ನಗ್ತಾ ಇರಿ, ನಗಿಸ್ತಾ ಇರಿ..

ನಗೆಯು ಬರದಿರೆ

ಪ್ರೀತಂ ಆಡುಕಳ

ಟಿ. ವಿ. ಯ ನಗೆ ಕಾರ‍್ಯಕ್ರಮವೊಂದರಲ್ಲಿ “ನಗ್ತಾ ಇರಿ, ನಗಿಸ್ತಾ ಇರಿ, ಬಿಕಾಸ್ ದ ಡೇ ವಿತೌಟ್ ಲಾಪ್ಟರ್ ಈಸ್ ಎ ಡೇ ವೇಸ್ಟೆಡ್” ಅಂತ ಡೈಲಾಗ್ ಕೇಳಿಕೊಂಡು ಮಲಗುವಾಗ ನನಗೆ ನನ್ನ ನಾಳೆಯ ದಿನವೇ ‘ದ ಡೇ ವೇಸ್ಟೆಡ್’ ಆಗುವುದರೆಂಬುದರ ಕಿಂಚಿತ್ತೂ ಅರಿವಿರಲಿಲ್ಲ.

ಅಂದು ರವಿವಾರ. ನಾನು ರೇಡಿಯೋ ನಾಟಕದ ರೆಕಾರ್ಡಿಂಗ್‌ಗೆ ಹೊಗಬೇಕಾಗಿತ್ತು. ಬೆಳಿಗ್ಗೆ ಸ್ನಾನ, ತಿಂಡಿ ಎಲ್ಲ ಮುಗಿಸಿ ಅಪ್ಪನೊಂದಿಗೆ ರೇಡಿಯೋ ಕೇಂದ್ರಕ್ಕೆ ಹೊರಟೆ. ನಾವು ರೇಡಿಯೋ ಕೇಂದ್ರ ತಲುಪುವಾಗ ಸರಿಯಾಗಿ ಒಂಭತ್ತೂವರೆಯಾಗಿತ್ತು. ಅಪ್ಪ ಹೇಳಿದರು, “ನೋಡು ನಿನ್ನನ್ನು ಸರಿಯಾದ ಸಮಯಕ್ಕೆ ತಂದು ಮುಟ್ಟಿಸಿದ್ದೇನೆ” ಎಂದು. ನಾನು ಸರಿಯಾದ ಎಂಬ ಪದದ ಬದಲು ಪರ್ಫೆಕ್ಟ್ ಎಂಬ ಪದ ಬಳಸಿದರೆ ಇನ್ನಷ್ಟು ಸೂಕ್ತವಾಗುವುದೇನೋ? ಎಂದು ಆಲೋಚಿಸತೊಡಗಿದೆ.

ಅಷ್ಟರಲ್ಲಿ ರೇಡಿಯೋ ಕೇಂದ್ರದ ನಾಟಕದ ನಿರ್ದೆಶಕರು ಬಂದು ನಮ್ಮನ್ನು ಸ್ವಾಗತಿಸಿ ಆ ದಿನ ಧ್ವನಿಮುದ್ರಣಗೊಳ್ಳಬೇಕಾದ ನಾಟಕದ ಸ್ಕ್ರಿಪ್ಟ್ ನ್ನು ನನ್ನ ಕೈಗಿತ್ತರು. ಅದರಲ್ಲಿ ನಾನು ಧ್ವನಿ ನೀಡಬೇಕಾದ ನಾಟಕದ ಪಾತ್ರದ ಬಗೆಗೂ ತಿಳಿಸಿ ಮಾತುಗಳನ್ನು ಓದಿಕೊಳ್ಳುವಂತೆ ತಿಳಿಸಿ ಹೋದರು. ನಾನು ಸ್ಕ್ರಿಪ್ಟ್ ಹಿಡಿದುಕೊಂಡು ಓದಿದ ಶಾಸ್ತ್ರ ಮುಗಿಸಿ ಆಚೀಚೆ ನೋಡತೊಡಗಿದೆ. ಅದನ್ನು ಗಮನಿಸಿದ ನನ್ನಪ್ಪ “ಪ್ರಯತ್ನದಲ್ಲಿ ಪರಮೇಶ್ವರನಿದ್ದಾನೆ” ಎಂದು ಪ್ರಾರಂಭಿಸಿ ನನ್ನ ಮೇಲೆ ಉಪದೇಶದ ಪ್ರಹಾರಗಳನ್ನು ಮಾಡತೊಡಗಿದರು.

ಆದರೂ ನಾನು ಸ್ಕ್ರಿಪ್ಟ್ ಕಡೆ ಕಣ್ಣು ಹಾಯಿಸದಿದ್ದಾಗ ಅಪ್ಪ ಸ್ವಲ್ಪ ದನಿಯೇರಿಸಿ ಬೈಯ್ಯತೊಡಗಿದರು. ನನಗ್ಯಾಕೋ ಅವರ ಬೈಗುಳ ಥೇಟ್ ನನ್ನ ಆರನೇ ತರಗತಿಯ ಕನ್ನಡ ಶಿಕ್ಷಕಿಯ ಮಾತಿನಂತೆ ಕೇಳತೊಡಗಿತು. ನನ್ನಪ್ಪನೂ ಕನ್ನಡ ಮೇಷ್ಟ್ರೇ ಆಗಿರುವುದರಿಂದ ನಾನು ಈ ಕನ್ನಡ ಶಿಕ್ಷಕರ ಮೆದುಳಿನಲ್ಲೇನಾದರೂ ಸಾಮಾನ್ಯ ಜೀವಕೋಶಗಳಿರುತ್ತವೆಯೇ ಎಂದು ದೊಡ್ಡವನಾದ ಮೇಲೆ ಸಂಶೋಧನೆ ಮಾಡಬೇಕೆಂದು ಕನಸು ಕಾಣತೊಡಗಿದೆ.

ಅಷ್ಟರಲ್ಲಿ ನಮ್ಮ ನಾಟಕದ ನಿರ್ದೇಶಕರು ನಮ್ಮನ್ನು ರಿಹರ್ಸಲ್ ಕೊಠಡಿಗೆ ಬರಲು ತಿಳಿಸಿದರು. ನನಗೆ ಆ ನಾಟಕದಲ್ಲಿ ಮೈನಾ ಎಂಬ ಗಡಸು ಗಂಡು ಹಕ್ಕಿಯ ಪಾತ್ರವಿತ್ತು. ನಾಟಕದ ಧ್ವನಿಮುದ್ರಣ ಪ್ರಾರಂಭವಾಯಿತು. ನಾನು ಡೈಲಾಗ್‌ಗಳನ್ನು ಹೇಳಿದಾಗಲೆಲ್ಲ ಅಪ್ಪ ಅಲ್ಲಲ್ಲಿ ವ್ಯಾಕರಣ ಸರಿಪಡಿಸುತ್ತಾ ಇದ್ದರು. ಹೀಗೆ ಮುಂದುವರೆದ ನಾಟಕ ಮೈನಾ ಹಕ್ಕಿ ಗಟ್ಟಿಯಾಗಿ ನಗುವಲ್ಲಿಗೆ ಬಂದು ನಿಂತಿತು. ಆದರೆ ನನಗೆ ಮಾತ್ರ ಐದು ಬಾರಿ ಪುನರಾವರ್ತಿಸಿದರೂ ಶಬ್ದ ಮಾಡಿ ಜೋರಾಗಿ ನಗಲು ಬರಲೇಇಲ್ಲ. ನಮ್ಮ ನಿರ್ದೇಶಕರು ಮಾತ್ರ ಒಂದಿನಿತೂ ಬೇಸರಗೊಳ್ಳದೇ, “ಇಟ್ಸ್ ಓಕೆ. ಬರತ್ತೆ ಬಿಡು” ಎಂದು ಮತ್ತೊಂದು ಅವಕಾಶ ನೀಡುತ್ತಲೇ ಇದ್ದರು. ಅದರ ಬದಲು ಅವರೇನಾದರೂ, “ತೊಂದರೆಯಿಲ್ಲ ಬಿಡು, ನಗುವುದನ್ನು ಬಿಟ್ಟುಬಿಡೋಣ” ಎನ್ನುತ್ತಾರೇನೊ ಎಂದು ನಾನು ಆಸೆಯಿಂದ ಅವರ ಮುಖವನ್ನೇ ನೋಡತೊಡಗಿದೆ.

ಆರನೇ ಸಲದ ಅವಕಾಶದಲ್ಲೂ ನಾನು ನಗಲು ವಿಫಲನಾದಾಗ ಅಪ್ಪನ ಸಹನೆಯ ಕಟ್ಟೆಯೊಡೆಯಿತು. “ನಿನಗೆ ನಗಲು ಬರುವುದಿಲ್ಲವೆಂದು ಇಂದೇ ತಿಳಿದದ್ದು. ಇವತ್ತು ಮನೆಗೆ ಹೋದವನೇ ನಗುವುದನ್ನು ಅಭ್ಯಾಸ ಮಾಡಬೇಕು, ತಿಳೀತಲ್ಲ” ಎಂದು ನನ್ನ ಕಿವಿಯಲ್ಲಿ ಪಿಸುಮಾತಿನಲ್ಲೇ ಅಬ್ಬರಿಸಿದರು. ನಿರ್ದೇಶಕರಿಗೆ ನನ್ನ ಕಷ್ಟದ ಅರಿವಾಯಿತೆನಿಸುತ್ತದೆ, “ನೀನು ಬೇಕಾದ್ರೆ ಹೊರಗೆ ಹೋಗಿ ಅಭ್ಯಾಸ ಮಾಡಿ ಬಾರಪ್ಪ” ಅಂದರು. ಇದೇ ಅವಕಾಶ ಎಂದುಕೊಂಡು ಅಪ್ಪ ನನ್ನನ್ನು ಪಕ್ಕದ ಕೋಣೆಗೆ ಕರೆದುಕೊಂಡು ಹೋಗಿ ನಗುವುದನ್ನು ಕಲಿಸತೊಡಗಿದರು.

ಹೇಳಿ ಕೇಳಿ ಅದು ರೇಡಿಯೋ ಕೇಂದ್ರದ ನೌಕರರೆಲ್ಲರೂ ಓಡಾಡುವ ಜಾಗ. ಅವರೆಲ್ಲ ಆಚೀಚೆ ತಿರುಗುವಾಗ ಅಸಹಜವಾಗಿ ನಗುತ್ತಿರುವ ನಮ್ಮನ್ನು ವಿಚಿತ್ರವಾಗಿ ನೋಡತೊಡಗಿದರು. ನಾನು ನಾಚಿಕೆಯಿಂದ ಅಲ್ಲಿಗೆ ಬರುವವರಲ್ಲೆಲ್ಲಾ, “ನಗುವುದನ್ನು ಪ್ರಾಕ್ಟೀಸ್ ಮಾಡುತ್ತಿದ್ದೇನೆ” ಎಂದು ಅವರು ನಗುವ ಮೊದಲೇ ಹೇಳತೊಡಗಿದೆ. ಎಷ್ಟೇ ಪ್ರಯತ್ನಿಸಿದರೂ ಅಪ್ಪನಿಗೆ ಸರಿಯೆನಿಸುವಂತೆ ನನ್ನಿಂದ ನಗಲಾಗಲಿಲ್ಲ. ಈಗ ನನಗೆ ನಗುವಿನ ಬದಲು ಅಳು ಬರತೊಡಗಿತು. ಇದನ್ನು ನೋಡಿದ ಅಪ್ಪ ಊಟ ಮಾಡಿ ಬಂದು ಕಲಿಯೋಣವೆಂದು ನನ್ನನ್ನು ಊಟಕ್ಕೆ ಕರೆದೊಯ್ದರು. ಊಟ ಮಾಡುತ್ತಿರುವಂತೆ ಹೋಟೇಲಿನಲ್ಲಿಯೇ ಅಪ್ಪ ನನಗೆ ನಗು ಕಲಿಸುವ ಪಾಠ ಮುಂದುವರೆಸಿದರು. ಅಲ್ಲಿಯ ಹುಡುಗರೆಲ್ಲ ನಮ್ಮನ್ನೊಂದು ವಿಚಿತ್ರ ಪ್ರಾಣಿಗಳೆಂಬಂತೆ ನೋಡತೊಡಗಿದರು.

ಅಂತೂ ಅಪ್ಪನನ್ನು ಸುಮ್ಮನಿರಿಸಿ ಊಟ ಮುಗಿಸಿದ್ದಾಯ್ತು. ಊಟ ಮುಗಿಸಿ ರೇಡಿಯೋ ಕೇಂದ್ರಕ್ಕೆ ಬರಲು ರಸ್ತೆ ದಾಟಲು ನಿಂತಿರುವಾಗ ಅಪ್ಪ, “ನೋಡು ಬರಿಯ ಹಲ್ಲು ತೋರಿಸಿದರೆ ನಗು ಕಾಣಿಸಲು ಅದು ಟಿವಿಯಲ್ಲ. ಬದಲಿಗೆ ಶಬ್ದ ಮಾಡಿ ನಗಬೇಕು. ನಗುವಾಗ ನಿನ್ನ ಕೆನ್ನೆಯ ಮೇಲೆ ಬೀಳುವ ಗುಳಿಯನ್ನು ನೋಡುವ ಭರದಲ್ಲಿ ನಮಗೆಲ್ಲ ನಿನ್ನ ನಗುವಿನಲ್ಲಿ ಶಬ್ದವೇ ಬರುವುದಿಲ್ಲವೆಂದು ತಿಳಿದಿರಲಿಲ್ಲ. ಹೀಗೆ ಶಬ್ದ ಮಾಡಿ ನಗಬೇಕು” ಎಂದು ಹ್ಹೀ… ಹ್ಹೀ… ಹ್ಹೀ…. ಎಂಬ ಶಬ್ದ ಸಹಿತ ಕೃತಕ ನಗೆಯನ್ನು ಬೀರಿದರು. ರಸ್ತೆಯ ಬದಿಯಲ್ಲಿ ಹಾದುಹೋಗುವ ಬೈಕ್ ಸವಾರರೆಲ್ಲ ನಮ್ಮನ್ನು ಕೆಂಗಣ್ಣಿನಿAದ ನೋಡತೊಡಗಿದರು. ಆದರೆ ರಸ್ತೆ ದಾಟುತ್ತಿದ್ದ ಒಬ್ಬ ಮಹಾಶಯರು ಮಾತ್ರ ನನ್ನೆಡೆಗೆ ಕನಿಕರದ ನಗೆ ಬೀರಿದರು. ಬಹುಶಃ ಅವರ ಮಗನೂ ರೇಡಿಯೋ ನಾಟಕದಲ್ಲಿ ಪಾತ್ರವಹಿಸಿರಬೇಕು ಎಂದುಕೊಂಡೆ ನಾನು. ನಗುವಿನ ಅಲೆಯಲ್ಲಿ ಕಳೆದುಹೋದ ಅಪ್ಪ ರೇಡಿಯೋ ಕೇಂದ್ರದ ಹತ್ತಿರಕ್ಕೆ ಬಂದು ಗಮನಿಸದೇ ಕಿಟಕಿಯ ಬಾಗಿಲನ್ನು ಹಣೆಗೆ ತಾಗಿಸಿಕೊಂಡದ್ದೂ ಆಯ್ತು. ಪಾಪ, ತುಂಬಾ ನೋವಾದರೂ ತೋರಿಸಿಕೊಳ್ಳದೇ ನನಗಾಗಿ ಶಬ್ದಸಹಿತವಾಗಿ ನಗುತ್ತಲೇ ಇದ್ದರು ಅವರು.

ಅಂತೂ ರೇಡಿಯೋ ರೆಕಾರ್ಡಿಂಗ್ ರೂಮ್ ಪ್ರವೇಶಿಸಿದಾಗ ಅಪ್ಪನ ನಗೆ ಅನಿವಾರ್ಯವಾಗಿ ನಿಂತಿತು. ಸುಮಾರು ಎರಡು ತಾಸುಗಳಿಂದ ನಡೆದ ಅಖಂಡ ತರಬೇತಿಯ ಪ್ರಭಾವವೋ ಅಥವಾ ಅಪ್ಪನ ಮೇಲಿನ ಸಹಾನುಭೂತಿಯೋ ಅಂತೂ ಒಂದು ಅಟ್ಟಹಾಸದ ನಗೆ ನನ್ನ ಬಾಯಿಂದ ಹೊರಬಿತ್ತು. ನಿರ್ದೇಶಕರು ಖುಶಿಯಿಂದ ಅಪ್ಪನ ಮುಖ ನೋಡಿದರೆ, ಅಪ್ಪ ತನ್ನ ಉಬ್ಬಿದ ಹಣೆಯನ್ನು ನೇವರಿಸಿಕೊಳ್ಳುತ್ತಿದ್ದರು. ಎಲ್ಲ ಮುಗಿಸಿ ಮನೆಗೆ ಬರುವಾಗ ರಾತ್ರಿ ಎಂಟು ಗಂಟೆಯಾಗಿತ್ತು. ಮತ್ತದೇ ಡೈಲಾಗ್ ಟಿವಿಯಿಂದ ಕೇಳಿಬರುತ್ತಿತ್ತು, “ನಗ್ತಾ ಇರಿ, ನಗಿಸ್ತಾ ಇರಿ………..” ನಗುವುದು ಎಷ್ಟು ಕಷ್ಟ ಎಂದು ನನಗೆ ಅಂದು ಅರಿವಾಗಿತ್ತು.

‍ಲೇಖಕರು avadhi

March 22, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. ಅರೆಹೊಳೆ ಸದಾಶಿವ ರಾವ್

    ಪ್ರೀತಂ. ಚೆನ್ನಾಗಿದೆ ಬರಹ. ನಿನ್ನ ಅತಿ ವಿಶಿಷ್ಟ ಪ್ರತಿಭೆಗಳ ಬಗ್ಗೆ ಕೇಳಿದ್ದೆ.‌‌‌ಬರಹದಲ್ಲೂ ಆಪ್ತವಾಗಿ ಓದುಗರ ಮನ ಮುಟ್ಟುವ ಶಕ್ತಿ‌ ಇದೆ…ಬರಹದಲ್ಲೂ ಆ ತಾಕತ್ತಿದೆ. ಅಭಿನಂದನೆಗಳು…ಮತ್ತಷ್ಟು ಬರಹಗಳು ಬರಲಿ

    ಪ್ರತಿಕ್ರಿಯೆ
  2. Parameshwarappa Kudari

    ಒಳ್ಳೆಯ ನಗುವಿನ ಮಹತ್ವ ಸಾರುವ ಉತ್ತಮ ಲೇಖನ.ಓದಿಸಿಕೊಂಡು ಹೋಗುವ ಸಾಮರ್ಥ್ಯ ಹೊಂದಿದೆ

    ಪ್ರತಿಕ್ರಿಯೆ
  3. Poorvi

    Ninna hagu ninnappana Nagatikeya lekhana bhalala chennagide Preetam. Heege bareetane iru!!

    ಪ್ರತಿಕ್ರಿಯೆ
  4. ರಾಜೀವ ನಾಯಕ

    ಈ ಚಿಕ್ಕ ಬರಹ ಮುಗ್ಧತೆಯ ನಿರೂಪಣೆಯಲ್ಲಿಯೂ ಅರ್ಥಗರ್ಭಿತವಾಗಿದೆ.
    ಅಭಿನಂದನೆಗಳು. ಇದಕ್ಕೊಂದು‌ ಮನ:ಶಾಸ್ತ್ರೀಯ ಆಯಾಮವೂ ಇದೆ ಅನಿಸುತ್ತದೆ. ಅಪ್ಪನ ಹಣೆಗಾಯದ ನೋವು ಮಗನಲ್ಲಿ ನಗುವನ್ನು ಟ್ರಿಗರ್ ಮಾಡಿದೆ. ನಗು-ಅಳು, ಪ್ರೀತಿ-ದ್ವೇಷ ಹೀಗೆ ಪರಸ್ಪರ ವಿರೋಧಿ ಭಾವಗಳು ಮೆದುಳಿನ ಒಂದೇ ಕೇಂದ್ರದಿಂದ ಚಿಮ್ಮುತ್ತವೆ ಎನ್ನುವುದನ್ನು ಎಲ್ಲೋ ಓದಿದ ನೆನಪು.
    ಇಂಥ ನಿಮ್ಮ ಚಿಕ್ಕ ಚಿಕ್ಕ ಅನುಭವಗಳನ್ನು ಬರಹಕ್ಕಿಳಿಸುತ್ತಿರಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: