ಖ್ಯಾತ ನಟ ಶ್ರೀನಿವಾಸ ಪ್ರಭು ಅಂಕಣ ಆರಂಭ

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

ಅಲ್ಲೂ ಇಲ್ಲ-ಇಲ್ಲೂ ಸಲ್ಲ

ಕೇರಳಾಪುರ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಒಂದು ಪುಟ್ಟ ಗ್ರಾಮ. ಅಲ್ಲಿದ್ದ ಸ್ಮಾರ್ತ ಸಂಕೇತಿ ಬ್ರಾಹ್ಮಣ ಕುಲದ ರಾಮಾಶಾಸ್ತ್ರಿಗಳು ದೊಡ್ಡ ವಿದ್ವಾಂಸರು. ವೇದೋಪನಿಷತ್ತುಗಳನ್ನು ಆಳವಾಗಿ ಅಧ್ಯಯನ ಮಾಡಿದವರು. ಅವರಿಗೆ ನಾಲ್ಕು ಜನ ಗಂಡು ಮಕ್ಕಳು, ಒಬ್ಬ ಹೆಣ್ಣು ಮಗಳು. ನಾಲ್ಕು ಜನರಲ್ಲಿ ಮೂರನೆಯವರೇ ನನ್ನ ತಂದೆ- ಸುಬ್ರಹ್ಮಣ್ಯ. ಮನೆಯಲ್ಲಿ ಕರೆಯುತ್ತಿದ್ದುದು ಕೃಷ್ಣ ಎಂದು.

ಎಳಮೆಯಲ್ಲಿ ಹಸು-ಕರುಗಳನ್ನು ಮೇಯಿಸಿಕೊಂಡು ಗೋಪಾಲನೇ ಆಗಿದ್ದ ಕೃಷ್ಣನಿಗೆ ಓದುವ ಬಯಕೆ. ಅಕ್ಕನ ಹೆಗಲ ಮೇಲೆ ತಲೆಯಿಟ್ಟು ಕೇಳುತ್ತಿದ್ದ. ‘ ನಾನು ಓದಬೇಕು.. ಬರೀ ದನ ಕಾಯಕೊಂಡೇ ಇರೋಕೆ ನನಗಿಷ್ಟ ಇಲ್ಲ.. ನಾನು ಓದಬೇಕು..ʼ ತಮ್ಮನ ಅಳಲು ಕೇಳಿ ಅಕ್ಕನ ಹೃದಯ ಚುರ್‌ ಅಂದಿತು. ‘ಯೋಚನೆ ಮಾಡಬೇಡ. ನಿಮ್ಮ ಭಾವನ ಹತ್ರ ಮಾತಾಡ್ತೀನಿʼ ಅಂತ ಆಶ್ವಾಸನೆ ಕೊಟ್ಟರು.

ತಂದೆಯವರ ಭಾವನವರು ನಾಗಪ್ಪ ಶಾಸ್ತ್ರಿಗಳು, ಸಂಸ್ಕೃತ ವಿದ್ವಾಂಸರು. ಪ್ರಸಿದ್ಧ ಸಾಹಿತಿ-ವಿಮರ್ಶಕ ಡಾ.ಸಿ.ಎನ್.‌ ರಾಮಚಂದ್ರನ್‌ ಅವರ ಪೂಜ್ಯ ತಂದೆ ನಾಗಪ್ಪ ಶಾಸ್ತ್ರಿಗಳು. ಓದುವ ಹುಚ್ಚು ಹತ್ತಿಸಿಕೊಂಡಿದ್ದ ನನ್ನ ತಂದೆಯವರಿಗೆ ದೊರೆತದ್ದು ಇಂಥ ಹಿರಿಯ ವಿದ್ವಾಂಸರ ಆಶ್ರಯ. ಭಾವನವರ ಮಾರ್ಗದರ್ಶನದಲ್ಲಿ ಸಂಸ್ಕೃತ ಅಭ್ಯಾಸ ಪ್ರಾರಂಭ ಮಾಡಿದ ತಂದೆಯವರು ಮುಂದೆ ಹೋಗಿ ಸೇರಿದ್ದು ಮೈಸೂರಿನ ಸಂಸ್ಕೃತ ಪಾಠಶಾಲೆಗೆ. ಅಲ್ಲಿ ಸಂಸ್ಕೃತ ಅಭ್ಯಾಸದ ಜತೆಗೆ ಹಿಂದಿ ಭಾಷೆಯ ಪ್ರವೀಣ್‌-ಪಾರಂಗತ್‌ ಮುಂತಾದ ಪರೀಕ್ಷೆಗಳನ್ನು ಕಟ್ಟಿ ಉತ್ತೀರ್ಣರಾಗಿ ಹಿಂದಿಯಲ್ಲೂ ಪಾಂಡಿತ್ಯ ಗಳಿಸಿಕೊಂಡರು.

ಇದರ ಬೆನ್ನಿಗೇ ಶುರುವಾದ ಭಾರತದ ಸ್ವಾತಂತ್ರ್ಯ ಚಳುವಳಿಗೆ ಧುಮುಕಿ ಜೈಲುವಾಸವನ್ನು ಅನುಭವಿಸಿ ಬಂದರು. ನಂತರದ ದಿನಗಳಲ್ಲಿ ಚಿಕ್ಕಮಗಳೂರು-ಕೊಣನೂರು-ಬಸವಾಪಟ್ಟಣಗಳಲ್ಲಿ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ಹಿಂದಿ ಮೇಷ್ಟು ಎಂದೇ ಬಿರುದಾಂಕಿತರಾದರು. ಈ ನಡುವೆಯೇ ಕಟ್ಟೀಪುರದ ಹಿರಿಯಣ್ಣಯ್ಯ-ಅಮ್ಮಯ್ಯಮ್ಮ ದಂಪತಿಗಳ ಸುಪುತ್ರಿಯಾದ ರುಕ್ಮಿಣಿಯೊಂದಿಗೆ ವಿವಾಹವೂ ಆಯಿತು.

ಈ ಕೃಷ್ಣ-ರುಕ್ಮಿಣಿ ದಂಪತಿಗಳಿಗೆ ಐವರು ಮಕ್ಕಳು: ವಿಜಯಲಕ್ಷ್ಮಿ, ನಳಿನಾಂಬಾ, ವಿಜಯರಾಘವ ಕುಮಾರ, ಶ್ರೀನಿವಾಸ ಪ್ರಭು ಹಾಗೂ ಪದ್ಮಿನಿ.

ಐವರಲ್ಲಿ ನಾನು ನಾಲ್ಕನೆಯವನು. ತಂದೆಯವರು ಶಾಲಾ ಶಿಕ್ಷಕರಾಗಿ ಹಲವಾರು ವರ್ಷ ಸೇವೆ ಸಲ್ಲಿಸಿದರೂ ಅವರ ಪಾರ್ಟ್‌ ಟೈಂ ಸೇವೆಯನ್ನು ಫುಲ್‌ ಟೈಂ ಆಗಿ ಪರಿವರ್ತನೆ ಮಾಡಲೇ ಇಲ್ಲ ಆಗಿನ ಅಧಿಕಾರಿ ವರ್ಗ! ಸ್ವಾತಂತ್ರ್ಯದ ಶೈಶವದಲ್ಲೇ ಬೇರು ಬಿಡತೊಡಗಿದ್ದ ವಶೀಲಿ-ಭ್ರಷ್ಟತೆ-ಜಾತೀಯತೆಯ ಅವಲಕ್ಷಣಗಳ ಪರಿಚಯ ತಂದೆಯವರಿಗೆ ಚೆನ್ನಾಗಿಯೇ ಆಗಿತ್ತು. ನಿಮ್ಮ ಹಂಗೇ ಬೇಡ ಎಂದವರೇ ಕೆಲಸಕ್ಕೆ ರಾಜಿನಾಮೆ ಕೊಟ್ಟು ಅಂಗಡಿ ವ್ಯಾಪಾರ ಶುರುಮಾಡಿದರು.

ಜತೆಗೆ ಸಹಧರ್ಮಿಣಿಯ ಪ್ರೋತ್ಸಾಹದ ಬೆಂಬಲ ಇದ್ದೇ ಇತ್ತು. ಅವರದು ಒಂದೇ ಹಂಬಲ: ನನ್ನ ಮಕ್ಕಳು ವಿದ್ಯಾವಂತರಾಗಬೇಕು! ಪಟ್ಟಣದಲ್ಲಿ ದೊಡ್ಡ ಕಾಲೇಜುಗಳಲ್ಲಿ ಓದಿ ಹೆಸರು ಗಳಿಸಬೇಕು! ವಿದ್ಯೆಯ ಹಂಬಲ ರಕ್ತಗತವಾಗೇ ಬಂದಿತ್ತಲ್ಲ! ಹಾಗಾಗಿಯೇ ಬೆಂಗಳೂರಿಗೆ ಬರಲು ಅವರು ಮನಸ್ಸು ಮಾಡಿದ್ದು. ಈ ಮೇಲೆ ಹಿರಿಯಕ್ಕ ವಿಜಯಲಕ್ಷ್ಮಿಯ ವಿವಾಹ ರಾಮಪ್ಪನವರ ಜೇಷ್ಠ ಪುತ್ರ ನಾಗರಾಜರೊಂದಿಗೆ ನೆರವೇರಿತ್ತು. ನನ್ನ ತಂದೆಯವರ ಬೆಂಗಳೂರಿಗೆ ಬರುವ ಕನಸು ನನಸಾಗುವುದರಲ್ಲಿ ನಾಗರಾಜ್‌ ಭಾವನವರ ಪಾತ್ರ ವಿಶೇಷವಾದ್ದು.

ಆದರೆ ನಾಲ್ಕೂ ಮಕ್ಕಳನ್ನು ಒಟ್ಟಿಗೆ ಕರೆದುಕೊಂಡು ಹೋಗಿ ಅಲ್ಲಿ ಅತಂತ್ರರಾಗಿಬಿಟ್ಟರೆ! ಅದಕ್ಕೆ ಮೊದಲು ನಳಿನಿ, ಕುಮಾರ-ಇಬ್ಬರನ್ನೂ ಕರೆದುಕೊಂಡು ಹೋಗುವುದು; ನಂತರ ಪರಿಸ್ಥಿತಿ ಸುಧಾರಿಸುತ್ತಿದ್ದಂತೆ ನನ್ನನ್ನೂ ಪದ್ಮಿನಿಯನ್ನೂ ಕರಕೊಂಡು ಹೋಗುವುದೆಂದು ತೀರ್ಮಾನವಾಯಿತು. ನನ್ನ ತಾಯಿಯ (ರುಕ್ಮಿಣಿ) ಚಿಕ್ಕಮ್ಮನಿಗೆ ಮಕ್ಕಳಿರಲಿಲ್ಲ. ಚಿಕ್ಕಪ್ಪ ರಾಮರಾಯನಿಗೆ ಮಕ್ಕಳೆಂದರೆ ಪ್ರಾಣ. ‘ರುಕ್ಕಾ, ಒಂದು ಮಗೂನ ನಾವು ಬೆಳೆಸಿಕೊಡ್ತೀವಿ, ಕೊಡೇʼ ಎಂದು ಅಂಗಲಾಚಿದರು. ಹೀಗೆ ರುಕ್ಮಿಣಿ-ಸುಬ್ರಹ್ಮಣ್ಯ ಶಾಸ್ತ್ರಿಗಳ ನಾಲ್ಕನೇ ಸಂತಾನವಾದ ನಾನು ಕೊಣನೂರಿನ ಶಾಮರಾಯ-ತಿಮ್ಮಯ್ಯ ಚಿಕ್ಕುವಿನ ಆಶ್ರಯಕ್ಕೆ ಹೋದೆ…

ಮಸಕುಚಿತ್ರಗಳು

ಬಸವಾಪಟ್ಟಣ ಕೆಳ ಬೀದಿಯಲ್ಲಿ ನಮ್ಮ ಮನೆ. ಬಹುಶಃ ಸ್ಕೂಲ್‌ ಗೆ ರಜೆ ಇತ್ತು ಎಂತಲೋ ಏನೋ ನಾನು ಕೊಣನೂರಿನಿಂದ ಬಸವಾಪಟ್ಟಣಕ್ಕೆ ಬಂದಿದ್ದೆ. ಜಗಲಿಯ ಮೇಲೆ ನನ್ನದೇ ಲೋಕದಲ್ಲಿ ವಿಹರಿಸಿಕೊಂಡು ಗೋಲಿಯೋ ಬುಗುರಿಯೋ ಎಂಥದ್ದೋ ಒಂದು ಆಡಿಕೊಳ್ಳುತ್ತಿದ್ದೆ. ಕುಮಾರಣ್ಣಯ್ಯನ ಸಂಭ್ರಮದ ಧ್ವನಿ ಕೇಳಿಸಿತು: ‘ಅಣ್ಣ ಬಂದ್ರು ಅಣ್ಣ ಬಂದ್ರು…ʼ ನೋಡಿದರೆ ನನ್ನ ತಂದೆ ಕೈಲಿ ಚೀಲ ಹಿಡಿದು ಬರುತ್ತಿದ್ದಾರೆ! ಅಣ್ಣಯ್ಯ ಅವರನ್ನು ಅಪ್ಪಿಕೊಂಡು ಸಂಭ್ರಮಿಸಿಕೊಂಡು ಬರುತ್ತಿದ್ದಾನೆ.

ಅಣ್ಣಯ್ಯನ ಧ್ವನಿ ಕೇಳಿ ಒಳಗಿದ್ದ ಅಮ್ಮ ಅಕ್ಕಂದಿರೂ ಓಡಿ ಹೋಗಿ ಅಣ್ಣನನ್ನು ತಬ್ಬಿಕೊಂಡರು. ನಾನು ಏನು ಮಾಡುವುದೆಂದು ತೋಚದೆ ಪೆಚ್ಚಾಗಿ ಹಾಗೇ ನಿಂತಿದ್ದೆ. ‘ಹೇಳದೆ ಕೇಳದೆ ಎಷ್ಟು ದಿನ ಹೋಗಿಬಿಟ್ಟಿದ್ರಿ… ಎಷ್ಟು ಕಷ್ಟ ಆಯ್ತು ಗೊತ್ತಾ ಇಲ್ಲಿʼ ಎಂದು ಬಿಕ್ಕುತ್ತಾ ಅಮ್ಮ ಅಣ್ಣನ ಕೈಲಿದ್ದ ಚೀಲ ತೆಗೆದುಕೊಂಡು ಒಳ ನಡೆದರು. ಅಣ್ಣಯ್ಯ – ಅಪ್ಪಂದಿರನ್ನು ಹಿಂಬಾಲಿಸಿಕೊಂಡು ನಾನೂ ಒಳಹೋದೆ.

ತಂದೆಯವರು ಆಗಾಗ್ಗೆ ಹೀಗೆ ಯಾರಿಗೂ ಹೇಳದೆ ಮನೆ ಬಿಟ್ಟು ಹೊರಟು ಬಿಡುತ್ತಿದ್ದರಂತೆ. ಹೆಚ್ಚಿನಂಶ ಅವರು ಹೋಗುತ್ತಿದ್ದುದು ಗಾಣಗಾಪುರಕ್ಕೆ. ಮೊದಲಿನಿಂದಲೂ ಅವರಿಗೆ ಸನ್ಯಾಸಿಯಾಗುವ ಹಂಬಲ! ಈ ಬಾರಿಯೂ ಹಾಗೆಯೇ ಸಂಸಾರದ ಬಂಧ ಕಡಿದುಕೊಂಡು ಹೊರಟೇಬಿಟ್ಟಿದ್ದರು. ನಮ್ಮ ಕುಟುಂಬದ ಅದೃಷ್ಟ ಗಟ್ಟಿಯಿತ್ತು ಎಂದು ತೋರುತ್ತದೆ-ಗಾಣಗಾಪುರದಲ್ಲಿ ಅವಧೂತ ಶಿಶು ಸ್ವಾಮಿಗಳು ತಂದೆಯವರಿಗೆ ‘ಸನ್ಯಾಸಕ್ಕಿನ್ನೂ ಕಾಲಮಾಗಿಲ್ಲ, ಹೋಗಿ ಸಂಸಾರಧರ್ಮ ನಿರ್ವಹಿಸುʼ ಎಂದು ಬುದ್ಧಿ ಹೇಳಿ ಮನೆಗೆ ಕಳಿಸಿದರಂತೆ.

ಹಜಾರದಲ್ಲಿ ಎಲ್ಲರೂ ಅಣ್ಣನನ್ನು ಸುತ್ತುವರೆದು ಕುಳಿತಿದ್ದರು. ಖುಷಿ-ದುಃಖ-ದುಮ್ಮಾನ-ಸಿಟ್ಟುಗಳೆಲ್ಲವೂ ಮಿಳಿತಗೊಂಡಂಥ ಒಂದು ಭಾವ ಎಲ್ಲರಲ್ಲಿತ್ತು. ಎಲ್ಲಕ್ಕಿಂತ ‘ಸಧ್ಯ, ಮನೆಗೆ ಬಂದರಲ್ಲʼ ಎಂಬ ಸಮಾಧಾನದ ನಿಟ್ಟುಸಿರು.

ನಾನು ಕಂಬಕ್ಕೆ ಒರಗಿ ನಿಂತಿದ್ದವನು ಹಾಗೇ ಎಲ್ಲರನ್ನೂ ನೋಡುತ್ತಿದ್ದೆ. ಅಣ್ಣನ ದೃಷ್ಟಿ ನನ್ನ ಮೇಲೆ ಹರಿಯಿತು. ಪ್ರಭು ಯಾವಾಗ ಬಂದ ಕೊಣನೂರಿಂದ? ಎಂದು ಬಳಿಗೆ ಕರೆದುಕೊಂಡರು. ‘ಸ್ಕೂಲಿಗೆ ರಜೆ ಇತ್ತು, ಬಂದೆʼ ಎಂದು ತೊದಲಿದೆ. ಅಣ್ಣನನ್ನು ಕಂಡರೆ ಏನೋ ಒಂದು ರೀತಿಯ ಭಯ ನನಗೆ.

ಹಾಗಂತ ಅವರು ಎಂದೂ ನನ್ನನ್ನು ಗದರಿದವರಲ್ಲ. ಏಟು ಕೊಟ್ಟವರಲ್ಲ. ಆದರೂ ನನಗೆ ಭಯ. ಭಯ ಅನ್ನುವುದಕ್ಕಿಂತ ಒಂದು ರೀತಿಯ ಅಪರಿಚಿತ ಭಾವನೆ ಅನ್ನಬಹುದೇನೋ… ಕೊಣನೂರಿಗೆ ಚಿಕ್ಕಜ್ಜ-ಅಜ್ಜಿಯರ ಮನೆಗೆ ನನ್ನನ್ನು ಬಾಲ್ಯದಲ್ಲಿ ಕಳಿಸಿದ್ದೇ ಕಾರಣವಾಗಿ, ನನ್ನ ಮನೆಯವರ ಜತೆ ಬೆಳೆಯಬೇಕಿದ್ದ ಒಂದು ಮಧುರ ಬಾಂಧವ್ಯ ಟಿಸಿಲೊಡೆಯಲೇ ಇಲ್ಲ.

ಮನೆಯವರು ನನಗೆ ಏನನ್ನೂ ಕಮ್ಮಿ ಮಾಡಿದವರಲ್ಲ. ಹಾಗೆ ನೋಡಿದರೆ ಬೇರೆ ಕಡೆ ಬೆಳೆಯುತ್ತಿದ್ದಾನೆ ಎಂಬ ಕಾರಣಕ್ಕೆ ತುಸು ಹೆಚ್ಚಾಗಿಯೇ ನನ್ನನ್ನು ಮುದ್ದಿಸುತ್ತಿದ್ದರು. ಆದರೆ ನನಗೇ ಯಾಕೋ ಹೊಂದಿಕೊಳ್ಳಲೇ ಆಗಲಿಲ್ಲ. ಯಾರದೋ ಮನೆಗೆ ಬಂದಿದ್ದೇನೆ ಅಂತಲೇ ಅನ್ನಿಸುತ್ತಿತ್ತು ನನಗೆ. ತಂದೆ-ತಾಯಿ-ಒಡಹುಟ್ಟಿದವರ ಜೊತೆಯಲ್ಲೇ ಬಾಲ್ಯದ ಮುಗ್ಧ-ನವುರು ಕ್ಷಣಗಳನ್ನು ಕಳೆಯಲು ಸಾಧ್ಯವಾಗದ ಎಲ್ಲ ಎಳೆಯ ಮನಸ್ಸುಗಳ ದುರಂತ ಇದೇ ಎಂದು ತೋರುತ್ತದೆ.

ಬೆಳೆಯುತ್ತಿರುವ ಚಿಕ್ಕಜ್ಜನ ಮನೆ ನನ್ನದಲ್ಲ ಎಂಬ ಅರಿವು ಇದ್ದುದರಿಂದ ಅಲ್ಲಿ ಪೂರ್ಣರೂಪದಲ್ಲಿ ಹೊಂದಿಕೊಳ್ಳಲಾಗಲಿಲ್ಲ. ದೂರವೇ ಇದ್ದುದರಿಂದ ಮನೆಯವರೊಂದಿಗೆ ಬಂಧ ಬೆಸೆಯಲಿಲ್ಲ. ಭಾವನಾತ್ಮಕವಾಗಿ ನನ್ನ ಎಳೆಯ ಮನಸ್ಸು ಅತಂತ್ರಗೊಂಡಿದ್ದು ಈಗಲೂ ನಾನು ಪರಿತಪಿಸಿಕೊಳ್ಳುವ ಸಂಗತಿ.

‘ಚೆನ್ನಾಗಿ ಓದ್ತಾ ಇದ್ದಾನಾ ಪ್ರಭು ಅಲ್ಲಿʼ? ಅಂದರು ಅಣ್ಣ. ಅಮ್ಮ ಹೂಂ ಎಂದು ತಲೆಯಾಡಿಸಿದರು. ಯಾರೋ ಒಂಥರಾ ಅನಿಸಿತು. ‘ಆಟಕ್ಕೆ ಹೋಗ್ತೀನಿʼ ಅಂತ ಜೇಬಿನಲ್ಲಿ ಗೋಲಿಗಳನ್ನು ಕೈಗೆ ತೆಗೆದುಕೊಳ್ಳುತ್ತಾ ಹೊರಗೋಡಿದೆ.

‍ಲೇಖಕರು Avadhi

May 27, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

  1. ಬಿ.ಸುರೇಶ

    ನನ್ನ ಗುರುಗಳು, ರಂಗಭೂಮಿ ಮೇಷ್ಟ್ರು ಆದ ಶ್ರೀನಿವಾಸಪ್ರಭು ಅವರಿಗೆ ಸಕ್ಷೇಮ ನಮಸ್ಕಾರಗಳು.
    ನಿಮ್ಮ ಬರಹ ಓದುವುದೇ ಆನಂದ. ನಿಮ್ಮ ಬರಹಕ್ಕೆ ಇರುವ ಓದಿಸಿಕೊಳ್ಳುವ ಗುಣ ಗಮನಿಸಿದರೆ ನೀವ್ಯಾಕೆ ನಿರಂತರವಾಗಿ ಬರೆಯಲಿಲ್ಲ ಎಂಬ ಪ್ರಶ್ನೆ ಹುಟ್ಟುತ್ತದೆ.
    ಬರೆಯಿರಿ. ನಿಮ್ಮ ಬದುಕಿನ ಬಗ್ಗೆ ಮಾತ್ರ ಅಲ್ಲ, ರಂಗಸಿದ್ಧಾಂತಗಳ ಬಗ್ಗೆ, ರಂಗಪ್ರದರ್ಶನಗಳ ಬಗ್ಗೆ… ಹೀಗೆ, ನಿಮ್ಮ ಕಣ್ಣಿಗೆ ತಾಗಿದ ಎಲ್ಲಾ ವಿಷಯದ ಬಗ್ಗೆ ಬರೆಯುತ್ತಾ ಇರಿ.
    ನಮಗೆ ಓದುವ ಆನಂದ ಕೊಡುತ್ತಿರಿ.
    – ಬಿ. ಸುರೇಶ

    ಪ್ರತಿಕ್ರಿಯೆ
  2. Ravikumar S B

    “ಬೆಳೆಯುತ್ತಿರುವ ಚಿಕ್ಕಜ್ಜನ ಮನೆ ನನ್ನದಲ್ಲ ಎಂಬ ಅರಿವು ಇದ್ದುದರಿಂದ ಅಲ್ಲಿ ಪೂರ್ಣರೂಪದಲ್ಲಿ ಹೊಂದಿಕೊಳ್ಳಲಾಗಲಿಲ್ಲ. ದೂರವೇ ಇದ್ದುದರಿಂದ ಮನೆಯವರೊಂದಿಗೆ ಬಂಧ ಬೆಸೆಯಲಿಲ್ಲ. ಭಾವನಾತ್ಮಕವಾಗಿ ನನ್ನ ಎಳೆಯ ಮನಸ್ಸು ಅತಂತ್ರಗೊಂಡಿದ್ದು ಈಗಲೂ ನಾನು ಪರಿತಪಿಸಿಕೊಳ್ಳುವ ಸಂಗತಿ.” – ಮಕ್ಕಳನ್ನು ಬೇರೆಡೆ- ಓದಿಸುವುದಕ್ಕೋ ಅಥವಾ ಇನ್ನಾವುದೋ ಕಾರಣಕ್ಕೋ- ಬಿಟ್ಟಿರುವ ಎಲ್ಲ ಪೋಷಕರೂ ಯೋಚಿಸುವಂತೆ ಮಾಡುವ ಮಾತುಗಳು. ಲೇಖನ ಓದಿಸಿಕೊಂಡು ಹೋಗುತ್ತದೆ ಸರ್, ಅಭಿನಂದನೆಗಳು. ನಿಮ್ಮಿಂದ ಇನ್ನೂ ಹೆಚ್ಚಿನ ನಿರೀಕ್ಷೆಯಲ್ಲಿದ್ದೇನೆ.

    ಪ್ರತಿಕ್ರಿಯೆ
  3. ನಂಜುಂಡ ಕುಮಾರ್

    ಸುಂದರ, ಸರಳ ನಿರೂಪಣೆ. ನಿಮ್ಮ ಅಂಕಣ ಬಹಳ ಚೆನ್ನಾಗಿ ಮೂಡಿಬಂದಿದೆ. ಮುಂದಿನ ಅಂಕಣಕ್ಕೆ ಕಾತುರದಿಂದ ಕಾಯುತ್ತಿದ್ದೇನೆ. ಧನ್ಯವಾದಗಳು.

    ಪ್ರತಿಕ್ರಿಯೆ
  4. Dr.m Shivalingaiah

    Very interesting,waiting for next episode feels like oh have to wait,but will read all episodes…very heartly humble humane person’s life story…

    ಪ್ರತಿಕ್ರಿಯೆ
  5. Ch satyanarayana bhat

    ತುಂಬ ಸೊಗಸಾಗಿ ಮೂಡಿ ಬಂದಿದೆ.. ಮುಂದಿನ ಕಂತುಗಳನ್ನು ಆಸ್ವಾದಿಸಲು ಆಸಕ್ತ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: