ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೊನೆಯಾಗದಷ್ಟು ನೆನಪುಗಳ ರಾಶಿ…

ಸೌಜನ್ಯ ನಾಯಕ

ನಾ ಭೂಮಿಗೆ ಬಂದಾಗಿನಿಂದಲೂ
ನನ್ನ ಎತ್ತಾಡಿಸಿದವಳು ನನ್ನಜ್ಜಿ…
ನನ್ನ ಬಾಲ್ಯದ
ಆಟ, ಓಟದ ವೈಖರಿಯ
ನನ್ನದುರೆ ಸಿನಿಮಾ ಕಥೆಯಂತೆ
ತೆರೆದಿಡುತಿದ್ದವಳು ನನ್ನಜ್ಜಿ…
ಕೆಲವೊಮ್ಮೆ ಆಕೆಯಾಡುವ ಮಾತುಗಳು
ವೇದಾಂತದಂತೆಯೆ ಕೇಳಿಸುತಿದ್ದದ್ದುಂಟು
ಈ ನನ್ನಯ ಕಿವಿಗಳಿಗೆ..
ಮಗದೊಮ್ಮೆ ಅಭಿಮಾನಿಯಾಗಿ
ಸೋತುಬಿಡುತಿದ್ದೆ ನಾ
ಯಾರನ್ನು ದೂಷಿಸದ
ಆಕೆಯ ನಿಷ್ಕಲ್ಮಶ ಗುಣಗಳಿಗೆ…

ಪ್ರತಿ ಬಾರಿ ಮನೆಯಿಂದ
ಹೊರಟು ನಿಂತಾಗಲೂ
ಬಾಗಿಲಲ್ಲಿಯೇ ಕುಳಿತು
ಮರೆಯಲ್ಲಿಯೆ ಅಳುತಿದ್ದ
ಮಗುವಿನಂತ ಮನಸು ಅವಳದು…
ತಾನೇ ಮುಪ್ಪಾದರೂ
ತನ್ನ ನೋವ ತೊರಗೊಡದೆ
ನಮ್ಮೆಲ್ಲರ ಬಗ್ಗೆ ಕಾಳಜಿ ವಹಿಸುತಿದ್ದ
ವಿಶಾಲವಾದ ಹೃದಯ ಅವಳದು…
ಆದರೆ ಮುಂಜಾನೆಯ ಕರೆಯೊಂದು
ಆಕೆ ನಮ್ಮನ್ನೆಲ್ಲ ಅಗಲಿದ
ವಿಷಯವ ಹೇಳುತ್ತಿದೆ…
ಅಗಲಿಸಿ ಕೇಳಿಸಿಕೊಂಡ ಕಿವಿಗಳು ಕೂಡ
ತಮ್ಮ ಕೇಳುವಿಕೆಯನ್ನೆ ಸಂಶಯಿಸಿ ಪ್ರಶ್ನಿಸಿಕೊಳ್ಳುತ್ತಿವೆ…
ಎಂದಿಗಿಂತ ಇಂದು ಭಾರವಾದ
ಹೃದಯದ ಪರದೆಯ ಮೇಲೆ
ನೆನಪಿನ ಸುರಿಮಳೆ
ಧಾರಾಕಾರವಾಗಿ ಸುರಿಯುತಿದೆ…‌

ತಿಂಗಳುಗಳ ಹಿಂದೆಯಷ್ಟೆ
ಮುದ್ದುಮಾಡಿ ಕಳುಹಿಸಿದ
ನನ್ನಜ್ಜಿ ಜೊತೆಗಿಲ್ಲವೆಂಬುದ
ಅರಗಿಸಿಕೊಳ್ಳಲಾಗದೆ ಮನಸು
ಮರಗುತ್ತಿದೆ…
ಬಿಕ್ಕಳಿಸಿ ಅಳುತಿದ್ದೇನೆ ನಾನು
ಸುತ್ತಲಿನ ನಾಲ್ಕು ಗೋಡೆಯ
ಮಧ್ಯೆ ಕೂತು
ಕೊನೆಯದಾಗಿ ನಿನ್ನ ಮುಖವ ನೋಡಲಿಕ್ಕಾಗದಿದ್ದಕ್ಕೆ..
ಶಪಿಸುತಿದ್ದೇನೆ ಈ ಮಹಾಮಾರಿ
ಎಂಬ ಕೊರೊನಾವ
ನಿನ್ನ ನೋಡಲು ಬಿಡದೆಯೆ
ನನ್ನ ಬೇರೊಂದು ರಾಜ್ಯದಲ್ಲಿ ಬಂಧಿಸಿರುವುದಕ್ಕೆ…
ಕೊನೆಯದಾಗಿ
ನಿನ್ನ ನೋಡಲಾಗದಿದ್ದರೂ
ನೀ ಕೊಟ್ಟ ಕೊನೆಯಾಗದಷ್ಟು
ನೆನಪುಗಳ ರಾಶಿ
ಇಂದು ನನ್ನ ಜೊತೆಯಲ್ಲಿದೆ..
ಜೊತೆಯಾದವುಗಳು ಕೊನೆವರೆಗೂ ನನ್ನೊಡನೆಯೇ ಜೀವಂತವಾಗಿರುತ್ತವೆ ಕೂಡ…

‍ಲೇಖಕರು Avadhi

12 August, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading