ಕೆ ಪುಟ್ಟಸ್ವಾಮಿ ನೋಡಿದ ‘ನಲ್ ಪಗಲ್ ನೇರತ್ತು ಮಯಕಂ’

ಕೆ ಪುಟ್ಟಸ್ವಾಮಿ

ನಲ್ ಪಗಲ್ ನೇರತ್ತು ಮಯಕಂ- ಇತ್ತೀಚಿನ ದಿನಗಳಲ್ಲಿ ಇಷ್ಟೊಂದು ಕುತೂಹಲ ಕೆರಳಿಸಿದ ಚಿತ್ರ ಇನ್ನೊಂದಿಲ್ಲ. ಸಿನೆಮಾ ನಿರೂಪಣೆಗೆ ಹೊಸ ಭಾಷೆ ಮತ್ತು ಲಯವನ್ನು ಹುಡುಕುವ ಲಿಯೋ ಜೋ ಪೆಳ್ಳಿಸೆರಿ ಅವರ ಹಿಂದಿನ ಚಿತ್ರಗಳಿಗಿಂತ ವಿಭಿನ್ನವಾಗಿದೆ. ಅಂಗಮಲೆ ಡೈರೀಸ್ ನಲ್ಲಿನ ಕಟ್ಟುಹರಿದ ಪಂಜಿನಂಥ ಹುಡುಗರ ಹುಚ್ಚು ಸಾಹಸಗಳು ಪ್ರತಿಬಿಂಬಿಸುವ ಸಮಾಜದ ದರ್ಶನ ಇಲ್ಲಿಲ್ಲ. ಎರಡು ಸಂಜೆಗಳ ನಡುವಿನ ಅವಧಿಯಲ್ಲಿ ಒಂದು ಸಾವಿನ ಸುತ್ತ ನಡೆಯುವ ಅಸಂಗತ ಘಟನೆಗಳು ಸೃಷ್ಟಿಸುವ ಮಾಯಾಲೋಕದ “ಈ .ಮಾ. ಯೋ.” ಚಿತ್ರದ ನಿರೂಪಣೆಯ ಮತ್ತೊಂದು ರೂಪ ಇದಲ್ಲ. ಅಥವಾ ಕಡಿಯಲು ತಂದ ಒಂದು ಕೋಣನ ಬೆನ್ನಟ್ಟುವ ದೃಶ್ಯಗಳ ಮೂಲಕ ಮಾನವನ ಆದಿಮ ಹಿಂಸಾಭಾವವನ್ನು ಅನಾವರಣಗೊಳಿಸಿ ಚಕಿತಗೊಳಿಸುವ “ಜಲ್ಲಿಕಟ್ಟು” ಚಿತ್ರದಲ್ಲಿರುವ ಧಾವಂತ ದೃಶ್ಯಗಳ ಸರಮಾಲೆ ಇಲ್ಲಿಲ್ಲ. ಇದು ಶೀರ್ಷಿಕೆಯಂತೆ ನೋಡುವ ಪ್ರೇಕ್ಷಕನೂ ಅರೆ ಎಚ್ಚರ-ನಿದ್ರೆಯ ಅವಸ್ಥೆಗೆ ಜಾರಿ ಮಾಯಾಲೋಕವೊಂದನ್ನು ದರ್ಶಿಸುವಂತೆ ಮಾಡುವ ನಿರೂಪಣೆ. ಸಮತಟ್ಟಾದ ಪ್ರದೇಶದಲ್ಲಿ ವಿಶಾಲಪಾತ್ರದ ನದಿಯೊಂದು ನಿಧಾನಗತಿಯಲ್ಲಿ ಹರಿಯುವಂತೆ ಚಿತ್ರ ಸಾಗುತ್ತದೆ.

ಎರಡು ರಾಜ್ಯದ ಎರಡು ಭಾಷೆಯ ಜನರು ದೇಶ ಭಾಷೆಗಳನ್ನು ಮೀರಿ ಅಸಂಗತ ಸಂದರ್ಭದಲ್ಲಿಸಿಲುಕಿಕೊಂಡರೂ ಅವಸರವಿಲ್ಲದೆ ಸಾವಧಾನವಾಗಿ ವಿರಾಟ್ ಲೀಲೆಯೊಂದರಲ್ಲಿ ಭಾಗಿಯಾಗುವ ವಿಲಕ್ಷಣ ಕಥನವಿದು. ಎಂದೋ ಕಳೆದುಹೋಗಿರುವ ವ್ಯಕ್ತಿಗೆ ಕಾಯುವ ಕುಟುಂಬ ಮತ್ತು ಊರು ಅಚಾನಕವಾಗಿ ಬೇರೊಬ್ಬರ ಮೇಲೆ ಮೈದುಂಬಿದಂತೆ ಆಗಮಿಸಿದಾಗ ಉಂಟಾಗುವ ಪಲ್ಲಟಗಳು ಸಹ ಸಾವಧಾನದ ಬೆನ್ನೇರುತ್ತವೆ. ಇಡೀ ಊರು ಮತ್ತು ಪರವೂರಿನ ಜನರು ಸುಷುಪ್ತಿಗೊಳಗಾದಂತೆ ಕಾಣುತ್ತಾರೆ. ಅದಾಗಿಯೆ ತಿಳಿಯಾಗಿ, ಮಂಪರಿನಿಂದ ಎಚ್ಚರವಾಗುವುದನ್ನೇ ಕಾಯುತ್ತಾರೆ. ಮಂಪರು ತಿಳಿಯಾದ ಕೂಡಲೇ ಏನೂ ಸಂಭವಿಸಿಲ್ಲವೆಂಬಷ್ಟು ಸಹಜ ಸ್ಥಿತಿಗೆ ಬದುಕು ಹೊರಳಿಕೊಳ್ಳುತ್ತದೆ.

ಬಟಾಬಯಲು, ಮಧ್ಯಾಹ್ನದ ಉರಿಬಿಸಿಲು, ಜಡತ್ವವೇ ತುಂಬಿದ ಊರು. ಯಾರ ಆಗಮನವನ್ನು ಸ್ವಾಗತಿಸಲು ಸಿದ್ಧತೆ ಮಾಡಿಕೊಂಡಂತೆ ಸುಣ್ಣಬಣ್ಣ ಹೊದ್ದ ಗೋಡೆಗಳು, ಇಡೀ ಊರಿನ ಟಿವಿಗಳಲ್ಲಿ ಎಡೆಬಿಡದೆ ಬಿತ್ತರವಾಗುವ ಮಗ, ತಾಯಿ, ತಂದೆ ಸಂಬಂಧಗಳ ಕಥಾವಸ್ತುವಿನ ಹಳೆಯ ತಮಿಳು ಸಿನಿಮಾ ಸಂಭಾಷಣೆಗಳು, ಅಪರೂಪಕ್ಕೆ ಅಲ್ಲಲ್ಲಿ ಕ್ಲೋಸ್ ಅಪ್ ಶಾಟ್ ಬಿಟ್ಟರೆ ಇಡೀ ಚಿತ್ರದಲ್ಲಿ ಎದ್ದು ಕಾಣುವುದು ದೀರ್ಘಕಾಲ ಸ್ಥಿರವಾದ ಲಾಂಗ್ ಶಾಟ್ಸ್ ಮತ್ತು ಮಿಡ್ ಶಾಟ್ಸ್ ಗಳು- ಇವೆಲ್ಲವೂ ಚಿತ್ರಕ್ಕೆ ಅಗತ್ಯವಾದ ಮಂಪರಿನ ಅನುಭವ ದಾಟಿಸುವಲ್ಲಿ ಯಶಸ್ವಿಯಾಗಿವೆ. ಈ ಚಿತ್ರವನ್ನು ನಿರ್ಮಿಸಿ ನಟಿಸಿರುವ ಮಮ್ಮೂಟಿ ತಮ್ಮೆಲ್ಲ ಸ್ಟಾರ್ ಗಿರಿಯನ್ನು ಬದಿಗಿಟ್ಟು ನಿರ್ದೇಶಕನಿಗೆ ಶರಣಾದ ಕಾರಣದಿಂದ ತೆರೆಯ ಮೇಲೆ ಮ್ಯಾಜಿಕ್ ಸಂಭವಿಸಿದೆ. ಧಾವಂತ ದೃಶ್ಯಗಳ, ಬಿಲ್ಡ್ ಅಪ್ ಡೈಲಾಗ್ ಪ್ರಿಯರಿಗೆ ಈ ಚಿತ್ರ ರುಚಿಸದು.

ನನ್ನ ಮೊದಲ ವೀಕ್ಷಣೆಗೆ ದಕ್ಕಿದ್ದು ಇಷ್ಟು. ಮತ್ತೊಮ್ಮೆ ಚಿತ್ರ ನೋಡಬೇಕಿದೆ.

‍ಲೇಖಕರು avadhi

February 27, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: