ಕ್ಯೂಬಾದಲ್ಲಿ ಮಮತಾ ಸಾಗರ್

C for Cuba

ಕ್ಯೂಬಾಗಾಗಿ ಇಲ್ಲಿ ಕ್ಲಿಕ್ಕಿಸಿ 

ಬದುಕಿದ್ದಾಗ ತಪ್ಪದೆ ನೋಡಬೇಕಾದ ಸ್ಥಳ ಕ್ಯೂಬಾ
mamatha sagarಮಮತಾ ಜಿ ಸಾಗರ

ಕ್ಯೂಬಾಕ್ಕೆ ಹೋಗೋ ಅವಕಾಶ ದಿಡ್ಹೀರಂತ ಬಂದಾಗ ತುಂಬಾ ಖುಷಿಯಾಯ್ತು. ಸುಮ್ಮನೆ ಹಾಗೆ ಮನಸ ಕೆದಕಿ, ಪುಟ್ಟ ಮೂಲೆಯೊಂದರಲ್ಲಿ ಬಚ್ಚಿಟ್ಟುಕೊಂಡಿದ್ದ ‘ಕ್ಯೂಬಾ’ ಅನ್ನೋ ಕಲ್ಪನೆಯ ಕಡೆ ಗಮನ ಹರಿಸಿದೆ. ನಾನು ಚಿಕ್ಕವಳಿದ್ದಾಗ ಮನೆಗೆ ಬರುತ್ತಿದ್ದ ‘ಸೋವಿಯತ್ ಲ್ಯಾಂಡ್’ ಪತ್ರಿಕೆಯ ಪುಟ, ಫಿಡೆಲ್ ಕ್ಯಾಸ್ಟ್ರೋ, ಫಿಡೆಲ್ ಮತ್ತು ಇಂದಿರಾಗಾಂಧಿ, ಕ್ರಾಂತಿಕಾರಿಗಳ ಕನಸಿನಂತಿರುವ ಚೆಗೆವಾರ, ದಕ್ಷಿಣ ಆಫ್ರಿಕಾಕ್ಕೆ ನಾನು ಹೋದಾಗ ಚೆ ಅಭಿಮಾನಿಗಳ ಜೊತೆ ಕೂತು ನೋಡಿದ್ದ ‘ಮೋಟಾರ್ ಸೈಕಲ್ ಡೈರೀಸ್’ ಅನ್ನೋ ಚಲನಚಿತ್ರ, ‘ಚೆ’ ಯ ಮುಖದ ತುಂಬಾ ತೆಳುವಾದ ಹೊಗೆಯ ಪರದೆಯನ್ನೆಳೆದಿರುತ್ತಿದ್ದ ಕ್ಯೂಬಾದ ಸಿಗಾರ್, ಹೀಗೆ.. ಒಂದರ ಹಿಂದೊಂದರಂತೆ ಸಿನೆಮಾದ ಫ್ರೇಮುಗಳು ಓಡಿದ ಹಾಗೆ ಎಲ್ಲೋ ಅಡಗಿದ್ದ ಚಿತ್ರಗಳು ಮನಸಿನ ಪರದೆಯ ಮೇಲೆ ಕಾಣಿಸಿಕೊಂಡವು.

cuba-mamatha sagarವಿಶಾಲ ಸಮುದ್ರದಲ್ಲಿ ತೇಲಿಬಿಟ್ಟ ಬೇವಿನೆಲೆಯ ಹಾಗೆ ಕಾಣುವ ಪುಟ್ಟ ದೇಶ ಕ್ಯೂಬಾ! ಬೃಹತ್ ಅಮೇರಿಕಾದ ಬೃಹತ್ ದಬ್ಬಾಳಿಕೆಯನ್ನು ಸಾರಾಸಗಟಾಗಿ ಖಂಡಿಸಿ ಧೃತಿಗೆಡದೆ ತಿರುಗಿ ನಿಂತ ಈ ದೇಶದ ಚರಿತ್ರೆ, ಅದರ ಹೋರಾಟಗಳು, ಈ ಹೋರಾಟಗಳ ಬೆನ್ನೆಲುಬಾಗಿ ನಿಂತ ಚೆಗೆವಾರ, ಕಮೀಲೋ, ಫಿಡೆಲ್ಲರ ಸೋಲು-ಗೆಲುವು, ಸಾಧನೆಗಳು, ಸ್ಪ್ಯಾನಿಷ್ ಸಂಗೀತ, ಸಾಲ್ಸಾ ನೃತ್ಯ, ಎಂಥವರನ್ನೂ ಸೆಳೆಯುವಂಥದ್ದೇ.

ಸಾಂಸ್ಕೃತಿಕ ವೈವಿಧ್ಯವನ್ನು ಹತ್ತಿಕ್ಕಿ ಸರ್ವಾಧಿಕಾರವನ್ನು ಪ್ರತಿಷ್ಠಾಪಿಸುತ್ತಿರುವ ಅಮೇರಿಕಾದ ಸಾಂಸ್ಕೃತಿಕ ಜಾಗತೀಕರಣವನ್ನು ವಿರೋಧಿಸಿ ಕಳೆದ ಜೂನ್ ತಿಂಗಳು ಕ್ಯೂಬಾದ ಹವಾನಾದಲ್ಲಿ ಐದನೇ ಅಂತರರಾಷ್ಟ್ರೀಯ ಕಾಂಗ್ರೆಸ್ಸನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಮಾವೇಶದಲ್ಲಿ ಸಂಸ್ಕೃತಿ ಹಾಗೂ ವೈವಿಧ್ಯತೆಯನ್ನು ಚರ್ಚೆಯ ಕೇಂದ್ರವಾಗಿಟ್ಟುಕೊಂಡಂತೆ, ‘ಸಂಸ್ಕೃತಿ ಹಾಗೂ ಅಭಿವೃದ್ಧಿ’ಯನ್ನು ಕುರಿತ ಮಾತುಕತೆಗಳು ನಡೆದವು.

ಮಾಹಿತಿಯನ್ನೂ ಹಾಗೂ ಸಾಂಸ್ಕೃತಿಕ ಉತ್ಪಾದನೋದ್ಯಮವನ್ನೂ ಹತೋಟಿಯಲ್ಲಿ ಇಟ್ಟುಕೊಂಡ, ಯಾವುದೇ ರೀತಿಯಲ್ಲಿ ಯಾವುದೇ ಪರ್ಯಾಯ ಸಂಸ್ಕೃತಿಗಳಿಗೂ ಅವಕಾಶ ಸಿಕ್ಕದ ಹಾಗೆ, ನಿರ್ದಿಷ್ಟ ರೀತಿಯ ಬದುಕಿನ ಶೈಲಿಯನ್ನು ಸಾಮೂಹಿಕ ಕಲ್ಪನೆಯ ಮೇಲೆ ಹೊರೆಸಿ ಆ ಮೂಲಕ ಸಾಮೂಹಿಕ ಕಲ್ಪನೆಯ ಸಾಧ್ಯತೆಗಳನ್ನು ಹತ್ತಿಕ್ಕಿರುವ ಹೊಸ ರೀತಿಯ ಹಿಂಸಾಚಾರವನ್ನು ವಿರೋಧಿಸುವುದು ಈ ಕಾಂಗ್ರೆಸ್ಸಿನ ಮುಖ್ಯ ಉದ್ದೇಶವಾಗಿತ್ತು. ಮೂವತ್ತೊಂಭತ್ತು ರಾಷ್ಟ್ರಗಳಿಂದ ಪ್ರತಿನಿಧಿಗಳನ್ನು ಆಹ್ವಾನಿಸಲಾಗಿತ್ತು. ಆಕ್ಟಿವಿಸ್ಟ್ ಗಳು, ಕವಿ, ಲೇಖಕ, ಬರಹಗಾರ, ನಾಟಕಕಾರ, ಕಲಾವಿದ, ಸಂಗೀತಗಾರ, ಪತ್ರಿಕೋದ್ಯಮಿ, ಅಕಾಡೆಮಿಶ್ಯನ್, ರಾಜಕಾರಣಿ ಹೀಗೆ ಸಾಂಸ್ಕೃತಿಕ ವಲಯದ ವಿವಿಧ ಮಗ್ಗಲುಗಳಿಂದ ಬಂದ ವಿವಿಧ ಬಣ್ಣದ, ಬದುಕಿನ, ಭಾಷೆಯ, ನಾಗರಿಕತೆಯ ಜನರು ಇದರಲ್ಲಿ ಪಾಲ್ಗೊಂಡಿದ್ದರು.

ಈ ಹಿನ್ನಲೆಯಲ್ಲಿ, ಭಾರತದಿಂದ ಕಳಿಸಲಾದ ಐದು ಪ್ರತಿನಿಧಿಗಳ ನಿಯೋಗದ ಸದಸ್ಯೆಯಾಗಿ ನಾನು ಕ್ಯೂಬಾಕ್ಕೆ ಹೋಗಿದ್ದೆ. ಇಂಗ್ಲಿಷ್ ಕವಿ ಕೇಕಿ ದಾರೂವಾಲ, ಸಾಹಿತ್ಯ ಚರಿತ್ರೆಯನ್ನು ಹಿಂದಿಗೆ ಭಾಷಾಂತರ ಮಾಡಿರುವ ಸಿನ್ಹಾ ‘ಜನ್ ಸತ್ತಾ’ ಎಂಬ ಹಿಂದಿ ಪತ್ರಿಕೆಯ ಸಂಪಾದಕರಾದ ಓಂ ತನ್ವಿ, ಹಾಗು ಉರ್ದು ಪತ್ರಕರ್ತ ಜಹೀರ್ ಭಾರತಿಯ ನಿಯೋಗದ ಇತರ ಸದಸ್ಯರು.

ನಮ್ಮ ವಿಮಾನ ಕ್ಯೂಬಾದ ರಾಜಧಾನಿಯಾದ ಹವಾನಾವನ್ನು ಸಮೀಪಿಸುತ್ತಿದ್ದ ಹಾಗೇ ಸುಂದರ ಕೆರಿಬಿಯನ್ ಸಮುದ್ರದ ಹಸಿರು ನೀಲಿ ನೀರ ಕೆಳಗೆ ಹಕ್ಕಿ ರೆಕ್ಕೆಯ ಹಾಗೆ ಹರಡಿದ ಬೆಳ್ಳಿ ಬೆಳ್ಳಿ ಮರಳ ಚಿತ್ತಾರ. ತೇಲುತ್ತಿದ್ದ ಮೋಡಗಳ ಹಿನ್ನಲೆಯಲ್ಲಿ ಆಕಾಶದ ನೀಲಿಯ ಜೊತೆ ಸಮುದ್ರದ ನೀಲಿಯೂ ಬೆರೆತು ದೂರದಲ್ಲೆಲ್ಲೋ ಯಾವುದೇ ಲೋಕದಲ್ಲಿ ಸೃಷ್ಟಿಯಾದ ಮಾಯನಗರಿಯೊಂದು ತನ್ನ ಪಾಡಿಗೆ ತಾನು ತೇಲುತ್ತಿದೆಯೋ ಅನ್ನುವ ಹಾಗೆ ಕಾಣುತ್ತಿತ್ತು ಈ ತುಂಡು ನೆಲ.

cuba-mamatha sagar2ವಿಮಾನ ನಿಲ್ದಾಣದಲ್ಲಿ ಸಮಾವೇಶದ ಪ್ರತಿನಿಧಿಗಳ ಜೊತೆ ಭಾರತೀಯ ಎಂಬೆಸಿಯ ಪ್ರತಿನಿಧಿಗಳೂ ನಮಗಾಗಿ ಕಾಯುತ್ತಿದ್ದರು. ಹವಾನಾದ ಅಂತರರಾಷ್ಟ್ರೀಯ ಸಮಾವೇಶ ಕೇಂದ್ರ ಬಹು ದೊಡ್ಡ ಕಟ್ಟಡ. ಈ ಕಟ್ಟಡದ ಒಂದು ಮಗ್ಗುಲಿಗೆ ಇತ್ತು ನಮ್ಮನ್ನುಳಿಸಿದ ಭವ್ಯವಾದ ‘ಹೋಟೆಲ್ ಪಾಲ್ಕೋ’ ಹವಾನಾದಲ್ಲಿ ಹೆಜ್ಜೆ ಇಟ್ಟ ಹೊತ್ತಿನಿಂದ ಹೋಟೆಲಿಗೆ ಹೋಗುವಷ್ಟರಲ್ಲಿ ನಮ್ಮ ಗಮನಕ್ಕೆ ಬಂದ ಬಹು ಮುಖ್ಯವಾದ ಅಂಶವೆಂದರೆ ಭಾಷೆ. ಏನೂ ಅರ್ಥವಾಗದ ಸ್ಪ್ಯಾನಿಷ್ ಭಾಷೆ. ಇಲ್ಲಿ, ನಮಗೆ ಬಾರದ ಭಾಷೆಯಲ್ಲಿ ಎಲ್ಲ ವ್ಯವಹಾರವೂ ನಡೆದಿತ್ತು. ಭಾಷೆಯೇ ಬರದಿದ್ದಾಗ, ನಾವು ಆ ಭಾಷೆಯ ಧ್ವನಿಯನ್ನು ನಮಗೆ ತಿಳಿದ ಭಾಷೆಗಳ ಮೂಲಕ ಕೇಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿರುತ್ತೇವೆ. ಒಂದೊಂದು ಪದವನ್ನೂ ಹೆಕ್ಕುವ, ಅರ್ಥೈಸಿಕೊಳ್ಳುವ ಪ್ರಯತ್ನ ನಡೆಸಿರುತ್ತೇವೆ. ಅರಿವೇ ಇಲ್ಲದ ಬರದ ಭಾಷೆಯ ಜೊತೆ ನಂಟು ಬೆಳೆಸುತ್ತೇವೆ.

ಈ ಭಾಷೆಯ ಕಬಡ್ಡಿಯಲ್ಲಿ ನಾನು ಒಂದನ್ನಂತೂ ಗಮನಿಸಿದೆ, ನಾನು ಆಡುವ ಭಾಷೆಯಲ್ಲಿ ವ್ಯರ್ಥ ವಿಪರೀತ ಪದಗಳನ್ನು ಬಳಸುತ್ತೆವೇನೋ, ಅರ್ಥದ ಸುತ್ತ ಅಲಂಕಾರದ ಹಾಗೆ ಸದ್ದು ಮಾಡುತ್ತಿರುತ್ತೆವೇನೋ. ನೀವೇ ಗಮನಿಸಿ, ನಮ್ಮ ಭಾಷೆ ಬೇರಾರಿಗೂ ಬಾರದು ಎಂದಾಗ, ತೀರಾ ಅವಶ್ಯವಾದ ಪದಗಳನ್ನು ಮಾತ್ರ ಬಳಸಿ (ವಿಧಿ ಇಲ್ಲದೆ) ಅನಿಸಿದ್ದನ್ನು ತಿಳಿಸುವ ಪ್ರಯತ್ನ ಮಾಡುತ್ತಿರುತ್ತೇವೆ. ಈ ಸರ್ಕಸ್ಸಿನಲ್ಲಿ ನಮ್ಮ ಇಂಗ್ಲಿಷಿನ ಉದ್ದುದ್ದ ವಾಕ್ಯಗಳಿಗಿಂತ, ತುಂಡರಿಸಿದ ತಪ್ಪು ಇಂಗ್ಲಿಷೆ ಹೆಚ್ಚು ಪ್ರಯೋಜನಕಾರಿಯಾಗಿತ್ತು. ನಾವೆಷ್ಟು ಇಂಗ್ಲೀಷನ್ನು ಅವಲಂಬಿಸಿದ್ದೇವೆ ಅನ್ನುವುದು ಗೋಚರವಾಗುವುದೇ ಬಹುಶಃ ಇಂಥಾ ದೇಶಗಳಿಗೆ ಹೋದಾಗ. ನಾನಂತೂ ಕೆಲವೊಮ್ಮೆ ಸಾಕಾಗಿ ಹೋಗಿ, ಗಟ್ಟಿಯಾಗಿ ಕನ್ನಡದಲ್ಲೇ ಮಾತನಾಡಿಬಿಡುತ್ತಿದ್ದೆ. ನಮ್ಮ ಸಹಾಯಕನಾಗಿ, ಇಂಗ್ಲಿಷ್-ಸ್ಪ್ಯಾನಿಷ್ ನಡುವಿನ ಸೇತುವೆಯಾಗಿ ಇಂಟರ್ನ್ಯಾಷನಲ್ ರಿಲೇಷನ್ಸ್ ಅಧ್ಯಯನ ಮಾಡಿದ್ದ ನೆಲ್ಸನ್ ಎಂಬಾತ ನಮ್ಮ ಜತೆಗಿರುತ್ತಿದ್ದ.

ರೂಮಿನಲ್ಲಿ ದೊಡ್ಡ ಟಿವಿಯಲ್ಲಿ ಬರುತ್ತಿದ್ದುದು ಎರಡೇ ಚಾನೆಲ್. ಎಓಓ ಹಾಗು ಒಂದು ಸ್ಪ್ಯಾನಿಷ್ ಚಾನೆಲ್. ಸ್ಪ್ಯಾನಿಷ್ ಚಾನೆಲ್ ನಲ್ಲಿ ನ್ಯೂಸ್, ಏನೋ ಹಾಸ್ಯ ಧಾರಾವಾಹಿಯ ಹಾಗಿರುತ್ತಿದ್ದ ಸೀರಿಯಲ್ ಗಳು, ಕಾರ್ಟೂನುಗಳು, ಹಾಗೂ ಸಂಗೀತ, ಸ್ಪ್ಯಾನಿಷ್ ನೋಡಲೂ, ಕೇಳಲೂ ಬಹಳ ರಂಜಕವಾಗಿರುತ್ತಿತ್ತು. ನಾವಿದ್ದ ಸಮಯದಲ್ಲಿ ಕ್ಯೂಬಾ ಅಧ್ಯಕ್ಷ ಫಿಡೆಲ್ ಕ್ಯಾಸ್ಟ್ರೋಗೆ ಆರೋಗ್ಯ ಸರಿಯಿಲ್ಲದ್ದರಿಂದ, ಆಗಾಗ ಅವನು ಗುಣಮುಖನಾಗುತ್ತಿದ್ದುದ್ದರ ಬಗ್ಗೆ, ಅವನ ತಮ್ಮ ಹಾಗೂ ದೇಶದ ಉಸ್ತುವಾರಿಯನ್ನು ವಹಿಸಿಕೊಂಡಿದ್ದ ರೌಲ್ ಕ್ಯಾಸ್ಟ್ರೋನ ಬಗ್ಗೆ ಸಾಕಷ್ಟು ಹೊಗಳಿಕೆಯ ಸುದ್ದಿ ಪ್ರಸಾರವಾಗುತ್ತಿತ್ತು.

ನ್ಯೂಸ್ ನಲ್ಲಿ ಕ್ಯೂಬಾ ಕುರಿತ ಯಾವುದೇ ದೃಶ್ಯಗಳು ಕಂಡುಬರುತ್ತಿರಲಿಲ್ಲ. ಬಡತನವಾಗಲೀ, ಕೊಲೆ ದರೋಡೆಗಳ ಬಗ್ಗೆಯಾಗಲೀ, ಕಡೆಗೆ ಹವಾನಾದ ಕೆಲ ವರ್ಗಗಳ ತೊಡಕುಗಳನ್ನು ಪ್ರತಿನಿಧಿಸುವಂಥ ಯಾವ ಸುದ್ದಿಯೂ ಇದ್ದ ಹಾಗೆ ಕಾಣುತ್ತಿರಲಿಲ್ಲ. ಇಡಿ ದೇಶಕ್ಕೆ ಒಂದೇ ಒಂದು ಟ್ಯಾಬ್ಲಾಯ್ಡ್ ರೂಪದ ಈ ಪತ್ರಿಕೆಯಲ್ಲೂ ಇದೇ ರೀತಿಯ ಸುದ್ದಿ. ಅದರ ಹೆಸರು ‘ಗ್ರಾನ್ಮಾ’ ಎಂದು. 1955ರಲ್ಲಿ ಕ್ಯಾಸ್ಟ್ರೋ ಅರ್ಜೆಂಟೀನಾದ ವೈದ್ಯ ಚೆಗೆವಾರನನ್ನು ಮೆಕ್ಸಿಕೋದಲ್ಲಿ ಭೇಟಿಯಾದ. ಅವರಿಬ್ಬರಿಗೂ ಒಟ್ಟಾಗಿ 85 ಯೋಧರ ಪಡೆಯೊಂದನ್ನು ಕಟ್ಟಿದರು. ಈ ಪಡೆ ‘ಗ್ರಾನ್ಮಾ’ ಎಂಬ ಹೆಸರಿನ ಹಡಗಿನಲ್ಲಿ ಕ್ಯೂಬಾಕ್ಕೆ ಮರಳಿ ಚಳುವಳಿಯ ಒಂದು ಹಂತದಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ.

ಟೆಲಿಫೋನ್ ಲೈನುಗಳು ಅಮೆರಿಕಾವನ್ನು ಹಾದು ಹೋಗುತ್ತವಾದ್ದರಿಂದ, ಅಂತರರಾಷ್ಟ್ರೀಯ ಕರೆಗಳಿಗಂತೂ ಕಂಡಾಪಟ್ಟೆ ಬೆಲೆ. ಹೆಚ್ಚು ಕಡಿಮೆ ನಿಮಿಷಕ್ಕೆ 10 ಡಾಲರ್ ಇರಬಹುದು. ಇಂಟರ್ನೆಟ್ ಆದರೋ ಗಂಟೆಗೆ ಐದು ಕುಕ್ (ಕುಕ್ ಬೆಲೆ ಡಾಲರ್ ಗಿಂತ ಹೆಚ್ಚು) ಹೀಗಾಗಿ, ಅಲ್ಲಿ ಹೋದ ಆರಂಭದಲ್ಲಿ ಭಾಷೆಯೂ ಬಾರದ ನಮಗೆ ಹೊರ ಜಗತ್ತಿನ ಜತೆ ಸಂಪರ್ಕವೇ ಕಡಿದುಹೋದಂತಾಗಿತ್ತು. ಆದರೆ ಈ ಎಲ್ಲವನ್ನೂ ಮರೆಸುವ ಹಾಗಿತ್ತು ಸಮಾವೇಶ.

ಅಂತರರಾಷ್ಟ್ರೀಯ ಸಮಾವೇಶ ಕೇಂದ್ರದಲ್ಲಿ ಗ್ಲಾಸ್ ಕೊಲಾಜ್ ನ ದೊಡ್ಡ ಅದ್ಭುತವಾದ ಚೆಗೆವಾರನ ಚಿತ್ರವಿದೆ. ಕೇಕಿ ದಾರೂವಾಲ ಅವರು ಬಹುಭಾಷಾ ಭಾರತದ ವೈವಿಧ್ಯವನ್ನು ಕುರಿತು ಮಾತನಾಡಿದರೆ ‘imagined India: Diversity and Contemparary Indian Women’ ಎಲ್ಲ ಪ್ರಬಂಧವನ್ನು ನಾನು ಮಂಡಿಸಿದೆ. ಜಾಜ್ ಸಂಗೀತವನ್ನು ಕುರಿತು ಗೋಷ್ಠಿ ವಿಶಿಷ್ಟವಾಗಿತ್ತು. ಇದರಲ್ಲಿ ಕ್ಯೂಬಾದ ಜಾಜ್ ಸಂಗೀತ ಪದ್ಧತಿಯನ್ನು ಕುರಿತು ಚರ್ಚೆ ನಡೆಯಿತು. ಆಫ್ರೋ-ಫ್ರೆಂಚ್ ಹಾಗು ಆಫ್ರಿಕನ್ ಕಪ್ಪು ಜನರ ಪ್ರಭಾವದಿಂದ ಕ್ಯೂಬಾದಲ್ಲಿ ಆಫ್ರೋ-ಕ್ಯೂಬನ್ ಜಾಜ್ ಪದ್ಧತಿ ಹುಟ್ಟಿಕೊಂಡಿತಂತೆ.

ಕಾಲಕ್ರಮೇಣ ಲ್ಯಾಟಿನ್-ಕ್ಯೂಬನ್ ಹಾಗೂ ಅದರ ನಂತರ ಕ್ಯೂಬನ್-ಮೆಕ್ಸಿಕನ್ ಜಾಜ್ ಪದ್ಧತಿಗಳು ಚಲಾವಣೆಗೆ ಬಂದವು. ಹವಾನಾದಲ್ಲಿ ನಲವತ್ತರಲ್ಲಿ ಹುಟ್ಟಿದ ‘ಸಂತ ಮಾರಿಯ ಜಾಜ್ ಕಾರ್ನರ್’ ಅನ್ನುವ ತಂಡ ಜಾಜ್ ಸಂಗೀತ ಪದ್ಧತಿಯನ್ನು ಇವತ್ತಿಗೂ ಜಿವಂತವಾಗಿಡುವುದರಲ್ಲಿ ಬಹುಮುಖ್ಯ ಪಾತ್ರ ವಹಿಸಿದೆ. ಯುವಕರನ್ನು ಜಾಜ್ ಸಂಗೀತದತ್ತ ಆಕರ್ಷಿಸುವುದಕ್ಕಾಗಿ ’ಕ್ಯೂಬನ್ ಜಾಜ್ ಕ್ಲಬ್’ ಆರಂಭಿಸಲಾಗಿದೆ. ಪ್ರತಿ ಶನಿವಾರ ಹಾಗೂ ಗುರುವಾರದಂದು ಈ ಕ್ಲಬ್ ತೆರೆದಿರುತ್ತದೆ. ಸಂತ ಮಾರಿಯ ಜಾಜ್ ಕಾರ್ನೆರ್ ಅನ್ನು ಆರಂಭಿಸಿದ ಜೋಡಿಗಳು ಬಂದು ಈ ಸಮಾವೇಶ ಸಂದರ್ಭದಲ್ಲಿ ಸಮಕಾಲೀನ ಜಾಜ್ ಬ್ಯಾಂಡಿನ ಸಂಗೀತಕ್ಕೆ ನರ್ತಿಸಿದ್ದು ನೋಡಲು ಬಹಳ ವಿಶೇಷವಾಗಿತ್ತು.

ಈಜಿಪ್ಟ್, ಇಥಿಯೋಪಿಯಾ, ಕೊಲಂಬಿಯಾ, ಸ್ಪೇನ್ ಹೀಗೆ ವಿವಿಧ ದೇಶಗಳ ಸಂಗೀತ ಹಾಗೂ ನೃತ್ಯ ಕಾರ್ಯಾಗಾರಗಳ ಜತೆಗೆ ಕ್ಯೂಬಾದ ಸಮಕಾಲೀನ ಕಲೆ ಹಾಗೂ ಛಾಯಚಿತ್ರ ಪ್ರದೇಶಗಳನ್ನೂ ಏರ್ಪಡಿಸಲಾಗಿತ್ತು. ಸುಂದರ ಹವಾನಾ, ಅದರ ರಾಜರಸ್ತೆಗಳು, ಗಲ್ಲಿ ಗಲ್ಲಿಗಳಲ್ಲಿ ಅಡಗಿದ ಜನ ಜೀವನ, ಬದುಕು, ಸ್ಮಾರಕಗಳು, ಕಥೆಗಳು ಎಲ್ಲವನ್ನೂ ನೋಡುವ ಅವಕಾಶ ಸಿಕ್ಕಿತು.

ಬದುಕಿದ್ದಾಗ ತಪ್ಪದೆ ನೋಡಬೇಕಾದ ಸ್ಥಳಗಳಲ್ಲೊಂದು ಕ್ಯೂಬಾದ ಹವಾನಾ.

 

‍ಲೇಖಕರು Admin

May 14, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Shyamala Madhav

    ಅಯ್ಯೋ , ಮಮತಾ, ಏನಿದು? ಸಿಹಿ ತೋರಿ ಆಗಲೇ ಕಸಿದು ಕೊಂಡಿರಿ? ಇನ್ನೂ ಬೇಕಿತ್ತಲ್ಲಾ/
    — ಶ್ಯಾಮಲಾ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: