ಕತ್ತೆ ಬಾಲ ಕುದುರೆ ಜುಟ್ಟು

ರೇಖಾ ರಂಗನಾಥ

‘ಚಲ್‌ ಬಸಂತಿ.. ಚಲ್‌..’

ಧ್ವನಿ ಹಿನ್ನಲೆಯಲ್ಲೇ, ಏಕಲವ್ಯ ಶಬ್ಧವೇದಿ ಬಾಣ ಹೂಡಿದಂತೆ ನನ್ನ ಕಿವಿ ತಮಟೆ ಆ ಶಬ್ಧವನ್ನೇ ಅರಿಸಿ ಸಾಗಿತ್ತು. ಶೋಲೆ ಫಿಲ್ಫಂಲ್ಲಿ ಕಾಣಸಿಗುವ ಹೇಮಾಮಾಲಿನಿ, ಗಬ್ಬರ ಸಿಂಗ್‌, ಧರ್ಮೆಂದ್ರರೆಲ್ಲರು ಅಕ್ಷಿಪಟಲದ ಮೇಲೆ ದರ್ಶನವಿಟ್ಟು ನೋಟ ಹಾಯಿಸಿದರೆ ಜಟಕಾ ಬಂಡಿ. ಸಾರಥಿ ಇದ್ದಾಗಲೂ ಕೆಲ ಪಡ್ಡೆ ಹುಡುಗರು ಕುದುರೆ ಲಗಾಮು ಹಿಡಿದು, ‘ಚಲ್‌ ಬಸಂತಿ ಚಲ್’ ಅಂತಲೇ ಸಂಭ್ರಮಿಸಿದ್ದನ್ನ ಒಂದು ಅರೆಕ್ಷಣ ನಾನು ಸಂಭ್ರಮಿಸಿ ವರ್ಣರಂಜಿತ ಕುದುರೆ ಗಾಡಿಗೆ ದೃಷ್ಠಿಯಿಟ್ಟಾಗ ಒಂದು ರೀತಿಯಲ್ಲಿ ರೋಮಾಂಚನ.

ವಿಜ್ಞಾನ ಪ್ರಗತಿಶೀಲ ಪಥದಲ್ಲಿ ತಂತ್ರಜ್ಞಾನ ತೀವ್ರವಾಗಿ ಬೆಳೆದು ಕೆಲವೇ ದಿನಗಳಲ್ಲಿ ಹಲವು ಬದಲಾವಣೆ ಕಾಣೋ ಈ ಕಾಲದಲ್ಲಿ ಜಟಕಾಬಂಡಿ ಕಾಣೋದೆ ನನಗೊಂದು ವಿಸ್ಮಯ ಬೋಧಕ ಚಿಹ್ನೆ. ಡಂಬರಾಟ ಸಿನೇಮಾ ಡಬ್ಬಿ, ದುರುಗ ಮುರಗೇರ, ಹಾವಾಡಿಗ, ಕರಡಿ ಕುಣಿತ ಇದೆಲ್ಲದೂ ವರ್ತಮಾನ ಪೀಳಿಗೆ ಕಥೆಗಳಲ್ಲಿ ಗೋಚರವಾಗುವ ವಿಸ್ಮಯಗಳಂತೆ ಸರಿ! ಭವಿಷ್ಯದಲ್ಲಿ ಈ ಜಟಕಾಬಂಡಿ ಕೂಡ ನಶಿಸಿ ಹೋಗುವ, ಮ್ಯೂಸಿಯಂ ಸೇರ್ಪಡೆಯಾಗುವ ಮಹಾನ್‌ ಪಳೆಯುಳಿಕೆಯಂತೆಕಂಡಿತು. ಸ್ಲೇಟು ಬಳಪ ಹಿಡಿಯೋ ಸಮಯಕ್ಕೆ ಜಟಕಾಬಂಡಿ ಏರಿ ಕೂತ ನೆನಪು.

ದಿನ ಸರಿಯುವಿಕೆಯಲ್ಲಿ ಕಾಲ ಪಲ್ಲಟವಾಗಿ ನಾನುಕೂಡ ಜಟಕಾಬಂಡಿ ಸವಾರಿ ಮಾಡಿದ ಸಾಮ್ರಾಜ್ಞೆಯಾಗಿ ಕಥೆ ಒಟಗುಟ್ಟುತ್ತಿದ್ದರೆ, ನನ್ನ ಸುತ್ತುವರಿದು ಕೂತು ಕಥೆ ಕೇಳೊ ಹಿತನೆನಕೆಯಲ್ಲಿ ಜಟಕಾಬಂಡಿ ಏರುವ ಹೆಬ್ಬಯಕೆ ಒಡಮೂಡಿ; ತಕ್ಷಣವೇ ಈ ನಾಡಿನ ಮಹಾರಾಣಿ ನಾನೇ ಎಂಬಂತೆ ರಥವೊಂದು ನನ್ನ ಬರುವಿಕೆಗೆ ಕಾದಂತೆ ಭ್ರಮಿಸಿ ಜಟಕಾಬಂಡಿ ಏರಿ ಒಂದು ವಿಹಂಗಮನ ನೋಟಕ್ಕೆ ಸಜ್ಜಾದೆ. ಅಂತೂ ಟಕಕೂ ಟಕಖೂ.. ಶಬ್ದದೊಂದಿಗೆ ನನ್ನ ವರ್ಣರಂಜಿತ ಜಟಕಾಬಂಡಿ ನಾಗಾಲೋಟವನ್ನೆ ಪ್ರವೇಶಿಸಿತು.

ಏ…ಜಟಕಾ ಕುದರೆ ಹತ್ತಿ ಪ್ಯಾಟೆಗ್ ಹೋಗಮ್ಮ. ಕಾಡ ಕುದುರೆ ಓಡಿ ಬಂದಿತ್ತ್‌ ಅ.. ಅ…, ಹೀಗೆ ಕನ್ನಡ ಸಿನೆಮಾಗಳಲ್ಲೂ ಕೂಡ ಜಟಕಾಬಂಡಿ ಕುದುರೆ ಬಳಸಿದ್ದುಂಟು. ಕೃಷಿಗೂ ಸೈ, ಸಾಗಾಟಕ್ಕೂ ಸೈ ಏನಿಸುವ ಈ ಕುದುರೆ ಬಲು ಪ್ರಿಯವಾಯಿತು. ಕುದುರೆ ಮೋಹಕೆ ಸಾರಥಿಯೊಂದಿಗೆ ಸಂವಾದ ಬಿದ್ದು ಗೌಪ್ಯ ವಿಷಯಗಳನ್ನೆಲ್ಲ ಬಹಿರಂಗಪಡಿಸಲುವಾದೆ. ನಿಂತೆ ನಿದ್ರಿಸುವ ಈ ಕುದುರೆ ಸವಾರಿ ಮಾಡುವುದು, ಪಳಗಿಸುವುದು ಮುಶಕಿಲ್‌ ಕೆಲಸವಂತೆ. ಪ್ರೀತಿ ಧಾರೆಯೆರೆದು ಅಪರೂಪಕ್ಕೆ ಅಷ್ಟೆಂಬಂತೆ ದಂಡಿಸಿದಾಗ ಮಾತ್ರ ಒಲಿಯುವ ಇಲ್ಲದೆ ಹೊದ್ರೆ ಒಗೆಯುವ ಪ್ರವೃತ್ತಿಕುದುರೆಯದು. ಅದಕ್ಕೆ ಏನೋ, ಹತ್ತುವ ಮೊದಲು ಕುದುರೆ ನೋಡು ಅನ್ನೊ ವಾಡಿಕೆ ಇದೆ.

ಐತಿಹಾಸಿಕ ಕಥೆಗಳಲ್ಲಿ ಅನೇಕ ರಾಜ ಮಹಾರಾಜರು ಪ್ರೀತಿಯಿಂದ ಕುದುರೆಗಳಿಗೆ ಹೆಸರಿಟ್ಟು ಸಾಕಿರುವ ಕಥೆಗಳನ್ನ ನೋಡಬಹುದು. ರಾಣಾಪ್ರತಾಪ, ಶಿವಾಜಿ, ಸಿದ್ಧಾರ್ಥ ಇವರೆಲ್ಲ ಚೇತಕ, ವಿಶ್ವಾಸ, ಕಂಠಕ ಎಂಬ ಕುದುರೆಗಳನ್ನ ಅತಿ ಪ್ರೀತಿಯಿಂದ ಕಂಡದ್ದು ಈಗ ಇತಿಹಾಸ. ಸಾರಥಿ ಸಂವಾದದೊಂದಿಗೆ ಮತ್ತೊಂದು ವಿಷಯ ಬಹಿರಂಗವಾಗಿದ್ದು ಕುದುರೆಗಳಿಗೆ ಸುಳಿಯಿರುವುದು.

ನೀರುಗಾಳಿಗೂ ಸುಳಿಯುಂಟು. ಅಷ್ಟೇ ಏಕೆ ಮನುಷ್ಯನ ತೆಲೆಯಲಿ ಎರಡು ಸುಳಿ ಅದೃಷ್ಟವಂತರಿಗೆ ಎಂಬ ಸತ್ಯ ತಿಳಿದಿದ್ದು ಮಾತ್ರತಿಪ್ಪೆಸ್ವಾಮಿ ಮಹಾನುಭಾವರಿಂದ! ‘ಲೋ ನೀ ತುಂಬಾ ಅದೃಷ್ಟವಂತ ಕಣೋ! ನೋಡೊ ನಿನ್ನ ತಲೆಲಿ ಎರಡು ಸುಳಿಯಿದೆ! ನಿಂಗೆ ಇಬ್ಬರು ಹೆಂಡ್ತಿರು! ನಂಗೆ ನಿಮ್ಮ ಅಮ್ಮ ಮಾತ್ರ.. ಛೇ! ಇದೆಂಥ ಅನ್ಯಾಯವೆಂದು, ಒಂದನೇ ತರಗತಿಯಲ್ಲಿ ಓದುತ್ತಿರುವ ಮಗನೇದುರು ದುಃಖ ತೋಡಿಕೊಂಡಾಗಲೇ ನನಗೂ ಎರಡು ಸುಳಿ ಮಹತ್ವ ತಿಳಿದಿದ್ದು. ಅದೃಷ್ಟದ ಮರ್ಮ ಅರಿಯದ ಇವರ ಪಾಪದ ಮಗ, ಅಪ್ಪಾ, ನಂಗೆ ಒಬ್ಬಳೆ ಹೆಂಡ್ತಿ ಸಾಕೆಂದು ಗೋಳಿಟ್ಟಿದ್ದ. ನೂರಾವೊಂದು ಸುಳಿಯಿರುವ ಈ ಕುದುರೆಗಳಿಗೆ ಅದೃಷ್ಟವೋ ಅದೃಷ್ಟವೆಂದುಕೊಳ್ಳುವಾಗಲೆ ಗೊತ್ತಾಗಿದ್ದು, ಖಂಠಾಭರ್ಣ ಮಸ್ತಕ ಸುಳಿಯಿರುವ ಕುದುರೆ ಮಾತ್ರ ಸಾಕಲಾಗುತ್ತೆ. ಇವುಗಳ ಇರುವಿಕೆ ಮನೆತನಕ್ಕೆ ಸಂಮೃದ್ಧಿ, ರಾಜಯೋಗದ ನಂಬಿಕೆ ಕುದುರೆಮಾಲೀಕರಿಗೆ.

ಕಸಬರಿಗೆ, ಗಳಸಾಸ, ಬೇಡಿ, ಕಣ್ಣೀರು ಹೆಸರಿನ ಸುಳಿಗಳಿವೆಯಂತೆ. ಪಾಪ ಇವುಗಳ ಕಥೆನೋ ಯಾವುದೋ ಮೂಡನಂಬಿಕೆಯ ಬಲೆಗೆ ಬಿದ್ದ ಹಾಗೆ. ಕೆಟ್ಟ ಮೂಲಾ ನಕ್ಷತ್ರದ ಹುಟ್ಟಿನ ಪಾಡಂತೆ. ಯಾರಿಗೂ ಬೇಡವಾದವು. ಸಾಕಲ್ಲ,ಮಾರಲ್ಲ, ಹಾಗೆ ಪುಕ್ಕಟ್ಟೆ ಕೊಟ್ಟಾಗಲು ಕೂಡ ತೆಗೆದುಕೊಳ್ಳುವುದಿಲ್ಲ. ಹಲವು ಬಾರಿ ಹೆದ್ದಾರಿ ಮಧ್ಯ ದಾರಿ ಹೋಕರ ತೊಂದ್ರೆ ಲೆಕ್ಕಿಸದೇ ನಿಂತ ಕುದುರೆಗಳ ಯಾರೋಬ್ಬರು ಕರೆದೊಯ್ಯದಿರುವ ದೃಶ್ಯ ಮೇಲಿನ ಮಾತಿಗೆ ಸಾಕ್ಷಿ.ಹೇರು ಕುದುರೆ, ಲಘು ಕುದುರೆ, ಸಣ್ಣ ತಳಿ ಕುದುರೆ ಹೀಗೆ ಹಲವು ಬೇಧ. ಜಟಕಾಬಂಡಿ ಹೂಡುವಾಗ ಸಣ್ಣತಳಿಕುದುರೆ ವಯಸ್ಸು ಕೇವಲ ಮೂರು ವರ್ಷ. ಅದಾಗಲೇ ಎಂಟರಿಂದ ಹತ್ತು ಜನ ಹೊರುವ ಅವುಗಳ ಬಗ್ಗೆ ಕಕ್ಕುಲಾತಿ ಮೂಡುವುದು ಖಂಡಿತ.

ಬೆನ್ನು, ಪಕ್ಕೆಲಬು ಗಾಯವಾಗದಂತೆ ತಡಿ ಬಳಸುವುದು, ಕುದುರೆ ಲಾಳ ತೊಡಿಸುವುದು ಸಂಪೂರ್ಣ ಹೊರೆ ಅವುಗಳ ಮೇಲೆ ಬೀಳದಂತೆ ಜಟಕಾ ಬಂಡಿ ವ್ಯವಸ್ಥೆ ಹೊಂದಿದೆ. ಸಾರಥಿ ಗಿಡ್ಡ ತಳಿ ಕುದುರೆ ಹೂಡಿ, ಗಾಡಿ ಓಡಿಸುವಾಗ ಕುದುರೆ ನೋಡುತ್ತಿದ್ದಂತೆ ಕತ್ತೆ ನೆನಪಾಗದೆ ಉಳಿಯಲು ಸಾಧ್ಯವಿಲ್ಲ. ಕತ್ತೆ-ಕುದುರೆ ಪರಿಶೀಲಿಸಿದರೆ ಸಾಮ್ಯತೆಮಧ್ಯ ವೈರುಧ್ಯ ಕಾಣುವುದು. ಒಂದೊಮ್ಮೆ ಕತ್ತೆ ಶ್ರೇಷ್ಠವೆಂದು ಮತ್ತೊಂದು ಬಾರಿ ಕುದುರೆ ಶ್ರೇಷ್ಠವೆಂದು ಆಂತರಿಕ ದ್ವಂದ್ವಕ್ಕೆಸಿಲುಕಿ ಅಳತೆಗೋಲಿನ ತಾಳಮದ್ದಲೆ ತಾಳತಟ್ಟಿತ್ತು. ಇತ್ಯರ್ಥಗೊಳಿಸಬೇಕೆಂಬ ಛಲ ತೊಟ್ಟು ವಾದ ವಿವಾದಗಳ ಸುರಿಮಳೆ ನಡುವೆ ಸಾಗಿ ಹೊರಟಿ.

ಅಯಾಲು, ಅಶ್ವ ಹೀಗೆ ಪರ್ಯಾಯ ನಾಮಧೇಯ ಪಡೆದ ಕುದುರೆಗೆ ಸಂಬಂಧ ಪಡೆದಂತೆ ರಾಮಾಯಣದಲ್ಲಿ ಅಶ್ವಯಾಗಮಾಡಿದ್ದಿದೆ; ಲವಕುಶರು ರಾಮನ ಅಶ್ವಯಾಗ ಕುದುರೆ ಕಟ್ಟಿ ಹಾಕಿದ ಕಥೆಯಿದೆ. ಮೇವಾಡ, ರಾಜಾ ರಾಣಾ ಪ್ರತಾಪನ ನಂಬಿಕಸ್ಥ ಕುದುರೆ ಚೇತಕ್‌ ತನ್ನ ಪ್ರಾಣವನ್ನೆ ಪಣಕ್ಕಿಟ್ಟು ರಾಣಾ ಪ್ರತಾಪನ ರಕ್ಷಿಸಿತೆಂಬ ಇತಿಹಾಸದಿಂದಲೇನೊ ಬಜಾಜ ಕಂಪನಿಯವರು ಸಹ ತಮ್ಮ ಕಂಪನಿ ಸ್ಕೂಟರ ಕೂಡ ನಂಬಿಕಸ್ಥ ರಕ್ಷಣೆ ನೀಡುವುದಾಗಿ ಭರವಸೆ ಹೆಸರು ‘ಚೇತಕ’ ಬಳಸಿಕೊಂಡಿದ್ದಿದೆ. ಅಷ್ಟೇ ಅಲ್ಲದೆ ಮಹೇಂದ್ರ ಕೂಡ ಸ್ಕಾರಪಿಯೋ ವಾಹನವೊಂದರ ಜಾಹೀರಾತಿಗೆ ಕುದುರೆ ಬಳಸಿದ್ದು ಕಾಣಬಹುದು.

ಪುರುಷತ್ವ ಸಾಹಸ ಬಿತ್ತುವ ಜಾಹೀರಾತಿಗೂ ಕುದುರೆಗಳೇ ಬೇಕು. ಕೆಲಸದಲ್ಲಿ ನಿಗಾ ಬೇಕು ಅನ್ನೊ ಸಲಹೆ ಸೂಚನೆಗೂ ಕುದುರೆ ಕಣ್ಣಪಟ್ಟಿ ಉದಹರಿಸಬೇಕಿದೆ. ಅಷ್ಟೆ ಏಕೆ? ಚಂದದ ಹುಡುಗಿಯರು ಕಟ್ಟುವ ಕೂದಲಿಗೂ ಪೋನಿ ಟೇಲ ಅಂತ್ಲೆ ಹೆಸರು. ಮನೆ, ಕಚೇರಿ ಮುಂದೆ ಕುದುರೆ ಲಾಳ ಹಾಕಿದ್ರೆ ಲಾಭವಂತೆ. ಓಡೋ ಕುದುರೆ ಚಿತ್ರ ಮನೆ ಗೋಡೆಗೆ ಅಂಟಿಸಿದ್ರೆ ಲಕ್ಷ್ಮಿ ಒಲಿವಳಂತೆ. ತಿಳಿದ ತಕ್ಷಣವೇ ಹೇಳಿದ ದಿಕ್ಕಲಿ ಕುದುರೆ ಓಡಲಾರಂಭಿಸಿತು.

ರಾತ್ರಿ ಹಗಲು ಸತತವಾಗಿ ಐದು ವರ್ಷ ಓಡಿದಾಗಲು ಯಾವ ಲಕ್ಷ್ಮಿ ಆಗಮನವೇನು ಆಗದಾದರು, ಜೇಬಲ್ಲಿದ್ದ ಲಕ್ಷ್ಮಿ ಮಾತ್ರ ಖಾಲಿಯಾಗಿದ್ದು ಸತ್ಯ. ಕತ್ತೆ ವಿಷಯಕ್ಕೆ ಬಂದಾಗ ಅವು ಕುದುರೆಯಂತೆ ಮೆರೆಯದಿದ್ದರು ತಮ್ಮದೆ ಛಾಪು ಅಚ್ಚು ಹಾಕಿದ್ದುಂಟು. ನನಗೆ ನೆನಪಿದ್ದ ಹಾಗೆಒಬ್ಬ ಮುತ್ಸದ್ದಿ ರಾಜಕಾರಣಿಯೋರ್ವರು ೨೦೧೮ರಲ್ಲಿ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಅಭಿವೃದ್ಧಿಯ ಹಲವು ಯೋಜನೆಕೈ ಹಿಡಿದು ನಡೆಸಲು ಯತ್ನಿಸಿದವರು. ಆ ಯೋಜನೆಯಡಿ ಅತ್ಯದ್ಭುತವಾದದ್ದು, ಪ್ರಮುಖವಾದ್ದು ಕತ್ತೆಗಳ ಸಮಗ್ರ ಅಭಿವೃದ್ದಿಗೆ ‘ಕತ್ತೆ ಅಭಿವೃದ್ದಿ ಮಂಡಳಿ’ ರಚನೆ. ಜೊತೆ ಜೊತೆಗೆ ನಮ್ಮ ಭಾರತದ ರಾಷ್ಟ್ರೀಯ ಪ್ರಾಣಿ ಹೆಗ್ಗಳಿಕೆಗೆಗುರಿಯಾಗಿಸುವುದು. ರಾಷ್ಟ್ರೀಯ ಪ್ರಾಣಿಯೆಂದರೆ ಸಾಮಾನ್ಯವೇ?ಇದೊಂದು ದಿಟ್ಟ ಆಲೋಚನೆಯೆ ಸರಿ.

ಕತ್ತೆ ಶ್ರಮ ಜೀವಿ, ಅನುಪಯುಕ್ತ ಕೆಲಸ ಕಾರ್ಯಕ್ಕೆ ಕತ್ತೆ ಕೆಲಸ ಅನ್ನಲ್ಲವೇ? ತಲೆ ತಗ್ಗಿಸಿ ಗುಲಾಮನಂತೆ ದುಡಿಯೋದುಕೂಡ ಕತ್ತೆನೆ. ಅದೇ ರಾಜಕೀಯ ಮುತ್ಸದ್ಧಿ ನೈಸರ್ಗಿಕ ಸಂಪತ್ತನ್ನೆಲ್ಲ ಕಾಳಸಂತೆಕೋರರ ಲೂಟಿ ಖಂಡಿಸಿ ಕತ್ತೆಗಳೊಂದಿಗೆ ಬಣ್ಣದೋಕಳಿ ಕೂಡ ಆಡಿದ್ದುಂಟು. ಕತ್ತೆ ತರ ಇದೀಯ, ಕತ್ತೆಗಾದಷ್ಟು ವಯಸ್ಸಾಗಿದೆ. ಹೀಗೆ ಬೈಯುವಾಗಲು ಕತ್ತೆಯನ್ನೆನೆನೆಯೋದು. ಅದು ಏನೇ ಇರಲಿ, ಮೊನ್ನೆ ಮೊನ್ನೆ ತಾನೆ ನಮ್ಮ ಬೀದಿಲಿ ಲಂಬಾಣಿ ಹೆಂಗಸು ಕತ್ತೆ ಕರೆ ತಂದು ಕತ್ತೆ ಹಾಲುಮಾರಾಟ ಮಾಡಿದ್ದು ಕಂಡು ಗಪ್‌ ಚುಪ್‌ ಆದೆ. ಅದು ಸಾಮಾನ್ಯ ಮೌಲ್ಯವಿರದೆ, ಒಂದೂವರೆ ಲೀಟರ ಹಾಲು ತೆಗೆದುಕೊಳ್ಳುವಲ್ಲಿ ಐವತ್ತು ರೂಪಾಯಿ ತೆತ್ತು, ಒಂದು ಕಪ್‌ ಹಾಲು ಪಡೆಯುವುದು. ಛೀ! ಕತ್ತೆ ಹಾಲೆಂದು ಮೂಗುಮೂರಿಯೋರಿಗೆಲ್ಲ, ಹಿರಿಕರಿಂದ ಪ್ರವಚನವು ಶುರುವಿಟ್ಟಿತು.

ನಮ್ಮ ಕಾಲದಲ್ಲಿ ಕತ್ತೆ ಹಾಲು ಮಾರಾಟಕ್ಕೆ ಪದೇ ಪದೇಬರೋರು, ಮಕ್ಕಳಿಗೆಲ್ಲ ಕತ್ತೆ ಹಾಲು ಉಣಬಡಿಸಿಯೆ ತಾಕತ್ತು ಬಂದಿದ್ದು. ಒಂದು ಕಡೆ ತಾಕತ್ತಿಗೆ ಬಿಂಬವಾಗಿ ಜಾಹೀರಾತು ಗಳಲ್ಲಿ ಬಳಸುವ ಕುದುರೆ.ಮತ್ತೊಂದೆಡೆ ತಾಕತ್ತಿಗಾಗಿ ಕತ್ತೆ ಹಾಲಿನ ಮಾರಾಟ; ಏನೊಂದು ತಿಳಿಯದಾಯಿತು. ಅಯ್ಯೋ ಹೋಗಲಿ ಬಿಡು ನಂಗೇನು? ಕತ್ತೆ ಬಾಲ ಕುದುರೆ ಜುಟ್ಟು, ನಮ್ಮ ಮನೇಲಿ ಹಸು ಹಾಲೇ ಬಳಸೋದು, ಅಂತಲೇ ತಣ್ಣಗೆ ಬೀದಿಯಿಂದ ಮನೆಯೊಳಗೆ ನಡೆದೆ.. ಸಣ್ಣಗೆ ಡಿ.ವಿ.ಗುಂಡಪ್ಪನವರ ಸಂಗೀತವೊಂದು ತೇಲಿ ಬರುತ್ತಿತ್ತು. ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ ಕುದುರೆ ನೀನ್‌ ಅವನು ಪೇಳ್ದಂತೆ ಪಯಣಿಗರು ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು..

‍ಲೇಖಕರು Avadhi

May 11, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: