ಖರೇವಂದ್ರೂ ನನಗ ಮನೋಸ್ಥೈರ್ಯ ಕೊಟ್ಟ ಪುಸ್ತಕ ಇದು.

ರಶ್ಮಿ ಎಸ್

—–

ಖರೇವಂದ್ರೂ ನನಗ ಮನೋಸ್ಥೈರ್ಯ ಕೊಟ್ಟ ಪುಸ್ತಕ ಇದು. ಎಷ್ಟು ಹಿಂಸೆ, ಎಂಥ ಅವಮಾನಗಳು, ಅವೆಂಥ ಅನುಮಾನಗಳು. ಅವನ್ನ ನುಂಗಿ, ನೀರುಕುಡದು, ರಾತ್ರಿ ಕಣ್ಣೀರಾಗಿ ಜೀವನ ಕಳದುಬಿಡಬಹುದಿತ್ತು.

ಅನುಮಾನ ದಮನಿಸಿದಷ್ಟು, ನಮ್ಮ ಸುತ್ತ ಗೋಡೆ ಕಟ್ಟಿದಷ್ಟು ಮತ್ತ ಯಾವುದೂ ಹಂಗ ಮಾಡೂದಿಲ್ಲ. ಅವಮಾನದಿಂದ ಕುಗ್ಗಿದಷ್ಟು ಮತ್ತ ಯಾವ ವಜನಿಗೂ ಕುಗ್ಗೂದಿಲ್ಲ. ಅಂಥ ಎಲ್ಲವನ್ನೂ ಮೀರಿ ಬೆಳಿಯೂದದ ಅಲ್ಲ.. ಅದು ದೊಡ್ದು.

ನಮ್ಮ ಸುತ್ತ ಇಂಥವು ಹಲವಾರು ಸ್ತ್ರೀ ಕಥನಗಳು ಅದಾವ. ನಾವು ನಿಬ್ಬೆರಗಾಗಿ ಓದ್ತೀವಿ. ಅರೆ ವಾಹ್‌ ಅಂತೀವಿ. ಮತ್ತ ಮರೀತೀವಿ. ನಮ್ಮ ನೋವೇ ದೊಡ್ಡದು ಅಂತ ಅದರೊಳಗೆ ಮುಳುಗಿ ಹೋಗ್ತೀವಿ.

ಆದ್ರ ಇಲ್ಲಿಯ ಕಥನಗಳು ಓದಿದಾಗ, ಅದೆಷ್ಟು ಚಂದ ಅವರು ತಮ್ಮ ಸುತ್ತಲಿನ ಎಳೆಗಳನ್ನು ಬಿಡಿಸಿಕೊಳ್ಳುತ್ತಲೇ ಸಮಷ್ಟಿ ಹಿತಕ್ಕಾಗಿ ಶ್ರಮಿಸಿದರು. ಸಿಂಧು ತಾಯಿ ಇರಬಹುದು, ನಮ್ಮ ನಡುವೆಯೇ ಕೆಲಸ ಮಾಡಿದ್ದ ಉಮಾಬಾಯಿ ಕುಂದಾಪುರ ಆಗಿರಬಹುದು, ರಂಗನಾಯಕಮ್ಮ, ಕಮಲಾ ಭಾಷಿನ್‌, ಅರುಣಾ ಹಿಂಗ ಅದೆಷ್ಟು ಹೆಸರುಗಳು, ಇಂಥವೇ ಅನನ್ಯ ಜೀವಗಳನ್ನು ಹುಡುಕಿ, ಹೆಕ್ಕಿ ಎಚ್‌.ಎಸ್‌. ಅನುಪಮಾ ಅವರು ಗಡಿದಾಟಿದ ಹೆಣ್ಣುಮಕ್ಕಳ ಕಥನ ಅನ್ನುವ ಪುಸ್ತಕ ಬರದಾರ.

ಒಂದೊಂದು ಕಥನವೂ ಕೆಲವೆಡೆ ಬದಲಾವಣೆಗೆ, ಕೆಲವೆಡೆ ಸುಧಾರಣೆಗೆ ಮತ್ತೂ ಕೆಲವೆಡೆ ಸಂಭ್ರಮಕ್ಕೂ ಕಾರಣ ಆಗಿದ್ದದಾವ. ಯಾವುದು ಓದಿದಾಗ ನಮ್ಮ ಮನಸಿನಾಗ ಬೆಳಕಿನ ಕುಡಿ ಆಗ್ತದ, ಕ್ರಾಂತಿಯ ಕಿಡಿ ಆಗ್ತದ, ಪ್ರತಿರೋಧದ ಶಕ್ತಿ ಆಗ್ತದ, ಸ್ಫೂರ್ತಿಯ ವ್ಯಕ್ತಿ ಆಗ್ತದ ಅನ್ನೂದು ನಮ್ಮ ನಮ್ಮ ಮತಲಬಿಗೆ ಬಿಟ್ಟಿದ್ದು. ಆದ್ರ ಎಲ್ಲವೂ ಓದಿದಾಗ, ನಾವೆಲ್ಲ ಅದೆಷ್ಟು ತೃಣ ಅದೇವಿ.. ಅಂತನಿಸ್ತದ.

ನಮ್ಕಡೆ ಒಂದು ಮಾತದ, ಉಂಡೂ ತಿಂದೂ ಗಂಡನ್ನ ಬೇಡಿದ್ರಂತ… ಹಂಗ ನಮ್ಮ ಬದುಕು. ಎಲ್ಲಾ ಇದ್ದೂ ಇರಲಾರದ ಸುಳಿಯೊಳಗ ಗಿರಕಿ ಹೊಡೀತೀವಿ. ಆದ್ರ ಆ ಸುಳಿ ನನಗಷ್ಟೇ ಅಲ್ಲ ಅಂತ ಗೊತ್ತು ಮಾಡ್ಕೊಂಡು, ಈಜಿ ಜಯಿಸಿದ ಈ ಹೆಣ್ಣುಮಕ್ಕಳ ಕಥನ ಓದಿದಾಗ ಮನೋಸ್ಥೈರ್ಯ ಹೆಚ್ಚಾಗ್ತದ.

ನಾವು ಹುಟ್ತೇವಿ. ನಮಗ ಬೇಕಾದಂಗ ಬದುಕಾಕ ನೋಡ್ತೀವಿ. ಹಂಗಾಗದಾಗ ಕೊರಗ್ತೀವಿ, ಚೂರು ಪ್ರೀತಿ ಸಿಕ್ರ ಕರಗ್ತೀವಿ. ಸಿಗದಾಗ ಮರಗ್ತೀವಿ. ಆದ್ರ ಇನ್ನೊಬ್ಬರ ಅವಮಾನಗಳಿಗಾಗಿ ಹೋರಾಡುವ ಮನಸ್ಥಿತಿ ಕೆಲವರಿಗೆ ಮಾತ್ರ ಬರ್ತದ. ಅಂಥ ಜೀವಗಳನ್ನ, ಜೀವನಗಳನ್ನ ಓದಿದಾಗ ಅನಸ್ತದ… ಜೀವನ ಸಣ್ದು.. ದೀರ್ಘವಾಗಿ ಅಲ್ಲ, ದೊಡ್ಡದಾಗಿ ಬದುಕಬೇಕು ಅಂತ.

ಅನುಪಮಾ ಅವರ ಶ್ರಮ, ಆಯ್ಕೆ ಎರಡೂ ಪುಸ್ತಕದ ಒಟ್ಟಂದ ಹೆಚ್ಚಿಸ್ಯಾವ. ಎಲ್‌.ಸಿ. ಸುಮಿತ್ರಾ ಅವರ ಮುನ್ನುಡಿ, ಓದುವಿಕೆಗೆ ಒಂದು ವೇದಿಕೆ ಮಾಡಿಕೊಡ್ತದ. ಇನ್ನ ನಮ್ಮ ತಾಯಿಯಂಥ ಬಸೂಅಣ್ಣನ ಕಾಳಜಿ, ಪ್ರತಿ ಪುಟದೊಳಗೂ ಎದ್ದು ಕಾಣ್ತದ. ಓದ್ರಿ, ಓದಾಕ ಹಚ್ರಿ.

ಕೊನಿಮಾತು: ಪುಸ್ತಕ ಬಿಡುಗಡೆ ಸಮಾರಂಭಕ್ಕ ಹೋದಾಗ ಕಾಳೇಗೌಡ ನಾಗವಾರ ಸರ್‌ ಭೇಟಿಯಾದ್ರು. ಸುಮಿತ್ರಕ್ಕ, ಅಪ್ಗೊಂಡು ಪ್ರೀತಿ ಸೂಸಿದ್ರು. ಮಧು ಕನಸೇ ಕಾಡುಮಲ್ಲಿಗೆ ಕಾದಂಬರಿ ಕೊಟ್ಟು, ತುಟಿಗೊಂದು ನಗು ಅಂಟಿಸಿ ಹೋದ್ರು. ಹೆಂಗ ಮಾತಾಡ್ತೇನಿ, ಏನಾಗ್ತದ ಅನ್ನುವ ಆತಂಕ ನೀಗಿಸಾಕ ನನ್ನ ಮೈಸೂರಿನ ಕುಟುಂಬವೇ ಆಗಿರುವ ರವಿ, (ರವಿಶಂಕರ್‌,) ರಂಗಣ್ಣ (ರಂಗನಾಥ್‌ ಮೂಕನಳ್ಳಿ) ಮತ್ತ ಅವಾಗವಾಗ ನಗಸ್ಕೊಂತ, ಸೈರಣೆಯಿಂದ ಮಾತು ಕೇಳಿದ ನಮ್ಮ ಸಂತೋಷ ತಾಮ್ರಪರ್ಣಿ.. ಇವರೆಲ್ಲ ಬೆಟ್ಟಿಯಾದ್ರು. ಕಳ್ಳುಬಳ್ಳಿ ದೊಡ್ಡದಾಯ್ತು. ತುಸು ದೀರ್ಘಾಯು ಆದೆ ಅನಿಸ್ತು. ಪ್ರೀತಿಯ ಸೊಗ ಮತ್ತು ಸಗ್ಗ ಅಂದ್ರ ಇದೇನೆ.

‍ಲೇಖಕರು avadhi

December 6, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಡಾ. ಅನಿಲಕುಮಾರ ಮುಗಳಿ

    ಗಡಿ ದಾಟಿದ ಹೆಣ್ಣುಗಳ ಕಥನ ಬಗ್ಗೆ ಶ್ರೀ ಮತಿ ರಶ್ಮಿ ಎಸ್ ಅವರ ಅನಿಸಿಕೆ ಮೆಚ್ಚುಗೆ ಯಾಯ್ತು. ಹೌದು, ” ಯಾರಿಗಾದರೂ ಬಾಳಾಛಲೋ ಬರದಾರ ಅನಸುತ್ತ”.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: