ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೊಟ್ರಗೌಡ ತೂಲಹಳ್ಳಿ ಕವಿತೆ- ಏಕಾಂತ!

ಕೆ ಜೆ ಕೊಟ್ರಗೌಡ ತೂಲಹಳ್ಳಿ

ಹೀಗೆ
ಒಬ್ಬಂಟಿ ಕತ್ತಲಿಗೆ
ರಸ್ತೆ ಪಕ್ಕದ ಬಿರಿಯಾನಿ
ಭಾಷಾನ ಬೀಡಾ
ನಿಗಿ ನಿಗಿ ಕೆಂಡದ ಸಿಗರೇಟು
ಒಟ್ಟು ಮಾಡಿದ ಏಕಾಂತವೇ
ನನ್ನ ಒಂಟಿತನ

ಆಗತಾನೇ
ಸುಧಾರಿಸಿಕೊಳ್ಳುವ ಕರಿ ಡಾಂಬಾರು
ವಿರಹ ಎಚ್ಚರಿಸುವ ತಂಗಾಳಿ
ಬದುಕ ಮರೆಸುವ
ಮಿನುಗು ನಕ್ಷತ್ರಗಳು
ಆಗೊಮ್ಮೆ ಹೀಗೋಮ್ಮೆ
ವಾಸ್ತವಕ್ಕೆ ಎಳೆದು ತರುವ
ಫ್ಯಾಕ್ಟರಿ ಸೈರನ್ನುಗಳು

ಒಂಟಿಕೋಣೆಯ
ಹಳೆಯ ಬಾಗಿಲಿಗೂ
ಹೊಸದಾದ ಕೋಣೆ ಕೀಲಿಗೂ
ಒಂದು ತತ್ವಶಾಸ್ತ್ರದ ಅಗತ್ಯವಿಲ್ಲ
ಎನಿಸುತ್ತದೆ
ಬೇರು ಹಳೆಯದಾದರೂ
ಚಿಗುರು ಹೊಸದಿರಬೇಕೆಂದು
ಎಚ್ಚರಿಸಿರುವ ಪರಂಪರೆಯ ತರುವಾಯ

ಆಗೊಮ್ಮೆ
ಖಾಲೀ ಮಂಚದ ಏಕಾಂತಕ್ಕೆ
ಬದುಕ ಬಲಿಕೊಟ್ಟ ದಿನಮಾನಗಳುಂಟು
ಒಂಟಿ ಫ್ಯಾನಿನ ಶಬ್ದ
ಕನಸ ಕೆಡಿಸುವ ಸೊಳ್ಳೆ
ಹಠಾತ್ತನೆ ಎಚ್ಚರಿಸುವ ಭ್ರಮೆ
ರೂಪಕಗಳಾದರೂ
ಭವಿಷ್ಯದ ಸೂತಕಗಳು!

ಹೀಗೆ ಒಮ್ಮೆ ಹುಚ್ಚನಾಗಿ
ಜಾಣನಾಗುವುದೆಂದರೆ
ವರ್ತಮಾನ ಮರೆತು ಪುನಃ
ವಾಸ್ತವಕ್ಕೆ ಮರಳುವ
ಅಭೂತಪೂರ್ವ ಪಯಣ
ಒಂಟಿತನ ಮತ್ತು ಸಾಂಗತ್ಯಕ್ಕೆ
ಅರ್ಥ ಕಲ್ಪಿಸುವುದೆಂದರೆ
ಸುಟ್ಟ ಬೀಡಿಗೆ
ತಂಬಾಕಿನ ತುಣುಕು ಲೆಕ್ಕ ಹಾಕಿದ
ದರಬೇಸಿ ಸಂಗನ ಬದುಕಿದ್ದಂತೆ!

‍ಲೇಖಕರು Avadhi

6 July, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading