ಖ್ಯಾತ ನಟಿ ರಂಜನಿ ರಾಘವನ್ ಕಥಾ ಅಂಕಣ- #ENGLISHಕೃಷ್ಣ

ಕನ್ನಡ ಕಿರು ತೆರೆಯ ಮಹತ್ವದ ಕಲಾವಿದರ ಪಟ್ಟಿಯಲ್ಲಿ ರಂಜನಿ ರಾಘವನ್ ಅವರ ಹೆಸರು ಇದ್ದೇ ಇದೆ. ಕಿರುತೆರೆ ವಲಯದಲ್ಲಿ brainy ಎಂದೇ ಗುರುತಿಸಲ್ಪಡುವ ರಂಜನಿ ಅವರಿಗೆ ಓದು ಮೆಚ್ಚಿನ ಹವ್ಯಾಸ. ಸದ್ಯದ ಅತಿ ಹೆಚ್ಚು ಯಶಸ್ಸು ಕೊಟ್ಟ ಧಾರಾವಾಹಿ ‘ಕನ್ನಡತಿ’.

ಸೆಟ್ ನಲ್ಲಿಯೂ ಒಂದಿಲ್ಲೊಂದು ಪುಸ್ತಕ ಹಿಡಿದು ಹಾಜರಾಗುವ ರಂಜನಿಯವರ ಬಗ್ಗೆ ಉಳಿದವರದ್ದು ಅಚ್ಚರಿಯ ಕಣ್ಣು. ಈಗಾಗಲೇ ಹಲವು ಸಾಹಿತ್ಯ ಸಮಾರಂಭಗಳಲ್ಲಿ ಅತಿಥಿಯಾಗಿ ಓದುಗರ, ಬರಹಗಾರರ ಮನ ಗೆದ್ದಿರುವ ಇವರು ಈಗ ಇನ್ನೊಂದು ಹೊಸತಿಗೆ ತಮ್ಮನ್ನು ಒಡ್ಡಿಕೊಳ್ಳುತ್ತಿದ್ದಾರೆ.

ಬಿಬಿಎಂಪಿ ಪಾರ್ಕ್ ನ ಕಬ್ಬಿಣದ ಬೇಲಿಯಿಂದ ಒಳಗೆ ಒಂದು ಹಳೇ ಟೆನ್ನಿಸ್ ಬಾಲು ಉರುಳುರುಳಿಕೊಂಡು ಕಾಲುದಾರಿಯವರೆಗೆ ಬಂದಿತು. ಸ್ಫೋರ್ಟ್ಸ್ ಶೂಸ್ ಹಾಕಿಕೊಂಡಿದ್ದ ವ್ಯಕ್ತಿ ಅದನ್ನು ಕೈಗೆತ್ತಿಕೊಂಡು ಸುತ್ತ ನೋಡಿದ. ಪಕ್ಕದ ರಸ್ತೆಯಲ್ಲಿ ಆಗಷ್ಟೇ ಕಾಮಗಾರಿ ಶುರುವಾಗಿರುವ ಕಟ್ಟಡದ ಮುಂದೆ ಮರಳಿನ ರಾಶಿಯ ಮೇಲೆ ನಿಂತಿದ್ದ ಐದಾರು ವರ್ಷದ ಕಪ್ಪು ಬಾಲಕ ಯಾವ ಭಾವನೆಯೂ ಇಲ್ಲದೆ ನೋಡುತ್ತಾ ನಿಂತಿದ್ದ. ಬಾಲ್ ಎತ್ತಿಕೊಂಡ ವ್ಯಕ್ತಿ ‘Is this ball yours?’ ಅಮೇರಿಕನ್ ಅಕ್ಸೆಂಟ್ ನಲ್ಲಿ ಕೇಳಿದ.

ಹುಡುಗ ಏನನ್ನೂ ಹೇಳದೇ ಬಾಲ್ ಅನ್ನು ಕೊಡುವ ಹಾಗೆ ಕೈಚಾಚಿದ್ದ ಆ ವ್ಯಕ್ತಿಯ ಹತ್ತಿರ ಓಡಿಬಂದ. ಮುಗ್ಧ ಮುಖ, ಬಟ್ಟಲ ಕಣ್ಣುಗಳಿಗೆ ಉದ್ದುದ್ದ ರೆಪ್ಪೆಗಳು, ಕೆದರಿದ ಕೂದಲುಗಳಿಂದ ತುಂಟನ ಹಾಗೆ ಕಾಣುತ್ತಿದ್ದ ಬಾಲಕನನ್ನು ನೋಡಿ ‘hey! I am Ben. What’s your name?’ ಮುಗುಳ್ನಗುತ್ತಾ ಕೇಳಿದ. ಕೆಂಪುಮುಖ ಕೆಂಚು ಕೂದಲ ವ್ಯಕ್ತಿಯನ್ನು ಹುಡುಗ ವಿಚಿತ್ರವಾಗಿ ನೋಡುತ್ತಾ ನಿಂತಾಗ ಅವನ ತಾಯಿ ‘ಏ ಮಲ್ಲೇಶ ಇಲ್ ಬಾ’ ಎಂದು ಕೂಗಿದಳು. ಮಲ್ಲೇಶ ಬಾಲ್ ಇಸಿದುಕೊಂಡು ವಾಪಸ್ ಓಡಿದವನು ಕಟ್ಟಡದ ಪಕ್ಕ ಇಟ್ಟಿಗೆಯಿಂದ ಮಾಡಿದ್ದ ಸಣ್ಣ ಕೋಣೆಯಂಥ ಮನೆಯೊಳಗೆ ಓಡಿಹೋದ. ರಾಣಿ ತಟ್ಟೆಗೆ ಖಡಕ್ ರೊಟ್ಟಿ ಹಾಕಿ ಮಗನಿಗೆ ಕೊಟ್ಟು ತಲೆಮೇಲೆ ಸಿಂಬಿ ಇಟ್ಟುಕೊಂಡು ಕೆಲ್ಸಕ್ಕೆ ಹೊರಟಳು.

ಇಡೀ ದಿನ ಮಲ್ಲೇಶನ ತಂದೆ ತಾಯಿ ಗಾರೆಕೆಲಸ ಮಾಡಿದರೆ, ಐದು ವರ್ಷದ ಮಲ್ಲೇಶ ಕಟ್ಟಡದ ಮುಂದಿನ ಮರಳಿನ ರಾಶಿ ಮೇಲೆ ಆಟವಾಡುತ್ತಾ, ಪಾರ್ಕಿಗೆ ಬಂದವರನ್ನು ನೋಡುತ್ತಾ ಕಾಲ ಕಳೆಯುತ್ತಿದ್ದ. ಬಣ್ಣ ಕಪ್ಪಿದ್ದರೂ ಅವನ ಮುಖದ ಆಕರ್ಷಣೆಗೆ ಒಂದುಕ್ಷಣ ನೋಡಿದವರು ಮತ್ತೊಮ್ಮೆ ಅವನನ್ನು ತಿರುಗಿ ನೋಡುತ್ತಿದ್ದರು. ಪಾರ್ಕಿನಲ್ಲಿ ಬೆಳಗ್ಗೆ ಸಂಜೆ ವೃದ್ಧರು ಲಾಫಿಂಗ್ ಕ್ಲಬ್ ಸೇರಿ ಒಟ್ಟಿಗೆ ಕೃತಕವಾಗಿ ನಗುತ್ತಿದ್ದರೆ ಅವರನ್ನು ನೋಡಿ ತಾನೂ ಕಿಲಕಿಲ ಎಂದು ನಗುತ್ತಿದ್ದ. ರಾಂಗ್ ಟೈಮಿಂಗ್ ನಲ್ಲಿ ನಕ್ಕು ಈ ತರ್ಲೆ ಹುಡುಗ ಅವರ ನಿಜವಾದ ನಗುವಿಗೆ ಕಾರಣನಾಗುತ್ತಿದ್ದ.

ಸಾಯಂಕಾಲ ಟೀ ಕುಡಿಯುತ್ತಾ ಕೂತಿದ್ದ ಮೇಸ್ತ್ರಿ ಮುಂದೆ ಮಲ್ಲೇಶನ ತಾಯಿ ತಂದೆ ಕೂಲಿಗಾಗಿ ಕೈಕಟ್ಟಿಕೊಂಡು ನಿಂತಿದ್ದರು. ಮಲ್ಲೇಶ ಬುರ್ ಎಂದು ಬಾಯಲ್ಲಿ ಶಬ್ದ ಮಾಡುತ್ತಾ, ಕೈಯಲ್ಲಿ ಮರದ ಕೋಲನ್ನು ಹ್ಯಾಂಡಲ್ ನ ಹಾಗೆ ಹಿಡಿದುಕೊಂಡು ಬೈಕು ಬಿಡುವವನಂತೆ ಅಲ್ಲಲ್ಲೇ ತಿರುಗುತ್ತಿದ್ದ. ‘ನಿನ್ ಮಗ ನಾನ್ ಕಾರ್ ಆಚೆ ತೆಗೀವಾಗ್ಲೆಲ್ಲ ಓಡ್ ಬಂದು ಗೇಟ್ ತೆಗೀತಾನೆ ಬಸಪ್ಪ’ ಮೇಸ್ತ್ರಿ ದುಡ್ಡೆಣಿಸುತ್ತಾ ಹೇಳಿದಾಗ ‘ಸಹಾಯ ಮಾಡ್ಬೇಕು ಅಂತೇನಿಲ್ರಿ ಅವಂಗೆ ಗೇಟಿನ ಮೇಲೆ ಹತ್ತಿ ಕಾಲಿಂದ ತಳ್ಳಿದಾಗ ಅದು ಮುಂದಕ್ಕೆ ಹೋಗೋದು ಆಟ ಆಗ್ಬಿಟೈತಿ’ ಮಲ್ಲೇಶನ ಕಿವಿಹಿಂಡಿ ಅವನ ತುಂಟಾಟದ ಬಗ್ಗೆ ಬಸಪ್ಪ ತಮಾಷೆ ಮಾಡಿದ. ‘ಪಾಪ ಒಂದೇ ಹುಡುಗ ತನ್ನ ಪಾಡಿಗೆ ತಾನು ಆಟವಾಡಿಕೊಂಡಿರುತ್ತೆ, ಶಾಲೆಗೆ ಹೋಗೋ ವಯಸ್ಸು ಆಗಿದೆ, ಹುಡುಗನನ್ನು ಸ್ಕೂಲಿಗೆ ಸೇರ್ಸಿ’ ಮೇಸ್ತ್ರಿಯ ಮಾತಿಗೆ ‘ಹೌದ್ರಿ, ಇಂಗ್ಲಿಸ್ ಮೀಡಿಯಂ ನಾಗ್ ಸೇರಿಸ್ಬೇಕಂತ ಮಾಡೀನ್ರಿ’ ಅಂತ ರಾಣಿ ಹೆಮ್ಮೆಯಿಂದ ಹೇಳಿದಳು.

ಬೆಂಗಳೂರಿನಲ್ಲಿ ಕೂಲಿ ಕೆಲ್ಸ ಮಾಡಿಕೊಂಡು ಮಗುವನ್ನು ಒಳ್ಳೇ ಶಾಲೆಗೆ ಸೇರಿಸೋಕಾಗುತ್ತಾ ಅನ್ನೋದು ಬಸಪ್ಪನ ಭಯವೂ ಆಗಿತ್ತು. ಎಲ್ಲಿ ಕೇಳಿದ್ರು ಲಕ್ಷಗಟ್ಟಲೆ ಹಣ ಕೇಳ್ತಾರೆ ಅಂತ ಹೆಂಡತಿಗೆ ಹೇಳಿದ್ರೂ ಆ ಮಾತನ್ನು ಅವಳು ಕಿವಿ ಮೇಲೇ ಹಾಕಿಕೊಳ್ಳುವವಳಲ್ಲ. ಆದರೂ ನೆಟ್ವರ್ಕ್ ಬೆಳ್ಸಿಕೊಳ್ಳೋದು ಹೆಣ್ಮಕ್ಕಳಷ್ಟು ಗಂಡಸರಿಗೆ ಬರೋದಿಲ್ಲ ಅನ್ನೋದನ್ನು ರಾಣಿ ಸಾಬೀತುಪಡಿಸಿದಳು.

ಬಸಪ್ಪ ಕಾರ್ ತೊಳೆಯೋದಕ್ಕೆ ಹೋಗೋ ಮನೆಯ ಓನರ್ ಹೆಂಡತಿಯನ್ನು ಪರಿಚಯ ಮಾಡಿಕೊಂಡು ಅವರ ಮನೆ ಕೆಲ್ಸಕ್ಕೆ ಸೇರಿ ಕೆಲವೇ ದಿನಗಳಲ್ಲಿ ‘ನನ್ ಮಗ ತುಂಬಾ ಶಾಣೀರಿ, ಕಮ್ಮಿ ಫೇಸ್ ನಾಗ ಬರೋಬ್ಬರಿ ಇಂಗ್ಲಿಸ್ ಶಾಲಿ ಇದ್ರ ಹೇಳ್ರಿ ಆಂಟಿ’ ಎಂದು ಕೇಳಿ ಅವಳ ಶಾಣಿ ಮಾತಿಂದ ಪಕ್ಕದ ಏರಿಯಾದಲ್ಲಿ ಇದ್ದ ಇಂಗ್ಲೀಷ್ ಮಿಡಿಯಮ್ ಶಾಲೆಯೊಂದರ ಬಗ್ಗೆ ಅವರಿಂದ ವಿವರ ಪಡೆದುಕೊಂಡು ಬಂದೇಬಿಟ್ಟಳು.

ಮಲ್ಲೇಶ ಮರಳ ರಾಶಿ ಮೇಲೆ ತನ್ನ ಎಳೇ ಕಾಲನ್ನು ಇಟ್ಟು, ಅದರ ಮೇಲೆ ಮರಳನ್ನು ತುಂಬಿ ಎತ್ತರದ ಗೋಪುರ ಮಾಡಿ, ಮೆಲ್ಲಗೆ ಕಾಲನ್ನು ತೆಗೆದ ಮರಳಿನ ಗುಡ್ಡ ಬಿದ್ದು ಹೋಯಿತು, ಛಲ ಬಿಡದೆ ಪದೇ ಪದೇ ಅದನ್ನೇ ಮಾಡುತ್ತಿದ್ದ. ಎಲ್ಲಿಗೋ ಹೋಗುತ್ತಿದ್ದ ಬೆನ್, ಮಲ್ಲೇಶನನ್ನು ಗಮನಿಸಿ ಹತ್ತಿರ ಬಂದ. ಮಲ್ಲೇಶ ಮರಳಿನ ಗೂಡನ್ನು ಕಟ್ಟುವುದಕ್ಕೆ ಕಷ್ಟಪಡುತ್ತಿದ್ದಾನೆಂದು ಅರ್ಥಮಾಡಿಕೊಂಡು ತಾನು ಸಹಾಯಕ್ಕೆ ನಿಂತ. ‘Hey kid! let me help you’ ಮಲ್ಲೇಶ ಮಾಡಿದ್ದ ಮರಡಿನ ಗುಡ್ಡದಿಂದ ಅವನ ಕಾಲನ್ನು ಹಿಡಿದು ಮೆಲ್ಲಗೆ ಹೊರತೆಗೆದ. ಆಗ ಗೂಡು ಒಡೆಯಲಿಲ್ಲ. ಮರಳಿನಲ್ಲಿ ಸುಂದರವಾದ ಕಪ್ಪೆ ಗೂಡು ನಿರ್ಮಿತವಾಗಿದ್ದನು ನೋಡಿ ಮಲ್ಲೇಶನ ಮುದ್ದಾದ ಕಪ್ಪುಮುಖದಲ್ಲಿ ಬಿಳೀ ಹಲ್ಲುಗಳು ಹೊಳೆದವು.

ಪ್ರತಿದಿನ ಬೆಳಗ್ಗೆ ಪಾರ್ಕಿಗೆ ವ್ಯಾಯಾಮ ಮಾಡಲು ಬರುತ್ತಿದ್ದ ಬೆನ್ ಮಲ್ಲೇಶನನ್ನು ಮಾತನಾಡಿಸದೇ ಹೋಗುತ್ತಿರಲಿಲ್ಲ. ಒಂದು ದಿನ ಡ್ರಾಯಿಂಗ್ ಪುಸ್ತಕ, ಸ್ಕೆಚ್ ಪೆನ್ ತಂದುಕೊಟ್ಟು ಮಲ್ಲೇಶನಿಗೆ ಬಣ್ಣ ತುಂಬಲು ಹೇಳಿಕೊಟ್ಟ. ಸಣ್ಣಗೆ ಉದ್ದಕ್ಕೆ ನರಪೇತಲನ ಹಾಗೆ ಇದ್ದ ಬಿಳೀ ವಿದೇಶೀಯ ಆಗಾಗ ಬಂದು ತನ್ನ ಮಗನನ್ನು ಪ್ರೀತಿಯಿಂದ ಮಾತನಾಡಿಸ್ತಿದ್ದು ನೋಡಿ ರಾಣಿಗೆ ಆಶ್ಚರ್ಯವಾಗುತ್ತಿತ್ತು. ಮೂವತ್ತೈದು ವರ್ಷದ ಬೆನ್ ಮತ್ತು ಐದು ವರ್ಷದ ಮಲ್ಲೇಶನ ಸ್ನೇಹಕ್ಕೆ ಭಾಷೆ, ವಯಸ್ಸು, ಬಣ್ಣಗಳ್ಯಾವುವೂ ಅಡ್ಡಿಯಾಗಲೇ ಇಲ್ಲ. ಇಬ್ಬರ ಒಡನಾಟದಿಂದ ಮಲ್ಲೇಶ ಬೆನ್ ನ ಹಾಗೆ ಇಂಗ್ಲೀಷ ವಾಕ್ಯಗಳನ್ನು ತನ್ನ ತೊದಲ ಮಾತಿನಲ್ಲಾಡಲು ಶುರುಮಾಡಿದ. ಎಲ್ಲರಿಗೂ ಸೋಜಿಗವೆನಿಸಿದ್ದು ಅವನ ಇಂಗ್ಲೀಷಗಿಂತ ಮಲ್ಲೇಶನ ಬಾಯಲ್ಲಿ ಬೆನ್ ನ ಥರವೇ ಅಮೇರಿಕನ್ ಆಕ್ಸೆಂಟ್ ಬಂದಿದ್ದುದ್ದಕ್ಕೆ!

ʻಏನ್ ರಾಣಿ ನಿನ್ ಮಗ ಸ್ಕೂಲಿಗ್ ಹೋಗೋಕ್ ಮೊದ್ಲೇ ಈ ಪಾಟಿ ಇಂಗ್ಲಿಶ್ ಮಾತಾಡ್ತಾನೆ, ಇನ್ನು ಓದಿ ದೊಡ್ಡೋನಾದ್ಮೇಲೆ ನಿನ್ನ ನಿಜವಾಗ್ಲೂ ರಾಣಿ ಹಾಗೇ ನೋಡಿಕೊಳ್ತಾನೆ ಬಿಡುʻ ಓನರ್ ಆಂಟಿ ಬಾಯಿಮಾತಿಗೆ ಹಾಗೆ ಅಂದಿದ್ದರೋ ಏನೋ ಮಾತನ್ನು ರಾಣಿ ಮಾತ್ರ ತನ್ನ ಮಗನ ಭವಿಷ್ಯದ ಕನಸ್ಸನ್ನು ಸಾಕಾರಗೊಳಿಸಲು ಮೊದಲ ಹೆಜ್ಜೆ ಇಟ್ಟೇಬಿಟ್ಟಳು. ಹೊಸಾ ವರ್ಷ ಶುರುವಾಗುತ್ತಿದ್ದಂತೇ ಶಾಲೆಗಳಲ್ಲಿ ಅಡ್ಮಿಶನ್ಸ್ ಶುರುವಾಗಿದೆ ಅಂತ ತಿಳಿದುಕೊಂಡು ಬಂದ ರಾಣಿ ಗಂಡನಿಗೆ ದುಂಬಾಲು ಬಿದ್ದಳು. ʻಇಲ್ಲೇ ಹತ್ತಿರದಲ್ಲಿ ಗೌರ್ಮೆಂಟ್ ಶಾಲಿಗ್ ಹಚ್ಚೋಣ ರಾಣಿ. ನಮ್ ಕೈಲಿರೋ ಕಾಸ್ ಅವನ್ ಇಂಗ್ಲಿಸ್ ಶಾಲಿಗ್ ಸಾಕಾಗಲ್ಲʼ ಬಸಪ್ಪನ ಯೋಚನೆಗೆ ರಾಣಿಯ ಅಪ್ಪಣೆ ದೊರೆಯಲಿಲ್ಲ.

ಇರುವುದರಲ್ಲಿ ಒಳ್ಳೇ ಬಟ್ಟೆ ತೊಟ್ಟು ಓನರ್ ಆಂಟಿ ಹೇಳಿದ್ದ ಶಾಲೆಗೆ ಬಸಪ್ಪ ಮತ್ತು ರಾಣಿ ಮಗನನ್ನು ಕರೆದುಕೊಂಡು ಹೋದರು. ಒಂದನೇ ತರಗತಿಗೆ ಸೇರಿಸಿಕೊಳ್ಳಿ ಅಂತ ಕೇಳಿದಾಗ ವರ್ಷಕ್ಕೆ ಹದಿನೈದು ಸಾವಿರ ಫೀಸು, ಆದ್ರೆ ಈಗ ಡೊನೇಶನ್ ಮೂವತ್ತು ಸಾವಿರ ಕಟ್ಟಬೇಕು, ಏಪ್ರಿಲ್ ಒಳಗೆ ಕಟ್ಟಿದ್ರೂ ಸಾಕು ಅಂತ ಹೇಳಿ ಕಳಿಸಿದರು. ಮನೆಗೆ ಮರಳಿದ ಗಂಡ ಹೆಂಡತಿ ಟ್ರಂಕ್ ನಲ್ಲಿ, ಡಬ್ಬಿಯಲ್ಲಿ ಜೇಬಿನಲ್ಲಿದ್ದ ಹಳವನ್ನೆಲ್ಲಾ ಒಟ್ಟುಗೂಡಿಸಿ ಎಣಿಸಿ ನೋಡಿದರೂ ನಾಲ್ಕುಸಾವಿರ ದಾಟಲಿಲ್ಲ. ʻನಾನ್ ಇನ್ನೆರಡು ಮನೆ ಕೆಲ್ಸ ಜಾಸ್ತಿ ಮಾಡ್ತೀನ್ರಿ, ನೀವು ಬ್ಯಾರ್ ಬ್ಯಾರೆ ಕೆಲ್ಸ ಹಚ್ಕೋರಿ, ಎರಡೂವರಿ ತಿಂಗಳಿನಾಗ್ ರೊಕ್ಕಾ ಕೂಡ್ಸೋಣ.’ ಗಂಡನ ಮುಂದೆ ರಾಣಿ ಸಂಕಲ್ಪಾ ಮಾಡೇಬಿಟ್ಟಳು.

ಕಸ್ತೂರಿ ತಿಲಕಂ ಲಲಾಟ ಪಲಕೇ ವಕ್ಷಸ್ಥಲೇ ಕೌಸ್ತುಭಂ
ನಾಸಾಗ್ರೇ ನವಮೌಕ್ತಿಕಂ ಕರತಲೇ ವೇಣುಂ ಕರೇ ಕಂಕಣಂ
ಸರ್ವಾಂಗೇ ಹರಿಚಂದನಂ ಸುಲಲಿತಂ ಕಂಠೇಚ ಮುಕ್ತಾವಲಿಂ
ಗೋಪಸ್ತ್ರೀ ಪರಿವೇಷ್ಠಿತೋ ಗೋಪಾಲ ಚೂಡಾಮಣಿಃ

‘ಶ್ರೀಕೃಷ್ಣನು ಹಣೆಯ ಮೇಲೆ ಕಸ್ತೂರಿ ತಿಲಕವನ್ನೂ, ಎದೆಯ ಮೇಲೆ ಕೌಸ್ಥುಭ ಮಣಿಯನ್ನು, ನವ ಮೌಕ್ತಿಕ ಆಭರಣವನ್ನು ಮೂಗಿಗೆ ಧರಿಸಿದ್ದಾನೆ, ಕೊಳಲನ್ನು ಹಿಡಿದಿರುವ ಕೈಗಳಿಗೆ ಕಂಕಣವನ್ನೂ ತೊಟ್ಟಿದ್ದಾನೆ. ಕತ್ತಿಗೆ ಸುಂದವಾದ ಹಾರವನ್ನು ಧರಿಸಿ ಅವನ ಸರ್ವಾಂಗವೂ ಚಂದನದ ಘಮಸೂಸುವುದು, ಕೃಷ್ಣನ ವರ್ಣ ಕಪ್ಪು, ಲಕ್ಷಣವಾದ ಮುಖ, ಸಣ್ಣ ತುಟಿ ಅವನನ್ನು ನೋಡಿದರೆ ಕಣ್ಣಿಗೆ ಮನಸ್ಸಿಗೆ ಆನಂದ..’ ಇಸ್ಕಾನಿನ ವಿಶಾಲವಾದ ಪ್ರವಚನ ಮಂದಿರದಲ್ಲಿ ಪ್ರಭುಗಳು ಜೇನು ತುಪ್ಪ ಸವಿದಂತೆ ಹಸನ್ಮುಖರಾಗಿ ಶ್ರೀ ಕೃಷ್ಣನ ವರ್ಣನೆ ಮಾಡುತ್ತಿದ್ದರೆ ಅದರಲ್ಲಿ ಪಾಲ್ಗೊಂಡಿದ್ದ ಬೆನ್ ಗೆ ಕಪ್ಪು ಮುಖ ದೊಡ್ಡ ಕಣ್ಣುಗಳ ಮಲ್ಲೇಶನೇ ನೆನಪಾಗುತ್ತಿದ್ದ. ಆಧ್ಯಾತ್ಮ ಚಿಂತನೆಯಲ್ಲಿ ತೊಡಗಿಸಿಕೊಂಡು, ವಾಲಂಟಿಯರ್ ಆಗಿದ್ದ ಬೆನ್ ಗೆ ಕೃಷ್ಣನ ಆ ಸುಂದರ ರೂಪವನ್ನು ಕಣ್ತುಂಬಿಕೊಳ್ಳುವ ಹಂಬಲವುಂಟಾಗಿ, ಒಂದು ಯೋಚನೆ ಬಂದಿತು.

ಮಲ್ಲೇಶನನ್ನು ಅಂದೇ ಭೇಟಿಯಾಗಿ ‘Let me try something new’ ಉತ್ಸಾಹದಲ್ಲಿ ಹೇಳಿದ. ಮನೆಯೊಳಗೆ ಕರೆದುಕೊಂಡು ಅವನ ಚಡ್ಡಿಗೆ ಕೈ ಹಾಕಿದಾಗ ಮಲ್ಲೇಶ ‘ಏನ್ರಿ ಮಾಡ್ತಿದ್ದೀರ ಅಂಕಲ್’ ಭಯದಲ್ಲಿ ಚೀರಿದ. ‘I will do a makeover to you’ ತನ್ನ ಬ್ಯಾಗ್ ನಿಂದ ಪಂಚೆ, ಮುತ್ತಿನ ಹಾರಗಳು, ಲಿಪ್ ಸ್ಟಿಕ್, ನವಿಲುಗರಿಯನ್ನು ಹೊರತೆಗೆದಾಗ ಮಲ್ಲೇಶನಿಗೆ ಅದೇನೋ ಹೊಸದಾಗಿ ಕಂಡು ಅವನ ಎಕ್ಸ್ಪೆರಿಮೆಂಟ್ ಗೆ ರೆಡಿ ಆದ. ಬೆನ್ ಮೇಕಪ್ ಮಾಡಿ ಹಣೆಗೆ ಕಸ್ತೂರಿ ತಿಲಕವಿಟ್ಟು, ಬಟ್ಟೆ ಹಾಕಿ, ಜುಟ್ಟು ಕಟ್ಟಿ, ಕೊನೆಗೆ ನವಿಲುಗರಿ ಸಿಕ್ಕಿಸಿದಾಗ ಮಲ್ಲೇಶ ಬಹಳ ಮುದ್ದಾದ ಕಷ್ಣನಾಗಿ ಮಾರ್ಪಾಟಾಗಿದ್ದ.

‘ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ…’ ‘I am coming, I am coming, where there is a loss of religion, I am coming to protect the gentlemen, to destroy the wicked..’ ಕೈಯಲ್ಲಿ ವಿಷ್ಣು ಚಕ್ರ ಹಿಡಿದಿರುವಂತೆ ನಿಲ್ಲಿಸಿ ಬೆನ್ ಭಗವದ್ಗೀತೆಯ ಶ್ಲೋಕವನ್ನು ಸಾರಾಂಶದ ಜೊತೆ ಹೇಳಿಕೊಟ್ಟ. ಬೆನ್ ಹೇಳಿದ ಸ್ಟೈಲ್ ನಲ್ಲಿ ಮಲ್ಲೇಶನೂ ರಿಪೀಟ್ ಮಾಡಿದ. ಬೆನ್ ಸಂತೋಷದಿಂದ ಅದನ್ನು ತನ್ನ ವಿಡಿಯೋ ತನ್ನ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಅಪ್ಲೋಡ್ ಮಾಡಿದ.

‘ರಾಣಿ ಬಾ ನೋಡು ಇಲ್ಲಿ, ನಿನ್ ಮಗ ಎಲ್ಲಾ ಕಡೆ ಫ಼ೇಮಸ್ ಆಗೋಗಿದ್ದಾನೆ’ ಓನರ್ ಆಂಟಿ ತನ್ನ ಮಗಳ ಫೋನ್ ತೋರಿಸುತ್ತಾ ಹೇಳಿದರು. ಹ್ಯಾಶ್ ಟ್ಯಾಗ್ ಇಂಗ್ಲಿಷ್ ಕೃಷ್ಣ ಹೆಸರಲ್ಲಿ ಕಪ್ಪು ಕೃಷ್ಣ ಫ಼ಾರಿನ್ನರ ಆಕ್ಸೆಂಟ್ ನಲ್ಲಿ ಭಗವದ್ಗೀತೆ ಶ್ಲೋಕದ ಸಾರಾಂಶವನ್ನು ಹೇಳಿದ್ದು ಇಂಟರ್ನೆಟ್ ನಲ್ಲಿ ವೈರಲ್ ಆಗಿಬಿಟ್ಟಿತ್ತು. ಹಾಶ್ ಟ್ಯಾಗ್ ಇಂಗ್ಲಿಷ್ ಕೃಷ್ಣನನ್ನು ಮಾತುಗಳಿಗೆ ಲಿಪ್ ಸಿಂಕ್ ಮಾಡಿದ ರೀಲ್ಸ್ ಗಳು ಕೆಲವೇ ದಿನಗಳಲ್ಲಿ ಮಿಲ್ಲಿಯನ್ ಗಟ್ಟಲೆ ವೀಕ್ಷಣೆ ಪಡೆದುಕೊಂಡಿತು.

ಮೀಡಿಯಾದವರು ಮನೆಹುಡುಕಿಕೊಂಡು ಬಂದಾಗ ಓನರ್ ಆಂಟೀನೆ ಮುಂದೆ ನಿಂತು ನಮ್ಮ ಮನೆ ಕೆಲ್ಸದ ಮಗು ಬಹಳ ಬುದ್ಧಿವಂತ ಅಂತ ನ್ಯೂಸ್ ಚಾನೆಲ್ ಗಳಿಗೆ ಬೈಟ್ಸ್ ಕೊಟ್ಟಳು. ತಂದೆ ತಾಯಿಯನ್ನು ಮಾತನಾಡಿಸಲು ಮೈಕ್ ಮುಂದೆ ಹಿಡಿದಾಗ ‘ನಾವು ರೀ… ಆ.. ದು..’ ಬಸಪ್ಪನ ಕಾಲು ನಡುಗುತ್ತಿದ್ದರೆ, ರಾಣಿಗೆ ಗಂಟಲಲ್ಲೇ ಮಾತು ನಿಂತುಹೋಯಿತು.

‘ಕೂಲಿ ಕಾರ್ಮಿಕರ ಮಗ ಇಂದು ಜನಗಳ ಮುದ್ದಿನ ಕೃಷ್ಣ’. ‘ಮಲ್ಲೇಶನ ಕುಟುಂಬ ಮೂಲತಃ ಹೊಸಪೇಟೆಯ ಅರಳೀಹಳ್ಳಿಯವರು. ಊರಿನಲ್ಲಿ ತಮ್ಮ ಜಮೀನು ಭಾಗವಾದಮೇಲೆ ವ್ಯವಸಾಯಕ್ಕಿಂತ ಬೆಂಗಳೂರಿನಲ್ಲಿ ಕೂಲಿ ಕೆಲ್ಸದಲ್ಲಿ ಹೆಚ್ಚು ಆದಾಯವಿದೆ ಎಂದು ನಿರ್ಧರಿಸಿ ಬೆಂಗಳೂರಿಗೆ ಬಂದವರು. ಉತ್ತರ ಕರ್ನಾಟಕದ ಮಲ್ಲೇಶ ಇಂದು ಇಂಟರ್ನೆಟ್ ನ ಇಂಗ್ಲೀಷ್ ಕೃಷ್ಣನಾದ ಕತೆಯನ್ನು ಇಂದು ನೋಡೋಣ ಬನ್ನಿ’ ನ್ಯೂಸ್ ಚಾನೆಲ್ ನ ನಿರೂಪಕಿ ಬಣ್ಣ‌ ಬಣ್ಣವಾಗಿ ಹೇಳಿದ ಎಪಿಸೋಡು ಎಲ್ಲಿಲ್ಲದ ಟಿಆರ್‌ ಪಿ ಕಂಡಿತ್ತು.

ಓನರ್ ಆಂಟಿ ಮನೇಲಿ ಯಾವಾಗಲೂ ನೆಲದ ಮೇಲೆ ಕೂರುತ್ತಿದ್ದ ರಾಣಿ ಸೋಫಾ ಮೇಲೆ ಕೂತು ತಮ್ಮ ಮಗನ ಪ್ರೋಗ್ರಾಮನ್ನು ಟಿವಿಯಲ್ಲಿ ನೋಡುತ್ತಾ ಉಬ್ಬಿಹೋದಳು. ಊರಿಂದ ಫೋನ್ ಮೇಲೆ ಫೋನುಗಳು. ‘ನಿನ್ ಮಗನನ್ನ ಟಿವೀಲ್ ನೋಡ್ದೆ’, ‘ನೀನು ನಿನ್ ಗಂಡಾ ಭಾಳ್ ಚಲೋ ಮಾತಾಡಿದ್ರಿ ನೋಡ್ರಿ’. ‘ಇಡೀ ದಿನ ರಾಣಿಗೆ ಫೋನ್ ಮಾತಾಡೋದು, ಮಗನನ್ನು ಅಲ್ಲಿ ಇಲ್ಲಿ ಅವರಿವರು ಕಳಿಸಿದ ಕಾರಿನಲ್ಲಿ ಇಂಟರ್ವ್ಯೂವ್ ಗೆ ಹೋಗಿ ಬರೋದು ಇದೇ ಕೆಲ್ಸವಾಯಿತು’.

ನಮ್ಮ ಅದೃಷ್ಟದ ಬಾಗಿಲು ತೆರೀತು ಅಂತ ರಾಣಿ ಹಗಲುಗನಸು ಕಾಣುತ್ತಿದ್ದುದು ಅರಿವಾಗಲು ಹೆಚ್ಚಿನ ಸಮಯ ಬೇಕಾಗಲಿಲ್ಲ. ಒಂದೆರಡು ವಾರ ಕಳೀತಿದ್ದ ಹಾಗೆ ಮನೆ ಹುಡುಕಿಕೊಂಡು ಬರೋ ಜನ ಕಮ್ಮಿಯಾದ್ರು. ನನ್ ಮಗನ್ನ ನ್ಯೂಸ್ ಮಾಡೋಕೆ ಯಾರೂ ಬರ್ತಿಲ್ವಲ್ಲ? ಮತ್ತೆ ಟಿವಿಲಿ ಏನ್ ಹಾಕ್ತಿದ್ದಾರೆ? ಏನೂ ತೋಚದೆ ರಾಣಿ ಟಿವಿ ನೋಡಲು ಓನರ್ ಆಂಟಿಯ ಮನೆಕದ ತಟ್ಟಿದಳು. ‘ಏನು ಮೂರ್ ದಿನದಿಂದ ಕೆಲ್ಸಕ್ಕೆ ಬರ್ತಿಲ್ಲ?, ನಾನ್ ಬೇರೇವ್ರನ್ನ ನೋಡಿಕೊಳ್ಳೋದಾ?’. ‘ಏ ಹಂಗೇನಿಲ್ರಿ’… ಮೂಲೇಲಿದ್ದ ಪೊರಕೆಯನ್ನು ಕೈಗೆತ್ತಿಕೊಂಡು ಕಸಗುಡಿಸಲು ಶುರು ಮಾಡಿದಳು.

ಆಂಟಿ ಒಳಗೆ ಹೋದ್ಮೇಲೆ ಮೆಲ್ಲಗೆ ಟಿವಿ ಸ್ವಿಚ್ ಹಾಕಿದಾಗ ‘ಟಿಕ್ ಟಾಕ್ ಮಾಡೋ ಹುಡುಗಾ ಹುಡುಗಿ ಮನೆಯವರ ವಿರೋಧದ ಮಧ್ಯೆ ಮದುವೆಯಾದರು’ ಅಂತ ಬೇರೆ ಯಾವುದೋ ಸುದ್ದಿ ಹಬ್ಬಿತ್ತು. ಇಷ್ಟು ದಿನ ತನ್ನ ಮಗನನ್ನ ಮೆರೆಸಿದ್ದವರು ಈಗ ಬೇರೆಯಾರನ್ನೋ ತೋರಿಸುತ್ತಿದ್ದನ್ನು ನೋಡಿ ಸಿಟ್ಟು,‌ ಹೊಟ್ಟೆ ಕಿಚ್ಚು ಸಂಕಟ ಎಲ್ಲವೂ ಒಟ್ಟೊಟ್ಟಿಗೆ ಬಂದುವು. ಏನೂ ಮಾಡಲು ತೋಚದೆ ಕಸಗುಡಿಸುವುದನ್ನು ಮುಂದುವರೆಸಿದಳು.

‘ಮೇಡಮ್ ನನ್ ಮಗ ಬಾಳ್ ಫೇಮಸ್ ರೀ, ಟಿವಿನಾಗ ಬಂದಿದ್ದ ನೋಡಿಲ್ಲೇನ್ರೀ?’ ದೊಡ್ಡದಾಗಿ ಕಣ್ಣುಬಿಟ್ಟುಕೊಂಡು ಪ್ರಿನ್ಸಿಪಾಲರಿಗೆ ಹೇಳಿದಾಗ ‘ನಾನು ಟಿವಿ ಮೊಬೈಲ್ ನೆಲ್ಲಾ ತುಂಬಾ ನೋಡಲ್ಲಮ್ಮ’. ನಮ್ ಸ್ಟಾಫ್ ಹೇಳಿದ್ದಾರಂತಲ್ಲ? ಫೇಸ್ ಬಗ್ಗೆ. ಮೂವತ್ತು ಸಾವ್ರ ಡೊನೇಶನ್ ಕಟ್ಟಿ, ಸಮಯ ಜಾಸ್ತಿ ಇಲ್ಲ ಬೇಗ ಕಟ್ಲಿಲ್ಲ ಅಂದ್ರೆ ಸೀಟು ಸಿಗಲ್ಲ’ ಇತ್ತೀಚೆಗೆ ನನ್ನ ಮಗನನ್ನು ಸಾಧಾರಣ ಅನ್ನೋಹಾಗೆ ಮಾತನಾಡಿರೋದನ್ನ ಕೇಳಿ ಗೊತ್ತಿಲ್ಲದ ರಾಣಿಗೆ ಈ ಮಾತು ಕಬ್ಬಿಣದ ಕಡಲೆಯಂತಾಗಿತ್ತು. ಏನು ಮಾಡೋದು? ಇಂಗ್ಲಿಶ್ ಮೀಡಿಯಮ್ ಸೇರಿಸೋಕ್ ಮುಂಚೇನೇ ನನ್ ಮಗ ಅಷ್ಟ್ ಚೆನ್ನಾಗಿ ಇಂಗ್ಲೀಷ್ ಕಲ್ತಿದ್ದ! ಅವನಿಗೂ ಒಂದ್ ಚೂರು ಡಿಸ್ಕೌಂಟ್ ಕೊಡಲ್ಲ ಅಂತಾರಲ್ಲ ಅಂತ ಬೈದುಕೊಂಡು ಹೊರಬಂದಳು. ಬಡವನ ಕೋಪ ದವಡೆಗೆ ಮೂಲ ಅನ್ನೋ ಹಾಗೆ ಅವಳ ಕೋಪದಿಂದ ಒಂದು ರೂಪಾಯಿ ಫೇಸೂ ಕಮ್ಮಿಯಾಗ್ಲಿಲ್ಲ.

ಒಂದೂವರೆ ತಿಂಗಳಿನಿಂದ ಟಿವಿ ಇಂಟರ್‌ ವ್ಯೂವ್ ಅದು ಇದೂ ಅಂತ ಓಡಾಡಿ ಕೆಲ್ಸ ಕಾರ್ಯಗಳಿಗೆ ಚಕ್ಕರ್ ಹೊಡೆದು ರಾಣಿ ಬಿಡುಗಾಸು ಸಂಪಾದಿಸಿರಲಿಲ್ಲ. ಈಗ ಒಂದೇ ವಾರದಲ್ಲಿ ಮಗನ ಫೇಸು ಹೊಂದಿಸೋ ಭಾರ ತಲೆಯ ಮೇಲೆ ದೊಡ್ಡ ಬಂಡೆಯ ಹಾಗೆ ಬಿದ್ದಿತು. ಅದೇ ಯೋಚನೆಯಲ್ಲಿ ಮನೆಗೆ ಬಂದಳು.

ʻಅವ್ವ ಇದ್ ನೋಡು, ಬೆನ್ ಅಂಕಲ್ ಕೊಟ್ಟಿದ್ದು’ ಮಲ್ಲೇಶ ಕೈಲೊಂದು ಆಟಿಕೆಯ ಕೊಳಲನ್ನು ಪೀಪೀ ಅಂತ ಊದುತ್ತಾ ಬಂದ. ರಾಣಿಗೆ ತಕ್ಷಣ ತಮ್ಮ ಊರಿನ ಹತ್ತಿರವಿರೋ ಹಂಪಿಗೆ ವಿದೇಶಿಯರು ಬಂದು ಜನರಿಗೆ ಸಹಾಯ ಮಾಡುತ್ತಿದ್ದುದ್ದು, ಅಂಗಡಿಯವರು ಆಟೋದವರು ಒಂದಕ್ಕೆ ನಾಲ್ಕರಷ್ಟು ಹಣವನ್ನು ಕೇಳಿದರೂ ಬೇಸರಿಸಿಕೊಳ್ಳದೆ ಕೊಡುತ್ತಿದ್ದುದು ನೆನಪಾಯಿತು. ನನ್ ಮಗನನ್ನು ಯಾವಾಗ್ಲು ಜೊತೆಯಲ್ಲಿಟ್ಟುಕೊಳ್ಳುತ್ತಾರೆ ಅಷ್ಟೆಲ್ಲಾ ದುಡ್ಡಿರೋರು ಇವ್ನ ಓದಿಗೆ ಸಹಾಯ ಮಾಡೋದಿಲ್ವಾ ಅನ್ನಿಸಿ ಮುಳುಗುತ್ತಿರೋನಿಗೆ ಹುಲ್ಲುಕಡ್ಡಿ ಸಿಕ್ಕಿದಂತಾಯಿತು. ʻಅವ್ರ್ ಮನಿ ಎಲ್ಲಿ ಮಗ’? ತಾಯಿ ಕೇಳಿದಕ್ಕೆ ಮಲ್ಲೇಶ್ ತೋರಿಸ್ತೀನಿ ಬಾ ಎಂದು ಕರೆದುಕೊಂಡು ಹೋದ.

ಅಮ್ಮನ ಕೈ ಹಿಡಿದು ಎರಡು ಓಣಿ ದಾಟಿ ದೊಡ್ಡ ರೋಡಿಗೆ ಬಂದ. ಸುತ್ತ ಎರಡು ಮೂರಂತಸ್ತಿನ ಮನೆಗಳನ್ನು ನೋಡಿ ರಾಣಿಯ ಭರವಸೆ ಹೆಚ್ಚಿತು. ಒಂದು ದೊಡ್ಡ ಮನೆಯ ಗೇಟ್ ತಳ್ಳಿ ಒಳಗೆ ಕರೆದುಕೊಂಡು ಹೋದ. ಎರಡು ಮಹಡಿ ಹತ್ತಿದ ಮೇಲೆ ಟೇರೇಸ್ ನ ಮೂಲೆಯಲ್ಲಿದ್ದ ಒಂದು ಸಿಂಗಲ್ ರೂಮ್ ನ ಮುಂದೆ ಕರೆದುಕೊಂಡು ಹೋಗಿ ‘ಅದೇ ನೋಡು’ ಎಂದ. ಬಾಗಿಲಿನ ಚಿಲಕ ಹಾಕುತ್ತಿದ್ದ ಬೆನ್ ಸ್ವಾಮೀಜಿಗಳ ಹಾಗೆ ಖಾದಿ ಜುಬ್ಬ ಪಂಚೆ ತೊಟ್ಟಿದ್ದ, ಹಣೆಗೆ ಗಂಧದ ನಾಮ, ಕೊರಳಿಗೆ ತುಳಸಿ ಮಾಲೆ, ತೋಳಿಗೆ ಒಂದು ಬಟ್ಟೆಯ ಜೋಳಿಗೆ ಹಾಕಿಕೊಂಡಿದ್ದ. ʻಹೈ ಬೆನ್, ಮೈ ಮದರ್ ಲೈಕ್ಡ್ ದಿ ಫ್ಲೂಟ್’.

ಒಂದು ಕ್ಷಣ ತನ್ನ ಲೆಕ್ಕಾಚಾರ ತಲೆಗೆಳಗಾಗಿದೆ ಅನ್ನಿಸಿದ್ರೂ ರಾಣಿ ಧೈರ್ಯ ತೆಗೆದುಕೊಂಡು ʻನಮಸ್ಕಾರ ಸರ್, ನೀವ್ ನನ್ ಮಗನಿಗೆ ಭಾಳ್ ದೋಸ್ತ್ ಅಂತ ತಿಳೀತ್ರಿ, ಶಾಲಿಗ್ ಸೇರ್ಸಾಕ್ ದುಡ್ಡಿಗ್ ಪ್ರಾಬ್ಲಮ್ ಆಗೈತ, ಸ್ವಲ್ಪ್ ಹೆಲ್ಪ್ ಮಾಡ್ರಿ ಅಂತ ಕೇಳಾಕ ಬಂದ್ನಿ’ ಕನ್ನಡ ಬಾರದ ಬೆನ್ ಗೆ ಉತ್ತರ ಕರ್ನಾಟಕದ ಭಾಷೆ ಅರ್ಥವಾಗೋದು ಇನ್ನೂ ಕಷ್ಟವಾದಾಗ ರಾಣಿ ‘ಮಲ್ಲೇಶ, ಸ್ಕೂಲ್, ಫೀಸ್, ಪ್ಲೀಸ್, ೩೦‌,೦೦೦ ರುಪೀಸ್’ ಅನ್ನೋ ಇಂಗ್ಲಿಷ್ ಪದಗಳನ್ನು ಬಳಸಿ ಅರ್ಥಮಾಡಿಸಲು ಪ್ರಯತ್ನಪಟ್ಟಳು. ಅವಳು ಕೈ ಮುಗಿದು ಕೇಳಿಕೊಂಡಾಗ ಬೆನ್ ಗೆ ಅರ್ಥವಾಯಿತು.

‘Ma’am I really wish i could help, but ನಾನು ಇಸ್ಕಾನ್ ನಲ್ಲಿ Volunteer, ನನ್ Job quit ಮಾಡಿ, ಕೃಷ್ಣ ಭಕ್ತ ಆಗಿ join ಮಾಡಿದ್ದೀನಿ..’ ಅಲ್ಪ ಸ್ವಲ್ಪ ಕನ್ನಡ ಬಳಸಿ ಬೆನ್ ಅಸಹಾಯಕ ಮುಖ ಮಾಡಿಕೊಂಡು ಮಾತನಾಡಿದಾಗ ಬಂದ ದಾರಿಗೆ ಸುಂಕವಿಲ್ಲ ಅನ್ನೋದು ರಾಣಿಗೆ ಅರ್ಥವಾಗಿತ್ತು. ‘But I shall try to do something’ ಬೆನ್ ಹೇಳಿದಾಗ ರಾಣಿ ಸರಿ ಎಂದು ಮಗನ ಕೈ ಜಗ್ಗಿ ಹೊರಟಳು.

‘ಟಸ್ ಪುಸ್ ಅಂತ ಬರೋಬ್ಬರಿ ಇಂಗ್ಲಿಸ್ ಮಾತಾಡ್ತಾನ ನನ್ ಮಗನ್ ಶಾಲಿಗ್ ಆಗೋಷ್ಟ್ ರೊಕ್ಕ ಸಂಪಾದ್ಸಿಲ್ಲ ಅವಾ’ ‘ಟಿವಿ ಮಂದಿ ನಿಮ್ ಮಗ ಹಂಗ್ ಆಗ್ತಾನ, ಹಿಂಗ್ ಆಗ್ತಾನ, ನಾವ್ ಶಪೋರ್ಟ್ ಮಾಡ್ತೀವ್ರಿ ಅಂತ ಹೇಳಿದ್ದಾ ಹೇಳಿದ್ದು, ನನ್ ಮಗನ್ನ ಹಳ್ಳಕ್ ತಳ್ಬಿಟ್ರೂ’ ಒಂದೇ ಸಮನೆ ಅಳುತ್ತಾ ರಾಣಿ ರೊಟ್ಟಿ ಬಡಿತಾ ಇದ್ಲು. ಅವಳ ಸಿಟ್ಟಿನ ಬಲಕ್ಕೆ ರೊಟ್ಟಿಗಳು ಎಂದಿಗಿಂತ ಹೆಚ್ಚು ತೆಳುವಾಗಿ ಬರುತ್ತಿತ್ತು. ಅಪ್ಪ ಮಗ ಅಕ್ಕ ಪಕ್ಕ ಕೂತು ಸದ್ದಿಲ್ಲದೆ ತಟ್ಟೇಲಿದ್ದುದನ್ನು ಹೊಟ್ಟೆಗೆ ಇಳಿಸಿಕೊಂಡರು.

ಜೂನ್ ಒಂದರಂದು ಕನ್ನಡ ಶಾಲೆಯಲ್ಲಿ ಒಂದನೇ ಕ್ಲಾಸಿನ ಮಕ್ಕಳು ಉತ್ಸಾಹದಲ್ಲಿ ಕೂತಿದ್ದರು. ಟೀಚರ್ ಮಲ್ಲೇಶನಿಗೆ ಎಲ್ರಿಗೂ ನಿನ್ ಪರಿಚಯ ಮಾಡಿಕೊಡು ಅಂತ ಹೇಳಿದಾಗ ‘ಐ ಆಮ್ ಹ್ಯಾಶ್ ಟ್ಯಾಗ್ ಇಂಗ್ಲಿಶ್ ಕೃಷ್ಣ, ಐ ಅಮ್ ಫೈವ್ ಇಯರ್ಸ್ ಓಲ್ಡ್’ ಅಂತ ಅದೇ ಅಮೇರಿಕನ್ ಆಕ್ಸೆಂಟ್ ನಲ್ಲಿ ಮಾತನಾಡಿದ ಹುಡುಗನನ್ನು ಎಲ್ಲರೂ ಬೆರಗಾಗಿ ನೋಡಿದರು.

‍ಲೇಖಕರು Admin

July 30, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

  1. Rajeshwari kamadhenu

    Nimma e kathegalu ondrakinta ondu different agi barutiddave .
    Nimma e kateyalli baru Krishana English Kaliyuva kutuhala idrall tumbane istavagide . halli makkala ondu parastiti ide tagide matte a hudugana kalikeya bagge tumbane hemme . Nimma e kathegalu hige munduvareyali madam .

    ಪ್ರತಿಕ್ರಿಯೆ
  2. Rajeshwari kamadhenu

    Nimma e kategalu huge munduvareyali madam . Prati shukravara kayutiruteve . Inti nimma abimani

    ಪ್ರತಿಕ್ರಿಯೆ
  3. ಅನಿತಾ ರಾವ್

    ರಂಜಿನಿ ಅವರೇ, ತುಂಬಾ ಚೆನ್ನಾಗಿತ್ತು . ಕೊನೆಗೆ ಕನ್ನಡವೇ ಗಟ್ಟಿ. ನಮ್ಮ ಭಾಷೆ ಬಿಟ್ಟು ಬೇರೆ ಏನೂ ಉಪಯೋಗಕ್ಕೆ ಬರೋಲ್ಲ… ಮೊಬೈಲ್, ಟಿವಿ, social media ಎಲ್ಲಾ ದಿಕ್ಕು ತಪ್ಪಿಸೋ ಅಂತದ್ದು. ಈ ಕತೆ ಓದಿದ ಮೇಲೆ ಅರ್ಥ ಆಗಬೇಕಾದ್ದು ಇದೆ.

    ಮತ್ತಷ್ಟು ಕತೆಗಳನ್ನು ಪ್ರಕಟಿಸಿ…ದೇವ್ರು ಒಳ್ಳೇದು ಮಾಡಲಿ ನಿಮಗೆ…

    ಪ್ರತಿಕ್ರಿಯೆ
  4. Iampriyapriyaa

    Neema kateu thumba sogasagi nimma kate hege munduvariyalli prati shukravara nimma katege kayutiruve…..♥️

    ಪ್ರತಿಕ್ರಿಯೆ
    • Anusha A R

      ಇದೆ ಮೊದಲ ಬಾರಿ ನಿಮ್ಮ ಸಣ್ಣ ಕಥೆ ಓದಿದೆ.. ಇಂಗ್ಲಿಷ್ ಕೃಷ್ಣ ನಿಜವಾಗಿಯೂ ಚೆನ್ನಾಗಿ ಮೂಡಿಬಂದಿದೆ.. ನಮ್ಮ ಕನ್ನಡ ನಮ್ಮ ಹೆಮ್ಮೆ…ನಿಜ ಜೀವನದಲ್ಲಿಯು ಕೂಡ ಬಡವರ ಪರಿಸ್ಥಿತಿ ಹೀಗೆ ಇರುತ್ತದೆ…ಹೀಗೆ ನಿಮ್ಮ ಕಥೆ ಮುಂದುವರಿಯಲಿ….. ಬರುವ ಶುಕ್ರವಾರಕ್ಕಾಗಿ ನಿಮ್ಮ ಕಥೆಗೆ ಕಾಯುತ್ತಿರುವೆ… ಶುಭವಾಗಲಿ

      ಪ್ರತಿಕ್ರಿಯೆ
  5. Pallavi

    Yaavyaava vishayagalannu heg hego kalpane maadikolluva badalu vaastavavannu artha madikondu adaraalada muttannu huduki tegeyabeku emba kalpaneya kathe manamuttuvantide

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: