’ಯೂನಿಕೋಡ್, ಮುಕ್ತ ಸಂಕೇತದ ತಂತ್ರಾಂಶ ಇಷ್ಟಾದರೆ ಸಾಕೆ?’ – ಬಿ ಆರ್ ಸತ್ಯನಾರಾಯಣ

ಬಿ ಆರ್ ಸತ್ಯನಾರಾಯಣ


ಕನ್ನಡ ತಂತ್ರಾಶದ ಬೇಡಿಕೆಯೂ ಕೊನೆಗೊಂಡು ಕನ್ನಡದ ಅಂಗಳದಲ್ಲಿ ಹಲವಾರು ಕನ್ನಡ ತಂತ್ರಾಂಶಗಳು ಓಡಾಡುತ್ತಿರುವುದು ಎಲ್ಲರಿಗೂ ತಿಳಿದಿದೆ. ಆದರೆ, ಅವುಗಳಲ್ಲಿ ಏಕರೂಪತೆಯಿಲ್ಲ ಹಾಗೂ ಮುಕ್ತ ಸೋರ್ಸ್ ಕೋಡ್ ಹೊಂದಿರುವ ತಂತ್ರಾಂಶದ ಕನಸು ಹಾಗೇ ಉಳಿದು ಹೋಗಿದೆ. ಒಂದು ತಂತ್ರಾಂಶದಲ್ಲಿ ಸಿದ್ಧಪಡಿಸಿದ ಫೈಲುಗಳು ಇನ್ನೊಂದು ತಂತ್ರಾಂಶವಿರುವ ಕಂಪ್ಯೂಟರುಗಳಲ್ಲಿ ತೆರೆದುಕೊಳ್ಳುವುದಿಲ್ಲ. ತೆರೆದುಕೊಂಡರೂ ಓದಲು ಸಾಧ್ಯವಿಲ್ಲ. ಕನ್ನಡದ ಬರಹ ತಂತ್ರಾಂಶದಲ್ಲಿ ಬರೆದ ಬರಹಗಳು, ಬರಹ ತಂತ್ರಾಂಶವಿಲ್ಲದ ಕಂಪ್ಯೂಟರುಗಳಲ್ಲಿ ತೆರೆದುಕೊಳ್ಳುತ್ತಿರಲಿಲ್ಲ. ಅದಕ್ಕಿಂತ ಹೆಚ್ಚಾಗಿ ಟೈಪು ಮಾಡುವುದಕ್ಕೆ ಬಳಸುವ ಕೀಗಳಲ್ಲಿಯೇ ಏಕರೂಪತೆಯಿಲ್ಲ. ಬರಹ ತಂತ್ರಾಂಶದಲ್ಲಿ ’ಗದಗ’ಎಂದು ಬರೆಯಲು ’gadaga’ಎಂದು ಟೈಪ್ ಮಾಡುತ್ತೇವೆ. ಆದರೆ ಅದೇ ಪದವನ್ನು ನುಡಿ ತಂತ್ರಾಂಶದಲ್ಲಿ ಬರೆಯಲು ’gdg’ ಎಂದು ಟೈಪ್ ಮಾಡುತ್ತೇವೆ. ಕನ್ನಡದ್ದೇ ಆದ ಒಂದು ಕೀಲಿಮಣೆ ವಿನ್ಯಾಸ ಇದುವೆರಗೂ ರೂಪುಗೊಂಡಿಲ್ಲ! ಹಾಗೆ ನೋಡಿದರೆ ಇದು ಕೇವಲ ಕನ್ನಡ ಭಾಷೆಯೊಂದರ ಸಮಸ್ಯೆ ಅಲ್ಲವೆ ಅಲ್ಲ. ಇದೊಂದು ಜಾಗತಿಕ ಸಮಸ್ಯೆ. ಎಲ್ಲಾ ಭಾಷೆಗಳು, ಮುಖ್ಯವಾಗಿ ಇಂಗ್ಲೀಷೇತರ ಭಾಷೆಗಳು ಈ ಸಮಸ್ಯೆಯನ್ನು ಎದುರಿಸಿವೆ. ಆದರೆ ಕಾಲದ ಪರೀಕ್ಷೆಯಲ್ಲಿ ಗೆದ್ದು ಹಲವಾರು ಭಾಷೆಗಳು ಅದರ ಮಿತಿಯನ್ನು ದಾಟಿ ಒಂದು ಏಕರೂಪದ ಶಿಷ್ಟತೆಗೆ ಒಳಪಟ್ಟಿವೆ.

ದುರಂತವೆಂದರೆ ಕನ್ನಡದಲ್ಲಿ ಯೂನಿಕೋಡ್ ಬೇಡಿಕೆ ಆರಂಭವಾಗಿದ್ದೇ ತುಂಬಾ ನಿಧಾನವಾಗಿ. ಜಗತ್ತಿನಾದ್ಯಂತ ಬೇರೆ ಭಾಷೆಗಳಲ್ಲಿ, ಅಷ್ಟೇ ಏಕೆ ಭಾರತೀಯ ಇನ್ನಿತರ ಭಾಷೆಗಳಲ್ಲಿ ಅವು ಜನಬಳಕೆಗೆ ಕೈಗೆಟಕುತ್ತಿದ್ದಾಗ ಕನ್ನಡದಲ್ಲಿಯೂ ಯೂನಿಕೋಡ್ ಅವಶ್ಯಕತೆಗೆ ಬೇಡಿಕೆ ಬಂತು. ಆದರೆ ಈ ಬೇಡಿಕೆ ಅಲ್ಲೊಂದು ಇಲ್ಲೊಂದು ಸಣ್ಣ ದನಿಯಾಗಿ ಹೊಮ್ಮಿತೆ ಹೊರತು, ಒಂದು ಇಡೀ ಸಮುದಾಯದ ದನಿಯಾಗಿ ಹೊಮ್ಮಲಿಲ್ಲ ಹಾಗೂ ತಲುಪಬೇಕಾದವರಿಗೆ ತಲುಪಲಿಲ್ಲ. ಅಥವಾ ಕೇಳಿಸಿಕೊಳ್ಳಬೇಕಾದವರಿಗೆ ಅದು ಬೇಕಾಗಿಯೂ ಇರಲಿಲ್ಲ.
ಕನ್ನಡ ಗಣಕ ಪರಿಷತ್ತು ಅಭಿವೃದ್ಧಿ ಪಡಿಸಿದ್ದ, ಆಗ್ಗೆ ಸ್ವಲ್ಪ ಸುಧಾರಿತ ಎಂದೇ ಹೇಳಬಹುದಾಗಿದ್ದ ನುಡಿ ತಂತ್ರಾಂಶವನ್ನೆ ಕನ್ನಡದ ಶಿಷ್ಟತೆಯನ್ನಾಗಿ ಬಳಸಬೇಕೆಂದು ಮಿಲೇನಿಯಮ್ಮಿನ ತುದಿಯಲ್ಲಿ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಅಂದಿನಿಂದ ಸರ್ಕಾರದ ಎಲ್ಲಾ ಕಡತಗಳು ನುಡಿ ತಂತ್ರಾಂಶವನ್ನು ಬಳಸಿಯೇ ಸಿದ್ಧವಾಗತೊಡಗಿದವು. ಆದರೆ ಆ ಕಡತಗಳು ಬೇರೆ ಕಂಪ್ಯೂಟರುಗಳಲ್ಲಿ ತೆರೆದುಕೊಳ್ಳುವುದು ಓದುವುದು ಸಾಧ್ಯವಿರಲಿಲ್ಲ. ನುಡಿ ತಂತ್ರಾಂಶವಿದ್ದರಷ್ಟೇ ಅದು ಸಾಧ್ಯವಿತ್ತು. ಅಷ್ಟು ಹೊತ್ತಿಗೆ ಜಾಗತಿಕವಾಗಿ ಯೂನಿಕೋಡ್ ಬಗ್ಗೆ ಮೂಡಿದ್ದ ಎಚ್ಚರ, ಬೇಡಿಕೆ ಕನ್ನಡಿಗರನ್ನೂ ಯೂನಿಕೋಡ್ ಬೇಡಿಕೆಗೆ ಪ್ರೇರೇಪಿಸಿತು ಎನ್ನಬಹುದು.

ಕನ್ನಡಿಗರ ಈ ಕ್ಷೀಣ ದನಿಗೆ ಒಂದು ಬಲ ಬಂದಿದ್ದು, ಈ ವಿಷಯದಲ್ಲಿ ಪೂರ್ಣಚಂದ್ರ ತೇಜಸ್ವಿ ಪ್ರವೇಶಿಸಿದ ಮೇಲೆ ಎನ್ನಬಹುದು. ಶ್ರೀಯುತ ಪವನಜ ಮೊದಲಾದ ಕಂಪ್ಯೂಟರ್ ತಂತ್ರಜ್ಞರ ಆಸಕ್ತಿಯ ಫಲವಾಗಿ ತೇಜಸ್ವಿ ರಂಗಪ್ರವೇಶ ಮಾಡಿದರು. ಅದನ್ನು ಸರ್ಕಾರದ ಮಟ್ಟದಲ್ಲಿ ಗಮನಿಸುವಂತೆ ಮಾಡಲು, ಆಗ ವಿಧಾನ ಪರಿಷತ್ ಸದಸ್ಯರುಗಳಾಗಿದ್ದ ಶ‍್ರೀಯುತರಾದ ಮುಖ್ಯಮಂತ್ರಿ ಚಂದ್ರು, ಎಲ್. ಹನುಮಂತಯ್ಯ, ಚಂದ್ರಶೇಖರ ಕಂಬಾರ, ಸಿದ್ಧಲಿಂಗಯ್ಯ ಮುಂತಾದವರು ನೆರವಾದರು.
ಅಷ್ಟಕ್ಕೆ ತೃಪ್ತರಾಗದ ತೇಜಸ್ವಿ ತಮ್ಮ ಸ್ವಪ್ರಯತ್ನದಿಂದ ಕುವೆಂಪು ಕನ್ನಡ ತಂತ್ರಾಂಶವೊಂದನ್ನು ಅಭಿವೃದ್ಧಿ ಪಡಿಸುವ ಕನಸು ಕಂಡರು. ಕನ್ನಡದ್ದೇ ಆದ ಒಂದು ಕೀಲಿಮಣೆ ವಿನ್ಯಾಸ, ಯೂನಿಕೋಡ್ ಫಾಂಟ್ ಅಭಿವೃದ್ಧಿ ಅವರ ಕನಸಾಗಿತ್ತು. ಒಂದು ಸಮಗ್ರವೆನ್ನಬಹುದಾದ ಕನ್ನಡ ತಂತ್ರಾಂಸವನ್ನು ಅಭಿವೃದ್ಧಿಪಡಿಸುವುದು ಕೇವಲ ಸಾಫ್ಟವೇರ್ ತಂತ್ರಜ್ಞರಿಂದ ಆಗುವಂಥದ್ದಲ್ಲ. ಅದಕ್ಕೆ ಭಾಷಾ ಶಾಸ್ತ್ರಜ್ಞರು, ವ್ಯಾಕರಣತಜ್ಞರು ಕೆಲಸ ಮಾಡಬೇಕಾಗಿತ್ತು. ಇದೆಲ್ಲವನ್ನು ಅರ್ಥಮಾಡಿಕೊಳ್ಳುವ, ವ್ಯವಧಾನ ಸರ್ಕಾರಕ್ಕಿರಲೇ ಇಲ್ಲ. ಇದನ್ನೆಲ್ಲ ಮನಗಂಡೇ ಅವರು, ಕೆಲವು ಆಸಕ್ತ ತಂತ್ರಜ್ಞರನ್ನು ಸೇರಿಸಿಕೊಂಡು ಕೆಲಸ ಆರಂಭಿಸಿಯೇ ಬಿಟ್ಟರು. ಹಾಸನದ ಉತ್ಸಾಹಿ ತರುಣ ತಂತ್ರಜ್ಞರಾದ ಶ್ರೀ ಮಂಜಾಚಾರಿ, ಆನಂದ್, ಸುಧೀರ್ ಮೊದಲಾದವರು ತೇಜಸ್ವಿಯ ಕನಸನ್ನು ನನಸು ಮಾಡಲು ಪಣತೊಟ್ಟು ಕೆಲಸ ಮಾಡಿದ್ದರು. ಈ ಎಲ್ಲಾ ಪ್ರಯತ್ನಗಳಿಗೆ ಒಂದು ಸಾಂಸ್ಥಿಕ ರೂಪ ಕೊಡುವ ಅಗತ್ಯತೆಯನ್ನು ತೇಜಸ್ವಿ ಮನಗಂಡಿದ್ದರು. ಅದಕ್ಕಾಗಿ ಕನ್ನಡ ವಿಶ್ವವಿದ್ಯಾಲಯವನ್ನು ಸಂಪರ್ಕಿಸಿ, ಯೂನಿಕೋಡಿನ ಮಹತ್ವವನ್ನು ಮನಗಾಣಿಸಿ, ಅದರ ಸಹಯೋಗದಲ್ಲಿಯೇ ಕುವೆಂಪು ಕನ್ನಡ ತಂತ್ರಾಂಶದ ಬೆಟಾ ಆವೃತ್ತಿಯನ್ನು ತಯಾರಿಸುವಲ್ಲಿ ಯಶಸ್ವಿಯಾದರು. ಆ ತಂತ್ರಾಂಶದಲ್ಲಿ ಯಾವುದೇ ಕನ್ನಡ ತಂತ್ರಾಂಶದ ನೆರವಿನಿಂದ ತಯಾರಾದ ಫೈಲುಗಳನ್ನು ಪರಸ್ಪರ ಬದಲಾಯಿಸಿಕೊಳ್ಳಬಹುದಾದ ಪರಿವರ್ತಕಗಳನ್ನು ಸೃಷ್ಟಿಸಲಾಗಿತ್ತು. ಜೊತೆಗೆ ನಾಲ್ಕು ಬಗೆಯ ಯೂನಿಕೋಡ್ ಅಕ್ಷರ ವಿನ್ಯಾಸಗಳನ್ನು ಸೃಷ್ಟಿಸಲಾಗಿತ್ತು. ಕನ್ನಡ ತಂತ್ರಾಂಶದ ಮಟ್ಟಿಗೆ ಇದೊಂದು ಕ್ರಾಂತಿಕಾರಕ ಬದಲಾವಣೆಯಾಗಿತ್ತು. ಕನ್ನಡ ವಿಶ್ವವಿದ್ಯಾಲಯದಿಂದ ನಾಡೋಜ ಪುರಸ್ಕಾರ ಸ್ವೀಕರಿಸುವಂತೆ ಕೇಳಿದಾಗ, ಕನ್ನಡಕ್ಕೊಂದು ಒಳ್ಳೆಯ ತಂತ್ರಾಂಶ ರೂಪಿಸಿದರೆ ಅದೇ ನನಗೆ ನೀವು ಕೊಡುವ ನಾಡೋಜ ಎಂದಿದ್ದರಂತೆ ತೇಜಸ್ವಿ. ಅದೇನೆ ಇರಲಿ, ತೇಜಸ್ವಿಯವರ ಕೊನೆಗಾಲದಲ್ಲಿ ಕನ್ನಡ ತಂತ್ರಾಂಶ, ಮತ್ತು ಯೂನಿಕೋಡಿಗಾಗಿ ಹಂಬಲಿಸುತ್ತಿದ್ದರು ಎಂಬುದು, ಮೂಡಿಗೆರೆ ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾಡಿದ ಭಾಷವನ್ನು ಗಮನಿಸಿದವರಿಗೆ ಗೊತ್ತೇ ಇರುತ್ತದೆ. ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯ ಮಾತು ಬಿಟ್ಟ ತೇಜಸ್ವಿ ಭಾಷೆ ಎಲೆಕ್ಟ್ರಾನಿಕ್ ಭಾಷೆಯಾಗಿ ಬದಲಾಗುತ್ತಿರುವ ಸನ್ನಿವೇಶ, ಈ-ಕಾಮರ್ಸ್, ಈ-ಆಡಳಿತ, ಓಪನ್ ಸೋರ್ಸ್ ಕೋಡ್, ಯೂನಿಕೋಡ್ ಮುಂತಾದವುಗಳ ಬಗ್ಗೆ ಮಾತನಾಡಿದ್ದರು. ಸಾಹಿತ್ಯ ಸಮ್ಮೇಳನದ ಹೆಸರಿನಲ್ಲಿ ಕೋಟಿಗಟ್ಟಲೆ ಹಣ ಖರ್ಚು ಮಾಡುವ ಸರ್ಕಾರಕ್ಕೆ ತಂತ್ರಾಂಶ ಅಭಿವೃದ್ಧಿಗೆ ಹಣ ಕೊಡದಿರುವುದೇ ತೇಜಸ್ವಿಯವರಿಗೆ ಯಕ್ಷಪ್ರಶ್ನೆಯಾಗಿತ್ತು. ಮೈಕ್ರೊಸಾಫ್ಟ್ ಕಂಪೆನಿಯೊಂದಿಗೆ ಸರ್ಕಾರ ಕನ್ನಡ ತಂತ್ರಾಂಶ ಅಭಿವೃದ್ಧಿಗೆ ಒಪ್ಪಂದ ಮಾಡಿಕೊಂಡಾಗ ತೇಜಸ್ವಿ ಅದನ್ನು ಖಂಡಿಸಿದ್ದರು.
ಈಗ ಕುವೆಂಪು ಕನ್ನಡ ತಂತ್ರಾಂಶದ ಎರಡನೆಯ ಸುಧಾರಿತ ಆವೃತ್ತಿ ಹೊರ ಬಂದಿದೆ. ಈಗ ಬರಹ, ನುಡಿ ಮೊದಲಾದ ತಂತ್ರಾಂಶಗಳಲ್ಲೂ ಯೂನಿಕೋಡ್ ಸೌಲಭ್ಯವನ್ನು ಅಳವಡಿಸಲಾಗಿದೆ. ಖಾಸಗಿಯಾಗಿ, ಗೂಗಲ್, ಯಾಹೂ ಮೊದಲಾದ ಸಂಸ್ಥೆಗಳು ಒಂದೇ ಕೀಲಿಯ ಬಳಕೆಯಿಂದ ಕನ್ನಡ ಅಕ್ಷರವನ್ನು ಮೂಡಿಸುವ ಅವಕಾಶವನ್ನು ಕಲ್ಪಿಸಿವೆ. ಆದರೆ ಅವುಗಳಲಲ್ಲಿ ಹಲವಾರು ಕೊರತೆಗಳಿವೆ. ಕೀಲಿಮಣೆಯಲ್ಲಿ ಏಕರೂಪತೆಯಿಲ್ಲ. ಸೋರ್ಸ್ ಕೋಡ್ ಮುಕ್ತವಾಗಿಲ್ಲ. ಅಲ್ಲಿರುವ ಯೂನಿಕೋಡ್ ಫಾಂಟುಗಳಲ್ಲಿ ಹೆಚ್ಚಿನ ವೈವಿಧ್ಯತೆಯೂ ಇಲ್ಲ. ಜೊತೆಗೆ ಗೂಗಲ್ ಯಾಹೂ ಮುಂತಾದವು ಒದಗಿಸಿರುವ ಸೌಲಭ್ಯ ಆಯಾಯ ಅಂತರ್ಜಾಲದ ಪೂಟಗಳಿಗೆ ಮಾತ್ರ ಸೀಮಿತ!
ನುಡಿ ತಂತ್ರಾಂಶದ ಮಿತಿಗಳನ್ನು ತಂತ್ರಜ್ಞರಿಂದ ಅರಿತ ಸರ್ಕಾರ, ಡಾ. ಚಿದಾನಂದ ಗೌಡ ಅವರ ನೇತೃತ್ವದಲ್ಲಿ ಒಂದು ಸಮಿತಿಯನ್ನು ಮಾಡಿತ್ತು. ಆ ಸಮಿತಿಯು `ಕನ್ನಡದ ಕೆಲಸಗಳಿಗೆ ಯೂನಿಕೋಡ್ ಅನ್ನು ಶಿಷ್ಟತೆ ಎಂದು ಅಧಿಸೂಚನೆ ಹೊರಡಿಸಬೇಕು. ಕನ್ನಡದ ಎಲ್ಲ ವೆಬ್‌ಸೈಟ್‌ಗಳೂ ಯೂನಿಕೋಡ್‌ನಲ್ಲೇ ಇರುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು` ಎಂಬುದರ ಜೊತೆಗೆ ಇನ್ನೂ ಇಪ್ಪತ್ತು ಶಿಫಾರಸುಗಳನ್ನು ಸಮಿತಿ 2011ರಲ್ಲಿಯೇ ಸರ್ಕಾರಕ್ಕೆ ಸಲ್ಲಿಸಿತ್ತು.
ಕೇಂದ್ರ ಸರ್ಕಾರದ ಮಟ್ಟದಲ್ಲಿ ಯೂನಿಕೋಡ್ ಶಿಷ್ಟತೆಯನ್ನು ಪಾಲಿಸುವಂತೆ 2009ರಲ್ಲಿಯೇ ಅಧಿಸೂಚನೆ ಹೊರಡಿಸಿತ್ತು. ಆದರೆ ರಾಜ್ಯ ಸರ್ಕಾರದ ಮಟ್ಟದಲ್ಲಿ ಯಾವುದೇ ಅಭಿವೃದ್ಧಿ ಆಗಲೇ ಇಲ್ಲ. ಸಿದ್ಧತೆಯೂ ಆಗಿರಲಿಲ್ಲ. 2012 ಫೆಬ್ರವರಿಯ ವೇಳೆಗೆ ಟೆಂಡರ್ ಕರೆದು ಯೂನಿಕೋಡ್ ಫಾಂಟುಗಳ ಅಭಿವೃದ್ಧಿ ಮತ್ತು ಇನ್ನಿತರೆ ಕೆಲಸಗಳಿಗೆ ಸರ್ಕಾರ ಹೆಜ್ಜೆ ಇಟ್ಟಿತಾದರೂ ಕೆಲಸ ಮಾತ್ರ ವೇಗ ಪಡೆದುಕೊಳ್ಳಲೇ ಇಲ್ಲ. ಸಿದ್ಧರಾಮಯ್ಯನವರು ಅಧಿಕಾರ ವಹಿಸಿಕೊಂಡ ಹೊಸದರಲ್ಲಿ, ಮುಖ್ಯಮಂತ್ರಿ ಚಂದ್ರು ಅವರು ವಿಷಯ ಪ್ರಸ್ತಾಪಿಸಿದ್ದರಿಂದ ಎಚ್ಚೆತ್ತುಕೊಂಡು ಇಲಾಖಾ ಕಾರ್ಯದರ್ಶಿಯವರಿಗೆ “ ಏನ್ರಿ ಅದು, ಏನೋ ತಂತ್ರಾಂಶ ಇನ್ನೂ ಆಗಿಲ್ಲ ಅಂತ ಹೇಳ್ತಿದ್ದಾರಲ್ಲ! ಏನದು, ಏನ್‌ ದುಡ್ಡಿಲ್ವಾ ಹೇಗೆ’ ಎಂದು ಗದರಿದ್ದಷ್ಟೇ ಬಂತು. ಕೆಲಸಕ್ಕೆ ದೊರೆಯಬೇಕಾಗಿದ್ದ ವೇಗ ದೊರೆಯಲೇ ಇಲ್ಲ.

ತೇಜಸ್ವಿ ನಿಧನದ ನಂತರ ಯೂನಿಕೋಡ್ ವಿಷಯವನ್ನು ಜೀವಂತವಾಗಿಟ್ಟವರು ಶ್ರೀ ಕಂಬಾರರು. ಕುವೆಂಪು ಕನ್ನಡ ತಂತ್ರಾಂಶ ಅಭಿವೃದ್ಧಿಗೆ ತಮ್ಮ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯಿಂದ ಹಣವನ್ನು ಕಂಬಾರರು ಒದಗಿಸಿದ್ದರು. ಆದರೆ, ಅವರದು ಒಂಟಿದನಿ. ಅರಣ್ಯರೋಧನ ಅನ್ನುವಷ್ಟರ ಮಟ್ಟಿಗೆ ಆಗಾಗ, ಸಿಕ್ಕ ಸಿಕ್ಕ ವೇದಿಕೆಗಳಲ್ಲೆಲ್ಲಾ ಅವರು ಈ ವಿಷಯವನ್ನು ಪ್ರಸ್ತಾಪಿಸುತ್ತಿದ್ದರು. ಆದರೆ ಸರ್ಕಾರ ಮಾತ್ರ ಮೀನಮೇಷ ಎಣಿಸುತ್ತಲೇ ಇದೆ. ಇತ್ತ ತೇಜಸ್ವಿಯವರ ಕನಸಿನ ಸಾಕಾರಕ್ಕೆ ಟೊಂಕ ಕಟ್ಟಿ ನಿಂತಿದ್ದ ಹಾಸನ ಮಾರುತಿ ಸಂಸ್ಥೆಯು ಕನ್ನಡದ್ದೇ ಆದ ಒಂದುದು ಕೀಲಿಮಣೆ ವಿನ್ಯಾಸವನ್ನು ಹಾಗೂ ಹತ್ತಕ್ಕೂ ಹೆಚ್ಚು ಯೂನಿಕೋಡ್ ಫಾಂಟುಗಳನ್ನು ಅಭಿವೃದ್ಧಿಪಡಿಸಿದೆ. ಕೀಲಿಮಣೆಗೆ ತೇಜಸ್ವಿಯವರ ಹೆಸರನ್ನೇ ಕೊಟ್ಟಿದೆ.
ಕೇವಲ ಯೂನಿಕೋಡ್, ಮುಕ್ತ ಸಂಕೇತದ ತಂತ್ರಾಂಶ, ಕನ್ನಡದ ಕೀಲಿಮಣೆ ಇಷ್ಟಾದರೆ ಸಾಕೆ? ತಂತ್ರಜ್ಞಾನ ಎಂಬುದು ಅತ್ಯಂತ ಕ್ಷಿಪ್ರಗತಿಯಲ್ಲಿ ಬದಲಾಗುತ್ತಿದೆ. ಕಂಪ್ಯೂಟರ್ ವಿಷಯವಾಗಿ ಕನ್ನಡ ಭಾಷಾ ಬಳಕೆಯ ಬಗ್ಗೆ ಯೋಚಿಸುವುದು ಈಗ ಹಳೆಯದಾಗಿದೆ. ಈಗ ಏನಿದ್ದರೂ ಸ್ಮಾರ್ಟ್ ಫೋನುಗಳ ಕಾಲ. ಟ್ಯಾಬ್ಲೆಟ್, ಫ್ಯಾಬ್ಲೆಟ್ ಮೊದಲಾದವೂ ಕನ್ನಡಿಗರ ಕೈಯಲ್ಲಿವೆ. ಅವುಗಳಲ್ಲಿ ಕನ್ನಡ ಬಳಕೆಯಾಗಬೇಕಿದೆ. ಅವುಗಳಲ್ಲಿಯೇ ಓದಲು ಅನುಕೂಲವಾಗಿರುವಂತೆ ಕನ್ನಡದ ಈ-ಪುಸ್ತಕಗಳೂ ಸಿಗುವಂತಾಗಬೇಕು. ಆಧುನಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಇಂಗ್ಲಿಷ್ ಬಳಕೆಯಾಗುತ್ತಿರುವಷ್ಟೇ ಪರಿಣಾಮಕಾರಿಯಾಗಿ ಕನ್ನಡವೂ ಬಳಕೆಯಾದರಷ್ಟೆ ಕನ್ನಡದ ಭಾಷೆಗೆ ಉಳಿಗಾಲ. ಇಲ್ಲದಿದ್ದರೆ, ತೇಜಸ್ವಿ ಹೇಳಿದಂತೆ ಕನ್ನಡದ ದಿನಬಳಕೆ ಸ್ಥಗಿತವಾಗುತ್ತಾ ಹೋಗುತ್ತದೆ.
 

‍ಲೇಖಕರು G

January 23, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. h a patil

    – ಯೂನಿಕೋಡ್ ಮುಕ್ತ ತಂತ್ರಾಂಶದ ಸಂಕೇತ ಇಷ್ಟಾದರೆ ಸಾಕೆ ಎಂದಿದ್ದೀರಿ, ಸಾಲದು ಕಾಲ ಕಾಲಕ್ಕೆ ಆಗುವ ಬದಲಾವಣೆಗಳನ್ನೊಳಗೊಂಡು ಕನ್ನಡ ಬಳಕೆದಾರರಿಗೆ ಮುಕ್ತವಾಗಬೇಕು ಅಂದರೆ ಮಾತ್ರ ಅದು ತನ್ನ ಪ್ರಸ್ತುತತೆ ಯನ್ನು ಉಳಿಸಿಕೊಂಡು ಹೋಗಲು ಸಾಧ್ಯ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: