ಆತ್ಮೀಯ ಗೆಳೆಯನಿಗೆ ಶ್ರದ್ಧಾಂಜಲಿ

ಶೂದ್ರ ಶ್ರೀನಿವಾಸ್

ಕಳೆದ ಮೂರೂವರೆ ದಶಕಗಳಿಂದ ಆತ್ಮೀಯ ಗೆಳೆಯನಾಗಿದ್ದ ಅಶೋಕ್ ಕುಮಾರ್ ಆತ್ಮಹತ್ಯೆಯ ಮೊರೆಹೋಗಿದ್ದಾನೆ ಎಂಬ ಸುದ್ದಿಯನ್ನು ಇಂದಿನ ಪ್ರಜಾವಾಣಿಯಲ್ಲಿ ಓದಿ ಒಂದು ಕ್ಷಣ ಗಾಬರಿಯಾದೆ.

ಕೇವಲ ಅರವತ್ನಾಲ್ಕು ವರ್ಷ ಮಾತ್ರ. ಎಷ್ಟೊಂದು ಲವಲವಿಕೆಯ ಪ್ರಾಧ್ಯಾಪಕ ಗೆಳೆಯ. ಅವನ ವ್ಯಕ್ತಿತ್ವವೇ ಪಾದರಸದಂತೆ ಇತ್ತು. ಅತ್ಯಂತ ಸೊಣಕಲಾಗಿ ನನ್ನಷ್ಟೇ ಎತ್ತರವಿದ್ದರೂ; ಅವನ ನಿರ್ದಾಕ್ಷಿಣ್ಯತೆ ಮತ್ತು ಪ್ರಾಮಾಣಿಕತೆ ಹಾಗೂ ಬೌದ್ಧಿಕತೆಯ ಕಾರಣಕ್ಕಾಗಿ ವಿದ್ಯಾರ್ಥಿಗಳ ನಡುವೆ ತುಂಬಾ ಜನಪ್ರಿಯನಾಗಿದ್ದ.

ಜರ್ನಲಿಸಂ ವಿಭಾಗದಲ್ಲಿ ಅದರ ಮುಖ್ಯಸ್ಥರಾಗಿದ್ದ ಪ್ರೊಫೆಸರ್ ಈಪನ್ ಮತ್ತು ಪ್ರೊ.ಈಶ್ವರ್ (ಡಾ.ಹಾ.ಮ. ನಾಯಕರ ಸೋದರ) ಅವರಿಗೆ ಸಾಕಷ್ಟು ಆಪ್ತನಾಗಿದ್ದ. ವಿದ್ಯಾರ್ಥಿಗಳ ನಡುವೆಯಂತೂ ಜನಪ್ರಿಯ. ಬೆಂಗಳೂರು ವಿ.ವಿಯ ಸಂವಹನ ವಿಭಾಗಕ್ಕೆ ಬರುವ ಮುನ್ನ ಪ್ರತಿಷ್ಠಿತ ರಾಷ್ಟ್ರೀಯ ವಿದ್ಯಾಲಯ ಸಂಸ್ಥೆಯಲ್ಲಿ ಶಿಕ್ಷಕನಾಗಿದ್ದ.

ಆಗ ಅಲ್ಲಿ ತನ್ನ ವಿದ್ಯಾರ್ಥಿನಿಯನ್ನು ಪ್ರೀತಿಸಿ ಮದುವೆಯಾದ. ಆರ್ಯಸಮಾಜದ ಆ ಮದುವೆಗೆ ನಾನು ಸಾಕ್ಷಿಯಾಗಿ ಸಹಿ ಹಾಕಿದ್ದೆ. ಆಗ ನಾನು ಅಧ್ಯಾಪಕನಾಗಿದ್ದೆ. ಹುಡುಗಿಯ ಕಡೆ ಇಷ್ಟವಿರಲಿಲ್ಲ. ಇದಕ್ಕೆ ಕಾರ್ಯದರ್ಶಿ ಪಾಂಡು ಅವರು ನನ್ನನ್ನು ಕರೆಸಿ ವಿಚಾರಿಸಿದ್ದರು. ಅಂತರ್ಜಾತೀಯ ಮದುವೆ.

ಮುಂದೆ ಅವನ ವ್ಯಕ್ತಿತ್ವದ ಕಾರಣದಿಂದ ಹೆಂಡತಿಯ ಕಡೆಯವರೂ ಇಷ್ಟಪಟ್ಟರು. ಒಮ್ಮೆ ಡ್ರಿಂಕ್ಸ್ ತೆಗೆದುಕೊಳ್ಳುವಾಗ ತನ್ನ ಮಾವನನ್ನು ಪರಿಚಯಿಸಿದ್ದ. ಈ ಎನ್.ಎಸ್.ಅಶೋಕ್ ಮತ್ತು ಬಿ.ಎ. ಶ್ರೀಧರ್ ಅವರ ಕಾರಣಕ್ಕಾಗಿ ಬೆಂಗಳೂರು ವಿ.ವಿಯ ವಿಭಾಗ ನನಗೆ ತುಂಬಾ ಆಪ್ತವಾಗಿತ್ತು.

ಅವರಿಬ್ಬರೂ ಶೂದ್ರಕ್ಕೆ ಲೇಖನಗಳನ್ನು ಬರೆಯುತ್ತಿದ್ದರು. ಮುಂದೆ ನಾನು ‘ ಸಲ್ಲಾಪ ‘ ಟ್ಯಾಬ್ಲಾಯ್ಡ್ ವಾರಪತ್ರಿಕೆ ತಂದಾಗ ಇಬ್ಬರೂ ಪ್ರತಿವಾರ
ಬರೆದರು. ನನಗೆ ಅಸ್ಸಾಂ ಭಾಷೆಯ ಪ್ರಸಿದ್ಧ ಕಾದಂಬರಿಕಾರರು ಹಾಗೂ ಸಮಾಜವಾದಿ ಹೋರಾಟಗಾರರಾದ ಬೀರೇಂದ್ರ ಕುಮಾರ್ ಭಟ್ಟಾಚಾರ್ಯ ಅವರು ಆತ್ಮೀಯವಾಗಿ ಪರಿಚಯವಾಗಲು ಅಶೋಕ್ ಕುಮಾರ್ ಕಾರಣ.

ಅಶೋಕ್ ಅವರ ಅಣ್ಣ ಎನ್. ಎಸ್. ರಘುನಾಥ್ ಅವರು ಭಟ್ಟಾಚಾರ್ಯ ಅವರ ತಮ್ಮನ ಮಗಳನ್ನು ಪ್ರೀತಿಸಿ ಮದುವೆಯಾಗಿದ್ದರು. ಈ ಕಾರಣಕ್ಕಾಗಿ ಅವರು ಅಶೋಕ್ ಕುಮಾರ್ ಗೂ ತುಂಬಾ ಹತ್ತಿರವಾದರು. ಒಮ್ಮೆ ಭಟ್ಟಾಚಾರ್ಯ ಅವರನ್ನು ಎರಡು ದಿನ ಕೆಲವು ಘಂಟೆ ಕಾಲ ನಾನು ಭೇಟಿಯಾಗಿ ಅವರ ಬರವಣಿಗೆ ಮತ್ತು ವ್ಯಕ್ತಿತ್ವವನ್ನು ಅರಿಯಲು ಸಾಧ್ಯವಾಯಿತು.

ಆಗಲೇ ಅಸ್ಸಾಂ ಭಾಷೆಯ ಅಪೂರ್ವ ಲೇಖಕಿ ಇಂದಿರಾ ಗೋಸ್ವಾಮಿಯವರನ್ನು ಅರಿಯಲು ಸಾಧ್ಯಾವಾಗಿದ್ದು. ಹಾಗೂ ಸಮಾಜವಾದಿ ಚಳವಳಿಯ ಕುರಿತು ಅವರ ಅನುಭವವನ್ನು ಗ್ರಹಿಸಲು ಅವಕಾಶ ಸಿಕ್ಕಿತು. ಇದರ ಬಗ್ಗೆ ಲಂಕೇಶ್ ಪತ್ರಿಕೆ ಹಾಗೂ ಶೂದ್ರದಲ್ಲಿ ಬರೆದಿದ್ದೆ.

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಜ್ಞಾನಪೀಠ ಮಾಲೆಯಲ್ಲಿ ಒಂದು ಕೃತಿ ಬರೆದುಕೊಡಲು ಆಗಿನ ಅಧ್ಯಕ್ಷೆ ಗೀತಾ ನಾಗಭೂಷಣ ಅವರು ಬೀರೇಂದ್ರ ಕುಮಾರ್ ಭಟ್ಟಾಚಾರ್ಯರ ಬಗ್ಗೆ ಬರೆಯಲು ಸೂಚಿಸಿದರು. ಆದರೆ ನನಗೆ ಅವರ ಬಗ್ಗೆ ಏನೇನೂ ಮಾಹಿತಿ ಸಿಗಲಿಲ್ಲ. ಸಾಕಷ್ಟು ಪ್ರಯತ್ನಿಸಿದೆ. ಕೊನೆಗೆ ಪ್ರೊ. ಎಂ.ಹೆಚ್. ಕೃಷ್ಣಯ್ಯನವರು ಯು.ಆರ್.ಅನಂತಮೂರ್ತಿಯವರ ಬಗ್ಗೆ ಬರೆಯಲು ಒತ್ತಾಯಿಸಿದರು.

ನಾನು ಇಷ್ಟ ಪಡುವ ಚಿಂತಕರು ವಿಮರ್ಶಕರು ಆಗಿದ್ದರಿಂದ ಒಪ್ಪಿಕೊಂಡೆ. ಆ ಸುಮಾರಿಗೆ ಇಬ್ಬರು ಲೇಖಕರು ಒಪ್ಪಿಕೊಂಡು ಆಗದೆ ಬಿಟ್ಟಿದ್ದರು. ನಾನು ಸಂತೋಷದಿಂದ ಒಪ್ಪಿ ಬರೆದೆ ; ಆರು ತಿಂಗಳು ಅನಂತಮೂರ್ತಿಯವರ ಸಾಹಿತ್ಯದಲ್ಲಿ ತಲ್ಲೀನನಾಗಿರಲು ಸಾಧ್ಯವಾಯಿತು. ಕೊನೆಗೆ ಪ್ರೊ.ಕೃಷ್ಣಯ್ಯನವರು ಅನಂತಮೂರ್ತಿಯವರ ಸಮ್ಮುಖದಲ್ಲಿ ಒಂದು ಉತ್ತಮ ಬಿಡುಗಡೆಯ ಕಾರ್ಯಕ್ರಮ ಏರ್ಪಡಿಸಿದರು.

ಅಂದು ಈ ಅಶೋಕ್ ಕುಮಾರ್ ಕೂಡ ಕಾರ್ಯಕ್ರಮಕ್ಕೆ ಬಂದಿದ್ದ. ಅನಂತಮೂರ್ತಿಯವರಿಗೆ ಅತ್ಯಂತ ಪ್ರಿಯನಾದ ವ್ಯಕ್ತಿ. ಅಶೋಕ್ ಬೆಂ.ವಿ.ವಿ.ಯ ಸಂವಹನ ವಿಭಾಗದಲ್ಲಿ ನಾನಾ ಪ್ರಯೋಗಗಳನ್ನು ನಡೆಸಿ ನೂರಾರು ಅತ್ಯುತ್ತಮ ವೃತ್ತಿಪರ ವಿದ್ಯಾರ್ಥಿಗಳನ್ನು ವಿಭಾಗದಿಂದ ಹೊರಗೆ ಕಳಿಸಿದ್ದಾನೆ.

ತನ್ನ ಸೇವೆಯ ಕೊನೆಯ ದಿನಗಳಲ್ಲಿ ಉಪಕುಲಪತಿ ಆಗಬೇಕೆಂದು ಕನಸು ಕಂಡವನು. ಅದಕ್ಕೆ ಸಾಕಷ್ಟು ಪ್ರಯತ್ನ ಪಟ್ಟ. ಎರಡು ದಿನ ನನ್ನನ್ನು ಜೊತೆಯಲ್ಲಿ ಕರೆದುಕೊಂಡು ಯಾರ್ಯಾರನ್ನೋ ಭೇಟಿಯಾದೆವು. ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದಾಗ. ಆದರೆ ಆಗಲಿಲ್ಲ. ‌ಈ ಹಿನ್ನೆಲೆಯಲ್ಲಿ ಸಾಕಷ್ಟು ಡೆಸ್ಪರೇಟ್‌ ಆಗಿದ್ದ ಅನ್ನಿಸುತ್ತದೆ.

ಅವನ ವ್ಯಕ್ತಿತ್ವ ಆತ್ಮಹತ್ಯೆಗೆ ಹೋಗುವಂಥದ್ದಲ್ಲ. ಕಳೆದ ಒಂದು ವರ್ಷದಿಂದ ತುಂಬಾ ಪ್ರಯತ್ನಿಸಿದೆ ಭೇಟಿಯಾಗಲು. ಸಂಜೆ ಸುಂದರವಾಗಿ ಕಾಲ
ಕಳೆಯಲು. ಕೊನೆಗೂ ಆಗಲಿಲ್ಲ. ಕರೋನ ಅವನ ಒಂಟಿತನವನ್ನು ದುರಂತಮಯತೆಗೆ ಕರೆದೊಯ್ದಿತು. ನೂರಾರು ಮಂದಿಗೆ ಜೀವ ತುಂಬುವ ವ್ಯಕ್ತಿ. ತನಗೆ ಜೀವ ತುಂಬುವವರು ಯಾರೂ ಇಲ್ಲವೇನೋ ಎಂದು ಸಾಕಷ್ಟು ಒದ್ದಾಡಿರಬೇಕು. ಆದರೂ ಪ್ರೀತಿಯಿಂದ ಶ್ರದ್ಧಾಂಜಲಿ ಅರ್ಪಿಸುವೆ.

‍ಲೇಖಕರು Avadhi

November 10, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. G.N.Rangantaha Rao

    Maanyre,
    ] samvahana pradhyapkaraagi patrikoodymkke hosa piiligeya patrakartrannu sajjugoliisida,viseshavaagi vidyunmaana patrikodyamadalli ivattina agatyaglige anugunvaagi hosa Talemaaarina patrakartarnnu roopugolisuvudaralli hecchu mutuvarji vahisidda Kiriy Mitra Aashoka kumar avar nidhanad suddi oodi digbhrantanade. Bhrasta vyavsthe avrnnu atmahatye yantha dudukina niirdharkke dooiddu nijavaagiddall i Aaaluva sakara r maatravallde idi samaja idkkke honeyaagutttade.Aashoka kumaar Prjavavaaniyalli intarneeyaagi kelsmaaduttidaaga Nnnage tumba hattirvaagiddaru.
    Shoodra Srinivasa avara kambaniyondige nannadu erardu hani kambani agalida vruttibandhavanige.
    G.N.Ranganatha Raota

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: