ಗದ್ಯಗಂಧಿ ಎಂಬ ನೆನಪುಗಳ ಗಂಧವಾಹ

ಬಿ.ಕೆ. ಮೀನಾಕ್ಷಿ

ಮೋಹನರಾಗವಿನ್ನೂ ಇರಬೇಕಿತ್ತು ಎಂದುಕೊಳ್ಳುವಾಗಲೇ…..ಮೃದಂಗದ ನುಡಿಸುವಿಕೆ ಬದುಕನ್ನು ಯಾವ ಹಾದಿಗೆ ಕೊಂಡೊಯ್ಯುವುದೋ.. ಎಂಬ ತುಮುಲದಲ್ಲೇ ಮನ ವಿಸ್ಮಂತಿಗೊಳಗಾಗದಂತೆ ಕಾಪಾಡಿಕೊಳ್ಳುವ ತವಕದಲ್ಲಿ ನೆನೆಪಿನ ನಕ್ಷತ್ರಗಳ ಬೆಳಕ ಬಿತ್ತಿ, ಒಳಗ ಬೆಳಗಿಸಿಕೊಳ್ಳಲಿ ಎನ್ನುತ್ತಲೇ…. ಹೆಣ್ಣೆಂಬ ಹೂವಿನ ಬದುಕಿನ ವೈವಿಧ್ಯತೆಗಳನ್ನು, ಹಾರವಾಗಬೇಕಿದ್ದ ಹೂವುಗಳನ್ನು ಹೊಸಕಿಹಾಕಿದ, ತುಳಿತದ ದಾಳಿಗೆ ಸಿಕ್ಕ ಹೂಗಳ ಅಳಲುಗಳ ಅರಿವ ಆತುರ, ಹಾರಕ್ಕಾಗಿ ಆರಿಸಿದ ಸೊಗಸಿನ ಹೂಗಳ ಸೊಬಗು……

ಒಳಗಿನ ದಳ ಬಿರಿಯಬೇಕಾದ್ದು, ಮನಸಿನ ಹೂವರಳಬೇಕಾದ್ದು, ಇವೆಲ್ಲ ಹೇಳಿ ಬರುವುದಲ್ಲ! ಹಾದಿಯ ಗುರುತಿಗಿಟ್ಟ ಕಲ್ಲುಗಳೇ ಮಾಯವಾಗಿ, ಕಲ್ಲಿನ ಸಂಪರ್ಕದಿಂದ  ಮನೆಗಳೇ ಕಲ್ಲಾಗಿ ಹೋಗುವುದೆಂದರೆ…..ಇನ್ನು ಮನಗಳ ಗತಿ?

 ಮೂರು ಗಾಜಿನ ಉದ್ದನೆಯ ಚೂರುಗಳ  ತ್ರಿಕೋನಾಕಾರದಲಿ ನಿರ್ಮಿಸಿ, ಅದರೊಳಗೊಂದು ಮಾಯಾಲೋಕ ಸೃಷ್ಟಿಸುವ  ಬಳೆಯ ಬಣ್ಣ ಬಣ್ಣದ ಪ್ರತಿಚೂರುಗಳಿಗೂ ಒಂದೊಂದು ಕಣ್ಣೀರ ಕತೆಯಿರುವುದು ಅಚ್ಚರಿಯಲ್ಲವೇ ಅಲ್ಲ! ಒಡೆದ ಬಳೆಯ ಚೂರುಗಳು ಬಾಗಿಲಿನ ತೋರಣವಾಗಿ ಸಿಂಗಾರವಾಗಿದ್ದು ನೆನಪಿನ ತೋಟದಲ್ಲಿ ಗಚ್ಚಿತವಾಗಿದೆ.

ಮನೆಯ ಕತ್ತಲೆಯನ್ನು ಕ್ಯಾಂಡಲ್‍ಗಳ ಲೆಕ್ಕದಲ್ಲಿ  ಬಲ್ಬುಗಳನ್ನು ಉರಿಸಿ ಓಡಿಸುತ್ತಿದ್ದರೆ,ಕತ್ತಲೆಯನ್ನೇ ಮನದೊಳಗೆ ತುಂಬಿಕೊಂಡ ಜನ ಟ್ಯೂಬು ನಿಯಾನುಗಳ ಸೆಳೆತಕ್ಕೆ ಸಿಕ್ಕು ಝಗಝಗ ಬೆಳಕಿನಲ್ಲಿ ಮುಳುಗಿ ಹಿಂದಿರುಗದ ಹಾದಿಯಲ್ಲಿ ಹೆಜ್ಜೆ ಮೂಡಿಸಿದರು. ಎದೆಯ ಮೂಲೆಯಲ್ಲಿ ಅಮ್ಮ ಹಚ್ಚಿದ ಹಣತೆ ತೇಲಿಬಂದು, ಕಣ್ಣು ಕುಕ್ಕುವ ಬೆಳಕಿಗೆ ಉಸಿರುಗಟ್ಟಿ ಮತ್ತೆ ಮರಳುತ್ತಿದ್ದಾರೆ. ಎಂಥ ರೂಪಕ ಬರಹ ಅಲ್ಲವೇ?

 ತಲೆಯ ಮೇಲೊಂದು ಹ್ಯಾಟ್ ನಂತೆ ಕನಸು ಕೂರುತ್ತದೆ ಎನ್ನುತ್ತಾ, ಮೋಡ ಕವಿದ ವಾತಾವರಣದಲ್ಲಿ, ಮೈ ಮುದುರಿ ಕುಳಿತು ಹುರಿದ ಕಾಳುಗಳ ಹೆಕ್ಕಿ ಬಾಯಾಡಿಸುವಾಗ ಮನಸು ಗತಕಾಲದ ಸ್ಮರಣೆಗೆ ಜಾರಿ, ನೂರೆಂಟು ತರಚುಗಾಯದ ಏಳುಬೀಳುಗಳಿದ್ದರೂ, ಅಲ್ಲಿಯ ನೆನಪುಗಳ ಬುತ್ತಿಯಲ್ಲಿ  ಮಡುಗಟ್ಟಿನಿಂತ ಸಿಹಿಜಲವನ್ನು ಬೊಗಸೆಯಲ್ಲಿ ಕಾಪಿರಿಸಿ ಹಂಚುವ ಕೆಲಸವೇ ಈ ಮುದ್ದು ಗದ್ಯಗಂಧಿಯದು!

ಗದ್ಯಗಂಧಿ ಶ್ರೀಮತಿ ಎಂ. ಆರ್. ಕಮಲರವರ ಗದ್ಯಕವಿತೆಗಳು. ಯಾವ ಕವಿತೆಗೂ ಶೀರ್ಷಿಕೆಯಿಲ್ಲ. ಅದು ಓದುಗನ ಇಚ್ಛೆಗನುಗುಣವಾಗಿ, ಅವನು ಆ ಕ್ಷಣಕ್ಕೆ ಅನುಭವಿಸಿದ ಭಾವಕ್ಕನುಸಾರವಾಗಿ ಹೆಸರು ಪಡೆದುಕೊಳ್ಳುತ್ತಾ ಹೋಗುತ್ತದೆ. ನೂರು ತರಂಗಗಳನ್ನು ತನ್ನೊಳಗಡಗಿಸಿಕೊಂಡು ಹರಿವ ಮಂದಗಾಮಿ ನದಿಯಂತೆ ಲಾಲಿತ್ಯಪೂರ್ಣವಾಗಿ ಓದುಗರ ಮುಂದೆ ತನ್ನನ್ನು ತೆರದುಕೊಳ್ಳುತ್ತಾ ಹೋಗುತ್ತದೆ.

ಇಲ್ಲಿಯ ಕವಿತೆಗಳಿಗೆ ನಿರ್ದಿಷ್ಟ ಪದಗಳ ಕಟ್ಟುಪಾಡುಗಳಿರದೆ ಕವಿಯತ್ರಿಯ ಭಾವವನ್ನು ಹಾಳೆಗೆ ಅಚ್ಚೊತ್ತುವ ನೆನಪುಗಳು ಓದುಗರ ಮನದಾಳದ ನೆನಪುಗಳಿಗೆ ಲಗ್ಗೆಯಿಡುತ್ತವೆ, ಮೆಲ್ಲಗೆ ಕೆದರಿಕೊಳ್ಳುತ್ತವೆ. ಏನೆಂದರೂ ಬಾಲ್ಯದ ನೆನಪುಗಳು ಅತಿಮಧುರ! ತನ್ನ ಸುತ್ತಲೇ ಭಾವಕೋಶವೊಂದನ್ನು ನಿರ್ಮಿಸಿಕೊಂಡು, ಅದರಲ್ಲೇ ಸಂಚರಿಸುತ್ತಾ ಗಟ್ಟಿನೆನಪುಗಳ ರಸಾಯನವೊಂದಷ್ಟನ್ನು ಉಣಬಡಿಸಲು ಹೊರಟ ಕವಿಯತ್ರಿಯ ಮಾರ್ಗ ಅತೀ ಸುಂದರ ಮತ್ತು ಆಪ್ಯಾಯಮಾನ!

 ಹೌದು! ನಿಮ್ಮನ್ನು ಗದ್ಯಗಂಧಿ ನಿಮ್ಮ ಬಾಲ್ಯಕ್ಕೆ ಸದ್ಧಿಲ್ಲದೆ ಸೆಳೆದೊಯ್ಯುತ್ತದೆ. ಬೆಣಚುಗಲ್ಲಿಗೆ ಭಾವವುಜ್ಜಿ ತರಚುಗೊಳ್ಳುವ ಭಾವನೆಗಳನ್ನು ಬದಿಗಿಟ್ಟು, ಕಹಿಗಳಾಚೆಗೂ, ಗಾಯಗಳನ್ನು ಮೀರಿದ ಮಧುರ ಅನುಭವಗಳನ್ನು ಕೆದಕಿ ಅವುಗಳನ್ನು ಹೆಕ್ಕಿ ಮಗ್ಗುಲಲಿರಿಸಿಕೊಂಡು ಸುಂದರ ಅನುಭೂತಿಯಲ್ಲಿ ವಿಲೀನಗೊಳ್ಳುವ ಧ್ವನಿ ಗದ್ಯಗಂಧಿಯಲ್ಲಿದೆ.

 ಎಷ್ಟು ಹಂಚಿದರೂ ಅಕ್ಷಯವಾಗುವ ಹಳೆಯ ಬದುಕಿನ ಚಿತ್ರಗಳು ಸದಾ ಕಾಡುತ್ತವೆಂಬುದನ್ನು ಪ್ರತಿಹಾಳೆಯಲ್ಲೂ ಹೇಳುವ ಕವಯತ್ರಿ, ಕಪ್ಪುಬಿಳುಪು ಸಿನಿಮಾಗಳು, ಶಾಲೆ, ನಾಯಿಮರಿ ಸೋರುವ ಶಾಲೆ, ಮಳೆಗಾಲದ ಸೊಗಸು, ಹಳೆಯ ಕಾಲದ ಹಗೇವುಗಳಲ್ಲಿ ಮುಚ್ಚಿಟ್ಟ ಧನ ಧಾನ್ಯ,ನಗಗಳು….. ಬರಬರುತ್ತಾ ಅವುಗಳು, ಹಾವು ಚೇಳುಗಳ  ಆವಾಸಸ್ಥಾನವಾಗಿ ಕೊನೆಗೊಮ್ಮೆ ಎದೆಯಲ್ಲಿ ಹಾವು ಚೇಳುಗಳು ತುಂಬಿದ ಹಗೇವನ್ನು ಮುಚ್ಚಿ ನಗೆಗೊಳುವುದೇ  ವಾಸಿಯೆನಿಸಿತೇನೋ…..

 ಇಂದು ಇದ್ದದ್ದು ನಾಳೆಗೆ ಇಲ್ಲವಾಗುವ ಅಳಿದ ಪ್ರಾಣಗಳ ಪಳೆಯುಳಿಕೆಗಳು, ಪತ್ರಗಳನ್ನು ಬರೆದು ಹೀರೋ ಆಗುವ ಅಂದಿನ ಅಚ್ಚರಿ.. `ಹೀರೋ’ ಪೆನ್ನು! ಕಿಟಕಿಗಳಿಂದ ತೂರಿಬರುವ  ಬದುಕಿನ ನಾನಾತರದ ನಡಾವಳಿಗಳು! ಎಷ್ಟೆಂದು ಹೇಳುವುದು? ಎಷ್ಟೊಂದು ಬಿಚ್ಚಿಟ್ಟರೂ ಮುಗಿಯಲಾರದು!

 ಪದಕುಸಿಯೆ  ನೆಲವಿಹುದು.. ಎನ್ನುವಂತೆ ಬಿದ್ದಾಗ ಆತುಕೊಳ್ಳುವ ನೆಲ ಅವಳ ಮುಂದೆ ನಗುವಿನ  ಹಾದಿಯನ್ನೊಡ್ಡುತ್ತದೆ. ಕಿಟಕಿಯಲ್ಲಿ ಇಣುಕುವ ಚಂದ್ರ, ಇರುಳಿನಪ್ಪುಗೆಯ ಸಾಂತ್ವನ, ರೆಪ್ಪೆಯಲ್ಲೇ ಕಾದು ಕೂರುವ ಕನಸುಗಳು  ನಮ್ಮನ್ನು ಒಬ್ಬಂಟಿ ಮಾಡಿಲ್ಲವೆಂಬುದೇ ಕವಿಯತ್ರಿಯ ಗಟ್ಟಿ ಅಭಿಪ್ರಾಯ!

ಆತ್ಮರತಿಗೊಳಗಾಗುವ ವಯೋಸಹಜ ಕಾಮನೆಗಳು ಬರಬರುತ್ತಾ ನಿಗರ್ವಿಯಾಗಿ,  ಸಮಾಜಮುಖಿಯಾಗಿ ತಿರುವು ಪಡೆವುದು ಕೂಡ ಇಲ್ಲಿ ಇದೆ. ಇಂತಹ ಹಲವಾರು ಸವಿನೆನಪುಗಳ ಸುತ್ತಲೇ ಗಿರಕಿ ಹೊಡೆಯುತ್ತಾ, ನೆನಪಿನ ಚಾಟಿಯಲ್ಲಿ ಬದುಕಿನ ಬಣ್ಣದ ಬುಗುರಿಯನ್ನಾಡಿಸುವ ಛಾತಿ ಗದ್ಯಗಂಧಿಯ ಸೊಗಸು. ಗದ್ಯಗಂಧಿಯೆಂಬ ಶೀರ್ಷಿಕೆ ಬಿಟ್ಟರೆ ಇನ್ನಾವ ಭಾವದೊತ್ತಡಗಳಿಗೂ ಹೆಸರು ಕುಲಗೋತ್ರಗಳಿಲ್ಲ. ಹಂಚಿಕೊಳ್ಳುವುದಷ್ಟೇ ಬರೆದವರ ಕೈಂಕರ್ಯ.

 ಒಣಗಿಹೋದ ಎದೆಯ ನೆಲವನ್ನು ಒದ್ದೆ ಮಾಡಿಕೊಂಡು ಕನಸುಗಳ ಬೀಜ ಬಿತ್ತಿಕೊಳ್ಳಲು ಗದ್ಯಗಂಧಿಯನ್ನೊಮ್ಮೆ ಖಂಡಿತ ಓದಲೇಬೇಕು.  ತನ್ನ ತವರಿನ ಮೇರು ಮೇಟಿಕುರ್ಕೆಗೆ ಅರ್ಪಣೆಯಾಗಿರುವ, ಎಲ್ಲರೊಳಗೂ ಹೊಸ ಜಗತ್ತನ್ನು ತೆರೆಸುವ ತವರಿನ ರೂಪುರೇಷೆಯನ್ನು ಮನದಲಿ  ಶಿಲ್ಪವಾಗಿಸಬೇಕು.


‍ಲೇಖಕರು Avadhi

October 14, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: