ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೋಳಿ ಕೊಂದು ಬೇಗ ಶ್ರೀಮಂತರಾಗಲು ಸಾಧ್ಯವೇ?

ಕನ್ನಡ ಚಿತ್ರಗಳೂ.. ವಿದೇಶಿ ಮಾರುಕಟ್ಟೆಯೂ..

dr-premalata_b

ಪ್ರೇಮಲತ ಬಿ

ಕೇಳಿಯೇ ಬಿಟ್ಟೆ! ಕನ್ನಡ ಸಿನಿಮಾದ ಭವಿಷ್ಯದ ಬಗ್ಗೆ ನಿಮ್ಮ ಊಹೆ ಏನು ಅಂತ.

ಇತ್ತೀಚೆಗೆ ಕನ್ನಡ ಚಲನ ಚಿತ್ರಗಳು ಬರೇ ಕರ್ನಾಟಕದಲ್ಲಲ್ಲದೆ ವಿದೇಶಗಳಲ್ಲಿ ಅದೇ ದಿನ  ಬಿಡುಗಡೆ/ಪ್ರದರ್ಶನಗೊಳ್ಳುವ  ಅಬ್ಬರದ ಪ್ರಚಾರಗಳೊಂದಿಗೆ ಮಾರುಕಟ್ಟೆಗೆ ಬರುತ್ತಿವೆ.

ಉದಾಹರಣೆಗೆ  ‘ಮುಂಗಾರು ಮಳೆ -2’ ವಿದೇಶಿ ಮಾರುಕಟ್ಟೆಯ 100 ಕೇಂದ್ರಗಳಲ್ಲಿ ಬಿಡುಗಡೆಯಾಗುತ್ತಿರುವ ಸುದ್ದಿಯೊಂದಿಗೆ ಬಂತು. ಇದೇ ಹಾದಿಯಲ್ಲಿ ಹಲವಾರು ಚಿತ್ರಗಳು ನಡೆದಿವೆ.

america-america1995 ರಲ್ಲಿ ಬಿಡುಗಡೆಯಾದ ‘ಅಮೆರಿಕಾ-ಅಮೆರಿಕಾ’ ಅಮೆರಿಕಾದ 25 ಕೇಂದ್ರಗಳಲ್ಲಿ ಬಿಡುಗಡೆಯಾಯ್ತು. ಅಲ್ಲಿಂದ ಮುಂದಕ್ಕೆ ಕನ್ನಡ ನಿರ್ಮಾಪಕರು ವಿದೇಶಿ ಮಾರುಕಟ್ಟೆಯಲ್ಲಿ ದೊರೆಯಬಹುದಾದ ಕಿಮ್ಮತ್ತಿಗೆ ತಡಕಾಡುತ್ತಲೇ ಇದ್ದಾರೆ. ಹಣವಲ್ಲದಿದ್ದರೂ ಇದೀಗ ‘ವಿದೇಶಿ ಬಿಡುಗಡೆ’ ಒಂದು ಬಗೆಯ ಪ್ರತಿಷ್ಟೆಯ ವಿಚಾರವಾಗಿ ಮುಂದುವರೆಯುತ್ತಿದೆ.

ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕನ್ನಡಿಗರು ದೇಶ ಬಿಟ್ಟು ಹೋಗಿರುವುದು ಕಡಿಮೆಯೇ. ಕರ್ನಾಟಕಕ್ಕೆ (ಅದರಲ್ಲೂ ಬೆಂಗಳೂರಿಗೆ) ಬೇರೆ ಭಾಷೆಗಳು ಬಂದಿವೆಯೇ ಹೊರತು ಕನ್ನಡ ಬೇರೆ ರಾಜ್ಯಗಳಿಗೆ, ದೇಶಗಳಿಗೆ ಹೋಗಿರುವುದು ಕಡಿಮೆ. ಹೀಗಾಗಿ ಕನ್ನಡದ್ದು ಸೀಮಿತ ಮಾರುಕಟ್ಟೆ.

ಇದನ್ನು ಉಳಿಸಿಕೊಳ್ಳಲು ಕನ್ನಡವನ್ನು ಜೀವಂತವಾಗಿಡಬೇಕಾದ್ದು ಈ ಉದ್ಯಮದ ಗುರುತರ ಹೊಣೆಯಾಗುತ್ತದೆ. ಕೋಳಿಯನ್ನೇ ಕೊಂದು ಬಹು ಬೇಗ ಶ್ರೀಮಂತವಾಗಬೇಕೆನ್ನುವವರದು ಇನ್ಯಾವ ಮೊಟ್ಟೆಯನ್ನು, ಕೋಳಿಯನ್ನು ಕಾಣಲಾಗದ ದುರಂತದ ಕಥೆಯಾಗುತ್ತದೆ. ಅದನ್ನು ನೋಡುವ ಹಿಂಸೆ ಇತರರನ್ನು ಕಾಡುತ್ತದೆ.

ಕನ್ನಡದ ಗಂಧವನ್ನೇ ಬದಲಿಸುತ್ತಿರುವ ಪ್ರತಿ ಕನ್ನಡ ಚಿತ್ರಗಳು ಅವಕ್ಕಿರುವ ಮಾರುಕಟ್ಟೆಯ ಒಂದಂಗುಲವನ್ನು ಕಬಳಿಸುತ್ತಿವೆ.

ವಿದೇಶಗಳಲ್ಲಿ ಹೋಗಿ ನೆಲೆಸಿರುವ ಕನ್ನಡಿಗರನ್ನು ಅರಸಿ ಕನ್ನಡ ಚಿತ್ರಗಳು ವಿದೇಶಕ್ಕೆ ಪ್ರಯಾಣ ಮಾಡುವುದು ತುಂಬಾ ಸಂತಸದ ವಿಷಯವೇ. ಆದರೆ ಈ ವಿದೇಶ ಪ್ರಯಾಣಕ್ಕೆ ನಾನಾ ಕಾರಣಗಳಿಗವೆ. ಉತ್ತಮ ಮಟ್ಟದ ಕೆಲವರಾದರೂ ಪ್ರೇಕ್ಷಕರನ್ನು ಪ್ರಪಂಚದಾದ್ಯಂತ ಅರಸುವ ಚಿತ್ರಗಳು ಕೆಲವಿವೆ. ಎಲ್ಲೆಡೆ ಇರುವ ಕನ್ನಡಿಗರ ಕನ್ನಡ ಭಾಷೆಯ ತುಡಿತವನ್ನು ತಣಿಸಿ ಒಂದಷ್ಟು ಹಣ ಮಾಡುವ ಇರಾದೆ ಇತರರದು.

ಬರೇ ಹಣಮಾಡುವ ಹುನ್ನಾರದಿಂದ ವಿದೇಶಕ್ಕೆ  ಹೋಗುವವರು ಒಂದೆರಡು ಪಾಠಗಳನ್ನು ಕಲಿಯದೆ ಹಿಂತಿರುಗುವುದಿಲ್ಲ. ನಿರ್ಮಾಪಕರ ಆಸೆಯ ಬೀಸಣಿಗೆಯ ರೆಕ್ಕೆಯನ್ನು ಬಿಚ್ಚಿ ವಿದೇಶದ ಹವಾವನ್ನು ಸವಿಯುವ ನಿರ್ದೇಶಕರು, ಹಂಚಿಕೆದಾರರು ಕಡಿಮೆಯೇನಿಲ್ಲ. ಪ್ರಶಸ್ತಿ ಪ್ರದಾನ ಚಿತ್ರಕ್ಕೆ ಬೆಂಬಲ ಅರಸಿ ವಿದೇಶಿ ನೆಲದ ಒಪ್ಪಿಗೆಯನ್ನು ಅವಲೋಕಿಸುವವರು ಇತರರು. ಉದ್ಯಮದ ಈ ದಿಕ್ಕಿನ ಹೆಜ್ಜೆಯ ಕೆಳಗಿನ ನೆಲ ಗಟ್ಟಿಯಿದೆಯೇ ಎನ್ನುವುದು ಪ್ರಶ್ನೆ.

nagatihalliಒಂದು ರೀತಿಯಲ್ಲಿ ‘ಅಮೆರಿಕಾ-ಅಮೆರಿಕಾ’ದ ಮೂಲಕ ಈ ಟ್ರೆಂಡ್ ಹುಟ್ಟು ಹಾಕಿದ್ದು ನಾಗತಿಹಳ್ಳಿ ಚಂದ್ರಶೇಖರ್. 2008 ರಲ್ಲಿ ‘ಮಾತಾಡ್ –ಮಾತಾಡ್ ಮಲ್ಲಿಗೆ’ಯನ್ನು ಅವರು ಇಂಗ್ಲೆಂಡ್ ಗೆ ಕರೆತಂದಿದ್ದರು. ಈ ವರ್ಷ ‘ಇಷ್ಟಕಾಮ್ಯ’ದ ಜೊತೆ ಅವರು ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ ಇನ್ನಿತರ ದೇಶಗಳನ್ನು ಸುತ್ತಿದ್ದಾರೆ.

‘ನಾನು ಅವನಲ್ಲ ಅವಳು’ ಚಿತ್ರದ ಜೊತೆ ಎಸ್. ಜಿ. ಲಿಂಗದೇವರು ಇಂಗ್ಲೆಂಡಿಗೆ ಪ್ರಯಾಣ ಬೆಳೆಸಿದರು. ‘ಆ ದಿನಗಳು’ ಖ್ಯಾತಿಯ ಕೆ.ಎಂ. ಚೈತನ್ಯರ ‘ಆಟಗಾರ’ ಕೂಡಿದಂತೆ ಪ್ರತಿ ಚಿತ್ರಗಳು ಈ ಹಾದಿಯ ಜಾಡನ್ನು ಹಿಡಿದಿವೆ.

ವಿದೇಶಗಳಲ್ಲಿ ಈ ಪ್ರದರ್ಶನಗಳು ಸೀಮಿತವಾಗುವುದು, ಕನ್ನಡ ಸಮುದಾಯದ ಪ್ರೇಕ್ಷಕರಿಗೆ. ಇದನ್ನು ಅಲ್ಲಿನ ಕನ್ನಡ ಸಂಘ –ಸಂಸ್ಥೆಗಳು ನಿಭಾಯಿಸುತ್ತವೆ. ಯಾವುದೇ ಹಣ ಗಳಿಕೆಯ ಉದ್ದೇಶವಿಲ್ಲದೆ ಕನ್ನಡ ಪೋಷಣೆ ಮಾತ್ರ ಇವುಗಳ ಗುರಿ. ಇದನ್ನೇ ಸಿನಿಪ್ಲೆಕ್ಸ್ ಗಳಲ್ಲಿ ಪ್ರದರ್ಶನ ನೀಡಬೇಕೆಂದಲ್ಲಿ ಹೂಡಿಕೆಯ ಹಣದ ಬಗ್ಗೆ ಆತಂಕಗಳಿರುತ್ತವೆ ಅಥವಾ ಬರಿಸಬೇಕಾಗುತ್ತದೆ, 50-150 ಆಸನಗಳಿರುವ ಸಣ್ಣ ಸಿನಿಮಾ ಮಂದಿರಗಳಲ್ಲಿ ಇವು ತುಂಬಿದ ದಿನಗಳನ್ನು ಅಥವಾ ಪ್ರದರ್ಶನವನ್ನು ಕಾಣುವುದು ಕೂಡ ಅಪರೂಪವೇ. ಚಿತ್ರದ ಹೆಸರು, ಗುಣಮಟ್ಟ, ಪ್ರಚಾರ, ಜೊತೆಗೆ ಅಲ್ಲಿನ ಕನ್ನಡಿಗರ ಸಂಖ್ಯೆ ಇತ್ಯಾದಿ ಕಾರಣಗಳಿರುತ್ತವೆ.

ಕನ್ನಡ ಮಾರುಕಟ್ಟೆ ವಿಶ್ವಮಾರುಕಟ್ಟೆಗೆ ನಿಧಾನವಾಗಿ ತೆರೆದುಕೊಳ್ತಾ ಇರೋ ಸಂಧರ್ಭದಲ್ಲಿ, ತಮಿಳು, ತೆಲುಗು, ಹಿಂದಿ ಸಿನಿಮಾಗಳಂತೆ ಬೆಳೆಯೋ ಆಯ್ಕೆ ಇರೋ ಸಂಧರ್ಭದಲ್ಲಿ ಮತ್ತೆ ಶಿಸ್ತು, ಕ್ರಮ, ಗುಣಮಟ್ಟದ ನಿಯಂತ್ರಣ ಇಲ್ದೇ ಹೋದ್ರೆ, ಇನ್ನೂ ಶೈಶವಾವಸ್ಥೆಯಲ್ಲಿರುವ ಕನ್ನಡ ಚಿತ್ರಗಳ ಈ ಹಾದಿ ಕೂಡ ಮುಚ್ಚಿಹೋಗುವ ಆತಂಕವನ್ನು ನಾಗತಿಹಳ್ಳಿಯವರು ಇತ್ತೀಚೆಗೆ ವ್ಯಕ್ತಪಡಿಸಿದ್ದಾರೆ.

ಎಲ್ಲಕ್ಕಿಂತ ಹೆಚ್ಚಾಗಿ, ಕನ್ನಡವನ್ನು ಉಂಡ ಕನ್ನಡಿಗ ಮಾತ್ರ  ಕನ್ನಡ ಸಿನಿಮಾಗಳಿಗೆ ಮತ್ತೆ  ವಿಶ್ವಮಾರುಕಟ್ಟೆಯಾಗಬಲ್ಲ. ಬಡಿಸುವ ಕೈ ಇಲ್ಲದ ರಾಜಕಾರಣದಿಂದ, ಸಾಂಸ್ಕೃತಿಕ ಶೂನ್ಯತೆಯಿಂದ ಏನು ತಾನೇ ಬೆಳೆಯಲು ಸಾದ್ಯ?

ಸಾವಿರಾರು ಸಂಖ್ಯೆಯಲ್ಲಿ ಮುಚ್ಚಿಹೋಗುತ್ತಿರುವ ಕನ್ನಡ ಶಾಲೆಗಳು ಈ ‘ಗೋಲ್ಡ್ ರಷ್’ ನ ಭವಿಷ್ಯದ ಬಗ್ಗೆ ಧಾರಾಳವಾಗಿ ಬೆಳಕು ಚೆಲ್ಲಬಲ್ಲವು.

‍ಲೇಖಕರು Admin

6 October, 2016

1 Comment

  1. Mahesh

    ಉತ್ತಮ ಬರಹ. ವಿದೇಶಿ ಬಿಡುಗಡೆ ಎಂಬುದು ಇತ್ತೀಚೆಗೆ ಪ್ರಚಾರದ ಒಂದು ತಂತ್ರವೂ ಆಗಿದೆ ಎಂಬುದು ಸುಳ್ಳಲ್ಲ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading