ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಖುಷಿ ಮಂಕಾಗಿಸುವ ‘ಖುಷಿ ಕೇಳುವ’ ರೂಢಿ

ಡಾ ಪ್ರಿಯದರ್ಶಿನಿ ಶೆಟ್ಟರ್‌

ಯಾವುದೇ ಕಾರ್ಯಕ್ರಮ, ಸರಕಾರಿ ಕಚೇರಿಗಳಲ್ಲಿ ನಮ್ಮ ಕೆಲಸವಾದ ನಂತರ, ಸಭೆ – ಸಮಾರಂಭಗಳು ಪೂರ್ಣಗೊಂಡ ಮೇಲೆ ಕೆಲವೊಮ್ಮೆ ಕೆಲಸದವರು ‘ಖುಷಿ’ ಕೇಳುವುದನ್ನು ನೋಡಿರುತ್ತೇವೆ. ಅದರಲ್ಲೂ ಅಡುಗೆ ನೀಡುವವರು, ಪಾತ್ರೆ ತೊಳೆಯುವವರು, ಕಸ ಗುಡಿಸುವವರು ಕೇಳುವುದು ಸಾಮಾನ್ಯ. ಅವರು ಸರಿಯಾಗಿ ಕೆಲಸ ಮಾಡಿದಾಗ ನಮಗೆ ಇಷ್ಟವಾದರೆ ಸಂತೋಷದಿಂದ ಕೊಡುವುದೇನೋ ಸರಿ. ಆದರೆ ಯಾರಾದರೂ ಕೆಲಸದವರು ಅದನ್ನು ಡಿಮ್ಯಾಂಡ್ ಮಾಡಿ, ಏರು ಧ್ವನಿಯಲ್ಲಿ ಮಾತಾಡಿ, ಇಂತಿಷ್ಟು ಕೊಡಿ ಎಂದು ಕೇಳಿದರೆ ಅವಾಗ ಕಿರಿಕಿರಿ ಆಗೋದು ಸುಳ್ಳಲ್ಲ. ನನ್ನ ಅನುಭವಕ್ಕೆ ಬಂದ ಕೆಲವು ಸಂದರ್ಭಗಳನ್ನು ನೆನಪಿಸಿಕೊಂಡು ಬರೆದ ಲೇಖನವಿದು. 

ಮುಕ್ತಾಯದ ಹಂತ ತಲುಪುವ ಸಂದರ್ಭದಲ್ಲಿ ಈ ತರ ಕೆಲಸ ಮಾಡುವವರು ಎದುರಿಗೆ ಬಂದು ‘ಖುಷಿ ಕೊಡಿ’ ಅಂದಾಗ ಕೊಂಚ ಹಣವನ್ನು ಕೊಟ್ಟು ಕಳಿಸಬಹುದು. ಅವರದನ್ನು ಪಡೆದು ಸಂತೋಷದಿಂದ ಹೋದರೆ ಸರಿ. ಆದರೆ ಇತ್ತೀಚೆಗೆ ನಾನು ಗಮನಿಸಿದಂತೆ ಕೆಲವು ಕಛೇರಿಗಳಲ್ಲಿ ಕೆಳಗಿನ ಹಂತದ ನೌಕರರು, ಕೆಲಸದವರು, ಗೃಹ ಪ್ರವೇಶ, ಮದುವೆಯಂತಹ ಕಾರ್ಯಕ್ರಮಗಳಲ್ಲಿ ಬ್ಯಾಂಡ್ ಸೆಟ್ ನವರು, ಅಡುಗೆ ಮಾಡುವವರು, ನೀಡುವವರು, ಕಸ ಗುಡಿಸುವವರು, ಪಾತ್ರೆ ತೊಳೆಯುವವರು, ನೆಲ ಒರೆಸುವವರು, ಕೆಲವೊಮ್ಮೆ ಪಾರ್ಕಿಂಗ್ ವ್ಯವಸ್ಥೆ ಮಾಡುವವರು ಹೀಗೆ ಮಾಡಿದ ಕೆಲಸಕ್ಕಾಗಿ ಹೆಚ್ಚು ಹಣ ನಿರೀಕ್ಷಿಸುವುದು ನಮ್ಮನ್ನು ಮುಜುಗರಕ್ಕೀಡು ಮಾಡುತ್ತದೆ. ಬೀಗರನ್ನು ಎದುರುಗೊಳ್ಳುವ ಸಮಯದಲ್ಲಿ ಬ್ಯಾಂಡ್ ಸೆಟ್ ನವರು ಮದುವೆ ಹಾಲ್ ನಲ್ಲಿ ಖುಷಿ ಕೇಳಿ, ಕೊಟ್ಟಷ್ಟು ಪಡೆದು ಹೋದರೆ ಸರಿ. ಇಲ್ಲದಿದ್ದರೆ ಯಾರು ಏನು ಅಂದುಕೊಂಡಾರು ಅಂತ ಇನ್ನೂ ಸ್ವಲ್ಪ ಹಣ ಕೊಟ್ಟರೂ, ಅವರು ನಾವು ಇಷ್ಟು ಜನ ಇದ್ದೇವೆ ಅಷ್ಟು ಜನ ಇದ್ದೇವೆ ಅಂದಾಗ, ನಾವು ‘ಈಗ ಕೊಟ್ಟಿದ್ದನ್ನು ಎಲ್ಲರೂ ಖುಷಿಯಿಂದ ಹಂಚಿಕೊಳ್ಳಿ’ ಎಂದು ನಿರ್ದಾಕ್ಷಿಣ್ಯವಾಗಿ ಮುಖದ ಮೇಲೆ ಹೇಳಬೇಕಷ್ಟೆ. ನಮ್ಮ ಸಂಬಂಧಿಕರ ಮದುವೆಯ ದಿನ ಬೀಗರನ್ನು ಎದುರುಗೊಳ್ಳುವಾಗ ಬ್ಯಾಂಡ್ ಸೆಟ್ ನವರು ಖುಷಿ ಕೇಳಿದರು.  ಹೊಚ್ಚ ಹೊಸ ಬಟ್ಟೆಗಳಲ್ಲಿ ಮಿಂಚುತ್ತಿದ್ದ ವರನು ಕಿಸೆಗೆ ಕೈ ಹಾಕಿ ಹುಡುಕಿದರೆ ಅಲ್ಲೇನಿದೆ? ಖಾಲಿ ಕಿಸೆ! ತಕ್ಷಣ ವಧುವಿನ ಸಹೋದರ ಒಂದಿಷ್ಟು ಹಣವನ್ನು ಕಿಸೆಗೆ ತುರುಕಿದರು! ಆ ಹಣವು ನಮ್ಮ ಮುಜುಗರ ತಪ್ಪಿಸಿತ್ತು. ತಟ್ಟನೆ ಒಂದಿಷ್ಟು ಹಣ ಕೊಟ್ಟು ಅವರನ್ನು ಕಳಿಸಿದ್ದೆವು.

ಇತ್ತೀಚಿನ ದಿನಗಳಲ್ಲಿ ಎಲ್ಲವೂ ದುಬಾರಿಯಾದ ಹೊತ್ತಲ್ಲಿ, ಹೆಚ್ಚಾಗಿ ಖರ್ಚು ವೆಚ್ಚಗಳು ಆನ್ ಲೈನ್ ನಲ್ಲಿಯೇ ಆಗುತ್ತಿರುವುದರಿಂದ ಪರ್ಸ್ ಹಾಗೂ ಕಿಸೆಯಲ್ಲಿ ನೋಟುಗಳು, ನಾಣ್ಯಗಳು ಅಪರೂಪ ಎಂಬಂತಾಗಿದೆ. ಇಂತಹ ಸಂದರ್ಭದಲ್ಲಿ ಮೊದಲೇ ಮಾತಾಡಿ ಹಣ ಕೊಟ್ಟರೂ ಮತ್ತೂ ಕೇಳಿದರೆ ಕಿರಿಕಿರಿಯಾಗೋದು ಸಾಮಾನ್ಯ. ಕೆಲವು ವರ್ಷಗಳ ಹಿಂದೆ ಆರ್.ಟಿ.ಓ. ಆಫೀಸಿಗೆ ನಾನು ಮತ್ತು ನನ್ನ ತಂಗಿ ಮೇಘ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಹೋದಾಗ ನಮ್ಮ ಕೆಲಸಗಳೆಲ್ಲ ಮುಗಿದ ಮೇಲೆ ಮಹಿಳೆಯೊಬ್ಬಳು ಸಣ್ಣ ದನಿಯಲ್ಲಿ ಖುಷಿ ಕೇಳಿದಳು. ನಾನು ನನಗೇನೂ ಕೇಳಿಸಿಯೇ ಇಲ್ಲ ಎಂಬಂತೆ ಸುಮ್ಮನೆ ನಡೆದು ಬಂದೆ. ನನ್ನನ್ನು ಹಿಂಬಾಲಿಸಿ ಬಂದ ಮೇಘ “ಅವರೇನೋ ಕೇಳಿದರು” ಅಂದಳು. ಆಕೆ ಏನು ಕೇಳಿದಳೆಂದು ನಾನು ಇವಳಿಗೆ ಹೇಳಿ, ಖುಷಿ ರೂಪದಲ್ಲಿ ಲಂಚ ಕೇಳಿದ್ದನ್ನು ಹೇಳಿದೆ ಮತ್ತು ನಾವೀಗಾಗಲೇ ಈ ಕೆಲಸಕ್ಕೆ ಶುಲ್ಕ ಪಾವತಿಸಿದ್ದಕ್ಕೆ ಈಗ ಅಲಕ್ಷ್ಯ ಮಾಡಿದ್ದಾಗಿ ಹೇಳಿದೆ. 

ಮದುವೆ ರೆಜಿಸ್ಟರೇಶನ್ ಸಂದರ್ಭದಲ್ಲಿ ನನ್ನ ಪತಿ ಅವಿನಾಶ್ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದರು. ಅದು ಕೆಲವು ದಿನಗಳಲ್ಲಿ ಮುಗಿಯಬಹುದೆಂದು ಅಂದುಕೊಂಡಿದ್ದೆವು. ಆದರೆ ಒಂದು ತಿಂಗಳ ನಂತರ ವೆಬ್ ಸೈಟ್ ನಲ್ಲಿ ಆನ್ ಲೈನ್ ಅರ್ಜಿಗಳಿಗೆ ಸಂಬಂಧಿಸಿದಂತೆ ಏನೋ ಸಮಸ್ಯೆಯಾಗಿ ಆಫ್ ಲೈನ್ ಅರ್ಜಿಗಳನ್ನು ಭರ್ತಿ ಮಾಡಲು ಸೂಚನೆ ನೀಡಲಾಗಿತ್ತು. ನಾನು ಆಗ ಕಛೇರಿಗೆ ಹೋಗಿ ಫಾರ್ಮ್ ತುಂಬಿ, ಶುಲ್ಕ ಕಟ್ಟಿದ್ದೆ. ನಮಗೆ ಮ್ಯಾರೇಜ್ ರೆಜಿಸ್ಟರೇಶನ್ ಆಗುವುದು ಅರ್ಜೆಂಟ್ ಇದ್ದ ಕಾರಣ ನಾನು ಆಗಲೇ ಎರಡು ಮೂರು ಸಲ ಹೋಗಿ ಬಂದಿದ್ದೆ. ಅಂತೂ ಇಂತೂ ಒಂದು ದಿನ ನಿಗದಿಪಡಿಸಿ ಮಧ್ಯಾಹ್ನ ನಾವಿಬ್ಬರೂ, ಸಾಕ್ಷಿ ಎಂಬಂತೆ ಪಾಲಕರು, ನನ್ನ ತಂಗಿ ಎಲ್ಲರೂ ಹೋಗಿ ಸಹಿ ಹಾಕಿ ಕೆಲಸ ಮುಗಿಯಿತು ಅಂದುಕೊಂಡೆವು. ಆಗ ಅವರು ಸಂಜೆ ಐದೂವರೆ ನಂತರ ಬಂದು ಸರ್ಟಿಫಿಕೇಟ್ ಪಡೆಯಿರಿ ಅಂದರು. ನಾವಿಬ್ಬರೂ ಮತ್ತೆ ಸಂಜೆ ಹೋಗಿ ಅದನ್ನು ಪಡೆಯಲು ಕಾಯುತ್ತಿದ್ದೆವು. ಪ್ರಿಂಟ್ ಮಾಡಿ ಕೊಡುವಾತ ಎರಡು ಪ್ರತಿಗಳನ್ನು ಕೊಟ್ಟು ನಾಲ್ಕು ನೂರು ರೂಪಾಯಿ ಖುಷಿ ಕೇಳಿದ! ಅವಿನಾಶ್ ಅವರಿಗೆ ಅದು ನಾಲ್ಕು ರೂಪಾಯಿ ಅಂತ ಕೇಳಿಸಿತು. ಕೊಡಲು ಮುಂದಾದರು. ನಾನಾಗ ಆತ ಕೇಳಿದ್ದು ನಾಲ್ಕು ನೂರು ರೂಪಾಯಿಗಳು ಅಂದೆ. ಪ್ರಿಂಟ್ ಔಟ್ ಕೊಟ್ಟ. ನಾವದನ್ನು ಪಡೆದು ಇದಕ್ಕೆ ಈಗಾಗಲೇ ಹಣ ಪಾವತಿದ್ದನ್ನು ಹೇಳಿ, ಒಮ್ಮೆ ಆ ಸರ್ಟಿಫಿಕೇಟ್ ನೋಡಿದರೆ ಅಲ್ಲಿ ಯಾವುದೇ ಸಹಿ ಇರಲಿಲ್ಲ! ನಾನು ಗಲಿಬಿಲಿಗೊಂಡು “ಹಣ ಕೊಟ್ಟರೆ ಮಾತ್ರ ಸಹಿ ಆಗಬಹುದೇನೋ” ಅಂದೆ! ಇವರು ಮತ್ತೊಮ್ಮೆ ನೋಡಿ ಅಲ್ಲಿ ಡಿಜಿಟಲ್ ಸಹಿ ಇರುವುದರಿಂದ ಹಣ ಕೊಡುವುದು ಅವಶ್ಯವಿಲ್ಲ ಅಂದರು. ಮತ್ತೊಬ್ಬರನ್ನು ಕೇಳಿ ಖಾತ್ರಿ ಮಾಡಿಕೊಂಡು ಅಲ್ಲಿಂದ ಹೊರಟೆವು!

ಕೆಲ ದಿನಗಳ ಹಿಂದೆ ನನ್ನ ನಾದಿನಿಗೆ ಮಗುವಾದ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ನಾವಿದ್ದ ಕೊಠಡಿಗೆ ಬಂದ ಕೆಲಸದವಳೊಬ್ಬಳು “ಅಣ್ಣ ಖುಷಿ ಕೊಡ್ರಿ” ಅಂದಳು. ಬೆಳಿಗ್ಗೆ ಬೇಗ ಎದ್ದು ಪರ್ಸ್ ನಲ್ಲಿ ಎಷ್ಟು ಹಣ ಇದೆ ಎಂಬುದನ್ನೂ ನೋಡಿಕೊಳ್ಳದೇ ಆ‌ಸ್ಪತ್ರೆಗೆ ಓಡಿದ್ದ ನಾವು ಹಾಗೆ ಹೀಗೆ ಹುಡುಕಿ ಒಂದಿಷ್ಟು ಹಣ ಕೊಡಲು ಮುಂದಾದರೆ, ಆಕೆ “ನಾವು ಎಂಟು ಮಂದಿ ಇದ್ದೇವೆ” ಅಂದಳು. ನಾವು ಅವಳನ್ನು ಅದಷ್ಟು ಬೇಗ ಕಳಿಸಲು ಇನ್ನೂ ಸ್ವಲ್ಪ ಹಣ ನೀಡಲು ಹೋದರೆ, ಆಕೆ “ಅಣ್ಣ ಗಂಡುಮಗು ಆಗಿದೆ, ಇನ್ನೂ ಸ್ವಲ್ಪ ಜಾಸ್ತಿ ಹಣ ಕೊಡಿ” ಅಂದಳು! ಆಗ ಮಾತ್ರ ನಮ್ಮ ತಾಳ್ಮೆ ಕಳೆದು “ಯಾವುದೇ ಮಗುವಾಗಿದ್ದರೂ ನಮಗೆ ಇಷ್ಟೇ ಸಂತೋಷವಾಗುತ್ತಿತ್ತು” ಅಂತ ಬೈದು ಆಕೆಗೆ ಹಣ ಕೊಡದೇ ಹೊರ ಕಳಿಸಿದಾಗ ನಮಗಾದ ಮುಜುಗರ ಅಷ್ಟಿಷ್ಟಲ್ಲ… ಮರುದಿನ ಅರ್ಜೆಂಟ್ ಆಗಿ ನೆಲ ಒರೆಸಲು ಯಾರಾದರೂ ಬರಬೇಕಾದ ಸಮಯದಲ್ಲಿ ಆ ಮಹಿಳೆ ತಕ್ಷಣಕ್ಕೆ ಬರದೇ, ಬೇರೆಯವರನ್ನೂ ಕಳಿಸದೇ ಸತಾಯಿಸಿದಾಗ ನಿಜವಾಗಿಯೂ ಬೇಸರವಾಯಿತು. ಮಾಡುವ ಕೆಲಸಕ್ಕೆ ಸಂಬಳ ಪಡೆಯುವುದಿಲ್ಲವೇ ಇವರೆಲ್ಲ ಅನಿಸಿತು. ಮಾರನೇ ದಿನ ಮಗು ನೋಡಲು ಪರಿಚಯದವರೊಬ್ಬರು ಬಂದರು. ಸ್ವಲ್ಪ ಹೊತ್ತಿನ ನಂತರ ನೆಲ ಒರೆಸಲು ಬಂದಾಗ ಆಕೆಯನ್ನು ಗುರುತು ಹಿಡಿದು “ಈಕೆ ನಾಲ್ಕೈದು ವರ್ಷಗಳ ಹಿಂದೆ ಬೇರೆ ಆಸ್ಪತ್ರೆಯಲ್ಲಿದ್ದಳು. ಚೆನ್ನಾಗಿ ಕೆಲಸ ಮಾಡುತ್ತಾಳೆ” ಅಂತ ಹೊಗಳಿದಾಗಲೇ ಈ ಮಹಿಳೆ ಸಂತೋಷದಿಂದ ಕೆಲಸ ಮಾಡಿದ್ದು! ಇಂತವರ ಬಗ್ಗೆ ಅವರ ಮೇಲಿನವರಿಗೆ ಕಂಪ್ಲೆಂಟ್ ಕೊಡಲು ಹೆಚ್ಚು ವೇಳೆ ಬೇಕಾಗಿಲ್ಲ. ಆದರೆ ಅವರು ಹೆಚ್ಚು ಹಣದ ಆಮಿಷಕ್ಕೆ ಒಳಗಾಗಿ ಬರುವ ಸಂಬಳವನ್ನೂ ಕಳೆದುಕೊಳ್ಳುತ್ತಾರಲ್ಲ ಅಂದುಕೊಂಡು ಸುಮ್ಮನಾಗುತ್ತೇವೆ. 

ಹೊಟೆಲ್ ಗೆ ಹೋದಾಗ ಸರ್ವರ್ ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದರೆ ನಾವಾಗಿಯೇ ಚಿಲ್ಲರೆ ಇಟ್ಟು ಬರುತ್ತೇವೆ. ಮತ್ತೆ ಕೆಲವು ಸಂದರ್ಭಗಳಲ್ಲಿ ಈ ರೀತಿ ಹೆಚ್ಚು ಹಣ ಕೊಡಲು ಮುಂದಾದದ್ದೂ ಇದೆ. ಕಾರ್ಯಕ್ರಮಗಳು ಮುಗಿದು ಆಪ್ತೇಷ್ಟರನ್ನು ಬೀಳ್ಕೊಡುವ ಸಮಯದಲ್ಲಿ, ಅವರಿಗೆ ಕೊಟ್ಟು ಕಳಿಸಬೇಕಾದ ಅಡುಗೆ ಪದಾರ್ಥಗಳಿಗೆ ಡಬ್ಬಿ, ಚೀಲಕ್ಕಾಗಿ ತಡಕಾಡುವಾಗ, ಉಡುಗೊರೆ ನೀಡುವಾಗ, ಸಾಮಾನುಗಳನ್ನು ಜೋಡಿಸಿ ಪ್ಯಾಕ್ ಮಾಡುವ ಗಡಿಬಿಡಿಯಲ್ಲಿದ್ದಾಗ ಈ ತರ ಯಾರಾದರೂ ಹಣ ಕೇಳಿದರೆ, ಕೆಲಸದವರು ನಮ್ಮ ತಾಳ್ಮೆ ಪರೀಕ್ಷಿಸಿದರೆ ಸಿಟ್ಟು ಬಂದೇ ಬರುತ್ತದೆ. ಬಂದವರನ್ನು ಕಳಿಸಿ ಕೊಡುವ ಮೊದಲು ಇಂತವರನ್ನು ಸಾಗಹಾಕಬೇಕಾದ ಪ್ರಸಂಗಗಳು ನಡೆಯುತ್ತಲೇ ಇರುತ್ತವೆ. ಖುಷಿ ಕೊಟ್ಟರೆ ಮಾತ್ರ ಸರಿಯಾಗಿ ಕೆಲಸ ಮಾಡುತ್ತಾರೆ ಕೆಲವರು. ಇಂತಹ ಶ್ರಮದಾಯಕ ಕೆಲಸಗಳನ್ನು ನಿಭಾಯಿಸುವವರಿಗೆ ಹೆಚ್ಚುವರಿ ದುಡ್ಡು ನೀಡಿ ಉತ್ತೇಜನ ನೀಡುವುದೇನೋ ಸರಿ, ಆದರೆ ಅವರು ತಮಗೆ ಕೆಲಸ ಕೊಟ್ಟವರ ಆರ್ಥಿಕ ಪರಿಸ್ಥಿತಿಯನ್ನು, ಕಾರ್ಯಕ್ರಮದ ಸಂದರ್ಭವನ್ನು ತಲೆಯಲ್ಲಿಟ್ಟುಕೊಂಡು ಕೇಳಬೇಕೆನ್ನುವ ಪರಿಜ್ಞಾನ ಅವರಿಗೂ ಬೇಕು.

‍ಲೇಖಕರು Admin

25 December, 2025

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading