ಕೊರೊನಾ ಮತ್ತು ಹ್ಯೂಮನ್ ಸೆನ್ಸಿಬಿಲಿಟೀಸ್…‌

ಅಶೋಕ ಶೆಟ್ಟರ್

ಸ್ವಭಾವತಃ ಹಲವು ವ್ಯಾಮೋಹಗಳ ಮನುಷ್ಯನಾದ ನಾನು ನನ್ನದೇ ಆಯ್ಕೆಯ ಹಲವು ವ್ಯಸನ-ಅಭಿರುಚಿಗಳಲ್ಲಿ ಒಬ್ಬಂಟಿಯಾಗಿ ಕಳೆದು ಹೋಗ ಬಯಸುತ್ತೇನೆ, ಸಾಮಾನ್ಯವಾಗಿ ಆನಂದದಿಂದಲೇ ಇರುತ್ತೇನೆ. ಹತ್ತು ವರ್ಷಗಳಿಂದ ಯಾವಾಗಲೂ ಒಂದು ರಿಲ್ಯಾಕ್ಸೇಶನ್ ಝೋನ್ ಎಂಬಂತೆಯೇ ಬಳಸಿಕೊಂಡ ಫೇಸ್ಬುಕ್ ನಲ್ಲಿ ಗೆಳೆಯ-ಗೆಳತಿಯರ ಜೊತೆ ಹರಟೆ ಹೊಡೆಯುವದು, ಸಂಗೀತ ಕೇಳುವದು, ಓದುವದು, ಚರ್ಚಿಸುವದು ಹೀಗೆ ಬದುಕುವದು ನನಗಿಷ್ಟ. ನನಗೆ ಖಾಸಗಿ ಗೆಳೆಯರೂ ಕಡಿಮೆ. ಬೆಳಗೆರೆ ಬೈ ಹೇಳಿ ಈ ಜಗತ್ತಿನಿಂದ ನಿರ್ಗಮಿಸಿದ ಮೇಲೆ ಅದು ಇನ್ನೂ ಸಂಕುಚಿತವಾಯಿತು.

ಕಳೆದ ಸುಮಾರು ಒಂದು ತಿಂಗಳಿನಿಂದ ಒಂದು ವಿಚಿತ್ರ ಡಿಸ್ಟರ್ಬನ್ಸ್ ಅನುಭವಿಸುತ್ತಿದ್ದೇನೆ. ಕೊರೊನಾ ಎಂಬ ಸಾಂಕ್ರಾಮಿಕದ ಎರಡನೆಯ ಅಲೆ ತಂದೊಡ್ಡಿದ ಸಾವು ನೋವುಗಳು ನನ್ನವೇ ಎಂಬಂತೆ ನನ್ನ‌ ಮನವನ್ನು ಆವರಿಸಿಕೊಂಡು ಮ್ಲಾನಗೊಳಿಸುತ್ತಿವೆ. ಅದರಿಂದ ಹೊರಬರಲು ಅಮೆಝಾನ್ ಪ್ರೈಮ್ ನಲ್ಲೋ, ನೆಟ್ ಫ್ಲೀಕ್ಸ್ ನಲ್ಲೋ ಏನಾದರೂ ನೋಡಲೆಳಸುತ್ತೇನೆ, ಮನಸು ಅಲ್ಲಿರಲು ನಿರಾಕರಿಸುತ್ತದೆ. ಸಂಗೀತ ಕೇಳಲು ಪ್ರಯತ್ನಿಸುತ್ತೇನೆ ನನ್ನ ಅತ್ಯಂತ ಇಷ್ಟದ ಹಾಡುಗಳ ಸಾಹಿತ್ಯ, ಸಂಗೀತ, ಲಯವೂ ತಮ್ಮ‌ ಮಾಂತ್ರಿಕತೆ ಕಳೆದುಕೊಂಡಂತೆನ್ನಿಸುತ್ತದೆ.

ನನ್ನೊಬ್ಬ ವಿದ್ಯಾರ್ಥಿನಿ ತನ್ನ ಗೆಳತಿಯೊಂದಿಗೆ ಆರಂಭಿಸಿದ History Enthusiasts ಎಂಬ ಯೂಟ್ಯೂಬ್ ಚಾನಲ್ ನಲ್ಲಿ ಆಯೋಜಿಸಿದ್ದ ಏಳು ಉಪನ್ಯಾಸಗಳ ಸರಣಿಯ ಆನ್ಲೈನ್ ಉದ್ಘಾಟನಾ ಭಾಷಣವನ್ನು ಮಾಡಲು ವಿನಂತಿಸಿಕೊಂಡಾಗ ಆ ಆಹ್ವಾನ ತುಂಬ short notice ನಲ್ಲಿ ಸಿದ್ಧಗೊಳ್ಳುವ ಒತ್ತಡವನ್ನು ನನ್ನ ಮೇಲೆ ಹೇರುವದೆನ್ನಿಸಿದರೂ ಮನಸು ಎಲ್ಲೋ ಒಂದೆಡೆ ತೊಡಗಲಿ ಎಂಬ ಕಾರಣಕ್ಕೆ ಒಪ್ಪಿ ಮೊನ್ನೆ ಅದನ್ನು ಈಡೇರಿಸಿ ಆದ ಮೇಲೆ ಮತ್ತದೇ ಕೊರೊನ ಸೃಷ್ಟಿಸಿದ ಹೃದಯವಿದ್ರಾವಕ ದೃಶ್ಯಗಳು, ದಾರುಣ ವರದಿಗಳ ಲೋಕ.

ನನ್ನ ಮಗ ಫೋನ್ ಮಾಡಿ ಡ್ಯಾಡೀ, ಭಾಳ ನ್ಯೂಜ್ ನೋಡಬ್ಯಾಡ್ರಿ. ಅವನ್ನೆಲ್ಲ ನೋಡಿದರ ನಮ್ಮ ಹ್ಯೂಮನ್ ಸೆನ್ಸಿಬಿಲಿಟೀಸ್ ಎಲ್ಲಾ ಪೆಡಸಗಟ್ಟಿದಂಗ ಆಗ್ತಾವ ಎನ್ನುತ್ತಾನೆ. ಕೊರೊನದ ಈ ಅಲೆ ನನಗೆ ವೈಯಕ್ತಿಕವಾಗಿ ಪರಿಚಿತರು, ಆಪ್ತರಾಗಿದ್ದವರನ್ನೂ ಒಳಗೊಂಡು ಸಾವಿರಾರು ಜನರನ್ನು ಕೊಂಡೊಯ್ದಿದೆ. ನನ್ನ ಪೀಳಿಗೆ ಪ್ಲೇಗ್, ಕಾಲರಾ ಕಂಡದ್ದಲ್ಲ. ಅನುಭವಿಸಿದ್ದಲ್ಲ. ಇದು ಹೊಸದು. ಭಯಾನಕವೆನ್ನಿಸುವಂಥದು.

ಒಂದು ನೆಲೆಯಲ್ಲಿ ಯಾವುದೇ ಪ್ರಭುತ್ವ ವ್ಯವಸ್ಥೆ ಇಂಥ ಸಂದರ್ಭಗಳಲ್ಲಿ ತಾನು ಮಾಡಿಕೊಳ್ಳಬಹುದಾದ ಸಿದ್ಧತೆಗೆ ಸಂಬಂಧಿಸಿದ ಲೋಪಗಳ ಕುರಿತು ಟೀಕಿಸಬಹುದಾದರೂ ಆ ಟೀಕೆಯನ್ನು ವಿಮರ್ಶೆಯಾಗಿಸಿದಾಗ ಸಾಂಕ್ರಾಮಿಕದ ಈ ಅಲೆ ನಿರೀಕ್ಷಿತವಾಗಿದ್ದರೂ ಅದರ ಹರಡುವಿಕೆಯ ವೇಗ ಮತ್ತು ಪ್ರಮಾಣದ ಹಿನ್ನೆಲೆಯಲ್ಲಿ ಪ್ರಸ್ತುತ ಗೊಂದಲ, ಅವ್ಯವಸ್ಥೆಗಳನ್ನು ಸ್ವಲ್ಪ‌ಮಟ್ಟಿಗೆ ಅರ್ಥ ಮಾಡಿಕೊಳ್ಳಬಹುದು. ಸ್ವಲ್ಪ ಬಗೆದು ನೋಡಿದಾಗ ನಮ್ಮ‌ ಮನಸು ಮತ್ತು ಹೃದಯಗಳನ್ನು ವಿಹ್ವಲಗೊಳಿಸುವ ಸಂಗತಿ ಕೊರೊನ‌ ಮಾತ್ರ ಆಗಿರದೆ ನಮ್ಮ ಸಮಾಜಕ್ಕೆ ಅಂಟಿಕೊಂಡಿರುವ ಪ್ರತಿಯೊಂದನ್ನು ರಾಜಕೀಯಗೊಳಿಸುವ ಹೊಸ ರೋಗ ಕೊರೊನಕ್ಕಿಂತ ಚಿಂತಾಜನಕವೂ ಭಯಾನಕವೂ ಆಗಿರುವದು ಎನ್ನಿಸುತ್ತದೆ.

ಪ್ರತಿನಿತ್ಯ ನಾಲ್ಕು ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಹೊಸದಾಗಿ ಭಾರತದಲ್ಲಿ ಸೋಂಕಿಗೊಳಗಾಗುತ್ತಿರುವ, ನಾಲ್ಕು ಸಾವಿರದಷ್ಟು ‘ಭಾರತೀಯರು’ ದಿನನಿತ್ಯ ಸಾಯುತ್ತಿರುವ ಸಂದರ್ಭದಲ್ಲಿ‌ ಆ ಭಾರತೀಯರನ್ನು, ಅವರ ಸಾವು ನೋವುಗಳನ್ನು ‘ಹಿಂದೂ’ ‘ಮುಸ್ಲಿಂ’ ಎಂದು ವಿಭಜಿಸುವ ಪ್ರಿಜಂ ನಲ್ಲಿ ನೋಡುವ, ಆ ನೋಡುವಿಕೆಯನ್ನು ನೂರಾರು ಬಗೆಗಳಲ್ಲಿ‌ ಹರಡುವ ಪ್ರವೃತ್ತಿಗಳು ಒಂದು ಪುರಾತನ ಹಿನ್ನೆಲೆಯ, ಹಲವು ಸವಾಲುಗಳ ನಡುವೆಯೂ ಉಳಿದು ಬೆಳೆದುಕೊಂಡು ಬಂದ, ಬಹುಮುಖಿಯಾಗಿದ್ದೂ ಜಗತ್ತಿನಲ್ಲೇ ವಿಶಿಷ್ಟವಾಗಿ ಒಂದು ಕೂಡುಬಾಳ್ವೆಯ ಸಮಾಜವನ್ನು ರೂಪಿಸಿಕೊಂಡ ಭಾರತವೆಂಬ ನಾಗರಿಕ ಸಮಾಜದ ಮೂಲ ಮೌಲ್ಯಗಳನ್ನು ಹೊಸಕಿ ಹಾಕುವ ವೈರಸ್ ಗಳನ್ನು ಸೃಷ್ಟಿಸಿದ್ದು ಈ ವೈರಸ್ ಗಳು ಕೊರೊನಾ ವೈರಸ್ ಗೆ ತಾವೇನೂ ಕಡಿಮೆ ಇಲ್ಲವೆಂಬಂತೆ ಬೆಳೆಯುತ್ತಿವೆ.

ಸಾಂಕ್ರಾಮಿಕದಂಥ ಮಾನವೀಯ ಬಿಕ್ಕಟ್ಟಿನ‌ ಸಂದರ್ಭದಲ್ಲೂ ಜನರನ್ನು ತಮ್ಮ ಲಾಭ ಬಡುಕತನ, ಕಾಳಸಂತೆ, ಮೋಸ, ಸುಲಿಗೆಯ ಕೂಪಕ್ಕೆ ತಳ್ಳಿದ ಖದೀಮರು, ಹೇತ್ಲಾಂಡಿ ನಾಯಕರು, ಬೊಗಳೆದಾಸ ಐಕಾನ್ ಗಳು, ಉಢಾಪೆ ಮನೋಭಾವದವರು, ಅವಕಾಶವಾದಿ ಬಕೆಟ್ ಗಳು, ಚೊಂಬುಗಳು, ಇದರ ಮಧ್ಯೆ, ಶಾಶ್ವತ ಅಗಲಿಕೆ ಸೃಷ್ಟಿಸಿದ ಶೂನ್ಯನೋಟಗಳು, ಬಿಕ್ಕಳಿಕೆಗಳು, ಅಳು, ಅಸಹಾಯಕತೆ, ತಬ್ಬಲಿತನ, ಹಿಪಾಕ್ರಸಿ ಮತ್ತು ಅಧಿಕಾರ ಗಳಿಸುವ ಅಥವಾ ಉಳಿಸಿಕೊಳ್ಳುವ ಹೃದಯಹೀನ ಲೆಕ್ಕಾಚಾರಗಳು.., ವರ್ತಮಾನದಲ್ಲಿ ಈ ಮಟ್ಟಿಗೆ ಧೃವೀಕರಣಗೊಂಡ ದೇಶಕ್ಕೆ ಇರಬಹುದಾದ ಭವಿಷ್ಯದ ಸ್ವರೂಪದ ಕುರಿತ ಆತಂಕವು ಕೊರೊನ‌ ಕುರಿತ ಆತಂಕದ ಜೊತೆಗೆ ಸೇರಿ ಎಲ್ಲ ಆಸಕ್ತಿಗಳನ್ನು ಹಿಂಡಿ ಹಾಕಿದಂತಿದೆ.

‍ಲೇಖಕರು Avadhi

May 11, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: