ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಖಡಕ್ ಸೆಕೆಂಡ್ ಚಾ..

ಗೀತಾ ಹೆಗಡೆ

“ಒಂದು ಕಪ್ ಖಡಕ್ ಚಾ ಕುಡಿಯದೇ ಈಗಾ. ತಡಕಳಲೇ ಆಗ್ತಿಲ್ಲೆ. ಏನಾದರಾಗಲಿ.” ಮನಸಲ್ಲಿ ನೆಲೆಯೂರಿ ಬಿಟ್ಟಿದ್ದ ಈ ಸೆಕೆಂಡ್ ಚಹಾದ ಗುಂಗು ಇವತ್ತು ಬೆಳಿಗ್ಗೆ ದೋಸೆ ಹೊಯ್ತಾ ಇನ್ನಷ್ಟು ಭುಗಿಲೆದ್ದು ಬಿಟ್ಟಿತ್ತು. ಫ್ರೆಶ್ ಹಾಲು. ಆದರಿದು ನನ್ನಪ್ಪನ ಮನೆಯಲ್ಲಿ ಆಗಿಂದಾಗ್ಗೆ ಕರೆದ ಹಾಲಿನಂತೇನಲ್ಲ. ಆದ್ರೂ ಈ ಸಿಟಿಯಲ್ಲಿ ಭೀಗೋದು ಫ್ರೆಶ್ಶು ಫ್ರೆಶ್ಶು ಹೇಳಿ.

ಅಂದಾಂಗೆ ಸಖತ್ತಾಗಿ ಮಾಡುವ ಬರೀ ಹಾಲಲ್ಲೇ ಒಂಚೂರು ಏಲಕ್ಕಿ, ಶುಂಠಿಯ ಸ್ಟ್ರಾಂಗ್ ಚಹಾ ತಪ್ಪಿಹೋಗಿದ್ದು ಈ ಜಿಮ್ಮಿಂದ. ನೋಡಿ. ಈ ಜಿಮ್ಮು ಪಮ್ಮೂಗೆ ಹೋಗ್ತಾರಾ ಈಗಿನ ಮಕ್ಕಳು. ಅಲ್ಲಿ ಅವರು ಹೇಳಿದ್ದೇ ವೇದವಾಕ್ಯ. ನಾವೇನಾದರೂ ನಮ್ಮ ಜೀವನಾನುಭವದ ಮಾತು ಹೇಳಿದರೆ ಊಹೂಂ ಸುತಾರಾಂ ಒಪ್ಪೋದೇ ಇಲ್ಲ. ಮಗಳ ಜಿಮ್ಮಿನವರ ಅಪರಾವತಾರ “ಮನೆಗೆ ಹೋದ ಮೇಲೆ ಜೂಸ್ ಕುಡಿರಿ”.” ಚಾಕ್ಕೆ ಹಾಕಿದ ಕೊಕ್ಕೆ ನಂಗೆ ಮೂರ್
ಎಷ್ಟು ಕೋಪ ಗೊತ್ತಾ ಹೇಳಕಿಲ್ಲಾ ಬಿಡಕಿಲ್ಲಾ. ಆದರೂ ಮರೆತಂತೆ ನಟಿಸಿ ಚಾ ಗೊಟಾಯಿಸಿ ಕೊಟ್ಟು ಸಮಾ ಬಯ್ಸಿಕೊಂಡೆ ಅಲ್ಲಲ್ಲಾ ಉಗಿಸಿಕೊಂಡೆ. ಗೊತ್ತಲ್ಲ ಈಗಿನವರ ಜಿಮ್ ಮೇಲಿನ ಪ್ರೀತಿ ಅಡ್ಡಡ್ಡ ಬೆಳಿಬಾರದೆನ್ನುವ ಕಸರತ್ತು ಮಾಡಲು ಹೋಗಿ ಮನೆಗೆ ಬಂದು ಅಮ್ಮನ ಮೇಲೆ ಕೋಪದ ಅಸ್ತ್ರ ಪ್ರಯೋಗ. ಕಾರಣ ಇಡೀ ದಿನ ಕಂಪ್ಯೂಟರ್ ಮುಂದೆ ದುಡಿ. ಬ್ಯಾಡಾ ಅಂದರೂ ಬರೋ ಮೈಯ್ಯಿ. ಅರ್ಧ ದಿನ ರಸ್ತೆ ಮೇಲೇ ಜೀವನ . ಉಫ್… “ಅದೇನು ಟ್ರಾಫಿಕ್ಕು. ವೈಟ್ ಟಾಪಿಂಗ್ ಬೇರೆ ಸಾಕಾಗೋಗುತ್ತೆ ಅಮ್ಮ ” ಅಂದಾಗ ಕರಗೋಗ್ತೀನಿ.

ಇನ್ನು ಬಾಡಿ ಕಸರತ್ತು ಮಾಡೊ ಧಂ ಇರಲ್ಲ ಮಾಡದೇ ಇದ್ದರೆ ಗತಿ ಇಲ್ಲ. ಅವರೇಳಿದ್ದು ಕೇಳದಿದ್ದರೆ ಜಿಮ್ ಮಾಡಿದರೂ ವರ್ಕೌಟ್ ಆಗಲ್ಲ . ಇಷ್ಟ ಪಡುವ ತಿಂಡಿಗೆಲ್ಲಾ ಕೊಕ್. ಮನಸ್ಸು ಕೆಟ್ಟೋಗಿ ಯಪ್ರಾತಪ್ರಾ ತಿನ್ನೋ ಐಟಂ ಮನಸ್ಸಿನ ಸುತ್ತ ಗಿರಕಿ ಹೊಡೆದೂ ಹೊಡೆದೂ ಅವಸ್ಥೆ ಏನ್ ಕೇಳ್ತೀರಾ ದೇವರೆ ದೇವರೆ! ನಂಗಂತೂ ಮನಸ್ಸಲ್ಲೇ ನಗು. ಅವಳ ರೇಗೋ ಕಾರಣ ಏನೂ ಗೊತ್ತಿಲ್ಲದಂತೆ ಇದುವರೆಗೂ ಮೆಂಟೇನ್ ಮಾಡ್ತಾನೇ ಬಂದಿದ್ದೇನೆ. ಹಂಗಂತ ನನ್ನ ಒಳಗುಟ್ಟು ಬಿಟ್ಕೊಟ್ಟಿಲ್ಲ ಆಯ್ತಾ? ಅದೇ ಸೆಕೆಂಡ್ ಸ್ಟ್ರಾಂಗ್ ಚಾದೂ. ಏಕೆಂದರೆ ಈ ಅಮ್ಮನಿಗೋಸ್ಕರ ಮನಸ್ಸು ಬದಲಾಯಿಸಿ ಬಿಟ್ರೆ? ನಂಗೂ ಆಸೆ ನನ್ಮಗಳು ಚಂದಾನೇ ಕಾಣಬೇಕು ಯಾವಾಗಲೂ ಅಂತಾ!

ಏನ್ ಕೆಲಸ ಇದ್ದರೂ ಬಿಟ್ಟಾಕಿ ಜಿಮ್ಮಿಂದ ಮನೆಗೆ ಅವಳಡಿಯಿಡೋ ಅಷ್ಟರಲ್ಲಿ ಈ ಚಾ ರೆಡಿಗೆ ಅಣಿಯಾಗಿ ಬಿಡ್ತಿದ್ದೆ. ಅದೂ ಬೆಳಗಿನ ಸೆಕೆಂಡ್ ಚಾ. ಕುಡಿಯಲು ಜೊತೆಗಿದ್ದರೇನೇ ಹೀರಲು ಒಂಥರಾ ಗಮ್ಮತ್ತು. ಈಗೇನು ಮಾಡಲಿ? ಮಾಡಿ ಕುಡಿಯಲು ಯಾರ ಹಂಗಿಲ್ಲ. ಆದರೂವಾ ಚಾ ಕುಡಿಯೋದಕ್ಕೆ ನೆವ ಬೇಕು. ಅದು ಹಂಗೆ. ಹೇಳಿದರೆ ಗೊತ್ತಾಗೋದಲ್ಲ. ಚಟವಿರಬೇಕು. ಅದೇ ಚಾದ ಚಟಾರೀ… ನನಗಂತ ಮಾಡಿಕೊಂಡಿದ್ದಲ್ಲಪ್ಪಾ ಮಗಳಿಗೆ ಮಾಡಿದ್ದು ಹಂಗೇ ಒಂದು ಚೂರು ಕುಡದ್ನಪ್ಪಾ. ಮನಸ್ಸು ಸುಳ್ಳು ಸುಳ್ಳೆ ತನ್ನ ತಪ್ಪಿಲ್ಲವೆಂದು ಸಮಾಧಾನ ಮಾಡಿಕೊಳ್ಳುತ್ತದೆ ಇಡೀ ದಿನ. ಅಕಸ್ಮಾತ್ ಸ್ವಲ್ಪ ಪಿತ್ತ ಜಾಸ್ತಿ ಆಗಿದ್ದು ಅರಿವಿಗೆ ಬಂದಾಗ ಕಿಲಾಡಿ ಮನಸ್ಸು ಹೀಗೇ ಹೇಳೋದು .

ಒಂದು ವಿಷಯ ಪಟಕ್ ಅಂತ ನೆನಪಾಯಿತು ನೋಡಿ ; ನನ್ನ ಸೋದರ ಮಾವ ಒಬ್ರು ಇದ್ರು. ಇದ್ರು ಅಂದರೆ ಈಗಿಲ್ಲ ಬಿಡಿ. ಆದರೆ ಅವರಲ್ಲಿ ಒಂದು ಗುಟ್ಟಿತ್ತು. ಆಗೆಲ್ಲ ನನಗೆ ಅರ್ಥ ಆಗ್ತಿರಲಿಲ್ಲ. ಈಗ ಈ ಚಹಾದ ಹುಚ್ಚು ಹೆಚ್ಚಾದಂತೆ ನನಗೆ ಅವರ ನೆನಪು ಅಪೂಟೂ ಬಿಡದ ಹಾಗೆ ಮನಸ್ಸಿನಲ್ಲಿ ಸುರುಳಿ ಸುತ್ಕೋತಾ ಇದೆ.

ಅದೇನಪ್ಪಾ ಅಂದರೆ ಮನೆಗೆ ಸದಾ ಯಾರಾದರೂ ಬರುತ್ತಿರಬೇಕು. ಮಾವಂಗೆ ನಮ್ಮಂತೆ ಓಡಾಡಲಾಗದ ಸ್ವಲ್ಪ ಅಶಕ್ತರು. ಆದರೆ ಕೂತಲ್ಲೇ ದರ್ಭಾರ ನಡೆಸುವವರು. ಸಿಕ್ಕಾಪಟ್ಟೆ ಸಾಹಿತ್ಯದ ಹುಚ್ಚು. ಓದೋದು, ಬರೆಯೋದು,ಸದಾ ತಮಾಷೆ ಮಾತಾಡ್ತಾ ಮನೆಯೆಲ್ಲ ಗಲಗಲಾಂತ ನಗಿಸೋರು. ಸಾಹಿತ್ಯಾಸಕ್ತರ ದೊಡ್ಡ ದಂಡೇ ಇತ್ತು ಅವರ ಸ್ನೇಹದ ಬಳಗದಲ್ಲಿ. ಮನೆಗೆ ಯಾರು ಬರಲಿಕ್ಕಿಲ್ಲ “ಚಾ ಕುಡಿತ್ಯನಾ? ” ಅವರು ಕುಡಿಯುವವರಲ್ಲದಿದ್ದರೂ ಅಲ್ಲೇ ಸಣ್ಣಕೆ “ಹೂಂ, ಕುಡಿತಿ ಹೇಳಾ” ಹೀಗಂದೂ ಅಂದೂ ಅವರ ಬಳಗದವರು ಯಾರೇ ಬರಲಿ ಬೇಡಾ ಹೇಳ್ತಾನೇ ಇರಲಿಲ್ಲ. ಇನ್ನಿವರು ಕುಡಿಯದೆಷ್ಟಪ್ಪಾ ಅಂದರೆ ಒಂದು ನಾಲ್ಕು ಸಿಪ್ಪು ದಿನಕ್ಕೆ ಒಂದತ್ತೋ ಹದಿನೈದು ಸಾರಿ ಇರಬಹುದು. ಇದಕ್ಕೇನು ಹೊತ್ತಿಲ್ಲ ಗೊತ್ತಿಲ್ಲ. ಆದರೆ ಚಾ ಕುಡಿಬೇಕಾರೆ ಒಟ್ಟಿನಲ್ಲಿ ಒಂದು ನೆವ ಬೇಕು.

ಒಂದಿನಾನೂ ಯಾರೂ ಇಲ್ಲ ಅನ್ನೋ ಹಾಗೇ ಇಲ್ಲ. ಅಕಸ್ಮಾತ್ ಯಾರೂ ಬರದೇ ಇದ್ದರೆ ಫೋನ್ ಮಾಡಿಯಾದರೂ ಕರೆಸಿಕೊಳ್ಳೊ ಸ್ವಭಾವದವರು. ಕಡೆ ಕಡೆಗೆ ಒಬ್ಬರೇ ಕುಡಿಯೋದು ರೂಢಿನೂ ಆತು. ಹಂಗೆ ನಾನವರ ಮನೆಯಲ್ಲಿ ಇರುವಾಗ ಚಾ ಮಾಡಿಕೊಟ್ಟೂ ಕೊಟ್ಟೂ ಗೊಣಗಿದ್ದೆ “ಈ ಮಾವಂಗೆ ಎಂತಕೀನಮನಿ ಚಾ ಹುಚ್ಚನ. ಎಷ್ಟು ಸರ್ತಿ ಮಾಡವನ, ಕುಡಿಯದು ಮಾತ್ರ ಇಷ್ಟೇಯಾ.” ಹೇಳುವುದು ಸುಲಭ ಆದರೆ ಚಾ ಗೀಳು ಅಂಟಿಸಿಕೊಂಡವರಿಗಷ್ಟೇ ಗೊತ್ತು ಸಿಕ್ಕಿಲ್ಲಾ ಅಂದರೆ ಅದರ ಅವಸ್ಥೆ. ಈಗ ನನಗೆ ಸಮಾ^^^ಅರ್ಥ ಆಗ್ತಿದೆ ಆಗಿನ ಮಾವನ ಅವಸ್ಥೆ.

ನಂಗೂ ಈಗೀಗ ಹಂಗೇ ನೆಪ ಬೇಕು ಚಾ ಮಾಡಲು ಅನಿಸೋದು ಜಾಸ್ತಿ ಆಗಿದೆ. ಛೆ!ಕುಡಿಯುವವರು ಯಾರಾದರೂ ಬಂದಿದ್ರೆ, ಒಂಚೂರು ಚಾ ಗೊಟಾಯಿಸಬಹುದಿತ್ತಲ್ಲಾ? ನನ್ನ ಚಾ ಕವನ ಓದಿ ಚಾ ಮತ್ತ್ ಹತ್ತಿ ನಾಕಾರು ಸ್ನೇಹಿತರು ನಮ್ಮನೆಗೆ ಬಂದು ಈರುಳ್ಳಿ ಪಕೋಡಾ ಜೊತೆಗೆ ಹಂಗೇ ಮಾತಾಡ್ತಾ ಡಬಲ್ ಚಾ ಕುಡಿದು ಮತ್ತೆ ಬರ್ತೀನಿ ಅಂದಾಗ ಆ ದಿನ ಇನ್ನೂ ಬಂದಿಲ್ವಲ್ಲಾ ಅಂತ ಕೇಳುತ್ತೆ ಮನಸ್ಸು. ಒಬ್ಬಳಂತೂ “ಮೂರು ವರ್ಷದ ಹಿಂದೆ ಚಾ ಕವನ ಓದುತ್ತಾ ಮನಸ್ಸು ತಡಿಲಾರದೇ ಎದ್ದೋಗಿ ಕೂಡಲೇ ಚಾ ಮಾಡಿ ಕುಡಿದಿದ್ದೆ. ಈಗ ನೋಡಿ ನಿಮ್ಮ ಕೈಯ್ಯಾರೆ ಚಾ ಕುಡಿದದ್ದು ಸಂತೃಪ್ತಿ ಆಯಿತು ” ಅಂತ ಮೊನ್ನೆ ಮನೆಗೆ ಬಂದವಳು ಅಂದಾಗ ಪರವಾಗಿಲ್ವೆ? ನನ್ನ ಚಾ ಮರುಳೂ ಮಾಡುತ್ತೆ ಅಂತ ಹೆಮ್ಮೆ ಪಟ್ಟೆ.

ಏನಾದರಾಗಲಿ ಒಂದು ಲೀಟರ್ ಹಾಲು ಬೆಚ್ಚಗೆ ಕಾಯಿಸಿದ್ದು ಮನೆಯಲ್ಲಿ ಕಾದಿರಿಸೋದು ಮಾತ್ರ ಮರೆಯೋಲ್ಲ ಆಯ್ತಾ? ಈ ಬಿರು ಬೇಸಿಗೆಯಲ್ಲಿ ಎಲ್ಲಿ ಹಾಲು ಒಡೆದು ಹೋದರೆ ಅಂತ ಬೆಳಿಗ್ಗೆ, ಮಧ್ಯಾಹ್ನ, ಸಾಯಂಕಾಲ, ರಾತ್ರಿ ಮಲಗುವಾಗಲೂ ಕಾಯಿಸಿನೇ ಮಲಗೋದು. ಬೆಳಿಗ್ಗೆ ಎದ್ ಮಗಲಲ್ಲಿ ಹಾಲಿಲ್ಲಾ ಅಂದರೆ ತಲೆ ಕೆಟ್ಟು ಗೊಬ್ಬರ. ಯಾಕಂದರೆ ಈ ನಿದ್ದೆ ನನ್ಮಗಂದು ಅದ್ಯಾವಾಗ ಕೈ ಕೊಡುತ್ತೆ ಗೊತ್ತೇ ಆಗೋದಿಲ್ಲ. ಒಮ್ಮೊಮ್ಮೆ ಬೆಳಗಿನ ಜಾವ ನಾಕ್ ಗಂಟೆಗೇ ಎಚ್ಚರಾಗಿ ಚಾ ನೆನಪಾಗಿ ಸಟಕ್ ಅಂತ ಏಳೋ ಹಾಗಾದಾಗ ಎಲ್ಲಿ ಹುಡುಕ್ಕೊಂಡು ಹೋಗಲಿ ಅಷ್ಟು ಬೆಳಗ್ಗೆ. ನಂಗಂತೂ ದೇವರ ತಲೆ ಮೇಲೆ ಹೂ ತಪ್ಪಿದರೂ ಅಡ್ಡಿಲ್ಲ ಈ ಚಾ ಮಾತ್ರ ತಪ್ಪೂಕ್ ಯಡಿಯಾ. ಠೇಮಿಗೆ ಸರಿಯಾಗಿ ಬೇಕು. ಅದೂ ಬೆಳಿಗ್ಗೆ ಎರಡು ಬಾರಿ. ಅಷ್ಟು ಸಿಕ್ಕರೆ ಸಾಕು ದಿನವೆಲ್ಲಾ ಖುಷ್!
ಮತ್ತೆ ಚಾನ್ಸ್ ಸಿಕ್ಕರೆ ಹೀರದೇ ಇರಲು ಮನಸ್ಸು ತಡೆಯೋದಿಲ್ಲ

ಮೊನ್ನೆ ಅಕಾಡಮಿ ಸಮಾರಂಭಕ್ಕೆ ಹೋದಾಗ ಅಲ್ಲಿ ಚಾ ಕಂಡು ಯಾರು ಏನು ಬೇಕಾದರೂ ಅಂದು ಕೊಳ್ಳಲಿ ಬಿಡಿಯಾ ಇಲ್ಲದೇ ಸೀದಾ ಎರಡು ಕಪ್ ಚಾ ಕೇಳಿ ಕುಡಿದದ್ದು ಇನ್ನೂ ಗುಟ್ಟಾಗೇ ಇಟ್ಟುಕೊಂಡಿದ್ದೇನೆ. ಸಖತ್ತಾಗಿತ್ತು ಎಲ್ಲರ ಜೊತೆ ಹಂಗೆ ಮಾತಾಡ್ತಾ ಹೀರಿದ್ದು!

ನೋಡಿ ನಾ ಮತ್ತೇನು ಹೇಳೂದಿಲ್ಲ ಚಾ ಚಟ ಹಚ್ಕೋಬೇಡಿ. ಅಕಸ್ಮಾತ್ ಹಂಚ್ಕೊಂಡರೆ ಅಕ್ಕ ಪಕ್ಕದವರನ್ನೊ ಇಲ್ಲಾ ಒಂದಷ್ಟು ಹತ್ತಿರದಲ್ಲಿರೋ ಸ್ನೇಹಿತರ ಬಳಗ ಬೆಳೆಸಿಕೊಳ್ಳಿ. ಈಗ ನನ್ನ ಮುಂದಿನ ದಾರಿನೂ ಅದೇ. ಒಬ್ಬರೇ ಕೂತು ಚಾ ಕುಡದ್ರೆ ಮಜಾ ಇಲ್ಲ. ಜೊತೆಗೆ ಒಬ್ಬರು ಇರೋದು ಚಾ ಜೊತೆ ಚುಡುವಾ ಇದ್ದಾಂಗೆ. ಒಂದಷ್ಟು ಹರಟತಾ ನಕ್ಕೋಂತಾ ಖಡಕ್ ಸುಡು ಸುಡು ಚಾ ಕುಡೀತಾ ಇದ್ರೆ^^^^^^ ವಾವ್!ತಾಜ್….ಮಸ್ತ್ ಮಸ್ತ್ ಉತ್ಸಾಹ. ಬೇಕಾರೆ ಚಾ ಚಟ ಹಚ್ಕೊಂಡು ನೋಡಿ ಇಲ್ಲಾ ನಾ ಹೇಳಿದ್ದು ಅಪ್ಪಟ ಸತ್ಯ, ನಂಬಿ!

ಅಂದಾಂಗೆ ಬರ್ತೀರೇನು ಚಾ ಕುಡಿಯೋಣೂ…….

‍ಲೇಖಕರು Avadhi Admin

26 March, 2019

6 Comments

  1. ಸಣ್ಣಮಾರಪ್ಪ

    ಕುರಿ ಹಾಲಿನ ಚಹಾ ಕುಡಿದಿದ್ದು ನೆನಪಿಗೆ ಬಂತು.

    • Sangeeta Kalmane

      ಓಹ್!ಹೌದಾ. ಧನ್ಯವಾದಗಳು ಸರ್

  2. Anantha Ramesh

    ಮುದದ ಹದದ ಖಡಕ್ ಚಾ ರುಚಿಯಾಗಿದೆ.

    • Sangeeta Kalmane

      ಮೆಚ್ಚುಗೆಗೆ ಧನ್ಯವಾದಗಳು ರಮೇಶ್

  3. Sarayu

    Cha bahut AcCha hei.

    • Sangeeta Kalmane

      Thank you so much Sir☺

Trackbacks/Pingbacks

  1. ಖಡಕ್ ಸೆಕೆಂಡ್ ಚಾ.. – ಅವಧಿ/Avadhi – Sandhyadeepa…. - […] http://wp002.global.temp.domains/~avadhion/avadhimag?p=212469 […]

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading