ಗರ್ದಿ ಗಮ್ಮತ್ತು ನೋಡ..ss ಗೋಳ ಗುಮ್ಮಟ ನೋಡss..

ಡಿ ಎಸ್ ರಾಮಸ್ವಾಮಿ

ವಿಷಾದವೇ ಸ್ಥಾಯಿಯಾದ ‘ಅಪ್ಪನ ಅಂಗಿ’ ಉಟ್ಟ ಈ ಪಾರಿವಾಳಕ್ಕೆ ಎಲೆಕ್ಟ್ರಿಕ್ ಬೇಲಿಯದೇ ಭಯ. ಡಾ. ಲಕ್ಷ್ಮಣ್ ವಿ ಎ ಸದ್ಯ ಕವಿತೆ ಬರೆಯುತ್ತಿರುವ ಹೊಸ ತಲೆಮಾರಿನ ಯುವ ಕವಿಗಳಲ್ಲಿ ಗಮನಿಸಲೇ ಬೇಕಾದ ಹೆಸರು. ವೃತ್ತಿಯಿಂದ ವೈದ್ಯರಾದರೂ ಸಮಾಜದ ಅಂಕು ಡೊಂಕನ್ನು ಅರ್ಥ ಮಾಡಿಕೊಂಡ ಸಾಮಾಜಿಕರೂ ಹೌದು. ಈಗಾಗಲೇ ‘ಎಲೆಕ್ಟ್ರಿಕ್ ಬೇಲಿ ಮತ್ತು ಪಾರಿವಾಳ’ ಸಂಕಲನದ ಮೂಲಕ ಭರವಸೆ ಹುಟ್ಟಿಸಿದ್ದ ಈ ಕವಿಯ ‘ಅಪ್ಪನ ಅಂಗಿ’ ಹಸ್ತಪ್ರತಿಗೆ ವಿಭಾ ಸಾಹಿತ್ಯ ಪ್ರಶಸ್ತಿ ಪಡೆದು ಬಹುರೂಪಿ ಪ್ರಕಟಿಸಿದ ಸಂಗತಿ ಎಲ್ಲರಿಗೂ ಗೊತ್ತಿದೆ.
ವಿಷಾದದಲ್ಲೇ ಅದ್ದಿ ತೆಗೆದಂತಿರುವ ಕವಿಯ ಮಾತು ‘ಅಪ್ಪನ ಅಂಗಿ’ ಸಂಕಲನದ ಹೈಲೈಟ್. ಮೊದಲ ಓದಿಗೇ ಈ ಬರಹ ಓದುಗನನ್ನು ಆವರಿಸಿಬಿಡುತ್ತದೆ. ಹತಾಶ ಬದುಕಿನ ಬೆಳ್ಳಿ ಸೆಳಕಂತಿರುವ ಕವಿತೆಯ ಕೃಷಿಯನ್ನು ಈ ಕವಿ ಆವಿರ್ಭವಿಸಿಕೊಂಡಿರುವುದಕ್ಕೆ ಪುರಾವೆಯಾಗಿ ಅವರು ಇತ್ತೀಚೆಗೆ ವಿವಿಧ ಪತ್ರಿಕೆಗಳಲ್ಲಿ ಪ್ರಕಟಿಸುತ್ತಿರುವ ಬಿಡಿ ಬರಹಗಳಲ್ಲೂ ಕಾಣಬಹುದು.

ಎಲ್ವಿ ಎಂಬ ಕಾವ್ಯನಾಮದಲ್ಲಿ ಎಫ್ಬಿಯಲ್ಲೂ ಕ್ರಿಯಾ ಶೀಲರಾಗಿರುವ ಅವರ ಕವಿತೆಗಳು ನಿಜ ಬದುಕಿನ ನಿಸ್ಪೃಹ ಪರಿವಿಡಿಯಂತೆ ಇರುವುದು ವಿಶೇಷ. ಗಾಢ ವಿಷಾದ ಇವರ ಕವಿತೆಗಳ/ಬರಹಗಳ ಮೂಲ ಧಾತು. ಬೆರಳೆಣಿಕೆಯ ರಚನೆಗಳು ಮಾತ್ರ ಬದುಕನ್ನು ಬೇರೆಯದೇ ಬಗೆಯಾಗಿ ಧ್ಯಾನಿಸುವ ಮನಸ್ಸು ಮಾಡುತ್ತವಾದರೂ ಅವುಗಳಲ್ಲೂ ಈ ಕವಿಯ ವಯಸ್ಸಿನಲ್ಲಿ ಸಹಜವಾಗಿ ಇರ(ಲೇ)ಬೇಕಾದ ಪ್ರೀತಿ ಪ್ರಣಯ ಮತ್ತು ಕಾಮದ ಸೆಲೆಯನ್ನು ಸಂಪೂರ್ಣವಾಗಿ ದೂರ ಇಟ್ಟಿರುವುದು ಏಕೆ ಎಂಬ ಪ್ರಶ್ನೆ ಇವರ ಬರಹಗಳ ಮೂಲ ಸ್ರೋತವಾದ ವಿಷಾದವನ್ನು ಅರಿತ ನಂತರ ಶೃತವಾಗುತ್ತದೆ.

ಡಾ.ಲಕ್ಷಣ್ ಬಿಡಿ ಬಿಡಿ ಬರಹಗಳನ್ನು ಆಗೀಗ ಪತ್ರಿಕೆಗಳಲ್ಲಿ ಪ್ರಕಟಿಸುತ್ತಿರುತ್ತಾರೆ. ಪ್ರಬಂಧದ ರೂಪದಲ್ಲಿದ್ದರೂ ಹಾಸ್ಯದ ವಿಲಾ(ಳಾ)ಸವಿಲ್ಲದ, ಕತೆಯಂತಿದ್ದರೂ ತಾಂತ್ರಿಕವಾಗಿ ಕತೆಯೂ ಆಗದ ಆದರೆ ನುಡಿ ಚಿತ್ರಗಳಂತೆ ಸಾದ್ಯಂತ ವಿವರಗಳಿದ್ದೂ ನುಡಿ ಚಿತ್ರಗಳ ಕರಾರುವಾಕ್ಕು ಚೌಕಟ್ಟಿಗೆ ನಿಲ್ಲದ ಈ ಬಿಡಿ ಬರಹಗಳು ಲಕ್ಷ್ಮಣರು ಬದುಕನ್ನು ಪರಿಭಾವಿಸುವ ರೀತಿಗೆ ಹಿಡಿದುಕೊಂಡ ಕನ್ನಡಿಯಾಗಿ ಕಾಣುತ್ತವೆ. ಧಾರವಾಡದಲ್ಲಿ ವಿದ್ಯಾಭ್ಯಾಸಕ್ಕೆಂದು ವಿಜ್ಞಾನ ವಿಭಾಗವನ್ನು ಆಯ್ದುಕೊಂಡ ಮೊದಲ ದಿನದಂದೇ ವಿಶಾಲ ಕಾಲೇಜು ಕ್ಯಾಂಪಸ್ಸಿನಲ್ಲಿ ತರಗತಿಯನ್ನು ಹುಡುಕ ಹೋಗುವಷ್ಟರಲ್ಲಿ ಮಳೆ ಸುರಿದು ತೊಟ್ಟ ಹವಾಯಿ ಚಪ್ಪಲಿಯಿಂದ ಹಾರಿದ ಕೊಚ್ಚೆ ಬೆನ್ನು ಮತ್ತು ಪ್ಯಾಂಟಿನ ತುಂಬ ಮೂಡಿಸಿದ್ದ ಚಿತ್ತಾರಗಳನ್ನು ಅವರ ಆ ಬರಹವನ್ನು ಓದಿದಾಗ ಮಾತ್ರವೇ ಚಿತ್ರ ಕಣ್ಣಿಗೆ ಕಟ್ಟುತ್ತದೆ.

ಅವರ ಈ ಬಿಡಿ ಬಿಡಿ ಬರಹಗಳಿಗೆ ಪೂರಕ ಸಾಕ್ಷಿಯಾಗಿ ಅವರದೇ ಒಂದು ಕವಿತೆಯನ್ನು ಇಲ್ಲಿ ಗದ್ಯದಂತೆ ಓದಿದರೆ; ಫೈವ್ ಸ್ಟಾರ ಹೋಟೆಲಿನಲ್ಲಿ ದೊಡ್ಡ ಮೊತ್ತದ ಊಟದ ಬಿಲ್ಲು ಸಂದಾಯಮಾಡುವಾಗ ಅನಾಯಾಸವಾಗಿ ನನ್ನ ಕಣ್ಣುಗಳು ಬಾಗಿಲು ಬಳಿ ನಿಂತು ನನಗೆ ಸಲಾಂಹೊಡೆವ ಗಾರ್ಡ್ ನತ್ತ ಹೊರಳುತ್ತವೆ; ನಾನು ಪಾವತಿಸುವ ಬಿಲ್ಲು ಅವನ ಒಂದು ತಿಂಗಳ ಸಂಬಳದ ಸಮವಾಗಿರಬಹುದು ಅಥವ ಅದರಷ್ಟೆ ಇದು ಬಹಳಷ್ಟು ಕಾಡಿದರೂ ಉದಾಸೀನ ದಿಂದ ಹೊರಬರುವಾಗ ನನ್ನ ಆತ್ಮ ಸಾಕ್ಷಿ ಇಲ್ಲಿ ಚೂರೆಚೂರು ಸಾಯುತ್ತದೆ.

ತರಕಾರಿ ಅಂಗಡಿಯ ‘ಛೋಟು’ ಮುಗುಳ್ನಗುತ್ತ ಆಲೂಗಡ್ಡೆ ತೂಕಮಾಡುತ್ತಾನೆ ಛೋಟು. ಈ ಕ್ಷಣ ಯಾವುದೋ ಸ್ಕೂಲಿನಲಿ ತನ್ನ ಗೆಳೆಯರೊಂದಿಗೆ ಆಟವಾಡುತ್ತ ಪಾಠ ಕೇಳುತ್ತ ಇರಬಹುದಾದವನು ನನಗೆ ಇದು ಒಂಚೂರೂ ನನ್ನ ಆತ್ಮಸಾಕ್ಷಿಗೆ ತಾಕದಿರುವಾಗ ಅಲ್ಲೊಂಚೂರು ಸಾಯುತ್ತೇನೆ.

ಈ ಪದ್ಯಗಂಧವನ್ನು ಗದ್ಯದ ಸಾಲುಗಳನ್ನಾಗಿ ಪರಿವರ್ತಿಸಿ ಓದಿದರೆ ಆ ಕ್ಷಣಕ್ಕೆ ಹುಟ್ಟುವ ಅಪರಾಧೀ ಭಾವ ನಮ್ಮೆಲ್ಲರ ಹೃದಯವನ್ನು ಭಾರಗೊಳಿಸಿ ಆರ್ದ್ರವಾಗಿಸಿ ತಲೆ ತಗ್ಗಿಸಿ ನಿಲ್ಲುವಂತೆ ಮಾಡುತ್ತದೆಯಲ್ಲ ಅದಕ್ಕಿಂತ ಸಾಹಿತ್ಯದ ಓದು ಏನನ್ನು ಮಾಡಲು ಸಾಧ್ಯ? ಸಾಹಿತ್ಯದ ಓದು ಮನುಷ್ಯನ ಮಿತಿಗಳನ್ನು ಅವನು ಹೇರಿಕೊಂಡ ಮಿಥ್ ಗಳನ್ನೂ ದೂರ ಮಾಡಿ ಅವನೊಳಗಿರುವ ಮನುಷ್ಯನನ್ನು ಎಚ್ಚರಿಸಿದರೆ ಸಾಕು, ಅದಕ್ಕಿಂತ ಸಾಹಿತ್ಯದ ಪರಿಣಾಮ ಬೇರೆ ಏನು ಬೇಕು.

ಡಾ.ಲಕ್ಷ್ಮಣ್ ತಮ್ಮ ಮೂವತ್ಮೂರು ಬಿಡಿ ಬರಹಗಳನ್ನು ಕಳಿಸಿಕೊಟ್ಟು ಅದಕ್ಕೆ ಅನಿಸಿಕೆಯನ್ನು ಬರೆಯುವಂತೆ ಫೋನ್ ಮಾಡಿ ಕೇಳಿದಾಗ ಖುಷಿಯಾದರೂ ಯಾವುದೇ ಪ್ರತಿಷ್ಠಾನ, ಅಕಾಡೆಮಿ, ಪರಿಷತ್ತು ಇತ್ಯಾದಿಗಳಲ್ಲಿ ಯಾವ ಹುದ್ದೆಯೂ ಇಲ್ಲದಿರುವ ನನ್ನಂಥವನ ಮುನ್ನುಡಿಯಿಂದ ಇವರ ಪುಸ್ತಕಕ್ಕೆ ಯಾವ ಲೌಕಿಕ ಉಪಯೋಗವಾಗಲೀ ಅಥವ ಅವರು ಪ್ರಕಟಿಸುವ ಈ ಬರಹಗಳ ಗುಚ್ಛಕ್ಕೆ ವಾಣಿಜ್ಯಕ ಸವಲತ್ತಾಗಲೀ ದೊರೆಯದೆಂಬ ನೂರು ಪ್ರತಿಶತ ಗ್ಯಾರಂಟಿಯಿರುವಾಗ ಆ ಅಂಥವೆಲ್ಲ ಇರುವ ಸಾಂಸ್ಕೃತಿಕ ಐಕಾನುಗಳಿಂದ ಬರೆಸಿ ಎಂದು ವಿನಂತಿಸಿದರೂ, ಯಾವ ಮುಲಾಜು ಇಟ್ಟುಕೊಳ್ಳದೇ ಅನ್ನಿಸಿದ್ದನ್ನು ಬರೆಯಿರಿ ಎಂದು ಮತ್ತೆ ಮತ್ತೆ ಕೇಳಿದ್ದರಿಂದ ಅವರ ಬರಹಗಳ ವಿಷಾದದ ಮಡುವಿನಲ್ಲಿ ಮತ್ತೆ ಮತ್ತೆ ಮುಳುಗೆದ್ದ ಎಲ್ಲರಿಗೂ ಅನಿಸುವ ಮಾತನ್ನೇ ನಾನು ಇಲ್ಲಿ ಬರೆಯುತ್ತಿದ್ದೇನೆ.

ಇಲ್ಲಿ ಸಂಕಲಿತವಾಗಿರುವ ಎಲ್ಲ ಮೂವತ್ಮೂರು ಬರಹಗಳು ಯಾವುದೇ ನಿರ್ದಿಷ್ಠ ಪತ್ರಿಕೆಯು ನಿಯಮಿತ ಅವಧಿಯಲ್ಲಿ ಪ್ರಕಟಿಸಿದ ಅಂಕಣ ಬರಹವಲ್ಲ. ಅಥವ ಸಂಪಾದಕರು ಕೇಳಿ ಬರೆಸಿದ ಬರಹಗಳಂತೆಯೂ ಇಲ್ಲ. ಆ ಕಾರಣದಿಂದ ಇಲ್ಲಿರುವ ಎಲ್ಲ ಬರಹಗಳೂ ಅಂಕಣ ಬರಹದ ಸೀಮಿತ ವ್ಯಾಪ್ತಿಯನ್ನು ಉಲ್ಲಂಘಿಸಿಯೂ ತಾವೇ ಸ್ವತಃ ಹಾಕಿಕೊಂಡ ಚೌಕಟ್ಟಿನಲ್ಲಿ ಅಂದವಾಗಿ ಕುಳಿತ ಕಲಾಕೃತಿಗಳಂತೆ ಹೃನ್ಮನಕ್ಕೆ ಆನಂದವನ್ನೂ ವೈಚಾರಿಕತೆಯ ಹೊಳಹನ್ನೂ ಜೊತೆಗೇ ಆ ಕ್ಷಣಕ್ಕೆ ಅಹುದಹುದೆನ್ನಿಸುವ ಸಹಮತವನ್ನೂ ಓದುಗನಲ್ಲಿ ಹುಟ್ಟಿಸುವುದರಲ್ಲಿ ಯಾವ ಅನುಮಾನಗಳೂ ಇಲ್ಲ. ಇವರ ಬರಹಗಳ ಸ್ಥಾಯಿ ಶೃತಿಯಾದ ವಿಷಾದದ ಜೊತೆಗೇ ಆಗೀಗ ಮಳೆಯ ಸಿಂಚನವೂ ಆಗುತ್ತಲೇ ಇರುತ್ತ‍ದೆ. ಸಾಮಾಜಿಕ ತಲ್ಲಣಗಳ ಮೆರವಣಿಗೆಯ ಜೊತೆಗೇ ದೇವರಲ್ಲದ ದೇವರ ವ್ಯಕ್ತಿ ಚಿತ್ರಣಗಳೂ ಮೇಳೈಸುತ್ತವೆ.‌ ಪ್ರವಾಸದ ದಿನಚರಿಯ ಜೊತೆಗೇ ಪ್ರವಾಸೀ ತಾಣಗಳ ಮತ್ತೊಂದು ಮಗ್ಗುಲನ್ನೂ ತೆರೆತೆರೆದು ಚರ್ಚಿಸುತ್ತವೆ.

ಸದ್ಯದ ಶಿಕ್ಷಣ ವ್ಯವಸ್ಥೆಯ ಕುರಿತು ಬಹುತೇಕ ಬರಹಗಳಲ್ಲಿ ಆಗೀಗ ಅನುಭವವೇ ಕಲಿಸಿದ ಪಾಠಗಳು ತಲೆ ಹಾಕುತ್ತವೆ. ‘ಮೀನಿಗೆ ನೀರಿನಲ್ಲಿ ಮಾತ್ರ ಈಜಲು ಬರುತ್ತದೆ’ ಎನ್ನುವ ಸಹಜ ನ್ಯಾಯದ ಅಫಿಡವಿಟ್ಟು ಸಲ್ಲಿಕೆಯಾಗುತ್ತದೆ‌. ಕೇವಲ ಮೂರು ನಾಲ್ಕು ದಶಕಗಳ ಹಿಂದಿನ ಶಿಕ್ಷಣದ ರೀತಿಗೂ ಸದ್ಯ ಶಿಕ್ಷಣದ ಹೆಸರಲ್ಲಿ ನಡೆಯುತ್ತಿರುವ ದರೋಡೆಯ ರೀತಿಗೂ ಲೇಖಕರು ತಮ್ಮ ಸ್ವಂತ ಅನುಭವದ ಪಾತಳಿಯಲ್ಲಿ ವ್ಯತ್ಯಾಸದ ಎಳೆಗಳನ್ನು ಬಿಡಿಸಿಡುತ್ತಾರೆ. ರೋನು‌ಮೊಂಡಲ್‌ ಎಂಬಾಕೆ ರಾತ್ರಿ ಕಳೆದು ಬೆಳಗಾಗುವುದರಲ್ಲಿ ಖ್ಯಾತಿಯ ಉತ್ತುಂಗ ತಲುಪಿ ಕೆಲವೇ ದಿನಗಳಲ್ಲೇ ಮತ್ತೆ ಭಿಕ್ಷಾಟನೆಗೆ ಇಳಿದ ಉದಾಹರಣೆಯೊಂದಿಗೆ ‘ಗರ್ದಿ ಗಮ್ಮತ್ತು ಗೋಳ ಗುಮ್ಮಟ ನೋಡ’ ನಮ್ಮ ವಾಹಿನಿಗಳು ಸೃಷ್ಟಿಸುವ ತಾರೆಗಳ ಕ್ಷಣಿಕತೆಯ ಮೋಹವನ್ನು ತೆರೆದಿಡುತ್ತದೆ.

‘ಅಗ್ನಿಯಿಂದ ಎದ್ದು ಬಂದ ಬೆಳಕುಗಳ ಬಗ್ಗೆ’ ಎಂಬುದು ಈ ಗುಚ್ಛದಲ್ಲಿರುವ ಸ್ವಲ್ಪ ಉದ್ದದ ಬರಹ. ಮೊದಲೆಲ್ಲ ಪ್ರಬಂಧ ಎಂಬುದು ಕನಿಷ್ಠ ಹತ್ತು ಹನ್ನೆರಡು ಪುಟಗಳ ವ್ಯಾಪ್ತಿಯಿಲ್ಲದೆ ಮುಗಿಯುತ್ತಿರಲಿಲ್ಲ‌. ಪುರಾತನ ನೆನಪುಗಳ ಜೊತೆ ನಾಳೆಯ ಕನಸನ್ನು ನೇಯುತ್ತಲೇ ವರ್ತಮಾನದ ಸಂಕಟಗಳನ್ನು‌ ಮೀರುವ ಈ ಬರಹದ ವ್ಯಾಪ್ತಿಯಲ್ಲಿ ನಮ್ಮ ನಡುವಣ ಹಲವು ಖ್ಯಾತನಾಮರ ಹೆಸರುಗಳು ಆನುಷಂಗಿಕವಾಗಿ ಪ್ರಸ್ತಾಪವಾಗಿರುವುದು ಈ ಪ್ರಬಂಧದ ವಸ್ತು ನಿರ್ವಹಣೆಗೆ ಸೂಕ್ತ ಪ್ರಾತಿನಿಧ್ಯವನ್ನೂ ಮತ್ತು ಆ ಅಂಥ ಹಲವು ಖ್ಯಾತರು ಕಷ್ಟ ಪಟ್ಟು ತಮ್ಮ ತಮ್ಮ ಕ್ಷೇತ್ರದಲ್ಲಿ ಮೇಲೆ ಬಂದುದನ್ನೂ ಸೂಚ್ಯವಾಗಿ ಹೇಳುವ ಕ್ರಮ ಇಷ್ಟವಾಗುತ್ತದೆ.

ಈ ಗದ್ಯ ಬರಹಗಳಲ್ಲಿ ಆಗೀಗ ಪದ್ಯದ ಗಂಧವೂ ಮೇಳೈಸಿ ಹಿರಿಯರ ನೆನಪನ್ನು ಗಾಢಗೊಳಿಸುವ ಕೆಲಸವೂ ತನ್ನಷ್ಟಕ್ಕೆ ತಾನು ನಡೆದೇ ಇರುವುದು ಪ್ರಾಯಶಃ ಬರಹಗಾರನಿಗೆ ಗೊತ್ತೇ ಆಗದಷ್ಟು ಸೂಕ್ಷ್ಮವಾಗಿ ಘಟಿಸಿಬಿಟ್ಟಿದೆ. ಈ ಮಾತಿಗೆ ಪುರಾವೆಯಾಗಿ ‘ಕವಿತೆಯೊಂದರ ಸಾಲಿನಿಂದ ಕಳಚಿಕೊಂಡ ಅಕ್ಷರʼ ಬರಹವನ್ನು ಗಮನಿಸಬಹುದು. ಈಗ ನಮ್ಮೊಡನೆ ಇರದ ಕವಿ ಜಿ.ಕೆ.ರವೀಂದ್ರ ಕುಮಾರ ಅವರನ್ನು ಕುರಿತ ಈ ಬರಹ ಯಾರಾದರೂ ಖ್ಯಾತನಾಮರು ಇರದಂತಾದೊಡನೆ ಬಂದು ಬೀಳುವ ಚಿರಸ್ಮರಣೆಯ ಬರಹಗಳ ರೀತಿಯಿಂದ ಭಿನ್ನವಾಗಿರುವ ವೈಶಿಷ್ಟ್ಯವನ್ನು ಇಲ್ಲಿ ಗಮನಿಸಲೇ ಬೇಕು.

ಬಡತನವನ್ನು ಹಸಿವನ್ನು ಕುರಿತಂತೆ ಬರೆಯುವುದು ಕಾಲದ ಫ್ಯಾಷನ್ ಆಗಿರುವ ಹೊತ್ತಿನಲ್ಲಿ ಲಕ್ಷ್ಮಣರ ಬರಹಗಳು ಆ ಅದೇ ಬಡತನ ಮತ್ತು ಹಸಿವನ್ನೇ ಹಾಸು ಹೊದ್ದ ರೀತಿಯ ಪ್ರಸ್ತುತಿಯ ಕಾರಣದಿಂದಾಗಿ ಆಪ್ತಾವಾಗುತ್ತವೆ ಓದುಗನನ್ನು ಪ್ರಭಾವಿಸುತ್ತವೆ. ಸಾವು ಮತ್ತು ಬಡತನದ ಚಿತ್ರಣಗಳು ವಿವರಗಳ ಸಂಕ್ಷಿಪ್ತತೆಯ ನಡುವೆಯೂ ಇದು ನಮ್ಮದೇ ಕತೆ ಅನ್ನಿಸುವ ನಿರೂಪಣೆಯ ಕಾರಣದಿಂದಾಗಿ ಮನಸ್ಸನ್ನು ಕಲಕಿ ಆ ಕ್ಷಣಕ್ಕೆ ವಿಷಾದದ ಗೂಡು ಮಾಡುತ್ತವೆ. ‘ದೇವರೆ ಬಡವರಿಗೆ ಸಾವ ಕೊಡಬ್ಯಾಡ’ ಎನ್ನುವುದು ಈ ನೆಲವು ವರ್ಷಗಳ ಹಿಂದೆಯೇ ಹಾಡುತ್ತ ಬಂದ ಜನಪದರ ಸೊಲ್ಲಿಗೆ ತನ್ನ ಶೃತಿಯನ್ನೂ ಸೇರಿಸುತ್ತದೆ.

ಕಾಯುವುದಿಲ್ಲ ಕವಿತೆಗೆ ಯಾರೂ ಕವಿಯೊಬ್ಬನಲ್ಲದೆ, ಕಾವ್ಯ ಪರಂಪರೆ ಎಂಬ ರಿಲೇ ಓಟ, ಕವಿತೆಯನ್ನು ಧ್ಯಾನಿಸಿದ ಕವಿತೆಯೇ ಆತ್ಮವಾದ ಬರಹಗಳು. ‘ಹಲ್ ಮಿಡಿ’ ಶಾಸನ ಸುಲಲಿತ ಪ್ರಬಂಧ ಮಾದರಿಯ ಮಿಡಿತವಾದರೆ, ಒಂದು ಮಳೆ ಲಹರಿ ಅದ್ಭುತವಾದ ಪ್ರಬಂಧವಾಗುವ ಅವಕಾಶ ಇದ್ದೂ ಯಾಕೋ ಅರ್ಧಕ್ಕೇ ನಿಂತ ಅಕಾಲ ಮಳೆಯಾಗಿದೆ.

ಈ ಬರಹಗಳನ್ನು ಮತ್ತೆ ಮತ್ತೆ ಮೊದಲಿನಿಂದ ಕಡೆಗೂ, ಕೊನೆಯಿಂದ ಮೊದಲಿಗೂ ಹಾಗೂ ಮಧ್ಯೆ ಮಧ್ಯೆ ಯಾವುದೋ ಬರಹದ ಯಾವುದೋ ಸಾಲನ್ನು ಹೆಕ್ಕಿ ಓದಿದರೆ ಈ ಕವಿಯು ಭವಿಷ್ಯದಲ್ಲಿ ಉತ್ತಮ ಪ್ರಬಂಧಕಾರನಾಗುವ ಎಲ್ಲ ಲಕ್ಷಣಗಳೂ ಕಾಣುತ್ತವೆ. ಆದರೆ ಕತೆ ಹೇಳುವ‌ ತಾಂ(ಮಾಂ)ತ್ರಿಕತೆ ಇವರಿಗೆ ಸುಲಭಕ್ಕೆ ಒಲಿಯಲಾರದು. ಏಕೆಂದರೆ ಕತೆ ಹೇಳುವವನು ತುಂಬ ಕಠಿಣವಾಗಿ ಸಂಗತಿಯನ್ನು ನಿರೂಪಿಸುತ್ತಲೇ ಕತೆಯ ಹಂದರವನ್ನು ನಿರ್ಮಿಸಬೇಕಾಗುತ್ತದೆ. ಆದರೆ ಲಕ್ಶ್ಮಣರದು ಮೃದು ಹೃದಯ,ಸಂಗತಿಯನ್ನು ನಿರೂಪಿಸುವ ಬದಲು ಸಂಗತಿಯ ಪಾತ್ರದ ಸಂಕಟಗಳಲ್ಲೇ ಅವರು ಉಳಿಯುತ್ತಾರೆ ಆದರೆ ತಾನೊಬ್ಬ ಕತೆಗಾರನಾಗಿ ತನ್ನ ಸೀಮೆಯ ಬಡತನದ ಬದುಕನ್ನು ಅಕ್ಷರಕ್ಕಿಳಿಸಬೇಕೆನ್ನುವ ತೀವ್ರತೆ ಅವರ ಅನೇಕ ಬರಹಗಳಲ್ಲಿ ಒಡೆದು ಮೂಡಿದ ಬಿಂಬಗಳಲ್ಲಿ ಸ್ಪಷ್ಟವಾಗಿ ಇಲ್ಲದೇ ಇದ್ದರೂ ಸೂಚ್ಯವಾಗಿ ಕತೆಗಾರನಾಗಬೇಕೆನ್ನುವ ಹಂಬಲದ ಕುರುಹನ್ನು ಪ್ರತಿನಿಧಿಸಿವೆ.

ಕರೋನಾದ ಭಯ ಮತ್ತು ಅದು ಹುಟ್ಟಿಸಿದ ಆತಂಕ ಹಾಗು ಅದನ್ನು ಗೆದ್ದು ಬದುಕುವ ಛಲ ಇವರ ಬರಹಕ್ಕೆ ಸ್ಪೂರ್ತಿ ಆಗಿರುವುದಷ್ಟೇ ಅಲ್ಲದೆ ಸ್ವತಃ ಕರೋನಾ ವಾರಿಯರ್ ಆಗಿರುವ ಅವರ ಅನುಭವದ ಆಧಾರದ ಮೇಲೆ ರಚಿತವಾಗಿರುವ ಈ ಬರಹದೊಳಗೂ ಟೈಟಾನಿಕ್ ಸಿನಿಮಾ ದೃಶ್ಯವೂ ಲಂಕೇಶರ ಆರ್ದ್ರ ಬರವಣಿಗೆಯ ನೆನಪೂ ಜೊತೆ ಜಿತೆಗ್ಸ್ ನ್ಯಾಷನಲ್ ಜಿಯಾಗ್ರಫಿಕ್ ಛಾನೆಲ್ಲಿನ ವಿಷಯವೂ ಮುಪ್ಪರಿಗೊಂಡು ಅತ್ಯುತ್ತಮ ಪ್ರಬಂಧವೇ ಆಗಿ ಅರಳಿದೆ.

ಈ ಎಲ್ಲ ಬರಹಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಪ್ರತ್ಯೇಕ ಪರಿವಿಡಿಯಲ್ಲಿ ಜೋಡಿಸಿದರೆ ಲಕ್ಷ್ಮಣರ ಭಯಾಗ್ರಫಿಯ ಪುಟ ತಾನೇ ತಾನಾಗಿ ತೆರೆದುಕೊಳ್ಳುತ್ತದೆ. ನಿಜಕ್ಕೂ ಕವಿ ಮತ್ತು ಬರಹಗಾರನೊಬ್ಬ ತನ್ನ ಬಾಲ್ಯದ ನೆನಪನ್ನು ಜೀಕದೇ ವರ್ತಮಾನವನ್ನು ಗೆಲ್ಲಲಾರ ಮತ್ತು ಭವಿಷ್ಯದ ದಿನಗಳನ್ನು ಕಟ್ಟಿಕೊಳ್ಳಲಾರ. ಲಕ್ಷ್ಮಣರ ಈ ಎಲ್ಲ ಬರಹಗಳನ್ನು ಮತ್ತೆ ಮತ್ತೆ ಓದಿದಾಗ ಅವರ ಬರಹಗಳ ಹಿಂದೆ ನಮ್ಮೆಲ್ಲ ಪೂರ್ವ ಸೂರಿಗಳ ಅಧ್ಯಯನದ ಕುರುಹುಗಳೂ ಸ್ಪಷ್ಟವಾಗಿ ಕಾಣುತ್ತವೆ. ಹೊಸ ಕಾಲದ ಅದರಲ್ಲೂ ಫೇಸ್ಬುಕ್ ಮತ್ತು ವಾಟ್ಸ್ ಅಪ್ ಗುಂಪಿನ ಬರಹಗಾರರು ಏನನ್ನೂ ಯಾರನ್ನೂ ಓದದೇ ಮತ್ತು ಯಾವುದರಲ್ಲೂ ಪರಿಣತಿಯ ಶ್ರಮವನ್ನೂ ಹಾಕದೇ ಇರುವಾಗ ಲಕ್ಷ್ಮಣ್ ನವ್ಯ ಮತ್ತು ನವ್ಯೋತ್ತರದ ಬಹುತೇಕ ಕವಿ ಕತೆಗಾರ ಮತ್ತು ಬರಹಗಾರರಿಂದ ತಮ್ಮ ಪದಭಂಡಾರವನ್ನು ಬೆಳೆಸಿಕೊಂಡಿದ್ದಾರೆ.

ಈ ಎಲ್ಲ ಪ್ರಬಂಧ ರೂಪಿ ಬರಹಗಳಲ್ಲಿ ನನಗೆ ವಿಶೇಷವಾಗಿ ಕಂಡ ಮತ್ತು ಹೇಳಲೇಬೇಕಾದ ಅಂಶವೆಂದರೆ ಅವರ ಈ ಯಾವ ಬರಹಗಳಲ್ಲೂ ಅಕಾರಣ ವಿದ್ವೇಷ ಮತ್ತು ಜಾತಿ ಕಾರಣದ ಅಸಮಧಾನಗಳಿಲ್ಲ. ಎಲ್ಲವನ್ನೂ ಎಲ್ಲರನ್ನೂ ಒಳ ಗೊಳ್ಳುವ ಮತ್ತು ಅವರವರ ಸ್ಥಾನಗಳಲ್ಲಿ ನಿಂತು ಅಭ್ಯಾಸ ಮಾಡುವ ಗುಣವಿದೆ. ಈ ನಡುವೆ ಬೇಕೋ ಬೇಡವೋ ಎಲ್ಲ ಸಾಮಾಜಿಕ ಸಮಸ್ಯೆಗಳಿಗೂ ಜಾತಿಮೂಲವನ್ನು ಮುಂದು ಮಾಡಿ ತಾನೊಬ್ಬ ಜಾತ್ಯಾತೀತನೆಂದು ಹೇಳಿಕೊಳ್ಳುವ ಸೋಗಲ್ಲೇ ತನ್ನ ಜಾತಿಯನ್ನು ಮೆರೆಸುವ ಹುನ್ನಾರ ಕಾಣುತ್ತ ಇರುವಾಗ ಲಕ್ಷ್ಮಣರಲ್ಲಿ ವರ್ಣದ್ವೇಷದ ತಹತಹಿಕೆ ಇಲ್ಲದೇ ಇರುವುದು ಸಮಾಧಾನದ ಅಂಶವೇ ಆಗಿದೆ.

ಕವಿತೆ ಕತೆ ಮತ್ತು ಪ್ರಬಂಧಗಳ ಸೊಗಸನ್ನು ವಿಮರ್ಶೆಯ ಮಾನದಂಡದಲ್ಲಿ ಅಳೆಯದೇ ನಮ್ಮ ನಮ್ಮ ಬಿಡುವಿನಲ್ಲಿ ನಮಗೆ ಬೇಕಾದಂತೆ ಓದಿಕೊಂಡರೆ ರುಚಿಸುವ ರೀತಿಗೂ ಅವನ್ನು ಈಗಾಗಲೇ ಸಿದ್ಧಪಡಿಸಿಟ್ಟುಕೊಂಡ ಅಳತೆಪಟ್ಟಿಯ ಅಳತೆಯಲ್ಲೇ ಹಿಡಿಯಹೋಗುವುದಕ್ಕೂ ಅಪಾರ ವ್ಯತ್ಯಾಸ ಇದ್ದೇ ಇದೆ. ಅಲ್ಲದೇ ಹೊಸ ಬರಹಗಾರರನ್ನು ಓದದೇ, ಈ ಕಾಲದ ತಲ್ಲಣ ತವಕಗಳ ಪರಿಚಯವಿಲ್ಲದ ಹಳೆಯ ಕಾಲದ ಪಠ್ಯವನ್ನಷ್ಟೇ ಸಾಹಿತ್ಯದ ಮೂಲಧಾತುವೆಂದು ಭ್ರಮಿಸಿರುವ ಕೆಲವೇ ಕೆಲವು ಪಟ್ಟಭದ್ರರಿಂದಲೂ ಹೊಸ ಹೆಸರುಗಳು ಮುನ್ನೆಲೆಗೆ ಬಾರದಿರುವ ಹಾಗೆಯೇ ಬರಿಯ ಹೊಸಬರಷ್ಟೇ ಇರುವ ಮತ್ತವರು ಪೂರ್ವಸೂರಿಗಳನ್ನೂ ಪರಂಪರೆಯನ್ನು ಧಿಕ್ಕರಿಸುವ ಮಾತಿನ ಮೂಲಕವೇ ಸುದ್ದಿಯಾಗುತ್ತಿರುವ ಸಾಮಾಜಿಕ ಜಾಲತಾಣಗಳು ಸೃಷ್ಟಿಸಿರುವ ಕೃತಕತೆಯಿಂದ ಕೂಡ ಲಕ್ಷ್ಮಣ್ ಪಾರಾಗಿರುವುದು ಕೂಡ ಸಂತಸದ ವಿಷಯ ಡಾ.ಲಕ್ಷ್ಮಣ್ ಅವರೊಳಗೆ ಕವಿಯಿದ್ದಾನೆ, ಪ್ರಬಂಧಕಾರ ಇದ್ದಾನೆ, ಕತೆಗಾರನಿಗೆ ಬೇಕೇ ಬೇಕಾದ ಸಾಮಾಜಿಕ ನೆಲೆಯು ಕಲಿಸಿಕೊಟ್ಟ ಅಧ್ಯಯನದ ವಿವೇಕವೂ ಇದೆ. ಈ ಎಲ್ಲವೂ ಮೇಳೈಸಿದ ಇವರು ಉತ್ತರೋತ್ತರ ಕನ್ನಡ ಸಾಹಿತ್ಯದ ಪ್ರಭಾವೀ ಹೆಸರಾಗಿ ಹೊರಹೊಮ್ಮಲಿ ಎಂದು ಹಾರೈಸುತ್ತ ನನ್ನೀ ಮಾತಿಗೆ ಮಂಗಳವನ್ನು ಹಾಡುತ್ತೇನೆ.

‍ಲೇಖಕರು Admin

November 16, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: