ಅನಾಮಿಕಾ @ ಹ್ಯಾಂಡ್ ಪೋಸ್ಟ್: ಅವನು ನನ್ನ ನೆತ್ತಿಗೆ ಮುತ್ತಿಕ್ಕಿದ..

ಮುಟ್ಟಿದೊಡನೆ ಸೋಂಕುವ, ಸೀನಿದೊಡನೆ ಬಂದೇ ಬಿಡುವ…

ನಟ್ಟಿರುಳಿನಲ್ಲಿ ಎಚ್ಚರಾಗಿ ನಿದ್ದೆ ಬರದೆ ಹೊರಳಾಡುವಾಗ, ಎಂದೊ ಒಡನಾಡಿದ ಜೀವವೊಂದು ಈ ಸರಿಹೊತ್ತಿನಲ್ಲಿ ನೆನಪಿಸಿಕೊಳ್ಳುತ್ತಿರುವುದಕ್ಕೆ ಹೀಗಾಗುತ್ತಿರಬಹುದೆ ಅಥವಾ ಮತ್ತೆ ಒಲವಾಯಿತೆ ಎನ್ನುವ ಯೋಚನೆ ಬರುತ್ತಿದ್ದ ಹಾಗೆ ಇಲ್ಲ ಇಲ್ಲ ಇದು ಬೇಸಿಗೆ ಆರಂಭವಾಗುತ್ತಿರುವ ಸೂಚನೆ ಎಂದು ಮೆದುಳು ಮನಸಿಗೆ ಬುದ್ಧಿ ಹೇಳಿತು.

ಇವು, ಒಳಗಿನ ಕುದಿ ಹೊರಗಿನ ತಾಪ ತಾಳಿಕೊಂಡು ತಡವಾಗಿ ಮಲಗಿ ವಿರಾಮವಾಗಿ ಎದ್ದರಾಯಿತು ಎನ್ನುವ ಭವವಿಧುರರೆಲ್ಲ ಮಧ್ಯರಾತ್ರಿಯ ಭಾವಸಲ್ಲಾಪಕ್ಕೆ ಕರೆವ ದಿನಮಾನಗಳು ಎಂದು ಎಂಟಕ್ಕೆಲ್ಲ ಪೋನ್ ಅನ್ನು ಫ್ಲೈಟ್ ಮೋಡಿಗೆ ತಳ್ಳಿ ನಿದ್ದೆ ಮಾಡುವ ಪ್ರಯತ್ನದಲ್ಲಿರುತ್ತೇನೆ.

ಆಗೆಲ್ಲ ಸ್ನೇಹಿತರು ಥೊ ನಿನ್ನ ‘ಸೀಜನಲ್‌‌ ಒಲವಿನ’ ಮನೆ ಹಾಳಾಗ. ನಮ್ಮ ಜೊತೆಗಿನ ಮುಖ್ಯ ಮಾತುಕತೆಗೆ ಮಿಸ್ ಆಗ್ತಿಯಲ್ಲ ಎಂದು ಬೈಯ್ಯುತ್ತಾರೆ. ಹೀಗೆ ಎಲ್ಲರಿಂದ ತಪ್ಪಿಸಿಕೊಂಡು ಒಬ್ಬಳೆ ಇರತೊಡಗಿದಾಗ ಮೊದಮೊದಲು ನನಗೆ ಒಂದು ಹೃದ್ಯವಾದ ಶಾಂತಿಯ ಅನುಭವವಾಗುತ್ತದೆ. ಅನಂತರ ಹೊತ್ತಿನ ಗೊತ್ತು ಗುರಿಯೆ ತಪ್ಪಿದಂತೆನಿಸಲು ಶುರುವಾಗುತ್ತದೆ. ಬರಬರುತ್ತ ಭಾರಿ ಭಯ ನನ್ನನ್ನಾವರಿಸುತ್ತದೆ. ಯಾರಾದರು ನನ್ನನ್ನು ಗೂಡಿನಂಥಹ ಸೆರೆಯಲ್ಲಿ ಹಾಕಿದ್ದಾರಾ ಎನ್ನುವ ಭಾವನೆ ಹುಟ್ಟುತ್ತದೆ.

ಯಾವಾಗ ನೋಡುವುದು, ಮುಟ್ಟುವುದು ಅಪೂರ್ವ ಅನುಭವಗಳೆನಿಸಲು ಶುರುವಾಗುತ್ತದೆಯೊ ಆ ಕ್ಷಣ ನನಗೆ ಬಾಳಲ್ಲ ಬದುಕಲ್ಲ; ಜೀವ ಜೀವಕೆ ಉದ್ದೀಪನವಾದುದು ಒಂದು ಅಪ್ಪುಗೆ ಎನಿಸುತ್ತದೆ. ಇದು, ಮುಟ್ಟಿದೊಡನೆ ಸೋಂಕುವ, ಸೀನಿದೊಡನೆ ಬಂದೇ ಬಿಡುತ್ತದೆ ಎನ್ನುವಂತಾಡುತ್ತಿರುವ ‘ಕೊರೊನ ಸಮಯ’ದಲ್ಲಿ ನಾನು ಅಪ್ಪುಗೆಯೊಂದಕ್ಕಾಗಿ ಪಟ್ಟ ಪಡಿಪಾಟಲು. ಇಲ್ಲಿರುವುದು ಏನ್ ಆಗುತ್ತೊ ನೋಡೆ ಬಿಡೋಣ ಎನ್ನುವಾಗ ದೊರೆಯುವ ಮಾನಸಿಕ ಉದ್ದೀಪನೆಯ ಸುಖ ಬಿಟ್ಟರೆ ಬೇರೆ ಏನಿಲ್ಲ!

ನಮ್ಮ ಕಡೆ ಮೊಹರಂ ಹಬ್ಬದಲ್ಲಿ ಚೋಂಗ್ಯಾ ಎನ್ನುವ ಸಿಹಿಯನ್ನು ಪದ್ಧತಿ ಇರುವ ಮುಸ್ಲಿಂತೇರ ಮನೆಗಳಲ್ಲು ಮಾಡುತ್ತಾರೆ. ಮಾಡುವುದು ಕಷ್ಟವಾದರು ವರ್ಷದಲ್ಲಿ ಒಂದೆ ಸಲ ಮಾಡುವಂತಹ ಪದಾರ್ಥ ಎಂದು ದಂಡಿಯಾಗಿ ಮಾಡಿ, ಮಾಡದವರ ಮನೆಗಳಿಗು ಹಂಚುತ್ತಾಳೆ ಅವ್ವ. ಏನು ಕೊಟ್ಟರು ಸಾಲದಾಗುವ ಮಕ್ಕಳ ಸೈನ್ಯ ಮನೆಯಲ್ಲೆ ಇರುವಾಗ ಮಾಡಿದ್ದನ್ನು ಬೇರೆಯವರಿಗೆ ಕೊಟ್ಟರೆ ಹೇಗೆ ಎಂದು ಒಂದು ಸಲ ನಾನು ಜಗಳ ತೆಗೆದಾಗ, “ಥೂ ಮೂಳ, ಚೊಂಗ್ಯಾಗೋಸ್ಕರ ಕರುಳೊಂದು ವರ್ಷವಿಡಿ ಉಪವಾಸವಿರುತ್ತದೆ. ಅದಕ್ಕಾಗಿ ಆ ಸಿಹಿಯನ್ನು ಹಂಚಿಯೆ ತಿನ್ನಬೇಕು,” ಎಂದಿದ್ದಳು.

ಆವತ್ತಿಗೆ ಉತ್ಪ್ರೇಕ್ಷೆ ಎನಿಸಿದ ಮಾತು ನರನಾಡಿಗಳಲ್ಲಿ ರಕ್ತದ ಬದಲು ಒಲವನ್ನೆ ಹರಿಸುವವಳ ಇಡಿ ದೇಹವೆ ಒಂದು ಅನನ್ಯ ಆಲಿಂಗನಕ್ಕಾಗಿ ಉಪವಾಸ ಇರುವ ಈ ಹೊತ್ತಿನಲ್ಲಿ ಸಹಜವೆನಿಸಿತು. ಕೆಲವೊಂದಿಷ್ಟು ಸ್ಪರ್ಶಗಳು ಇರಿಟೇಟ್ ಆಗುತ್ತವೆ ಎಂದು ಹಲೋ, ಥ್ಯಾಂಕ್ಸ್ ಅಂತ ಯಾರಿಗು ಕೈ ಕೂಡ ನೀಡದ ನನಗೆ ಅಪ್ಪುಗೆಯೊಂದು ಬೇಕೆನಿಸುವುದು ಅತಿ ಅಪರೂಪ. ಕಣ್ಣುಗಳು ಸಂಧಿಸಿದೊಡನೆ ಮಿಂಚಿನ ಮೂಲ ತಿಳಿದಂತಾಗುವ ಸೆಳಕೊಂದು ದೇಹದಲ್ಲಿ ಹಾದು ಹೋದವನೊಟ್ಟಿಗೆ ಮಾತ್ರ ಇದು ಸಂಭವಿಸುತ್ತದೆ.

ಮೊನ್ನೆ ಹೀಗೆ ಸುಮ್ಮನೆ ಕಾಡಲೆಂದು ‘ಅವನ’ನ್ನು ಗಮನಿಸುತ್ತಿದ್ದಾಗ ತುಂಬಾ ದಿನಗಳ ನಂತರ ಕ್ರೇಜ್‌ಗಾಗಿ ಅಲ್ಲದೆ ಮನಸು, ಆತ್ಮ ಏಕವಾಗಿ ಸ್ಪಂದಿಸಿತು. ‘ಅಂಥದ್ದು’ ಏನಾದರೂ ಘಟಿಸಲಿ ಎನ್ನುವ ಇರಾದೆ ಇರದ ಅಪ್ಪುಗೆಯ ಮಾರ್ದವ ಭಾವವಷ್ಟೆ ಅಲ್ಲಿ ಇದ್ದದ್ದು. ಅದರಾಚೆಗು ಅಷ್ಟೆ. ಸಾಮಾನ್ಯರಿಗಿಂತ ತುಸು ಹೆಚ್ಚೆ ಹೊಂದಿದ್ದ ಅವನ ನೇಮು-ಫೇಮಿನಿಂದಾಗಿ ಸಾರ್ವಜನಿಕ ಸ್ಥಳಗಳಲ್ಲಿ ನಮ್ಮಿಬ್ಬರ ಭೇಟಿ ಸಾಧ್ಯವಾಗಿರಲಿಲ್ಲ.

ಕಳೆದ ಹತ್ತು ವರ್ಷಗಳಲ್ಲಿ ಅಪ್ಪ-ಅವ್ವನನ್ನು ಬಿಟ್ಟರೆ ಯಾರು ಬರದ ನನ್ನ ಮನೆಗೆ ಅವನನ್ನು ಕರೆಯಲಾರೆ, ಸಾಂಸ್ಥಿಕ ವ್ಯವಸ್ಥೆಯೊಂದರ ಭಾಗವಾಗಿರುವ ಅವನ ಮನೆಗೆ ಇದಕ್ಕಾಗಿ ನನಗೆ ಆಹ್ವಾನವಿರಲಿಲ್ಲ. ಸೆಲೆಬ್ರಿಟಿ ಜತೆ ಹೆಣ್ಣುಮಗಳೊಬ್ಬಳು ಮೆಟ್ಟಿಲು ಹತ್ತುತ್ತಿದ್ದಂತೆ ಗುಮಾನಿಯಿಂದ ನೋಡುವ ವಾಸ್ತವ್ಯಗಳ ಯೋಚನೆ ನನಗೆ ಸರಿ ಬರಲಿಲ್ಲ. ಇಲ್ಲಿ ಸರಿ ತಪ್ಪಿನ ಯೋಚನೆಗಿಂತ ಕಾಡಿದ್ದು ಜಾಗದ ಸಮಸ್ಯೆ.

ಆವತ್ತು ಕೂಡ ನೋಡಲೇಬೇಕೆಂಬ ಕ್ರೇವಿಂಗ್ ಶುರುವಾಯಿತು. ಹೋಗಿ ಅವನ ಆಫೀಸಿನ ಮುಂದೆ ನಿಂತು “ಎಲ್ಲಿದ್ದಿ?” ಎಂದ ಮೆಸೇಜಿಗು, ಕರೆಗು ಉತ್ತರ ಬರಲಿಲ್ಲ. ಇಷ್ಟು ಕುದಿದ ಮೇಲೆ ಬಂದರೆ ನಾನು ಅವನನ್ನು ಮುಟ್ಟದೆ ಕೇವಲ ನೋಡಿ ವಾಪಸ್ಸಾಗುತ್ತೇನೆ ಎನ್ನುವುದು ಸುಳ್ಳು. ಆ ರಸ್ತೆಗೆ ‘ಎ’ ಸರ್ಟಿಫಿಕೇಟ್ ದೃಶ್ಯವೊಂದು ಸೇರ್ಪಡೆಯಾಗುವುದು ಬೇಡವೆಂದು ವಾಪಸ್ಸು ಬಂದು, “ನನ್ನ ಹಂಬಲವು, ನಿನ್ನ ನಿರಾಕರಣೆಯು, ಮಧ್ಯಾಹ್ನದ ಈ ಬಿಸಿಲಂತೆ ಒಳಗೆ ಕೊನೆಯಿಲ್ಲದ ಧಗೆ, ಹೊರಗೆ ಉರಿ ಹೊತ್ತಿಸಿದೆ,” ಎಂದು ಟೆಕ್ಸ್ಟ್ ಮಾಡಿದೆ.

ಪ್ರತಿ ಸಲ ರಚ್ಚೆ ಹಿಡಿದಾಗ ಮಾಡುವಂತೆ ಕರೆ ಮಾಡಿ ಸಮಾಧಾನ ಮಾಡಿದ. ಅದರಿಂದ ಪ್ರಯೋಜನವಾಗುತ್ತದೆ ಎನ್ನುವ ನಂಬಿಕೆ ನನಗಂತು ಇರಲಿಲ್ಲ. ಅವನಿಗೆ ಇಷ್ಟವಿಲ್ಲ, ನನ್ನ ಮನಸ್ಸು ನೋಯಿಸಲಾರದೆ ಹೀಗೆ ದಿನ ದೂಡುತ್ತಿದ್ದಾನೆ ಎಂದು ಸುಮ್ಮನಾಗಿಬಿಟ್ಟೆ. ಇದಾಗಿ ಎರಡು ದಿನವಾಗಿತ್ತು. ನಸುಕಿನಲ್ಲಿ ಬೆನ್ನು ಮೇಲೆ ಮಾಡಿ ಮಲಗಿದ್ದವಳ ಹೊಟ್ಟೆಯಡಿಲ್ಲಿದ್ದ ಫೋನು, ‘Hello, Are you interested in joining me to travelling to Kolkata? ಎನ್ನುವ ಇನ್ ಬಾಕ್ಸ್ ಮೆಸೇಜ್ ಗೆ ಗುರ್ ಎಂದಿದ್ದಕ್ಕೆ ಮೆಟ್ಟಿ ಬಿದ್ದು ಎಚ್ಚರಗೊಂಡಾಗ ಅವನಿಗು ಭೇಟಿಯಾಗುವ ಇಚ್ಛೆಯಿದೆ ಎನ್ನುವುದು ಮನವರಿಕೆಯಾಯಿತು.

ಜನ ಹೆಚ್ಚಿರುವ ಪ್ರದೇಶಗಳ ದ್ವೇಷಿ, ಮನೆಯಲ್ಲು ಅತಿಮಾನಿಯಂತಿರುವ ನನ್ನನ್ನು ಎಷ್ಟೊ ದಿನಗಳಿಂದ ಯಾರು ಮುಟ್ಟಿಲ್ಲ ಎನ್ನುವ ಅಸ್ಪೃಶ್ಯ ಭಾವವೊಂದು ಮಧ್ಯರಾತ್ರಿ ಜ್ವರದಂತೆ ನೆತ್ತಿಗೇರುತ್ತದೆ. ತಲೆಯಿಂದ ಅದನ್ನ ಕೊಡವಿ ಕೈಮುಟ್ಟಿ, ಮೈತಟ್ಟಿ ರೋಮಾಂಚನಗೊಳಿಸಿದ ಸ್ಪರ್ಶಗಳನ್ನು ನೆನಪಿಗೆ ತಂದುಕೊಳ್ಳುತ್ತಿದ್ದಾಗ ವರ್ತಮಾನಕ್ಕೆ ಕೊಂಡಿಯಾದ ಸಂದೇಶ ಭ್ರಮೆಯಾಗಿದ್ದರು ಅವನೊಂದಿಗೆ ಪ್ರಯಾಣಿಸಲು ತಯಾರಾಗಿದ್ದೆ.

ರಾತ್ರಿಯಲ್ಲಾದರೆ ನಶೆಯ ಮಾತು ಎಂದು ತಳ್ಳಿ ಹಾಕಬಹುದಾದ ಅಕ್ಷರಗಳು ಬೆಳಗಿನ ಪ್ರಾಮಾಣಿಕತೆಯಲ್ಲಿ ಸಹಜ ಎನಿಸಿದವು. ಸಂಸ್ಕೃತಿಯಿಂದ ನನಗೆ ಪ್ರಿಯವಾದ ಸ್ಥಳಗಳಲ್ಲಿ ಕೋಲ್ಕತಾದ ದಕ್ಷಿಣೇಶ್ವರವು ಒಂದಾಗಿದ್ದರಿಂದ ನನ್ನ ಪ್ರಯಾಣ ನಿಗದಿಯಾಯಿತು. ಕೊರೊನಾಕ್ಕೆ ಹೆದರಿ ಬರಲ್ಲ ಎಂದ ಅವನ ಆಪ್ತನೊಬ್ಬ ಕೊನೆಗಳಿಗೆಯಲ್ಲಿ ಹೊರಟು ಬಂದಿದ್ದರಿಂದ ನನ್ನೊಲವಿಗೆ ಪಾತ್ರವಾದ, ಹೃದಯದ ತುಡಿತಕ್ಕು ಕೂಡ ಸ್ಪಂದಿಸಿ ಮುಟ್ಟಬೇಕೆಂದಿದ್ದವನ ಪಕ್ಕವೆ ಕೂತು ಕೇವಲ text ಮಾಡುವ ಹಿಂಸೆಯನ್ನು ಅನುಭವಿಸಬೇಕಾಯಿತು.

ಅವನು ಕೆಲಸ ಮುಗಿಸಿ ಹೂಗ್ಲಿ ನದಿ ತೀರಕ್ಕೆ ಬರುವುದು ಎಂದಾಗಿದ್ದರಿಂದ ನಾನು ನಿಲ್ದಾಣದಿಂದ ಅಲ್ಲಿಗೆ ನಡೆದೆ. ಇಳಿಸಂಜೆಗೆ ರಾಗರತಿಯ ನಂಜೇರಿಸಿಕೊಂಡ ಮುಗಿಲ ಕೆಳಗೆ ಪಂಚೇಂದ್ರೀಯಗಳನ್ನು ಮ್ಯೂಟ್ ಮಾಡಿ ಹೃದಯವೊಂದನ್ನೆ ರಿಂಗ್ ನಲ್ಲಿಟ್ಟು ಕಾಯುತ್ತಿದ್ದೆ. ಬಂದನೆಂದು ಕೈ ಚಾಚಿದವಳನ್ನು ಈ ಬದುಕಿಗೆ ಇನ್ನೇನು ಬೇಡ ಎನ್ನುವಂತೆ ಎದೆಗವಚಿ ಹಿಡಿದು, ಮೊಲದ ಮರಿಯ ಮೇಲೆ ಕೈಆಡಿಸುವಂತೆ ಮೈದಡವಿದ್ದನ್ನು ಬರವಣಿಗೆಯಲ್ಲಿ ಮೂರ್ತಗೊಳಿಸುವುದು ಕಷ್ಟ. ಎದೆಯಲ್ಲಿ ಮುಖ ಹುದುಗಿಸಿ ಮೈಗೆ ಉಸಿರ ಶಾಖ ಕೊಡುತ್ತಿದ್ದವಳು ನದಿ ಮೇಲಿಂದ ಬೀಸಿ ಬಂದ ಕುಳಿರ್ಗಾಳಿಗೆ ಸೀನಿದೆ. ಕೊರೊನ ಭಯಕ್ಕೆ ಹೆದರಿ Get lost ಎನ್ನದೆ, ಬೈತಲೆಯಲ್ಲಿ ಅಡ್ಡವಾಗಿದ್ದ ಕೂದಲನ್ನು ಒಪ್ಪಗೊಳಿಸಿ ನೆತ್ತಿಗೊಂದು ಮುತ್ತಿಟ್ಟು bless you ಎಂದ. ಆಲಿಂಗನದ ಉಪವಾಸಿ ತೃಪ್ತವಾದದ್ದಕ್ಕೆ ಸಂಜೆ ಪ್ರಾರ್ಥನೆ ಮುಗಿದ ಮೇಲೆ ರಾಮಕೃಷ್ಣ ಪರಮಹಂಸರ ಮಠದಲ್ಲಿ ಕಲ್ಲುಸಕ್ಕರೆ ಹಂಚಿದರು.

ಅಪ್ಪುಗೆಯೆಡೆಗಿನ ನನ್ನ ಜೀವ (ಸ್ಪಿರಿಟ್) ನೋಡಿ “ಕೂಸೆ, ನಿನ್ನ ಪೀಳಿಗೆಯ ಯಾರೇ ದೇಶ/ರಾಜ್ಯದ ಅತ್ಯುನ್ನತ ಪದವಿಗೇರಿದರೆ ಸ್ಮೋಕಿಂಗ್ ಝೋನ್ ತರಹ ಊರಿಗೊಂದು ಹಗ್ ಝೋನ್ ಇರಲಿ ಅಂತ ಮನವಿ ಮಾಡಬೇಕೆಂದಿದ್ದೇನೆ,” ಎನ್ನುವ ಹಿರಿಯ ಸ್ನೇಹಿತ, Need your hug ಎಂದಿದ್ದಕ್ಕೆ 800 ಕಿ.ಮೀ., ಪ್ರಯಾಣಿಸಿ ನನ್ನ ತಲುಪಿದ ಕ್ರಶ್, ಎಳೆಬಿಸಿಲಿಗೆ ಹಸುಗೂಸುಗಳನ್ನು ಕರೆತಂದವರ ಕಡೆ ಕೈ ಚಾಚಿದಾಗ ಇವಳಿಗೆ ‘ಡಿವೈನ್ ಟಚ್’ನ ಅಗತ್ಯವಿದೆ ಎಂದರಿತವರಂತೆ ಮಕ್ಕಳನ್ನು ನನ್ನ ಕೈಗೆ ನೀಡಿದವರು, Have a heart that never hardens, and a touch that never hurts ಎಂದ ಚಾರ್ಲ್ಸ್ ಡಿಕನ್ಸ್ ದೂರದ ದಿಗಂತದಲ್ಲಿ ಮೂಡುತ್ತಿದ್ದ ನಕ್ಷತ್ರದಂತೆ ಮನಃಪಟಲವನ್ನು ಆವರಿಸಿ ಮಿನುಗಿದರು.

‍ಲೇಖಕರು avadhi

March 22, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

2 ಪ್ರತಿಕ್ರಿಯೆಗಳು

  1. Padmaraj Saptasagar

    ಆರ್ದ್ರ ಬರಹ… ಕಲ್ಪನೆಯಲ್ಲಿ ಹೂಗ್ಲಿ ನದಿ ತೀರ ಸುಳಿದಾಡಿತು

    ಪ್ರತಿಕ್ರಿಯೆ
  2. ..Shailaja Hegde

    ಇಷ್ಟ ವಾಯಿತು ನಿಮ್ಮ ಬರಹ ಮತ್ತು ಆಶಯ ಕೂಡಾ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: