ರೂಪಾ ಚಿಂತಾಮಣಿ
ಆಗಲೂ ಹೀಗೇ..
ಚಹಾದ ಎಲೆಗಳು
ಘಮ್ಮೆಂದು ಕುದಿಯುತ್ತಿದ್ದವು..
ಪೂರ್ವದ ಬಾಗಿಲಿನಿಂದ
ಅಡುಗೆ ಕೋಣೆಗೂ
ದೇವರ ಕೋಣೆಗೂ ನಡುವೆ
ಒಂದು ಬಿಸಿಲು ಕೋಲು
ಮೂಡುವುದಕ್ಕೆ ಸರಿಯಾಗಿ..
ಅಡುಗೆ ಕೋಣೆಯೊಂದು
ಸುದ್ದಿಕೋಣೆಯಾಗಿ
ಅದಾಗಷ್ಟೇ ಅಂಗಳಕ್ಕೆ ಬಿದ್ದ
ಗರಿ ಗರಿ ಪೇಪರು
ಬಿಸಿ ಬಿಸಿ ಸುದ್ದಿಗಳು
ಅಪ್ಪನ ಬಾಯಿಂದ
ಅಮ್ಮನ ಕಿವಿಗೆ!
ವರದಕ್ಷಿಣೆಗೆ ನವವಧುವೊಂದು
ಸುಟ್ಟುಹೋದ ಸುದ್ದಿಗೊಂದು
ಕಣ್ಣೀರು..
ಕಿರಣ್‍ಬೇಡಿಯ ಸಾಹಸ
ಕಥನಗಳಿಗೊಂದು
ಪರಾಕು.. ಚಿನ್ನದ ಬೆಲೆ
ರೂಪಾಯಿ ಮುನ್ನೂರು, ಗ್ರಾಮಿಗೆ!
ಜತೆಗೆ
ನಿಂಬೆಹಣ್ಣು ಬೇಡ ಸ್ವಾಮಿ!
ಕುಂಬಳಕಾಯಿ ಸೃಷ್ಟಿಸಿ ಕೊಡಿ-ಎಂದ
ಎಚ್ಚೆನ್ ಬೇಡಿಕೆ..

ಆ ಬೇಡಿಕೆಗೊಂದು
ಅಮ್ಮನ ಕಿರುನಗೆ
ಚಹಾ ಸ್ವಾದದೊಂದಿಗೆ
ನಗೆಯ ಸ್ವಾದ- ಆಸ್ವಾದ
ಆಮೇಲೊಂದಿಷ್ಟು ಮಾತುಕತೆ
ಒಂದಿಷ್ಟು ಒಗ್ಗರಣೆ!
ಮಧ್ಯಾಹ್ನದ ನಡು ಬಿಸಿಲಿನ ವೇಳೆಗೆ
ದೃಶ್ಯ ಬದಲು
ಗವಾಕ್ಷಿಯಿಂದಿಣುಕಿದ
ತುಸು ಮಾಗಿದ
ಬಿಸಿಲುಕೋಲು
ನಡುಮನೆಯಲ್ಲಿ
ಧಾರಾವಾಹಿಯ ವಾಚನಕ್ಕೆ
ಈಗ ಮತ್ತೆ ಕಿವಿಯಾಗಿ ಅಮ್ಮ..
ಕತೆ ಕೇಳುತ್ತ, ಕೇಳುತ್ತಾ
ಸಾಂಗತ್ಯ, ಸಾಮರಸ್ಯದ
ನೆಮ್ಮದಿಗೆ
ಸವಿನಿದ್ದೆಯ ಜೊಂಪು
ಇಳಿಬಿಸಿಲಿನ ವೇಳೆಗೆ
ಕಣ್ಣೇಕೋ ತುಸು ಮಂಜು
ಸಂಜೆಯ ಚಹಾ
ಸಿದ್ಧವಾಗುತ್ತಿದೆ ಒಲೆಯ ಮೇಲೆ..
ಕೊರತೆಯೊಂದೇ..
ಕತೆ ಹೇಳಲು
ಅಪ್ಪನಿಲ್ಲ.. ಹಾಗೇ
ಬಿಸಿಲುಕೋಲೂ..






ವಾಹ್..! ಎಷ್ಟು ಚೆಂದದ ಕವಿತೆ..!
Tumba chandada kavithe
Thanks