ಕೇಸರಿ ಹರವು ಕೇಳುತ್ತಾರೆ: festival ನಿಂದ ಔಟ್ ಏಕೆ?

15 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರ ಉತ್ಸವದಲ್ಲಿ ಕೇಸರಿ ಹರಹು ಅವರ ಸಾಕ್ಷ್ಯಚಿತ್ರ ಕಿಸಾನ್ ಸತ್ಯಾಗ್ರಹವನ್ನು ಪ್ರದರ್ಶಿಸಬೇಕಿತ್ತು.

ಆದರೆ ಈಗ ಅದನ್ನು ಉತ್ಸವದಿಂದ ಹೊರಗಿಡಲಾಗಿದೆ. ಅದಕ್ಕೆ ಕೇಸರಿ ಅವರು ಎತ್ತಿರುವ ಪ್ರಶ್ನೆಗಳು ಹೀಗಿವೆ-

ಕೇಸರಿ ಹರವು

**

ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವ ‘ಕಿಸಾನ್ ಸತ್ಯಾಗ್ರಹ’ ಚಿತ್ರವನ್ನು ಕೈಬಿಟ್ಟಿದೆ, ಆ ಚಿತ್ರಕ್ಕೆ ಪ್ರಮಾಣೀಕರಣ ಮಂಡಳಿಯಿಂದ ಪ್ರಮಾಣಪತ್ರ ಪಡೆದಿಲ್ಲ ಎನ್ನುವುದೇ ಕಾರಣ ಎಂದು ಕೆಲವರು ತಿಳಿದಿದ್ದಾರೆ ಎನಿಸುತ್ತಿದೆ. ಇನ್ನೂ ಕೆಲವರು ‘ಮುಂಜಾಗ್ರತೆ ವಹಿಸಿ ಪ್ರಮಾಣ ಪತ್ರ ಪಡೆಯಬೇಕಿತ್ತಲ್ಲವೇ?’ ಎಂದೂ ಭಾವಿಸಿರಬಹುದು.

ದೇಶದಲ್ಲಿ ನಡೆಯುವ ಅಂತರರಾಷ್ಟಿಯ ಚಿತ್ರೋತ್ಸವಗಳಲ್ಲಿ ಪ್ರಮಾಣ ಪತ್ರ ಪಡೆದ ಚಿತ್ರಗಳನ್ನಷ್ಟೇ ಪ್ರದರ್ಶಿಸಬೇಕು ಎನ್ನುವ ನಿಯಮ ಇಲ್ಲ. (ತೀರ ಇತ್ತೀಚಿನ ಬೆಳವಣಿಗೆಗಳು ಏನೋ ಅದು ನನಗೆ ಗೊತ್ತಿಲ್ಲ.) ಆದರೆ ಪ್ರಮಾಣ ಪತ್ರ ಪಡೆಯದ ಚಿತ್ರಗಳನ್ನು ಚಿತ್ರೋತ್ಸವಗಳಲ್ಲಿ ಪ್ರದರ್ಶಿಸುವಾಗ ಭಾರತ ಸರ್ಕಾರದ Ministry of Information & Broadcasting ನಿಂದ ಮುನ್ನೊಪ್ಪಿಗೆ ಪಡೆಯಬೇಕು. ಅದೊಂದು ಔಪಚಾರಿಕತೆ.

ಇನ್ನು ಭಾರತದಲ್ಲಿ ನಿರ್ಮಾಣವಾಗುವ ಬಹುತೇಕ ಸಾಕ್ಷ್ಯಚಿತ್ರಗಳು ಪ್ರಮಾಣ ಪತ್ರ ಪಡೆಯುವುದಿಲ್ಲ. ನಮ್ಮ ವಾರ್ತಾ ಇಲಾಖೆ, ಇತರೆ ಇಲಾಖೆಗಳು, ಅಲ್ಲದೇ ದೇಶದ ಹಲವಾರು ಸಂಸ್ಥೆಗಳು ನಿರ್ಮಿಸುವ ಸಾಕ್ಷ್ಯಚಿತ್ರಗಳಿಗೆ ಪ್ರಮಾಣ ಪತ್ರ ಪಡೆಯುವುದಿಲ್ಲ. ಅಂತಹ ಅನೇಕ ಚಿತ್ರಗಳು ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ತೆರೆಕಂಡಿವೆ.

ರಾಷ್ಟ್ರಪ್ರಶಸ್ತಿಗಾಗಿ ಸಲ್ಲಿಸುವ ಸಾಕ್ಷ್ಯಚಿತ್ರಗಳು ಪ್ರಮಾಣ ಪತ್ರ ಹೊಂದಿರಬೇಕು ಎನ್ನುವ ನಿಯಮವನ್ನು ಕೆಲವು ವರ್ಷಗಳ ಹಿಂದೆ ಸರ್ಕಾರ ತಂದಾಗ, ಆನಂದ್ ಪಟವರ್ಧನ್ ಸೇರಿದಂತೆ ಹಲವಾರು ನಿರ್ಮಾತೃಗಳು ಪ್ರತಿಭಟಿಸಿದರು, ಕೊನೆಗೆ ಪ್ರಶಸ್ತಿಗಾಗಿ ಸಲ್ಲಿಸುವುದನ್ನೇ ನಿಲ್ಲಿಸಿದರು.

I&B ಯಿಂದ ಪೂರ್ವಾನುಮತಿ ಪಡೆಯಬೇಕು ಎನ್ನುವ ಈ ಔಪಚಾರಿಕ ನಿಯಮ ಭಾರತದಲ್ಲಿ ಪ್ರಮಾಣ ಪತ್ರ ಪಡೆಯದ ವಿದೇಶಿ ಚಿತ್ರಗಳಿಗೂ ಇದೆ. ಏಕೆಂದರೆ, ಆ ಎಲ್ಲ ಚಿತ್ರಗಳೂ ನಮ್ಮ ದೇಶದಲ್ಲಿ ರಿಲೀಸ್ ಆಗುವುದಿಲ್ಲ, ಹಾಗಾಗಿ ನಮ್ಮ ದೇಶದ ಪ್ರಮಾಣ ಪತ್ರ ಪಡೆಯುವುದಿಲ್ಲ. ಹಾಗಾಗಿಯೇ, ನಮ್ಮ ಚಿತ್ರೋತ್ಸವಗಳಲ್ಲಿ ನೂರಾರು ವಿದೇಶಿ ಭಾಷೆಗಳ ಚಿತ್ರಗಳು ಪ್ರದರ್ಶಿತವಾಗುತ್ತವೆ.

ಇನ್ನು I&B MINISTRY ಯಿಂದ ಈ ಬಾರಿಯ BIFFES ನಲ್ಲಿ ಪ್ರದರ್ಶನಗೊಳ್ಳಲು ಮೂರು ಚಿತ್ರಗಳಿಗೆ ಅನುಮತಿ ನಿರಾಕರಿಸಲಾಗಿದೆ. ಇಸ್ರೇಲಿನ ಒಂದು ಚಿತ್ರ, ಉಕ್ರೇನಿನ ಒಂದು ಚಿತ್ರ ಮತ್ತು ಭಾರತದ ನಮ್ಮ ಚಿತ್ರ. ಇದು BIFFes ನ ಒಬ್ಬ ಜವಾಬ್ದಾರಿಯುತ ಸಂಘಟಕರಿಂದಲೇ ಬಂದ ಮಾಹಿತಿ. ಅವರ ಪ್ರಕಾರ, ಈ ಔಪಚಾರಿಕ ನಿಯಮ ಈ ತಿರುವು ಪಡೆಯುತ್ತದೆ ಎಂದು ಅವರಿಗೂ ತಿಳಿದಿರಲಿಲ್ಲ ಎಂದು ತೋರುತ್ತದೆ. ತಿಳಿದಿದ್ದರೆ, ಅವರೇಕೆ ಚಿತ್ರೋತ್ಸವದ ಚಿತ್ರಗಳ ಕ್ಯಾಟಲಾಗ್ ಪುಸ್ತಕದಲ್ಲಿ ಮತ್ತು ವೆಬ್ ಸೈಟ್ ನಲ್ಲಿ ನಮ್ಮ ಚಿತ್ರದ ವಿವರಗಳನ್ನು ಪ್ರಕಟಿಸುತ್ತಿದ್ದರು?

ಇಸ್ರೇಲ್ ಫೆಲೆಸ್ತಿನರ ಮೇಲೆ ಧಾಳಿ ನಡೆಸುತ್ತಿರುವ ಸಂದರ್ಭದಲ್ಲಿ ಇಸ್ರೇಲಿನ ಒಂದು ಚಿತ್ರವನ್ನು, ಉಕ್ರೇನಿನಲ್ಲಿ ಯುದ್ಧ ನಡೆಯುತ್ತಿರುವ ಸಂದರ್ಭದಲ್ಲಿ ಆ ದೇಶದ ಯುದ್ಧದ ಕುರಿತ ಚಿತ್ರವನ್ನು, ಹಾಗೆಯೇ ದೇಶದ ರೈತರ ಹೋರಾಟ ನಡೆಯುತ್ತಿರುವ ಸಂದರ್ಭದಲ್ಲಿ ಆ ಕುರಿತ ಚಿತ್ರವನ್ನು ಸರಕಾರ ತಡೆದಿದೆ. ರೈತರ ಮಾನವ ಹಾಗೂ ಸಾಂವಿಧಾನಿಕ ಹಕ್ಕುಗಳನ್ನು ಮೊಟಕುಗೊಳಿಸುತ್ತಿರುವ ಈ ಸಮಯದಲ್ಲಿ ಒಬ್ಬ ಚಿತ್ರನಿರ್ಮಾತ್ರುವಿನ ಚಿತ್ರವನ್ನು ತಡೆಯವುದು, ಆ ಮೂಲಕ ಆತನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕು ಮಾಡುವುದು ಅಚ್ಚರಿಯೇನಲ್ಲ. ನಮ್ಮ ಚಿತ್ರಕ್ಕೆ ಪ್ರಮಾಣೀಕರಣ ಆಗಿಲ್ಲ, ಹಾಗಾಗಿ festival ನಿಂದ ಔಟ್ ಎನ್ನುವ ನೆರೇಟಿವ್ ಬದಲಾಗಿ, ಈ ದೇಶಕಾಲದ ಸಂದರ್ಭವನ್ನು ದಯವಿಟ್ಟು ನೋಡಿ.

**

2017ರಲ್ಲಿ ಕೇರಳದ ಚಲನಚಿತ್ರ ಅಕಾಡೆಮಿ ಪ್ರತಿವರ್ಷ ನಡೆಸುವ Kerala International Documentary & Short Film Festival ನಲ್ಲಿ ಕೂಡ ರೋಹಿತ್ ವೇಮುಲ ಬಗ್ಗೆ ಮತ್ತು ಕಾಶ್ಮೀರಿ ವಿದ್ಯಾರ್ಥಿಗಳ ಬಗ್ಗೆ ನಿರ್ಮಿಸಿದ ಎರಡು ಸಾಕ್ಷ್ಯಚಿತ್ರಗಳನ್ನು ಒಕ್ಕೂಟ ಸರ್ಕಾರ ತಡೆದಿತ್ತು. ಕೇರಳ ಸರ್ಕಾರದ ವಾರ್ತಾ ಸಚಿವರು ಮತ್ತು ಅಕಾಡೆಮಿ I&B ನಡೆಯನ್ನು ಖಂಡಿಸಿದ್ದರು. ಹಾಗೆ ತಡೆಯಲಾದ ಚಿತ್ರಗಳನ್ನು ಕೇರಳ ಸರ್ಕಾರ ಎಸ್ಎಫ್ಐ ಮೂಲಕ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಪ್ರದರ್ಶಿಸುವ ನಿರ್ಣಯ ತೆಗೆದುಕೊಂಡಿತ್ತು. ಆ ರಿಪೋರ್ಟ್ ಲಿಂಕುಗಳು ಕಾಮೆಂಟಿನಲ್ಲಿ ಇವೆ.

ಒಂದು ಚಿತ್ರೋತ್ಸವವೆಂದರೆ ಅದು ಅಲ್ಲಿ ಪ್ರದರ್ಶನಗೊಳ್ಳುವ ಚಿತ್ರಗಳ ನಿರ್ಮಾತೃಗಳ ಅಭಿವ್ಯಕ್ತಿ ಮಾತ್ರವಲ್ಲ, ಆ ಚಿತ್ರೋತ್ಸವದ ಅಭಿವ್ಯಕ್ತಿ ಕೂಡ. ಆ ಹಕ್ಕುಗಳಿಗೆ ಇಂದು ಪೆಟ್ಟು ಬಿದ್ದಿದೆ.

ಈಗ ನಮ್ಮ ಸರ್ಕಾರ ಮತ್ತು ಚಲನಚಿತ್ರ ಅಕಾಡೆಮಿ ಒಕ್ಕೂಟ ಸರ್ಕಾರದ ಈ ತಡೆಯನ್ನು ಖಂಡಿಸುತ್ತವೆಯೇ? ‘ಕಿಸಾನ್ ಸತ್ಯಾಗ್ರಹ ‘ ಚಿತ್ರವನ್ನು ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಪ್ರದರ್ಶಿಸುವ ನಿರ್ಣಯ ತೆಗೆದುಕೊಳ್ಳುತ್ತದೆಯೇ?.

‍ಲೇಖಕರು avadhi

March 2, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: