ಕೇಶವ ಉಚ್ಚಿಲ್ ನಿಧನ

ಉತ್ತಮ ಸಾಹಿತಿ, ಮಂಗಳ ಗಂಗೋತ್ರಿಯ ಮೊದಲ ಸಾಲಿನ ಕನ್ನಡ ವಿದ್ಯಾರ್ಥಿ ಕೇಶವ ಉಚ್ಚಿಲ್ ಅವರು ಇನ್ನಿಲ್ಲ.

ಅವರ ಸಹಪಾಠಿಯಾಗಿದ್ದ ಪ್ರೊ ಬಿ ಎ ವಿವೇಕ ರೈ ಅವರ ಶ್ರದ್ಧಾಂಜಲಿ ಇಲ್ಲಿದೆ-

ಬಿ.ಎ.ವಿವೇಕ ರೈ

ನನ್ನ ಎಂ ಎ ಕನ್ನಡ ಅಧ್ಯಯನ ಕಾಲದ ಸಹಪಾಠಿ (೧೯೬೮-೭೦) ಪ್ರೊ.ಕೇಶವ ಉಚ್ಚಿಲ್ ಅವರು ಇವತ್ತು ಬೆಳಗ್ಗೆ ನಿಧನರಾದರು ಎಂಬ ದುಃಖದ ಸುದ್ದಿ ಕೇಳಿದೆ. ನಾವು ಮೈಸೂರು ವಿಶ್ವವಿದ್ಯಾನಿಲಯದ ಮಂಗಳೂರು ಸ್ನಾತಕೋತ್ತರ ಕೇಂದ್ರದ ಮೊದಲ ತಂಡದ ೧೬ ಮಂದಿ ವಿದ್ಯಾರ್ಥಿಗಳು ಸಹಪಾಠಿಗಳು. ವಯಸ್ಸಿನಲ್ಲಿ ಮತ್ತು ಅನುಭವದಲ್ಲಿ ನನಗಿಂತ ಹಿರಿಯರು ಆಗಿದ್ದ ಕೇಶವ ಉಚ್ಚಿಲ್ ರು ವಿದ್ಯಾರ್ಥಿ ಆಗಿದ್ದಾಗ ಯಕ್ಷಗಾನದ ನುರಿತ ಕಲಾವಿದರು ಆಗಿ, ಹಿರಿಯ ಅರ್ಥದಾರಿಗಳ ಜೊತೆಗೆ ತಾಳಮದ್ದಳೆ ಕೂಟಗಳಲ್ಲಿ ಭಾಗವಹಿಸುತ್ತಿದ್ದರು.

ಕನ್ನಡ ಎಂಎ ಆದ ಬಳಿಕ‌ ಅವರು ಎಸ್ ವಿ ಎಸ್ ಕಾಲೇಜು, ಬಂಟ್ವಾಳದಲ್ಲಿ ಸುದೀರ್ಘ ಕಾಲ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಮುಖ್ಯಸ್ಥರಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಸಾಹಿತ್ಯ ಮತ್ತು ಯಕ್ಷಗಾನದ ಮಾರ್ಗದರ್ಶನ ಮಾಡಿದರು. ಒಳ್ಳೆಯ ವಿಮರ್ಶಕರಾಗಿ ಸೂಕ್ಷ್ಮ ಅವಲೋಕನದ ಪ್ರತಿಕ್ರಿಯೆಗಳನ್ನು ಮಾತು ಮತ್ತು ಬರಹಗಳಲ್ಲಿ ಕೊಡುತ್ತಿದ್ದರು.

ವೈಯಕ್ತಿಕವಾಗಿ ಸಹಪಾಠಿ ಮತ್ತು ಸ್ನೇಹಿತರು ಆಗಿದ್ದ ಕೇಶವ ಉಚ್ಚಿಲ್ ಅವರ ಅಗಲುವಿಕೆ ನನಗೆ ಬಹಳ ನೋವಿನದ್ದು. ಕೇಶವ ಉಚ್ಚಿಲ್ ರು ಮಂಗಳಗಂಗೋತ್ರಿಯಲ್ಲಿ ನಡೆದ ಆರಂಭದ ಎಲ್ಲಾ ಸಮಾವೇಶಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಕಳೆದ ಒಂದೆರಡು ವರ್ಷಗಳಿಂದ ಅನಾರೋಗ್ಯದ ದೆಸೆಯಿಂದ ವಿಶ್ರಾಂತಿಯಲ್ಲಿ ಇದ್ದರು. ಮಂಗಳಗಂಗೋತ್ರಿಯ ಮೊದಲ ತಂಡದ ಕನ್ನಡ ಎಂಎಯ ಹಿರಿಯರೊಬ್ಬರ ನಿಧನದಿಂದ ಪರಂಪರೆಯ ಕೊಂಡಿಯೊಂದನ್ನು ನಾವು ಕಳೆದುಕೊಂಡಿದ್ದೇವೆ.

ಶ್ಯಾಮಲಾ ಮಾಧವ

ಪ್ರೊ. ಕೇಶವ ಎನ್.ಉಚ್ಚಿಲ್ – ನೆತ್ತಿಲ ಕೇಶವಣ್ಣ – ಇಂದು ಬೆಳಿಗ್ಗೆ ಇಹವನ್ನಗಲಿದರು. ಪ್ರತಿಭಾವಂತ ವಿದ್ಯಾರ್ಥಿ, ಉತ್ತಮ ಪ್ರಾಧ್ಯಾಪಕರಾಗಿದ್ದ, ನಮ್ಮೂರ ನಾಟಕರಂಗದಲ್ಲಿ ಮಿಂಚಿದ್ದ , ಯಕ್ಷಗಾನ ಬಯಲಾಟಗಳ ಅರ್ಥಧಾರಿಯಾಗಿದ್ದ, ಜನಾಂಗೀಯ ಸಂಶೋಧನೆಯಲ್ಲಿ ನಿರತರಾಗಿದ್ದ ನಮ್ಮೂರ ಪ್ರಿಯ ನೆತ್ತಿಲ ಕೇಶವಣ್ಣ!

ಅಪಾರ ಪ್ರತಿಭಾಶಾಲಿ, ಲಕ್ಷ್ಯ ಕೇಂದ್ರೀಕರಿಸಿದರೆ ಬಹಳಷ್ಟು ಸಾಧಿಸಬಹುದು ಎಂದು ಈ ಕಿರಿಯರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು, ನಮ್ಮ ತಂದೆ. ತಮ್ಮ ಇಂಗ್ಲಿಷ್ ಪ್ರೊಫೆಸರ್, ನಮ್ಮ ಆಂಟಿ ಲೀನಾ ಅಲೋಶಿಯಸ್ ಅವರನ್ನು ಕಂಡು ಮಾತನಾಡ ಬಯಸಿ ಜೊತೆಗೆ ಬಂದಿದ್ದರು. ತುಂಬಾ ಸಂತೋಷ ಪಟ್ಟಿದ್ದರು.

ತಮ್ಮ ಕಾಲೇಜ್ ಜೀವನದ ಏಳು ವರ್ಷಗಳನ್ನು ನಮ್ಮ ತಲೆಬಾಡಿ ಅಜ್ಜನ ಮಗ ಯು.ಟಿ.ಸುರೇಶಣ್ಣನ ಒಡನಾಡಿಯಾಗಿ ಅವರ ಮನೆಯಲ್ಲೇ ಕಳೆದಿದ್ದರು, ಕೇಶವಣ್ಣ. ತಮ್ಮಮ್ಮ, ತಮಗೆ ಮಕ್ಕಳು ಮೂರಲ್ಲ, ನಾಲ್ಕು, ಎಂದನ್ನುತ್ತಿದ್ದು, ಕೇಶವಣ್ಣನನ್ನು ಮಗನಂತೇ ಕಂಡಿದ್ದರೆಂದು ಸುರೇಶಣ್ಣ ನೆನೆದುಕೊಂಡಿದ್ದಾರೆ.

ವಿದ್ಯಾಭ್ಯಾಸವಿರಲಿ, ಪಠ್ಯೇತರ ಚಟುವಟಿಕೆಯಿರಲಿ, ಎಲ್ಲದರಲ್ಲೂ ಪ್ರಾವೀಣ್ಯ ಗಳಿಸಿದವರು. ಕನ್ನಡ ಪರೀಕ್ಷೆಯಲ್ಲಿ ಗಳಿಸಿದ ಪ್ರಥಮ ಸ್ಥಾನ, ಕಾಲೇಜ್ ಯೂನಿಯನ್ ಪ್ರೆಸಿಡೆಂಟ್ ಆಗಿ ಆರಿಸಿ ಬರುವಲ್ಲಿ ಅವರಿಗೆ ನೆರವಾಗಿತ್ತು.‌ ಕುವೆಂಪು, ಅಡಿಗರ ಕವನಗಳು ಧ್ವನಿ ಮುದ್ರಿಕೆಯಲ್ಲಿ ಬರುವ ಮುನ್ನ, ಕೇಶವಣ್ಣನ ಬಾಯಿಂದ ಕೇಳಿದವರು, ಊರ ಹುಡುಗರು.

ಫುಟ್ ಬಾಲ್ ಆಟದಲ್ಲಿ ಲೆಫ್ಟ್ ಬ್ಯಾಕ್ ಆಡುವ ಪರಿಣತಿಯಂತೇ ಕ್ರಿಕೆಟ್ ಆಟದಲ್ಲಿ ಆಲ್ ರೌಂಡರ್! ಅವರ ಮನೆಯಲ್ಲಿದ್ದ ಪುಸ್ತಕ ಸಂಪತ್ತು ಅಪಾರ! ಅಡ್ಕ ಸಾಂಸ್ಕೃತಿಕ ವೇದಿಕೆಯಲ್ಲಿ ನನ್ನ ‘ಗಾನ್ ವಿತ್ ದ ವಿಂಡ್’ ಕೃತಿಯ ಬಗ್ಗೆ ವಿಶದವಾಗಿ ಅವರು ನೀಡಿದ ಉಪನ್ಯಾಸ ಮರೆಯಲಾರೆ.

ಸಾಧಿಸುವ ಛಲವಿದ್ದಿದ್ದರೆ ಈ ಅಪಾರ ಪ್ರತಿಭೆ ನಷ್ಟವಾಗುತ್ತಿರಲಿಲ್ಲವೇನೋ! ಅನಾರೋಗ್ಯವೂ ಕಾಡದಿದ್ದಿದ್ದರೆ, ಈ ಪ್ರತಿಭಾ ಸಂಪನ್ನ ಬಹಳಷ್ಟು ಸಾಧಿಸಬಹುದಿತ್ತೇನೋ! ಅವರಿಗೆ ಪ್ರೀತಿ, ಗೌರವಪೂರ್ಣ ನಮನ!

‍ಲೇಖಕರು Avadhi

December 22, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: