಂಧಿ ಬದುಕಿನ ಸರ್ವಸ್ವವೇ ಆಗುತ್ತಾರೆ. 34 ವರ್ಷಗಳ ಬಳಿಕ ಭಾರತವನ್ನು ತೊರೆದು ವಿಯೆನ್ನಾ ಕಾಡುಹಾದಿಯಲ್ಲಿ ಜೀವನದ ಸಂಧ್ಯಾಕಾಲವನ್ನು ಕಳೆಯುವುದಕ್ಕೆ ಮುನ್ನ ಆಕೆ ಅನುಭವಿಸಿದ ಯಾತನೆಗಳು ಒಂದೇ ಎರಡೇ? ಆಕೆ ಮಾಡಿದ ಸಾಹಸಗಳೋ ಅಸಾಮಾನ್ಯವಾದವು. ಆ ಹೊತ್ತಿಗೆ ಆತ್ಮಬಂಧುವಿನ ಹತ್ಯೆಯೂ ನಡೆದು ಹೋಗುತ್ತದೆ. ಮೋತಿಲಾಲ್ ನೆಹರು, ಕಸ್ತೂರ್ಬಾ, ಮಹದೇವ ದೇಸಾಯಿ ಅವರಂತಹ ಧುರೀಣರ ಸಾವನ್ನು ತೀರಾ ಹತ್ತಿರದಿಂದ ನೋಡುತ್ತಾರೆ. ಹೃಷಿಕೇಶದಲ್ಲಿ ಆಕೆ ಕಟ್ಟಿದ ಆಶ್ರಮದ ಒಟ್ಟು ವಿಸ್ತೀರ್ಣವೇ ಮೂರೂವರೆ ಸಾವಿರ ಎಕರೆ. ದಟ್ಟ ಅರಣ್ಯದ ನಡುವೆ, ಎತ್ತೆರೆತ್ತರದ ಪಂಪಾಸ್ ಹುಲ್ಲುಗಾವಲಿನ ಆಚೆಗೆ ಇರುವ ಆ ಜಾಗವನ್ನು ವೀಕ್ಷಿಸಲು ಆಕೆ ತೆರಳುವುದು ಆನೆಯ ಮೇಲೆ. ದರೋಡೆಗಾರರ ಉಪಟಳವಿರುವ ರಸ್ತೆಯಲ್ಲಿ ರಾತ್ರಿ ಹೊತ್ತು ಕುದುರೆ ಏರಿ ಮೈಲುಗಟ್ಟಳೆ ಒಂಟಿಯಾಗಿ ಹೊರಟುಬಿಡುತ್ತಾರೆ. ಸಾವಿರಾರು ಕಿ.ಮೀ. ಕ್ರಮಿಸಿ ಹಿಮಾಲಯದ ಕಣಿವೆಗಳ ನಡುವೆ ಅವರು ಆರಂಭಿಸಿದ್ದು ಗೋಪಾಲಾಶ್ರಮ. ಆ ಕಾಲದಲ್ಲಿ ಕಾಶ್ಮೀರಕ್ಕೆ ತೆರಳಿ ವಿದೇಶದಿಂದ ಡಕ್ಸಟರ್ ಎಂಬ ತಳಿಯ ಹಸುಗಳನ್ನು ತಂದು ಸಾಕುವ ಪ್ರಯತ್ನ ಮಾಡುತ್ತಾರೆ. ಈ ನಾಡಿನಲ್ಲಿ ಗಾಂಧಿಯ ಕನಸುಗಳನ್ನು ಬಿತ್ತಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನೂ ಅವರು ನಡೆಸುತ್ತಾರೆ. ಆದರೆ ಇಲ್ಲಿನ ವ್ಯವಸ್ಥೆ ಆಕೆಯನ್ನು ಹೈರಾಣು ಮಾಡಿಬಿಡುತ್ತದೆ. ಅವರಿರುವ ಭೂಮಿಯನ್ನೇ ನುಂಗಿಹಾಕುವ ಹಪಾಹಪಿಯಲ್ಲಿ ನಿಂತ ಜನರನ್ನು ಕಂಡು, ತಥ್! ಎಂತಾ ಜನರಿವರು ಎಂಬ ಅಪಸವ್ಯದಲ್ಲಿ ಕನಲಿ ಹೋಗುತ್ತಾರೆ. ಕೊನೆಗೊಮ್ಮೆ ಎಲ್ಲವನ್ನೂ ತೊರೆದು ಆಸ್ಟಿಯಾದಲ್ಲಿರುವ ವಿಯೆನ್ನಾದ ಕಾಡಿನ ಬಳಿ ಬಿಥೋವನ್ ಸಂಗೀತದ ಗುಂಗಿನಲ್ಲಿ ಕೊನೆಯ ದಿನಗಳನ್ನು ತಣ್ಣಗೆ ಕಳೆಯುತ್ತಾರೆ.
ಅಷ್ಟೊಂದು ಸಿರಿವಂತ ಮನೆತನದಲ್ಲಿ ಹುಟ್ಟಿದ ಹೆಣ್ಣುಮಗಳು ಒಬ್ಬ ಶುದ್ಧಾತಿ ಶುದ್ಧ ಬೈರಾಗಿಯಂತಹ ಮನುಷ್ಯನ ಹಿಂದೆ ಹೊರಟಳಲ್ಲ? ಅಲ್ಲಿ ಆಕೆ ಬಹುಬೇಗ ಭ್ರಮನಿರಶನಕ್ಕೆ ಒಳಗಾಗುತ್ತಾಳೆ ಎಂದು ಯಾರಾದರೂ ನಿರೀಕ್ಷಿಸಬಹುದಾಗಿತ್ತು. ಆದರೆ ಅದೂ ಕೂಡ ಸುಳ್ಳಾಗುತ್ತದೆ. ಯಾಕೆಂದರೆ ಆಕೆಯದ್ದು ಶುದ್ಧಾಂತಕರಣ. ಛಲ ಬಿಡದ ಮನಸ್ಸು. ಬ್ರಹ್ಮಚರ್ಯ ಸ್ವೀಕಾರದ ವಿಚಾರದಲ್ಲಿ ಗಾಂಧಿಯ ಮನಸ್ಸು ಸಡಿಲಾಗಿದ್ದರೂ ಆಕೆ ಪಟ್ಟುಬಿಡುವುದಿಲ್ಲ. ಬಾಪು ಅವರ ಕೈಯಾರೆ ಮುಂಡನ ಮಾಡಿಸಿಕೊಳ್ಳುತ್ತಾಳೆ. ಯಾವ ಪ್ರಯೋಗಗಳಿಗೂ ಆಕೆ ಅಂಜುವುದಿಲ್ಲ-ಅಳುಕುವುದಿಲ್ಲ. ಯಾವ ತಳಮಳವೂ ಆಕೆಯನ್ನು ವಿಚಲಿತಗೊಳಿಸುವುದಿಲ್ಲ. ಯಾಕೆಂದರೆ ತಾನು ನಂಬಿ ಬಂದಿದ್ದು ಶುದ್ಧಾತ್ಮವನ್ನು ಎಂಬ ಅಚಲ ವಿಶ್ವಾಸ. ತಾನು ಜೀವನದಲ್ಲಿ ಯಾರ ಜೊತೆ ಇರಬೇಕು ಎಂಬುದನ್ನು ಆಕೆ ನಿರ್ಧರಿಸಿಬಿಟ್ಟಿದ್ದರು. ಹಾಗಾಗಿಯೇ ಅದು ಉತ್ಕೃಷ್ಟ ಜೀವನವಾಗುತ್ತದೆ. ನಮ್ಮೆಲ್ಲರ ಜೀವನವೂ ಅಷ್ಟೇ ಅಲ್ಲವೇ? ನಾವು ಯಾರ ಜೊತೆ ಇರುತ್ತೇವೆ ಎನ್ನುವುದರ ಮೇಲೆ ನಮ್ಮ ಜೀವನಪಥ ನಿರ್ಧಾರವಾಗುತ್ತ ಹೋಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಮೀರಾ ಕಣ್ಣಿನಲ್ಲಿ ಗಾಂಧಿಯನ್ನು ಅರ್ಥಮಾಡಿಕೊಳ್ಳುವುದಿದೆಯಲ್ಲ ಅದು ಈ ಕಥಾನಕದ ನಿಜವಾದ ವೈಶಿಷ್ಟ್ಯ.
ಈ ಎಲ್ಲ ಕಾರಣಗಳಿಂದ ಬಾಪು ಮೀರಾಗೆ ಬರೆದ ಪತ್ರಗಳನ್ನು ಕನ್ನಡಕ್ಕೆ ತಂದ ಬಳಿಕ ಮೀರಾ ಆತ್ಮಕಥನವನ್ನು ಕೂಡ ಬರೆಯಲು ಸಾಧ್ಯವಾಗಿರುವುದು ನನ್ನ ಯೋಗಾಯೋಗ ಎಂದೇ ನಾನಾದರೂ ಭಾವಿಸುತ್ತೇನೆ. ಆಕೆಯ ಜೊತೆಗೆ ನಡೆಸಿದ ಈ ಆತ್ಮದ ಪಯಣ ಕೊಟ್ಟ ಖುಷಿಗೆ ಪಾರವಿಲ್ಲ. ಕಣ್ಣು ತೇವಗೊಳ್ಳದ ದಿನಗಳಿಲ್ಲ. ಮೈಯಲ್ಲಿ ಜುಂಗುಗಳನ್ನು ಎಬ್ಬಿಸದೇ ಹೋದ ಅಧ್ಯಾಯಗಳಿಲ್ಲ. ಮತ್ತೆ ಮತ್ತೆ ಇದು ನನಗೆ ಸಾರ್ಥಕ ಪಯಣ ಅನ್ನಿಸುತ್ತಲೇ ಇತ್ತು. ಇದನ್ನು ಸಾಧ್ಯವಾಗಿಸಿದ ಎಲ್ಲ ಮನಸ್ಸುಗಳಿಗೂ ವಂದೇ.
ಮೀರೆಗೊಂದು ಮುನ್ನುಡಿಯ ಗರಿ ತೊಡಿಸಿದವರು ನಮ್ಮ ನಡುವಿನ ಹಿರಿಯರೂ ಗಾಂಧಿವಾದಿ, ಕವಿ, ನಾಟಕಕಾರರೂ ಆದ ಹಾವೇರಿಯ ಸತೀಶ್ ಕುಲಕರ್ಣಿ. ಮೀರಾ ಬದುಕಿನ ಬಗ್ಗೆ ಅವರು ಗ್ರಹಿಸಿರುವ ಒಳನೋಟ ನಿಜಕ್ಕೂ ಬೆರಗುಗೊಳಿಸುವಂತಹುದು. ತಮ್ಮೆಲ್ಲ ಕೆಲಸಗಳ ಒತ್ತಡದ ನಡುವೆ ಅಷ್ಟೇ ಆಸ್ಥೆಯಿಂದ ನೂರಾರು ಪುಟಗಳನ್ನು ಓದಿ ‘ಬೆನ್ನು’ ತಟ್ಟಿದವರು ಇನ್ನೊಬ್ಬರು ಹಿರಿಯರು, ಗಾಂಧಿ ಅವರ ಬಗ್ಗೆ ಅಪಾರ ಅಭಿಮಾನ ಇಟ್ಟಿರುವ ಬರಗೂರು ರಾಮಚಂದ್ರಪ್ಪ ಅವರು. ಅವರ ಮಾತುಗಳೋ ಮಗಳಿಗೆ ದೃಷ್ಟಿಬೊಟ್ಟು ಇಟ್ಟಂತಿದೆ.
ಇನ್ನು ‘ಪ್ರಿಯಾ ಮೀರಾ’ ಕೃತಿಯನ್ನು ಎಷ್ಟು ಪ್ರೀತಿಯಿಂದ ಎದೆಗವಚಿಕೊಂಡರೋ ಅಷ್ಟೇ ಕಕ್ಕುಲಾತಿಯನ್ನು ಈ ಕೃತಿಗೂ ತೋರಿಸಿದವರು ವೀರಕಪುತ್ರ ಶ್ರೀನಿವಾಸ್. ಅವರು ಈ ಎರಡೂ ಕೃತಿಗಳಿಗೆ ಕೊಟ್ಟಿರುವುದು ಅಕ್ಷರಶಃ ‘ರಾಯಲ್’ ಟ್ರೀಟ್‌ಮೆಂಟ್. ಅವರ ವೀರಲೋಕ ಪ್ರಕಾಶನಕ್ಕೆ ನನ್ನೀ. ನನ್ನ ಒತ್ತಾಸೆಗಳಿಗೆ ಮಣಿದು ಕೊನೆಯ ಕ್ಷಣದಲ್ಲಿಯೂ ಮನಸ್ಸು ನೆಟ್ಟು ಓದಿ ಮೀರಾಳ ಬದುಕನ್ನು ಗ್ರಹಿಸಿ ಮೊದಲ ಓದಿನ ನೋಟವನ್ನು ನೀಡಿದ ಹಿರಿಯರಾದ ಪ್ರಸನ್ನ, ಜಗದೀಶ್ ಕೊಪ್ಪ, ಮಿತ್ರರಾದ ಸಾಗ್ಗೆರೆ ರಾಮಸ್ವಾಮಿ, ಹಮೀದ್, ದೀಪಾ ಗೋನಾಳ, ಎ.ಎಸ್.ನಾಗರಾಜಸ್ವಾಮಿ, ರಶ್ಮೀ ಉಳಿಯಾರು, ಗೌರಿ ಅದಮ್ಯ ಅವರಿಗೆ ಪ್ರೀತಿ.
ನನ್ನ ಎಲ್ಲ ಕೃತಿಗಳಿಗೆ ಮುಖಪುಟ ಚಿತ್ರಿಸಿದಂತೆ ‘ಮಹಾತ್ಮನ ಮಗಳಿಗೂ’ ಕಲಾತ್ಮಕ ಸ್ಪರ್ಶ ಕೊಟ್ಟಿರುವ ಅನುಗಾಲದ ಗೆಳೆಯ, ಅಪ್ಪಟ ಸ್ನೇಹಜೀವಿ ಸುಧಾಕರ ದರ್ಬೆ ಅವರಿಗೆ ನಾನು ಯಾವತ್ತೂ ಋಣಿ. ಪುಟ ವಿನ್ಯಾಸ ಮಾಡಿದ ಕಾಯಕಜೀವಿ ವಿಜಯ್ ವಿಕ್ರಂ, ಯಾವತ್ತೂ ಅಕ್ಕರೆ ತೋರುವ ಸಕ್ಕರೆ ಮನಸ್ಸಿನ ಅನಂತ್ ಕುಣಿಗಲ್‌ಗೆ ನಮಸ್ಕಾರಗಳು.
ಗಾಂದಿ ಅವರನ್ನು ‘ಮಹಾತ್ಮಾ’ ಎಂದು ಕರೆದಿದ್ದು ವಿಶ್ವಕವಿ ರವೀಂದ್ರನಾಥ್ ಟಾಗೋರ್. ಗುರುದೇವ್ ಟಾಗೋರ್‌ರ ‘ಎಕ್ಲಾ ಚಲೋರೇ’ (ಒಂಟಿಯಾಗಿ ಹೊರಡು) ಎಂಬ ಗೀತೆಯಂತೆ ತಮ್ಮ ಮನಸ್ಸಿಗೆ, ಅಂತರಂಗಕ್ಕೆ ತೋಚಿದಂತೆ ಒಂಟಿಯಾಗಿ ಹೊರಟು ಬಂದವರು ಮೀರಾ. ಈ ಇಷ್ಟು ಕಥಾನಕವನ್ನು ಓದಿದ ಬಳಿಕ ಮಹಾತ್ಮಾ ಮತ್ತು ಮೀರಾ ಅವರದ್ದು ಯಾವ ಜನ್ಮದ ಮೈತ್ರಿ ಅನ್ನಿಸದೇ ಇರದು. ಇಬ್ಬರೂ ಅದೆಷ್ಟು ಚೆಂದದ ಬದುಕನ್ನು ನಮ್ಮ ಮುಂದೆ ಹರವಿ ಹೋಗಿದ್ದಾರೆ. ಬಾಪು ಮತ್ತು ಮೀರಾ ಈ ನೆಲದಲ್ಲಿ ಬದುಕಿ ವರುಷಗಳು ಗತಿಸಿಹೋದ ಬಳಿಕವೂ ಹೀಗೆ ಅವರೊಂದಿಗೆ ಆತ್ಮದ ಪಯಣ ನಡೆಸಲು ಸಾಧ್ಯವಾಗಿರುವುದು ನನ್ನ ಪಾಲಿನ ಪುಣ್ಯ. ಈ ಪಯಣ ಮುಂದಿನ ತಲೆಮಾರಿಗೂ ದಕ್ಕಬೇಕು. ಇಲ್ಲಿಗೇ ನಿಲ್ಲದೇ ನಿರಂತರವಾಗಬೇಕು. ಇಂತಹ ಹೊತ್ತಿನಲ್ಲಿ ಈ ಮುಸಾಫಿರನ ಜೊತೆ ಹೆಜ್ಜೆ ಹಾಕುತ್ತಿರುವ ಎಲ್ಲ ಮನಸುಗಳಿಗೆ ಪ್ರೀತಿ.






0 Comments