ಮಾಳವಿಕ ಹಾಕಿದ ಕೇಸ್.. 

ಅಲ್ರೀ, ನೀವು ಏಕಾಂತದಲ್ಲಿ ಕೂತು ಬರೆದದ್ದು  ಲೋಕಾಂತದಲ್ಲಿ ಏನು ಪರಿಣಾಮ ಬೀರಬಹುದು ಎಂದು ಯೋಚಿಸಬೇಕಲ್ವ ನೀವು?’ ಎಂದು ಎದುರು ಕೂತ ಆಕೆ  ನಕ್ಕಳು.

‘ಈಗ ನನ್ನಿಂದ ಯಾರದ್ದಾದರೂ ಏಕಾಂತ ಭಂಗವಾಯಿತೇ ಅಥವಾ ಲೋಕಾಂತಕ್ಕೇನಾದರೂ ಧಕ್ಕೆಯಾಯಿತೆ?’ ನಾನೂ ತುಸು ಲಹರಿಯಲ್ಲೇ ಕೇಳಿದೆ.

‘ಹೌದು. ರಾಜಶೇಖರನಿಗೆ ನೀವು ಮಾಡಿದ್ದು ಅನ್ಯಾಯವಲ್ಲವೆ ?’ ಎಂದಳಾಕೆ. ಆಗ ನನಗೆ ಸ್ವಲ್ಪ ಸುಳಿವು ಸಿಕ್ಕಿತು. ಹಿಂದಿನ ದಿನ ಕಾಲ್ ಮಾಡಿದಾಗ ‘ನನ್ನ ಹೆಸರು ಮಾಳವಿಕ ಎಂದು. ನಾನು ನಿಮ್ಮನ್ನು ಭೇಟಿಯಾಗಬೇಕಿದೆ ಎಂದಿದ್ದಳವಳು.‌ ಹಾಗಾದರೆ ಈ ರಾಜಶೇಖರ ಯಾರು ಎಂದು ಪುನಃ ಯೋಚಿಸಬೇಕಾದ ಅಗತ್ಯವಿರಲಿಲ್ಲ. ಆಕೆ ಪ್ರಸ್ತಾಪಿಸಿದ್ದು ನನ್ನ ‘ಮಧ್ಯ ವಯಸ್ಕನ ಮನೋಲಾಗ್’ ಎಂಬ ಕತೆಯಲ್ಲಿನ ರಾಜಶೇಖರ ನ ಬಗ್ಗೆ ಎಂಬುದು ಮನವರಿಕೆಯಾಯಿತು.

‘ಏನು ಅನ್ಯಾಯ ಮಾಡಿದೆ ಅವನಿಗೆ ನಾನು ?’ ಎಂದೆ.

ಅಷ್ಟರಲ್ಲಿ ವೈಟರ್ ಬಂದ. ಆಕೆಯೇ ನನ್ನನ್ನೇನೂ ಕೇಳದೆ ಕಾಫಿ ಆರ್ಡರ್ ಮಾಡಿದಳು.

‘ಈಗ ನೀವು ನನ್ನ ಭೇಟಿ ಮಾಡಿದ ಉದ್ದೇಶವೇನು?’ ನಾನೇ ಮರುಪ್ರಶ್ನೆ ಹಾಕಿದೆ.

‘ನನಗೊಂದು ಗಂಡಿನ ಸಾಂಗತ್ಯ ಬೇಕಿದೆ’ ನಾಟಕೀಯತೆಯಿಂದ ಆಕೆ ಈ ಮಾತು ಹೇಳಿದಾಗ ಮತ್ತೆ ನನ್ನ ಆ ಕತೆಯ ಬಗ್ಗೆಯೇ ಆಕೆ ಮಾತನಾಡುತ್ತಿರುವುದು ಸ್ಪಷ್ಟವಾಯಿತು.

‘ಥೇಟ್ ನಿಮ್ಮ ಕತೆಯ ರಾಜಶೇಖರನಂತೆಯೇ ಕೇಳ್ತಿದೀರ ಅಲ್ವಾ ? ನಿಮ್ಮನ್ನ ಭೇಟಿ ಮಾಡಿದ ಉದ್ದೇಶ ನಿಮ್ಮ ಮೇಲೊಂದು ಕೇಸ್ ಹಾಕುವುದು’ ಎಂದಳು.‌

‘ಕೇಸ್ ? ಯಾಕೆ ?’

‘ನಿಮ್ಮಿಂದ ನನಗೆ ಅನ್ಯಾಯ ಆಗಿದೆ. ಹೆಣ್ಣು ಮನಸ್ಸೊಂದನ್ನು ಅರಿಯಲಾಗದ ನಿಮ್ಮಂಥವರು ಅಂಥ ಕತೆ ಯಾಕೆ ಬರೀಬೇಕಿತ್ತು? ‘ ಎನ್ನುವಾಗ ಅವಳ ಧ್ವನಿಯಲ್ಲಿ ಇದ್ದ ಮುಗ್ದತೆಯನ್ನು ಗಮನಿಸದೆ. ಅವಳ ಪ್ರಶ್ನೆ ನಾನು ಬರೆದ ಕತೆಯನ್ನು ಮತ್ತೊಮ್ಮೆ ಒಂದು ಫ್ಲಾಷ್ ನಂತೆ ಕಣ್ಮುಂದೆ ತಂದಿತು.

ಮದುವೆಯಾಗದ ಮಧ್ಯವಯಸ್ಕನೊಬ್ಬನಿಗೆ ಮಾಳವಿಕ ಎಂಬುವವಳಿಂದ ಬಂದ ಪತ್ರದಲ್ಲಿ ಆಕೆಯನ್ನು ಭೇಟಿ ಮಾಡಲು ಆಹ್ವಾನವಿರುತ್ತದೆ. ಸಭ್ಯ, ಸ್ಪುರದ್ರೂಪಿ ರಾಜಶೇಖರನಿಗೆ ಆಕೆ ಯಾರಿರಬಹುದೆಂಬ ಕುತೂಹಲ ಹೆಚ್ಚಾಗಿ ಅವಳೇ ಹೇಳಿದ ಕಾಫಿ ಡೇಯಲ್ಲಿ ಅವಳನ್ನು ಭೇಟಿಯಾಗಲು ಹೋಗುತ್ತಾನೆ.‌ ಹೋಗುವ ಮುನ್ನ ಪತ್ರದಲ್ಲಿದ್ದ ನಂಬರ್ ಗೆ  ಕಾಲ್ ಮಾಡಿಕೊಂಡು ಕನ್ಫರ್ಮ್ ಮಾಡಿಕೊಂಡಿರುತ್ತಾನೆ.‌ ಅಂತೆಯೇ ಭೇಟಿಯೂ ಆಗುತ್ತದೆ. ಹಾಗೆ ಭೇಟಿ ಆದವಳೇ ಕೇಳಿದ ಪ್ರಶ್ನೆ; ನನಗೊಂದು ಗಂಡಿನ ಸಾಂಗತ್ಯ ಬೇಕು.

ರಾಜಶೇಖರನಿಗೆ ತನ್ನ ಪೂರ್ವ ವೃತ್ತಾಂತವನ್ನು ,ಅದರಲ್ಲಿ ಗಂಡಸೊಬ್ಬನಿಂದ  ತನಗಾದ ಮೋಸವನ್ನೂ ಮಾಳವಿಕ ಹೇಳಿದ ಮೇಲೂ ಅವನಿಗೆ ಅವಳ ಬಗ್ಗೆ ಆಸಕ್ತಿ ಉಂಟಾಗಿ ‘ನಿಮ್ಮ ಸಾಂಗತ್ಯಕ್ಕೆ ನಾನು ತಯಾರು. ಇಂದಿನಿಂದಲೇ ಶುರು ಮಾಡೋಣವೇ?’ ಎನ್ನುತ್ತಾನೆ‌. ಆದರೆ ದುಡುಕಿನ ನಿರ್ಧಾರ ಬೇಡ ಆಳವಾಗಿ ಆಲೋಚಿಸಿ ಹೇಳಿ ಎಂದು ಆಕೆ ಹೊರಟು ಹೋಗುತ್ತಾಳೆ.

ಇತ್ತ ಮನೆಗೆ ಬಂದ ರಾಜಶೇಖರನಿಗೆ ಶಾಕ್ ಕಾದಿರುತ್ತದೆ. ತನಗೆ ಪತ್ರ ಬರೆದ ಹೆಣ್ಣು, ತಾನು ಫೋನ್ ನಲ್ಲಿ ಮಾತಾಡಿ ಕನ್ಫರ್ಮ್ ಮಾಡಿಕೊಂಡ ಹೆಣ್ಣು ಮತ್ತು ಕಾಫೀ ಡೇಯಲ್ಲಿ ಭೇಟಿಯಾದ ಹೆಣ್ಣು ಮೂವರು ಬೇರೆಬೇರೆ ಎಂಬುದೂ, ಆದರೆ ಎಲ್ಲರ ಹೆಸರೂ ಮಾಳವಿಕ ಎಂಬುದು ತಿಳಿದಾಗ ಚಿತ್ತಕ್ಷೋಭೆಗೊಳಗಾಗಿ ವೇಶ್ಯಾಗೃಹವೊಂದಕ್ಕೆ ಹೋಗುತ್ತಾನೆ. ಹೆಣ್ಣೋರ್ವಳನ್ನು ಮೊದಲ ಬಾರಿ ಸುಖಿಸಿದ ರಾಜಶೇಖರ ಅವಳ ಹೆಸರೇನೆಂದು ಕೇಳಿದಾಗ ಅವಳು ‘ಮಾಳವಿಕ’ ಎನ್ನುತ್ತಾಳೆ. ಆ ಹೆಸರು ಕೇಳಿದವನೇ ‘ರಾತ್ರಿಯಿಡೀ ಅವಳ ಮಡಿಲಲ್ಲಿ ಬೆತ್ತಲಾಗಿ, ಜ್ವರಬಂದ ಮಗು ತಾಯಿಯ ಮಡಿಲಲ್ಲಿ ಮಲಗಿದ ಹಾಗೆ ಮಲಗಿದ’ ಎಂಬ ಸಾಲಿನಿಂದ ಕತೆ ಮುಕ್ತಾಯವಾಗುತ್ತದೆ

 

‘ನೆನಪಾಯ್ತೇನು ? ನೀವು ನನಗೆ ಮಾಡಿರುವ ಅನ್ಯಾಯ ಏನೆಂದು?’ ನನಗೆ ಕತೆ ನೆನಪಿಸಿಕೊಳ್ಳಲು ಸಮಯ ಕೊಟ್ಟ ನಂತರ ಆಕೆ ಮತ್ತೆ ಕೇಳಿದಳು.

‘ನಿಮಗೇನೋ ಭ್ರಮೆ. ಮೊದಲು ರಾಜಶೇಖರನಿಗೆ ಅನ್ಯಾಯ ಆಗಿದೆ ಅಂದ್ರಿ. ಈಗ ನಿಮಗೆ ಅನ್ಯಾಯ ಆಗಿದೆ ಅಂತಿದ್ದೀರಿ. ನಿಮ್ಮ ಮಾತಿನ ಉದ್ದೇಶವೇನು? ನಿಜ ಹೇಳಿ, ವೃಥಾ ಹೀಗೆ ಕೂತು ಅಪರಿಚಿತ ಹೆಣ್ಣೋರ್ವಳೊಂದಿಗೆ ಮಾತನಾಡಲಾರೆ’

‘ಮತ್ಯಾಕೆ ನನ್ನ ಆಹ್ವಾನವನ್ನು ಒಪ್ಪಿ ಕಾಫಿ ಡೇಗೆ ಬಂದಿದ್ದೀರಿ?’

‘ನೀವು ಕಾಲ್ ನಲ್ಲಿ ಹೇಳಿದ್ದು ನನ್ನ ಅಭಿಮಾನಿ ಓದುಗಳು ಅಂತ. ಹಾಗಾಗಿ ಬಂದೆ’

‘ನಿಮ್ಮ ಹೆಂಡತಿಗೆ ಹೇಳಿ ಬಂದಿರಾ ?’

‘ಇಲ್ಲ. ಆದರೆ ಹೋಗಿ ಹೇಳುತ್ತೇನೆ’

‘ಓಹೋ , ಅಂದರೆ ನಿಮ್ಮ ಕತೆಯ ಪಾತ್ರಕ್ಕೆ ಮಾತ್ರ ಅಪರಿಚಿತ ಹೆಣ್ಣೊಂದರ ಸಾಂಗತ್ಯ ಬೇಕು. ಅದರಲ್ಲಿ ನಿಮಗೆ ನಂಬಿಕೆಯಿದೆ. ನೀವು ಮಾತ್ರ ಸಭ್ಯರಂತೆ ನಟಿಸುತ್ತಿದ್ದೀರಿ ಅಲ್ಲವೆ?

‘ಏನು ನಿಮ್ಮ ಮಾತಿನ ಅರ್ಥ ?’ ಸಿಟ್ಟಿನಿಂದಲೇ ಕೇಳಿದೆ.

‘ವೆರಿ ಸಿಂಪಲ್. ಹೆಣ್ಣೊಬ್ಬಳು ಗಂಡಸಿನ ಸಹವಾಸಕ್ಕೆ ಹಾತೊರೆಯುತ್ತಿದ್ದಾಳೇನೋ ಎಂಬುದನ್ನು ಚಿತ್ರಿಸಿರುವ ನೀವು ಅಲ್ಲಿ ಬರುವ ಎಲ್ಲ ಹೆಣ್ಣುಗಳಿಗೂ ಮಾಳವಿಕ ಎಂದೇ ಹೆಸರಿಟ್ಟಿದ್ದೀರಿ. ಎಲ್ಲರೂ ತಮ್ಮ ಮನೋವಾಂಛೆಗಳನ್ನು ಈಡೇರಿಸಲು ಕಾದು ಕುಳಿತವರಂತೆ ಬರೆದಿದ್ದೀರಿ. ಅದರಲ್ಲೂ ಓರ್ವ ಸೈನ್ಯದವನ ಹೆಂಡತಿ ಪಾತ್ರವೂ ಇರುವುದು ನಿಮ್ಮ ಮನೋವಿಕಾರತೆಯನ್ನು ತೋರಿಸುತ್ತದೆ. ಜೊತೆಗೆ ಕಥಾನಾಯಕನಿಗೆ ಯಾವೊಬ್ಬ ಹೆಣ್ಣೂ ಸಿಗದಂತೆ ಮಾಡಿ ಅವನ ಬಗ್ಗೆಯೇ ಕನಿಕರ ಹುಟ್ಟುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದೀರಿ’

‘ಮಾಳವಿಕ ಎಂಬುದು ಒಂದು ಹೆಸರು ಮಾತ್ರ’ ಎಂದು ಹೇಳಿ ನುಣುಚಿಕೊಳ್ಳಲು ಪ್ರಯತ್ನಿಸಿದೆ.

‘ಯಾಕೆ ? ಅದೊಂದು ವ್ಯಕ್ತಿತ್ವ ಅಂತ ನಿಮಗೆ ಅನ್ನಿಸಲಿಲ್ಲವೆ? ಕೇವಲ ಕತೆಯಲ್ಲಿ ರೋಚಕತೆ ನೀಡುವ ಸಲುವಾಗಿ, ಅನಗತ್ಯ ಕುತೂಹಲ ಸೃಷ್ಟಿಸುವ ಸಲುವಾಗಿ ಹೆಣ್ಣು ಪಾತ್ರಗಳನ್ನು ಬಳಸಿಕೊಂಡು, ಅಸೂಕ್ಷ್ಮತೆಯಿಂದ ಅವುಗಳನ್ನು ನಿಭಾಯಿಸಿದ್ದೂ ಅಲ್ಲದೆ ಎಲ್ಲ ಪಾತ್ರಗಳಿಗೂ ‘ಮಾಳವಿಕ’ ಎಂದೇ ಹೆಸರು ಕೊಟ್ಟಿದ್ದೀರಿ. ಇದು ಹೆಣ್ಣು ಕುಲಕ್ಕೆ ನೀವು ಮಾಡಿದ ಅವಮಾನ. ಅದರಲ್ಲೂ ಸೈನಿಕರ ಕುಟುಂಬಕ್ಕೆ , ವಿಧವೆಯರ ಕುಟುಂಬಕ್ಕೆ ಕೊನೆಯಲ್ಲಿ‌ ವೇಶ್ಯೆಯೋರ್ವಳ ವೃತ್ತಿಗೂ ನೀವು ಅವಮಾನ ಮಾಡಿದ್ದೀರಿ’

‘ಏನ್ರೀ ನೀವ್ ಹೇಳ್ತಿರೋದು. ಅದೊಂದು ಕತೆ ಅಷ್ಟೇ. ಅದರಲ್ಲಿ ಏನೇನೋ ಹುಡುಕ್ಬೇಡಿ’ ಅಂದೆ.

‘ಕತೆನೇ ಇರ್ಬೋದು. ಆದರೆ ನನ್ನ ಗೆಳತಿಯೋರ್ವಳು ಈ ಕತೆಯನ್ನು ಕೊಟ್ಟು, ‘ಓದು ನೀನೇ ಹೀರೋಯಿನ್ ಈ ಕತೆಗೆ’  ಅಂದಳು. ಅವಳು ಹೇಳಿದ್ದು ಕತೆಯಲ್ಲಿನ ಎಲ್ಲ ಪಾತ್ರಗಳ ಹೆಸರೂ ಮಾಳವಿಕ ಮತ್ತು ನನ್ನ ಹೆಸರೂ ಮಾಳವಿಕ ಆದ್ದರಿಂದಲೇ ಇರಬೇಕು. ಹಾಗಾಗಿ ನನ್ನ ಹೆಸರಿನ ಈ ಪಾತ್ರಗಳಿಗೆ ನೀವು ಮಾಡಿರುವ ಅವಮಾನ ಮತ್ತು ಅನ್ಯಾಯಕ್ಕೆ ನ್ಯಾಯ ಒದಗಿಸಲೇಬೇಕು’.

ಎಂದು ಆಕೆ ಹೇಳುತ್ತಿದ್ದರೆ ಕುಡಿಯುತ್ತಿದ್ದ ಕೋಲ್ಡ್ ಕಾಫಿಯೂ ಹಾಟ್ ಆಗಿ ಹೋಗಿತ್ತು.
‘ಸರಿ. ಈಗ ನಾನೇನು ಮಾಡಬೇಕು ಹೇಳಿ ?’ ಎಂದೆ.

‘ನನ್ನ ನಾಲ್ಕು ಪ್ರಶ್ನೆಗಳಿಗೆ ಉತ್ತರಿಸಿ. ಆಮೇಲೆ ಹೇಳ್ತೇನೆ ಏನ್ ಮಾಡ್ಬೇಕು ಅಂತ’

‘ಆಯ್ತು ಕೇಳಿ ‘ ಎಂದೆನಾದರೂ ಹಿಂದಿನ ದಿನ ಈಕೆ ನನ್ನ ಓದುಗಳು ಎಂದು ಪರಿಚಯಿಸಿಕೊಂಡು ನನ್ನನ್ನು ಭೇಟಿಯಾಗಲು ಇತ್ತ ಬೇಡಿಕೆಯನ್ನು ಯಾಕಾದರೂ ಒಪ್ಪಿಕೊಂಡು ಇಲ್ಲಿಗೆ ಬಂದೆನಪ್ಪ ಅನ್ನಿಸಿತು.

‘ಹಾಗೆ ಯಾರೋ ಒಬ್ಬಳು ಅಪರಿಚಿತ ಹೆಣ್ಣು ಪತ್ರ ಬರೆದು ಯಾವ ಸ್ಪಷ್ಟತೆಯನ್ನೂ ನೀಡದೆ ಮೀಟ್ ಆಗೋಣ ಅಂದ್ರೆ ನೀವು ಹೋಗ್ತೀರ?

‘ಇಲ್ಲ…’

ನೀವು ಕಾಲ್ ಮಾಡಿದಾಗ ಓರ್ವ ಮಿಲಟರಿಯವನ ಪತ್ನಿ ನಿಮ್ಮನ್ನು ಹಾಗೆ ಅಕಸ್ಮಾತ್ ಆಹ್ವಾನಿಸಿದರೂ ನೀವು ಹೋಗುತ್ತೀರ ?’

‘ಇಲ್ಲವೇ ಇಲ್ಲ… ‘

‘ಕಾಫಿ ಡೇಯಲ್ಲಿ ಸಿಕ್ಕ ಹೆಣ್ಣೋರ್ವಳ ಜೊತೆ ಒಂದೇ ಭೇಟಿಯಲ್ಲಿ ಸಹಜೀವನದ ಬಗ್ಗೆ ತೀರ್ಮಾನ ತೆಗೆದುಕೊಂಡುಬಿಡುತ್ತೀರ ?’

‘ಸಾಧ್ಯವಿಲ್ಲ…’

‘ಕೇವಲ ನಿಮಗೆ ಪತ್ರ ಬರೆದವಳು ನಿಮ್ಮನ್ನು ಭೇಟಿ ಮಾಡದೆ ಟ್ರ್ಯಾಪ್ ಮಾಡಿದ್ದಾಳೆ ಎಂಬ ಕಾರಣಕ್ಕೆ ನೀವು ವೇಶ್ಯಾಗೃಹಕ್ಕೆ ಹೋಗುತ್ತೀರ ?’

‘ಖಂಡಿತಾ ಇಲ್ಲ…’

‘ಇಷ್ಟು ಸಾಕಲ್ಲವೆ ಮಾಳವಿಕ ಎಂಬ ಹೆಸರಿನವಳೇ ಆದ ನಾನು ನಿಮ್ಮ ಮೇಲೆ ಕೇಸ್ ಹಾಕುವುದಕ್ಕೆ? ದಯವಿಟ್ಟು ಕ್ಷಮಿಸಿ. ನಾನು ನಿಮ್ಮ ಓದುಗಳು ಅಂತ ಕರೆಸಿಕೊಂಡು ಹೀಗೆ ಮಾತನಾಡುತ್ತಿರುವುದಕ್ಕೆ. ಆದರೆ ನಿಮ್ಮ ಪ್ರಾಮಾಣಿಕ ಉತ್ತರಗಳಿಂದ ನನಗೆ ಖುಷಿಯಾಯಿತು’

 

‘ನೀವು ಮಾಡಿದ್ದು ಮೋಸವಲ್ಲವೆ ?’

‘ಇರಬಹುದು. ಆದರೆ ನೀವು ಮಾಳವಿಕ ಮತ್ತು ರಾಜಶೇಖರನಿಗೆ ಮಾಡಿದಂತಾ ಮೋಸಕ್ಕಿಂತ ದೊಡ್ಡದೇನಲ್ಲ ಬಿಡಿ’

‘ಅಂದರೆ ನೀವು ನನ್ನ ಮೇಲೆ ಕೇಸು ದಾಖಲಿಸಿಯೇ ತೀರುತ್ತೀರಿ ಅಂದ ಹಾಗಾಯಿತು’

‘ಹೌದು’

“Why don’t we settle this issue amicably ?’

‘ನೋ. ಸಾಧ್ಯವಿಲ್ಲ. ಏಕಾಂತದಲ್ಲಿ ಕೂತು ಲೋಕಾಂತದ ಬಗ್ಗೆ ಬೇಕಾಬಿಟ್ಟಿ ಬರೆಯುವ ಎಲ್ಲರಿಗೂ ಇದೊಂದು ಪಾಠವಾಗಬೇಕು. ನಾನು ಕೇಸ್ ಹಾಕಿಯೇ ತೀರುತ್ತೇನೆ’ ಎಂದವಳು ಬಿಲ್ ಕೊಟ್ಟು ಹೊರಟು ಹೋದಳು.

ಇಂದಲ್ಲ ನಾಳೆ ಕೋರ್ಟ್ ನಿಂದ ನನಗೆ ಸಮನ್ಸ್ ಬರಬಹುದು. ಮಾಳವಿಕ ಹಾಕಿರುವ ಈ ಕೇಸು ಕೇವಲ ಕತೆಗಾರರಿಗಲ್ಲ, ಓದುಗರಿಗೂ ಪಾಠವಾಗಬೇಕಲ್ಲವೆ ? ಕೇಸು ನಡೆಸುವಷ್ಟು ಹಣ ಈ ಕತೆಗಾರನ ಬಳಿ ಇಲ್ಲ. ಹಾಗಾಗಿ ಕತೆಯ ಪರವಾಗಿ, ಕತೆಗಾರನ ಪರವಾಗಿ ವಕೀಲಿಕೆ ಮಾಡುವ ಒಬ್ಬ ಓದುಗನಿಗಾಗಿ ನಾನು ಕಾಯುತ್ತಿದ್ದೇನೆ..

‍ಲೇಖಕರು Avadhi Admin

March 26, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

5 ಪ್ರತಿಕ್ರಿಯೆಗಳು

  1. ಸಿಂಧು

    ನಂಗೆ ಈ ಕಥೆ, ಮತ್ತು ಸಂವೇದನೆಗಳ ಟ್ರೀಟ್ ಮೆಂಟ್ ಇಷ್ಟ ಆಯ್ತು. ಚೆನಾಗಿದೆ ಕಥೆ.

    ಪ್ರತಿಕ್ರಿಯೆ
  2. Sudha Hegde

    ಅಂತೂ ಸಿಕ್ಕಿತು. ಇಲ್ಲಾಂದ್ರೆ ನಿಮ್ಮ ಮೇಲೇ ಕೇಸ್ ಹಾಕ್ಕಿದ್ದೆ

    ಪ್ರತಿಕ್ರಿಯೆ
  3. ಈಶ್ವರಗೌಡ ಪಾಟೀಲ

    ಸಿಂಪ್ಲಿ ಸೂಪರ್ಬ್‌!!!!

    ಹೋಗ್ಲಿ ಬಿಡಿ ಸರ್…
    ಸಮನ್ಸ್‌ ಬಂದಾದ ಮೇಲೆ ದಯವಿಟ್ಟು ನಮಗೆ ತಿಳಿಸಿ. ವಾದ ವಿವಾದಗಳ ನಿರ್ವಹಣೆಗೆ ನಮ್ಮ ವಕೀಲರು ನಿಮ್ಮೊಂದಿಗಿದ್ದಾರೆ. ನಿಶ್ಶುಲ್ಕವಾಗಿ…!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: