‘ಗಂಡಸರ’ ಭಾಷೆ: ಹೀಗೊಂದು ವಿಶ್ಲೇಷಣೆ!

ಸತ್ಯಪ್ರಕಾಶ್ ಎಂ ಆರ್

ಇತ್ತೀಚೆಗೆ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರೊಬ್ಬರು ಸಮಾರಂಭವೊಂದರಲ್ಲಿ ಜಿಲ್ಲೆಯ ಕಾಮಗಾರಿಗಳ ಬಗ್ಗೆ ಮಾತನಾಡುತ್ತಾ ಭಾವೋದ್ರೇಕಕ್ಕೆ ಒಳಗಾಗಿ, “ಗಂಡಸುತನವನ್ನು ಮಾಡುವ ಕೆಲಸದಲ್ಲಿ ತೋರಿಸಿ” ಎಂದು ಎದುರಾಳಿ ರಾಜಕಾರಣಿಯೊಬ್ಬರಿಗೆ ಸವಾಲೆಸೆದಿದ್ದು ಭಾರಿ ಸುದ್ದಿಯಾಗಿತ್ತು. ಅವರಿಗೆ ಸವಾಲೆಸೆಯುವ ಭರದಲ್ಲಿ ಪರೋಕ್ಷವಾಗಿ ‘ಅಭಿವೃದ್ಧಿ’ ಕಾರ್ಯಕ್ರಮಗಳನ್ನು ಮಾಡುವುದು ‘ಗಂಡಸುತನ’ದ ಸಂಕೇತ ಎಂಬರ್ಥದ ಮಾತನ್ನಾಡಿದ್ದಾರೆ. ಹಾಗಾದರೆ ಅಭಿವೃದ್ಧಿ ವಿಚಾರಗಳಲ್ಲಿ ಹೆಂಗಸರ ಪಾತ್ರವೇನೂ ಇಲ್ಲವೇ? ಅಭಿವೃದ್ಧಿ ಕಾರ್ಯಗಳಿಗೆ ‘ಹೆಣ್ತನ’ದ ಆಯಾಮವಿರುವುದಿಲ್ಲವೇ? ‘ಮಾತೃ ಹೃದಯ’ವಿರುವುದಿಲ್ಲವೇ?

ಸಾರ್ವತ್ರಿಕವಾಗಿ ಎದೆತಟ್ಟಿ ಠೇಂಕರಿಸುವುದೇ ಗಂಡಸುತನವಾದರೆ ಸಂಯಮದಿಂದ ಪರಿಸ್ಥಿತಿಯನ್ನು ವಿಕೋಪಕ್ಕೆ ಹೋಗದಂತೆ ನಿಭಾಯಿಸುವುದು ಹೆಣ್ತನವೇ ಆಗಲಿ. ಅಂಥಹಾ ಹೆಂಗರುಳಿನ ನಡತೆಯೇ ಉತ್ತಮವಲ್ಲವೇ? ‘ಸಜ್ಜನ’ ಎಂಬ ಹಣೆಪಟ್ಟಿ ಹೊತ್ತ ರಾಜಕಾರಣಿಯೊಬ್ಬರು ಸದನದಲ್ಲಿ “When rape is inevitable lie down and enjoy it” ಎಂಬ ಹೇಳಿಕೆ ನೀಡಿದಾಗ, ಸಭಾಪತಿ ಮಹೋದಯ!ರಿಂದ ಹಿಡಿದು ಹಲವಾರು ಸದಸ್ಯರು ಗಹಗಹಿಸಿ ನಕ್ಕ ಸಾರ್ವಜನಿಕ ವ್ಯವಸ್ಥೆಯಲ್ಲಿ ಹೆಚ್ಚಿನದನ್ನೇನು ನಿರೀಕ್ಷಿಸಲು ಸಾಧ್ಯ?

ಸಚಿವರು, ಸಂಸದರು, ಮಾಜಿ ಮುಖ್ಯಮಂತ್ರಿಗಳು ‘ಗಂಡಸುತನ’ದ ಸುತ್ತ ಗಿರಕಿ ಹೊಡೆಯುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಗಮನಿಸಬೇಕಾದ ಅಂಶವೊಂದಿದೆ. ಈ ಎಲ್ಲ ಪುರುಷ ರಾಜಕಾರಣಿಗಳು ಅವರಿಗರಿವಿಲ್ಲದಂತೆ ಭಾಷೆಯ ಬಳಕೆಯಲ್ಲಿ ಪುರುಷ ಪ್ರಧಾನ ಧೋರಣೆಯನ್ನು ವ್ಯಕ್ತಪಡಿಸುತ್ತಿರುತ್ತಾರೆ. ಅದು ಅವರ ತಪ್ಪೇ ಅಥವಾ ಬಳಕೆಯಲ್ಲಿರುವ ಭಾಷೆಯ ತಪ್ಪೇ?. ಭಾಷೆಯೇ ಪುರುಷರ ಪರವಾಗಿದ್ದರೆ ಅಥವಾ ಭಾಷೆಯನ್ನು ಕಟ್ಟುವಾಗಲೇ ಪುರುಷರ ದೃಷ್ಟಿಕೋನದ ತೂಕ ಹೆಚ್ಚಾಗಿದ್ದರೆ ಈ ನಾಯಕರು ಏನು ತಾನೆ ಮಾಡಲು ಸಾಧ್ಯ!?

ಕನ್ನಡದ ಕೆಲವು ಪದಗಳ ವ್ಯುತ್ಪತ್ತಿ ಮತ್ತು ಅರ್ಥವನ್ನು ಗಮನಿಸಿ. ಇಂಗ್ಲಿಷ್ ಮತ್ತು ಇತರ ಭಾಷೆಗಳಲ್ಲಿ ಇಂತಹ ನೂರಾರು ಉದಾಹರಣೆಗಳು ದೊರಕುತ್ತವೆ. ‘ವೀರ’ ಪದದ ಮೂಲವನ್ನು ಹುಡುಕಿ ನೋಡಿ ಪುರುಷತ್ವದ ನಂಟು ಕಂಡುಬರುತ್ತದೆ. ‘ಪೌರುಷ’ ಪದದಲ್ಲಿಯೂ ಪುರುಷನಿದ್ದಾನೆ. ಈ ಪದಗಳ ಮೂಲ ಹೆಣ್ಣಿಗೆ ಸಂಬಂಧಿಸಿದ್ದಲ್ಲವೇ ಎಂದೆನಿಸದಿರದು. ಸಂದರ್ಶನವೊಂದರಲ್ಲಿ ಕಿಚ್ಚಿನ ಸಿನಿಮಾ ನಟರೊಬ್ಬರು ತಮ್ಮ ‘ಪೌರುಷ’ ಪ್ರದರ್ಶಿಸುವ ಭರದಲ್ಲಿ “ನಾವೇನೂ ಬಳೆ ತೊಟ್ಟಿಲ್ಲ ಸ್ವಾಮಿ” ಎಂಬ ಹೇಳಿಕೆ ಕೊಟ್ಟಾಗ ನಾವು ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳದೆ ಮರೆತೇಬಿಟ್ಟಿದ್ದೇವೆ.

ಇಲ್ಲಿ ‘ಬಳೆ ತೊಡುವ’ ರೂಪಕಕ್ಕೆ ಬಲಹೀನತೆ, ದುರ್ಬಲತೆಯ ಅರ್ಥವನ್ನು ಆರೋಪಿಸಲಾಗುತ್ತಿಲ್ಲವೇ? ಎಂಬ ಪ್ರಶ್ನೆ ಮೂಡದಿರದು. ಬಳೆ ಅಥವಾ ಬ್ರೇಸ್‌ಲೆಟ್(ಕಂಕಣ)ಗಳನ್ನು ಗಂಡಸರು ತೊಡುವುದಿಲ್ಲವೇ? ಹಾಗಾದರೆ ಹೆಣ್ಣಿನ ನೆಚ್ಚಿನ ಒಡವೆಯನ್ನು ದುರ್ಬಲತೆಯ ರೂಪಕವಾಗಿ ಯಾಕೆ ಬಳಸಲಾಗುತ್ತಿದೆ? ಇದು ಭಾಷೆಯ ಸಮಸ್ಯೆಯೇ, ಬಳಸುವವರ ಧೋರಣೆಯ ಸಮಸ್ಯೆಯೇ? ಎರಡೂ ಇರಬಹುದು.

ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು ೨೦೧೬ರಲ್ಲಿ ಜಗತ್ತಿನ ನಂಬರ್ ಒನ್ ಡಬಲ್ಸ್ ರ‍್ಯಾಂಕಿಂಗ್‌ನ ಸಾಧನೆ ಮಾಡಿದಾಗ, ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ಟಿವಿ ಸಂದರ್ಶನವೊಂದರಲ್ಲಿ ಸಾನಿಯಾಗೆ ಶುಭಾಶಯ ಕೋರಿ “ನೀವು ಯಾವಾಗ ಸೆಟಲ್ ಆಗ್ತೀರಾ?” ಎಂದು ಪ್ರಶ್ನಿಸುತ್ತಾರೆ. ಸಿಟ್ಟಿಗೆದ್ದ ಸಾನಿಯಾ, “ಓರ್ವ ಮಹಿಳೆಯಾಗಿ ಇಂತಹ ಪ್ರಶ್ನೆಗಳನ್ನು ನಾನು ದಿನನಿತ್ಯವೂ ಎದುರಿಸುತ್ತಲೇ ಇರುತ್ತೇನೆ.

ಹೆಣ್ಣಾದ ತಪ್ಪಿಗೆ ಮೊದಲು ಮದುವೆಯಾಗಿ, ನಂತರ ತಾಯಿಯಾದರೆ ಮಾತ್ರ ನಾವು ಜೀವನದಲ್ಲಿ ಸೆಟಲ್ ಆಗುತ್ತೇವೆಯೇ? ನಾವೆಷ್ಟು ವಿಂಬಲ್ಡನ್ ಪ್ರಶಸ್ತಿಗಳನ್ನು ಗಳಿಸಿದರೂ, ಜಗತ್ತಿನ ನಂಬರ್ ಒನ್ ರ‍್ಯಾಂಕ್ ಪಟ್ಟಕ್ಕೇರಿದರೂ ಸೆಟಲ್ ಆಗುವುದಿಲ್ಲವೇ?” ಎಂದು ಖಾರವಾಗಿ ಉತ್ತರಿಸಿದ್ದರು. ಯಾವ ಪತ್ರಕರ್ತನೂ ವಿರಾಟ್ ಕೋಹ್ಲಿ ಅಥವಾ ಇನ್ನೂ ‘ಸೆಟಲ್’ ಆಗದ ಲಿಯಾಂಡರ್ ಪೇಸ್ ಅವರಂತಹ ಪುರುಷ ಆಟಗಾರರಿಗೆ ‘ಸೆಟಲ್’ ಆಗುವ ಕುರಿತಾದ ಸೆಕ್ಸಿಸ್ಟ್ ಪ್ರಶ್ನೆಗಳನ್ನು ಕೇಳುವುದಿಲ್ಲ. ಅದೇನಿದ್ದರೂ ಮಹಿಳೆಯರಿಗಷ್ಟೇ ಮೀಸಲು. ಪುರುಷರಿಗಿಂತ ಹೆಚ್ಚಿನ ಮಟ್ಟದ ಸಾಧನೆ ಮಾಡಿದರೂ ಇಂತಹ ಪ್ರಶ್ನೆಗಳನ್ನು ಎದುರಿಸುವುದು ಮಹಿಳೆಯರಿಗೆ ತಪ್ಪಿದ್ದಲ್ಲ.

ಇಂಗ್ಲಿಷ್‌ನಲ್ಲಿ ಮಹಿಳಾ ವಿರೋಧಿ ಮತ್ತು ಪುರುಷ ಪರವಾದ ಹಲವಾರು ಪದಗಳು ಬಳಕೆಯಲ್ಲಿವೆ. ಕೆಲವು ಉದಾಹರಣೆಗಳನ್ನು ಗಮನಿಸಿ. ‘Right hand man,’ ‘Party strong man,’ ‘Blue eyed boy.’ ಎಲ್ಲವೂ ಪುರುಷರನ್ನು ವೈಭವೀಕರಿಸುವ ಪದಗಳೇ. ಮಹಿಳೆಯರಿಗೆ ಸಂಬಂಧಿಸಿದ ಪದಗಳು ಹೇಗಿವೆ ನೋಡಿ. ‘Drama queen,’ ”Mean girl,’ ‘itch’ ಈ ಪದಗಳನ್ನು ಗಂಡಸರಿಗೆ ಅನ್ವಯಿಸುವ ಹಾಗೆ ‘Drama king,’ ‘Mean boy,’ ‘ಆog’ ಎಂದು ಸಮಾನಾರ್ಥಕವಾಗಿ ಬಳಸಲಾಗುವುದಿಲ್ಲ.

ಇಂಗ್ಲಿಷ್‌ನ ‘House wife’ ಕನ್ನಡದಲ್ಲಿ ‘ಗೃಹಿಣಿ’ಯಾಗುತ್ತಾಳೆ. ಇದಕ್ಕೆ ಪರ್ಯಾಯವಾಗಿ ‘House husband’ ಆಗಲಿ, ‘ಗೃಹಪತಿ’ ಎಂಬಂತಹ ಪದಗಳನ್ನು ಬಳಸಲಾಗುವುದಿಲ್ಲ. ಇನ್ನೊಂದು ಬಗೆಯ ಪದ ನೋಡಿ ಮಹಿಳೆ ‘Home maker’ ಆದರೆ, ಪುರುಷ ‘Bread winner’ ಎಂದು ಕರೆಯಲ್ಪಡುತ್ತಾನೆ. ಗಂಡು ‘Chivalrous man’ ಆದರೆ, ಹೆಣ್ಣು ‘Lovely and gracious woman’ ಎನಿಸಿಕೊಳ್ಳುತ್ತಾಳೆ.

ಭಾಷೆಯಲ್ಲಿಯೇ ಈ ರೀತಿಯ ಲಿಂಗಭೇದದ ಸ್ಟಿರಿಯೋಟೈಪ್‌ಗಳು ಹಾಸುಹೊಕ್ಕಾಗಿದ್ದರೆ ಏನು ತಾನೆ ಮಾಡಲು ಸಾಧ್ಯ?! ‘ಸ್ತ್ರೀಲೋಲ,’ ‘ರಸಿಕ,’ ಪುರುಷರ ಸಕಾರಾತ್ಮಕ ಗುಣವಿಶೇಷಣಗಳಾಗಿ ಬಳಸಲ್ಪಡುತ್ತಿವೆ. ಇನ್ನು ನಮ್ಮ ಜನಪ್ರಿಯ ನಟರ ಬಿರುದಗಳನ್ನು ಗಮನಿಸಿ. ‘ಸಾಹಸ ಸಿಂಹ,’ ‘ಟೈಗರ್,’ ‘ಪವರ್ ಸ್ಟಾರ್,’ ‘ನಟ ಸಾರ್ವಭೌಮ,’ ‘ಕರಿ ಚಿರತೆ,’ ಪಟ್ಟಿ ದೊಡ್ಡದು.

ಇವೆಲ್ಲವೂ ನಟರ ಪೌರುಷ ಮತ್ತು ನಾಯಕತ್ವದ ಗುಣವನ್ನು ಪ್ರತಿಬಿಂಬಿಸುವ ಬಿರುದುಗಳು. ಅದೇ ನಟಿಯರಿಗೆ ಮೊದಲನೆಯದಾಗಿ ಬಿರುದುಗಳೇ ಇರುವುದಿಲ್ಲ. ಇರುವ ಕೆಲವೇ ವಿಶೇಷಣಗಳನ್ನು ನೋಡಿ. ‘ಕನಸಿನ ರಾಣಿ,’ ‘ಮಾದಕ ಕಂಗಳ ಚೆಲುವೆ,’ ‘ಗುಳಿಕೆನ್ನೆ ಚೆಲುವೆ,’ ‘ಮಿಲ್ಕಿ ಬ್ಯೂಟಿ,’ ‘ಗ್ಲ್ಯಾಮರ್ ಬೆಡಗಿ,’ ‘ಮೋಹಕ ತಾರೆ,’ ಇನ್ನೂ ಹತ್ತು ಹಲವು. ಎಲ್ಲವೂ ಅವರ ಭೌತಿಕ ಸೌಂದರ್ಯಕ್ಕೆ ಸಂಬಂಧಪಟ್ಟ ವಿಶೇಷಣಗಳು!

ನಾಯಕ ನಟಿಯರಿಗೆ ನೀಡಿರುವ ಇನ್ನೂ ಕೆಲವು ವಿಶೇಷಣಗಳು ಪುರುಷರ ಅಥವಾ ಪುರುಷ ನಟರ ಉಲ್ಲೇಖವನ್ನು ಹೊಂದಿರುತ್ತವೆ. ಉದಾಹರಣೆಗೆ ಒಂದು ಕಾಲದ ಖ್ಯಾತ ತೆಲುಗು ನಟಿ ವಿಜಯ ಶಾಂತಿ ಅವರನ್ನು ‘ಲೇಡಿ ಅಮಿತಾಬ್ ಬಚ್ಚನ್’ ಎಂದು ಕರೆಯಲಾಗುತ್ತಿತ್ತು. ಅವರನ್ನು ಆಕ್ಷನ್ ಕ್ವೀನ್ ಎಂದಾದರೂ ಕರೆಯಬಹುದಿತ್ತು. ಆದರೆ ನಟ ಅಮಿತಾಬ್ ಬಚ್ಚನ್ ಉಲ್ಲೇಖ ಯಾಕೆ? ನಾಯಕ ನಟಿಯರು ಸಾಹಸ ದೃಶ್ಯಗಳಲ್ಲಿ ಅತ್ಯದ್ಭುತವಾದ ಪ್ರದರ್ಶನ ನೀಡಿದರೂ, ಒಬ್ಬ ಪುರುಷ ನಟನ ದುರ್ಬಲ ಆವೃತ್ತಿಯಾಗಿ ಮಾತ್ರ ಬಿರುದಾಂಕಿತರಾಗುತ್ತಾರೆ. ಒಬ್ಬ ನಾಯಕನಟ ‘ಸೂಪರ್ ಸ್ಟಾರ್’ ಎನಿಸಿಕೊಂಡರೆ, ನಾಯಕ ನಟಿ, ಎಷ್ಟೇ ಅಭಿಮಾನಿ ಬಳಗವನ್ನು ಹೊಂದಿದ್ದರೂ ‘ಲೇಡಿ ಸೂಪರ್ ಸ್ಟಾರ್’ ಎನಿಸಿಕೊಳ್ಳಬಹುದು ಅಷ್ಟೇ!

ವೃತ್ತಿಪರ ಪದನಾಮಗಳ ವಿಷಯಕ್ಕೆ ಬಂದರೆ ಹಲವಾರು ಉದಾಹರಣೆಗಳು ದೊರಕುತ್ತವೆ. ‘ಮಹಿಳಾ ವೈದ್ಯಾಧಿಕಾರಿ,’ ‘ಮಹಿಳಾ ಡ್ರೈವರ್,’ ‘ಮಹಿಳಾ ಪೈಲಟ್,’ ‘ಮಹಿಳಾ ಪೊಲೀಸ್’ ಹೀಗೆ ದೊಡ್ಡ ಪಟ್ಟಿಯನ್ನೇ ಮಾಡಬಹುದು. ಪುರುಷರ ಪದನಾಮಗಳ ಜೊತೆಗೆ ಇಂತಹ ವಿಶೇಷಣಗಳನ್ನು ಬಳಸಲಾಗುವುದಿಲ್ಲ. ‘ಪುರುಷ ಪೈಲಟ್,’ ‘ಪುರುಷ ವೈದ್ಯಾಧಿಕಾರಿ’ ‘ಪುರುಷ ಪೊಲೀಸ್’ ಎಂಬಂತಹ ಪದಬಳಕೆಯನ್ನು ಕೇಳಿರಲು ಸಾಧ್ಯವೇ ಇಲ್ಲ. ಒಟ್ಟಾರೆ ಬಳಕೆಯ ವಿಚಾರಕ್ಕೆ ಬಂದರೆ, ಸಾರ್ವಜನಿಕ ವಲಯದಲ್ಲಿ ಭಾಷೆಯು ಗಂಡಸರ ಪರವಾಗಿ ವಾಲಿಕೊಂಡಿರುವುದಂತೂ ಸ್ಪಷ್ಟ!

‍ಲೇಖಕರು Admin

February 8, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: