ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೊಚ್ಚಿಹೋದ ಹಡಪದಲ್ಲಿ..

ಬಂಗಾರ ಚಿಪ್ಪಿನ ಕನಸುಗಳು….

ಅರ್ಚನಾ ಎಚ್

ಕೊಚ್ಚಿಹೋದ ಹಡಪದಲ್ಲಿದ್ದದ್ದು ಬಂಗಾರ ಚಿಪ್ಪಿನ ಕನಸುಗಳು…
ಅಂಕಿಗಳ ಸಂಕಲನ ವ್ಯವಕಲನ
ಭಾಗಾಕಾರ ಹಾಗೂ ಗುಣಾಕಾರದ
ನಕ್ಷತ್ರ ಮೀನುಗಳು….

ನಭೋಮಂಡಲದಿ ವಿಜೃಂಭಿಸುವ
ವ್ಯೋಮಕಾಯಗಳು,
ಸ್ಯಾಟಲೈಟು, ಪ್ಲಾನೆಟುಗಳ
ಕಾರ್ಯ ಪರಿಚಯದ ಅಖಂಡತೆಯ ಅಷ್ಟಪಾದಿಗಳು….
ಗುರುತ್ವ, ವಿಕರ್ಷಣೆ, ಗ್ರಾಫಿಟಿಗಳ
ಸಾಪೇಕ್ಷ ಸಿದ್ದಾಂತ‌ ಸಾರುವ ಮೃದ್ವಂಗಿಗಳು…

ಸೂತ್ರ ಪ್ರಮೇಯಗಳ ಪ್ರಾಮಾಣೀಕರಿಸಿದ
ಪುರಾವೆಗಳ ತಿಮಿಂಗಿಲಗಳು…
ವಿಂಗಡಣೆಗೆಂದು ಬೇಧಿಸಿದ್ದ ಪೇಪರ್ ಬೋಟು
ಬೀಜಗಣಿತ ,ಅಂಕಗಣಿತ,  ರೇಖಾಗಣಿತದ  ಗೀಟು..

ತಂಗಿಯ ಬಳಪ, ಅಂಗಿ ಸ್ಲೇಟು…!!

ಅವ್ವನ ಮದುವೆ ಝರಿಸೀರೆಗಳು
ಬಣ್ಣ ಬದಲಿಸುವ ಲೋಳೆಮೀನು…
ಹವಳ ಪಚ್ಚೆ ಮುತ್ತು ಮತ್ತು
ರೂಬಿಸ್ಟೋನಿನ ನಕ್ಲೇಸುಗಳು ಸಮುದ್ರದವೇ…
ಹೆತ್ತು ಹೊತ್ತ ಜೀವಗಳ ಮೇಲೆ
ಅಟ್ಟದಷ್ಟು ಕೂಡಿಟ್ಟ ಆಸೆಗಳು…
ಬಂಗಾರ ಚಿಪ್ಪಿನ ಕನಸುಗಳು
ಸ್ವಾತಿ ಮಳೆಯ ಹನಿಯ ಮುತ್ತು..

ಬಸಿದ ರಕ್ತದ ಬೆವರಿನ ಹನಿಗಳ
ಬೆರೆಸಿ ಕಟ್ಟಿದ್ದ ಹೊಸಮನೆ;
ಕಡಲ ನೀರಷ್ಟೇ ಉಪ್ಪಪ್ಪು..
ಜಲಗರ್ಭದ ತಿರುಳ ಮರಳು…
ಸದಾ ಅಜ್ಜ ಕೂರುತಿದ್ದ ತೂಗುಛೇರು..
ಅಜ್ಜಿಯ ಭದ್ರ ತಿಜೋರಿ…
ಅಮ್ಮಗೆ ದೊರಕದ ಕೀಲಿಕೈಗಳು..
ಎಲ್ಲವೂ ಅರಬ್ಬೀ ಸಮುದ್ರದ ಪಾಲು…
ಕೊಚ್ಚಿಹೋದ ಇಳೆಯ ಕೊಳೆಯಲ್ಲಿ

ಮಳೆಯ ಸಮೀಕರಣಕ್ಕೆ ಬೆರೆತು ಮೊರೆತು..

ರೊಚ್ಚಿಗೆದ್ದ ಭೂರಮೆಯ ನಿಟ್ಟುಸಿರಿಗೆ
ಕಳೆದುಕೊಂಡದ್ದು ಅಪರಿಮಿತ ಆಸ್ತೆ..
ಹೆಚ್ಚೆಂದರೆ ಉಳಿದದ್ದು
ಮಸ್ತಕದಲ್ಲುಳಿದ ಜ್ಞಾನವಷ್ಟೇ…
ಜೀವಗಳೇ ಮುಳುಗುವಾಗ

ವಸ್ತುಗಳಾವ ಲೆಕ್ಕ ಹೇಳು..?
ನಾನು ನನ್ನದು ನನ್ನವರೆಂಬ ಕೊಂಡಿ
ಮೀರಿ ನಿಂತಾಗಲೇ ಗೆಲುವು ಕೇಳು…

‍ಲೇಖಕರು avadhi

23 March, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading