ಕೊರೋನ ಪಾಪ ಪುಣ್ಯಗಳ ಲೆಕ್ಕದಲ್ಲಿ ಬರುವುದಿಲ್ಲ…

ಶಿವಕುಮಾರ ಮಾವಲಿ

ತನಗೆ ಕೊರೋನಾ ಪಾಸಿಟಿವ್ ಬಂದಿದೆ ಎಂದು ತಿಳಿದು ಎಲ್ಲಿ ಅದು ಮನೆಯವರಿಗೆಲ್ಲ ವ್ಯಾಪಿಸಿಬಿಡುತ್ತದೇನೋ ಎಂಬ ಕಾರಣಕ್ಕೆ ಮನನೊಂದು ಒಬ್ಬ ಉಪ ತಹಶೀಲ್ದಾರ್ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ನೋಡಿದೆ. ಇದು ನಿಜಕ್ಕೂ ದುರಂತ ಮತ್ತು ಅತಾರ್ಕಿಕವಾದುದು ಕೂಡ. ಒಂದೇ ಕುಟುಂಬದ ಹದಿನೇಳು ಜನಕ್ಕೆ ಪಾಸಿಟಿವ್ ಬಂದು ಅವರೆಲ್ಲ ಗುಣಮುಖರಾದ ಉದಾಹರಣೆಯೂ ನಮ್ಮ ಮುಂದಿರುವಾಗ ಈ ಥರದ ನಿರ್ಧಾರಕ್ಕೆ ಆ ತಹಶೀಲ್ದಾರರು ಬರಬಾರದಿತ್ತು.

ಸಂಬಂಧಿಕರು, ಪರಿಚಿತರು, ಸ್ನೇಹಿತರು ದಿನಂಪ್ರತಿ ಮಿಂಚಿನಂತೆ ಮಾಯವಾಗುತ್ತಿರುವಾಗ ನಾನು ಹೇಳುತ್ತಿರುವ ಈ ಮಾತು ಅಪ್ರಸ್ತುತ ಅನ್ನಿಸಬಹುದೇನೋ. ಆದರೆ ಯಾವ ನಿಖರ ಚಿಕಿತ್ಸೆಯೂ ಇಲ್ಲದ ಕೇವಲ ಸಿಮ್ಟಮ್ಯಾಟಿಕ್ ಟ್ರೀಟ್ಮೆಂಟ್ ನೀಡಿ ಎಷ್ಟೋ ಜನರನ್ನು ಗುಣ ಪಡಿಸುತ್ತಿರುವ ಈ ಖಾಯಿಲೆಯ ರಹಸ್ಯ ಇನ್ನೂ ನಿಗೂಢ ಇರಬಹುದು. ಆದರೆ ನಾನು ಗಮನಿಸಿದಂತೆ ಮೊದಲ ಅಲೆಯ ಸಂದರ್ಭದಲ್ಲಿ ಇದರ ಸುತ್ತ ಇದ್ದ ಅಸ್ಪ್ರಶ್ಯತಾ ಭಾವ ಇನ್ನೂ ಕಡಿಮೆಯಾಗಿಲ್ಲ.

ಸಾಮಾಜಿಕ ಅಂತರ ಮತ್ತು ಮುಂಜಾಗೃತ ಕ್ರಮಗಳನ್ನು ಪಾಲಿಸುವುದೇ Outcast ಎಂಬಂತೆ ಇನ್ನೂ ಕೆಲವರು ಕಾಣುತ್ತಿರುವುದು ದುರಂತ. ದೂರದ ಹಳ್ಳಿಯೊಂದರಲ್ಲಿ ಒಂದೇ ಮನೆಯಿರುವ ಕುಟುಂಬಕ್ಕೂ ವೈರಸ್ ಪ್ರವೇಶ ಪಡೆದಿದ್ದಾಗ ಮೈಲ್ಡ್ ಸಿಂಮ್ಟಂಸ್ ಇರುವ ಅವರಿಗೆ ಅದನ್ನು ಗುಣ ಮಾಡಿಕೊಳ್ಳುವ ಇರಾದೆಗಿಂತ ‘ಅಯ್ಯೋ ನಾವು ಏನ್ ಮಾಡಿದ್ವಿ? ನಮ್ ಫ್ಯಾಮಿಲಿಗೆ ಇದು ಬಂತಲ್ಲ’ ಎಂಬ ಭಾವನೆ ಇರೋದನ್ನ ಗಮನಿಸಿದ್ದೇನೆ. ಇದರ ಪರಿಣಾಮವೇ ಜನ ಸಣ್ಣಗೆ ಲಕ್ಷಣಗಳು ಕಾಣಿಸಿಕೊಂಡರೂ ತಮ್ಮಷ್ಟಕ್ಕೆ ತಾವೇ ಸಬೂಬು ಹೇಳಿಕೊಂಡು ಪರೀಕ್ಷೆಗೆ ಒಳಪಡುವುದಿಲ್ಲ.‌ ಸಮಯ ವ್ಯರ್ಥ ಮಾಡಿಕೊಂಡು ಕೊನೆಯ ಕ್ಷಣಗಳಲ್ಲಿ ಅಸಾಹಯಕರಾಗುತ್ತಿದ್ದಾರೆ.

ಇದಕ್ಕೆ ಮುಖ್ಯವಾದ ಕಾರಣ ‘ಭಯ’. ಕೊರೋನಾ ಬಂದಾಕ್ಷಣ ಭೀಕರ ಖಾಯಿಲೆ ಬಂದೇ ಬಿಡ್ತು ಎಂಬ ಅನಗತ್ಯ ಭಯದಿಂದ ನಾವು ಹೊರ ಬರಬೇಕು. ಹಾಗೂ ಇದು ನಮ್ಮ ಪೂರ್ವ ಜನ್ಮದ ಪಾಪ ಕರ್ಮಗಳಿಗನುಸಾರವಾಗಿ ಬರುತ್ತದೆ ಎಂಬ ಮೂಢಬಿಕೆಯಿಂದ ಮೊದಲು ಹೊರಗೆ ಬರಬೇಕಿದೆ. ಇದೊಂದು ಸಂಕ್ರಾಮಿಕ. ಒಬ್ಬರಿಂದ ಒಬ್ಬರಿಗೆ ಹರಡುತ್ತದೆಯೇ ಹೊರತು ಪಾಪ ಪುಣ್ಯಗಳಿಗನುಸಾರವಲ್ಲ.

ಈ ಸಂದರ್ಭದಲ್ಲಿ ಮೊದಲ ಅಲೆಯಲ್ಲಿ ಕೊರೋನಾ ಬಂದು ವಾಸಿಯಾದವರು, ಅಥವಾ ಎರಡನೇ ಅಲೆಯ ಆರಂಭದಲ್ಲಿ ಬಂದು ಈಗ ವಾಸಿಯಾದವರು ಮಾಡಬಹುದಾದ ಕೆಲಸವೊಂದಿದೆ. ನನಗೆ ಕೊರೋನಾ ಬಂದಿದ್ದು ಯಾರಿಗೂ ಗೊತ್ತಾಗಲೇ ಇಲ್ಲ ಎಂದು ರಹಸ್ಯವಾಗಿಟ್ಟು ಸಾಧಿಸಬೇಕಾದ್ದು ಏನೂ ಇಲ್ಲ. ಹಾಗಂತ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಂಡು ಸಿಂಪತಿ ಪಡೆವ ಸೆಲೆಬ್ರಿಟಿಯಾಗಬೇಕು ಎಂದು ಹೇಳುತ್ತಿಲ್ಲ. ಆದರೆ ನೀವು ಇದರಿಂದ ಮುಕ್ತರಾದ ಬಗ್ಗೆ ನೀವು ಹಂಚಿಕೊಳ್ಳುವ ಅಗತ್ಯ ಇದೆ‌.

ಕೊನೇ ಪಕ್ಷ ನಿಮ್ಮ ಹತ್ತಿರದ ಸ್ನೇಹಿತರು, ಸಂಬಂಧಿಕರು, ಸಹೋದ್ಯೋಗಿಗಳು ಯಾರಾದರೂ ಈ ಕೊರೋನಾಕ್ಕೆ ತುತ್ತಾದರೆ ಅವರೊಂದಿಗೆ ನೀವು ಮಾತನಾಡಿ. ಆಸ್ಪತ್ರೆಯಲ್ಲಿ, ಮನೆಯಲ್ಲಿ, ಕೋವಿಡ್ ಕೇರ್ ಸೆಂಟರ್ ಗಳಲ್ಲಿರುವ ಅಂಥವರೊಂದಿಗೆ ನೀವು ಮಾತಾಡಿ
‘ನನಗೂ ಬಂದಿತ್ತು. ಧೈರ್ಯಗೆಡಬೇಡಿ. ನಿಯಮಿತವಾಗಿ ಔಷಧಿ ಪಡೆಯುವುದರ ಜೊತೆಗೆ ಧೈರ್ಯದಿಂದಿರುವುದು ಬಹಳ ಮುಖ್ಯ. ನನಗೂ ಬಂದು ಆಮೇಲೆ ಹುಷಾರಾದೆ’ ಎಂಬ ಧನಾತ್ಮಕ ಮಾತುಗಳನ್ನು ಅವರಲ್ಲಿ ಹಂಚಿಕೊಳ್ಳಿ. ಜೊತೆಗೆ ಅವರು ಜಾಗೃತೆ ವಹಿಸಬೇಕಾದ ಅಂಶಗಳ ಬಗ್ಗೆಯೂ ಎಚ್ಚರಿಸಿ.

ವೈದ್ಯರ ಚಿಕಿತ್ಸೆಯ ಜೊತೆಗೆ ನಿಮ್ಮ ಮಾತುಗಳು ಅವರಲ್ಲಿ ಹೆಚ್ಚು ನಂಬಿಕೆ ಹುಟ್ಟಿಸಬಲ್ಲವು. ‘ನನಗೂ ಕೋವಿಡ್ ಬಂದಿತ್ತು. ಈಗ ಅರಾಮಾಗಿದ್ದೇನೆ’ ಎಂಬ ಮಾತು ಅವರ ಪಾಲಿಗೆ ಬಹುದೊಡ್ಡ ವಿಶ್ವಾಸ ಮೂಡಿಸುತ್ತದೆ. ಏಕೆಂದರೆ ಟಿವಿಯಲ್ಲಿ ಬರುವ ಸುದ್ದಿಗಳ್ಯಾವೂ ಅವರ ಹತ್ತಿರದವರದ್ದಲ್ಲ. ಆದರೆ ‘ನೀವು?’ ನೀವು ಅವರಿಗೆ ತುಂಬಾ ಪರಿಚಿತರಾಗಿರುತ್ತೀರಿ. ಹಾಗಾಗಿ ಇಮ್ಯುನಿಟಿ ಇದ್ದಾಗಿಯೂ ಭಯದಿಂದ ಮತ್ತೇನೋ ಏರು ಪೇರು ಮಾಡಿಕೊಂಡು ಆಘಾತಕ್ಕೊಳಗಾಗುತ್ತಿರುವವರಿಗೆ ಇದರ ಅವಶ್ಯಕತೆ ತುಂಬಾ ಇದೆ.

ಇತರ ರೋಗಗಳ ವಿಷಯದ ಹಾಗೆ ಇದು ಇಲ್ಲ. ಆಸ್ಪತ್ರೆ‌ ಸೇರಿದವರ ಜೊತೆ ಯಾರಾದರೂ ಒಬ್ಬರು ಇದ್ದಾಗ ಒಂದು ಸಮಾಧಾನ ಇರುತ್ತದೆ. ಆದರೆ ಕೋವಿಡ್ ಪೇಷೆಂಟ್ ಜೊತೆ ಯಾರೂ ಇಲ್ಲದಿರುವುದು ಅವರನ್ನು ಮತ್ತಷ್ಟು ಅಧೀರರನ್ನಾಗಿ ಮಾಡುತ್ತದೆ. ಮನೆಯವರೂ ಭಯದಲ್ಲೇ ಮಾತನಾಡುತ್ತಾರೆ. ಹಾಗಾಗಿಯೇ ಒಮ್ಮೆ ಕೊರೋನಾ ಪಾಸಿಟಿವ್ ಬಂದು ಹೋದವರು ಮಾತನಾಡುವುದು ಅವರಿಗೆ ಪ್ರತ್ಯಕ್ಷ ಸಾಕ್ಷಿಯಾದಂತಾಗುತ್ತದೆ. ಅನಗತ್ಯವಾಗಿ ಉಡಾಫೆಯ ಧೈರ್ಯವನ್ನು ಹೇಳುವುದೂ ಕೂಡ ಉಚಿತವಲ್ಲ ಎಂಬುದನ್ನು ನೆನಪಿಡಿ.

ಈಗಿನ ಪರಿಸ್ಥಿತಿಯಲ್ಲಿ ಕೋವಿಡ್ ಬಂದಿದೆ ಎಂಬುದನ್ನು ಮುಚ್ಚಿಟ್ಟರೆ ಅನಾಹುತ ಹೆಚ್ಚು. ಆದಷ್ಟು ಅದರ ಬಗ್ಗೆ ಮಾತಾಡುವುದೇ ಒಳ್ಳೆಯದು. ಅದರಿಂದ ಮುಕ್ತರಾದವರು ಈ ಸಮಯದಲ್ಲಿ ಮಾಡಬಹುದಾದ ದೊಡ್ಡ ಉಪಕಾರ ಇದಾಗುತ್ತದೆ. ಅದರಲ್ಲೂ ಎರಡನೇ ಅಲೆಯಲ್ಲಿ ಗುಣಮುಖರಾದವರು ನಿಮ್ಮವರೊಡನೆ ಮಾತಾಡಿ. ಒಬ್ಬೊಬ್ಬರ ಅನುಭವಗಳು ಒಂದೊಂದು ಥರ. ವೈರಸ್ ನೊಂದಿಗಿನ ನಿಮ್ಮ ಹೋರಾಟದ ನೈಜ ಉದಾಹರಣೆ ನಿಮ್ಮ ಅನೇಕ ಪರಿಚಿತರಲ್ಲಿ ಹುಮ್ಮಸ್ಸು ಮತ್ತು ಆಶಾಕಿರಣವಾಗಬಲ್ಲದು…

ಇನ್ನು ಕೆಲವು ವಾರಗಳಲ್ಲಿ ಇದು ನಗರಗಳಲ್ಲಿ ಕಡಿಮೆಯಾಗಿ ಹಳ್ಳಿಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಲಿದೆ ಎಂಬ ತಜ್ಞರ ಅಭಿಪ್ರಾಯಗಳಿವೆ. ಆಗ ಅವರು ನನಗೆ ಪ್ರತೀ ವರ್ಷ ಬರುವ ಮಾಮೂಲಿ ಜ್ವರ, ಕೆಮ್ಮು ಇದು ಎಂದು ಉದಾಸೀನ ಮಾಡುವ ಸಾಧ್ಯತೆಗಳೇ ಹೆಚ್ಚು. ಇನ್ನು ಕೆಲವರು ಇದನ್ನು ಪಾಪ ಪುಣ್ಯಗಳ ಜೊತೆ ತಗುಲು ಹಾಕುವದರಿಂದ ತಪಾಸಣೆಗೆ ಹೋಗಲು ಹಿಂಜರಿಯುತ್ತಾರೆ. ಇವರೆಡೂ ಅಭಿಪ್ರಾಯವಿರುವ ಹಳ್ಳಿಯಲ್ಲಿರುವ ನಮ್ಮ ಹಿರಿಯರಿಗೆ, ಸಹೋದರರಿಗೆ, ಸ್ನೇಹಿತರಿಗೆ ನಾವು ಇದನ್ನು ತಿಳಿಸಿ ಹೇಳಬೇಕಾದ ಅಗತ್ಯವಿದೆ.

ಆಸ್ಪತ್ರೆಯಲ್ಲೋ , ಕೋವಿಡ್ ಕೇರ್ ಸೆಂಟರಿನಲ್ಲೋ ಏಕಾಂಗಿಯಾಗಿರುವ ನಿಮ್ಮ ಸ್ನೇಹಿತರಿಗೋ, ಸಂಬಂಧಿಕರಿಗೋ, ಸಹೋದ್ಯೋಗಿಗಳಿಗೋ ನಿಮ್ಮ ಮಾತಿನ ಅವಶ್ಯಕತೆಯಿದೆ. ನಿಮಗೆ ಈಗಾಗಲೇ ಕೋವಿಡ್ ಬಂದು ಹೋಗಿದ್ದರೆ ಮುಚ್ಚಿಟ್ಟು ಸಾಧಿಸುವಂತದ್ದು ಏನೂ ಇಲ್ಲ… ಅವರಿಗೊಂದು ಕಾಲ್ ಮಾಡಿ … It works to some extent . I guarantee it . ಸರ್ಕಾರ ದಿನನಿತ್ಯ ಟಿವಿಯಲ್ಲಿ ಕೊಡುವುದು ಅಂಕಿ ಸಂಖ್ಯೆಗಳನ್ನು ಮಾತ್ರ. ಆದರೆ ನಿಮ್ಮ ಮಾತು ಅವರಿಗೆ ತೀರ ಹತ್ತಿರವಾದದ್ದು.

ನೆನಪಿಡಿ, ಸಾಂಕ್ರಾಮಿಕ ರೋಗವೊಂದು ಪಾಪ ಪುಣ್ಯಗಳ ಲೆಕ್ಖದಲ್ಲಿ ಬರುವುದಿಲ್ಲ. It just spreads. We must curtail it by efforts.

‍ಲೇಖಕರು Avadhi

May 14, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: