ಛೂ ಮಂತ್ರ ಕಾಳಿ..

|ಕಳೆದ ಸಂಚಿಕೆಯಿಂದ|

೨. ಕರಿಯಪ್ಪನ ಎಮ್ಮೆ

ನಾನು ಆತನನ್ನು ಬಹಳ ದಿನಗಳಿಂದ ನೋಡುತ್ತಿದ್ದೆ. ಅವನೊಂದು ಕಪ್ಪು ಶಿಲೆಯಂತಿದ್ದ. ಆರಡಿ ಎತ್ತರ. ಅದಕ್ಕೆ ಸರಿಯಾದ ದಪ್ಪ. ಮುಖ ಮಾರೆ ಎಲ್ಲ ಕೆತ್ತಿಟ್ಟಂತಿದ್ದ. ಬಿಳಿ ಲುಂಗಿ ಪಂಚೆ, ಶರ್ಟು ಹಾಕಿ, ತಲೆಗೆ ಯಾವಾಗಲೂ ಒಂದು ಟವಲ್ ಸುತ್ತಿಕೊಂಡಿರುತ್ತಿದ್ದ. ಅವನ ಹೆಸರು ಕರಿಯಪ್ಪ. ನೊಣವಿನಕೆರೆಯಿಂದ ಮೂರು ಕಿಮೀ ದೂರದಲ್ಲಿದ್ದ ವಿಘ್ನಸಂತೆಯವನು. ಕರುಗಳ ಜಂತು ಔಷಧಕ್ಕೆ ಆಗಾಗ ಆಸ್ಪತ್ರೆಗೆ ಬರುತ್ತಿದ್ದ. ಎಮ್ಮೆ, ಹಸುಗಳು ಬೆದೆಗೆ ಬಂದಾಗ ಆಲ್ಬೂರು, ಮೇಗಳ ಕೊಪ್ಪಲು ಅಥವಾ ಮತ್ತೆಲ್ಲೋ ಸಾಕಿದ್ದ ಬೀಜದ ಕೋಣ, ಹೋರಿಗಳಿಗೆ ಕೊಡಿಸುತ್ತಿದ್ದನೇ ವಿನಹ ಆಸ್ಪತ್ರೆಗೆ ಬಂದು ಕೃತಕ ಗರ್ಭಧಾರಣೆ ಮಾಡಿಸುತ್ತಿರಲಿಲ್ಲ. ಹೀಗಾಗಿ ಅವನ ಬಳಿ ಮಿಶ್ರ ತಳಿ ಹಸುಗಳಾಗಲೀ, ಮರ‍್ರ ಸುರ್ತಿ ತಳಿಯ ಎಮ್ಮೆಗಳಾಗಲೀ ಇರಲಿಲ್ಲ. ಎಲ್ಲ ನಾಟಿ ತಳಿಗಳೇ ಇದ್ದವು. “ರೈತರ ಮನೇಲಿ ಎಚ್‌ಎಫ್, ಜರ್ಸಿ ಹಸುಗಳು ಅವಲಕ್ಷಣ ಸಾರ್” ಎಂದು ಹೀಗಳೆಯುತ್ತಿದ್ದ. ನಾಲ್ಕು ವರ್ಷಗಳಿಂದ ನಾನು ಅಲ್ಲಿ ಕೆಲಸ ಮಾಡುತ್ತಿದ್ದರೂ ಅವರ ಮನೆಗೆ ಒಂದು ಸಲವೂ ಹೋಗಿರಲಿಲ್ಲ.

ವಿಘ್ನಸಂತೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಚಪ್ಪೆರೋಗ, ಮೆಟ್ರೆರೋಗ, ಕಾಲುಬಾಯಿ ಜ್ವರದ ಲಸಿಕೆ ಮಾಡಲು ಹೋಗುತ್ತಿದ್ದೆ. ಆಗ ಗ್ರಾಮಸ್ಥರೆಲ್ಲ ತಮ್ಮೆಲ್ಲ ದನ ಕರುಗಳಿಗೆ ವ್ಯಾಕ್ಸಿನೇಷನ್ ಮಾಡಿಸುತ್ತಿದ್ದರು. ಆದರೆ ಕರಿಯಪ್ಪ ಎತ್ತುಗಳಿಗೆ ಮಾತ್ರ ಮಾಡಿಸುತ್ತಿದ್ದ. ಹಸುಗಳಿಗಾಗಲೀ, ಎಮ್ಮೆಗಳಿಗಾಗಲೀ ಅವನೆಂದೂ ಯಾವ ವ್ಯಾಕ್ಸಿನೇಷನ್ನನ್ನೂ ಮಾಡಿಸುತ್ತಿರಲಿಲ್ಲ. ಮಾಡಿಸಿದರೆ ಹಿಂಡುವ ದನಗಳಲ್ಲಿ ಹಾಲು ಸೀದು ಹೋಗುತ್ತದೆಂದೂ, ಗರ್ಭದ ದನಗಳು ಕಂದು ಹಾಕುವವೆಂದೂ (ಅಬಾರ್ಷನ್) ಹೇಳುತ್ತಿದ್ದ.

ಅವನ ಈ ಜ್ಞಾನವನ್ನು ಬದಲಿಸಲು ಯಾರಿಂದಲೂ ಸಾಧ್ಯವಿರಲಿಲ್ಲ. ಬೇರೆ ರೈತರೆಲ್ಲ ಹಿಂಡುವ ಹಾಗೂ ಗರ್ಭದ ರಾಸುಗಳಿಗೆ ವ್ಯಾಕ್ಸಿನೇಷನ್ ಮಾಡಿಸುತ್ತಾರೆಂದು ಹೇಳಿದರೆ ಆ ಮಾತುಗಳನ್ನು ಅವನು ಕಿವಿಯ ಮೇಲೆ ಹಾಕಿಕೊಳ್ಳುತ್ತಿರಲಿಲ್ಲ. ಅಂದ ಹಾಗೆ ಅವನ ಕಿವಿಗಳಲ್ಲಿ ಕೂದಲು ಪೊದೆಯಂತೆ ಬೆಳೆದು ಕಿವಿಯ ಹೊರಗೆಲ್ಲ ಚಾಚಿಕೊಂಡಿರುತ್ತಿದ್ದವು. ಹೀಗಾಗಿ ಅವನ ಮುಖ ಇದ್ದುದಕ್ಕಿಂತಲೂ ಅಗಲವಾಗಿರುವ ಭ್ರಮೆ ಹುಟ್ಟಿಸುತ್ತಿತ್ತು. ಅವನು ಅನಕ್ಷರಸ್ಥನೇನಲ್ಲ. ಎಸ್ಸೆಸ್ಸೆಲ್ಸಿವರೆಗೆ ಓದಿದ್ದನಂತೆ! ಕರಿಯಪ್ಪ ಮಾತಿನವನಲ್ಲ. ಮೌನಿ. ಕೇಳಿದ್ದಕ್ಕೆಲ್ಲ ಒಂದೊಂದೇ ಶಬ್ದದಲ್ಲಿ ಉತ್ತರಿಸುತ್ತಿದ್ದ.

ಅಂಥವನು ಒಂದು ದಿನ ಸಾಯಂಕಾಲ ಆಸ್ಪತ್ರೆ ಬಾಗಿಲು ಮುಚ್ಚಿದ ಮೇಲೆ ಹಾಜರಾದ. ಅವನ ಒಂದೊಂದೇ ಶಬ್ದದ ಉತ್ತರದಿಂದ ಬಹಳ ಹೊತ್ತು ಮಾಹಿತಿ ಪಡೆಯಬೇಕಾಯಿತು. ಗೊತ್ತಾಗಿದ್ದಿಷ್ಟು: ಅವನ ಎಮ್ಮೆಗೆ ದಿನ ತುಂಬಿದೆ. ಅಂದು ಸಾಯಂಕಾಲ ನಾಲ್ಕು ಗಂಟೆಯ ಮೇಲೆ ಹೆರಿಗೆ ನೋವು ಕಾಣಿಸಿರುವ ಹಾಗಿದೆ. ಮಡ್ಲಿನ ಎರಡೂ ಕಡೆ ತಗ್ಗು ಬಿದ್ದಿದೆ. ಅಲ್ಪ ಸ್ವಲ್ಪ ಮಡೆಯಾಡುತ್ತಿದೆ. (ಯೋನಿಯಿಂದ ಸುರಿಯುವ ಲೋಳೆ ಲೋಳೆ ದ್ರವಕ್ಕೆ ಮಡೆ (Uterine Discharge) ಎನ್ನುತ್ತಾರೆ). ಎಮ್ಮೆ ತಿಣುಕುತ್ತಿದೆಯಾದರೂ ಕರುವಿನ ತಲೆಯಾಗಲೀ, ಕಾಲಾಗಲೀ ಹೊರಗೆ ಕಾಣಿಸುತ್ತಿಲ್ಲ. “ಒಳಗೆ ಕರು ಆಡುವುದು ಗೊತ್ತಾಗುತ್ತೆ. ನೀವೇ ಬಂದು ಚೆಕ್ ಮಾಡಿ ನೋಡಿ ಸಾರ್” ಎಂದು ಹೇಳಿ ಅಪರೂಪಕ್ಕೆಂಬಂತೆ ನಕ್ಕನು.

ಕರಿಯಪ್ಪ ಬಂದಾಗ ಆಸ್ಪತ್ರೆಯ ಕಾಂಪೌಂಡಿನಲ್ಲಿ ನಮ್ಮ ಶಟಲ್ ಬಾಡ್ಮಿಂಟನ್ ಆಟ ರಂಗೇರಿತ್ತು. ಬ್ಯಾಂಕ್ ಸಿಬ್ಬಂದಿ, ಮನುಷ್ಯರ ಡಾಕ್ಟರುಗಳಿಬ್ಬರು, ಒಂದಿಬ್ಬರು ನೊಣವಿನಕೆರೆಯ ಸ್ಥಳೀಕರು, ಮೆಡಿಕಲ್ ಶಾಪಿನವರು ಎಲ್ಲರೂ ಸೇರಿ ಹುರುಪಿನಿಂದ ಆಡುತ್ತಿದ್ದೆವು. ಆದರೆ ಆ ದಿನ ನಾನು ಆಟವನ್ನು ನಿಲ್ಲಿಸಿ ಕರಿಯಪ್ಪನ ಮನೆಗೆ ಹೊರಟೆ. ವಿಘ್ನಸಂತೆ ಊರ ಒಳಗೆ ಮುಖ್ಯ ರಸ್ತೆಯ ಪಕ್ಕದಲ್ಲಿಯೇ ಕರಿಯಪ್ಪನ ಮನೆಯಿತ್ತು. ಅಟ್ಟವಿದ್ದು ತೆಂಗಿನ ಕಾಯಿ ಒಟ್ಟಲು ವ್ಯವಸ್ಥೆಯಿದ್ದ ಕಟಂಜನದ ಮನೆಯಾಗಿತ್ತು. ಚಾವಣಿಗೆ ಕೆಂಪು ಹೆಂಚು ಮತ್ತು ನೆಲಕ್ಕೆ ಕಡಪ ಕಲ್ಲು ಹಾಕಿದ್ದ ಹಳೆಯ ಮನೆಯಾಗಿತ್ತು.

ಆ ಮನೆಯ ಸೌಂದರ್ಯವಿದ್ದದ್ದು ಮನೆಯ ಮುಂಬಾಗಿಲಿನ ಎರಡೂ ಕಡೆ ಇದ್ದ ಕಟ್ಟೆಗಳು ಮತ್ತು ದೊಡ್ಡ ಮನೆಯಂಗಳ. ನಿಧಾನಕ್ಕೆ ಕತ್ತಲಾಗುತ್ತಿತ್ತು. ಮನೆಗಳಲ್ಲಿದ್ದ ಅನೇಕ ರೈತರು, ಮಕ್ಕಳು ಮುತ್ತಿಕೊಂಡರು. ಕರಿಯಪ್ಪ ಕೊಟ್ಟಿಗೆಯಿಂದ ಎಮ್ಮೆಯನ್ನು ಹಿಡಿದುಕೊಂಡು ಮನೆಯ ಅಂಗಳಕ್ಕೆ ಬಂದನು. ದೊಡ್ಡ ಎಮ್ಮೆ ಕರ‍್ರಗೆ ಮಿಂಚುತ್ತಿತ್ತು. ಮಡ್ಲಿಗೆ ಮಡೆ ಮೆತ್ತಿಕೊಂಡಿತ್ತು. ಸುರಿಯುತ್ತಿರಲಿಲ್ಲ. ಬಸುರಿ ಎಮ್ಮೆ ದೊಡ್ಡದಾಗಿ ಹೊಟ್ಟೆ ಬಿಟ್ಟುಕೊಂಡಿತ್ತು. ಮನೆಯಲ್ಲಿಯೇ ಹುಟ್ಟಿ ಬೆಳೆದ ಎಮ್ಮೆಯ ಮೂರನೆಯ ಹೆರಿಗೆ ಎಂದ ಕರಿಯಪ್ಪ. ತನ್ನ ಹೆಂಡತಿಗೆ ತವರಿನವರು ಕೊಟ್ಟ ಬೆಳ್ಳುಳ್ಳಿ ಎಂದ (ಬಳುವಳಿ ಎಂಬುದು ಬೆಳ್ಳುಳ್ಳಿಯಾಗಿರಬೇಕು).

ಗರ್ಭದೊಳಗೆ ಕರು ಆಡುವುದು ಮೇಲಿಂದಲೇ ಕಾಣಿಸುತ್ತಿತ್ತು. ಒಂದು ಬಕೆಟ್ ನೀರು, ಸೋಪು ತರಿಸಿ, ಗುದದ್ವಾರದಲ್ಲಿ ಕೈ ಹಾಕಿ ಪರೀಕ್ಷಿಸಿದೆ. ಸಾಮಾನ್ಯವಾಗಿ ನೀರಿನಲ್ಲಿ ತೇಲುವಂತಿರುವ ಗರ್ಭಚೀಲ ಬಿಗಿಯಾಗಿ ಒಳಗೆ ಜಗ್ಗಿಕೊಂಡಿತ್ತು! ಅಂದರೆ ಗರ್ಭಚೀಲ ಹೊರಳಿಕೊಂಡಿದೆ! ಗರ್ಭಚೀಲದ ನುಲಿತ! (Torsion of the Uterus). ಗರ್ಭಚೀಲ ಸರಿಪಡಿಸದೆ ಕರು ಹೊರಗೆ ಬರಲು ಸಾಧ್ಯವೇ ಇಲ್ಲ. (ಉದಾಹರಣೆಗೆ ಒಂದು ಬಟ್ಟೆ ಚೀಲದಲ್ಲಿ ಕುಂಬಳಕಾಯಿ ಹಾಕಿ ಚೀಲದ ಬಾಯನ್ನು ನುಲಿಯಿರಿ. ಆಗ ಕುಂಬಳಕಾಯನ್ನು ಹೇಗೆ ಹೊರತೆಗೆಯಲಾಗುವುದಿಲ್ಲವೋ ಹಾಗೆಯೇ ಕರುವು ಸಹ ಗರ್ಭಚೀಲದಿಂದ ಹೊರಬರಲಾಗುವುದಿಲ್ಲ.)

ಎರಡೂ ಕೈಗಳನ್ನು ಸೋಪು ಹಾಕಿ ತೊಳೆದುಕೊಂಡು ಯೋನಿಯೊಳಗೆ ಕೈಹಾಕಿದೆ. ಒಳಗೆಲ್ಲ ಏನೂ ಕಾಣುವುದಿಲ್ಲವಾದ್ದರಿಂದ ನಮ್ಮ ಕೈಗಳೇ ಕಣ್ಣುಗಳಂತೆ ಕೆಲಸ ಮಾಡುತ್ತವೆ. ನಮ್ಮ ಅನುಭವವೇ ನಮ್ಮ ಗುರು. ಒಂದೆರಡು ವರ್ಷಗಳ ಕಾಲ ಕೆಲಸ ಮಾಡಿದ ನಂತರ ಎಲ್ಲವೂ ರೂಢಿಯಾಗಿಬಿಡುತ್ತದೆ. ಈ ಎಮ್ಮೆಗೆ ಗರ್ಭಚೀಲದ ಜೊತೆಗೆ ಅರ್ಧಕ್ಕರ್ಧ ಯೋನಿ ನಾಳವೂ ನುಲಿದುಕೊಂಡಿತ್ತು. ಅಂದರೆ ಯೋನಿ ನಾಳ ಮತ್ತು ಗರ್ಭಚೀಲ ಎರಡೂ ನುಲಿದುಕೊಂಡಿದ್ದವು. ಸರ್ವಿಕ್ಸ್ (ಗರ್ಭಚೀಲದ ಬಾಯಿ) ತೆರೆದುಕೊಂಡಿದೆಯೋ ಇಲ್ಲವೋ ಎಂಬುದನ್ನು ಸಹ ಪರೀಕ್ಷಿಸಲು ಸಾಧ್ಯವಿರಲಿಲ್ಲ.

ಎಮ್ಮೆಯ ಗರ್ಭಚೀಲವನ್ನು ಸರಿಪಡಿಸಿ, ಸರ್ವಿಕ್ಸ್ ತೆರೆದುಕೊಂಡಿದ್ದರೆ ಮಾತ್ರ ಕರುವನ್ನು ಹೊರತೆಗೆಯಬಹುದಿತ್ತು. ಎರಡಲ್ಲಿ ಒಂದು ಸರಿ ಹೋಗದಿದ್ದರೂ ಚಿಕಿತ್ಸೆ ವಿಫಲವಾಗುತ್ತಿತ್ತು. ವಿಫಲವಾಗಬಹುದಾದ ಸಾಧ್ಯತೆಯನ್ನು ಆದಷ್ಟು ಮನದಿಂದ ದೂರ ಓಡಿಸಿ ಚಿಕಿತ್ಸೆ ಪ್ರಾರಂಭಿಸಿದೆ. ಅಂದೂ ಸಹ ಯಥಾ ಪ್ರಕಾರ ನನ್ನ ಸಹಾಯಕ್ಕೆ ನನ್ನ ಸಿಬ್ಬಂದಿ ಯಾರೂ ಇರಲಿಲ್ಲ. ಹೊತ್ತಲ್ಲದ ಹೊತ್ತದು. ನಾನು ಒಬ್ಬಂಟಿಯಿದ್ದೆ.

ಕರಿಯಪ್ಪನ ಮನೆ ಮುಂದಿನ ಅಂಗಳದಲ್ಲಿ ಎಮ್ಮೆಯನ್ನು ನಿಧಾನಕ್ಕೆ ಮಲಗಿಸಿಕೊಂಡೆವು. ಎಮ್ಮೆಯ ಮುಂದಿನ ಮತ್ತು ಹಿಂದಿನ ಕಾಲುಗಳನ್ನು ಬೇರೆ ಬೇರೆಯಾಗಿ ಕಟ್ಟಿಕೊಂಡು ಎಮ್ಮೆಯನ್ನು ಬಲಗಡೆಗೆ ಉರುಳಿಸಲು ಹೇಳಿದೆ. ನಾನು ಗುದದ್ವಾರದಲ್ಲಿ ಭುಜದವರೆಗೆ ಎರಡೂ ಕೈ ಹಾಕಿ ಬಿಗಿಯಾಗಿ ಗರ್ಭಚೀಲವನ್ನು ಹಿಡಿದು, ಎಮ್ಮೆ ಹೊರಳಿದರೂ ಗರ್ಭಚೀಲ ಹೊರಡದಂತೆ ಬಿಗಿ ಹಿಡಿದಿದ್ದೆ. ಎಂಟು ಹತ್ತು ಜನ ಸುತ್ತಲೂ ಎಮ್ಮೆಯನ್ನು ಹಿಡಿದಿದ್ದರು.

ಮೊದಲ ಸಲ ಎಮ್ಮೆ ಉರುಳಿದಾಗ ಗರ್ಭಚೀಲವೂ ಉರುಳಿತು. ಅಂದರೆ ಚಿಕಿತ್ಸೆ ವಿಫಲವಾಯಿತು. (ಹೀಗೆ ಗರ್ಭಚೀಲವೂ ನುಲಿದುಕೊಂಡಿರುವ ಎಮ್ಮೆ ಎದುರಿದ್ದರೆ ನಿಮಗೆ ಅರ್ಥವಾಗುವಂತೆ ವಿವರಿಸಬಹುದೇ ವಿನಹ ಅಕ್ಷರಗಳಲ್ಲಿ ಅದನ್ನು ಬರೆದು ನಿಮಗೆ ಅರ್ಥವಾಗಿಸುವುದು ಅಸಾಧ್ಯ). ಎರಡನೆಯ ಪ್ರಯತ್ನ ಪ್ರಾರಂಭವಾಯಿತು. ನಾನು ಎಮ್ಮೆಯ ಹಿಂದುಗಡೆ ಎರಡೂ ಕೈಯಲ್ಲಿ ಗರ್ಭಚೀಲ ಬಿಗಿ ಹಿಡಿದೆ. ಹತ್ತಿಪ್ಪತ್ತು ರೈತರು ಕೂಗಾಡುತ್ತ ಎಮ್ಮೆಯನ್ನು ಬಲಗಡೆಗೆ ಉರುಳಿಸಿದರು. ನಾನು ಎಷ್ಟು ಶಕ್ತಿ ಬಿಟ್ಟು ಪ್ರಯತ್ನಿಸಿದರೂ ಗರ್ಭಚೀಲವನ್ನು ಉರುಳದಂತೆ ಹಿಡಿಯಲು ಸಾಧ್ಯವಾಗಲಿಲ್ಲ. ಎರಡನೆಯ ಸಲವೂ ಪ್ರಯತ್ನ ವಿಫಲವಾಯಿತು. ಮತ್ತೆರಡು ಸಲದ ಪ್ರಯತ್ನಗಳಲ್ಲಿಯೂ ಸೋತು ಹೋದೆ.

ಇಷ್ಟು ಹೊತ್ತಿಗೆ ಸಂಪೂರ್ಣ ಕತ್ತಲಾಗಿತ್ತು. ಅವರಿವರ ಮನೆಗಳಿಂದ ನಾಲ್ಕಾರು ಬ್ಯಾಟರಿ, ಲಾಟೀನುಗಳನ್ನು ತಂದು ಉರಿಸಲಾಗಿತ್ತು. ಎಮ್ಮೆಗೆ ಚಿಕಿತ್ಸೆ ಪ್ರಾರಂಭವಾಗಿ ಒಂದು ಗಂಟೆಯ ಮೇಲಾಗಿತ್ತು. ಚಿಕಿತ್ಸೆಯಲ್ಲಿ ಯಾವುದೇ ಪ್ರಗತಿ ಸಾಧ್ಯವಾಗಿರಲಿಲ್ಲ. ಎಮ್ಮೆಯ ಸ್ಥಿತಿ ಹಾಗೆಯೇ ಇತ್ತು. ಜನರು ಪುಂಖಾನುಪುಂಖವಾಗಿ ಪ್ರತಿಕ್ರಿಯಿಸತೊಡಗಿದ್ದರು. ಕೆಲವರಿಗೆ ಪರಮಾತ್ಮನ ಆವಾಹನೆಯೂ ಆಗಿತ್ತು.

“ಇವ್ರ್ ಕೈಯ್ಯಲ್ಲಾಗಲ್ಲ ಬಿಡ್ಲೆ!”

“ಕರು ತೆಗೆಯಾದು ಬಿಟ್ಟು ಎಮ್ಮೇನ ಯಾಕೆ ಉರುಳಿಸ್ತಿದಾರೆ?”

ಮುಂತಾಗಿ ರೈತರು ಜೋರಾಗಿಯೇ ಗೊಣಗಿಕೊಳ್ಳುತ್ತಿದ್ದರು. ಎಮ್ಮೆಗೂ, ನನಗೂ ಸುಸ್ತಾಗಿತ್ತು. ಕಾಲು ಗಂಟೆ ಬಿಡುವು ತೆಗೆದುಕೊಂಡೆವು. ಯಾರೋ ತಂದುಕೊಟ್ಟ ಟೀ ಗುಟುಕುರಿಸಿದೆ. ಬಟ್ಟೆ ಬರೆಯೆಲ್ಲ ಸಗಣಿ, ಗಂಜಲವಾಗಿದ್ದವು. ನನ್ನ ಬಟ್ಟೆಗಳಲ್ಲಿ ಜಗತ್ತಿನ ಯಾವ ಸೋಪೂ ಹೋಗಲಾಡಿಸದಂತಹ ಕಲೆಗಳಾಗಿದ್ದವು. ಯಾವ ಸೆಂಟೂ ಹೋಗಲಾಡಿಸದಂತಹ ವಾಸನೆಯಿಂದ ಕೂಡಿತ್ತು. ಮತ್ತೆ ಚಿಕಿತ್ಸೆ ಪುನರಾರಂಭವಾಯಿತು. ಎಮ್ಮೆಯ ಕಾಲುಗಳನ್ನು ಕಟ್ಟಲಾಯಿತು. ಉರುಳಿಸುವ ಜಾಗವನ್ನು ಗೋಣಿಚೀಲಗಳ ಹಾಸಿ ಮೆತ್ತಗೆ ಮಾಡಲಾಯಿತು. ಹತ್ತಾರು ಜನ ‘ಐಸ’ ‘ಐಸ’ ಎನ್ನುತ್ತ ಎಮ್ಮೆಯನ್ನು ನನ್ನ ಸೂಚನೆಯಂತೆ ಉರುಳಿಸತೊಡಗಿದರು. ನಾನು ಯಥಾ ಪ್ರಕಾರ ಕೈಗಳೆರಡನ್ನೂ ಭುಜದವರೆಗೆ ತೂರಿಸಿ ಗರ್ಭಚೀಲ ಬಿಗಿ ಹಿಡಿದು ಸಿದ್ಧನಿದ್ದೆ.

ಐದನೆಯ ಯತ್ನವೂ ವಿಫಲವಾಯಿತು. ನನ್ನಲ್ಲಿ ಬೇಸರವೂ, ಪಾಪ ಪ್ರಜ್ಞೆಯೂ, ಹತಾಶೆಯೂ ಮೂಡತೊಡಗಿದವು. ಒಳಗೆ ಸುಮಾರು ಮೂವತ್ತು ಕೆಜಿಯಷ್ಟು ತೂಕದ ಗರ್ಭಚೀಲವನ್ನು ಎಮ್ಮೆಯ ಹಿಂದೆ ಕೂತು ಬಗ್ಗಿ, ಮಲಗಿ, ಉರುಳಿ, ತೆವಳಿ, ಅಂಬೆಗಾಲಿಟ್ಟು, ಬಿಗಿಯಾಗಿ ಹಿಡಿದು ಗೆಲುವು ಕಾಣದೆ ಸೋತು ಸುಣ್ಣವಾಗಿ ಹೋಗಿದ್ದೆ.

ಏನಾದರೇನು? ಆಗಬೇಕಾದ ಕೆಲಸವಾಗಿರಲಿಲ್ಲ. ನಾವು ಕೆಲಸ ಪ್ರಾರಂಭಿಸಿ ಎರಡು ಗಂಟೆಯ ಮೇಲಾಗಿತ್ತು. ಎಮ್ಮೆ ಸುಸ್ತಾಗಿತ್ತು. ತುಂಬು ಗಬ್ಬದ ಎಮ್ಮೆಯನ್ನು ಇನ್ನೂ ಉರುಳಿಸಲು ಸಾಧ್ಯವಿರಲಿಲ್ಲ. ಆಗಲೇ ರಾತ್ರಿ ಒಂಭತ್ತು ಗಂಟೆ!

ನಮ್ಮ ರೈತರ ಒಂದು ಸ್ವಭಾವವೆಂದರೆ ಕರುವನ್ನು ಆದಷ್ಟು ಬೇಗ ತೆಗೆದುಬಿಡಬೇಕು. ತಡವಾದಂತೆಲ್ಲ ಅವರಿಗೆ ಹೆರಿಗೆಯ ಸಂಕಟ ನೋಡಲಾಗುವುದಿಲ್ಲ. ಹಿಂದೆಂದೋ ಯಾರೋ ಸಹಜ ಹೆರಿಗೆಯಲ್ಲಿ ಒಂದೆರಡು ನಿಮಿಷಗಳಲ್ಲಿ ಕರು ತೆಗೆದ ಪ್ರಸಂಗವನ್ನು ನೆನಪಿಟ್ಟುಕೊಂಡು ಅದನ್ನೇ ಪದೇ ಪದೇ ಹೇಳುತ್ತಿರುತ್ತಾರೆ. ಅರ್ಥಾತ್, ಪ್ರಸ್ತುತ ಕರು ತೆಗೆಯಲು ವಿಫಲನಾಗಿರುವ ನನ್ನನ್ನು “ಕೆಲಸಕ್ಕೆ ಬಾರದವ” ಎಂದು ಹೀಯಾಳಿಸುತ್ತಿರುತ್ತಾರೆ. ಅಂದರೆ, ಬಟ್ಟೆಯಲ್ಲಿ ಸುತ್ತಿ ಹೊಡೆಯುತ್ತಿರುತ್ತಾರೆ.

ನಾನು ಕರಿಯಪ್ಪನನ್ನು ಕರೆದು “ಈಗ ಸಾಕು ಮಾಡ್ತೀನಿ ಕರಿಯಪ್ಪ. ನಾಳೆ ಬೆಳಿಗ್ಗೆ ೬ ಗಂಟೆ ಸುಮಾರಿಗೆ ಬಂದು ಪರೀಕ್ಷೆ ಮಾಡ್ತೀನಿ. ಪರಿಸ್ಥಿತಿ ಹೀಗೇ ಇದ್ದರೆ ಬೇರೆ ಇನ್ನೊಬ್ಬ ಪಶುವೈದ್ಯರನ್ನು ಕರೆಸಿ ಚಿಕಿತ್ಸೆ ಮಾಡ್ತೀನಿ.” ಎಂದು ಹೇಳಿ ಮನೆಗೆ ಬಂದು ಸ್ನಾನ ಮಾಡಿ, ತಣಿಸಿ ಹೋಗಿದ್ದ ಊಟ ಮಾಡಿ ಮಲಗಿದೆ. ರಾತ್ರಿಯಿಡೀ ವಿಕಾರವಾದ ಕರು ಜನನದ ಕನಸುಗಳು!

ಮರುದಿನ ಆರು ಗಂಟೆಗೆಲ್ಲ ನಾನು ಕರಿಯಪ್ಪನ ಮನೆಯಲ್ಲಿದ್ದೆ. ಎಮ್ಮೆಯನ್ನು ಪರೀಕ್ಷಿಸಿದೆ. ನನಗೆ ನಂಬಲಾಗಲೇಯಿಲ್ಲ. ತನ್ನಷ್ಟಕ್ಕೆ ತಾನೇ ಗರ್ಭಚೀಲದ ನುಲಿತ ಸರಿಯಾಗಿತ್ತು. ಸರ್ವಿಕ್ಸ್ ಸಂಪೂರ್ಣ ತೆರೆದುಕೊಂಡಿತ್ತು. ನಾನು ಕೈ ಹಾಕಿ ಯೋನಿಯಿಂದ ಹೊರಗೆ ಇಣುಕುತ್ತಿದ್ದ ಉಚ್ಚೆ ಬುಡ್ಡೆಯನ್ನು (ನೆತ್ತಿ ಚೀಲ Amniotic sac) ಒಡೆದು ಕರುವನ್ನು ಹೊರಗೆಳೆದೆ. ಕರು ಈಜಿಕೊಂಡು ಹೊರಬಂತು. ಕಾಲು ಗಂಟೆಯಲ್ಲಿ ಎಲ್ಲ ಕೆಲಸವೂ ಮುಗಿಯಿತು. ಎಮ್ಮೆಯ ಮಡ್ಲಿಂದ ನೇತಾಡುತ್ತಿದ್ದ ಸತ್ತೆಯು (ಕಸ, ಪ್ಲಾಸೆಂಟ) ತನ್ನಷ್ಟಕ್ಕೆ ತಾನೇ ಬೇರ್ಪಟ್ಟು ಕೆಳಗೆ ಬಿದ್ದಿತು. ಕರಿಯಪ್ಪನಿಗೆ ಕೊಡಬೇಕಾದ ಸಲಹೆ ಸೂಚನೆಗಳನ್ನು ಕೊಟ್ಟು ಹಿಂತಿರುಗಿದೆ.

೩. ರಾಮಾಜೋಯಿಸರ ಎಮ್ಮೆ ಕುಣಿತ

ನೊಣವಿನಕೆರೆಯ ರಾಮಾಜೋಯಿಸರು ನನಗಿಂತ ಬಹಳ ಹಿರಿಯರು. ಮೃದು ಭಾಷಿ, ಮಿತ ಭಾಷಿ. ಆದರೆ ನನ್ನ ಹತ್ತಿರ ಮಾತ್ರ ಸಮಯವನ್ನು ಲೆಕ್ಕಿಸದೆ ಮಾತಾಡುತ್ತ ಕುಳಿತುಬಿಡುತ್ತಿದ್ದರು. ದಿನವೂ ನಮ್ಮ ಆಸ್ಪತ್ರೆಯ ಮುಂದಿನಿಂದ ತಮ್ಮ ಹೊಲ, ಗದ್ದೆ, ತೋಟಕ್ಕೆ ಹೋಗಿ ಬರುತ್ತಿದ್ದರು. ಒಮ್ಮೊಮ್ಮೆ ಆಸ್ಪತ್ರೆಯಲ್ಲಿ ಜನ ಮತ್ತು ದನಗಳ ರಶ್ ಕಡಿಮೆಯಿದ್ದಾಗ ಮಾತಾಡುತ್ತ ಕುಳಿತುಕೊಳ್ಳುತ್ತಿದ್ದರು. ಪಂಚೆ, ಶರ್ಟು, ಸ್ವೆಟರ್ ಉಟ್ಟು, ಹೆಗಲ ಮೇಲೊಂದು ಟವಲ್ ಹಾಕಿಕೊಂಡು, ಕೈಯಲ್ಲಿ ಛತ್ರಿ ಹಿಡಿದುಕೊಂಡು ಪುಟ್ಟ ದೇಹದ ಅವರು ಮೆಟ್ಟಿಲು ಹತ್ತಿ ಬರುತ್ತಿದ್ದುದು ಅಥವಾ ಇಳಿದು ಹೋಗುತ್ತಿದ್ದುದು ಮಕ್ಕಳನ್ನು ನೆನಪಿಗೆ ತರುತ್ತಿತ್ತು. ಬಹುಶಃ ಬಾಲ್ಯ ಕಾಲದ “ಮುದ್ದು ಮುದ್ದು” ಮುದಿತನದಲ್ಲಿ ಮರುಕಳಿಸುತ್ತದೆ ಎಂದು ಕಾಣುತ್ತದೆ. ಅವರ ಮುಖದಲ್ಲಿ ನಗುವೆಂಬುದು ಸುಲಭಕ್ಕೆ ಕಾಣಿಸಿಕೊಳ್ಳುತ್ತಿರಲಿಲ್ಲ. ಆದರೆ ಯಾವಾಗಲೂ ಬಾಯಲ್ಲಿ ಚಾಕ್ಲೇಟ್ ಇಟ್ಟುಕೊಂಡಿರುವಂತೆ ಭಾಸವಾಗುತ್ತಿತ್ತು.

ಅವರಲ್ಲಿ ನಾಲ್ಕಾರು ಎಮ್ಮೆಗಳಿದ್ದವು. ಅವುಗಳಿಗೆ ಸ್ವಲ್ಪ ಹೆಚ್ಚು ಕಡಿಮೆಯಾದರೂ ರಾಮಾ ಜೋಯಿಸರಿಗೆ ಹುಷಾರು ತಪ್ಪುತ್ತಿತ್ತು! ಗಬ್ಬದ ಎಮ್ಮೆಗಳು, ಹಿಂಡುವ ಎಮ್ಮೆಗಳು, ಕರುಗಳು, ಪಡ್ಡೆಗಳು, ಅವುಗಳ ನೀರು ನಿಡೆ, ಮೇವು, ಮುಸುರೆ, ಕಾಯಿಲೆ ಕಸಾಲೆಗಳನ್ನು ನೋಡಿಕೊಳ್ಳಲು ಹಿರಿಯಣ್ಣ ಎಂಬುವ ಹಸನ್ಮುಖಿಯೊಬ್ಬನಿದ್ದ. ಹಿರಿಯಣ್ಣನೇ ಮನೆ, ಕೊಟ್ಟಿಗೆ, ಗದ್ದೆ, ತೋಟಗಳನ್ನೆಲ್ಲ ನಿಭಾಯಿಸುತ್ತ ಅವರ ಮನೆಯಲ್ಲಿ ಕೆಲಸಕ್ಕಿದ್ದ.

ಅದು ೧೯೮೪ ಅಥವಾ ೧೯೮೫ ರ ಸಮಯ ಇರಬಹುದು. ಆಗ ನಾನು ನೊಣವಿನಕೆರೆಯಲ್ಲಿ ವಾಸವಿದ್ದ ಎರಡು ರೂಮುಗಳಿದ್ದ ಮನೆ ಎರಡನೇ ಮಹಡಿಯಲ್ಲಿತ್ತು. ಮನೆಗೇ ಆಸ್ಪತ್ರೆ ಕಾಣುತ್ತಿತ್ತು. ರೂಮಿನಲ್ಲಿ ನನ್ನ ಜೊತೆ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದ ಕೇರಳದ ಶಂಭು ನಂಬೂದಿರಿ ಇದ್ದರು. ಮತ್ತೊಬ್ಬರು ಮಂಗಳೂರಿನವರಾಗಿದ್ದರೂ ಕಲ್ಕತ್ತದಲ್ಲಿ ಹುಟ್ಟಿ ಬೆಳೆದ ರಿಚರ್ಡ್ ಡಿಸೋಜ ಎಂಬುವವರಿದ್ದರು. ಇವರಿಬ್ಬರೂ ನೊಣವಿನಕೆರೆ ಕರ್ನಾಟಕ ಬ್ಯಾಂಕ್ ನೌಕರರಾಗಿದ್ದರು. ಶಂಭುರವರ ಮಾತೃಭಾಷೆ ಮಲಯಾಳಂ ಮತ್ತು ಡಿಸೋಜರವರಿಗೆ ಇಂಗ್ಲೀಷ್, ಹಿಂದಿ, ಬಂಗಾಳಿ ಮುಂತಾದ ಭಾಷೆಗಳು ಬರುತ್ತಿದ್ದವೇ ವಿನಹ ಕನ್ನಡ ಅಷ್ಟಕ್ಕಷ್ಟೆ ಎಂಬಂತಿತ್ತು. ಆದರೆ ಮೂವರನ್ನೂ ಕಾಲ ದೇಶಗಳು ಯೋಗಾಯೋಗವೋ ಎಂಬಂತೆ ಒಂದೇ ಕಡೆ ತರುಬಿಕೊಂಡಿದ್ದವು.

ಒಬ್ಬ ಹಿಂದೂ, ಒಬ್ಬ ಮುಸ್ಲಿಮ್, ಮತ್ತೊಬ್ಬ ಕ್ರಿಶ್ಚಿಯನ್!

ಬ್ಯಾಂಕಿನಲ್ಲಿ ಗೋಲ್ಡ್ ಅಪ್ರೈಸರ್ ಆಗಿದ್ದ ಬೈರಾಚಾರರ ನಾಗರಾಜ್‌ರವರಿಗೆ ಇದೊಂದು ವಿಶಿಷ್ಟವೂ, ವಿಶೇಷವೂ ಆಗಿ ಕಾಣುತ್ತಿತ್ತು. ಊರಲ್ಲೆಲ್ಲ ಇದನ್ನು ಆದರ್ಶವೋ ಎಂಬಂತೆ ಹೇಳಿಕೊಂಡು ಬರುತ್ತಿದ್ದರು. ನಾವು ಮೂವರು ಎದುರಾದರೆ ಅಮರ್, ಅಕ್ಬರ್, ಆಂಥೋನಿ ಎಂದು ತಮಾಷೆ ಮಾಡುತ್ತಿದ್ದರು. ಮೂವರದ್ದೂ ಮದುವೆಯಾಗಿರಲಿಲ್ಲ. ನಮ್ಮೆಲ್ಲರ ತಿಂಡಿ ಊಟ ಹೋಟೆಲ್ಲಲ್ಲಿ ನಡೆಯುತ್ತಿತ್ತು. ಅದರ ಜೊತೆ ನಾನು ಕರೆದವರ ಮನೆಯಲ್ಲಿ ಸಿಕ್ಕ ಸಿಕ್ಕಲ್ಲಿ ಊಟ ಮಾಡುತ್ತಿದ್ದೆ. ಒಮ್ಮೊಮ್ಮೆ ರಾತ್ರಿ ಊಟಕ್ಕೆ ಇದ್ದಕ್ಕಿದ್ದಂತೆ ಬೈಕುಗಳನ್ನೇರಿ ತಿಪಟೂರಿನ ಯಾವುದಾದರೂ ಹೋಟೆಲಲ್ಲಿ ಹಾಜರಾಗುತ್ತಿದ್ದೆವು. ಆಗ ನೊಣವಿನಕೆರೆಯಲ್ಲಿ ಪೆಟ್ರೋಲ್ ಬಂಕ್ ಇರಲಿಲ್ಲವಾದುದರಿಂದ ತಿಪಟೂರಿನಲ್ಲಿಯೇ ಪೆಟ್ರೋಲ್ ತುಂಬಿಸಿಕೊಂಡು ಬರುತ್ತಿದ್ದೆವು.

ಒಂದು ದಿನ ಸಾಯಂಕಾಲ ಶಟಲ್ ಬ್ಯಾಡ್ಮಿಂಟನ್ ಆಟ ಮುಗಿಸಿಕೊಂಡು ರೂಮಿಗೆ ಬಂದು ಸ್ನಾನ ಮಾಡಿ ರಾತ್ರಿಯ ಊಟ ತರಲು ಹೋಟೆಲ್‌ಗೆ ತಿಳಿಸಿ, ಸ್ನೇಹಿತರೊಡನೆ ಮಾತಾಡುತ್ತ ದಣಿವಾರಿಸಿಕೊಳ್ಳುತ್ತಿರುವಾಗ ಬಾಗಿಲ ಬಳಿ ಹಿರಿಯಣ್ಣ ಪ್ರತ್ಯಕ್ಷನಾದ. ಸಮಯವಾಗಲೇ ಏಳು ಗಂಟೆ ದಾಟಿತ್ತು. ಹೊರಗೆ ಇಣುಕಿ ನೋಡಿದೆ. ರಾತ್ರಿಯ ಕತ್ತಲು ರ‍್ರಗೆ ಸುರಿಯುತ್ತಿತ್ತು. ಚಳಿ ಕೊರೆಯುತ್ತಿತ್ತು. ಅಲ್ಲೊಂದು ಇಲ್ಲೊಂದು ಶಬ್ಧ ಬಿಟ್ಟರೆ ಇಡೀ ವಾತಾವರಣ ನಿಶ್ಯಬ್ಧವಾಗಿತ್ತು. ಮನೆಗಳಲ್ಲಿ ಮತ್ತು ಬೀದಿಯಲ್ಲಿ ಅಲ್ಲೊಂದು ಇಲ್ಲೊಂದು ದೀಪಗಳು ಮಂಕಾಗಿ ಉರಿಯುತ್ತಿದ್ದವು. ಮೆಡಿಸಿನ್ ಬ್ಯಾಗ್ ಹಿಡಿದು ರಾಮಾ ಜೋಯಿಸರ ಮನೆಗೆ ನಡೆದೇ ಹೊರಟೆ. ಉದ್ದಕ್ಕೂ ಪರಿಚಿತರೇ. ಸಮಯವೆಂಬುದು ಯಾವುದೇ ಒತ್ತಡವಿಲ್ಲದೆ ಹಗುರವಾಗಿತ್ತು. ಅದು ನಿಂತಿದೆಯೋ ಉರುಳುತ್ತಿದೆಯೋ ಗೊತ್ತಾಗದಂತಿತ್ತು. ಅದು ತನ್ನ ಅಸ್ತಿತ್ವವನ್ನೇ ಕಳೆದುಕೊಂಡಂತಿತ್ತು. ಅವು ಬಹುಶಃ ನನ್ನ ಗ್ರಾಮ ಜೀವನದ ಅತ್ಯಂತ ಮಧುರ ಕ್ಷಣಗಳಾಗಿದ್ದವು.

ಯಾವಾಗಲೂ ದಿಲ್ಲಗಿಯಾಗಿ ಇರುತ್ತಿದ್ದ ಹಿರಿಯಣ್ಣ ಹೇಳುತ್ತಿದ್ದುದನ್ನು ಕೇಳುತ್ತ ನಡೆದೆ. ಅಂದು ಸಾಯಂಕಾಲ ಮನೆಗೆ ಹಿಂತಿರುಗಿದ ಸ್ವಲ್ಪ ಹೊತ್ತಿನಲ್ಲಿ ಕರಾವಿನ ಎಮ್ಮೆಯೊಂದು ಇದ್ದಕ್ಕಿದ್ದಂತೆ ‘ಸ್ಕ್ರೂ ಲೂಸಾದಂತೆ’ ವರ್ತಿಸತೊಡಗಿತಂತೆ. “ಒಮ್ಮೆಲೇ ಎಗರುವುದು, ಓಡುವುದು, ಗೋಡೆ ಕಂಬ ಗ್ವಾದ್ಲಿ ಎನ್ನದೇ ಡಿಕ್ಕಿ ಹೊಡೆಯುವುದು, ಬಕೆಟ್‌ಗಟ್ಟಲೆ ಜೊಲ್ಲು ಸುರಿಸುವುದು, ಕಣ್ಣುಗಳನ್ನು ಮೆಡ್ಡರಿಸುವುದು, ಮುಲುಕುವುದು, ಪದೇ ಪದೇ ಉಚ್ಚೆ ಹೊಯ್ಯುವುದು… ಹೀಗೆ ನಾನಾ ನಮೂನಿ ಆಡುತ್ತಿದೆ” ಎಂದ ಹಿರಿಯಣ್ಣ.

ಎಮ್ಮೆಯನ್ನು ಹಿಡಿಯಲು ತಾನು ಪಟ್ಟ ಕಷ್ಟ ವರ್ಣಿಸಿದ. ಎಮ್ಮೆಯ ಮೂಗು ದಾರ ಕಿತ್ತು ಹೋಗಿ ಎರಡೆರಡು ಸಲ ಕೊಟ್ಟಿಗೆಯಲ್ಲಿ ಬಿದ್ದು ಗಾಯಗೊಂಡಿದ್ದ. ಅವನ ಶರ್ಟು ಒಂದು ಕಡೆ ಹರಿದೇ ಹೋಗಿತ್ತು. “ನರ ನರ ಹಲ್ಲು ಕಡಿಯುತ್ತಾ ‘ವಂಯ್ಞೋಂ ’ ಎಂದು ಒಂದೇ ಸಮನೆ ಅರಚುತ್ತೆ ಸಾ. ಹಾಲು ಕರಿಯಾಕಾಗಿಲ್ಲ. ಕೊಟ್ಟಿಗೆಯಲ್ಲಿ ಈ ದೆವ್ವವನ್ನು ಮಾತ್ರ ಕಟ್ಟಿ ಹಾಕಿ ಕೊಟ್ಟಿಗೆಯ ಬಾಗಿಲು ಹಾಕಿಕೊಂಡು ಬಂದಿದ್ದೀನಿ. ಮನೆ ಮಂದಿಯೆಲ್ಲ ಮನೆ ಒಳಗೆ ಸೇರಿಕೊಂಡು ಬಿಟ್ಟೈತೆ. ಯಜಮಾನರು ಎಮ್ಮೆಯ ಅವತಾರ ನೋಡಿ ಹೆರ‍್ಕೊಂಡು ಬಿಟ್ಟಿದಾರೆ” ಮುಂತಾಗಿ ಹೇಳಿದ. ಹಿರಿಯಣ್ಣ ಮನೆಯಲ್ಲಿದ್ದ ಇನ್ನಿತರೆ ದನಕರುಗಳನ್ನು ಕೊಟ್ಟಿಗೆಯ ಹೊರಗೆ ಕಟ್ಟಿದ್ದ.

ನಾನು ಕೊಟ್ಟಿಗೆಯ ಬಳಿ ಹೋದಾಗ ವಿಶಾಲವಾದ ಕೊಟ್ಟಿಗೆಯಲ್ಲಿ ಒಂದೇ ಎಮ್ಮೆ ಹುಚ್ಚು ಹಿಡಿದಂತೆ ‘ವಂಯ್ಞೋಂ’ ಎಂದು ಸ್ವರ ಹೊರಡಿಸುತ್ತ ಅಡ್ಡಾದಿಡ್ಡಿ ಆಡುತ್ತಿತ್ತು. ಮೂಗುದಾರ, ಕತ್ತಿನ ಹಗ್ಗ ಎಲ್ಲ ಕಿತ್ತು ಹೋಗಿದ್ದ ಎಮ್ಮೆ ಸರ್ವತಂತ್ರ ಸ್ವತಂತ್ರವಾಗಿತ್ತು. ಹಿರಿಯಣ್ಣ ಕೊಟ್ಟಿಗೆ ಬಾಗಿಲು ತೆಗೆದು ಒಳಹೋದರೆ ಅವನ ಮೇಲೆ ಜಿಗಿದು ಬರುತ್ತಿತ್ತು. ಹೀಗಾಗಿ ನಾವಾರೂ ಒಳಗೆ ಹೋಗಲು ಸಾಧ್ಯವಾಗಲಿಲ್ಲ. ಜೋಯಿಸರು ಆಶ್ಚರ್ಯದಿಂದಲೂ, ಆಘಾತದಿಂದಲೂ ಥಂಡಾ ಹೊಡೆದು ಹೋಗಿದ್ದರು. ಜೋಯಿಸರ ಹೆಣ್ಣು ಮೊಮ್ಮಕ್ಕಳಿಬ್ಬರೂ ನನಗೆ ಅನೇಕಾನೇಕ ಪ್ರಶ್ನೆಗಳನ್ನೆಸೆಯತೊಡಗಿದರು. ಅವಳಿ ಜವಳಿ ಸಹೋದರಿಯರಾದ ಅವರಿಬ್ಬರೂ ತಿಪಟೂರಿನ ಯಾವುದೋ ಹೈಸ್ಕೂಲಲ್ಲಿ ಓದುತ್ತಿದ್ದರು. ಅವರು ಕೇಳುತ್ತಿದ್ದ ಹತ್ತಾರು ಪ್ರಶ್ನೆಗಳನ್ನು ಒಟ್ಟಾಗಿಸಿ ನಾನು ಉತ್ತರ ಕೊಡತೊಡಗಿದೆ. ತಿಪಟೂರಿನ ಜೀವವಿಮಾ ನಿಗಮದಲ್ಲಿ ಅಧಿಕಾರಿಯಾಗಿದ್ದ ಜೋಯಿಸರ ಅಳಿಯ ಅಂದು ಊರಲ್ಲಿರಲಿಲ್ಲ.

“ಎಂದಾದರೂ ಎಮ್ಮೆಗೆ ನಾಯಿ ಕಡಿದಿತ್ತೇ?” ಎಂದು ಕೇಳಿದರೆ ಮನೆಯಲ್ಲಿ ಯಾರಿಗೂ ಮಾಹಿತಿಯಿರಲಿಲ್ಲ. ಎಲ್ಲ ವಿಷಯಗಳಲ್ಲಿ ಪಾರಂಗತನಂತಿದ್ದ ಹಿರಿಯಣ್ಣ “ಕಡಿದಿಲ್ಲ ಬಿಡಿ ಸಾರ್ ಅಥವಾ ನಾವು ಇಲ್ಲದ ಹೊತ್ತಲ್ಲಿ ಕಡಿದಿದ್ದರೆ ಏನ್ಮಾಡೋದು ಸಾರ್? ನಾಯಿಗಳೇನು ನಮಗೆ ಹೇಳಿ ಕಡಿತಾವ?” ಅಂದ.

ನಾನು: ಇವತ್ತು ಎಮ್ಮೆ ವಾಪಸ್ ಬಂದಮೇಲೆ ನೀರು ಕುಡಿಸಿದೆಯಾ?

ಹಿರಿಯಣ್ಣ: ನೀರು ಕುಡಿದಿಲ್ಲ. ಮುಸುರೆ ಕುಡಿದಿಲ್ಲ. ಮೇವು ತಿಂದಿಲ್ಲ. ಮೆಲುಕು ಹಾಕಿಲ್ಲ.

ನಾನು: ದಿನವೂ ನೀನೇಳಿದ ಹಾಗೆ ಕೇಳುತ್ತಿದ್ದ ಎಮ್ಮೆ ಇವತ್ತು ನಿನ್ನ ಮಾತು ಕೇಳ್ತಿದೆಯಾ?

ಹಿರಿಯಣ್ಣ: ಇಲ್ಲ ಸಾರ್. ಮಾತು ಕೇಳೋದರ‍್ಲಿ ನನ್ನನ್ನೇ ಬೆರಸಾಡ್ತೈತೆ.

ನಾನು: ರೇಬಿಸ್‌ನ (ಹುಚ್ಚು ನಾಯಿ ರೋಗ) ಕೆಲವು ಲಕ್ಷಣಗಳು ಹೀಗೇ ಇರುತ್ತವೆ!

ನಾನು ಹಾಗೆ ಹೇಳಿದ್ದೇ ತಡ ಎಲ್ಲರೂ ದಿಗಿಲು ಬಿದ್ದು ಮತ್ತೊಮ್ಮೆ ನಾನಾ ತರಹದ ಪ್ರಶ್ನೆ ಮಾಡತೊಡಗಿದರು.

ಸಾರ್, ನಾವೆಲ್ಲರೂ ಎಮ್ಮೆ ಮುಟ್ಟಿದ್ದೇವೆ. ಹಾಲು ಕುಡಿದಿದ್ದೇವೆ. ನಾವೆಲ್ಲರೂ ಹುಚ್ಚು ನಾಯಿ ಇಂಜೆಕ್ಷನ್ ತಗೋಬೇಕಾ?

ಅವರೆಲ್ಲರಿಗೂ ಸಮಜಾಯಿಷಿ ಕೊಡುತ್ತಿರಬೇಕಾದರೆ ನಾವು ಕೊಟ್ಟಿಗೆ ಹೊರಗೆ ನಿಂತಿದ್ದೆವು. ಒಳಗಡೆ ಎಮ್ಮೆ ಬೀಳುವುದು, ಏಳುವುದು, ಓಡುವುದು, ಡಿಕ್ಕಿ ಹೊಡೆಯುವುದು ಮಾಡುತ್ತಾ ವಿಪರೀತ ಗಲಾಟೆ ಮಾಡುತ್ತಿತ್ತು. ಕೊಟ್ಟಿಗೆಯಲ್ಲಿ ಉರಿಯುತ್ತಿದ್ದ ಲೈಟನ್ನು ಆರಿಸಿ, ಕತ್ತಲು ಮಾಡಿ ನಾವೆಲ್ಲರೂ ಮನೆಯೊಳಗೆ ಹೋದೆವು.

“ನೀವು ಎಮ್ಮೆಯನ್ನು ಮುಟ್ಟಿದ್ದರೆ ಏನೂ ಆಗುವುದಿಲ್ಲ. ಹಾಲು ಉಪಯೋಗಿಸಿದ್ದರೆ ಏನೂ ತೊಂದರೆಯಿಲ್ಲ. ರೇಬೀಸ್ ಪ್ರಾಣಿಯ ಜೊಲ್ಲು ನಿಮ್ಮ ರಕ್ತಕ್ಕೆ ತಾಕಿದರೆ ಮಾತ್ರ ತೊಂದರೆ. ನೀವು ಭಯ ಬೀಳಲು ಕಾರಣವೇ ಇಲ್ಲ. ಅಷ್ಟಕ್ಕೂ ಈ ಎಮ್ಮೆಗೆ ರೇಬಿಸ್ ಆಗಿದೆ ಎಂದು ಗ್ಯಾರಂಟಿಯೇನೂ ಇಲ್ಲ. ಅನುಮಾನ ಅಷ್ಟೆ. ರೇಬಿಸ್ ಆದ ಪ್ರಾಣಿ ಕಡ್ಡಾಯವಾಗಿ ಹತ್ತು ದಿನಗಳ ಒಳಗಡೆ ಸತ್ತು ಹೋಗುತ್ತದೆ. ಹತ್ತು ದಿನಗಳ ಒಳಗೆ ಸಹಜ ಸಾವು ಬರದಿದ್ದರೆ ಇದು ರೇಬಿಸ್ ಅಲ್ಲ ಎಂಬುದು ನಿರ್ವಿವಾದ. ಭಯಪಡಬೇಡಿ. ನಾಳೆ ಬೆಳಿಗ್ಗೆ ಬರುತ್ತೇನೆ. ರೇಬಿಸ್ ರೋಗ ಕಾಣಿಸಿಕೊಂಡ ನಂತರ ಮನುಷ್ಯರಲ್ಲಿ ಮತ್ತು ಪ್ರಾಣಿಗಳಲ್ಲಿ ಯಾವುದೇ ಚಿಕಿತ್ಸೆ ಇಲ್ಲ. ನಾಯಿ, ಬೆಕ್ಕುಗಳಲ್ಲಿ ರೋಗ ಬರದಂತೆ ವ್ಯಾಕ್ಸಿನೇಷನ್ (pre infective) ಇದೆ. ಇದನ್ನು ವರ್ಷಕ್ಕೊಮ್ಮೆ ಮಾಡಿಸುವುದು ಕ್ಷೇಮ. ಅಕಸ್ಮಾತ್ ರೇಬಿಸ್ ಪೀಡಿತ ಪ್ರಾಣಿ ಕಡಿದರೆ ಸಹ ವ್ಯಾಕ್ಸಿನೇಷನ್ (post infective) ಇದೆ. ಮನುಷ್ಯರಲ್ಲಿ ರೇಬಿಸ್ ಬರಲು ಹುಚ್ಚು ನಾಯಿ ಕಡಿಯಲೇಬೇಕೆಂದಿಲ್ಲ. ಮೈಮೇಲಿರುವ ಗಾಯಗಳ ಮೇಲೆ ರೇಬಿಸ್ ಪೀಡಿತ ಪ್ರಾಣಿಯ ಜೊಲ್ಲು ತಾಕಿದರೆ ಸಾಕು, ರೋಗ ಬರುತ್ತದೆ.” ಎಂದು ವಿವರವಾಗಿ ಹೇಳುತ್ತಾ ಒಂದು ಗಂಟೆ ಮಾತಾಡುತ್ತ ಕೂತೆ. ಈ ತರಹದ ಮಾತುಕತೆಗಳೇ ನನಗೆ ಅಸಂಖ್ಯಾತ ಜನರನ್ನು ಹತ್ತಿರಕ್ಕೆ ತಂದಿವೆ. ಜನರ ನೂರಾರು ಅನುಮಾನಗಳನ್ನು ಪರಹರಿಸುತ್ತಾ, ಅವಸರವೇ ಇಲ್ಲದೆ ಅವರ ಮನೆಗಳಲ್ಲಿಯೇ ಕುಳಿತು ಒಂದು ಸಲ ಎರಡು ಸಲ ಟೀ ಕುಡಿಯುತ್ತಾ ಇರುವುದು ನನಗೆ ಬಲು ಆಪ್ಯಾಯಮಾನವಾದಂತಹ ಕೆಲಸ.

ಜೋಯಿಸರ ಎಮ್ಮೆಯ ಕಾಯಿಲೆಯ ಬಗ್ಗೆ ಖಚಿತವಾಗಿ ಏನೂ ಗೊತ್ತಾಗಿರಲಿಲ್ಲ. ನಾನು ಎಮ್ಮೆಗೆ ಯಾವ ಚಿಕಿತ್ಸೆಯನ್ನೂ ನೀಡಿರಲಿಲ್ಲ. ಆದರೂ ನಮ್ಮೆಲ್ಲರ ಮಾತುಕತೆಯ ಪರಿಣಾಮವಾಗಿ ಜೋಯಿಸರು ತಮ್ಮ ದುಗುಡ ದುಮ್ಮಾನವನ್ನು ಮರೆತು “ಡಾಕ್ಟ್ರೇ , ನಿಮಗೆ ಚಳಿಯಾಗಲ್ವೇನ್ರೀ? ಕೊರೆಯುವ ಚಳಿ ಇದೆ” ಎಂದು ಸ್ವೆಟ್ರು ಹಾಕಿಕೊಂಡು ನಕ್ಕು ಬೀಳ್ಕೊಟ್ಟರು. ನಾನು ರೂಮಿಗೆ ಹೋಗಿ ತಣ್ಣಗೆ ಕೊರೆಯುತ್ತಿದ್ದ ಊಟ ಮಾಡಿ ಮಲಗಿದೆ. ಎಮ್ಮೆಗೇನಾಗಿರಬಹುದೆಂದು ಯೋಚಿಸುತ್ತ ಹತ್ತಿರ ಸುಳಿಯದ ನಿದ್ದೆಯ ಬೆನ್ನು ಹತ್ತಿದೆ.

ಮರುದಿನ ಬೆಳಿಗ್ಗೆ ಏಳು ಗಂಟೆಗೆಲ್ಲ ಜೋಯಿಸರ ಮನೆಗೆ ಹೋದೆ. ಎಮ್ಮೆ ಎಲ್ಲ ಆರ್ಭಟವನ್ನೂ ನಿಲ್ಲಿಸಿತ್ತು. ಹಿರಿಯಣ್ಣ ಆಗಲೇ ಹಾಲು ಕರೆದಾಗಿತ್ತು. ಒಂದು ಹೊರೆ ಹುಲ್ಲನ್ನು ಆ ಎಮ್ಮೆಯೊಂದಕ್ಕೇ ಹಾಕಿ ಖುಷಿಯಿಂದಿದ್ದ ಹಿರಿಯಣ್ಣ. ಎಮ್ಮೆ ಹುಲ್ಲು ತಿನ್ನುತ್ತಿತ್ತು. ಜೋಯಿಸರ ಮನೆಯವರೆಲ್ಲ ಆಶ್ಚರ್ಯದಿಂದ ಎಮ್ಮೆ ಸುತ್ತ ನೆರೆದಿದ್ದರು. “ಎಮ್ಮೆಗೆ ರೇಬಿಸ್ ಅಂತ ಹೆದರಿಬಿಟ್ಟಿದ್ವಿ ಸಾರ್” ಎಂದರು ಜೋಯಿಸರು ಮತ್ತು ಮೊಮ್ಮಕ್ಕಳು.

“ಯಾಕೆ ಸಾರ್ ರಾತ್ರಿ ದೆವ್ವ ಹಿಡಿದಂಗ್ ಆಡ್ತು?” ಎಂದ ಹಿರಿಯಣ್ಣ.

“ಗೊತ್ತಿಲ್ಲಪ್ಪ. ದೆವ್ವಕ್ಕೇ ಗೊತ್ತರ‍್ಬೇಕು. ಬಹುಶಃ ಆಗುಬಾರದ್ದನ್ನು ತಿಂದು ಅಲರ್ಜಿಯಾಗಿತ್ತೋ? ಹೊಟ್ಟೆ ನುಲಿತ (colic) ಕಾಣಿಸಿಕೊಂಡಿತ್ತೋ? ಇದ್ದಕ್ಕಿದ್ದಂತೆಯೇ ಆದ ಭಾರೀ ಅನಿರೀಕ್ಷಿತ ಶಬ್ಧಕ್ಕೋ, ದೃಶ್ಯಕ್ಕೋ ಹೆದರಿ ದಿಗಿಲು ಬಿದ್ದಿತ್ತೋ? ಏನಾಗಿತ್ತೋ?”

ಹಿರಿಯಣ್ಣ “ತಿಕದಲ್ಲಿ ತೊಣಚಿ ಏನಾರ ಹೊಕ್ಕಿತ್ತೇನೋ ಸಾರ್” ಎಂದ.

ನಾನು “ಇಲ್ಲಪ್ಪ, ಅದೆಲ್ಲ ಸುಳ್ಳು. ತೊಣಚಿ ಎನ್ನುವ ಹುಳು ಇಲ್ಲವೇ ಇಲ್ಲ. ಅದು ಎಮ್ಮೆ ಅಥವಾ ದನಗಳ ಗುದದ್ವಾರ ಹೋಗುವುದೂ ಸುಳ್ಳು. ಅದು ತಪ್ಪು ತಿಳುವಳಿಕೆ ಅಷ್ಟೆ. ಬರೀ ತಮಾಷಿ ಇರ‍್ಬಹುದು.”

ಎಮ್ಮೆಯ ಮೈ ಮೇಲೆ ಆಗಿದ್ದ ಗಾಯಗಳಿಗೆ ಹಚ್ಚಲು ಟಿಂಚರ್ ಮತ್ತು ಬೇವಿನ ಎಣ್ಣೆಗಳನ್ನು ಆಸ್ಪತ್ರೆಗೆ ಬಂದು ತೆಗೆದುಕೊಂಡು ಹೋಗಲು ಹಿರಿಯಣ್ಣನಿಗೆ ತಿಳಿಸಿ ವಾಪಸ್ಸಾದೆ.

ಒಂದೆರಡು ದಿನಗಳ ನಂತರ ಜೋಯಿಸರ ಅಳಿಯಂದಿರಾದ ವರದರಾಜುರವರು ಮಾತಿಗೆ ಸಿಕ್ಕರು. ಎಮ್ಮೆ ಪುರಾಣವನ್ನು ವಿವರವಾಗಿ ಹೇಳಿದೆ. ಅವರಿಗೆ ತಮಾಷೆ ಅಂದ್ರೆ ಬಹಳ ಇಷ್ಟ. ಸಿಕ್ಕಾಪಟ್ಟೆ ನಕ್ಕರು. ನೀವು ಇದನ್ನೆಲ್ಲ ಬರೆಯಬೇಕು ಎಂದು ಒತ್ತಾಯಿಸಿದರು. ಈಗ ಸುಮಾರು ಮೂವತ್ತೈದು ವರ್ಷಗಳ ಮೇಲೆ ಬರೆಯುತ್ತಿದ್ದೇನೆ !

ರಾಮಾಜೋಯಿಸರ ಮತ್ತೊಬ್ಬ ಅಳಿಯಂದಿರೇ ಕನ್ನಡದ ಪ್ರಖ್ಯಾತ ಕಾದಂಬರಿಕಾರರಾದ ಎಸ್.ಎಲ್. ಭೈರಪ್ಪ!

‍ಲೇಖಕರು Avadhi

December 22, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: