ಚಡ್ಡಿ, ಬನಿಯನ್‍ ಮಧ್ಯೆ ಸಿಕ್ಕೇಬಿಟ್ಟಿತು ‘ಆ ಪುಸ್ತಕ’

। ಕಳೆದ ವಾರದಿಂದ ।

ಒಂದು ದಿನ ಬೆಳಿಗ್ಗೆ ಎಂಟೂವರೆ ಗಂಟೆಗೆಲ್ಲ ಹಂಪಸಾಗರ ಪಶುಚಿಕಿತ್ಸಾಲಯಕ್ಕೆ ಪೋಲೀಸರೊಬ್ಬರು ಶಿಸ್ತಾಗಿ ಬಂದು ನಮಸ್ಕರಿಸಿದರು. ರೈತರಲ್ಲದೆ ಮತ್ತಾರೂ ಅಕಸ್ಮಾತ್ತಾಗಿಯೂ ಬಾರದ ದನಿನಾಸ್ಪತ್ರೆಗೆ ಇವರೇಕೆ ಬಂದರು ಎಂದು ಅವಾಕ್ಕಾಗಿ ಪ್ರತಿನಮಸ್ಕರಿಸಿದೆ. ಬಹುಶಃ ಇವರ ಮನೆಯಲ್ಲಿಯ ನಾಯಿ ಅಥವಾ ಬೆಕ್ಕಿಗೆ ಏನೋ ಆಗಿರಬೇಕು ಎಂದುಕೊಂಡೆ.

ಆದರೆ ಪೋಲೀಸ್ “ನಿಮ್ಮ ಸೂಟ್‍ಕೇಸನ್ನು ಯಾರೋ ಕದ್ದು ಊರ ಹೊರಗಡೆ ಎಸೆದು ಹೋಗಿದ್ದಾರೆ. ಬಂದು ನೋಡಿ. ಅದರಲ್ಲಿ ನಿಮ್ಮ ಒಂದು ಪುಸ್ತಕವಿದೆ. ಪುಸ್ತಕದ ಮೇಲೆ ನಿಮ್ಮ ಹೆಸರಿದೆ. ಅದು ನಿಮ್ಮ ಸೂಟ್‍ಕೇಸ್ ಎಂದಾದರೆ ಒಂದು ಕಂಪ್ಲೇಂಟ್ ಕೊಡಿ” ಎಂದರು.

ಮನೆಯಲ್ಲಿ ಒಂದು ಬೆಂಕಿ ಕಡ್ಡಿ ಅತ್ತಿತ್ತ ಸರಿದರೂ ಗೊತ್ತು ಮಾಡುವ ನನ್ನ ಹೆಂಡತಿ ಇರುವಾಗ ಸೂಟ್‍ಕೇಸ್ ಕಳ್ಳತನವಾಗಿರುವುದು ಹೇಗೆ? ಹಾಗೇನಾದರೂ ಕಳ್ಳತನ ಮಾಡಿದ್ದರೆ ಅವನಾರೋ ಅಂತಾರಾಷ್ಟ್ರೀಯ ಮಟ್ಟದ ಕಳ್ಳನಿರಬೇಕು. ಆದರೂ “ನೋಡಿಕೊಂಡು ಬರುತ್ತೇನೆ ಸಾರ್” ಎಂದು ಪೋಲೀಸ್‍ಗೆ ತಿಳಿಸಿ ಮನೆಗೆ ಹೋದೆ.

ನಮ್ಮ ಮನೆಯಲ್ಲಿದ್ದ ಮೂರು ಸೂಟ್‍ಕೇಸ್‍ಗಳೂ ಮನೆಯಲ್ಲಿಯೇ ಇದ್ದವು. ಒಂದರಲ್ಲಿ ಮದುವೆಗೆ ಹೊಲಿಸಿ ಮತ್ತೆಂದೂ ಉಟ್ಟುಕೊಳ್ಳದ ನನ್ನ ಕೋಟು ಬಿಟ್ಟರೆ ಇನ್ನೇನೂ ಇರಲಿಲ್ಲ. ಇನ್ನೊಂದರಲ್ಲಿ ವರ್ಷಕ್ಕೊಂದು ಅಥವಾ ಎರಡು ಸಲ ಮಾತ್ರ ಉಟ್ಟುಕೊಳ್ಳುವ ಮದುವೆಯಲ್ಲಿ ತಂದಿದ್ದ ಒಂದೆರಡು ರೇಷ್ಮೆ ಸೀರೆಗಳಿದ್ದವು. ಮೂರನೆಯದರಲ್ಲಿ ಬೋರು ಹೊಡೆಸುವ ಏಕಪ್ರಕಾರವಾದ ಮದುವೆ ಫೋಟೋ ಆಲ್ಬಂಗಳು ಇದ್ದವು.

ಅವು ಮೂರು ಸೂಟ್‍ಕೇಸ್‍ಗಳನ್ನು ಕದ್ದಿದ್ದರೂ ನಾನಾಗಲೀ, ನನ್ನ ಹೆಂಡತಿಯಾಗಲೀ ಮನಸ್ಸಿಗೆ ಹಚ್ಚಿಕೊಳ್ಳುತ್ತಿರಲಿಲ್ಲ. ಆದರೂ ಪೋಲೀಸರ ಮಾಹಿತಿಗೆ ಬೇಕಿತ್ತಲ್ಲ? ಆದುದರಿಂದ ಮೂರು ಸೂಟ್‍ಕೇಸ್‍ಗಳೂ ಮನೆಯಲ್ಲಿರುವುದನ್ನು ಖಾತ್ರಿ ಮಾಡಿಕೊಂಡೆ. ಆದರೆ ಕಳ್ಳತನವಾಗಿರುವ ಪುಸ್ತಕದ ಬಗ್ಗೆ ಏನು ಹೇಳುವುದು? ಅದಾವ ಪುಸ್ತಕವಿರಬಹುದು?

ಸಾಮಾನ್ಯವಾಗಿ ನಮ್ಮ ಮನೆಯಲ್ಲಿ ಪುಸ್ತಕಗಳು ರಾಶಿ ರಾಶಿಯಾಗಿರುತ್ತಿದ್ದವು. ಮಗಳು ಬೇರೆ ಆಗ ತಾನೆ ಓಡಾಡುವುದನ್ನು ಕಲಿತಿದ್ದರಿಂದ ಪುಸ್ತಕಗಳನ್ನು ಎಷ್ಟು ಎಚ್ಚರಿಕೆಯಿಂದ ನೋಡಿಕೊಂಡರೂ ಕ್ಷಣಾರ್ಧದಲ್ಲಿ ಮೂಲೆ ಮೂಲೆಗೆ ಎಸೆದಿರುತ್ತಿದ್ದಳು. ಅವು ಕೈಕಾಲಲ್ಲಿ ಬಿದ್ದಿರುತ್ತಿದ್ದವು. ಕೆಲವನ್ನು ಓದಲು ಅವರಿವರು ಈಸಿಕೊಂಡು ಸಹ ಹೋಗಿರುತ್ತಿದ್ದರು.

ನಾನು ಮನೆಯಲ್ಲಿ ಹೆಂಡತಿಗೆ “ಯಾರೋ ನಮ್ಮನೆಯ ಪುಸ್ತಕವೊಂದನ್ನು ಕದ್ದುಕೊಂಡು ಹೋಗಿದ್ದಾನೆ. ಪೋಲೀಸರಿಗೆ ಸಿಕ್ಕಿದೆ” ಎಂದೆ. ಪುಸ್ತಕ ಪ್ರೇಮಿಯೂ, ಸಾಹಿತ್ಯಾಭಿಮಾನಿಯೂ, ಕುವೆಂಪು, ತೇಜಸ್ವಿ, ತ್ರಿವೇಣಿ, ನಾಗೇಶ್ ಹೆಗಡೆ, ಅನಂತಮೂರ್ತಿ, ಲಂಕೇಶ ಮುಂತಾದ ಅನೇಕರ ಓದುಗಳಾಗಿದ್ದ ನನ್ನ ಹೆಂಡತಿ ಜನರಲ್ಲಿ ಓದುವ ನಿರಾಸಕ್ತಿ ಬಗ್ಗೆ ಖೇದ ವ್ಯಕ್ತಪಡಿಸುತ್ತಿದ್ದಳು.

“ಅಯ್ಯೋ ಬಿಡ್ತು ಅನ್ರಿ. ಚಪ್ಲಿ, ಛತ್ರಿ, ಪೊರಕೆ ಕದ್ದವರನ್ನು ಕಂಡಿದ್ದೀನಿ, ಕೇಳಿದ್ದೀನಿ. ಆದರೆ ಪುಸ್ತಕ ಕದ್ದವರನ್ನು ಕೇಳಿಲ್ಲ, ಕಂಡಿಲ್ಲ. ಪುಸ್ತಕದ ಬೆಲೆ ತಿಳಿಯದ ಜನ ಕಳ್ಳತನ ಮಾಡ್ತಾರ? ಕದ್ದು ಪುಸ್ತಕ ಓದುವವರು ಕಳ್ಳರಾಗಿ ಉಳಿತಾರೇನ್ರಿ? ಅಕಸ್ಮಾತ್ ಪುಸ್ತಕ ಕದ್ದಿದ್ರೆ ಅವನ್ಯಾರೋ ಪುಣ್ಯಾತ್ಮ ಕಣ್ರೀ! ಅವನಿಗೆ ನಾವೇ ಒಂದಷ್ಟು ಪುಸ್ತಕ ಕೊಡಾನ ನಡೀರಿ” ಎಂದಳು.

ನಿರ್ವಾಹವಿಲ್ಲದೆ ಪೋಲೀಸ್ ಠಾಣೆಗೆ ಹೋದೆ. ನಮ್ಮನೆಯಿಂದ ಯಾವ ಸೂಟ್‍ಕೇಸೂ ಕಳ್ಳತನವಾಗಿಲ್ಲವೆಂದರೂ ಪೋಲೀಸರು ಒಪ್ಪಲು ತಯಾರಿರಲಿಲ್ಲ. “ಇಲ್ಲ ಸಾರ್. ನಿಮ್ಮನೆಯಲ್ಲಿ ಕಳ್ಳತನವಾಗಿದೆ. ಕೆಂಪು ಬಣ್ಣದ ಸೂಟ್‍ಕೇಸ್. ನಡೆಯಿರಿ ತೋರಿಸುತ್ತೇವೆ” ಎಂದು ಹೊರಟರು.

ಊರ ಹೊರಗೆ ಮೈನ್ ರೋಡಿನ ಪಕ್ಕದಲ್ಲಿ ಜನರ ಒಂದು ದೊಡ್ಡ ಗುಂಪು ಸೇರಿತ್ತು. ಅವರೆದುರು ಒಂದು ಸೂಟ್‍ಕೇಸು ತೆರೆದುಕೊಂಡು ಬಿದ್ದಿತ್ತು. ಅದರಲ್ಲಿ ಕೆಲವು ಹಳೆಯ ವಿಐಪಿ ಚಡ್ಡಿ, ಬನಿಯನ್‍ಗಳು, ಒಂದೆರಡು ಮುದುರಿ ತುರುಕಿದ್ದ ಶರ್ಟು ಪ್ಯಾಂಟುಗಳು ಮತ್ತು ಒಂದು ಪುಸ್ತಕ ಬಿದ್ದಿದ್ದವು. ಅದು ನವ ಕರ್ನಾಟಕ ಪ್ರಕಾಶನದ ‘ವಿವಾಹ’ ಎಂಬ ಪುಸ್ತಕವಾಗಿತ್ತು. ಅದು ತಾಪಿ ಧರ್ಮಾರಾವು ಎಂಬುವವರು ತೆಲುಗಿನಲ್ಲಿ ಬರೆದ ಪುಸ್ತಕದ ಕನ್ನಡ ಅವತರಣಿಕೆಯಾಗಿತ್ತು.

ಪೋಲೀಸರಿಗೆ “ಹೌದು ಸಾರ್. ಈ ಪುಸ್ತಕ ನನ್ನದು. ಆದರೆ ಸೂಟ್‍ಕೇಸ್ ನನ್ನದಲ್ಲ. ಇದೇ ಊರಿನ ಬ್ಯಾಂಕ್ ಸಿಬ್ಬಂದಿಯಾದ ಶ್ರೀನಿವಾಸರದ್ದು. ಯಾಕೆಂದರೆ ಓದಿ ವಾಪಸು ಕೊಡುವುದಾಗಿ ಶ್ರೀನಿವಾಸರು ಆರೇಳು ತಿಂಗಳ ಕೆಳಗೆ ಈ ಪುಸ್ತಕವನ್ನು ಈಸಿಕೊಂಡು ಹೋಗಿದ್ದರು. ಮರೆತು ಹೋಗಿತ್ತು ಸಾರ್” ಎಂದೆ.

ಅಷ್ಟೊತ್ತಿಗೆ ಸಣ್ಣ ಹಳ್ಳಿಯಾದ ಹಂಪಸಾಗರದಲ್ಲಿ ಸುದ್ದಿ ಹಬ್ಬಿ ಶ್ರೀನಿವಾಸರು ಅಲ್ಲಿಗೇ ಬಂದರು. ಸೂಟ್‍ಕೇಸ್ ತಮ್ಮದೆಂದು ಒಪ್ಪಿಕೊಂಡಿದ್ದರಿಂದ ಕೇಸ್ ಖಲಾಸ್ ಆಯಿತು.

‘ವಿವಾಹ’ ಪುಸ್ತಕದ ಮುಖಪುಟದಲ್ಲಿ ಒಂದು ಗಂಡು ಹೆಣ್ಣಿನ ರೇಖಾಚಿತ್ರವಿದ್ದು, ಆಕರ್ಷಕವಾಗಿತ್ತು. ಅವಿವಾಹಿತರೂ, ಯುವಕರೂ ಆಗಿದ್ದ ಶ್ರೀನಿವಾಸರು ಅದನ್ನು ಸೆಕ್ಸ್ ಬುಕ್ ಎಂದು ಬಗೆದು ಬರಗೆಟ್ಟು ಈಸಿಕೊಂಡು ಹೋಗಿದ್ದರು. ಅದು ನನಗೆ ಚೆನ್ನಾಗಿ ನೆನಪಿತ್ತು. ಆದರೆ ಆ ಪುಸ್ತಕವು ವಿವಾಹದ ಬಗ್ಗೆ ಇದ್ದ ವೈಚಾರಿಕ ಗ್ರಂಥವಾಗಿತ್ತು.

ಒಂದು ವಾರದ ನಂತರ ನನ್ನ ಪುಸ್ತಕ ನನಗೇ ವಾಪಸ್ ಬಂದು ತಲುಪಿತು. ನನ್ನ ಹೆಂಡತಿ “ನಾನೇಳಲಿಲ್ವೇನ್ರಿ. ಪುಸ್ತಕ ಕದಿಯುವಷ್ಟು ನಾವು ಮುಂದುವರೆದಿಲ್ಲ. ತಿಳಿತಾ?” ಎಂದಳು. ನನ್ನ ಹೆಂಡತಿಯ ಕಾಲಜ್ಞಾನದ ಬಗ್ಗೆ ಅಭಿಮಾನ ಪಡದೆ ಬೇರೆ ವಿಧಿಯಿರಲಿಲ್ಲ.

‘ವಿವಾಹ’ ಪುಸ್ತಕ ಮತ್ತೆ ನನ್ನ ಪುಸ್ತಕ ಭಂಡಾರ ಸೇರಿತು.

‍ಲೇಖಕರು Avadhi

November 10, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಲಲಿತಾ ಸಿದ್ಧಬಸವಯ್ಯ

    ಹ್ಹಹ್ಹಹ್ಹಾ,,,,,_ ನಿಮ್ಮ ಮನೆಯವರ ಸಾಮಾನ್ಯ ಜ್ಞಾನ ಅದ್ಭುತವಾದದ್ದು‌, ಮಣ್ಣಿನವಾಸನೆಯದ್ದು ಸರ್ ‌

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: